Sunday 3 December 2017

ನವರಾತ್ರಿಗಳು ಭಕ್ತಿಯ ಆರಾಧನೆಯಲ್ಲಿ ಕಳೆದು ಹೋದದ್ದೇ ಗೊತ್ತಾಗಲಿಲ್ಲ. ನಿನ್ನೆ ವಿಜಯದಶಮಿ.ಮೈಸೂರಿನಲ್ಲಿ ನಾಡ ಹಬ್ಬ ದಸರಾದ ವಿಶ್ವವಿಖ್ಯಾತ ಜಂಬೂ ಸವಾರಿಯ ಮೆರವಣಿಗೆಯ ದಿನ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ನನ್ನ ಬಹುದಿನಗಳ ಕನಸು.ಅದು ಈ ಸಾರಿಯೂ ಈಡೇರಲಿಲ್ಲ ಬಿಡಿ.ಆದರೆ ಈ ನಮ್ಮ ಮಂಗಳೂರು ದಸರಾ ಮೆರವಣಿಗೆ ಕೂಡಾ ಶ್ರೀಮಂತಿಕೆಯಲ್ಲಿ, ಅದ್ಧೂರಿಯಲ್ಲಿ ಏನೂ ಕಮ್ಮಿಯಿಲ್ಲ. ಕೆ.ಪಿ.ಟಿ.ಯಲ್ಲಿ ಡಿಪ್ಲೋಮಾ ಕಲಿಯುವ ದಿನಗಳಲ್ಲಿ ರಾತ್ರಿಯಿಡೀ ಸುತ್ತಾಡಿ ಕೊನೆಗೆ ಲಾಲ್ ಭಾಗ್ ನ ರಸ್ತೆಗಳಲ್ಲಿ ನಿಂತುಕೊಂಡು ಮೆರವಣಿಗೆ ನೋಡಿದ ದಿನಗಳು ಇನ್ನೂ ಹಚ್ಚ ಹಸುರಾಗಿವೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಈ ಮೆರವಣಿಗೆ ತಯಾರಿಯ ಉತ್ಸಾಹಕ್ಕೇನೂ ಭಂಗ ಬಂದಿರಲಿಲ್ಲ. ನಿನ್ನೆ ಮಂಗಳೂರಿನ ಯಾವ ಭಾಗದಲ್ಲಿ‌ ನಡೆದುಕೊಂಡು ಹೋದರೂ ಅಲ್ಲಿ ಒಂದು ಟ್ಯಾಬ್ಲೋ ತಯಾರಿ ನಡೆಯುತ್ತಿರುವ ದೃಶ್ಯ ನಮ್ಮ ಕಣ್ಣಿಗೆ ಬೀಳದೇ ಇರದು. ಈ ಎಲ್ಲಾ ಸಂಭ್ರವವನ್ನೂ ಕಣ್ತುಂಬಿಕೊಳ್ಳಬೇಕೆಂದು ಮಂಗಳೂರಿಗೆ ಹೊರಟ ನನಗೆ ಈ ಎಲ್ಲಾ ಟ್ಯಾಬ್ಲೋ ತಯಾರಿಯ ದೃಶ್ಯಗಳನ್ನು ನೋಡುವ ಅವಕಾಶವೂ ಸಿಕ್ಕಿತು. ಗಣೇಶೋತ್ಸವದ ಮೆರವಣಿಗೆಗೆಂದು ಪರ್ಕಳದಲ್ಲಿ ನಮ್ಮ ಮಂಗಳ ಕಲಾ ಸಾಹಿತ್ಯ ವೇದಿಕೆಯಿಂದ ನಾವು ತಯಾರಿಸುತಿದ್ದ ಟ್ಯಾಬ್ಲೋನ ದಿನಗಳು ಫಕ್ಕನೇ ಕಣ್ಣೆದುರು ಬಂದವು. ಪ್ರತೀ ವರ್ಷ ಏನಾದರೂ ಹೊಸದನ್ನು ಕೊಡಬೇಕೆನ್ನುವ ತುಡಿತ, ರಾತ್ರಿ ಹಗಲೆನ್ನದೇ ಎರಡು ದಿನಗಳ‌ ಕೆಲಸ, ಎಲ್ಲಾ ಮುಗಿದ ನಂತರ ಅದರ ಮೇಲೆ ವೇಷ ಹಾಕಿ ಕುಳಿತುಕೊಳ್ಳುವ ಆತುರ...