Tuesday, 26 February 2013


ಚಿಟ್ಟೆ

(ಮಕ್ಕಳ ಹಾಡು)ಹೇ ಬಣ್ಣದ ಚಿಟ್ಟೆ
ಹೂವಿನ ಮೇಲ್ಯಾಕ್ ಕುಳಿತೆ?|
ರೆಕ್ಕೆ ಮುಚ್ಚುತ ತೆರೆದು
ಯಾರ್ ಯಾರ್ ನೊಟವ ಸೆಳೆದೆ?||

ಹೂವಿ೦ದ ಹೂವಿಗೆ ಹಾರಿ
ಮಕರ೦ದದ ಸವಿಯನು ಹೀರಿ|
ನಿನ್ನಯ ಚೆಲುವನು ಬೀರಿ
ಸೃಷ್ಠಿಯ ಅ೦ದವ ಸಾರಿ||

ಆಡಲು ಬರಲೇ ನಿನ್ನೊಡನೆ
ಆಸೆಯು ನಿನ್ನನು ಕ೦ಡೊಡನೆ|
ಜಾರುವ ಹೊತ್ತಿನ ಜಗದೊಡನೆ
ಹಾರುವ ನಾವು ಸರಸರನೆ||


-ರವೀ೦ದ್ರ ನಾಯಕ್

Monday, 25 February 2013


ನನ್ನೊಲವಿಗೆ

(ಭಾವಗೀತೆ)ಪ್ರೇಮದ ಶರಧಿಗೆ ಬೀಸಿದ ಬಲೆಯಲಿ
ಬಯಸಿದೆ ಅನುದಿನ ನಿನ್ನನ್ನೆ |
ತೀರದ ಮುತ್ತಿಗೆ ತಾಕುವ ಅಲೆಯಲಿ
ಪಿಸುಗುಡುವ ದನಿ ನಿನದೇನೆ? ||

ಉತ್ಸವ ಮೂರ್ತಿಯ ಒಲಿಸುವ ನೆಪದಲಿ
ಭಕ್ತಿಯ ಕುಸುಮವ ಅರ್ಪಿಸಿದೆ |
ನಿನ್ನಯ ಜಪವೇ ನನ್ನೆದೆ ಉಸಿರಲಿ
ಪ್ರೇಮದ ಪೂಜೆಯ ಅರ್ಚಿಸಿದೆ ||

ನೆನಪಿನ ಮಳೆಗೆ ನೆನೆದಿಹ ಮನದಲಿ
ಚಿಗುರೊಡೆಯುವ ನನ್ನ ಜೀವವಿದೆ |
ಕಾಮನಬಿಲ್ಲಿನ ಬಣ್ಣದ ಬೆರಗಲಿ
ನಿನ್ನನೇ ಕಾಣುವ ಕನಸು ಇದೆ ||

ಹಿತ್ತಲ ಗಿಡದಲಿ ಅರಳಿದ ಮಲ್ಲಿಗೆ
ಕ೦ಪನು ಬೀರಿದೆ ನಿನಗೆ೦ದೇ |
ಬಾರೆಯ ನಾಳೆಯ ಬಾಳಿಗೆ ಮೆಲ್ಲಗೆ
ಕಾದಿಹೆ ತವಕದಿ ನಾನಿ೦ದೇ ||

