Wednesday 14 April 2021

ಅವಸ್ಥೆ

 ಅವಸ್ಥೆ


ಸುತ್ತ ನಡೆಯುತ್ತಿದೆ ವ್ಯಾಪಾರ
ಎಂದಿನ ಹಾಗೆಯೇ
ಅವನು ಮಾತ್ರ ಇದ್ದೂ ಇಲ್ಲದಂತೆ
ಎಲ್ಲೋ ದೃಷ್ಟಿ ನೆಟ್ಟು ಕೂತಿದ್ದಾನೆ.
ಸಂತೆ ಗದ್ದಲದ ಯಾವ ಪರಿಚಿತ ದನಿಯೂ
ಅವನನ್ನು ತಾಕಿದಂತೆ ಕಾಣುತ್ತಿಲ್ಲ.
ಇಂದು ಅವನು ತಂದ ಬುಟ್ಟಿಯಲ್ಲೂ
ಹೆಚ್ಚೆನೂ ಇದ್ದಂತೆ ಕಾಣುತ್ತಿಲ್ಲ,
ಆದರೂ ಬಂದು ಕೂತಿದ್ದಾನೆ ಅಭ್ಯಾಸದಿಂದೆಂಬಂತೆ.

ಯಾಕೋ ಇಂದು ಅವನ ಮನಸ್ಸು
ತಾನು ತಂದ ವಸ್ತುಗಳನ್ನು ಬಿಕರಿ ಮಾಡುವುದಕ್ಕಿಂತಲೂ,
ಸುತ್ತ ಕೂತವರ ತುಂಬಿದ ಬುಟ್ಟಿ,
ಗಿರಾಕಿಗಳನ್ನು ಸೆಳೆಯುವ ಅವರ ಮಸಲತ್ತು,
ಎಲ್ಲವನ್ನೂ ನೋಡುತ್ತಾ ಸುಮ್ಮನೆ ಕೂತಂತಿದೆ.

ನಾನು ನೋಡಿದ ಹಾಗೆ,
ಅವನು ಹೀಗಿರಲಿಲ್ಲ ಮೊದಲು.
ಬುಟ್ಟಿ ತುಂಬಾ ಸಾಮಾನು ಹೊತ್ತು ತಂದು
ಸುತ್ತ ಅದನ್ನು ನೀಟಾಗಿ ಹರಡಿ,
ಪಕ್ಕದಲ್ಲಿಟ್ಟ ನೋಟು ಚಿಲ್ಲರೆ ತುಂಬಿದ ಡಬ್ಬಿಯನ್ನೊಮ್ಮೆ ಹಿತವಾಗಿ ಮುಟ್ಟಿ,
ನಡುವೆ ಕೂತು ಹೊಸ ಹೊಸ ಗಿರಾಕಿಗಳನ್ನು
ಯಾವತ್ತಿನ ಪರಿಚಯ ಎಂಬಂತೆ;
ಕರೆದು ಕೂಗಿ ಸೆಳೆಯುವ ಅವನ ಚುರುಕಿನ
ವ್ಯಕ್ರಿತ್ವವನ್ನು ಕಂಡವರು ಈಗ ನನ್ನಂತೆಯೇ
ಅಚ್ಚರಿ ಪಡುತ್ತಾರೆ.

ಸಂತೆಯ ಅತ್ಯಂತ ಜನದಟ್ಟಣೆಯ ಸಮಯದಲ್ಲಿ
ನೀವು ಅವನನ್ನು ನೋಡಬೇಕಿತ್ತು.
ಅರಳಿದ ತಾಜಾ ಹೂವಿಗೆ ಮುತ್ತಿಕೊಂಡ ದುಂಬಿಗಳಂತೆ
ಜನ ಮಗಿಬಿದ್ದು ಅವನಿಂದ ಖರೀದಿಸುತ್ತಿದ್ದರು.
ಎಷ್ಟು ಸಲ ಕೇಳಿದರೂ ಪ್ರೀತಿಯಿಂದ ತೋರಿಸುವ
ಇಷ್ಟ ಆಗುವ ಹಾಗೆ ಹಿತವಾಗಿ ಗದರುವ
ಅವನನ್ನು ಹುಡುಕಿಕೊಂಡು ಬರುತ್ತಿದ್ದುದರಲ್ಲಿ
ಅಚ್ಚರಿಯೇನಿಲ್ಲ.
ಆಗ ಮಾತ್ರ ಅವನ ಕೈ ಮತ್ತು ಬಾಯಿ
ಅತ್ಯಂತ ಸಂಭ್ರಮದಿಂದ ಅವನ ಜೊತೆಗೇ
ಸ್ಪರ್ಧೆಗಿಳಿದಂತೆ ನನಗೆ ತೋರುತ್ತಿತ್ತು.
ನನಗೀಗಲೂ ನೆನಪಿನಲ್ಲಿರುವುದು
ಎಷ್ಟು ಕೊಂಡರೂ ಮುಗಿಯದ ಅವನ ಬುಟ್ಟಿ
ಮತ್ತು ಮುಗಿಯದ ಅವನ ಮಾತು.

ಈಗ್ಯಾಕೋ ಹೆಚ್ಚು ಸಾಮಾನುಗಳೇ ಇಲ್ಲ
ಅವನು ತರುವ ಬುಟ್ಟಿಯಲ್ಲಿ.
ಮೊದಲಿನಂತೆ ಸುತ್ತ ಹರಡಿಕೊಳ್ಳದೇ ಬುಟ್ಟಿ
ಎದುಗಿಟ್ಟು ಕುಳಿತುಬಿಡುತ್ತಾನೆ.
ಇದ್ದುದನ್ನೇ ಚೌಕಾಶಿ ಮಾಡುವವರ ಬಳಿ
ವಿನಾ ಕಾರಣ ಸಿಟ್ಟಿಗೇಳುತ್ತಾನೆ,
ತೀರಾ ಕಡಿಮೆ ದರಕ್ಕೆ ಕೇಳುವಾಗ
ಕೇಳಿಸದಂತೆ ನಟಿಸುತ್ತಾನೆ; ಮೌನ ವಹಿಸುತ್ತಾನೆ.
ಮತ್ತು ವ್ಯಾಪಾರ ಮರೆತವನಂತೆ
ಎದುರಿಗೆ ಕೂತವರ ತುಂಬಿದ ಬುಟ್ಟಿಗಳನ್ನು
ನೋಡುತ್ತಾ ಕೂತುಬಿಡುತ್ತಾನೆ.

~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು



ಕೊನೆಯ ಭೇಟಿ

 ಕೊನೆಯ ಭೇಟಿ


ದೀರ್ಘವಾದ ನನ್ನ ಬದುಕಿನ
ಅತೀ ಸಣ್ಣ ಭೇಟಿಯಾಗಿತ್ತದು.
ಓ ದೇವರೇ!
ಇಷ್ಟು ಕಾಡುವಷ್ಟು ಗಾಢವಿತ್ತೆ?

ಏನೋ ಅವಸರವಿತ್ತು
ಎಲ್ಲವನ್ನೂ ಕ್ಷಣದಲ್ಲಿ
ಕಬಳಿಸಿಬಿಡುವ ಆತುರವಿತ್ತು
ಬಹುಶಃ ಕೊನೆಯ ಭೇಟಿಯೆಂದು
ಆವತ್ತೇ ಅನಿಸಿತ್ತು!

ಹತ್ತಿರವಿದ್ದಾಗ ಮಾತಿಗೆ ಬರ;
ಮೌನ ಸದಾ ವಾಚಾಳಿ!

ಕಡಲನ್ನೇ ಕುಡಿದೆವು.
ಆದರೂ ಎಷ್ಟೊಂದು ದಾಹ?
ನಿಂತಿತೇ ಕಾಲ?
ಬೆಳಕಿಗೆ ತೆರೆಯದೇ
ಸಂಜೆಗೆ ನಿಲ್ಲದೇ
ಹೊರಟ ಬೇಸರ ಇನ್ನೂ ಹಸಿಯಾಗಿದೆ.

ಅದು ಹೇಗೋ,
ನಿನ್ನಿಂದ ಬಯಸಿದ್ದೆಲ್ಲವೂ
ಸಿಕ್ಕಿಬಿಟ್ಟಿದೆ ಈ ಬದುಕಲ್ಲಿ.
ಆದರೆ ಅದೆಲ್ಲವನ್ನೂ ಮರೆಸಿ ,
ಮತ್ತೆ ಮತ್ತೆ ನೆನಪಾಗುವಷ್ಟು
ಉಳಿದು ಹೋದದ್ದಾದರೂ ಏನಿತ್ತು ನಿನ್ನಲ್ಲಿ?

ದಾರಿಯನ್ನೇ ಸುಖಿಸಿದ ನಾವು
ಗುರಿಯತ್ತ ಮನಸ್ಸು ಮಾಡಲೇ ಇಲ್ಲ
ಬದುಕು ಜೊತೆಗೇ ಸಾಗಿತು
ದಾರಿಗಳು ಮಾತ್ರ ಸಂಧಿಸಲೇ ಇಲ್ಲ!

ಇದೀಗ,
ಕೊನೆಯ ಕೋರಿಕೆಯೊಂದು
ಬಾಕಿ ಉಳಿದಿದೆ ನೋಡು;
ಒಮ್ಮೆ ಭೇಟಿಯಾಗು.
ನಿನ್ನಲ್ಲೇ ಕಳೆದುಹೋದ
ನನ್ನ ಬೆಳಕಿನ ಕಿರಣವನ್ನು
ಈಗಲಾದರೂ ಒಪ್ಪಿಸಿಬಿಡು;
ಇಲ್ಲವಾದರೆ ಈ ಕತ್ತಲಿಗೆ
ನೀನೂ ಬಂದುಬಿಡು.

~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು



ಲೋಕಾಂತ

 ಲೋಕಾಂತ


ಕೆಳಗಿನ ಅಂತಸ್ತಿನ ಮನೆಯಲ್ಲಿ
ಜೋರಾಗಿ ಅಳುವ ಮಗುವಿನ ಸದ್ದು,
ಸುಮ್ಮನೆ ಕುಳಿತಿದ್ದ ನನ್ನ ಕಿವಿಗೂ ಬಿದ್ದು
ಒಂದರೆ ಕ್ಷಣ ವಿಚಲಿತವಾಯ್ತು ಮನಸ್ಸು.
ಅಪ್ಪಳಿಸಿ ಬಂದ ಗಂಡು ಸದ್ದು,
ಧಢಾರನೇ ಬಾಗಿಲು ಹಾಕಿದ ಸದ್ದು.
ಆಳದ ಗುಹೆಯಿಂದ ಹೊರಬಿದ್ದ ಹಾಗೆ
ಮತ್ತೆ ಕ್ಷೀಣವಾದರೂ ಅಳುವಿನ ಸದ್ದು,
ಕಣ್ಣು ಮಾತ್ರ ನೋಟ ಹೊರಡಿತು.

ಪಕ್ಕದ ಖಾಲಿ ಸೈಟ್ ನಲ್ಲಿ ಅರ್ಧ ಕಟ್ಟಿದ ಗೋಡೆಯ ಮೇಲೆ ಕಲ್ಲಿಟ್ಟು, ನೂಲು ಹಿಡಿಯುತ್ತಿರುವ ವ್ಯಕ್ತಿಯ ಕಿವಿಗೂ ಬಿದ್ದಿರಬಹುದಾ ಈ ಕೂಗು?
ತರಕಾರಿ ಗಾಡಿ ಮನೆಯೆದುರು ಬಂದು ಆಗಲೇ ಬಹಳ ಹೊತ್ತಾಯಿತು.
ಸೊಪ್ಪು ,ತರ್ಕಾರಿ
ಬೀಟ್ರೋಟ್ ಟೊಮ್ಯಾಟೊ...
ಯಾವುದೇ ಏರಿಳಿತವಿಲ್ಲದ ಸಹಜ ಕೂಗು.
ರಸ್ತೆಯ ತುಂಬಾ ನಡೆಯುತ್ತಿರುವುದು ನಿತ್ಯ ವ್ಯಾಪಾರ.

ತಟ್ಟಿದಂತೆ ಕಾಣಲಿಲ್ಲ ಯಾರಿಗೂ
ತನ್ನ ಹೊರತಾದ ಬೇರೆ ಸದ್ದು!
ತನ್ನದೇ ಗುಂಗಲ್ಲಿ ಸಾಗುವ ಲೋಕ
ಕ್ರೌರ್ಯಕ್ಕೂ ಹೊರಗಾಯಿತೇ?
ಅರಳುವ ಹೂವಿಗೂ
ಕಣ್ಣಿಲ್ಲ
ನರಳುವ ಅಳುವಿಗೂ
ಕಿವಿಯಿಲ್ಲ.

ನನ್ನ ಕಿವಿಯಲ್ಲಿ ಹೆಚ್ಚಾಯಿತೇ
ಮತ್ತೆ ಮತ್ತೆ ಮಗುವಿನ ಕೂಗು?

ಎಲ್ಲಿಲ್ಲದ ಸಿಟ್ಟಿನಿಂದ ಧಡಬಡನೇ
ಕೆಳಗಿಳಿದು ಬಾಗಿಲು ಬಡಿದೆ,
ಲೋಕದ ಭಾರವೆಲ್ಲಾ
ಈಗ ಹೆಗಲ ಮೇಲೆ!
ತೆರೆದ ಬಾಗಿಲ ಮಂದೆ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಅದೇ ಗಂಡುದನಿಯ ಆಸಾಮಿ,
ಇನ್ನೂ ಉಮ್ಮಳಿಸಿ ಅಳುತ್ತಿರುವ ಮಗು;
ಮತ್ತು
ಕೆನ್ನೆ ಮೇಲೆ ಮೂಡಿದ್ದ ನಾಲ್ಕು ಬೆರಳು!

"ಇಲ್ವೇನ್ರಿ ನಿಮಗೆ ಕರುಳು?
ಹೊಡಿತೀರಲ್ರೀ ಹೀಗೆ ಮಗೂನ?
ನಾಚಿಕೆ ಆಗಲ್ವಾ?"

ದಬಾಯಿಸಿದರೂ,
ಮಾತಿರದೆ ಸುಮ್ಮನೇ ನೋಡುತ್ತಾ ನಿಂತ ಗಂಡಸು
ಮತ್ತು ಅವನ ಮೌನ;
ಪ್ರತಿಭಟಿಸುವುದನ್ನೇ ಮರೆತ ಲೋಕದ
ಪ್ರತಿರೂಪದಂತಿತ್ತು!

ಸಿಟ್ಟು ನೆತ್ತಿಗೇರಿ ಅಂತಃಕರಣ ಬಹುವಾಗಿ ಉಕ್ಕಿ,
ಮಗುವನ್ನು ಎತ್ತಿಕೊಳ್ಳಲು ಚಾಚಿದರೆ ಕೈ ;
ಓಡಿ ಹೋಗಿ ತನ್ನ ಅಪ್ಪನನ್ನೇ ಬಾಚಿ ತಬ್ಬಿಕೊಂಡಿತು ಮಗುವಿನ ಎರಡೂ ಕೈ!


~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Thursday 17 September 2020

ಕನ್ನಡ


ಕನ್ನಡ ಒಂದೇ ನಮಗೆ
ಹೃದಯಕೆ ಒಪ್ಪುವ ಮಾತು
ಕನ್ನಡ ನೆಲವೆ ನಮಗೆ
ನಮ್ಮ ಅಸ್ಮಿತೆಯ ಗುರುತು


ದೇಶದೇಶಗಳ ಸುತ್ತಿ ಬಂದರೂ
ಬದುಕಲು ಇಲ್ಲಿಯೆ ಇಷ್ಟ
ಕನ್ನಡ ಜನಮನವೇ ಎಂದೂ
ಪರಿಮಳ ಬೀರುವ ಪುಷ್ಪ

ಒಗ್ಗಟ್ಟೆನ್ನುವ ಮಾತೇ ಇಲ್ಲಿ
ಶಾಂತಿಯ ಪಠಿಸುವ ಮಂತ್ರ
ಕನ್ನಡ ಜನ ಒಂದೆನ್ನುವ ಅರಿವೇ
ಸಮತೆಯ ಸಾರುವ ಸೂತ್ರ

ಎಲ್ಲೇ ಇದ್ದರೂ ಹೇಗೆ ಇದ್ದರೂ
ಭಾಷೆಯೆ ನಮ್ಮ ಮನೆ
ಕನ್ನಡ ಸೂರಿನ ಕೆಳಗೇ ನಿಂತರೆ
ಕರ್ನಾಟಕ ತಾನೇ.

~ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಉಳಿದದ್ದೇ ಇಷ್ಟು

ಬೆಳಕು ಕಮ್ಮಿಯಾಗುತ್ತಿದ್ದ ಒಂದು ಸಂಜೆ

ಏನನ್ನೋ ಹುಡುಕುವಾಗ
ಫಕ್ಕನೆ ಕೈಗೆ ದಕ್ಕಿದ್ದು ಇದು.
ಅರೇ! ಮರೆತೇ ಬಿಟ್ಟಿದ್ದೆ.
ಯಾವತ್ತು ಕೊನೆಯ ಸಲ
ಮುಚ್ಚಳ ತೆರೆದು ಗ್ಲಾಸಿಗಿಳಿಸಿದ್ದು?
ಜೊತೆಗಿದ್ದವರಾರು?
ಸುಖವೋ ದುಃಖವೋ?

ಗ್ಲಾಸ್ ಗೆ ಇಳಿಯುವ ಮೊದಲು
ಗುಟ್ಟುಗಳನ್ನು ಯಾವ ಶೀಶೆಯೂ
ಬಿಟ್ಟುಕೊಡುವುದಿಲ್ಲ;
ಬೆರೆಸುವ ಬೆರೆಯುವ ಕಲೆ
ಒಮ್ಮೆ ಗೊತ್ತಾದರೆ ಸಾಕು,
ಉಳಿದದ್ದು ಬಯಲು.

ನೆನಪಿಸಿಕೊಳ್ಳಬೇಕಿದೆ ಈಗ ಎಲ್ಲವನ್ನು.
ಸರಿಯಾಗಿ ನೆನಪಾದರೆ
ಮತ್ತೆ ಜೋಡಿಸುತ್ತೇನೆ ಕಳೆದ ಕೊಂಡಿಗಳನ್ನು.

ಎಷ್ಟೋ ವರ್ಷಗಳ ದಾಹವೊಂದು
ಇನ್ನೂ ಹಾಗೆಯೇ ಉಳಿದುಕೊಂಡಿದೆ.
ಕಾಲಕ್ಕೂ ಸಿಗದೆ
ಭಾವಕ್ಕೂ ದಕ್ಕದೆ
ಎದೆಯಲ್ಲಿಯೇ ನಿಂತು ಹೆಪ್ಪುಗಟ್ಟಿದೆ.

ಅಬ್ಭಾ ಹೊರಗೆ ಎಂಥಾ ಮಳೆ!
ವರ್ಷದ ಕೊನೆಯ ಮಳೆ ಇರಬೇಕು
ಒಂದೇ ಸಮನೆ ಸುರಿಯುತ್ತಿದೆ.
ಒಂದಂತೂ ಸತ್ಯ;
ಈ ರಾತ್ರಿ ಕಳೆದು ಬರುವ ಬೆಳಕಿಗೆ
ಮತ್ತೆ ಮೋಡ ಕಟ್ಟೀತೆಂಬ ಆತಂಕವಿಲ್ಲ.

ಹಾಂ!
ಮುಚ್ಚಳ ಕಳೆದು ಹೋದ ಶೀಶೆ ಅದು.
ಇನ್ನೂ ಹಾಗೆಯೇ ಬಿಟ್ಟರೆ
ಸುಮ್ಮನೆ ಆರಿಹೋಗುತ್ತದೆ;
ಯಾರ ಪಾಲಿಗೂ ಸಿಗದೆ.

ಬಾ ಹತ್ತಿರ,ಇನ್ನೂ ಹತ್ತಿರ
ಇಂದಾದರೂ ಒಟ್ಟಿಗೆ ಕೂತು
ನೋವುಗಳ‌ ನೀಗಿಕೊಳ್ಳೋಣ;
ನಾನೊಂದಿಷ್ಟು
ಮತ್ತೆ ನೀನೊಂದಿಷ್ಟು,
ಗುಟುಕು ಗುಟುಕಾಗಿ ಹೀರಿಕೊಳ್ಳೋಣ.

~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Tuesday 20 November 2018

ಪರಿಚಿತರಾಗುವುದೆಂದರೆ ಅದು
ಅಷ್ಟು ಸುಲಭದ ಕೆಲಸವೇ?

ಕೋಟೆ ಬಾಗಿಲು ತೆರೆದು
ಒಳ ಹೊಕ್ಕಾಗಲೂ
ಏಕಾಂಗಿ ಅನ್ನಿಸುವುದಾದರೆ,
ನಾವಿನ್ನೂ
ತೊಟ್ಟಿಕ್ಕುತ್ತಿರುವ ಒಂದೇ ಮಳೆಯ
ಬೇರೆ ಬೇರೆ ಬಿಂದುಗಳು.
ಅಷ್ಟಕ್ಕೂ ನಾವು‌
ಪರಿಚಿತರಾಗಿದ್ದು ಯಾವಾಗ?

ಒಟ್ಟಿಗಿದ್ದಾಗಲೂ
ನಿನ್ನೆಲ್ಲ ಮಾತು ಮೌನ
ಅಸಹನೆ ಕೋಪ
ನನಗರ್ಥವಾಗದೇ ಉಳಿದಿರುವಾಗ
ಪರಿಚಿತರಾಗಿದ್ದೇವೆನ್ನುವುದು
ಹಸಿ ಹಸಿ ಸುಳ್ಳಲ್ಲವೆ?

ನಿನ್ನ  ಬದುಕಿನ ಉತ್ಕಟ
ಕ್ಷಣಗಳಲ್ಲಿ
ತೀವ್ರವಾಗಿ ಕಾಡಿದ ನೆನಪುಗಳಲ್ಲಿ
ನಾನಿಲ್ಲವೆಂಬುದೇ ಸತ್ಯ
ಅನ್ನವುದಾದರೆ
ನಾವಿನ್ನೂ
ಯಾವತ್ತೂ ಸಂಧಿಸದ
ನಿರ್ಜನ ಬೀದಿಯ ಅನಾಮಿಕರು.

ಅದೆಷ್ಟು ಬೆಳಕಿತ್ತು
ಆ ಬೀದಿಯ ತುಂಬಾ.
ಕಣ್ಣಲ್ಲಿ ಹೊಳೆದದ್ದೇ ನೀನು ಮತ್ತು
ತುಂಬಿದ ಬೆಳದಿಂಗಳು!
ಎಲ್ಲವೂ ಎಲ್ಲರಿಗೂ
ಕಾಣುವಂತೆ ಅದೆಷ್ಟು ಸ್ಪಷ್ಟತೆ!
ಅಲ್ಲಿ ಯಾವುದೂ ಅಪರಿಚಿತ
ಅನಿಸಲೇ ಇಲ್ಲ.
ಇದೀಗ,
ಬೆಳಕು ಆರಿದ ಮೇಲೂ
ಆ ಬೀದಿ ಇನ್ನೂ ಪರಿಚಿತವೇ
ಆದರೆ,
ಅಲ್ಲಿ ಸಿಕ್ಕಿದ ನಾವು?

ಅನೇಕದಲ್ಲಿ ಏಕ!
ಅನ್ನವ ಭ್ರಮೆಯಲ್ಲಿ ಸುಖಿಸಿ,
ಅದನ್ನೇ ನಂಬುತ್ತಾ ಬದುಕಿದ್ದೇವೆ ಮತ್ತು
ಬಲು ದೂರ ಜೊತೆಯಾಗಿಯೇ
ಸಾಗಿ ಬಂದಿದ್ದೇವೆ.
ಆದರೆ ನಾವಿಂದೂ
ಒಳಗಿಳಿಯದ,
ಕಲಸಿ ಬಿಳಿಯಾಗದ
ನಿತ್ಯ ನೂತನ ಕಾಮನ ಬಿಲ್ಲು;
ಜಗದ ಕಣ್ಣು ಕುಕ್ಕುವ
ಎಷ್ಟೊಂದು ಬೆರಗಿನ ಬಣ್ಣಗಳು!

ಸಾಕಿನ್ನು,
ಮತ್ತೆ ಅಪರಿಚಿತರಾಗಿಬಿಡಬೇಕು
ಕಳೆದುಹೋದಂತೆ
ಯಾವುದೋ ಹೊಸ ಬೀದಿಯಲ್ಲಿ.
ಮತ್ತೆ ಮತ್ತೆ
ನಿನ್ನಲ್ಲಿ‌ ನನ್ನನ್ನು
ನನ್ನಲ್ಲಿ‌ ನಿನ್ನನ್ನು;
ಹುಡುಕುವ ಸಾರ್ಥಕ
ಸುಖಕ್ಕಾಗಿಯಾದರೂ.

# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Sunday 11 November 2018

ಸ್ವಗತ

ಬರವಣಿಗೆ ಒಂದು ಮೋಹಕ ತಾಲೀಮು ಅಂತ ನವೀನ್ ಹೇಳಿದ್ದು ಕೇಳಿ ಅದನ್ನೇ ವ್ರತದಂತೆ ಪಾಲಿಸಿ ದಿನಾ ಸ್ವಲ್ಪ ಹೊತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಬೇಕು ಅಂತ ಡಿಸೈಡ್ ಮಾಡಿದ್ದೆ.ಸ್ವಲ್ಪ ದಿನ ಅದನ್ನು ಚಾಚೂ ತಪ್ಪದೇ ಪಾಲಿಸಿಕೊಂಡೂ ಬಂದಿದ್ದೆ.ಆದರೆ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾದಂತೆ ಉದಾಸೀನ ಆವರಿಸಿ ಆ ಕ್ರಮ ತಪ್ಪಿಯೇ ಹೋಯಿತು.ಅದಕ್ಕೋ ನಾನು ಆರೋಪಿಸಿಕೊಂಡ ಕಾರಣಗಳು‌ ನೂರಾರು.ಕೆಲಸದ ಒತ್ತಡ, ಮಕ್ಕಳ ನಡುವೆ ಮನೆಯಲ್ಲಿ ಯಾವುದೇ ಬಿಡುವು ಸಿಕ್ಕದೇ ಇರವುದು...ಆದರೆ ಯೋಚಿಸುತ್ತಾ ಕೂತರೆ ಅದೆಷ್ಟು ಸುಳ್ಳುಗಳ ಸರಮಾಲೆ ಇದು ಅಂತ ಥಟ್ಟನೇ ಹೊಳೆದು ಬಿಡುತ್ತದೆ.

ಸಧ್ಯಕ್ಕೆ ತಲೆಯಲ್ಲಿ ಏನೂ‌ ಬೆಳೆಯುತ್ತಿಲ್ಲ, ಖಾಲಿಯಾಗಿದೆ ಅನ್ನುವ ಅರಿವಾಗಿ ಬೇರೇನಾದರೂ ಮಾಡುವ ಅಂತ ಗಹನವಾಗಿ ಯೋಚಿಸಿ, ಸುಮ್ನೆ ಪೆನ್ನು ಹಿಡ್ಕೊಂಡು ತಲೆಕೆರೆದುಕೊಂಡು ಕೂತ್ಕೊಳ್ಳುವುದಕ್ಕಿಂತ ಏನಾದರೂ ಓದೋಣ...ಅಧ್ಯಯನ ಮಾಡುವ ಅನ್ನುವ ನಿರ್ಧಾರ ಮಾಡಿದೆ. ಅದೇ ಸಂಜೆ ಸೀದಾ ಸ್ವಪ್ನ ಬುಕ್ ಹೌಸ್ ಗೆ ಹೋಗಿ ಕುಮಾರವ್ಯಾಸ ಭಾರತವನ್ನು ಬಹಳ ಪೂಜ್ಯನೀಯ ಭಾವನೆಯಿಂದ ಸುಮಾರ ಎರಡು ಸಾವಿರ ತೆತ್ತು ಮನೆಗೆ ತಂದೆ.ಅದೇ ರಾತ್ರಿಯಿಂದ ಅದರ ಓದೂ ಆರಂಭವಾಯಿತು.ತಂಬಾ ಖುಷಿ ಪಟ್ಟೆ ಕುಮಾರವ್ಯಾಸನ ಷಟ್ಪದಿಗಳನ್ನು ಓದುತ್ತಾ... ರಾತ್ರಿ ತಡವಾದರೆ ಬೆಳಗ್ಗೆ ಎದ್ದೂ ವಾಚನ ಮಾಡಿದ್ದೂ ಇದೆ.ಆದರೆ ಆ ಓದಿನ ತಂತು ಎಲ್ಲಿ ಯಾವಾಗ ಕಡಿದುಹೋಯಿತು ಅನ್ನುವುದು ನನ್ನ ನೆನಪಿಗೆ ಬರುತ್ತಿಲ್ಲ.ಮತ್ತೆ ಮುಂದುವರೆಸಬೇಕು ಅನ್ನುವ ಧೃಡ ಸಂಕಲ್ಪ ಮಾತ್ರ ಈಗ ಮನದಲ್ಲಿ ಉಳಿದುಕೊಂಡಿದೆ.

ಅಲ್ಲಿಗೆ ನಿಲ್ಲದೇ ಮಂಗಳೂರು ಗ್ರಂಥಾಲಯದಿಂದ ಹದಿನೈದು ದಿನಗಳಿಗೊಮ್ಮೆ ಮೂರು ಪುಸ್ತಕಗಳನ್ನು ತಂದು ಓದಲು ಶುರುಮಾಡಿದೆ.ಅದೊಂದು ವೈವಿಧ್ಯಮಯವಾದ ಓದು.ಬಹಳ‌ ಉಲ್ಲಾಸವಿತ್ತು.ಓದಲು ಪೂರಕವಾದ ಒಂದು‌ ವಾತಾವರಣ ನನ್ನ ಕೆಲಸದಲ್ಲಿಯೂ ಇತ್ತು.ಆದರೆ ಯಾವಾಗ ರೀವ್ಯಾಂಪ್ ಕೆಲಸ ಶುರು ಆಯಿತೋ ಮತ್ತೆ ಓದಲು ಆಗಲೇ ಇಲ್ಲ.ಸುಮ್ಮನೇ ಮೂರು ಪುಸ್ತಕಗಳನ್ನು ತಂದು ಹಾಗೆಯೇ ವಾಪಾಸು ಕೊಡುವ ಪರಿಸ್ಥಿತಿ. ಈಗ ಆ ರಗಳೆಯೇ ಬೇಡ ಅಂತ ತೀರ್ಮಾನಿಸಿ ಒಂದೇ ಪುಸ್ತಕ ತಂದರೂ ಅದು ವಾಪಾಸು ಕೊಡುವ ದಿನ ಮೀರಿ ಹೋಗಿದೆ.ಆದರೂ ತೆರೆದು ನೋಡಲು ಆಗದ ಕೆಲಸದ ಒತ್ತಡ.

ಬರೆಯುವ ಮತ್ತು ಓದಿನ ವಿಷಯ ಹೀಗಾದರೆ ಹಲವಾರು ಕಾರ್ಯಕ್ರಮಗಳಿಗೆ ಹೋಗಬೇಕೆಂದುಕೊಂಡರೂ ಹೋಗಲಾಗದೇ ಬಹಳ ಬೇಸರಗೊಂಡಿದ್ದೇನೆ.ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಇದರಲ್ಲಿ ಪ್ರಮುಖವಾದವುಗಳು.ಪಾಪುಗುರು, ಹೊಸಪೇಟೆಗುರು...ಹೀಗೆ ತಪ್ಪಸಿಕೊಂಡ ಪುಸ್ತಕ ಬಿಡುಗಡೆ ಸಮಾರಂಭಗಳೆಷ್ಟೋ.ಸಾಹಿತ್ಯ ಲೋಕದ ದಿಗ್ಗಜರು, ಆತ್ಮೀಯರು ಎಲ್ಲರನ್ನೂ ಭೇಟಿಯಾಗುವ ಒಂದು ಅವಕಾಶ ಕೈಜಾರಿಹೋಯಿತು.ಹಲವಾರು ಹೇಳಲು ಆಗದ ಕಾರಣಗಳು ಇದರ ಹಿಂದಿವೆ.ಇದನ್ನೆಲ್ಲಾ ಮೀರಿ ಹೋಗಲು ಆಗದೇ ಅನ್ನುವ ಪ್ರಶ್ನೆ ಮಾತ್ರ ಮತ್ತೆ ಮತ್ತೆ ಕಾಡುವುದುಂಟು.ನನ್ನನ್ನು ನಾನು ಕಳೆದು ಹೋಗುವ ಇಂತಹ ನನ್ನದೇ ಭಾವಲೋಕದ ಉತ್ಕಟ ಕ್ಷಣಗಳನ್ನು ಅನುಭವಿಸಲು ಯಾವುದೇ ಮಾರ್ಗವನ್ನಾದರೂ ತುಳಿಯಲು ಇನ್ಮುಂದೆ ಸಿದ್ಧವಾಗಬೇಕಿದೆ.

ಜೀವನ ಅನ್ನುವುದು ದೇವರು ಕೊಟ್ಟ ಒಂದು ಪ್ಯಾಕೇಜ್... ಅದರಲ್ಲಿ ನಮಗೆ ಬೇಕಾದದ್ದು, ಆ ಕ್ಷಣಕ್ಕೆ ಬೇಡವಾಗಿದ್ದು ಎಲ್ಲವೂ ಇದೆ.ಒಂದನ್ನು ಆಯ್ಕೆ ಮಾಡಿ ಇನ್ನೊಂದನ್ನು ಬೇಡ ಅಂದರೆ ಅದು ಆಗಲಿಕ್ಕಿಲ್ಲ.ಇಡಿಯಾಗಿಯೇ ಸ್ವೀಕರಿಸಬೇಕು.ಪ್ರತಿಕೂಲ ಪರಿಸ್ಥಿತಿಯನ್ನೂ ಹೇಗೆ ನಮಗೆ ಇಷ್ಟವಾಗುವ ತರಹ ಬದುಕುವುದೆಂದು ನಿರಂತರವಾಗಿ ಯೋಚಿಸುತ್ತಾ ಆ ಕಡೆಗೆ ಕಾರ್ಯ ಪ್ರವೃತ್ತರಾಗುವುದೊಂದೇ ನಮ್ಮ ಕೈಯಲ್ಲಿರುವುದು.ಮತ್ತು ಅದನ್ನಷ್ಟೇ ನಾವು ಮಾಡಬೇಕಾಗಿರುವುದು.ಈ ಸಣ್ಣ ಮಕ್ಕಳ ಬೆಳವಣಿಗೆ, ಆಟಪಾಠ, ಕೀಟಲೆ, ಅಳು,ನಗು ಎಲ್ಲವನ್ನೂ ಆಸ್ವಾದಿಸುವ ಕಾಲ.ಅದೇ ಸಮಯದಲ್ಲಿ ನನಗೆ ಕವಿಗೋಷ್ಠಿಯೂ ಆಗಬೇಕು, ಕಾರ್ಯಕ್ರಮಗಳೀಗೂ ಹೋಗಬೇಕೆಂದರೆ ಅದಾಗಲಿಕ್ಕಿಲ್ಲ. U have to choose ... ಆಯ್ಕೆಗಳನ್ನು ಮಾಡಲೇಬೇಕು ಮತ್ತು ಖಂಡಿತವಾಗಿಯೂ ನನಗೆ ಬೇಕಾದದ್ದನ್ನು,ಸಾಧ್ಯವಾಗುವುದನ್ನಷ್ಟೇ ಮಾಡುತ್ತೇನೆ.ಉಳಿದು ಹೋದದ್ದಕ್ಕೆ ಚಿಂತಿಸದೇ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು