Sunday 20 November 2016

ಅಕ್ಕಾ ಕೊಡಿಸೆ ನನಗೂ ಒಂದು
ಬಣ್ಣ ಬಣ್ಣದ ಗಾಳಿಪಟ;
ಗಾಳಿಯಲ್ಲಿ ಲಾಗ ಹಾಕೋ
ಬೆರಗುಗೊಳಿಸೋ ಮಂಗನಾಟ.

ಉದ್ದ ಬಾಲ ಎರಡು ಕಿವಿ
ನಡುವೆ ಒಂದು ಸೂತ್ರವು;
ಹಾರಿ ಏರಿ ಬಾನಿನಲ್ಲಿ
ನೋಡಲೆನಿತು ಚಂದವು.

ಮೇಲೆ ಏರಿದಂತೆ ಪಟ
ನೋಡಲೆಷ್ಟು ಸಣ್ಣದು;
ದಾರ ಕಡಿದುಕೊಂಡರದು
ಕೈಗೆ ಸಿಗದ ಚಿನ್ನವು.

ಹಾರುತಿರಲಿ ಅಲ್ಲೇ ಅದು
ಅದುವೇ ಅದರ ಲೋಕವು;
ಕೆಳಗೆ ಇಳಿಸಿ ನೋಡಲಾರೆ
ನಗುವು ಮರೆತ ನೋಟವು.
ವೇಷ ಬಂದಿದೆ
ಹುಲಿಯ ವೇಷ ಬಂದಿದೆ
ದಸರ ಹಬ್ಬದ ಹುಲಿಯ ವೇಷ
ಮನೆಗೆ ಬಂದಿದೆ
ಅಮ್ಮ ಮನೆಗೆ ಬಂದಿದೆ |

ಪಟ್ಟೆ ಪಟ್ಟೆ ಬಣ್ಣದ ಮೈಯ
ಹಳದಿ ಕಪ್ಪು ಪಂಜದ ಕೈಯ
ಎಷ್ಟು ದೊಡ್ಡದೇ ಅಮ್ಮ
ಎಷ್ಟು ದೊಡ್ಡದು
ಹುಲಿಗೆ ಹಾಕಿದ ದುಡ್ಡಿನ ಮಾಲೆ
ಎಷ್ಟು ದೊಡ್ಡದು ||

ತಮಟೆ ಬಡಿವ ಸದ್ದು ಚಂದ
ಭುಜವ ಕುಣಿಸೋ ಗತ್ತು ಚಂದ
ಆಟ ನೋಡಮ್ಮ ಅವರ
ಆಟ ನೋಡಮ್ಮ
ಬಾಯಲ್ಲಿ ಹೆಕ್ಕುವ ಹಣದ ಆಟ
ಒಮ್ಮೆ ನೋಡಮ್ಮ ||

ಕುಣಿದು ಕಿರುಚಿ ಲಾಗ ಹಾಕಿ
ಸುಸ್ತು ಆಯ್ತು ಹಸಿವು ಆಗಿ
ಊಟಕೆ ಕರೆಯುವ ಅಮ್ಮ
ಊಟಕೆ ಕರೆಯುವ
ಕುಣಿಯುತಿರುವ ಹುಲಿಯನ್ನೆಲ್ಲಾ
ಊಟಕೆ ಕರೆಯುವ ||

ಪಲ್ಲಕ್ಕಿ ಮೇಲೆ ದೇವರ ಮೂರ್ತಿ
ಭಜನೆ ಮಾಡಿ ಎತ್ತಿ ಕೊಳುವ
ತುಂಬ ಚಂದವೇ ಅಮ್ಮ
ತುಂಬ ಚಂದವೇ
ನೋಡಬೇಕು ಒಮ್ಮೆ ನಾವು
ಭಾರೀ ಚಂದವೇ ||

ಪೂಜೆ ನೋಡಿ ತಿಲಕ ಹಾಕಿ
ತೀರ್ಥ ಕುಡಿದು ಕಜ್ಜಾಯ ತಿನ್ನುವ
ಕರ್ಕೊಂಡು ಹೋಗಮ್ಮ ನನ್ನ
ಕರ್ಕೊಂಡು ಹೋಗಮ್ಮ
ಕುದ್ರೋಳಿಲಿರುವ ದೇವಿಯ ನೋಡಲು
ಕರ್ಕೊಂಡು ಹೋಗಮ್ಮ ||