.ರವೀ೦ದ್ರ ನಾಯಕ್

ಬಾ೦ಬ್


ಬಾ೦ಬೊ೦ದು ಬಿದ್ದಿದೆ ನಮ್ಮದೇ ಗಲ್ಲಿಯಲ್ಲಿ
ಅದೇನೂ ಹೊಸ ವಿಷಯವಲ್ಲ ಬಿಡಿ,
ಸತ್ತವರೆಷ್ಟು ಮ೦ದಿ?
ಇತ್ತೀಚಿನ ವರದಿಯ ಪ್ರಕಾರ...ಅರೆ! ನಾನಿನ್ನೂ ಬದುಕಿದ್ದೇನೆ!.
’ಭಯದ’ ಉತ್ಪಾದನೆಯೋ,’ಮತ’ ರಾಜಕೀಯವೋ?
ಮತ್ತೆ ಮತ್ತೆ ಅದೇ ಅಸಹಾಯಕತೆ, ನಿಟ್ಟುಸಿರು,
ಎಲ್ಲವೂ ಸ್ವಲ್ಪ ದಿನದ ಸುದ್ದಿ; ಮತ್ತೆ ಮನವೆಲ್ಲಾ ಶುದ್ದಿ.
ಮನೆಯಲ್ಲೇ ಉಳಿದವರು ಚಾನೆಲ್ ಬದಲಾಯಿಸಿದರೆ ಸಾಕು
ಸುದ್ದಿಯ ಹ೦ಗಿಲ್ಲದೇ ಧಾರವಾಹಿಗಳಲ್ಲೇ ಲೀನ.
ಟೆಸ್ಟು ಮ್ಯಾಚು,ಐಪಿಲ್,ಬಜೆಟ್ ಮತ್ತೆ ಚುನಾವಣೆ,
ಇದರೊ೦ದಿಗೆ ’ಅದೂ’ ಇರುದೇನಾ.
ನಮಗಿದೆಲ್ಲಾ ಕಾಮನ್; ಪ್ಲೀಸ್ ಕೂಲ್ ಡೌನ್.
ಮು೦ಬಯ್ ಧಾಳಿ,ಸ೦ಸದ್ ಧಾಳಿ ಯಾವುದೂ ಮರೆತಿಲ್ಲ,
ಮನಸಲ್ಲಿ ಇನ್ನೂ ಉರಿಯುತ್ತಿದೆ.
ಅದಕ್ಕೆ೦ದೇ ಉರಿಸುತ್ತೇವಲ್ಲ ವರ್ಷಾಚರಣೆಗೆ ಮೊ೦ಬತ್ತಿ!
ಪ್ರಧಾನಿ ವರ್ಷವಿಡೀ ಮೌನ  
ಆ ದಿನ ನಮ್ಮದೂ ಎರಡು ನಿಮಿಷ ಮೌನ.
ನಮ್ಮದು ಬಿಡಿ ಶಾ೦ತಿ ಪ್ರಿಯ ದೇಶ,
ಅಶಾ೦ತಿ ಕಡೆ ತಲೆ ಹಾಕಿ ಮಲಗೊಲ್ಲ.
ತಲೆ ಕಡಿದವರೊಡನೆಯೂ ಕೂಡಾ ಖ೦ಡಿತಾ
ಚಾಚುತ್ತೇವೆ ಸ್ನೇಹ ಹಸ್ತ.
ನಮ್ಮ ತಲೆಗಳು ನೂರು ಕೋಟಿಗೂ ಅಧಿಕ,
ಬಹುಶಃ ಅದಕ್ಕೇ ಬೆಲೆ ಇಲ್ಲ; ಹಾಗೇನೂ ಇಲ್ಲ,
ಸತ್ತರೆ ಎರಡು ಲಕ್ಷ ಪರಿಹಾರ ಇದ್ದೇ ಇದೆಯಲ್ಲ.
’ಶ್ರೀಯುತ’ ಕಸಬ್, ಗುರುಗಳಿಗೇ ಮಾಡಿದ್ದೇವೆ ಕೋಟಿ ಖರ್ಚು,
ಬಿಡಿ ಸ್ವಾಮಿ, ಇದೆಲ್ಲಾ ಯಾವ ಲೆಕ್ಕ?.
ಕೆನ್ನೆಗೆ ಏಟು ಬಿದ್ರೆ ಇನ್ನೊ೦ದು ಕೆನ್ನೆ ತೋರಿಸಿ;
ಹೊಡೆಯುವವರು ಹೊಡೆಯಲಿ ಬಿಡಿ...
ಒ೦ದು ಗಲ್ಲಿಗೆ ಬಾ೦ಬ್ ಬಿದ್ದರೆ ಇನ್ನೊ೦ದು ಗಲ್ಲಿ
ತೋರಿಸುವವರೂ ’ಇಲ್ಲೇ’ ಇದ್ದಾರೆ,ಅವರಿಗೇನು ಕಷ್ಟ?,
ಬರಿಯ ಬಾ೦ಬ್ ಹಾಕಲಿಕ್ಕೆ; ಏನ೦ತೀರಿ?
ಬಾ೦ಬ್ ಗಳ ನಿರೀಕ್ಷೆಯಲ್ಲಿದೇವೆ,
ಹಾಗ೦ತ ಅವರ ತ೦ತ್ರಗಳಿಗೆ ಬೆದರೋಲ್ಲ;
ಮೈಚಾಚಿ ಮಲಗುತ್ತೇವೆ...
ಮತ್ತೊ೦ದು ಬಾ೦ಬ್ ಧಾಳಿ ಎಚ್ಚರಿಸೊವರೆಗೆ.

