Friday 28 July 2017

ಯಾವ ಜನ್ಮದ ಮೈತ್ರಿಯೋ
ಬದುಕಲರಳಿದ ಚೈತ್ರವೋ
ಬೆರಗ ಸೆಳೆಯೋ ಸೊಗದ ಮಳೆಯೋ
ಭೂಮಿಗಿಳಿದ ಸಗ್ಗವು
ಮಗಳು ಬಾಳ ಕಬ್ಬವು

ಪುಟ್ಟ ಪುಟ್ಟ ಹೆಜ್ಜೆಯಿಡುತ
ನಡೆದ ಕ್ಷಣವೇ ವಿಸ್ಮಯ
ತೊದಲು ಮಾತ ಮೊಲ್ಲೆಗರೆ-
-ದಳುವ ಆಟದಿ ತನ್ಮಯ
ತಿರುಗೊ ಭುವಿಗೂ ಕೊನೆಯಿದೆ
ನಿಂತು ನೋಡಲು ಜಗವಿದೆ

ಹಾರೋ ಚಿಟ್ಟೆಯ ಬೆನ್ನಿಗೋಡುತ
ಬಣ್ಣ ಕದಿಯುವ ಕನಸಿದೆ
ಹರಿಯೋ ನೀರಿಗೆ ಕಾಲು ಸೋಕುತ
ದೋಣಿ ಬಿಡುವ ಮನಸಿದೆ
ನಿನ್ನ ಜೊತೆಗೇ ಬದುಕಿದೆ
ನಿಂತು ನೋಡಲು ಜಗವಿದೆ

ರವೀಂದ್ರ ನಾಯಕ್  
ಹೇಗೆ ನಿಲ್ಲಲಿ ನಾನು
ನೀವೇ ಹೇಳಿ?
ಹಿಂದೆ ಬಿದ್ದವರನ್ನು ಅಣಕಿಸುವ
ದಾಟಿ ಹೋದವರನ್ನು ಹಿಂದಿಕ್ಕುವ
ಕಸುವು ತುಂಬಿರುವ ಕಾಲುಗಳಿನ್ನೂ
ಓಡಲು ಹಂಬಲಿಸುವಾಗ?

ಹೇಗೆ ಹೊರಳಲಿ ನಾನು
ನೀವೇ ಹೇಳಿ?
ಚಿಗುರ ಬಯಕೆ ಕಾಣುವ
ಬೆಳೆವ ಸೊಗಸ ಕನಸುವ
ಕನಸು ತುಂಬಿರುವ ಕಣ್ಣುಗಳಿನ್ನೂ
ನೋಡಲು ಕಾತರಿಸುವಾಗ?

ಹಾಗೂ ಹೀಗೂ ನಿಂತಾಗಲೆಲ್ಲಾ
ಅಟ್ಟಿಸಿಕೊಂಡು ಬರುತ್ತಿದೆ
ಆರು ಹೆಡೆಯ ಹಾವು;
ನೋಟ ಮರೆತು ಗಮ್ಯಕ್ಕೊಡ್ಡುವ
ಬೊಗಸೆಯ ಭಕ್ತಿಗೋ
ಭರ್ತಿ ಒಂಬತ್ತು ತೂತು.....!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮನಸು ಹೊರಳಿದೆ ಹೊನ್ನಸೂರಿಗೆ
ಸೇರೊ ದಾರಿಯದೆಲ್ಲಿದೆ
ಹುಚ್ಚು ಬಯಕೆಯ ಕಳೆವ ಗಿರಿಪಥ
ದಲ್ಲಿ ದರಿಗಳು ಹಲವಿದೆ
ಗುರಿಯ ಕಾಣದೆ ಬಳಲಿದೆ
ತೋರೊ ಗುರು ನೀನೆಲ್ಲಿಹೆ

ಇಲ್ಲೆ ಇದ್ದ ಗಳಿಗೆಯಲ್ಲಿ
ಬಿಡದೆ ಅವನ ಕಾಡಿದೆ
ಮೇರೆ ಇರದ ಅರಸನಲ್ಲಿ
ಬರಿದೆ ಪ್ರೇಮ ಬೇಡಿದೆ
ಎಂಥ ಹುಚ್ಚು ನನ್ನದು
ಹೃದಯವೆಷ್ಟು ಸಣ್ಣದು
ದಾಹ ಕಳೆವ ದೇವನಲ್ಲಿ
ಗುಟುಕಿಗಾಗಿ ಕಾಡಿದೆ;
ಅವನ ಹರವು ಅರಿಯದೆ

ಒಡಲ ಮೋಹ ಬಿಡದು ಇಲ್ಲಿ
ಮುರಳಿಗಾನ ಕೇಳದೆ
ದಡದ ಹಂಗು ತೀರದಿಲ್ಲಿ
ಒಲವ ನದಿಯು ಹರಿಯದೆ
ಬಯಲು ಎಷ್ಟು ಕರೆದರೂ
ನಿಜದ ಸದ್ದು ಕೇಳದು
ಒಂದು ಹೆಜ್ಜೆಯ ಹಾಕದೆ
ಗೆಜ್ಜೆ ಕಾಲಿಗೆ ಕಟ್ಟಿದೆ;
ಜಗದ ಹೆಮ್ಮೆಯನಪ್ಪಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ಎದೆಯ ಸೊಗದ ಭಾವಗಳಿಗೆ
ಬಯಲು ದೂರವಾಗಿದೆ
ಅರಸುತಿರುವ ಕಣ್ಣುಗಳಿಗೆ
ಬೆಳಕು ಕಾಣದಾಗಿದೆ
ಯಾವ ಮೋಹ ಚಕ್ರದಲ್ಲಿ;
ಜಗದ ಹುಚ್ಚು ಸುತ್ತಿದೆ?