ಎಲ್ಲವೂ ನನ್ನ ಕಣ್ಣೆದುರು ಬಂದು ಆ ಟ್ಯಾಬ್ಲೋ ತಯಾರಿಯನ್ನು ಕುತೂಹಲದಿಂದ ನೋಡುವಂತೆ ಮಾಡಿತ್ತು.ಮೆರವಣಿಗೆ ಸಾಗುವ ಮುಖ್ಯ ರಸ್ತೆ ಅಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ವಿದ್ಯುತ್ ಅಲಂಕಾರಿಕ ದೀಪಗಳಿಂದ ಝಗಮಗಿಸುತಿದ್ದ ರಸ್ತೆಯ ಇಕ್ಕೆಲಗಳಲ್ಲಿ ದೊಡ್ದ ದೊಡ್ಡ ಶುಭಕೋರುವ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತಿದ್ದವು.ಮಧ್ಯಾನ್ಹ ನಾಲ್ಕು ಗಂಟೆಗೇ ಮುಖ್ಯ ರಸ್ತೆಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹೊರಬರಲು ಅರ್ಧ ಗಂಟೆಯೇ ಹಿಡಿದಿತ್ತು.

ತಮಟೆಯ ಲಯಬದ್ಧ ಬಡಿತದಲ್ಲಿ ಕುಣಿಯುವ ಹುಲಿಗಳ ದೊಡ್ಡ ತಂಡವೇ ಇತ್ತು. ಲಕ್ಷದ ಮೇಲೆ ಬಹುಮಾನವಿದ್ದ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಅಲ್ಲಲ್ಲಿ ತಾಲೀಮು ನಡೆಯುತಿತ್ತು. ದಸರಾದಲ್ಲಿ ಹುಲಿವೇಷ ಪ್ರಧಾನ ಆಕರ್ಷಣೆ.ಮೈಯಿಡೀ ಬಣ್ಣದ ಕುಸುರಿಯಲ್ಲಿ ಅರಳುವ ಹುಲಿಗಾಗಿ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೋರಿಸುವ ಆಸಕ್ತಿ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ.ಎಷ್ಟು ಮಳೆ ಬಂದರೂ ಎಲ್ಲಾ ಋತುಗಳಲ್ಲೂ ಬೆವರಿ ಚಂಡಿ ಮುದ್ದೆಯಾಗುವ ಮಂಗಳೂರಿನಲ್ಲಿ ದಿನವಿಡೀ ಮೈಯೆಲ್ಲಾ ಬಣ್ಣದೊಂದಿಗೆ ಕುಣಿದು ಕುಪ್ಪಳಿಸುವ ಹುಲಿಗಳನ್ನು ಕಂಡರೆ ನನಗೆ ಮೊದಲಿನಿಂದಲೂ ವಿಶೇಷ ಅಕ್ಕರೆ. ಎಲ್ಲಾ ಕಡೆಯ ಹುಲಿ ತಂಡದ ಕುಣಿತವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗುತಿದ್ದೆ. ಅಚಾನಕ್ ಆಗಿ ಒಂದು ಸಣ್ಣ ಹುಲಿ ನನ್ನ ಕಣ್ಣನ್ನು ಸೆಳೆಯಿತು. ಕಾಡು ಬಿಟ್ಟು ನಾಡಿಗೆ ಹೊಸದಾಗಿ ಬಂದ ಹುಲಿಯಂತೆ ಭಯಭೀತವಾಗಿ ಗುಂಪಿನಿಂದ ಪ್ರತ್ಯೇಕಗೊಂಡು ಏಕಾಂಗಿಯಾಗಿ ಅಲೆಯುತಿತ್ತು.