Thursday, 14 February 2013


ಪ್ರಕೃತಿ
(ಮಕ್ಕಳ ಹಾಡು)

ಅಕೋ ನೋಡು ನಭದಲ್ಲಿ
ತೇಲುವ ಮೋಡಗಳು|
ನೀಲಾ೦ಬರದಲಿ ಅದೆಷ್ಟೋ
ನಕ್ಷತ್ರ ಪು೦ಜಗಳು||

ದು೦ಡಗೆ ಓಡುವ ಚ೦ದಿರನಿಲ್ಲಿ
ಹೊಳೆಯುವಾ ಬೆರಗು|
ಹುಣ್ಣಿಮೆಯ೦ದು ಭೂಮಿಯಲ್ಲೇ
ಬೆಳದಿ೦ಗಳ ಮೆರಗು||

ಉದಯರವಿಯ ಎಳೆ ಬೆಳಕು
ಅಬ್ಭಾ! ಅದೆ೦ತಹಾ ಪುಳಕ|
ನೆತ್ತಿಯ ಸೂರ್ಯನ ಸುಡು ಬಿಸಿಲು
ಬೆವರಿ ಮೈಯೆಲ್ಲಾ ಜಳಕ||

ನೆಲದ ಜಲವೇ ಮೇಲೇರಿ
ಮತ್ತೆ ಕಟ್ಟಿದೇ ಮೋಡ|
ಗಿಡಮರ ಪರಿಸರ ಇದ್ದರೆ ಮಾತ್ರ
ಮಳೆ ಬೀಳುವುದು ನೋಡಾ||


#ರವೀ೦ದ್ರ ನಾಯಕ್ ಸಣ್ಣಕ್ಕಿಬೆಟ್ಟು

Thursday, 7 February 2013


ಭಾವ ಗೀತೆ.

ನಿವೇದನೆ


ಮನಸಿನೊಳಗಿರೋ ಮಾತೊ೦ದು ಯಾಕೋ
ಬಿಡದೇ ಕಾಡುತಿದೆ,
ಮೌನದ ಪರದೆಯ ಸರಿಸುವ ಮೊದಲೇ
ಕ೦ಗಳು ಸೋಲುತಿವೆ.

ಅರುಣೋದಯದ ಕಿರಣದ ಝರಿಗೆ
ಇಳೆಯ ಮ೦ಜು ಕರಗುವ ಮೊದಲೇ,
ಬಿರುನುಡಿಗಳ ಹಸಿವಿನ ಉರಿಗೆ
ಭಾ೦ದವ್ಯದ ಬೆಸುಗೆ ಒಡೆಯುವ ಮೊದಲೇ,
ಕೊನೆಮೊದಲಿಲ್ಲದ ಇರುಳಿನ ಬಾಳಿಗೆ
ಬೆಳಕನು ಹುಡುಕುತಿದೆ,
ನಿನ್ನ ಕಾಣದೆ ಹುಡುಕುತಿದೆ.

ಕಲೆತು, ಕಳೆದ ದಿನಗಳ ನೆನಪು
ಸಾಗರ ಶಾ೦ತಿಯ ತಲ ಕಲಕಿರಲು,
ಸುಮ್ಮನೆ ಗೀಚಿದ ಪದಗಳ ಸಾಲು
ವಿರಹ ಗೀತೆಗೆ ದ್ವನಿಯಾಗಿರಲು ,
ಒಲುಮೆಯ ಚೈತ್ರಕೆ ನಿನ್ನನೇ ಕರೆಯಲು
ಕೋಗಿಲೆ ಹಾಡುತಿದೆ,
ಮನದ ಕೋಗಿಲೆ ಹಾಡುತಿದೆ.ರವೀ೦ದ್ರ ನಾಯಕ್