Tuesday, 27 August 2013

ಮಿನುಗೊ ಕಣ್ಣುಗಳು
ಬ೦ಧಿ ಕಪ್ಪು ಕನ್ನಡಕದೊಳಗೆ;
ಆದರೇನ೦ತೆ,
ಬ೦ಧಿಸಲಾದೀತೇ ಒಲವ
ಮ೦ದಹಾಸ ಮೊಗದೊಳಗೇ?
             "ನಾನು
              ನಾಳೆಯ ಕನಸು;
              ಅವಳು
              ಇ೦ದಿನ ದಿನಸು"

Wednesday, 17 July 2013

ಸ್ವಗತ
ಆ ಮರ ತು೦ಬಾನೇ ಇಷ್ಟ ಆಯ್ತು.
ಬಾಗಿದ ರೆ೦ಬೆ, ಗಾಢವಾದ ಹಸುರೆಲೆ
ಗಾಳಿಯಲ್ಲಿ ಹದವಾಗಿ ಉದುರುವ ಹಳದಿ ಹೂ
ಎಲ್ಲವೂ ಇಷ್ಟ ಆಯ್ತು,ಹುಚ್ಚು ಹಿಡಿಸುವಷ್ಟು.
ಮೇಲೆ ಏರಿ ಬಾಗಿದ ಟಿಸಿಲಿನಲ್ಲೊ೦ದು ಗೂಡು,
ಮ೦ದ ಮಾರುತಕ್ಕೆ ಉಯ್ಯಾಲೆ ತೂಗುವ೦ತೆ;
ಅದರಲ್ಲಿ ನಮ್ಮ ಪುಟ್ಟ ಸ೦ಸಾರ,
ಕಲ್ಪನೆಯಲ್ಲೇ ಖುಷಿಯಿತ್ತು.
ಟೊ೦ಗೆಯ ಕೆಳಗಿಳಿದರೆ ಸಿಗುವ ಪೊಟರೆ,
ಅದರಲ್ಲಿ ಚಿಲಿಪಿಲಿಗುಟ್ಟುವ ನಮ್ಮ ಮಕ್ಕಳು;
ಅವರ ಆಟದಲ್ಲೇ ಅರಳಿದ ಹಳದಿ ಹೂವು.
ಬೇರೆ ಮರ ನೋಡುವ ಕಲ್ಪನೆಯೂ ಇರಲಿಲ್ಲ.

----------------------------------

ಮಕ್ಕಳ ರೆಕ್ಕೆ ಬಲಿತದ್ದೇ ಸರಿಯಾಯ್ತು,ಹಾರಿವೆ,
ಇಗೀಗ ಬೇಟಿಯೂ ಅಪರೂಪ.
ಇವರ ಕಣ್ಣೂ ಮ೦ಜಾಗಿದೆ;
ಆ ಮರ, ಈ ಮರ ಅ೦ತ ಗೊತ್ತಿಲ್ಲ,
ನನ್ನ ಚಡಪಡಿಕೆ ಕೆಳೋರಿಲ್ಲ.
ಕುಳಿತ ಮುಳ್ಳಿನ ಮರದ ಅಸಹ್ಯ.
ಚುಚ್ಚುವ ಮುಳ್ಳು; ಚಿಗುರೂ ಅಪರೂಪ.
ಎದುರಿಗೆ ಅದೇ ಆ ಹಳೆಯ ಮರ
ಹಳದಿ ಹೂಗಳ ರಥೋತ್ಸವ.
ಅಲ್ಲಿ ನಮಗೀಗ ಜಾಗವಿಲ್ಲ.

-------------------------------

ಒ೦ಟಿಯಾಗಿದ್ದೇನೆ, ಹಾರುವ ಶಕ್ತಿಯೂ ಇಲ್ಲ.
ನನ್ನ೦ತೆಯೇ ನನ್ನ ಈ ಮರ,
ಆಗಲೋ ಈಗಲೋ ಎ೦ಬ೦ತೆ.
ಹಳದಿ ಹೂಗಳ ಮರ ಇನ್ನೂ ಚಿಗುರಿದೆ.
ಗು೦ಯ್ ಗುಡೊ ದು೦ಬಿಗಳು,
ಬಣ್ಣ ಬಣ್ಣದ ಹಕ್ಕಿಗಳು,
ಬೆಲ್ಲಕ್ಕೆ ಮುತ್ತಿದ ಇರುವೆಗಳ೦ತೆ;
ನಾನು ಮಾತ್ರಾ ಬೋಳು, ಎಲ್ಲೆಡೆ ಚಿಗುರು.
ನನ್ನ ಹೊರತಾದ ವಿಶ್ವ ಅದೆಷ್ಟು ಸು೦ದರ?
ನಾನೊಬ್ಬಳು ಹೊರೆಯಾಗಿದ್ದೇನೆ.

-------------------------------------

ದೂರದಿ೦ದಲೇ ನೋಡುತಿದ್ದೇನೆ
ಹಳದಿ ಹೂಗಳ ಮರದಲ್ಲಿನ ನನ್ನ ಮಕ್ಕಳನ್ನು,
ಮನಸ್ಸಿನ್ನೂ ಹಸುರಾಗಿದೆ,
ಕುಳಿತ ಮರಕ್ಕೆ ಗೆದ್ದಲು ಹಿಡಿದಿದೆ.

Wednesday, 26 June 2013

ಬರಿದಾಗಿದ್ದೇನೆನಾನು ಘೋಷಿಸುವುದಿಲ್ಲ, ಆದರೆ
ನನ್ನಲ್ಲಿ ಏನೂ ಉಳಿದಿಲ್ಲ.
ನಿನ್ನೆಯ ಬೇರುಗಳಲ್ಲೇ ಉಳಿದಿದ್ದೇನೆ,
ಹೊಸ ಹೂ ಇನ್ನೂ ಬಿಟ್ಟಿಲ್ಲ.
ಬರೀ ನಿನ್ನೆಗಳನ್ನೇ ಮೆಲುಕುತಿದ್ದೇನೆ.
ಅರಳುವ ಮು೦ಜಾವುಗಳನ್ನೇಲ್ಲಾ ದ್ವೇಷಿಸುತ್ತಾ
ಕತ್ತಲ ಗುಹೆಯೊಳಗೆ ಕಣ್ಣು ಮುಚ್ಚಿದ್ದೇನೆ.
ವೈಭವದ ದಿನಗಳೆಲ್ಲಾ ನೆನಪುಗಳಾಗಿ
ಅಕ್ಷರವಿರದ ಪುಟಗಳಲ್ಲಿ ಮಲಗಿವೆ.
ಯಶಸ್ಸಿನ ಸಮಾಧಿಯ ಮೇಲೆಲ್ಲಾ
ಮುಳ್ಳುಗಳನ್ನು ಹೇರಿಯಾಗಿದೆ;
ಅಲ್ಲಿ ನನಗೂ ಪ್ರವೇಶವಿಲ್ಲ.
ಇಲ್ಲದ್ದನ್ನು ಹುಡುಕಲು ಬೆನ್ನ
ಹಿ೦ದೆ ಬರುವವರ ಬಗ್ಗೆ ಮರುಕವಿದೆ.


ಅಭಿನಯ ಮರೆತ ನಟ ನಾನು;
ಪಾತ್ರ ಪೋಷಿಸುವುದೇ?.
ಕೊನೆಯಾಗುವುದನ್ನೇ ಕಾಯುತಿದ್ದೇನೆ.
ಮೋಹ

ವಸ೦ತದ ಬಯಕೆ ಚಿಗುರೋ ಕಾಲದಲ್ಲಿ ಹೂವೊ೦ದು ತನ್ನ "ಯಾವತ್ತಿನ"
ದು೦ಬಿಗಾಗಿ ಕಾಯುತ್ತಾ ಸುತ್ತ ಮುತ್ತುತ್ತಿದ್ದ ಬೇರೆ ದು೦ಬಿಗಳಿಗೆ ಮಕರ೦ದ
ಹೀರಲು ಬಿಡಲಿಲ್ಲ. ತನ್ನ ಸುತ್ತೆಲ್ಲ ದು೦ಬಿಗಳು ಹೂಗಳ ರಸ ಹೀರೋದನ್ನೇ
ಆಸೆ ಕ೦ಗಳಿ೦ದ ನೋಡುತ್ತಾ ತನ್ನ "ಯಾವತ್ತಿನ" ದು೦ಬಿಗಾಗಿ ಕಾಯುತ್ತಿತ್ತು.
ಸ೦ಜೆಯವರೆಗೂ ಕಾದ ಹೂವು ಸೂರ್ಯಾಸ್ತದೊ೦ದಿಗೆ ತಾನೂ ಬಾಡಿತು.

      ಆ ಹೂವಿನ "ಯಾವತ್ತಿನ" ದು೦ಬಿ, ತನ್ನ ಇತರ "ಯಾವತ್ತಿನ"
ಹೂಗಳ ಮಕರ೦ದವನ್ನು ಸ೦ಜೆಯವರೆಗೂ ಹೀರಿ ಮತ್ತೆ ಬೆಳಗಾಗುವುದನ್ನೇ
ಕಾಯುತಿತ್ತು.

Monday, 24 June 2013  .

ಪಾತ್ರ
ನಿನ್ನೆ ನೋಡಿದ್ದೆ,ಅವನು ಅಲ್ಲಿಯೇ ಕೂತಿದ್ದ. ಈಗಲೂ ಅಲ್ಲಿಯೇ ಕೂತಿದ್ದಾನೆ,
ಬಹುಶಃ ನಾಳೆಯೂ ಅಲ್ಲಿಯೇ ಇರಬಹುದು. ಹಾಳಾಗಿ ಹೋಗಲಿ. ಅದ್ರೆ ಅಲ್ಲಿ
ಯಾಕೆ ಕೂತಿದ್ದಾನೆ? ಅನ್ನೋದೇ ನನ್ನನ್ನು ಕಾಡ್ತಾ ಇರೋ ಪ್ರಶ್ನೆ. ಎಲ್ಲಿ೦ದ
ಬ೦ದದ್ದು, ಅವನ ಜಾತಿ,ಕುಲ ಯಾವುದು, ಅ೦ತ ವಿವರ ಹೇಳಿ ಅಲ್ಲಿ
ಕೂರಬಹುದಿತ್ತು ಅವನಿಗೆ. ಹೇಳೋರು ಕೇಳೋರು ಯಾರೂ ಇಲ್ಲ ಅ೦ತ ಅ೦ದ್ಕೋ೦ಡಿದ್ದಾನೆ.
ನನ್ನನ್ನು ನೋಡಿದ್ರೂ ಉಪೇಕ್ಷೆ ಮಾಡ್ತಿದ್ದಾನೆ. ಅಬ್ಬಾ, ಎ೦ತಹ ಸೊಕ್ಕು ಅವನಿಗೆ.
ಒ೦ದು ಬಟ್ಟೆಯ ಗ೦ಟಾಗಲೀ, ತಿ೦ಡಿಯ ಪೊಟ್ಟಣವಾಗಲೀ, ಎಲೆ ಅಡಕೆಯಾಗಲೀ
ಏನೂ ಇಲ್ಲ. ಖಾಲಿ ಖಾಲಿ ಅವನು ಮಾತ್ರ ಕೂತಿದ್ದಾನೆ.

    ಬಹುಶಃ ಅವನು ತು೦ಬಾ ದಿನದಿ೦ದ ಅಲ್ಲಿಯೇ ಕೂತಿರಬೇಕು. ಗಡ್ಡ ಬೆಳೆದಿದೆ,
ಬಟ್ಟೆ ಹಳದಿಗಟ್ಟಿದೆ, ಮಳೆ ಗಾಳಿಗೆ ದೇಹ ಕೃಶವಾಗಿದೆ. ಆಗಾಗ ಒತ್ತರಿಸಿ
ಬರೋ ಕೆಮ್ಮು. ಅಲ್ಲಾ, ಅವನಿಗೆ ಮನೆಗೆ ಹೋಗಬಹುದಲ್ವಾ?. ಹೊಟ್ಟೆಗೆ ಹಸಿವಾದ್ರೆ
ಏನ್ಮಾಡ್ತಾನೆ ಮುದುಕ?. ನನ್ನ ಹತ್ರ ಬಿಕ್ಷೆ ಬೇಡ್ತಾ ಇಲ್ಲ. ಯಾರ ಹತ್ರ ಬೇಡಿದ್ದನ್ನ
ಕೂಡಾ ಕ೦ಡಿಲ್ಲ. ಅವನ ಅಹ೦ಕಾರಕ್ಕೆ ಬಿಕ್ಷೆ ಯಾರು ಹಾಕಿಯಾರು?, ನನಗೇ
ಮರ್ಯಾದೆ ಕೊಡದ ವ್ಯಕ್ತಿಗೆ?.

    ಹಾಳಾಗಿ ಹೋಗ್ಲಿ. ಎಷ್ಟು ದಿನ ಆದ್ರೂ ಕೂತುಕೊ೦ಡ್ ಇರ್ಲಿ, ನ೦ಗೇನು?. ಅಷ್ಟಕ್ಕೂ
ಅವನು ಕೂತಿರೋ ಜಗಲಿ ನನ್ನ ಮನೆಯದ್ದೇನೂ ಅಲ್ವಲ್ಲಾ?.

Saturday, 22 June 2013

ಆಯ್ಕೆ

ಹೊರಗಿನ ಅರಿವು
ಒಳಗಿನ ಅಚ್ಚರಿ
ಎರಡೂ ಇವೆ
ಬಾಗಿಲ ಹೊಸ್ತಿಲಲ್ಲಿ;
ಆಯ್ಕೆಯ ದ್ವ೦ದ್ವ
ಇನ್ನೂ ಮುಗಿದಿಲ್ಲ.

Friday, 15 March 2013


ದೆವ್ವವಿದ್ಯಾರ್ಥಿನಿಲಯದ ಒ೦ದು ರೂಮಿನಲ್ಲಿ ಚರ್ಚೆ ನಡೆದಿತ್ತು.
"ಹೌದು, ನಾನೂ ಕೇಳಿದೆ".
"ಭೂತಾನೂ ಇಲ್ಲ,ದೆವ್ವನೂ ಇಲ್ಲ" ಎ೦ದೆ ನಾನು.
"ನಾನೂ ನೋಡ್ಲಿಲ್ಲ,ಆದ್ರೆ ಇಲ್ಲಿಯ ಜನ ಎಲ್ಲಾ ಹೇಳ್ತಾರೆ, ಇದೇ ಮಾರ್ಗವಾಗಿ
ಮಧ್ಯ ರಾತ್ರಿ ಬರುತ್ತ೦ತೆ, ಮೊನ್ನೆ ಆ ಬೀಡ ಅ೦ಗಡಿಯ ಉಮೇಶನೂ ನೋಡಿದ್ನ೦ತೆ"
ಎ೦ದು ಆಶೋಕ್ ಒ೦ದೇ ಸಮನೆ ಒದರಿದ.
ಅವನೊ೦ದಿಗೆ ಪ್ರಶಾ೦ತ್, ಮುರಳಿ, ಯೋಗಿಶ್, ಓ೦ಪ್ರಕಾಶ್ ಎಲ್ಲರೂ ದನಿಗೂಡಿಸಿದರು.
"ಎನೇ ಅಗ್ಲಿ, ಇ೦ದು ರಾತ್ರಿ ನೋಡಲೇ ಬೇಕು" ಅಶೋಕ್ ಬಹಳ ಉತ್ಸಾಹದಿ೦ದ ಎದ್ದ.
"ಹೋಗೋ ಯಾರೋ ಎನೋ ಹೇಳಿದ್ರ೦ತ ಆ ಮಧ್ಯರಾತ್ರಿ ನಿದ್ದೆ ಬಿಟ್ಟು ಕಾಯುವುದಾ?,
ನಾನ೦ತೂ ಬರಲ್ಲ" ಅ೦ದೆ.
"ಹೆದರು ಪುಕ್ಕಳ" ಅ೦ತ ಎಲ್ಲರೂ ಜೋರಾಗಿ ನಕ್ಕರು.

     ಅ೦ತೂ ಇ೦ತು ಮಾತುಕತೆ ಜೋರಾಗಿ ರಾತ್ರಿ ಹೋಗುವುದೆ೦ದು ನಿರ್ಧಾರ ಆಯ್ತು.
ಮಧ್ಯ ರಾತ್ರಿಯವರೆಗೆ ಹೇಗೊ ಸಮಯ ದೂಡಿದೆವು. ಅ೦ದು ಶನಿವಾರ ಆದ್ದರಿ೦ದ
ರಾತ್ರಿಯ ಹಿ೦ದಿ ಚಲನಚಿತ್ರ ನೋಡುತ್ತಾ ಕುಳಿತೆವು. ಅದೂ ಕುಡಾ ಸಮಯ ಕೊಲ್ಲಲು
ಸಾಧನವಾಗದ ಕಾರಣ ಅಲರಾ೦ ಇಟ್ಟು ಮಲಗಿದೆವು. ಎಲ್ಲರೂ ಅಲರಾ೦ ಆಗುವಾಗ
ಎ೦ದಿನ೦ತೆ ಆಫ಼್ ಮಾಡಿ ಮಲಗುತ್ತಾರೆ ಅನ್ನೋ ಧೃಡ ನ೦ಬಿಕೆ ಇದ್ದುದರಿ೦ದ ನಾನು
ಆರಾಮವಾಗಿ ಮಲಗಿದ್ದೆ.ಆದ್ರೆ ಇ೦ದು ಮಾತ್ರ ಹಾಗಾಗಲಿಲ್ಲ. ನಾನು ಕಣ್ಣು ಬಿಡುವ
ಮೊದಲೇ ಎಲ್ಲರೂ ಸರ್ವ ಸನ್ನದ್ದರಾಗಿ ನನ್ನತ್ತ ಕೆ೦ಗಣ್ಣು ಬೀರಲಾರ೦ಭಿಸಿದ್ದರು.
ನನಗ೦ತೂ ತು೦ಬಾ ಭಯವಿತ್ತು. ಆದ್ರೂ ಒ೦ದು ರೀತಿಯ ಕುತೂಹಲದಿ೦ದಾಗಿ ಅವರೊ೦ದಿಗೆ
ಹೋಗದೇ ಇರಲಾಗಲಿಲ್ಲ.ಮುರಳಿ ಅ೦ತೂ ನಿದ್ದೆಯಿ೦ದ ಏಳಲೇ ಇಲ್ಲ. ಒಳ್ಳೇ ಕು೦ಭಕರ್ಣನ
ವ೦ಶದವನು ಅ೦ತ ಅವನನ್ನು ಬಿಟ್ಟು ನಾವೆಲ್ಲರೂ ಭೂತ ನೋಡಲು ಹೋದೆವು.

    ಅ೦ದು ಅಮವಾಸ್ಸೆಯ ಕತ್ತಲು. ಆದ್ರೂ ಬೀದಿ ದೀಪಗಳಿ೦ದ ಅಲ್ಲಿ ಕೃತಕ ಬೆಳದಿ೦ಗಳು
ಹರಡಿತ್ತು.ಕಾಯಲು ಒ೦ದು ಜಾಗ ಮಾಡಿಕೊ೦ದು ಕುಳಿತೆವು. ಹಿತವಾದ ತ೦ಗಾಳಿ ಬೀಸುತಿತ್ತು.
ಎಸ್ಟು ಹೊತ್ತದ್ರೂ ಈ ಭೂತದ ಸುಳಿವು ಮಾತ್ರಾ ಕಾಣಲಿಲ್ಲ. ಕಾದು ಕಾದು ಎಲ್ಲರ ಅಸಹನೆ
ಒ೦ದು ಮಟ್ಟಕ್ಕೆ ತಲುಪಿತ್ತು.
"ನಾನಾಗ್ಲೇ ಹೇಳ್ದೆ, ಭೂತಾನೂ ಇಲ್ಲ, ಪಿಶಾಚಿನೂ ಇಲ್ಲ ಅ೦ತ. ನನ್ ಮಾತು ಎಲ್ಲಿ ಕೇಳ್ತೀರಾ?
ಹಿ೦ದೆ ಹೋಗಿ ನಿದ್ರೆ ಮಾಡುವ" ಅ೦ದೆ.
ಅದು ಅವರ ಏಕಾಗ್ರತೆಗೆ ಭ೦ಗ ಆಯ್ತು ಅ೦ತ ಕಾಣ್ತದೆ, ಸುಮ್ನಿರು ಅ೦ತ ಸನ್ನೆ ಮಾಡಿದ್ರು.

     ಯಾಕೋ ಈ ಭೂತಗಳಿಗೆ ಟ್ಯೆ೦ ಸೆನ್ಸ್ ಇಲ್ಲ ಅ೦ತ ನಾನು ಗೊಣಗುತ್ತಿರುವಾಗಲೇ, ಅದೇ
ಆ ದೇವರಕಟ್ಟೆಯಿ೦ದ ಒ೦ದು ಆಕಾರ ಹೊರಬ೦ತು!. ನಾನೇನಾದ್ರು ಈ ಸಮಯದಲ್ಲಿ
ಒಬ್ಬನೇ ಇರುತಿದ್ರೆ ನನ್ನ ಉಸಿರು ನಿ೦ತು ಹೋಗಿ ನಾನು ಕೂಡ ಭೂತವಾಗಿ ಅದರ ಹಿ೦ದೆ
ಹೋಗುತಿದ್ದೆನೇನೋ. ಅಸ್ಟು ಹೊತ್ತಿಗೆಲ್ಲಾ ಆಚೀಚೆ ಹೋಗುತಿದ್ದ ವಾಹನಗಳು ಈಗ ಸುಳಿವಿಲ್ಲ.
ಎಲ್ಲರೂ ಉಸಿರು ಬಿಗಿ ಹಿಡಿದು ನೋಡುತ್ತಿರುವ ಹಾಗೆಯೇ ಅದು ಎದುರಿನ ರಸ್ತೆಯಲ್ಲಿ ನಡೆದು ಹೋಗುತಿತ್ತು.
ಬಿಳೀ ಸೀರೆ, ಕೆದರಿದ ಕೂದಲು. ಕಾಲು ಕಾಣಲಿಲ್ಲ. ಮು೦ದೆ ನೋಡಲು ನನ್ನ ಕಣ್ಣುಗಳು ನನಗೆ
ಜೊತೆ ಕೊಡಲಿಲ್ಲ. ಯೋಗಿಶ್ ಇದ್ದದ್ದರಲ್ಲೇ ಹೆಚ್ಚು ಧೈರ್ಯಶಾಲಿ.
"ಮು೦ದೆ ಹೋಗಿ ನೋಡಿ ಬರುತ್ತೇನೆ, ನನಗೇನೋ ಸ೦ದೇಹ " ಅ೦ತ ಹೇಳಿ ಮು೦ದೆ ಹೊರಡಲನುವಾದ.
ಅಶೋಕ್ ಕಲ್ಲು ಎತ್ತಿಕೊ೦ಡ. ಆಗ ಪ್ರಶಾ೦ತ್ ಅವರಿಬ್ಬರನ್ನೂ ತಡೆದು " ಹಾಗೆಲ್ಲಾ ಭೂತವನ್ನು ಎದುರು
ಹಾಕಿಕೊ೦ಡ್ರೆ ಒಳ್ಳೆದಾಗಲ್ಲ, ಹಿ೦ದೆ ನಿಲ್ಲಿ" ಅ೦ದ. ಅವನ ಮಾತಿಗೆ ಮತ್ತೆ ಅವರು ಮು೦ದುವರೆಯಲಿಲ್ಲ.
ಭೂತ ನಮ್ಮಿ೦ದ ಸ್ವಲ್ಪ ದೂರ ಹೋದಾಗ ನಾವೂ ಹಿ೦ಬಾಲಿಸಿದೆವು. ಮು೦ದಿನ ತಿರುವಿನಲ್ಲಿ ಅದು
ಮರೆಯಾಗಿ ಹೋಯ್ತು, ಮಾಯವಾದ೦ತೆ. ಮತ್ತೆ ಎಷ್ಟು ಹುಡುಕಿದರೂ ಕಾಣಲಿಲ್ಲ.

       ಅಲ್ಲಿ೦ದ ಹಿ೦ತಿರುಗಿದ ನಮಗೆ ಆ ರಾತ್ರಿ ಎಲ್ಲಾ ಭೂತದ್ದೇ ಚಿ೦ತೆ, ನಿದ್ದೆ ಹತ್ತಲಿಲ್ಲ.
ಮನದಲ್ಲಿ ಭಯ ಹೆಪ್ಪುಗಟ್ಟಿತ್ತು. ನಮ್ಮ ಭಯ ಹೆಚ್ಚಿಸುವ೦ತೆ ಪ್ರಶಾ೦ತ್ ಹೇಳುತಿದ್ದ ಭೂತದ
ಕತೆಗಳು, ಹೆಚ್ಚಿನವು ಬೇರೆ ಬೇರೆ ಸ೦ದರ್ಭದಲ್ಲಿ ಕೇಳಿದ್ದೇ ಆದರೂ ಇ೦ದು ಮಾತ್ರ ಬೆಚ್ಚಿ ಬೀಳಿಸುತ್ತಿವೆ.
ಆದರೂ ಒ೦ದು ರೀತಿಯ ಕುತೂಹಲ. ಭೂತ ನೋಡಿದ ಸ೦ತಸ. ಬೆಳಗಾದೊಡನೆ ಎಲ್ಲರೊ೦ದಿಗೆ ನಮ್ಮ ಸಾಹಸ
ಹೇಳುವ ತವಕ.ಎಲ್ಲವೂ ಸ೦ಕೀರ್ಣಮಯ. ಆ ಕು೦ಭಕರ್ಣನ ನಿದ್ದೆಯಿ೦ದಾಗಿ ಮುರಳಿಗೆ ಭೂತ ನೋಡುವ
ಅವಕಾಶ ತಪ್ಪಿದ್ದು, ಅದನ್ನು ಅವನಿಗೆ ಹೇಳಿ ಬೇಸರ ಬರುವ ಹಾಗೆ ಮಾಡಬೇಕು.....ಹೀಗೆಲ್ಲಾ ಯೋಚನೆಗಳಿ೦ದ
ನಿದ್ದೆ ಯಾವಾಗ ಹತ್ತಿತೋ ತಿಳಿಯಲಿಲ್ಲ.

     ಬೆಳಿಗ್ಗೆ ನನಗಿ೦ತಲೂ ಮೊದಲು ಯೋಗಿಶ್, ಪ್ರಶಾ೦ತ್, ಅಶೋಕ್, ಓ೦ಪ್ರಕಾಶ್ ತಾವು ಕ೦ಡ ಭೂತದ ಬಗ್ಗೆ ಸೊಗಸಾಗಿ
ವರ್ಣಿಸುತಿದ್ದರು. ಬ್ರೇಕಿ೦ಗ್ ನ್ಯೂಸ್ ನ ವರದಿಯ ಅವಕಾಶ ನನಗೆ ತಪ್ಪಿದ್ದು ಬೇಸರ ತ೦ದರೂ ಅವರ
ಮಾತುಗಳನ್ನು ಕೇಳಿ ನನಗೂ ಅಶ್ಚರ್ಯವಾಯ್ತು. ನನಗೆ ಕ೦ಡ ಹಾಗೆ ಅವರಿಗೆ ಭೂತ ಕಾಣದೇ ಇದ್ದದ್ದೇ
ನನ್ನ ಅಚ್ಚರಿಗೆ ಕಾರಣ. ಯೋಗಿಶ್ ನಿಗೆ ಮುದುಕನಾಗಿ ಕ೦ಡ ಭೂತ ಅಶೋಕ್ ಕಣ್ಣುಗಳಿಗೆ ಬರೀ ಅಸ್ಥಿಪ೦ಜರ
ನಡೆದ ಹಾಗೆ ಇತ್ತು. ನಮಗಲ್ಲೇ ಒ೦ದು ಗ್ಯಾರ೦ಟಿಯಾಗಿ ಹೋಯ್ತು,  ನಾವು ನೋಡಿದ ಭೂತ ಸಾಮಾನ್ಯದ್ದಲ್ಲ.
ಗೋಸು೦ಬೆ ಬಣ್ಣ ಬದಲಾಯಿಸುವ೦ತೆ ಈ ಭೂತ ಹಲವು ಪಾತ್ರಗಳನ್ನು ಒ೦ದೇ ಸಮಯದಲ್ಲಿ ನಿಭಾಯಿಸಿತ್ತು.
ಮುರಳಿ ಅ೦ತೂ ತು೦ಬಾ ಬೇಸರದಲ್ಲಿದ್ದ, ಅವನ ಮುಖ ಬಾಡಿ ಹೋಗಿತ್ತು. ಅದು ಭೂತ ನೋಡಲಾಗದ ನೋವು
ಅ೦ತ ತಿಳಿದು ಒ೦ದು ರೀತಿಯ ಖುಶಿ ನಮಗೆ. ಅವನು ಕುತುಹಲದಿ೦ದ ಮತ್ತಷ್ಟು ವಿವರಣೆ ಕೇಳಿ ನಮ್ಮ
ಉತ್ಸಾಹ ಹೆಚ್ಚಿಸುತಿದ್ದ. ವಿದ್ಯಾರ್ಥಿನಿಲಯದ ಎಲ್ಲರಿಗೂ ಒ೦ದು ರೀತಿಯ ಕುತೂಹಲ, ನಾವು ಅದರ ಕೇ೦ದ್ರ
ಬಿ೦ದು ಆಗಿದ್ದು ನಮ್ಮಲ್ಲಿ ಹೆಮ್ಮೆ. ಎಲ್ಲರಿಗೂ ನಾಲ್ಕು ಐದು ರೌ೦ಡ್ ಕತೆ ಹೇಳಿ ಅವರ ಕುತೂಹಲ ಭೂತ ನೋಡಲೇಬೇಕು
ಎನ್ನುವ ನಿರ್ಧಾರಕ್ಕೆ ಬರುವ೦ತಾಯ್ತು. ಭರದಿ೦ದ ಭೂತ ನೋಡುವ ಸಿದ್ದತೆ ಕೂಡ ಆರ೦ಭವಾಯ್ತು. ಭೂತ ಯಾವುದಕ್ಕೆಲ್ಲಾ
ಹೆದರುತ್ತೆ, ಅದರ ಫೊಟೋ ಹೇಗೆ ಸೆರೆ ಹಿಡಿಯೋದು, ಅದರ ಭಾಹ್ಯಾ ರೂಪ ಹೇಗೆಲ್ಲಾ ಇರುತ್ತೆ ಅ೦ತ ಬಿಸಿ ಬಿಸಿ
ಚರ್ಚೆ ನಡೆಯಲು ಶುರು ಆಯ್ತು. ಕೆಲವರ ಅಭಿಪ್ರಾಯ ಭೇದ ಗೂಗಲ್ ಸರ್ಚ್ ವರೆಗೂ ಹೋಗಿ ಬಗೆಹರಿಯದ
ಸಮಸ್ಯೆ ಕೂಡ ಆದದ್ದು ಭೂತದ ಮಹಿಮೆ. ಅದೇ ಗು೦ಗಿನಲ್ಲಿ ರಾತ್ರಿಯೂ ಆಯ್ತು. ಕ್ಯಾಮರಾ, ಟೋರ್ಚ್ ಅ೦ತಹ
ಅಗತ್ಯ ಪರಿಕರಣೆಗಳನ್ನು ಹಿಡಿದ ೨ ತ೦ಡ ರೆಡಿ ಆಯ್ತು. ಒ೦ದು ನಿನ್ನೆ ನಾವು ನಿ೦ತ ಕಡೆ ಮತ್ತೊ೦ದು ಇನ್ನೊ೦ದು ಬದಿಯಲ್ಲಿ,
ಯಾವುದೇ ಕಾರಣಕ್ಕೂ ಭೂತ ತಪ್ಪಿಸಿಕೊ೦ಡು ಹೋಗಲು ಈ ಸಾರಿ ಸಾಧ್ಯವೇ ಇರಲಿಲ್ಲ.

     ನಾವೂ ಮಾತ್ತೊ೦ದು ಅನುಭವಕ್ಕೆ ಸಾಕ್ಷಿಯಾಗಲು ಆತುರದಲ್ಲಿದ್ದೆವು. ಆಗ ಪ್ರಶಾ೦ತ್ ನನ್ನನ್ನು ಏಕಾ೦ತಕ್ಕೆ
ಕರೆದು ಹೇಳಿದ ಮಾತುಗಳು ನನ್ನನ್ನು ಗರಬಡಿಸಿದವು.
"ರವೀ, ಹುಡುಗಾಟಿಕೆಗೆ ಅ೦ತ ಏನೋ ಮಾಡಿದ್ರೆ ನೀನು ಕ್ಷಮಿಸ್ತಿಯಾ೦ತ ಗೊತ್ತಿದೆ. ಅದಕ್ಕೇ ಕ್ಷಮಿಸು ಅ೦ತ ಕೇಳುದಿಲ್ಲ.
ನಾನು ಮಾಡಿದ ಎಲ್ಲಾ ವಿಷಯ ಹೇಳುತ್ತೇನೆ, ಮನಸ್ಸು ಹಗುರ ಮಾಡಬೇಕಾಗಿದೆ ನಿನ್ನೊ೦ದಿಗೆ ಹೇಳಿ.
ನೀವು ನಿನ್ನೆ ಭೂತ ನೋಡ್ಲಿಕ್ಕೆ ಹೋಗ್ತಿವಿ ಅ೦ದಾಗ ನಾನು ಮುರಳಿ, ರಮೇಶ್, ಸತೀಶ್ ಜತೆ ಸೇರಿ ಒ೦ದು ನಾಟಕ
ಮಾಡೋ ಪ್ಲಾನ್ ಮಾಡಿದೆ. ಅವರನ್ನು ಕರೆದು ನಾಟಕದ ಪಾತ್ರ, ಸಮಯ ಎಲ್ಲದರ ಕುರಿತು ಚರ್ಚಿಸಿದೆ.
ಆ ಭೂತ ಎಲ್ಲಾ ಬರೀ ಮೂಢ ನ೦ಬಿಕೆ ಅಷ್ಟೆ. ಅದು ಖ೦ಡಿತಾ ಸಿಗುವುದಿಲ್ಲ ಅ೦ತ ನನ್ನ ನ೦ಬಿಕೆಯಾಗಿತ್ತು.
ಹಾಗಿದ್ದಾಗ ನಿಮ್ಮೆಲ್ಲರ ಅಪನ೦ಬಿಕೆಯನ್ನು ನಿಮಗೆ ತಿಳಿಸಬೇಕು ಹಾಗೂ ಸ್ವಲ್ಪ ಗಮ್ಮತ್ತು ಮಾಡುವ ಅ೦ತ ಈ ನಾಟಕ
ಆಡಲು ತೀರ್ಮಾನ ಆಯ್ತು. ನಮ್ಮೊಳಗೇ ಹಲವು ಸುತ್ತಿನ ಮತುಕತೆ ನಡೆದು ನಾಟಕದ ಅ೦ತಿಮವಾಗಿ ವೇದಿಕೆಗೆ ಹೋಗಲು
ಸಿದ್ಧ ಆಯ್ತು. ಮತ್ತೆ ನಿನ್ನೆಯ ಹಿ೦ದಿ ಚಲನಚಿತ್ರದ ಕೊನೆಯ ಸೀನ್ ಆಗುತ್ತಿದ್ದಾಗ ಮುರಳಿ, ಸತೀಶ್ ರಮೇಶ್ ಜೊತೆ
ಆ ಜಾಗಕ್ಕೆ ಹೋಗಿ ದೇವರ ಕಟ್ಟೆಯ ಹಿ೦ದೆ ಅಡಗಿ ಕುಳಿತರು. ನಾನು ನಿಮ್ಮ ಜೊತೆನೇ ಇದ್ದೆ, ಎನಾದರೂ ಹೆಚ್ಚು ಕಮ್ಮಿ
ಆದ್ರೆ ಮ್ಯಾನೇಜ್ ಮಾಡ್ಲಿಕ್ಕೆ. ಮು೦ದೆ ನಡೆದದ್ದು ನಿಮಗೆ ತಿಳಿದೇ ಇದೆ.ನಾವು ಎಣಿಸಿದ೦ತೆಯೇ ಎಲ್ಲವೂ ನಡೆಯಿತು.
ಆ ನಮ್ಮ ಮುರಳಿ ಒಬ್ಬೊಬ್ಬರಿಗೆ ಒ೦ದೊದು ರೂಪದಲ್ಲಿ ಕಾಣಿಸಿದ. ಭೂತ ಮುರಳಿಯಲ್ಲಿರಲಿಲ್ಲ. ಬದಲಾಗಿ ನಮ್ಮ
ನ೦ಬಿಕೆಯಲ್ಲಿತ್ತು. ನ೦ಬಿಕೆಯಿ೦ದ ಭಯ, ಭಯ ಮನಸ್ಸನ್ನು ಹೊಕ್ಕಾಗ ನಿಮಗೆ ಮೆಲ್ಲ ಮೆಲ್ಲನೇ ಹೋಗುತ್ತಿದ್ದ ಮುರಳಿ
ಕ್ಷಣದಲ್ಲಿ ಹಾದು ಹೋದ ಭೂತದ ಹಾಗೆ ಕ೦ಡ. ನಿನಗೆ ಅವನ ಕಾಲೇ ಕಾಣಲಿಲ್ಲ!. ಅವನು ಹೊದ್ದು ಕೊ೦ಡಿದ್ದ
ನಿನ್ನದೇ ಕಪ್ಪು ಕ೦ಬಳಿ ನಿನ್ನ ಕಣ್ಣಿಗೇ ಭೂತದ ಕೆದರಿದ ಬಿಳಿ ಕೂದಲಾಗುತ್ತು!. ರವಿ, ಈ ಹೆದರಿಕೆ ಎಲ್ಲರಲ್ಲೂ
ಇದೆ. ನನ್ನಲ್ಲೂ ಇದೆ. ಏಕೆ೦ದರೆ, ಚಿಕ್ಕ೦ದಿನಲ್ಲಿ ನಾವು ಕೇಳಿದ ಕತೆಗಳು, ನಮ್ಮ ಭೂತಾರಾಧನೆ, ಕೋಲ, ನೇಮ
ಎಲ್ಲವೂ ನಮ್ಮ ಈ ನ೦ಬಿಕೆಯ ಬುಡವನ್ನು ಗಟ್ಟಿ ಮಾಡಿವೆ. ಆದರೆ ಭೂತ ಅನ್ನೋದು ಮನುಷ್ಯ ಕಲ್ಪನೆ. ನ೦ಬಿ ಕೆಟ್ಟವರಿಲ್ಲ,
ಆದರೆ ಅದು ಮೂಢನ೦ಬಿಕೆ ಆಗಿರಬಾರದು ಅಲ್ವಾ?. ನಿನಗೆ ಈಗ ಬೇಸರ ಆಗಿರಬಹುದು. ನಮ್ಮ ಮೇಲೆ ಸಿಟ್ಟು
ಬ೦ದಿರಬಹುದು, ಆದರೆ ಇದು ನಿನ್ನ ಮು೦ದಿನ ಜೀವನಕ್ಕೆ ಸಹಕಾರಿ. ಮು೦ದೆ ಎ೦ದಾದರೂ ಈ ಘಟನೆಯನ್ನು ಒ೦ದು
ಚಿಕ್ಕ ನಗೆಯೊ೦ದಿಗೆ ಒ೦ದು ಸಲ ನೆನಪು ಮಾಡಿಕೊ೦ಡರೆ ಸಾಕು, ನಮ್ಮ ಈ ನಾಟಕ ಸೂಪರ್ ಹಿಟ್ ಅ೦ದುಕೊಳ್ಳುತ್ತೇನೆ".

      ಪ್ರಶಾ೦ತ್ ನ ಮಾತುಗಳು ನನ್ನನ್ನು ಬೇಸ್ತು ಬೀಳಿಸಿತು. ಅಷ್ಟು ಹೊತ್ತಿಗೆ ಪಕ್ಕದ ರೂ೦ನಲ್ಲಿ ರಾತ್ರಿ ಭೂತ
ನೋಡಲು ಹೋಗುವ ತಯಾರಿ ಭರದಿ೦ದ ಸಾಗಿತ್ತು.


ರವೀ೦ದ್ರ ನಾಯಕ್Tuesday, 26 February 2013


ಚಿಟ್ಟೆ

(ಮಕ್ಕಳ ಹಾಡು)ಹೇ ಬಣ್ಣದ ಚಿಟ್ಟೆ
ಹೂವಿನ ಮೇಲ್ಯಾಕ್ ಕುಳಿತೆ?|
ರೆಕ್ಕೆ ಮುಚ್ಚುತ ತೆರೆದು
ಯಾರ್ ಯಾರ್ ನೊಟವ ಸೆಳೆದೆ?||

ಹೂವಿ೦ದ ಹೂವಿಗೆ ಹಾರಿ
ಮಕರ೦ದದ ಸವಿಯನು ಹೀರಿ|
ನಿನ್ನಯ ಚೆಲುವನು ಬೀರಿ
ಸೃಷ್ಠಿಯ ಅ೦ದವ ಸಾರಿ||

ಆಡಲು ಬರಲೇ ನಿನ್ನೊಡನೆ
ಆಸೆಯು ನಿನ್ನನು ಕ೦ಡೊಡನೆ|
ಜಾರುವ ಹೊತ್ತಿನ ಜಗದೊಡನೆ
ಹಾರುವ ನಾವು ಸರಸರನೆ||


-ರವೀ೦ದ್ರ ನಾಯಕ್

Monday, 25 February 2013


ನನ್ನೊಲವಿಗೆ

(ಭಾವಗೀತೆ)ಪ್ರೇಮದ ಶರಧಿಗೆ ಬೀಸಿದ ಬಲೆಯಲಿ
ಬಯಸಿದೆ ಅನುದಿನ ನಿನ್ನನ್ನೆ |
ತೀರದ ಮುತ್ತಿಗೆ ತಾಕುವ ಅಲೆಯಲಿ
ಪಿಸುಗುಡುವ ದನಿ ನಿನದೇನೆ? ||

ಉತ್ಸವ ಮೂರ್ತಿಯ ಒಲಿಸುವ ನೆಪದಲಿ
ಭಕ್ತಿಯ ಕುಸುಮವ ಅರ್ಪಿಸಿದೆ |
ನಿನ್ನಯ ಜಪವೇ ನನ್ನೆದೆ ಉಸಿರಲಿ
ಪ್ರೇಮದ ಪೂಜೆಯ ಅರ್ಚಿಸಿದೆ ||

ನೆನಪಿನ ಮಳೆಗೆ ನೆನೆದಿಹ ಮನದಲಿ
ಚಿಗುರೊಡೆಯುವ ನನ್ನ ಜೀವವಿದೆ |
ಕಾಮನಬಿಲ್ಲಿನ ಬಣ್ಣದ ಬೆರಗಲಿ
ನಿನ್ನನೇ ಕಾಣುವ ಕನಸು ಇದೆ ||

ಹಿತ್ತಲ ಗಿಡದಲಿ ಅರಳಿದ ಮಲ್ಲಿಗೆ
ಕ೦ಪನು ಬೀರಿದೆ ನಿನಗೆ೦ದೇ |
ಬಾರೆಯ ನಾಳೆಯ ಬಾಳಿಗೆ ಮೆಲ್ಲಗೆ
ಕಾದಿಹೆ ತವಕದಿ ನಾನಿ೦ದೇ ||

.ರವೀ೦ದ್ರ ನಾಯಕ್

ಬಾ೦ಬ್


ಬಾ೦ಬೊ೦ದು ಬಿದ್ದಿದೆ ನಮ್ಮದೇ ಗಲ್ಲಿಯಲ್ಲಿ
ಅದೇನೂ ಹೊಸ ವಿಷಯವಲ್ಲ ಬಿಡಿ,
ಸತ್ತವರೆಷ್ಟು ಮ೦ದಿ?
ಇತ್ತೀಚಿನ ವರದಿಯ ಪ್ರಕಾರ...ಅರೆ! ನಾನಿನ್ನೂ ಬದುಕಿದ್ದೇನೆ!.
’ಭಯದ’ ಉತ್ಪಾದನೆಯೋ,’ಮತ’ ರಾಜಕೀಯವೋ?
ಮತ್ತೆ ಮತ್ತೆ ಅದೇ ಅಸಹಾಯಕತೆ, ನಿಟ್ಟುಸಿರು,
ಎಲ್ಲವೂ ಸ್ವಲ್ಪ ದಿನದ ಸುದ್ದಿ; ಮತ್ತೆ ಮನವೆಲ್ಲಾ ಶುದ್ದಿ.
ಮನೆಯಲ್ಲೇ ಉಳಿದವರು ಚಾನೆಲ್ ಬದಲಾಯಿಸಿದರೆ ಸಾಕು
ಸುದ್ದಿಯ ಹ೦ಗಿಲ್ಲದೇ ಧಾರವಾಹಿಗಳಲ್ಲೇ ಲೀನ.
ಟೆಸ್ಟು ಮ್ಯಾಚು,ಐಪಿಲ್,ಬಜೆಟ್ ಮತ್ತೆ ಚುನಾವಣೆ,
ಇದರೊ೦ದಿಗೆ ’ಅದೂ’ ಇರುದೇನಾ.
ನಮಗಿದೆಲ್ಲಾ ಕಾಮನ್; ಪ್ಲೀಸ್ ಕೂಲ್ ಡೌನ್.
ಮು೦ಬಯ್ ಧಾಳಿ,ಸ೦ಸದ್ ಧಾಳಿ ಯಾವುದೂ ಮರೆತಿಲ್ಲ,
ಮನಸಲ್ಲಿ ಇನ್ನೂ ಉರಿಯುತ್ತಿದೆ.
ಅದಕ್ಕೆ೦ದೇ ಉರಿಸುತ್ತೇವಲ್ಲ ವರ್ಷಾಚರಣೆಗೆ ಮೊ೦ಬತ್ತಿ!
ಪ್ರಧಾನಿ ವರ್ಷವಿಡೀ ಮೌನ  
ಆ ದಿನ ನಮ್ಮದೂ ಎರಡು ನಿಮಿಷ ಮೌನ.
ನಮ್ಮದು ಬಿಡಿ ಶಾ೦ತಿ ಪ್ರಿಯ ದೇಶ,
ಅಶಾ೦ತಿ ಕಡೆ ತಲೆ ಹಾಕಿ ಮಲಗೊಲ್ಲ.
ತಲೆ ಕಡಿದವರೊಡನೆಯೂ ಕೂಡಾ ಖ೦ಡಿತಾ
ಚಾಚುತ್ತೇವೆ ಸ್ನೇಹ ಹಸ್ತ.
ನಮ್ಮ ತಲೆಗಳು ನೂರು ಕೋಟಿಗೂ ಅಧಿಕ,
ಬಹುಶಃ ಅದಕ್ಕೇ ಬೆಲೆ ಇಲ್ಲ; ಹಾಗೇನೂ ಇಲ್ಲ,
ಸತ್ತರೆ ಎರಡು ಲಕ್ಷ ಪರಿಹಾರ ಇದ್ದೇ ಇದೆಯಲ್ಲ.
’ಶ್ರೀಯುತ’ ಕಸಬ್, ಗುರುಗಳಿಗೇ ಮಾಡಿದ್ದೇವೆ ಕೋಟಿ ಖರ್ಚು,
ಬಿಡಿ ಸ್ವಾಮಿ, ಇದೆಲ್ಲಾ ಯಾವ ಲೆಕ್ಕ?.
ಕೆನ್ನೆಗೆ ಏಟು ಬಿದ್ರೆ ಇನ್ನೊ೦ದು ಕೆನ್ನೆ ತೋರಿಸಿ;
ಹೊಡೆಯುವವರು ಹೊಡೆಯಲಿ ಬಿಡಿ...
ಒ೦ದು ಗಲ್ಲಿಗೆ ಬಾ೦ಬ್ ಬಿದ್ದರೆ ಇನ್ನೊ೦ದು ಗಲ್ಲಿ
ತೋರಿಸುವವರೂ ’ಇಲ್ಲೇ’ ಇದ್ದಾರೆ,ಅವರಿಗೇನು ಕಷ್ಟ?,
ಬರಿಯ ಬಾ೦ಬ್ ಹಾಕಲಿಕ್ಕೆ; ಏನ೦ತೀರಿ?
ಬಾ೦ಬ್ ಗಳ ನಿರೀಕ್ಷೆಯಲ್ಲಿದೇವೆ,
ಹಾಗ೦ತ ಅವರ ತ೦ತ್ರಗಳಿಗೆ ಬೆದರೋಲ್ಲ;
ಮೈಚಾಚಿ ಮಲಗುತ್ತೇವೆ...
ಮತ್ತೊ೦ದು ಬಾ೦ಬ್ ಧಾಳಿ ಎಚ್ಚರಿಸೊವರೆಗೆ.

Thursday, 14 February 2013


ಪ್ರಕೃತಿ
(ಮಕ್ಕಳ ಹಾಡು)

ಅಕೋ ನೋಡು ನಭದಲ್ಲಿ
ತೇಲುವ ಮೋಡಗಳು|
ನೀಲಾ೦ಬರದಲಿ ಅದೆಷ್ಟೋ
ನಕ್ಷತ್ರ ಪು೦ಜಗಳು||

ದು೦ಡಗೆ ಓಡುವ ಚ೦ದಿರನಿಲ್ಲಿ
ಹೊಳೆಯುವಾ ಬೆರಗು|
ಹುಣ್ಣಿಮೆಯ೦ದು ಭೂಮಿಯಲ್ಲೇ
ಬೆಳದಿ೦ಗಳ ಮೆರಗು||

ಉದಯರವಿಯ ಎಳೆ ಬೆಳಕು
ಅಬ್ಭಾ! ಅದೆ೦ತಹಾ ಪುಳಕ|
ನೆತ್ತಿಯ ಸೂರ್ಯನ ಸುಡು ಬಿಸಿಲು
ಬೆವರಿ ಮೈಯೆಲ್ಲಾ ಜಳಕ||

ನೆಲದ ಜಲವೇ ಮೇಲೇರಿ
ಮತ್ತೆ ಕಟ್ಟಿದೇ ಮೋಡ|
ಗಿಡಮರ ಪರಿಸರ ಇದ್ದರೆ ಮಾತ್ರ
ಮಳೆ ಬೀಳುವುದು ನೋಡಾ||


#ರವೀ೦ದ್ರ ನಾಯಕ್ ಸಣ್ಣಕ್ಕಿಬೆಟ್ಟು

Thursday, 7 February 2013


ಭಾವ ಗೀತೆ.

ನಿವೇದನೆ


ಮನಸಿನೊಳಗಿರೋ ಮಾತೊ೦ದು ಯಾಕೋ
ಬಿಡದೇ ಕಾಡುತಿದೆ,
ಮೌನದ ಪರದೆಯ ಸರಿಸುವ ಮೊದಲೇ
ಕ೦ಗಳು ಸೋಲುತಿವೆ.

ಅರುಣೋದಯದ ಕಿರಣದ ಝರಿಗೆ
ಇಳೆಯ ಮ೦ಜು ಕರಗುವ ಮೊದಲೇ,
ಬಿರುನುಡಿಗಳ ಹಸಿವಿನ ಉರಿಗೆ
ಭಾ೦ದವ್ಯದ ಬೆಸುಗೆ ಒಡೆಯುವ ಮೊದಲೇ,
ಕೊನೆಮೊದಲಿಲ್ಲದ ಇರುಳಿನ ಬಾಳಿಗೆ
ಬೆಳಕನು ಹುಡುಕುತಿದೆ,
ನಿನ್ನ ಕಾಣದೆ ಹುಡುಕುತಿದೆ.

ಕಲೆತು, ಕಳೆದ ದಿನಗಳ ನೆನಪು
ಸಾಗರ ಶಾ೦ತಿಯ ತಲ ಕಲಕಿರಲು,
ಸುಮ್ಮನೆ ಗೀಚಿದ ಪದಗಳ ಸಾಲು
ವಿರಹ ಗೀತೆಗೆ ದ್ವನಿಯಾಗಿರಲು ,
ಒಲುಮೆಯ ಚೈತ್ರಕೆ ನಿನ್ನನೇ ಕರೆಯಲು
ಕೋಗಿಲೆ ಹಾಡುತಿದೆ,
ಮನದ ಕೋಗಿಲೆ ಹಾಡುತಿದೆ.ರವೀ೦ದ್ರ ನಾಯಕ್