ದೊಡ್ಡ ತಂಡಗಳ ಕುಣಿತದಿಂದ ನೋಟವನ್ನು ಬಲವಂತದಿಂದ ಹೊರಳಿಸಿ ಈ ಸಣ್ಣ ಹುಲಿಯನ್ನು ಬೆನ್ನಟ್ಟಿಕೊಂಡು ಹೋದೆ.ಅದೂ ನಿರಾಯುಧನಾಗಿ! ನನ್ನ ಧೈರ್ಯವನ್ನು ನೀವು ಮೆಚ್ಚಲೇ ಬೇಕು. ಯಾವುದೇ ತಮಟೆ ಬಡಿತದ ಪಕ್ಕ ವಾದ್ಯಗಳ ಸದ್ದಿಲ್ಲದೇ ಅದು ಕುಣಿಯುತಿತ್ತು ಅಂಗಡಿಗಳ ಗಲ್ಲಾ ಪೆಟ್ಟಿಗೆಯ ಎದುರು.ನವರಾತ್ರಿಯ ಸಮಯದಲ್ಲಿ ಬೇರೆ ಬೇರೆ ರೀತಿಯ ವೇಷಗಳನ್ನು ಹಾಕಿಕೊಂಡು ಮನೆ, ಅಂಗಡಿಗಳಲ್ಲಿ ಪ್ರದರ್ಶನವನ್ನು ಕೊಟ್ಟು ಹಣ ಸಂಪಾದಿಸುವುದು ಹೊಸ ವಿಚಾರವೇನಲ್ಲ. ಆದರೆ ಈ ಹುಲಿಯನ್ನು ಬೆನ್ನಟ್ಟಲು ನನಗಿದ್ದ ಮುಖ್ಯ ಕುತೂಹಲ ಅದು ಪ್ರತೀ ಅಂಗಡಿಗೆ ಹೋದ ನಂತರ ಒಂದು ಮೂಲೆಯಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಕುಳಿತಿದ್ದ ಒಂದು ಹೆಂಗಸಿನ ಬಳಿ ಓಡಿ ಹೋಗುತಿತ್ತು.ಮತ್ತೆ ಸ್ವಲ್ಪ ಸಮಯದ ನಂತರ ಮತ್ತೊಂದು ಅಂಗಡಿಯ ಮುಂದೆ ನಿಲ್ಲುತಿತ್ತು. ಆ ಹುಲಿಯ ಕಣ್ಣುಗಳು ಬೇರೆ ಹುಲಿಗಳ ಕಣ್ಣುಗಳಂತೆ ಹೆದರಿಕೆಯನ್ನು ಹುಟ್ಟಿಸುತ್ತಿರಲಿಲ್ಲ.ಬದಲಾಗಿ ಅವುಗಳೇ ಹೆದರಿದ್ದವು. ಬೆದರಿದ ಹರಿಣಿಯ ಕಣ್ಣುಗಳಂತೆ ಈ ಹುಲಿಯ ಕಣ್ಣುಗಳು. ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು.ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು.

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಐಸ್ಕ್ರೀಮ್ ಗಾಡಿಯಿಂದ ಎರಡು ಚೋಕೊಬಾರ್ ನ್ನು ತಂದು ಎರಡನ್ನೂ ಅವನ ಕೈಗಿತ್ತೆ. ಎಷ್ಟೋ ದಿನಗಳಿಂದ ಬೇಟೆ ಸಿಗದೇ ಒದ್ದಾಡುತಿದ್ದ ಹುಲಿಯ ಎದುರು  ಕೊಬ್ಬಿದ ಜಿಂಕೆ ಕಂಡಾಗ ಹಾರಿ ಹಿಡಿದು ಗಬಗಬನೆ ತಿನ್ನುವಂತೆ ಎರಡೂ ಐಸ್ಕ್ರೀಮ್ ಗಳನ್ನೂ ತಿಂದಿತು ಈ ಪುಟಾಣಿ ಹುಲಿ.‌ ಹೊಟ್ಟೆ ಸ್ವಲ್ಪ ತಣ್ಣಗಾಗಿರಬೇಕು.ಹೆದರಿದ ಕಣ್ಣಿಗಳಿಂದ ನಿರಾಳತೆಯ ಭಾವ ಹೊರಹೊಮ್ಮಿತು. ಮತ್ತು ನಾನು ಒತ್ತಾಯ ಮಾಡಿ ಕೇಳಿದ್ದಕ್ಕೆ ತನ್ನ ಕತೆಯನ್ನು ನನ್ನ ಮುಂದೆ ಬಿಚ್ಚಿಟ್ಟಿತು.ಮೂಲೆಯಲ್ಲಿ ಕೂತ ಎರಡು ಮಕ್ಕಳ ತನ್ನ ತಾಯಿಗೆ ಬಿಕ್ಷಾಟನೆಯೇ ಪ್ರಮುಖ ಉದ್ಯೋಗ.ಈಗ ಆ ಸಣ್ಣ ಮಗುವಿನೊಂದಿಗೆ ಅವಳಿಗೆ ಹೆಚ್ಚು ಕಡೆ ಹೋಗಲಾಗದೇ ಕುಳಿತಲ್ಲೇ ಬಟ್ಟೆ ಹರಡಿ ಭಿಕ್ಷೆ ಕೇಳುತ್ತಾಳೆ. ತನ್ನನ್ನು ಯಾವುದೋ ಹುಲಿ ತಂಡದವರಿಗೆ ದಮ್ಮಯ್ಯ ಹಾಕಿ ಈ ಹುಲಿವೇಷವನ್ನು ಹಾಕಿಸಿದ್ದಾಳೆ.ಮತ್ತು ಅಂಗಡಿ ಅಂಗಡಿಗೆ ಕಳಿಸುತ್ತಾಳೆ.ಬೆಳಿಗ್ಗೆಯಿಂದ ಹೀಗೆ ಹೋಗಿ‌ ಹೋಗಿ ಸಣ್ಣ ಹುಲಿಯ ಪುಟ್ಟ ಪಾದಗಳು ದಣಿದಿವೆ.ನನಗಾಗಲ್ಲಮ್ಮಾ ಇನ್ನು... ಸಾಕು ಅಂತ ಎಷ್ಟು ಗೋಗರೆದರೂ ತಾಯಿ ಕೇಳುತ್ತಿಲ್ಲ. ಮಗುವಿಗೇನು ಗೊತ್ತು? ಇಂದು ವಿಜಯದಶಮಿ! ಕೆಡುಕಿನ ಮೇಲೆ ಒಳಿತಿನ ವಿಜಯದ ದಿನ. ಇವತ್ತು ದುಡಿದರೆ ವಾರವಿಡೀ ಸುಖವಾಗಿರಬಹುದು. ನಾನೂ ಹೊಟ್ಟೆತುಂಬಾ ಉಣ್ಣಬಹುದು.ತನ್ನಲ್ಲಿ ಸ್ವಲ್ಪವಾದರೂ ಹಾಲು ಉಕ್ಕಿದರೆ ಸದಾ ಹಾಲಿಗಾಗಿ ಅಳುವ ಸಣ್ಣ ಮಗುವಿಗೂ ಹಾಲೂಡಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಸಣ್ಣ ಹುಲಿಯನ್ನು ಮತ್ತೆ ಮತ್ತೆ ಬಲವಂತವಾಗಿ ಬೇಟೆಗೆ ತಳ್ಳುತಿದ್ದಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಭಾರಾವಾದ ಹೆಜ್ಜೆಗಳನ್ನು ಊರಿಕೊಂಡು ಸಣ್ಣ ಹುಲಿ ಹೊರಡುತ್ತದೆ ಮತ್ತೆ ಮತ್ತೆ ಬೇಟೆಗೆ!...ಸಣ್ಣ ಹುಲಿಯ ಮಾತು ಕೇಳಿ ಮನಸ್ಸು ಭಾರವಾಯ್ತು.ತಪ್ಪಿ‌ಅವನ ಅಪ್ಪನ ಬಗ್ಗೆ ಕೇಳಿದೆ. ಆಗ ಹುಲಿಯ ಕಣ್ಣಲ್ಲಿ ಉಕ್ಕಿದ ರೋಷ ನನ್ನನ್ನು ಅಟ್ಟಾಡಿಸಿ ಕೊಂದು ತಿನ್ನುವಷ್ಟಿತ್ತು.

ಹುಲಿ ಕುಣಿತದ ತಂಡಕ್ಕೆ ಅಂತಾನೇ ಇಟ್ಟುಕೊಂಡಿದ್ದ ದುಡ್ಡನ್ನು ಸಣ್ಣ ಹುಲಿಯ ಜೋಳಿಗೆಗೆ ಹಾಕಿ, ಆ ದಿನಕ್ಕಾಗುವಷ್ಟು ತಿಂಡಿಯನ್ನೂ ಕೊಟ್ಟು ಅವನನ್ನು ಕಳಿಸಿದೆ. ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದೆ. "ಎಲ್ಲಿದ್ದಿ ಮಾರಯಾ, ಸಿಗ್ತೇನಂತ ಹೇಳಿ ಪತ್ತೆನೇ ಇಲ್ಲ..." ಅಂತ ಮಂಜನ ಕಾಲ್ ಬಂತು. ಮನಸ್ಸು ಅರಳಿತು,ಮತ್ತೆ ಸಂಭ್ರಮದ ರಸ್ತೆಯಲ್ಲಿ ಮಂಜನ ಜೊತೆಗೆ ಹೆಜ್ಜೆ ಹಾಕಿದೆ.ದೇವಸ್ಥಾನ ಬೀದಿಯಲ್ಲೆಲ್ಲಾ ತಿರುಗಿ ನಮ್ಮ ಖಾಯಂ ಅಡ್ಡ ಪಬ್ಬಾಸ್ ಐಸ್ಕ್ರೀಮ್ ಪಾರ್ಲರ್ ಗೆ ಬಂದು ಕುಳಿತಾಗ ಮುಸ್ಸಂಜೆ ಕಳೆದು ರಾತ್ರಿ ಇಣುಕುತಿತ್ತು. ಪಬ್ಬಾಸ್ ಎದುರಿನಲ್ಲೇ ಹಾಕಿದ್ದ ದೊಡ್ಡ ವೇದಿಕೆಯಲ್ಲಿ ಆರ್ಕೆಸ್ಟ್ರಾ ತಂಡದ ಮೈಕ್ ಟೆಸ್ಟಿಂಗ್ ನಡೆಯುತಿತ್ತು. ಹೊರಗೆಲ್ಲಾ ಝಗಮಗಿಸುವ ಲೈಟಿಂಗ್ಸ್ ನಿಂದಾಗಿ ಮಾಮೂಲಿ ಹೋಗುವ ರಸ್ತೆಗಿಂದು ರಾಜಕಳೆ.ನಿಧಾನವಾಗಿ ರಸ್ತೆ ಸಂಭ್ರಮದ ಮೆರವಣಿಗೆಗೆ ಸಜ್ಜಾಗುತಿತ್ತು.ಇದೆಲ್ಲದರ ನಡುವೆಯೂ ಎದುರಿನ ಅಂಗಡಿಯ ಗಲ್ಲಾ ಪೆಟ್ಟಿಗೆಯೆದುರು ಕುಣಿದು ಮಾಲೀಕನ ಮುಖವನ್ನೇ ನೋಡುತಿದ್ದ ಸಣ್ಣ ಹುಲಿ ಕಾಣದೇ ಇರಲಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment