Wednesday 14 April 2021

ಅವಸ್ಥೆ

 ಅವಸ್ಥೆ


ಸುತ್ತ ನಡೆಯುತ್ತಿದೆ ವ್ಯಾಪಾರ
ಎಂದಿನ ಹಾಗೆಯೇ
ಅವನು ಮಾತ್ರ ಇದ್ದೂ ಇಲ್ಲದಂತೆ
ಎಲ್ಲೋ ದೃಷ್ಟಿ ನೆಟ್ಟು ಕೂತಿದ್ದಾನೆ.
ಸಂತೆ ಗದ್ದಲದ ಯಾವ ಪರಿಚಿತ ದನಿಯೂ
ಅವನನ್ನು ತಾಕಿದಂತೆ ಕಾಣುತ್ತಿಲ್ಲ.
ಇಂದು ಅವನು ತಂದ ಬುಟ್ಟಿಯಲ್ಲೂ
ಹೆಚ್ಚೆನೂ ಇದ್ದಂತೆ ಕಾಣುತ್ತಿಲ್ಲ,
ಆದರೂ ಬಂದು ಕೂತಿದ್ದಾನೆ ಅಭ್ಯಾಸದಿಂದೆಂಬಂತೆ.

ಯಾಕೋ ಇಂದು ಅವನ ಮನಸ್ಸು
ತಾನು ತಂದ ವಸ್ತುಗಳನ್ನು ಬಿಕರಿ ಮಾಡುವುದಕ್ಕಿಂತಲೂ,
ಸುತ್ತ ಕೂತವರ ತುಂಬಿದ ಬುಟ್ಟಿ,
ಗಿರಾಕಿಗಳನ್ನು ಸೆಳೆಯುವ ಅವರ ಮಸಲತ್ತು,
ಎಲ್ಲವನ್ನೂ ನೋಡುತ್ತಾ ಸುಮ್ಮನೆ ಕೂತಂತಿದೆ.

ನಾನು ನೋಡಿದ ಹಾಗೆ,
ಅವನು ಹೀಗಿರಲಿಲ್ಲ ಮೊದಲು.
ಬುಟ್ಟಿ ತುಂಬಾ ಸಾಮಾನು ಹೊತ್ತು ತಂದು
ಸುತ್ತ ಅದನ್ನು ನೀಟಾಗಿ ಹರಡಿ,
ಪಕ್ಕದಲ್ಲಿಟ್ಟ ನೋಟು ಚಿಲ್ಲರೆ ತುಂಬಿದ ಡಬ್ಬಿಯನ್ನೊಮ್ಮೆ ಹಿತವಾಗಿ ಮುಟ್ಟಿ,
ನಡುವೆ ಕೂತು ಹೊಸ ಹೊಸ ಗಿರಾಕಿಗಳನ್ನು
ಯಾವತ್ತಿನ ಪರಿಚಯ ಎಂಬಂತೆ;
ಕರೆದು ಕೂಗಿ ಸೆಳೆಯುವ ಅವನ ಚುರುಕಿನ
ವ್ಯಕ್ರಿತ್ವವನ್ನು ಕಂಡವರು ಈಗ ನನ್ನಂತೆಯೇ
ಅಚ್ಚರಿ ಪಡುತ್ತಾರೆ.

ಸಂತೆಯ ಅತ್ಯಂತ ಜನದಟ್ಟಣೆಯ ಸಮಯದಲ್ಲಿ
ನೀವು ಅವನನ್ನು ನೋಡಬೇಕಿತ್ತು.
ಅರಳಿದ ತಾಜಾ ಹೂವಿಗೆ ಮುತ್ತಿಕೊಂಡ ದುಂಬಿಗಳಂತೆ
ಜನ ಮಗಿಬಿದ್ದು ಅವನಿಂದ ಖರೀದಿಸುತ್ತಿದ್ದರು.
ಎಷ್ಟು ಸಲ ಕೇಳಿದರೂ ಪ್ರೀತಿಯಿಂದ ತೋರಿಸುವ
ಇಷ್ಟ ಆಗುವ ಹಾಗೆ ಹಿತವಾಗಿ ಗದರುವ
ಅವನನ್ನು ಹುಡುಕಿಕೊಂಡು ಬರುತ್ತಿದ್ದುದರಲ್ಲಿ
ಅಚ್ಚರಿಯೇನಿಲ್ಲ.
ಆಗ ಮಾತ್ರ ಅವನ ಕೈ ಮತ್ತು ಬಾಯಿ
ಅತ್ಯಂತ ಸಂಭ್ರಮದಿಂದ ಅವನ ಜೊತೆಗೇ
ಸ್ಪರ್ಧೆಗಿಳಿದಂತೆ ನನಗೆ ತೋರುತ್ತಿತ್ತು.
ನನಗೀಗಲೂ ನೆನಪಿನಲ್ಲಿರುವುದು
ಎಷ್ಟು ಕೊಂಡರೂ ಮುಗಿಯದ ಅವನ ಬುಟ್ಟಿ
ಮತ್ತು ಮುಗಿಯದ ಅವನ ಮಾತು.

ಈಗ್ಯಾಕೋ ಹೆಚ್ಚು ಸಾಮಾನುಗಳೇ ಇಲ್ಲ
ಅವನು ತರುವ ಬುಟ್ಟಿಯಲ್ಲಿ.
ಮೊದಲಿನಂತೆ ಸುತ್ತ ಹರಡಿಕೊಳ್ಳದೇ ಬುಟ್ಟಿ
ಎದುಗಿಟ್ಟು ಕುಳಿತುಬಿಡುತ್ತಾನೆ.
ಇದ್ದುದನ್ನೇ ಚೌಕಾಶಿ ಮಾಡುವವರ ಬಳಿ
ವಿನಾ ಕಾರಣ ಸಿಟ್ಟಿಗೇಳುತ್ತಾನೆ,
ತೀರಾ ಕಡಿಮೆ ದರಕ್ಕೆ ಕೇಳುವಾಗ
ಕೇಳಿಸದಂತೆ ನಟಿಸುತ್ತಾನೆ; ಮೌನ ವಹಿಸುತ್ತಾನೆ.
ಮತ್ತು ವ್ಯಾಪಾರ ಮರೆತವನಂತೆ
ಎದುರಿಗೆ ಕೂತವರ ತುಂಬಿದ ಬುಟ್ಟಿಗಳನ್ನು
ನೋಡುತ್ತಾ ಕೂತುಬಿಡುತ್ತಾನೆ.

~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು



ಕೊನೆಯ ಭೇಟಿ

 ಕೊನೆಯ ಭೇಟಿ


ದೀರ್ಘವಾದ ನನ್ನ ಬದುಕಿನ
ಅತೀ ಸಣ್ಣ ಭೇಟಿಯಾಗಿತ್ತದು.
ಓ ದೇವರೇ!
ಇಷ್ಟು ಕಾಡುವಷ್ಟು ಗಾಢವಿತ್ತೆ?

ಏನೋ ಅವಸರವಿತ್ತು
ಎಲ್ಲವನ್ನೂ ಕ್ಷಣದಲ್ಲಿ
ಕಬಳಿಸಿಬಿಡುವ ಆತುರವಿತ್ತು
ಬಹುಶಃ ಕೊನೆಯ ಭೇಟಿಯೆಂದು
ಆವತ್ತೇ ಅನಿಸಿತ್ತು!

ಹತ್ತಿರವಿದ್ದಾಗ ಮಾತಿಗೆ ಬರ;
ಮೌನ ಸದಾ ವಾಚಾಳಿ!

ಕಡಲನ್ನೇ ಕುಡಿದೆವು.
ಆದರೂ ಎಷ್ಟೊಂದು ದಾಹ?
ನಿಂತಿತೇ ಕಾಲ?
ಬೆಳಕಿಗೆ ತೆರೆಯದೇ
ಸಂಜೆಗೆ ನಿಲ್ಲದೇ
ಹೊರಟ ಬೇಸರ ಇನ್ನೂ ಹಸಿಯಾಗಿದೆ.

ಅದು ಹೇಗೋ,
ನಿನ್ನಿಂದ ಬಯಸಿದ್ದೆಲ್ಲವೂ
ಸಿಕ್ಕಿಬಿಟ್ಟಿದೆ ಈ ಬದುಕಲ್ಲಿ.
ಆದರೆ ಅದೆಲ್ಲವನ್ನೂ ಮರೆಸಿ ,
ಮತ್ತೆ ಮತ್ತೆ ನೆನಪಾಗುವಷ್ಟು
ಉಳಿದು ಹೋದದ್ದಾದರೂ ಏನಿತ್ತು ನಿನ್ನಲ್ಲಿ?

ದಾರಿಯನ್ನೇ ಸುಖಿಸಿದ ನಾವು
ಗುರಿಯತ್ತ ಮನಸ್ಸು ಮಾಡಲೇ ಇಲ್ಲ
ಬದುಕು ಜೊತೆಗೇ ಸಾಗಿತು
ದಾರಿಗಳು ಮಾತ್ರ ಸಂಧಿಸಲೇ ಇಲ್ಲ!

ಇದೀಗ,
ಕೊನೆಯ ಕೋರಿಕೆಯೊಂದು
ಬಾಕಿ ಉಳಿದಿದೆ ನೋಡು;
ಒಮ್ಮೆ ಭೇಟಿಯಾಗು.
ನಿನ್ನಲ್ಲೇ ಕಳೆದುಹೋದ
ನನ್ನ ಬೆಳಕಿನ ಕಿರಣವನ್ನು
ಈಗಲಾದರೂ ಒಪ್ಪಿಸಿಬಿಡು;
ಇಲ್ಲವಾದರೆ ಈ ಕತ್ತಲಿಗೆ
ನೀನೂ ಬಂದುಬಿಡು.

~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು



ಲೋಕಾಂತ

 ಲೋಕಾಂತ


ಕೆಳಗಿನ ಅಂತಸ್ತಿನ ಮನೆಯಲ್ಲಿ
ಜೋರಾಗಿ ಅಳುವ ಮಗುವಿನ ಸದ್ದು,
ಸುಮ್ಮನೆ ಕುಳಿತಿದ್ದ ನನ್ನ ಕಿವಿಗೂ ಬಿದ್ದು
ಒಂದರೆ ಕ್ಷಣ ವಿಚಲಿತವಾಯ್ತು ಮನಸ್ಸು.
ಅಪ್ಪಳಿಸಿ ಬಂದ ಗಂಡು ಸದ್ದು,
ಧಢಾರನೇ ಬಾಗಿಲು ಹಾಕಿದ ಸದ್ದು.
ಆಳದ ಗುಹೆಯಿಂದ ಹೊರಬಿದ್ದ ಹಾಗೆ
ಮತ್ತೆ ಕ್ಷೀಣವಾದರೂ ಅಳುವಿನ ಸದ್ದು,
ಕಣ್ಣು ಮಾತ್ರ ನೋಟ ಹೊರಡಿತು.

ಪಕ್ಕದ ಖಾಲಿ ಸೈಟ್ ನಲ್ಲಿ ಅರ್ಧ ಕಟ್ಟಿದ ಗೋಡೆಯ ಮೇಲೆ ಕಲ್ಲಿಟ್ಟು, ನೂಲು ಹಿಡಿಯುತ್ತಿರುವ ವ್ಯಕ್ತಿಯ ಕಿವಿಗೂ ಬಿದ್ದಿರಬಹುದಾ ಈ ಕೂಗು?
ತರಕಾರಿ ಗಾಡಿ ಮನೆಯೆದುರು ಬಂದು ಆಗಲೇ ಬಹಳ ಹೊತ್ತಾಯಿತು.
ಸೊಪ್ಪು ,ತರ್ಕಾರಿ
ಬೀಟ್ರೋಟ್ ಟೊಮ್ಯಾಟೊ...
ಯಾವುದೇ ಏರಿಳಿತವಿಲ್ಲದ ಸಹಜ ಕೂಗು.
ರಸ್ತೆಯ ತುಂಬಾ ನಡೆಯುತ್ತಿರುವುದು ನಿತ್ಯ ವ್ಯಾಪಾರ.

ತಟ್ಟಿದಂತೆ ಕಾಣಲಿಲ್ಲ ಯಾರಿಗೂ
ತನ್ನ ಹೊರತಾದ ಬೇರೆ ಸದ್ದು!
ತನ್ನದೇ ಗುಂಗಲ್ಲಿ ಸಾಗುವ ಲೋಕ
ಕ್ರೌರ್ಯಕ್ಕೂ ಹೊರಗಾಯಿತೇ?
ಅರಳುವ ಹೂವಿಗೂ
ಕಣ್ಣಿಲ್ಲ
ನರಳುವ ಅಳುವಿಗೂ
ಕಿವಿಯಿಲ್ಲ.

ನನ್ನ ಕಿವಿಯಲ್ಲಿ ಹೆಚ್ಚಾಯಿತೇ
ಮತ್ತೆ ಮತ್ತೆ ಮಗುವಿನ ಕೂಗು?

ಎಲ್ಲಿಲ್ಲದ ಸಿಟ್ಟಿನಿಂದ ಧಡಬಡನೇ
ಕೆಳಗಿಳಿದು ಬಾಗಿಲು ಬಡಿದೆ,
ಲೋಕದ ಭಾರವೆಲ್ಲಾ
ಈಗ ಹೆಗಲ ಮೇಲೆ!
ತೆರೆದ ಬಾಗಿಲ ಮಂದೆ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಅದೇ ಗಂಡುದನಿಯ ಆಸಾಮಿ,
ಇನ್ನೂ ಉಮ್ಮಳಿಸಿ ಅಳುತ್ತಿರುವ ಮಗು;
ಮತ್ತು
ಕೆನ್ನೆ ಮೇಲೆ ಮೂಡಿದ್ದ ನಾಲ್ಕು ಬೆರಳು!

"ಇಲ್ವೇನ್ರಿ ನಿಮಗೆ ಕರುಳು?
ಹೊಡಿತೀರಲ್ರೀ ಹೀಗೆ ಮಗೂನ?
ನಾಚಿಕೆ ಆಗಲ್ವಾ?"

ದಬಾಯಿಸಿದರೂ,
ಮಾತಿರದೆ ಸುಮ್ಮನೇ ನೋಡುತ್ತಾ ನಿಂತ ಗಂಡಸು
ಮತ್ತು ಅವನ ಮೌನ;
ಪ್ರತಿಭಟಿಸುವುದನ್ನೇ ಮರೆತ ಲೋಕದ
ಪ್ರತಿರೂಪದಂತಿತ್ತು!

ಸಿಟ್ಟು ನೆತ್ತಿಗೇರಿ ಅಂತಃಕರಣ ಬಹುವಾಗಿ ಉಕ್ಕಿ,
ಮಗುವನ್ನು ಎತ್ತಿಕೊಳ್ಳಲು ಚಾಚಿದರೆ ಕೈ ;
ಓಡಿ ಹೋಗಿ ತನ್ನ ಅಪ್ಪನನ್ನೇ ಬಾಚಿ ತಬ್ಬಿಕೊಂಡಿತು ಮಗುವಿನ ಎರಡೂ ಕೈ!


~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು