Sunday 3 December 2017

ಮಳೆಯ ದಟ್ಟಮೋಡಗಳು ಒತ್ತೊತ್ತಾಗಿ ಆಗಸದಲ್ಲಿ ಹಾಲು ತುಂಬಿದ ಹಸುವಿನ ಕೆಚ್ಚಲಿನಂತೆ ಇನ್ನೇನು ಸುರಿಯುವುದೊಂದೇ ತಡ ಎಂಬಂತೆ ಕಾಯುತ್ತಿದ್ದ ಒಂದು ಶ್ಯಾಮಲ ಸಂಜೆಯಲ್ಲಿ ಕನಸುಗಳ ಬೆನ್ನು ಹತ್ತಿ ಹೊರಟಿದ್ದೆ. ಮಳೆ ಸುರಿಯುವ ಮೊದಲಿನ ಕಡುಕಪ್ಪಾದ ಸಂಜೆಗಳ ಮೇಲೆ ನನಗ್ಯಾಕೋ ನಿಲ್ಲದ ನಿರಂತರ ಮೋಹ. ಅದೂ ಸ್ವಲ್ಪ ಗುಡುಗು ಸಿಡಿಲು ಇದ್ದರಂತೂ ಹಬ್ಬ ನನಗೆ. ಆದರೆ ಅದಕ್ಕಾಗಿ ಕಾರ್ತೀಕದವರೆಗೆ ಕಾಯಲೇ ಬೇಕು. ಇಂತಹ ಸಂಜೆಗಳು ನನ್ನ ನೆನಪುಗಳನ್ನು, ಕನಸುಗಳನ್ನು ಕೆಣಕುತ್ತಾ ಕೆಣಕುತ್ತಾ ಇರುಳಿನ ಸೆರಗಲ್ಲಿ ಖಾಲಿಯಾಗುತ್ತವೆ. ಮೊದಲ ದಿನದ ಶಾಲೆಗೆ ಅಳುತ್ತಾ ಹೋಗಿ, ಅಳುತ್ತಲೇ ಹಿಂದಿರುಗಿದಾಗ ಇಂತಹುದೇ ಒಂದು ಶ್ಯಾಮಲ ಸಂಜೆ! ಕಟಾವ್ ಆದ ಗದ್ದೆಯಲ್ಲಿ ಒಣಗಲು ಬಿಟ್ಟ ಬತ್ತದ ಸೂಡಿಗಳನ್ನು ಹುರಿಹಗ್ಗ ತೆಗೆದುಕೊಂಡು ಅಪ್ಪನೊಂದಿಗೆ ಓಡುವುದೂ ಇಂತಹುದೇ ಮಳೆ ಮೋಡಗಳ ಸಂಜೆಗಳಲ್ಲಿ! ಬೈಲ್ ಗದ್ದೆಗಳಲ್ಲಿ ಕಟ್ಟಿದ ದನಕರುವನ್ನು ತರಲು ಅಮ್ಮನು ಓಡುವ ಹುಸೇನ್ ಬೋಲ್ಟ್ ಓಟ! ಅಂಗಳದಲ್ಲಿ ಹಾಯಾಗಿ ಒಣಗುತ್ತಿದ್ದ ಅಡಿಕೆಗಳನ್ನು ಸಿಕ್ಕಿದ ಚೀಲಗಳಲ್ಲಿ ತುಂಬಿಸಿ, ಚೀಲ ಸಿಗದಿದ್ದರೆ ಬುಟ್ಟಿಗಳಲ್ಲಿ ತುಂಬಿಸುವ ಧಾವಂತಕ್ಕೆ ಕೆಲವು ಸಲ ಸೂರ್ಯನೂ ಇಣುಕುವುದುಂಟು ಮೋಡಗಳ ಮರೆಯಿಂದ!

ಹೀಗೆ ಗೊತ್ತುಗುರಿಯಿಲ್ಲದೆ ಹೊರಟಾಗ ಮನದಲ್ಲಿ ಲಂಗುಲಗಾಮಿಲ್ಲದ ಏನೇನೋ ಯೋಚನೆಗಳು  ಹೊರಗೆ ಸುರಿಯುವ ಮಳೆಗೆ ತಾಳ ಹಾಕುತ್ತಾ ಯಾವುದೋ ಹಳೆಯ ಅನಂತ್ ನಾಗ್ ಲಕ್ಷ್ಮಿ ಜೋಡಿಯ ಗೀತೆಯೊಂದನ್ನು ಗುನುಗುತ್ತದೆ. ಈ ಮಳೆ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳಿಗೆ ಅವಿನಾಭಾವ ಸಂಬಂಧ. ಯಾಕಿರಬಹುದೆಂದು ಕೆದಕುವಾಗ ಮನದ ಮೂಲೆಯಲ್ಲಿ ಇನ್ನೂ ರಿಪೇರಿಯಾಗದೇ ಬಿದ್ದಿದ್ದ ಒಂದು ರೇಡಿಯೋ ಸಿಕ್ಕಿತು.ರೇಡಿಯೋ...! ಆಗ ನಮ್ಮ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳೆಂದರೆ ರೇಡಿಯೋ ಮತ್ತು ಒಂದು ಉರೂಂಟ್ ಇದ್ದ ಸ್ಟೀಲ್ ನ ಕೀ ಕೊಡುವ ಅಲರಾಂ ಗಡಿಯಾರ. ಮತ್ತು ಅವೆರಡೂ ಸರಿಯಾಗಿದ್ದದ್ದು ನನ್ನ ಕೈಗೆ ಬರುವವರೆಗೆ ಮಾತ್ರ. ಯಾವುದನ್ನೂ ರಿಪೇರಿ ಮಾಡಬಲ್ಲ ಹುಡುಗ ಅನ್ನುವ ಭಾರೀ ಹೆಸರು ಗಳಿಸಿಕೊಂಡಿದ್ದ ನಾನು ಮೊದಲು ಕೈ ಹಾಕಿದ್ದು ಗಡಿಯಾರಕ್ಕೆ . ಸರಿ ಇದ್ದ ಗಡಿಯಾರವನ್ನು ಬಿಚ್ಚಿ ಅದರೊಳಗಿದ್ದ ಸ್ಟೀಲ್ ನ ಕರುಳನ್ನು ಹೊರ ತೆಗೆದು ಅದನ್ನೊಂದು ಶೋಪೀಸ್ ಮಾಡಿ ಬಿಡಲು ನನಗೇನೂ ಬಹಳ ಸಮಯ ತೆಗೆದುಕೊಂಡಿರಲಿಲ್ಲ.

ನಂತರ ನನ್ನ ಕಣ್ಣು ಬಿದ್ದದ್ದು ಈ ರೇಡಿಯೋ ಮೇಲೆ. ಮಂಗಳೂರು ಆಕಾಶವಾಣಿಯಷ್ಟೇ ಟ್ಯೂನ್ ಆಗಿದ್ದ ರೇಡಿಯೋದಲ್ಲಿ ಪ್ರಸಾರ ಆಗುತ್ತಿದ್ದ, ಕೃಷಿರಂಗ ಮತ್ತು ಯುವವಾಣಿಯ ಮೊದಲ ಟ್ಯೂನ್ ಗಳೆಂದರೆ ನನಗೆ ಅಚ್ಚುಮೆಚ್ಚು. ಈಗಲೂ ಕೃಷಿರಂಗಕ್ಕೆ ಅದೇ ಟ್ಯೂನ್ ಇದೆ. ಮತ್ತು ಒಳ್ಳೆಯ ಚಿತ್ರಗೀತೆಗಳು ಬರುತ್ತಿದ್ದರಿಂದ ಬಹಳ ಸಮಯ ಅದರ ರಿಪೇರಿಗೆ ಕೈಹಾಕಿರಲಿಲ್ಲ. ಆಗಲೇ ನನಗೆ ಅನಂತನಾಗ್ ಲಕ್ಷ್ಮಿ ಜೋಡಿಯ ಪದ್ಯಗಳ ಹುಚ್ಚು ಹಿಡಿದದ್ದು. ಎರಡು ಸಲ ಭಾನುವಾರದ ಕೋರಿಕೆ ಹಾಡಾಗಿ "ಅರಳಿದೇ ಅರಳಿದೇ ಮುದುಡಿದ ತಾವರೆ ಅರಳಿದೆ..." ಹಾಡು ಪ್ರಸಾರವಾಗಿತ್ತು. ಆದರೆ ಗೆಳೆಯನೊಬ್ಬ ," ಏನೋ...ಬರೀ ಮಂಗಳೂರು ಸ್ಟೇಷನ್ ಅಷ್ಟೇ ಕೇಳೋದಾ ನೀನು?... ಸ್ವಲ್ಪ ತಿರುಗಿಸು...ವಿವಿಧ್ ಭಾರತಿಯ ಸ್ಟೇಷನ್ ಗಳಲ್ಲದೇ ಶ್ರೀಲಂಕಾದ ಸ್ಟೇಷನ್ ಗಳೂ ಬರ್ತವೆ" ಅಂದಾಗಲೇ ರೇಡಿಯೋದ ಸುವರ್ಣ ದಿನಗಳು ಅಂತ್ಯವಾಗುವ ಕಾಲ ಸನ್ನಿಹಿತವಾಗಿತ್ತು. ಸಂಜೆ ಮನೆಗೆ ಹೋಗಿ ಬೇರೆ ಬೇರೆ ಸ್ಟೇಷನ್ ಗಳಿಗೆ ಟ್ಯೂನ್ ಮಾಡಲು ನೋಡಿದರೆ..ಊಹೂಂ...ಮಂಗಳೂರು ಬಿಟ್ಟು ಬೇರಾವುದೇ ಸ್ಟೇಷನ್ ಕೇಳಲೇ ಇಲ್ಲ. ಬರೇ ಗುರ್...ಅಂತ ಬೆಕ್ಕು ಪ್ರೀತಿಯಿಂದ ಕಾಲು ಸವರುವಾಗ ಮಾಡುವ ಶಬ್ದ ಮಾತ್ರ ಬರ್ತಾ ಇತ್ತು. ಹೋ..ಇಲ್ಲೇನೋ ಸಮಸ್ಯೆ ಇದೆ...ಅಂತ ನನ್ನ ರಿಪೇರಿ ಮೈಂಡ್ ಗೆ ಹೊಳೆದದ್ದೇ ತಡ...ಮುಂದಿನ ಅರ್ಧ ಗಂಟೆಯಲ್ಲಿ ಮಂಗಳೂರು ಸ್ಟೇಷನ್ ಕೂಡಾ..."ನಿಲಯದ ಇಂದಿನ ಪ್ರಸಾರವನ್ನು ಮುಕ್ತಾಯಗೊಳಿಸುತಿದ್ದೇವೆ..."  ಅಂತ ತನ್ನ ಕೊನೆಯ ವಾಕ್ಯವನ್ನುಸುರಿ ಪ್ರಾಣ ಬಿಟ್ಟಿತು.

ಹೀಗೆ ನನ್ನ ಬಾಲ್ಯದ ಬೆರಗಿನ ಅರಮನೆ ಆಗಿದ್ದ ಮಂಗಳೂರು ರೇಡಿಯೋ ಸ್ಟೇಷನ್ ಗೆ ಹೋದ ವರ್ಷ ನನ್ನ ಸ್ವರಚಿತ ಕವನ ವಾಚನ ಮಾಡಲು ಹೋಗಿ ಒಂದು ಆಸೆಯನ್ನು ತಣಿಸಿಕೊಂಡಿದ್ದೆ.ನಿನ್ನೆಯೂ ಮನದಲ್ಲೆಲ್ಲಾ ರೇಡಿಯೋನೇ ತುಂಬಿದಾಗ ಹಿಂದೆ ಮುಂದೆ ನೋಡದೆ ರೇಡಿಯೋ ಸಾರಂಗ್ ನ ಗೆಳೆಯ Abhishek Shetty ಗೆ  ಫೋನ್ ಮಾಡಿ ಸಾರಂಗದ ಬಣ್ಣಬಣ್ಣದ ಬದುಕಿಗೆ ಪ್ರವೇಶ ಪಡೆದೆ.ಒಳಗೆ ಹೋಗುತ್ತಲೇ ಬಹುಕಾಲದ ಎಫ್.ಬಿ. ಸ್ನೇಹಿತ Vk Kadaba  ನಗುವಿನ ಸ್ವಾಗತ ನೀಡಿದರು. ಮುಂದೆ ಸಾರಂಗದ ಕಾರ್ಯಕ್ರಮ, ಕಂಟ್ರೋಲ್ ರೂಮ್, ಲೈವ್ ರೂಮ್, ರೆಕಾರ್ಡಿಂಗ್ ರೂಮ್ ನ ವಿಷಯಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ, ಬಿಸಿಬಿಸಿ ಚಹಾ ಕುಡಿಸಿದ ಅಭಿಷೇಕ್  ನಂತರ ಒಂದು ಕ್ಷಣ ನನ್ನನ್ನೂ ಆರ್.ಜೆ. ಯಾಗಿಸಿದರು.

ಆದರೆ ಈ ಭೇಟಿಯ ಅಸಲೀ ವಿಷಯವಿದಲ್ಲ.  #TEAM #BLACKANDWHITE ಅನ್ನುವ ಒಂದು ಸಂಘಟನೆಯನ್ನು ಇತರ ಕೆಲವು ಗೆಳೆಯರೊಂದಿಗೆ ಸೇರಿ ಆರಂಭಿಸಿ ಮೊದಲ ಕಾರ್ಯಕ್ರಮವಾಗಿ ಹೋದ ವರುಷ "ಹಾಡು ಹುಟ್ಟುವ ಸಮಯ" ಎನ್ನುವ ಅಭೂತಪೂರ್ವ ಕಾರ್ಯಕ್ರಮವನ್ನು ಮಂಗಳೂರಿನ ಕಲಾ ರಸಿಕರಿಗೆ  ಕೊಟ್ಟವರು. ಹಿರಿಯ ಕವಿಗಳಾದ ಎಚ್.ಎಸ್.ವಿ ಮತ್ತು ಬಿ.ಆರ್.ಎಲ್. ಮಾತುಕತೆ ಜೊತೆಗೆ ಗಾಯಕ ರವಿ ಮೂರೂರ್ ತಂಡದಿಂದ ಅವರ ಭಾವಗೀತೆಗಳ ಪ್ರಸ್ತುತಿ...ತುಂಬಾ ಒಳ್ಳೆಯ ಆ ಕಾರ್ಯಕ್ರಮಕ್ಕೆ ನಾನೂ ಸಾಕ್ಷಿಯಾಗಿದ್ದೆ. ಈ ವರ್ಷ ಇದೇ ಸಂಘಟನೆ " ಅಮರ್ ಜವಾನ್ " ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ದಕ್ಷಿಣ ಕನ್ನಡದ ಹುತಾತ್ಮ ಯೋಧರನ್ನು ಸ್ಮರಿಸುತ್ತಾ ಅವರ ಕುಟುಂಬವನ್ನು ಅಭಿನಂದಿಸುವ ಒಂದು ಅರ್ಥಪೂರ್ಣ ಕಾರ್ಯಕ್ರಮ. ಈ ಎಲ್ಲಾ ಒಳ್ಳೆಯ ಅಭಿರುಚಿಯ ಕಾರ್ಯಕ್ರಮಗಳಿಗಾಗಿ ನಾನೂ ಇವರ ಬಳಗದೊ‌ದಿಗೆ ಕೈಜೋಡಿಸಿದ್ದೇ‌ನೆ.ನೀವೆಲ್ಲರೂ ಬನ್ನಿ, ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ.

ದಿನಾಂಕ: 20-08-2017
ಸ್ಥಳ : ಪುರಭವನ ಮಂಗಳೂರು
ಸಮಯ : 10am

ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ

No comments:

Post a Comment