ಬಯಕೆ ಹಾವು ಸಂಚು ಹೊಸೆದು
ಪೊರೆಯ ಕಳಚಿ ಮಿಂಚಿದೆ
ಭವದ ಬೀಜ ಮರಳಿ ಚಿಗುರಿ
ಮಣ್ಣ ಋಣಕೆ ಅಂಟಿದೆ
ಗೂಡು ಬಯಸಿ ಬಾನು ಮರೆತ
ಹಾರೊ ಹಕ್ಕಿ ಕೂತಿದೆ

ಅರಿವ ಮರೆಸಿ ಇರುವ ಮೆರೆಸೊ
ಬಳ್ಳಿ ಮರವನಪ್ಪಿದೆ
ಗತವ ಅಳಿಸಿ ಹಿತವ ತೆರೆಸೊ
ಮಡಿಲ ಕೂಸು ಎದ್ದಿದೆ
ದಡವ ಬಯಸಿ ಕಡಲು ಮರೆತ
ಹರಿವ ನದಿಯು ನಿಂತಿದೆ

ಸಿಗದ ಮೂಲ ಹುಡುಕಿ ಹೊರಟ
ನಾವೆ ದಿಕ್ಕು ತಪ್ಪಿದೆ
ಜಗದ ನಂಟು ಕಳೆಯೊ ಆಟ
ದಲ್ಲಿ ಕನಸು ನೆಚ್ಚಿದೆ
ಕುಕಿಲ ದನಿಗೆ ಮುರಳಿ ಮರೆತ
ಸೋತ ಮನಸು ಕಾಡಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Saturday 15 July 2017

ಬಿಡದೆ ಮಳೆ ಸುರಿವ ಉಡುಪಿಯದು ನನ್ನೂರು
ಮೊನ್ನೆ ಒಗೆದುದು‌ ಇನ್ನು ಒಣಗೆ ಇಲ್ಲ
ಕಾಡಿ ಸುಡುತಿಹ ನೆನಪು ನಿಮ್ಮಂತೆ ನನಗೂ
ಗಾಡಿ ಬಿಡದಿರಲು ಬೇರೆ ನೆಪವೆ ಇಲ್ಲ

ಮಣ್ಣ ಹಾದಿಯ ತುಂಬಾ ನೀರು ತುಂಬಿದ ಹೊಂಡ
ಬಂದ ಬಸ್ಸಿಗು ಕೂಡ ಹೊರಡೊ ಮರೆವು
ಉಪ್ಪು ನೀರಿನ ಹಲಸು ಪತ್ರೋಡೆ ತಿಂದುಂಡ
ಗಳಿಗೆಯಲು ಕಾಣುವುದು ನಿಮ್ಮ ಕನಸು

ಜಗವ ಪೊರೆವ ಕರದಿ ಮುರಳಿ ಪಿಡಿದ ಶ್ಯಾಮ
ರಾಧೆಯಿಲ್ಲದೆ ಮಿಡಿವ ವಿರಹಿಯವನು
ನಿಮ್ಮ ಕೆಲಸದಿ ನೀವು ಕಳೆದು ಹೋದರೆ ಕ್ಷೇಮ
ಮಳೆ ಬಿಡಲು ಕ್ಷಣದಿ ಬಂದು ಸೇರುವೆನು.



ಎದೆಎದೆಯೊಳಗೆ ತುಂಬಿರೆ ಒಲವು
ಈ ಜಗದೊಳಗೆ ಎಲ್ಲವು ಚೆಲುವು
ಕಣಕಣದಲ್ಲೂ ತುಂಬಿರೆ ಹಾಸ
ಪ್ರತಿ ಎದೆಯು ಶ್ರೀಕೃಷ್ಣ ನಿವಾಸ

ಹರಿಯುವ ನದಿಯೇ ಯಮುನೆಯ ತಟವು
ಬೀಸುವ ಗಾಳಿಯೇ ಮೋಹನ ಸುಧೆಯು
ತೆರೆದೆದೆ ಬಾನು ತೋರಿದ ಲಾಸ್ಯ
ಪ್ರತಿ ಎದೆಯು ಶ್ರೀಕೃಷ್ಣ ನಿವಾಸ

ಸ್ಹೇಹಕು ಪ್ರೇಮಕು ಒಲಿಯುವ ನಿಧಿಯು
ಹೂವಿಗು ಬೆಣ್ಣೆಗು ಕರಗುವ ಸಿರಿಯು
ಹಲವು ನದಿಗಳಿಗೊಂದೇ ಅರಸ
ಪ್ರತಿ ಎದೆಯು ಶ್ರೀಕೃಷ್ಣ ನಿವಾಸ

Monday 10 July 2017

ಕನಸೊಂದು ಬಳಿಬಂದು ತಾನಾಗೇ ಒಲಿದಿತ್ತು
ಎಂಟು ವರುಷದ ಹಿಂದೆ ಮೊನ್ನೆ ಮೊನ್ನೆ
ಮಾಗಿ ಕಳೆದ ಇರುಳು ಚಿಗುರು ಬೆಳಕಿನ್ನಿತ್ತು
ಮಂಜು ಕರಗಿತು ಕಂಡು ಕಣ್ಣ ಸನ್ನೆ

ಮರುಭೂಮಿ ಬಯಲಲ್ಲಿ ಚಿಗುರಿದ್ದ ಹೊಸ ಹೂವು
ಎಂಥ ಸೋಜಿಗವದರ ದಳದ ಚೆಲುವು
ಸೋಗಿನಾಸೆಯು ಇರದ ಕಾಡಿ ಬೇಡದ ಸೆಳಹು
ಸರಳ ಸುಂದರವಹುದು ಅವಳ ಒಲವು

ಬೆಳಗೆಲ್ಲಾ ಬೆಳಬೆಳಗಿ ಮನವೆಲ್ಲಾ ಬರಿ ಖಾಲಿ
ನಿಶೆಯ ನಶೆಯೇರಿತ್ತು ಅವಳ ಕಂಡು
ಪಡುವಣದ ಬೀದಿಯಲಿ ಒಲವ ರಂಗಾವಲ್ಲಿ
ಸಂಧ್ಯರಾಗದಿ ರವಿಯು ಸೊಗಸನುಂಡು

ಮಳೆಗಾಲ ಹಲವುರುಳಿ ಹಿತಮಿತದಿ ಸುಖವರಲಿ
ಪರಿಮಳವು ಕಂತಿಲ್ಲ ಇನ್ನು ಹೊಸದು
ಹುಸಿ ಮುನಿಸು ಹಸಿ ಕನಸು ಹಾಸಿ ಬಂದಂತಿರಲಿ
ಚಿರಹರೆಯಕ್ಕೊಂದು‌ ಭಾಷ್ಯ ಹೊಸೆದು

Saturday 8 July 2017

ಹರಿಯುವ ನದಿಯೂ ಉಕ್ಕುವ ತೊರೆಯೂ
ಸೇರುವ ಕಡಲೊಂದೇ;
ವಾತ್ಸಲ್ಯದ ಕರವೋ ಪ್ರೇಮದ ಕರೆಯೋ
ನುಡಿಸುವ ಕೊಳಲೊಂದೇ.
ಕಾಡ ಮಧ್ಯದಳಂದು ನೋಡಿದ
ಹಾಡಿ ತೂಗುವ ಸೀತೆ ದಂಡೆಯ
ಕಾಡಿ ನಲ್ಲನ ಮುಡಿವ ಬಯಕೆಯ ಅರಿಕೆ ಮಾಡಿದೆನು
ಗಾಡಿ ಹೊರಡಲು ತಿರುಗಿ ನೋಡುತ
ಮೋಡಿ ಮಾಡಿರುವೊಲವ ಮಾರನ-
ನೋಡಿ ಬಳಸುತಲಪ್ಪಿ ತೋಳಲಿ ಮುದ್ದು ಮಾಡಿದೆನು
#BGGROUP  @ #ಬಿಜಾಪುರ
#PART 2

#ಕೋಲಾರ್ #ಸೇತುವೆ

#ಗೋಲಗುಂಬಜ್

ದಾರಿ ಸಾಗಿದಷ್ಟೂ ನೋಡುವ ಕಣ್ಣುಗಳಿಗೆ ನೆನಪಿನ ಮೂಟೆಗಳನ್ನೇ ಕಟ್ಟಿಕೊಡುತ್ತದೆ. ಎಲ್ಲಾ ಪ್ರಯಾಣಗಳು ಒಂದೇ ತರಹ ಅಂತೂ ಇರಲು ಸಾಧ್ಯವಿಲ್ಲ. ಕಣ್ಣುಗಳಲ್ಲಿ ಗುರಿಯ ಕಾಣುವ ಆತುರವಿದ್ದಾಗ ಕ್ಣಣಗಳೆಲ್ಲಾ ಯುಗದಂತಾಗಿ ಕಣ್ಣಿಗೆ ಕುದುರೆಪಟ್ಟಿ ಕಟ್ಟಿದಂತೆ ಎದುರು ನೋಡುತ್ತಾ ಎಂದಿಗೆ ಮುಗಿಯುವುದು ಈ ಪ್ರಯಾಣ ಅನ್ನಿಸಿದರೆ ಮತ್ತೊಂದು ರೀತಿಯ ಪ್ರಯಾಣವಿದೆ, ಲಂಗು ಲಗಾಮಿಲ್ಲದ ಕುದುರೆಯನ್ನು ಮೇಯಲು ಬಿಟ್ಟಂತೆ. ಇಷ್ಟ ಬಂದ ಕಡೆ ನಿಂತು, ಗೊತ್ತುಗುರಿಯಿಲ್ಲದೇ , ಸುತ್ತಮುತ್ತಲಿನ ಪ್ರಕೃತಿಯನ್ನೆಲ್ಲಾ ಕಣ್ಮನದೊಳಗೆ ತುಂಬಿಕೊಂಡು ಸಾಗುವ ಪ್ರಯಾಣ ಅದು. ಅದರಲ್ಲೂ ಜೊತೆಯಾಗಿ ಚಡ್ಡೀದೋಸ್ತ್ ಗಳಿದ್ದರಂತೂ ಮತ್ತೆ ಸ್ವರ್ಗ ಕೈಗೆಟುಕಿದಂತೆಯೇ ಸರಿ. ಅದೂ ಅಲ್ಲದೇ ನಾವು ನಾವಾಗಿಯೇ ಇರುವುದು ನಮ್ಮ ಅಂತರಂಗದ ಗೆಳೆಯರೊಂದಿಗೆ ಮಾತ್ರ. ಅಲ್ಲಿ ಎಲ್ಲವೂ ಖುಲ್ಲಂ ಖುಲ್ಲ. ಉಪೇಂದ್ರ ಹೇಳಿದ ಹಾಗೆ ಮನಸ್ಸು ಹಾಗೂ ನಾಲಿಗೆಯ ನಡುವೆ ಫಿಲ್ಟರೇ ಇರಲ್ಲ. ಆದರೆ ಬೇರೆಲ್ಲಾ ಸಂಬಂಧಗಳೊಡನೆ ನಾವು ವ್ಯವಹರಿಸುವುದು ಮುಖವಾಡ ಹಾಕಿಕೊಂಡೇ. ಈ ಸಮಾಜ ಅಂದರೆ ಬರೇ ಮುಖವಾಡಗಳ ನಡುವಿನ ವ್ಯವಹಾರ.  ಆದರೆ ನನ್ನ ಈ ಪ್ರಯಾಣದಲ್ಲಿ ಅಂತರಂಗದ ಗೆಳೆಯರಿದ್ರು. ಹಾಗೆಂದೇ ಒಂದು ಚಂದದ ಅನುಭೂತಿಯಲ್ಲಿತ್ತು ನಮ್ಮನ್ನು ಏರಿಸಿಕೊಂಡು ಸಾಗುತ್ತಿದ್ದ ಹೊಸ್ಮನಿ ಕಾರು.

ಕೊರ್ತಿಕೋಲಾರ್ ಮೊಸರವಲಕ್ಕಿ ತಿಂದು ಹೊಟ್ಟೆ ತಂಪು ಮಾಡಿಕೊಂಡ ನಾನು ರಸ್ತೆಯ ಇಕ್ಕೆಲಗಳಲ್ಲಿ ಕಾಣುತ್ತಿದ್ದ ವಿಶಾಲ ಬಯಲನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಭವ್ಯತೆಯ ಎದುರು ಮನುಷ್ಯ ತನ್ನ ಇರುವಿಕೆಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸದಾ ವಿಫಲನಾಗಿತ್ತಾನೆ. ಈ ವಿಶಾಲ ಬಯಲಿನಲ್ಲಿ ಎಲ್ಲವೂ ಚುಕ್ಕೆಯಂತೆ ಕಾಣುತ್ತದೆ. ನಿಜ,  ಬಯಲಿನಲ್ಲಿ ಮತ್ತೆಂದೂ ಸಿಗದ ಹಾಗೆ ಕಳೆದುಹೋಗಬೇಕು. ತನ್ನೆಲ್ಲಾ ಒಣ ಪ್ರತಿಷ್ಟೆ, ಸ್ಥಾನಮಾನ, ಮೋಹಗಳನ್ನು ಕಳೆದುಕೊಂಡು  ಈ  ವಿಶಾಲ ಬಯಲಿನಲ್ಲಿ ತಾನೂ ಒಂದು ಬಯಲಾಗಬೇಕು, ಭವ್ಯವಾಗಬೇಕು. ಮೋಹ ಕಳೆವಾಟದ ಈ ಬಯಲೆಂದರೆ ನನ್ನಲ್ಲಿ ಎಂದಿಗೂ ಆರದ ಮೋಹ.

ಎಷ್ಟೆಂದರೂ ಇದು ಕೃಷ್ಣ ನದಿಯ ಬಯಲಲ್ಲವೇ? ಇಲ್ಲಿ ಎಲ್ಲವೂ ವಿಶಾಲ, ಎಲ್ಲವೂ ಭವ್ಯ. ಇದಕ್ಕೊಂದು ಒಳ್ಳೆಯ ಉದಾಹರಣೆಯಾಗಿ ಸಿಕ್ಕಿದ್ದು ನಾವು ದಾಟಿಕೊಂಡು ಮುಂದೆ ಸಾಗಿದ ಮೂರು ಕಿ.ಮೀ. ಉದ್ದದ ಸೇತುವೆ! ಕೃಷ್ಣಾ ನದಿಗೆ ಅಡ್ಡಲಾಗಿ ಹುಬ್ಬಳ್ಳಿ ಬಿಜಾಪುರವನ್ನು ಜೋಡಿಸುವ ಈ ಭವ್ಯ ಸೇತುವೆಯ ಉದ್ದ ಬರೋಬ್ಬರಿ ೩ ಕಿ.ಮೀ! ದಕ್ಷಿಣ ಭಾರತದಲ್ಲೇ ಅತೀ ಉದ್ದದ ಸೇತುವೆ. ಬರೋಬ್ಬರಿ ಸೇತುವೆಯ ನಡುವೆ ತಂದು ಗಾಡಿ ನಿಲ್ಲಿಸಿ ಇಳಿದ ಮೇಲೆ ಪಳಗಿದ ಗೈಡ್ ನಂತೆ ಈ ಸೇತುವೆಯ ಕುರಿತು ಹೆಮ್ಮೆಯಿಂದ ಹೇಳಿದ‌ ಹೊಸ್ಮನಿ! ನಿಜಕ್ಕೂ ನನಗೆ ಮುಂದೆ ಸಾಗುವ ಇಷ್ಟವಿರಲಿಲ್ಲ. ಅಲ್ಲಿ ಕಳೆದ ಸಮಯ ಒಂದು ಹೊಸ ಒಳನೋಟವನ್ನು , ಹೊಸ ಅನುಭೂತಿಯನ್ನು ಕೊಟ್ಟು ಮತ್ತೆ ಮತ್ತೆ ಈ ಬಯಲಿಗೆ ನನ್ನನ್ನು ಎಳೆದವು ಬಲವಾಗಿ.ಎಲ್ಲವೂ ಮೋಹ ಕಳೆವಾಟ!

ಈ ದಾರಿಗಳು
ಸುಮ್ಮನೇ ಬಿದ್ದುಕೊಂಡಿರುತ್ತವೆ
ಹೊಟ್ಟೆ ತುಂಬಿದ ಹೆಬ್ಬಾವಿನಂತೆ.
ಅಸಲಿಗೆ ಈ ದಾರಿಗಳಿಗೆ
ಯಾವ ಆದಿಯೂ ಇಲ್ಲ
ಅಂತ್ಯವೂ ಇಲ್ಲ.
ಅವೆರಡೂ ಒಂದೇ ಬಿಂದುವಿನಲ್ಲಿ
ಮುಖಮುಖಿಯಾಗುತ್ತವೆ.

ನಿನ್ನನ್ನು ದಾಟಿ ಬಂದಿದ್ದೇನೆ....
ಅನ್ನುವ ಅಹಮಿಕೆಯೆಲ್ಲಾ
ದಾರಿ ಮಧ್ಯದ ಮಾತಷ್ಟೇ ಹೊರತು
ಇನ್ನೇನೂ ಇಲ್ಲ.
ಸುತ್ತಿ ಸುತ್ತಿ ಬಸವಳಿದು
ಓಟ ಮುಗಿಸಿದಾಗ ನಮ್ಮ ಅಸ್ತಿತ್ವಕ್ಕಿಲ್ಲಿ
ಯಾವ ಅರ್ಥವೂ ಉಳಿದಿರುವುದಿಲ್ಲ....!

ಬಿಜಾಪುರ ಸೇರಿದಾಗ ಮಧ್ಯಾನ್ಹ ೧೨ಗಂಟೆ. ನಾನು ಮೊದಲೊಮ್ಮೆ ನೋಡಿದ್ದ ಗೋಲ್ ಗುಂಬಜ್ ಗೆ ಹೊಸಬ ಯತೀಶನ್ನು ಕರೆದುಕೊಂಡು ಅನುಭವಿ ಗೈಡ್ ನಂತೆ ಮುಂದೆ ಸಾಗಿ ಗೋಲ್ ಗುಂಬಜ್ ನ್ನು ನನಗೆ ತಿಳಿದ ಮಟ್ಟಿಗೆ ತಿಳಿಸಿದೆ. ಅಲ್ಲೂ ಭವ್ಯತೆಯಿತ್ತು, ಸೌಂದರ್ಯವಿತ್ತು, ಆಳಿದ ಬಹುಮನಿ ಸುಲ್ತಾನರ ಕುರುಹುಗಳಿತ್ತು. ಹೋದ ಸಲ ಇಲ್ಲಿ ನನ್ನ ಮಂಗಳೂರಿನ ಸ್ನೇಹಿತರೊಂದಿಗೆ ಬಂದಿದ್ದಾಗ ತುಂಬಾ ಒಳ್ಳೆಯ ಗೈಡ್ ಸಿಕ್ಕಿದ್ರು. ಗುಂಬಜ್ ಮೇಲೆ ಹಾಡು ಹಾಡಿ ಅದು ಪ್ರತಿಧ್ವನಿಸುವ ವಿಶೇಷವನ್ನು ಹೇಳಿ ಬೆರಗುಮೂಡಿಸಿದ್ದು ಅವರು ಇನ್ನೂ ನನ್ನ ನೆನಪಲ್ಲಿ ಉಳಿದುದಕ್ಕೆ ಕಾರಣ ಹೌದಾದರೂ ಇನ್ನೂ ಒಂದು ಬಹು ಮುಖ್ಯ ಕಾರಣ ಅವರಂದು ನಮ್ಮ ಬಡಕಲು ದೇಹಗಳನ್ನು ನೋಡಿ ಆಡಿದ ಒಂದು ಡಯಲಾಗ್!

"ನೀವೇನ್ರೀ, ಮಂಗ್ಳೂರ್ ಮಂದಿ.
ಅಕ್ಕಿ ತಿಂದು ಹಕ್ಕಿ ತರಹ ಆಗಿದೀರಿ...

ನಾವು ಬಿಜಾಪುರ್ ಮಂದಿ ನೋಡ್ರೀ ಹ್ಯಾಗ್
ಜೋಳ ತಿಂದ್ ತೋಳ ತರ ಅದೆವ್ರೀ...."

ಅಂತ ಹೇಳಿದಾಗ ನಮಗೆ ನಗು ತಡೆಯಲಾಗಿರಲಿಲ್ಲ. ಈಗಲೂ ಆ ನೆನಪಾಗಿ ನಗುವಿನ ಹೊನಲೇ ಹರಿಯಿತು.

