Tuesday 24 January 2017

ಬಾನಿನ ಮೊಗದಲಿ ಮೂಡಲಿ ಬೆಳಗು
ಇರುಳಿನ ಕತ್ತಲೆ ಕಳೆಯೆ |
ಬಾಳಿನ ಪಥದಲಿ ಕಳೆಯಲಿ ನೋವು
ಹರುಷವು ಎಲ್ಲೆಡೆ ಸುರಿಯೆ ||

ಆಸೆಯೆ ಆರಿದ ಬದುಕಿನ ಹಣತೆಗೆ
ಹೊಸ ಭರವಸೆಯ ಕಿರಣವ ಬೀರಿ |
ಗುರಿಯನು ತೋರಿ
ಅರಿವನು ನೀಡಿ
ಸುಖದ ನಾಳೆಯ ದಾರಿಯ ತೋರಿ ||

ಬೆಳಗಲಿ ಬಾಳು ಬೆಳಗಲಿ


ಕಿವಿಗಳ ತಲುಪದ ಕಾಡಿನ ಕೂಗಿಗೆ
ಎಲ್ಲರ ದನಿಯೂ ಒಟ್ಟಿಗೆ ಸೇರಿ |
ನೋವನು ಮರೆತು
ನಲಿವಲಿ ಕಲೆತು
ಬೆಳಕನು ಕಾಣದ ಬದುಕಲಿ ಬೆರೆತು ||

ಬೆಳಗಲಿ ಬಾಳು ಬೆಳಗಲಿ

Tuesday 10 January 2017

ಸದಾ ಬುಸುಗುಡುವ ಹಾವೊಂದು
ಮನೆಯೊಳಗೆ ಸೇರಿಕೊಂಡಿದೆ.
ವಿಷದ ಹಲ್ಲಿಗೆ ಹೆದರಿ
ಹೊರಗೋಡಿಸಬೇಕು ಅಂದುಕೊಂಡಾಗಲೆಲ್ಲಾ
ಹೆಡೆಯ ಮಣಿಯ ಅಂದಕ್ಕೆ
ಮೋಹಗೊಂಡು ಸುಮ್ಮನಾಗುತ್ತೇನೆ.

ಇರಲಿ,
ನನ್ನ ಕೈವಶ ಮಾಡಿಕೊಳ್ಳುವ ಅಂದೆನಿಸಿ
ಪುಂಗಿಯನ್ನು ಹಾವಿನೆದುರು ಊದಿದೆ;
ಸ್ವಲ್ಪ ಸಮಯ ನಾದಕ್ಕೆ
ಹೆಡೆ ಬಿಚ್ಚಿ ತಲೆದೂಗಿ ಮಲಗಿತು.
ಕ್ಷಣಿಕ ಆನಂದದ ಅಮಲು ಹತ್ತಲು
ಎದ್ದು ಬುಸುಗುಡುತ್ತಿದೆ
ಕಾಳಸರ್ಪ.

ಯಾರೋ ಹೇಳಿದರು,
ವಿಷದ ಹಲ್ಲನ್ನು ತೆಗೆದರೆ
ಹಾವು ನಿರುಪದ್ರವಿ;
ಇದೂ ನೋಡುವ ಎಂದು,
ಹಲ್ಲು ಕಿತ್ತು ಹಾವನ್ನು ಹಿಡಿದರೆ
ಕೈಗೇ ಕಚ್ಚಿ ವಿಷವೇರಿತು.
ವಿಷ ಬರೇ ಹಲ್ಲಿನಲ್ಲಿಲ್ಲ;
ಮೈಯೇ ವಿಷಮಯ.

ಈಗೀಗ ಜನರೂ ನನ್ನನ್ನು
ಹಾವಿನೊಡನೇ ಗರುತಿಸುತಿದ್ದಾರೆ;
ಬುಸುಗುಡುವ
ಹಲ್ಲುಕಿತ್ತ ಬಗೆಬಗೆಯ ಹಾವು.
ಜಗದ ಹೆಡೆಯ ತುಂಬೆಲ್ಲಾ
ತೀರದ ವಿಷ.

ಇಲ್ಲಿ ಹೆಚ್ಚು ಆಯ್ಕೆಗಳಿಲ್ಲ,
ಮನೆಯೊಳಿರಬೇಕು ಅಥವಾ
ಬಯಲಲ್ಲಿ.
ಮನೆಯ ಮೋಹಕ್ಕಂಟಿದರೆ
ಹಾವಿನ ಜೊತೆಗಿರಬೇಕು.

ಈಗ ಹೊರಹಾಕುತ್ತೇನೆಂದರೂ
ಸುಲಭವಿಲ್ಲ;
ಮನೆಮಂದಿಗೆಲ್ಲಾ ಅಚ್ಚುಮೆಚ್ಚಾಗಿ
ನನ್ನನ್ನೇ ಸುತ್ತಿರುವ
ಹಾವಿನೊಂದಿಗೆ ಇಲ್ಲಿ
ಬದುಕದೇ ಬೇರೆ ದಾರಿಯಿಲ್ಲ.
ಸಿಡಿಯಲು ನಿಂತ ಜ್ವಾಲಾಮುಖಿಗಳ ನಡುವೆ
ತಣ್ಣಗೆ ಹರಿವ ನದಿಯ ಶಾಂತಿ
ನಿಜವಾದುದೆಂದು ನನಗನಿಸುವುದಿಲ್ಲ.

ಗರ್ಭದ ಬೆಂಕಿಯೊಡನೆ
ರಾಜಿಮಾಡಿಕೊಂಡು ಮುಖವಾಡ ಹಾಕಿಕೊಂಡು
ನಗುವ ಕಳ್ಳನಂತೆಯೂ;
ಒಮ್ಮೊಮ್ಮೆ,
ತೀವ್ರವಾಗಿ ಬಯಸಿದ್ದು ಸಿಗದೇ
ಅನಿವಾರ್ಯ ಆಧ್ಯಾತ್ಮಕ್ಕೆ ಹೊರಳಿದ
ಭಗ್ನ ಹೃದಯಿಯ ಸುಳ್ಳು ಶಾಂತಿಯಂತೆಯೂ          ಭಾಸವಾಗುತ್ತದೆ.

ನದಿಯ ಏಕಾಂತವನ್ನೊಮ್ಮೆ
ಕಲಕಬೇಕು,
ಬೇಸರವೋ
ಕೋಪವೋ ಅಥವಾ
ಅಸಹಾಯಕತೆಯೋ;
ಅಸಲಿ ಭಾವವನ್ನೊಮ್ಮೆ
ನೋಡಿಬಿಡಬೇಕು.

ಹೀಗೆಯೇ ಬದುಕಿಬಿಡುವುದು
ತನ್ನತನವ ಕೊಂದುಕೊಳ್ಳುವ ಕ್ರೌರ್ಯವಲ್ಲವೇ?
ಎಂದನ್ನಿಸಿದರೂ;
ಬದುಕಿಗಿರುವ ಬೇರೆ ಆಯ್ಕೆ
ತಿಳಿಯದೇ ಸುಮ್ಮನಾಗುತ್ತೇನೆ.