Friday, 31 July 2015

ನಭದಲ್ಲಿ ನೋಡು ಹೊಳೆಯುತ್ತಿದೆ ತಾರೆ
ನನ್ನ ಕಾಂತೆ ನೋಡು ಬಾರೆ|

ಹೊಸಬಾಳ ಹೊಸ್ತಿಲಲಿ ಇಂದು
ಹಾರೈಕೆಯ ಮಳೆಯಲ್ಲಿ ಮಿಂದು|
ಏರುತ್ತಿದೆ ನೋಡು ನನ್ನಲಿ ಆವೇಗ
ಓ ಮೇಘ, ನೋಡು ಬೇಗ||

ನವಯುಗದ ಆರಂಭವ ನೋಡು
ಹೆಜ್ಜೆ ಹೆಜ್ಜೆಯು ಕೂಡೆ ಹಾಡು|
ಈ ಯುಗಳ ಗೀತೆಯ ಪಲ್ಲವಿಯು ನೀನೆ
ನೋಡು ನಲ್ಲೆ,ನೀನು ಇಲ್ಲೆ||

ಭರವಸೆಗಳ ಬೆಳಕಾಗಿ ನೀನು
ಜೊತೆಯಾಗಿರಲು ಇನ್ನೇನು|
ನಗು ಚೆಲ್ಲುವ ಮೊಗವು ಹಾಲ್ಜೇನ ಸವಿಯು
ನಿನ್ನ ಒಲವು, ಬಾಳ ಸಿಹಿಯು||
ಎಲ್ಲೇ ನನ್ನವನು,ಸಖಿ?
ಬಾಳನು ಬೆಳಗುವ ಶಶಿಮುಖನು||

ಪ್ರೇಮದ ಕಿಡಿಯನು ಹೊತ್ತಿಸಿ ಕಾಡುವ
ವಿರಹದಿ ಬೇಯುವ ಚಂದವ ನೋಡುವ|
ಮನದ ಬಯಕೆಯ ತನುವಲಿ ಅರಸುವ
ಒಲವಲಿ ಮುದ್ದಿಸಿ ತೋಳಲು ಬಳಸುವ||

ರಾಧೆಯ ಒಲವಲಿ ಜಗವನೆ ಮರೆಯುವ
ಕಣ್ಮನ ಸೆಳೆಯುವ ರೂಪಿನ ಒಡೆಯನ|
ಚೆಲುವಿನ ನೀರೆಯ ಮನವನು ಕದಿಯುವ
ಮೋಹನ ಮುರಳಿಯ ಗಾನದ ಸೊಬಗಿನ||

ಗಂಗೆಯ ತಂಪನು ಮುಡಿಯಲಿ ಧರಿಸಿಹ
ಹಾಲಾಹಲವ ನಗುತಲಿ ಕುಡಿದಿಹ|
ಭಕುತರ ಪ್ರೀತಿಗೆ ಕ್ಷಣದಲಿ ಕರಗುವ
ವರಗಳ ನೀಡುವ ಸುಂದರ ಶಿವನ||


Friday, 24 July 2015

ತಿರುಗುತ್ತಿರುವ ಕಾಲವನ್ನು ನಿಲ್ಲಿಸಿ
ಕೇಳಬೇಕಿದೆ ಈಗ,
ಮುಂದೆಯೂ ಕುಲದ
ಹುಟ್ಟಿನ ಮೂಲ ಕೆದಕುವುದಾದರೆ
ನನಗಿಷ್ಟೇ ಸಾಕು;
ನಿನ್ನೊಂದಿಗೆ ಸಾಗುವುದು
ಇನ್ನು ಸಾಧ್ಯವಿಲ್ಲ.

ಅನುಕಂಪದ ಕಣ್ಣುಗಳ
ದೃಷ್ಟಿ ತೆಗೆಯದ ಹೊರತು;
ಇಲ್ಲಿ ಬದುಕು ಸುಲಭವಲ್ಲ. 

Thursday, 23 July 2015

ಎದೆಯ ಒಲವ ಪಾತ್ರೆ
ಬರಿದಾಗಿದೆ;
ಒಳಗೆಲ್ಲಾ ಭಣ ಭಣ
ಪಸೆಯಿಲ್ಲದ ಮರುಭೂಮಿ.

ನೀನೆದ್ದು ಹೋದ ಮೇಲೆ
ಹೊಸದಾಗಿ ಏನೂ ಬೆಳೆದಿಲ್ಲ;
ಮತ್ತೆ ಹಸನು ಮಾಡಿ ಬಿತ್ತಿದರೂ
ಈ ನೆಲದಲ್ಲಿ
ಮೊಳಕೆಯೊಡೆದೀತು ಅಂತ
ಯಾವ ಖಾತರಿಯೂ ಇಲ್ಲ.

* * * * * * *

ಈ ಬೆಳದಿಂಗಳನ್ನು
ಸ್ವಲ್ಪ ಸ್ವಲ್ಪವೇ ಒಳಗಿಳಿಸಿಕೊಳ್ಳಬೇಕು;
ಬೆಳೆಯುವ ಕಡಿಯುವ
ತೇಪೆ ಹಚ್ಚುವ
ಅದೇ ಅದೇ ಕೆಲಸವನ್ನೆಲ್ಲಾ
ಬೆಳಕಿಗೇ ಬಿಟ್ಟು ಕೊಟ್ಟು.

ಅಷ್ಟಕ್ಕೂ ಬದುಕೆಂದರೆ
ಬರೇ ಇಷ್ಟೇ ಅಲ್ಲವಲ್ಲ;
ಗೋರಿ ತಬ್ಬಿದ ಗಿಡದಲ್ಲೂ
ಹೂ ಅರಳುತ್ತದೆ
ಅಂದ ಮೇಲೆ?.Thursday, 16 July 2015

ರಾಧೇಯ


ಹುಟ್ಟು ನನ್ನ ಕೈಯಲ್ಲಿರಲಿಲ್ಲ;
ನೀನು ಹೆತ್ತು
ಬೀದಿಗೆ ಹಾಕಿದಾಗಲೇ
ಅಮ್ಮ
ಸತ್ತುಹೋದಳು.

ಆದರೆ ಬದುಕು
ನನ್ನ ಕೈಯಲ್ಲಿತ್ತು.
ದಡ ಸೇರಲು ಆಸರೆಯಿತ್ತು.

ಈಗ ನೀನು ಬಂದು
ಮಗನೇ, ಅಂದಾಗಲೇ
ಮತ್ತೆ
'ನನ್ನ ಅಮ್ಮ'
 ಸತ್ತು ಹೋದಳು.

Tuesday, 14 July 2015

ಬದುಕು ಮತ್ತು ಬಯಲು೧.
ಸದಾ
ಕತ್ತಲಲ್ಲಿ ಬದುಕುವ
ಬಾವಲಿಗೆ
ಬೆಳಕಿನ ಹಂಗಿಲ್ಲ;
ಬಯಲ ಬೆಳಕೆಲ್ಲಾ
ಒಳಗೆ ತುಂಬಿದರೂ
ನನಗೆ
ಕಣ್ಣು ಕಾಣುತ್ತಿಲ್ಲ.

೨.
ಬಯಲಿನಲ್ಲಿ
ಮರವೊಂದು ಎಲೆಗಳನ್ನುದುರಿಸಿ
ಬೋಳಾಗಿ ನಿಂತಿತ್ತು ;
ಥೇಟ್
ಒಂಟಿ ಕಾಲಲ್ಲಿ ನಿಂತ
ಭೈರಾಗಿಯಂತೆ.

೩.
ಮೊಳಕೆಯೊಡೆದ ಬೀಜದ
ಸಂಭ್ರಮ ಅರಿವಾಗೋದು
ಬಯಲಿನಲ್ಲಿಯೇ,
ಹೊರತು
ಮಣ್ಣಿನ ಒಳಗಲ್ಲ.

೪.
ಬಯಲಾಗೋದು ಅಂದರೆ
ಬರೀ ಬೆತ್ತಲಾಗೋದಲ್ಲ;
ತನ್ನೊಳಗನ್ನು ತೆರೆದು
ಕೀರ್ತಿ ಕಿರೀಟ ಕಳಚಿ
ತನ್ನನ್ನು ತಾನೇ
ಕಳೆದುಕೊಳ್ಳುವ ಆನಂದ.

Monday, 13 July 2015

ಅನ್ನ
ಪೂರ್ತಿ ಬೇಯುವ ಮೊದಲೇ
ಮಡಕೆಯ ನೀರು ಖಾಲಿ;
ಪಾಲಿಗೆ ದಕ್ಕಿದ್ದು
ಅರೆ ಬೆಂದ ಅನ್ನ.

ಅದು
ನಾಲಗೆಗೆ ರುಚಿಸುವಷ್ಟು
ಹಸಿವೆ ಇಲ್ಲ;
ಹಾಗೆಂದು
ಬಿಟ್ಟರೆ ಇಲ್ಲಿ ಬೇರೆ
ಗತಿಯೂ ಇಲ್ಲ.

ಬಲವಂತದಿಂದ ತಿನ್ನುವ
ನಾನು;
ತೆನಲಿರಾಮನ ಬೆಕ್ಕು.

ಹಸಿವೆ ತೀರಿತು,
ಅಂದುಕೊಂಡದ್ದೇ ಸುಳ್ಳು ;
ಮತ್ತೆ
ಒಲೆ ಉರಿಸಲೇ ಬೇಕು,
ಪೂರ್ತಿ ಬೇಯುವ ತನಕ
ಇಲ್ಲಿ ಕಾಯಲೇಬೇಕು.

Saturday, 11 July 2015

ಇತ್ತೀಚೆಗೆ ಯಾಕೋ ಗೊತ್ತಿಲ್ಲ
ಕನ್ನಡಿಯ ಎದುರು ನಿಲ್ಲುವಾಗೆಲ್ಲಾ
ಗಲಿಬಿಲಿಗೊಳ್ಳುತ್ತೇನೆ,
ಅಲ್ಲಿ ಕಾಣುವ ನನ್ನದಲ್ಲದ ಬಿಂಬ
ಸಿಡುಕು ಮುಖ;ನಗುವಿಲ್ಲದ ಗೆರೆಗಳು
ಗಾಯದ ಕಲೆಗಳು;ಚಂಚಲ ಕಣ್ಣುಗಳಲ್ಲಿ
ನನ್ನನ್ನು ಕಾಣದೇ ಹತಾಶೆಗೊಳ್ಳುತ್ತೇನೆ.

ನಾನು ಕಂಡ ರೂಪ ಯಾರದ್ದು?
ಹೊರಗೆ ನಿಂತಿರುವ
ನಾನು ಯಾರು?
ಎಲ್ಲವೂ ಗೋಜಲು.
ಅದು ನಾನಲ್ಲ; ನಾನೆ?
ಅಥವಾ
ಮುಖವಾಡಗಳ ಮೊರೆಹೋಗಿದ್ದೇನಾ?
ಬರಿಯ ಪ್ರಶ್ನೆಗಳು.

ಬದುಕಿನಲ್ಲಿ ಕಳೆದುಹೋಗಿ
ಬಯಲನ್ನು ಮರೆತ
ನನ್ನ ಪರಿಚಯವೇ ನನಗಿಲ್ಲ.
ಇನ್ನು ಲೋಕಕ್ಕೆ ಹೇಗೆ ಹೇಳಲಿ
ನನ್ನ ಬಗ್ಗೆ?
ನೀರಿನಲ್ಲಿ ಕಲಸಿ ಹೋದ
ನೂರು ಬಣ್ಣಗಳಲ್ಲಿ
ನನ್ನ ಮೂಲ ಯಾವುದು?

ಜರಡಿಯಲ್ಲಿ ಸೋಸಿದರೂ
ಬಣ್ಣದ ನೀರು ಸೋರಿ ಹೋಗುತ್ತಿದೆ.

ಲೋಕದ ಕಣ್ಣಿನಲ್ಲಿ
ನನ್ನನ್ನು ನೋಡಿ ಸುಸ್ತಾಗಿದ್ದೇನೆ;
ಸರಿಗಳ ಸಿದ್ಧ ಮಾದರಿಗಳಿಗೆ
ಹಲವು ಬಾರಿ
ರೂಪಾಂತರಗೊಂಡಿದ್ದೇನೆ.

ನನ್ನನ್ನು ಕಾಣಲು
ಮನೆಯಲ್ಲಿನ ಕನ್ನಡಿ ಸಾಲುತ್ತಿಲ್ಲ;
ಲೋಕದ ಕಣ್ಣಿನ ಪೊರೆ ಸರಿಸಿ
ನನ್ನೊಳಗನ್ನು ತೋರಿಸುವ
ಕನ್ನಡಿ ಇಲ್ಲಿ ಸಿಗುತ್ತಿಲ್ಲ.