ಪ್ರಯಾಣ ಮುಂದುವರೆಯುವುದು...
#BGGROUP @ #ಬಿಜಾಪುರ
#PART 1

#ಕೊರ್ತಿಕೋಲಾರ್  #ಮೊಸರವಲಕ್ಕಿ"

"ಈಗೇನು ನೀ ಬರ್ತಿಯೋ? ಇಲ್ವೋ?...ಅಷ್ಟ್ ಹೇಳಿ ಬಿಡು.‌..ಹಾಂ ಹೂಂ ಕಹಾನಿ ಮತ್ ಬೋಲೋ..."
ಸುಧೀರ್ ಹೊಸ್ಮನಿ ಪೋನ್ ಮಾಡಿದಾಗ ಇನ್ನೂ ಗೊಂದಲದಲ್ಲಿಯೇ ಮಾತಾಡಿದ್ದೆ. ಮತ್ತೆ ನನ್ನ  ನೋಡೋನು  ದೋಸ್ತ್ ...ಮಾತು ಕೇಳಿ ಏಕ್ ದಮ್ ಸೆಂಟಿಮೆಂಟಲ್ ಮೂಡ್ ಗೆ ಗೇರ್ ಬದಲಾಯಿಸಿ  "ನೋಡು ದೋಸ್ತ್... ನಾಳೆ ಯಾರ್ ಇರ್ತಾರೋ ಇಲ್ವೋ ಯಾರಿಗ್ ಗೊತ್ತು...ಒಂದು ವಾರ ಮಾತ್ರ ಇಂಡಿಯಾದಲ್ಲಿರೋದು, ಮತ್ತೆ ವಿಮಾನ ಏರೋವಾಗ ಕೆಳಗೆ ಇಳಿಯೋ ಬಗ್ಗೆ ಗ್ಯಾರಂಟಿ ಇಲ್ಲ...ಬಾ ನೀನು....ಇದ್ರ ಮೇಲೆ ನಿನ್ನಿಷ್ಟ" ಅಂದು ನನ್ನ ಹೆಂಡತಿಯ ತಲೆಗೂ ಭಾವನೆಗಳ ಹುಳ ಬಿಟ್ಟಾಗ ನನಗಂತೂ ಪರ್ಮಿಶನ್ ಸಿಕ್ಕಿದ್ದೇ ನೆಪವಾಗಿ ಮತ್ತೆ ಹಿಂದೆ ಮಂದೆ ನೋಡಲಿಲ್ಲ. ಯತೀಶ್ ಗೆ ಪೋನ್ ಮಾಡಿ ಬರ್ತೀಯಾ ಅಂದದ್ದೇ ತಡ ಹೆಚ್ಚು ಯೋಚಿಸದೇ ಹೊರಟೇ ಬಿಟ್ಟ.

ಬಹುಶಃ BG GROUPನ ಸೆಳೆತವೇ ಆ ರೀತಿಯದ್ದು.

ಹಳೇ ಹುಬ್ಳಿ ಬಸ್ ಸ್ಟ್ಯಾಂಡ್ ನಾಗ ನಿಂತಿದ್ದೆ....

ಹಳೇ ಹುಬ್ಳಿ ಬಸ್ ಸ್ಟ್ಯಾಂಡ್ ನಲ್ಲಿ ಇಳಿದಾಗ ಬೆಳಗ್ಗಿನ ಜಾವ 6 ಗಂಟೆ. ಆಟೋದವರ ಕೈಯಿಂದ ತಪ್ಪಿಸಿಕೊಂಡು ಸುಧೀರ್ ಹೊಸ್ಮನಿಗೊಂದು ಕಾಲ್ ಮಾಡಿ ,ಬೀದಿ ಬದಿಯ ಟೀ ಸ್ಟಾಲ್ ಗೆ ಹೋದೆವು. ಸಾಲಾಗಿ ಇಟ್ಟ ಸಣ್ಣ ಸಣ್ಣ ಕಪ್ಗಳಿಗೆ ಚಾ ಸುರಿಯುತ್ತಿದ್ದ. " ಏ ಎರಡು ಲೆಮನ್ ಟೀ ಕೊಡಪ್ಪಾ..." ಅಂತ ಇಬ್ಬರು ತರುಣರು ಹೇಳಿದ್ದು ಕೇಳಿ "ನನಗೂ ಇಂದು ಲೆಮನ್ ಟೀ" ಅಂದೆ‌. ಅವರ ಸರದಿ ಬಂದಾಗ ಅದೇ ನೋರ್ಮಲ್ ಟೀ ಅವರಿಗೂ ಕೊಟ್ಟು " ಲೆಮನ್ ಟೀ" ಅಂದದ್ದು ಕೇಳಿ "ಲೆಮನ್ ಟೀ ಇಲ್ವಾ..." ಅಂದಾಗ ಸೇರಿದ್ದ ಮಂದಿಗೆಲ್ಲಾ ಜೋರ್ ನಗು...". ಅವನೆಲ್ಲಿ ಲೆಮನ್ ಕೊಡ್ತಾನೋ...ಹುಚ್ ಸೂ.ಮಗ...ಇದಕ್ಕೆ ಟೈಮಿಲ್ಲ. ಇದೇ ಲೆಮನ್, ಇದೇ ಜಿಂಜರ್ ...ಹ್ಹ ಹ್ಹ ಹ್ಹ " ...ಆದರೂ ಚಹಾ ಸೂಪರ್ ಆಗಿತ್ತು. ಚಹಾದ ಸ್ವಾದ ಆರುವ ಮೊದಲೇ ಹೊಸ್ಮನಿ ಸ್ವಿಫ್ಟ್ ಕಾರ್ ನಲ್ಲಿ ಕುಳಿತು ದೂರದಿಂದಲೇ ವಿಶ್ ಮಾಡಿದ.

ಕರಾವಳಿಯ ಜಡಿಮಳೆಯಿಂದ ಹುಬ್ಬಳ್ಳಿಯಲ್ಲಿ ಕಣ್ಣು ತೆರೆದಾಗ ಅಷ್ಟೇನೂ ಪ್ರಖರವಲ್ಲದ ಬಿಸಿಲು. ಬೆಳಗ್ಗಿನ ನಾಶ್ತಾ ಮುಗಿಸಿ ಹೊಸಮನಿಯ ಜೊತೆ ಅವನ ಸುಂದರ ಕುಟುಂಬದಿಂದ ಬೀಳ್ಕೊಂಡು ಸಾಗಿತು ನಮ್ಮ ಕನಸಿನ ಸವಾರಿ ಬಿಜಾಪುರದೆಡೆಗೆ.ಹುಬ್ಬಳ್ಳಿ ಬಿಜಾಪುರ ನಡುವಿನ ೧೬೦ ಕಿ.ಮೀ.ಗಳನ್ನು ಒಂದೇ ಗಂಟೆಯಲ್ಲಿ ತಲುಪುವ ಯೋಚನೆಯೊಂದಿಗೋ ಏನೋ ಕಾರನ್ನು ೧೬೦ ಕಿಮೀ/ಗ ವೇಗಕ್ಕೆ ಒಯ್ದು ಸಿಳ್ಳೆ ಹಾಕತೊಡಗಿದಾಗ ನನಗೂ ಜೊತೆಯಲ್ಲಿದ್ದ ಇನ್ನೊಬ್ಬ ಕರಾವಳಿ ಹುಡುಗ ಯತೀಶನಿಗೆ ಪುಕು ಪುಕು ಶುರು. ಹೇಳಿದ್ರೆ ಎಲ್ಲಿ ಈ ಹೊಸ್ಮನಿ ನಗಾಡ್ತಾನೋ ಅನ್ನೋ ಆತಂಕ. ಒಳ್ಳೆ ಹುಂಬನ ಸಹವಾಸ ಆಯ್ತಲ್ಲ ಅಂದುಕೊಳ್ಳುವಾಗಲೇ ಎದುರಿಗಿದ್ದ ರಸ್ತೆಯ ಕಂಡೀಷನ್ಗೆ ವೇಗವನ್ನು ಕಡಿಮೆ ಮಾಡಲೇ ಬೇಕಾಗಿ ನಿರಾಳಗೊಂಡೆ.ಆಗ ಬಿಚ್ಚಿಕೊಂಡಿತು ಹತ್ತುವರ್ಷಗಳ ಹಳೆಯ ನೆನಪಿನ ಬುತ್ತಿ.

ಈ ಮೊದಲ ಸಲ ಅನ್ನೋ ಶಬ್ದದಲ್ಲೇ ಅದೇನೋ ನಶೆ ಇದೆ.
ಮೊದಲ ಅಳು, ಮೊದಲ ನಗು, ಮೊದಲ ಸೈಕಲ್, ಮೊದಲ ಕ್ರಶ್, ಮೊದಲ ಸ್ಪರ್ಶ, ಮೊದಲ ಮುತ್ತು...ಹೀಗೆ. ಈ ಎಲ್ಲಾ ಮೊದಲಿಗೆ ಒಂದು ಮಾದಕತೆ ಇದೆ, ಹಿಡಿದಿಟ್ಟುಕೊಳ್ಳುವ ಭಾವವಿದೆ, ಮತ್ತೆ ಮತ್ತೆ ನೆನಪಿಸಿಕೊಳ್ಳುವ ಖುಷಿ ಇದೆ. ಆದರೆ ಇಲ್ಲಿ ನೆನಪುಗಳು ಬಿಚ್ಚಿಕೊಂಡದ್ದು, ದೋಸ್ತಿಗಳು ಬೆಸೆದುಕೊಂಡದ್ದು ನನ್ನ ಜೀವನದಲ್ಲಿ ಸಿಕ್ಕಿದ ಮೊದಲ ಕೆಲಸದ ವಿಷಯದಲ್ಲಿ.ಅದು ೨೦೦೨ ರ ಮಳೆಗಾಲದ ದಿನಗಳು. ಸುಲಭ ಇದ್ದ ಇಂಟರ್ ವ್ಯೂ ನ್ನು ಕಷ್ಟಪಟ್ಟು ಪಾಸು ಮಾಡಿದ ಮೇಲೆ ನನಗೆ ಬೆಳಗಾವಿಯ ಇಂಡಾಲ್ ನಲ್ಲಿ ಕೆಲಸ ಸಿಕ್ಕಿದ್ದು, ನಂತರ ನನ್ನೊಂದಿಗೆ ಕೀರ್ತಿ, ಯತೀಶ್, ಈ ಹೊಸ್ಮನಿ, ವಿನಾಯಕ್ ,ಎರಡು  ಜಗ್ಗುದಾದಾಗಳು ಇನ್ನೂ ಹಲವಾರು ಸೇರಿ ವೀಕ್ ಎಂಡ್ ಮಸ್ತಿಗೆ ಏರ್ಪಾಡಾದ ಗ್ರೂಪ್ ಈ BG GROUP.ನಮ್ಮ ಮಂಗಳೂರಿನ ಇಕ್ಬಾಲ್ ಆಗಲೇ ಅಲ್ಲಿ ಝಾಂಡಾ ಊರಿದ್ದ.

ತಲೆಯಲ್ಲಿ ನೂರು ನೆನಪುಗಳ ಮೆರವಣಿಗೆ ಸಾಗುತ್ತಿರುವಾಗಲೇ ಸುಧೀರ್,'ರವಿ ನೋಡೋ, ಈ ಊರಲ್ಲಿ ಬೆಣ್ಣೆಯಂತಹ ಮೊಸರು ಸಿಗ್ತದೆ, ಅವ್ಲಕ್ಕಿ ಮೇಲೆ ಹಾಕಿ ಮೇಲೆ ಚಟ್ನಿ ಪುಡಿ ಹರಡಿಕೊಂಡು ತಿಂದ್ರೆ....ಮ್ಹ್...ಸೂಪರಾಗಿರ್ತದೆ' ಅಂತ ಒಂದು ಸಣ್ಣ ಹೋಟೇಲ್ ಅಂತ ಬೋರ್ಡ್ ಹಾಕ್ಕೊಂಡಿರೋ ಮನೆ ಮುಂದೆ  ಮುಂದೆ ಗಾಡಿ ನಿಲ್ಸಿದ. ಇಳ್ದು ನೋಡ್ತೇನೆ...ಹೋಟೇಲ್ ಮಾತೋಶ್ರೀ...ಕೊರ್ತಿಕೋಲಾರ್ ಅಂತ ಬೋರ್ಡ್ ಇದೆ. ಸೋ ಕೊರ್ತಿಕೋಲಾರ್ ನ ಮೊಸರವಲಕ್ಕಿ ನೋಡೇ ಬಿಡುವ ಅಂತ ಒಳಗೆ ಹೊಕ್ಕಿದ್ವಿ.
'ಮಾವ್ಶೀ...ಚಲೋ ಮೊಸರು ಕೊಡ್ರೀ...ಮಂಗ್ಳುರಿನ ಈ ದೋಸ್ತ್ ರಿಗೆ ಕೊರ್ತಿಕೋಲಾರ್ ನ ಮೊಸರಕ್ಕಿ ರುಚಿ ತೋರಿಸ್ರೀ...' ಅಂದಾಗ ತಲೆ ತುಂಬಾ ಸೆರಗನ್ನು ಹೊದ್ದ ಮಾವ್ಶಿ ನಮ್ಮೆದುರಿಗೆ ಮೊಸರನ್ನು ತಂದು ಇಟ್ರು‌.

ಸಣ್ಣ ಮಣ್ಣಿನ ವಾಟಿಯಲ್ಲಿ ಬೆಣ್ಣೆಯಂತಿದ್ದ ಮೊಸರು ಮಂಗಳೂರಿನ ಐಡಿಯಲ್ ಐಸ್ಕ್ರೀಮ್ ಗಿಂತ ನುಣ್ಣಗಿತ್ತು. ಅವಲಕ್ಕಿ, ಮೇಲೆ ಮೊಸರು ಅದರ ಮೇಲೆ ಎರಡು ತರಹದ ಚಟ್ನಿ ಪುಡಿಯನ್ನು ಹಾಕಿ ತಿನ್ತಾ ಇದ್ರೆ... ಆಹಾ!, ಒಂದೇ ಪ್ಲೇಟ್ ಗೆ ನಿಲ್ಲಲಿಲ್ಲ.ಯತೀಶ್ ಅಂತೂ ಇನ್ನೆರಡು ತರಿಸಿ ಚಪ್ಪರಿಸಿ ತಿಂದ. ' ರವಿ, ಏತ್ ಸೋಕ್ ಉಂಡ್ ಯಾ..' ಅಂತ ಪ್ಲೇಟ್ಗೊಮ್ಮೆ ಹೇಳುತ್ತಾ ತಿನ್ನುತ್ತಿದ್ದ ಅವನನ್ನು ನೋಡಿ ನಗದೇ ಇರಲಾಗಲಿಲ್ಲ.

ಕೊರ್ತಿಕೋಲಾರ್ ಕಡೆ ಬಂದ್ರೆ ಈ ಮೊಸರವಲಕ್ಕಿ ತಿನ್ನೋದನ್ನು ಮಾತ್ರ ಮರಿಬ್ಯಾಡ್ರೀ ಮತ್ತ...

ಪ್ರಯಾಣ ಮುಂದುವರೆಯುವುದು.....
ಮುರಳಿ ನಾದವ ಕೇಳಿ ಮನದಲಿ
ಹರುಷ ಚಿಗುರೊಡೆದು
ಬೀಸೋ ಗಾಳಿಯ ಗಂಧದಮಲಿಗೆ
ಸುಖದ ಸೆರೆಯೊಡೆದು
ಕಾದು ಶ್ಯಾಮನ ದಾರಿಯು
ಪುಳಕಗೊಂಡಳು ರಾಧೆಯು

ಕೆಂಪು ಕದಪಿನ ಜೇನ ಅಧರದಿ
ಬೆರಳ ಬರವಣಿಗೆ
ಭರದಿ ಬರಸೆಳೆದಪ್ಪಿ ಕಾಡುವ
ಕುಶಲ ಮೆರವಣಿಗೆ
ಒಲವ ಕನಸದು ಮೋಹನ
ನಾಚಿ ನೆನೆದಳು ಇನಿಯನ

ಯಮುನೆ ತೀರದಿ ನಲಿವ ನವಿಲಿನ
ಗರಿಯ ತೊಟ್ಟವನ
ವೃಂದಾವನದ ಚೆಲುವ ಕಂಗಳ
ಒಲವ ಕುಡಿದವನ
ಜಗದ ಒಲುಮೆಯು ಮಾಧವ
ಬಯಸೆ ಗಗನದ ಕುಸುಮವು