Sunday 3 December 2017

#ಜೋಡಿ

"ಯಾರು ಏನಾದ್ರೂ ಹೇಳ್ಲಿ, ಆದರೆ ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅವಳು..."
ಅಂತ ರಜನಿ ಹೇಳಿದಾಗ ಶಶಿ ಇನ್ನೂ ಯೋಚನೆಯಲ್ಲಿಯೇ ಇದ್ದ. ಎಷ್ಟು ಚಂದದ ಹುಡುಗಿ ಅವಳು,ಬಳುಕುವ ಬಳ್ಳಿ ತರಹ ಅವನ ಪಕ್ಕದಲ್ಲಿ ನಿಂತಿದ್ಳು...ಅವಳಿಗೆ ಕಂಪೇರ್ ಮಾಡಿದ್ರೆ ಹುಡುಗನೇ ಸಾಧಾರಣ ಅನ್ನಿಸುತಿದ್ದ. ಆದ್ರೂ ಇವಳು ಹೀಗೆ ಹೇಳ್ತಿದ್ದಾಳೆ ಅಂದ್ರೆ? ಅಲ್ಲ, ಇವಳಿಗೆ ಅದು ಯಾವ ಜೋಡಿ ಸರಿ ಅಂತ ಅನಿಸಿದೆ ಇದುವರೆಗೆ. ಚಂದದ ಜೋಡಿ ಅಂತ ಇವಳ ಬಾಯಲ್ಲಿ ನಾನಿದುವರೆಗೂ ಕೇಳಿದ ನೆನಪೇ ಇಲ್ವಲ್ಲ ಅಂತ ಯೋಚಿಸಿ ತಲೆ ಕೊಡವಿಕೊಂಡ.
"ಏನ್ರೀ ಅದು? ಅಷ್ಟು ಸಿರೀಯಸ್ ಆಗಿ ಯೋಚನೆ ಮಾಡ್ತಿದ್ರಿ...ನಾನೇನಾದ್ರೂ ನಿಮ್ಮನ್ನ ಸೀರೆ ಸೆಲೆಕ್ಷನ್ ಮಾಡು ಅಂದ್ನಾ?".
ಸೀರೆ ಅಂದಾಕ್ಷಣ ಮೊನ್ನೆ ಮದುವೆಗೆ ಮಾಡಿದ ಶಾಪಿಂಗ್ ನಲ್ಲಿ ಕೊಟ್ಟ ತನ್ನ ಅರ್ಧ ಸಂಬಳದ ಬಿಲ್ ನೆನಪಾಗಿ, ಇನ್ನು ಸುಮ್ಮನಿದ್ದರೆ ನಿಜವಾಗಿಯೂ ಶಾಪಿಂಗ್ ಹೋಗ್ಬೇಕಾದೀತು ಅಂದುಕೊಂಡು,
"ಅಲ್ಲ ಕಣೆ, ಏನಾಗಿದೆ ಜೋಡಿಗೆ? ಎಷ್ಟು ಚಂದ ಇದ್ದಾಳೆ ಹುಡುಗಿ, ಒಳ್ಳೆ..."
ಏನೋ ಹೇಳ್ಲಿಕ್ಕೆ ಹೋಗಿ ನಾಲಿಗೆ ಕಚ್ಚಿಕೊಂಡ.
"ಆಹಹಹಹಾ...ಹುಡ್ಗಿ ಅಂದ್ರೆ ಆಯ್ತು, ಜೊಲ್ಲು ಸುರಿಸ್ತೀರಾ...ನನ್ಗೊತ್ತಿಲ್ವಾ ನಿಮ್ ಬುದ್ದಿ? ಎಲ್ಲ ಗಂಡಸರೂ ಒಂದೇ"
ಕೋಪದಲ್ಲಿ ರಜನಿ ಮುಖ ಕೆಂಪಾಯ್ತು. ಹೋ...ಹೇಳ್ಬಾರ್ದಿತ್ತು ಹಾಗೆ, ಇನ್ನು ವಿಪರೀತಕ್ಕೆ ಹೋದ್ರೆ ಕಷ್ಟ ಅಂದ್ಕೊಂಡು,
" ಅಯ್ಯೋ, ನಾನೆಲ್ಲಿ ಹಾಗಂದ್ನೇ...ಒಳ್ಳೆಯ ಜೋಡಿ ಅಂತ ಅಷ್ಟೇ ನಾನು ಹೇಳ್ಲಿಕ್ಕೆ..."
ಕೇಳುವ ತಾಳ್ಮೆ ಅವಳಿಗಿದ್ದಿದ್ದರೆ...,
" ಸಾಕು ಸಾಕು, ಬೇರೆ ಹುಡ್ಗಿಯರನ್ನು ಹೊಗಳೋದೇ ಆಯ್ತು..‌.ನನ್ನಲ್ಲಿ ಮಾತ್ರ ಸಾವಿರ ಹುಡುಕ್ತೀರಾ? ನಾನೊಬ್ಳು ಇದ್ದೇನಲ್ವಾ ನೀವು ಹೇಳಿದ್ದನ್ನು ಕೇಳ್ಕೊಂಡು ಇರ್ಲಿಕ್ಕೆ...ಏನ್ ಚಂದ ಕಂಡ್ರಿ ಅವಳಲ್ಲಿ?" ನೇರ ವೈಯಕ್ತಿಕವಾಗಿ ಬಿಟ್ಟಿತು ವಿಷಯ ರಜನಿಯ ಈ ಬಾಣದೊಂದಿಗೆ.
ಇಂತಹ ಚರ್ಚೆ ನಡೆಯುತ್ತಿರುವುದು ಇದೇ ಮೊದಲಲ್ಲ, ಮುಂದುವರೆಸಿದರೆ ಆ ದಿನ ಮತ್ತೆ ಮಾತಿಲ್ಲ.ಮೌನ ಮನೆಯ ಸಂದುಗೊಂದುಗಳಲ್ಲಿ ಆವರಿಸಿ ಅಸಹನೀಯವಾಗುತ್ತದೆ ಅನ್ನುವುದನ್ನು ತಿಳಿಯದವನೇನಲ್ಲ ಶಶಿ.ಆದರೂ ಪ್ರತೀ ಬಾರಿ ಇಂತಹ ವಿಷಯ ಬಂದಾಗ ನಾನೇಕೆ ಸುಮ್ಮನಿರಲ್ಲ ಅಂದುಕೊಂಡ ಶಶಿ,
"ಇರ್ಲಿ ಬಿಡೇ...ನನ್ನ ಕಣ್ಣಿಗೆ ಕಂಡದ್ದು ಹೇಳಿದೆ...ನಮಗ್ಯಾಕೆ ಅವರ ವಿಷಯ...?" ಅಂದರೂ  ಪಟ್ಟು ಬಿಡದ ರಜನಿ,
"ಸಾಕು ನಿಮ್ಮ ಸಮರ್ಥನೆ. ನನಗೊತ್ತಿಲ್ವಾ ನಿಮ್ಮ ವಿಷ್ಯ? ಮೊನ್ನೆ ಮದುವೆಯಲ್ಲಿ ಬಫೆ ಸಾಲಿನಲ್ಲಿ ನಿಂತಿದ್ದಾಗ ಎದುರಿನ ಹುಡ್ಗಿ ನಿಮ್ಮನ್ನು ದುರುಗುಟ್ಟಿಕೊಂಡು ನೋಡಿ ಬೇರೆ ಲೈನಿಗೆ ಹೋದ್ಳು..ಏನ್ ಮಾಡಿದ್ರಿ ನೀವು ಅವಳಿಗೆ...?".
ಈಗ ಶಶಿ ನಿಜವಾಗಿಯೂ ಗಲಿಬಿಲಿಗೊಂಡ. ಮೊನ್ನೆ ನಡೆದ ಆ ಘಟನೆ ಇವಳು ನೋಡ್ಲಿಲ್ಲ ಅಂತಾನೇ ಅಂದ್ಕೊಂಡಿದ್ದೆ. ನೋಡಿಯೂ ಇದುವರೆಗೆ ಹೇಗೆ ಸುಮ್ಮನಿದ್ದಾಳೆ ಈ ಶೀಘ್ರ ಪ್ರತಿಕ್ರಿಯೆಗಾರ್ತಿ?...ಕಬ್ಬಿಣ ಕಾದ ಸಮಯಕ್ಕೆ ಹೊಡೆಯುವ ಕಲೆ ಯಾವತ್ತು ಕಲಿತ್ಲು ಇವಳು? ಛೇ! ವಿಷಯ ಎಲ್ಲೆಲ್ಲೋ ಹೋಗ್ತಾ ಇದೆಯಲ್ಲ...ಸುಮ್ನೆ ಅವಳು ಹೇಳಿದ್ದಕ್ಕೆ, ಹೌದು;  ಜೋಡಿ ಸರಿ ಇಲ್ಲ.ಅವಳು ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅಂತಿದ್ರೆ ನನ್ನ ಗಂಟೇನು ಹೋಗ್ತಿತ್ತು? ಇನ್ನೇನೇನು ಕಾದಿದೆಯೋ? ಯೋಚಿಸುತ್ತಿರುವಾಗಲೇ ತಲೆಗೊಂದು ಮೊಟಕಿ,
" ಹೇಳ್ರೀ..." ಅಂದ್ಳು.
 "ಹೋ ಅದಾ...ಅದು ನಿನ್ನ ಮಗರಾಯ ಮಾಡಿದ್ದು.ನಾನಲ್ಲ ಕಣೆ. ಅವನನ್ನು ನಾನು ಎತ್ಕೊಂಡಿದ್ನಲ್ಲ..ಅವಳು ಎದುರು ಇದ್ಳು, ಇವನ ಕೈ ಸುಮ್ಮನಿರಬೇಕಲ್ಲ...ಅವಳು ಮುಡಿದಿದ್ದ ಗುಲಾಬಿ ಕಿತ್ತು ನನ್ನ ಕೈಗೆ ಕೊಟ್ಟ...ನಾನು ಬೇಡ, ಬೇಡ ಅನ್ನುವಷ್ಟರಲ್ಲಿ ಗುಲಾಬಿ ನನ್ನ ಕೈಯಲ್ಲಿತ್ತು. ಅವಳು ಹಿಂದೆ ನೋಡಿದಾಗ ನನ್ನ ಕೈಯಲ್ಲಿ ರೋಜ್...ನಾನು ಹೇಳಿದೆ ಅವಳಿಗೆ, ಮಗು ಮಾಡಿದ್ದು ಅಂತ. ಆದ್ರೂ ಕೇಳದೆ ಸಿಟ್ಟು ಮಾಡ್ಕೊಂಡು ಬೇರೆ ಕಡೆ ಹೋದ್ಳು...ನಾನೇನು ಮಾಡ್ಲಿ?" . ಅಂದದ್ದೇ ತಡ,
"ಛೀ... ನಾನೂ ಕೇಳ್ಬೇಕು ಅಂತನೇ ಇದ್ದೆ.ಗಡಿಬಿಡಿಯಲ್ಲಿ ಮರೆತು ಹೋದೆ.ಅಲ್ಲಾ...ಹೋಗೋವಾಗ ಎಲ್ಲೂ ಹೂ ತೆಕೊಂಡಿಲ್ಲ...ಆದರೂ ಅಲ್ಲಿ, ಆ ಊಟದ ಸಾಲಿನಲ್ಲಿ ನಂಗೆ ಹೂ ಕೊಟ್ಟಾಗ್ಲೇ ಅನುಮಾನ ಬಂತು.ಏನೋ ಕಿತಾಪತಿ ಮಾಡಿದ್ದೀರಾ ಅಂತ, ಆದ್ರೂ ಮುಡ್ಕೊಂಡೆ ನೀವು ಕೊಟ್ಟದ್ದು ಅಂತ...ಯಾರ್ಯಾರೋ ಮುಡಿದ ಹೂ ಕೊಟ್ರಲ್ಲ, ಅಸಹ್ಯ. ಇನ್ನು ಮಾತಾಡ್ಬೇಡಿ ನನ್ನತ್ರ..." ಮತ್ತೆ ಮಾತಿಗೆ ಯಾವ ಅವಕಾಶವೂ ಇಲ್ಲದ ಹಾಗೆ ತೆರೆ ಎಳೆದು ಹೋದ್ಳು.

ಮಗು ಕೈಯಲ್ಲಿ , ಎದುರಿನ ಹುಡುಗಿ ಮುಡಿದ ಹೂ ಕಿತ್ತು ಕೊಟ್ಟಾಗ ಹೆಂಡತಿಯೆದುರು ಏನೂ ಹೇಳಲು ತೋಚದೇ, ಹಾಲ್ ನ ಎಂಟ್ರೆನ್ಸ್ ನಲ್ಲಿಟ್ಟಿದ್ದ ಸ್ವಾಗತ ಕೋರುವ ಪುಟಾಣಿ ಕೊಟ್ಟದ್ದು ಅಂತ ಹೇಳಿ ಹೆಂಡತಿ ಮುಡಿಯುವಂತೆ ಮಾಡಿದ್ದ. ಅವಳಿಗೆ ಆಗ ಗೊತ್ತಿರಲಿಲ್ಲ. ಯಾರೋ ಅವಳ ಕಿವಿ ಊದಿರಬೇಕು,ಹಾಳಾಗಿಹೋಗ್ಲಿ ಎಂದು ಶಪಿಸಿದ ಶಶಿ.

ಆ ಘಟನೆ ಈಗ ಇಬ್ಬರ ಮನದಿಂದಲೂ ಮರೆಯಾಗಿದೆ.ಇಂದು ಕೂಡಾ ಶಶಿ ಒಂದು ಮದುವೆಗೆ ಹೋಗಿ ಬಂದಿದ್ದ.ಆಫೀಸಿನಿಂದ ನೇರವಾಗಿ ಹೋಗಿದ್ದರಿಂದ ಫ್ಯಾಮಿಲಿಯನ್ನು ಕರ್ಕೊಂಡು ಹೋಗಿರಲಿಲ್ಲ. ಮನೆಗೆ ಬಂದವನೇ,
"ಛೇ, ಈಗಿನ ಹುಡುಗ್ರಿಗೆ ಟೇಸ್ಟೇ ಇಲ್ಲ. ಲವ್ ಈಸ್ ಬ್ಲೈಂಡ್ ಅಂತಾರಲ್ಲ.ಸರಿಯಾಗಿ ಹೇಳಿದ್ದಾರೆ ಯಾರೋ...ಇಲ್ಲದಿದ್ರೆ".
ರಜನಿಯ ಕಿವಿ ನೇರವಾಗಿ, " ಏನ್ರೀ, ಏನಾಯ್ತು?...ಯಾರ ಬಗ್ಗೆ ಮಾತಾಡ್ತಿದ್ದೀರಿ?".
"ಮತ್ತೆ ಯಾರ ಬಗ್ಗೆ?...ಇವತ್ತಿನ ಜೋಡಿ ಬಗ್ಗೆ. ಯಾರು ಏನಾದ್ರೂ ಹೇಳ್ಲಿ, ಆದರೆ ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅವಳು.ಒಂದು ಬಣ್ಣ, ಒಂದು ರೂಪ...ಏನೂ ಇಲ್ಲ.ಎಷ್ಟು ಚಂದದ ಹುಡುಗ ಅವನು..." ಆಚೆ ನೋಡಿ ಹೇಳುತಿದ್ದರೂ ಶಶಿಯ ಒಂದು ಕಣ್ಣು ಹೆಂಡತಿಯ ಕಡೆಯೇ ನೆಟ್ಟಿತ್ತು.
" ಮತ್ತೆ ನಾನು ಸುಮ್ನೆನಾ ಹೇಳೋದು...ಇವತ್ತಾದ್ರೂ ಗೊತ್ತಾಯ್ತಲ್ಲ ನಿಮ್ಗೆ. ಇರಿ, ಬಿಸಿ ಬಿಸಿ ನೀರುಳ್ಳಿ ಬಜೆ ಮತ್ತು ಟೀ ತರ್ತೇನೆ..." ಅಂದು ರಜನಿ ಒಳಗೆ ಹೋದ್ಳು.

ಪ್ರೇಯಸಿಯ ಎದುರು ಕವಿಯಾದರೆ ಹಿತ; ಹೆಂಡತಿಯ ಎದುರು ಕಿವಿಯಾದರೆ ಹಿತ...ಮಾತಾಡಿ ಗೆದ್ದವರಿಲ್ಲ ಈ ಹೆಂಡತಿಯೆನ್ನುವ ಅಪ್ರಮೇಯ ಎದುರು ಅನ್ನುವ ಹೊಸ ಸತ್ಯದ ಅರಿವಾಗಿ ಸಣ್ಣದಾಗಿ ಶಿಳ್ಳೆ ಹೊಡೆದು ಬಿಸಿ ಬಿಸಿ ಟೀಗಾಗಿ ಕಾಯುತ್ತಾ ಕೂತ ಶಶಿಯ ಮುಖದಲ್ಲಿ ಗೆಲುವಿನ ಕಳೆಯಿತ್ತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment