Saturday 12 September 2015

ಕವಿತೆಯನ್ನು ಯಾಕೆ ಬರೆಯಬೇಕು? ಅದನ್ನು ಯಾಕೆ ಓದಬೇಕು? ಇವೆರಡೂ ಮೂಲ ಪ್ರಶ್ನೆಗಳು. ನಮಗನಿಸಿದ್ದನ್ನ, ನಮ್ಮ ಭಾವುಕತೆಗೆ ಹೊಳೆದದ್ದನ್ನು ಕಡಿಮೆ ಶಬ್ದಗಳಲ್ಲಿ ಇತರರಿಗೆ ದಾಟಿಸುವ ಯತ್ನವೇ ಕವಿತೆ ಎನ್ನಬಹುದು. ಇದೊಂದು ಬಗೆಯಲ್ಲಿ ಒಳಗುದಿಯಿಂದ ಪಾರಾಗುವ, ಒತ್ತಡ ಬಿಟ್ಟು ಹಗುರಾಗುವ ಪ್ರಯತ್ನ. ಕವಿತೆಯೂ ಸಂವಹನದ ಪರಿಣಾಮಕಾರೀ ಮಾಧ್ಯಮ.
 ಇನ್ನು ಓದಿನ ಬಗ್ಗೆ . ಕವಿತೆಯ ಓದು ನಮ್ಮನ್ನ ಇನ್ನಷ್ಟು ಸ್ಪಷ್ಟವಾಗಿಸುತ್ತದೆ. ಸಾವಿರ ವಾಕ್ಯಗಳು ಹೇಳದ ಅರ್ಥವನ್ನು ಕವಿತೆಯ ಒಂದು ಸಾಲು ಮಾಡಿಸುತ್ತದೆ. ಪರಸ್ಪರ ಸಂಬಂಧಗಳ ಆಳವಾಗಿ ಅರಿಯಲು ,ಚಿಂತಿಸಲು ಕವಿತೆಗಿಂತ ಒಳ್ಳೆಯ ಮಾಧ್ಯಮವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದು ಹುಟ್ಟಿಸುವ ಜೀವನಪ್ರೀತಿ ಓದುಗನನ್ನೂ ಕವಿಯನ್ನೂ ಜೀವನ್ಮುಖಿಯಾಗಿಸುತ್ತದೆ.

Wednesday 9 September 2015

ಮೊದಲ ನುಡಿ

ಕವನ ಹೇಗೆ ಹುಟ್ಟುತ್ತದೆ ಎಂಬುವುದನ್ನು ವ್ಯಾಖ್ಯಾನಿಸುವುದು ಸುಲಭ ಸಾಧ್ಯವಾದ ಮಾತಲ್ಲ. ಯಾಕೆಂದರೆ ಕವನ ಭಾವ ಜನ್ಯವಾದದ್ದು. ಭಾವವು ಅಮೂರ್ತವಾದದ್ದು. ಆದ್ದರಿಂದ ಭಾವದಿಂದಾದ ಕಾವ್ಯದ ಪ್ರಾದುರ್ಭವವೂ ಕೂಡ  ಮೂರ್ತೀಕರಿಸಲು ಅದು ಲೇಖನಿಯ ಮೊನೆಗೆ ಸಿಗುವ ಗಣಿತವಲ್ಲ. ಅದು ಅಗಣಿತ. ಅದು ಗಣಿತವೇ ಆಗಿದ್ದರೆ ಎಲ್ಲರೂ ಕವಿಗಳಾಗುತ್ತಿದ್ದರು. ಕವನಕ್ಕೆ ಛಂದಸ್ಸಿನ ಗಣಿತವಿದೆ.ಆದರೆ ಅದೂ ಕೃತಕ ಗಣಿತವಲ್ಲ. . ಕವಿಯ ಅಂತರಾಳದ ಅನಂತ ಭಾವಗಳು ಅಮೂರ್ತ ತತ್ತ್ವಾನುಸಂಧಾನದಲ್ಲಿ ಅಕ್ಷರಗಳ ಸ್ಥೂಲರೂಪವನ್ನು ತಾಳು ಪ್ರಕ್ರಿಯೆ ಲಾಸ್ಯವಿದು.ಆದರೆ ಕವನಗಳಿಗೆ ಛಂದಸ್ಸೇ ಪ್ರಧಾನ ಲಕ್ಷವಾಗಿ ಈಗ ಉಳಿದಿಲ್ಲ ಎಂಬುವುದು ಗಮನಾರ್ಹ ಅಂಶ.
ಈ ಸಾರಸ್ವತ ಲೋಕದಲ್ಲಿ ಛಂದೋಬದ್ಧವಾದ ಹಾಗೂ ಛಂದೋಬದ್ಧವಲ್ಲದ ಕವನಗಳ ಎರಡೂ ಪ್ರಕಾರಗಳಿಗೂ ಸಮಾನ ಮನ್ನಣೆ ಇದೆ.ಎರಡೂ ಪ್ರಕಾರಗಳಲ್ಲೂ ಕಾವ್ಯಕಲಾ ತತ್ತ್ವಗಳ ಸಮೃದ್ಧಿ ಇರಬೇಕು. ಈ. ಕಲಾ ತತ್ವ್ತಗಳ ಕವನ ಬರೆಯುವುದು ಸುಲಭದ ಮಾತಲ್ಲ.ಒಂದು ವಿಷಯದ ಬಗ್ಗೆ ಬರೆಯಲು ಹೊರಟರೆ ಕವನವಾಗದು ಅದು ಬರೆಯಲ್ಪಡಬೇಕು. ಯಾವುದೇ ಒಂದು ವಸ್ತು ಅಥವಾ ಸನ್ನಿವೇಶವನ್ನು ಕಂಡ ಕವಿಯ ಬುದ್ಧಿ ಅದನ್ನು ಗ್ರಹಿಸುತ್ತದೆ. ಮತಿ ಚಿಂತಿಸುತ್ತದೆ. ಪ್ರಜ್ಞೆ ಹೊಸ ಹೊಸ ಚಿಂತನೆಯನ್ನು ಮಾಡುತ್ತದೆ. ಪ್ರತಿಭೆ ತಕ್ಷಣವೆ ಅದಕ್ಕೆ ಸ್ಪಂದಿಸಿದಾಗ ಮನಸ್ಸು ಕವನ ಕಟ್ಟುತ್ತದೆ. ಈ ಪ್ರತಿಭೆ ನಿತ್ಯ ನೂತನವಾಗಿದ್ದು ಸಾರ್ವತ್ರಿಕವಾಗದೆ ಅಪೂರ್ವವಾಗಿದೆ. ಪ್ರತಿಭೆ ಇಲ್ಲದೆ ಯಾರೂ ಕವಿಗಳಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಕವಿಗೆ ಸಮಾಜದಲ್ಲಿ ವಿಶೇಷ ಮನ್ನಣೆಯಿದೆ.
ಉಪನಿಷತ್ತಿನಲ್ಲೇ “ಕವಿರ್ಮನಿಷೀ ಪರಿಭೂಃ ಸ್ವಯಂ ಭೂಃ” ಎಂಬ ಮಾತಿದೆ. ಮೊದಲು ಕವಿಯೂ ಪುರೋಹಿತನೂ ಒಬ್ಬನೆ ಆಗಿದ್ದ .ಹಾಗಾಗಿ ಅವನಿಗೆ ಆ ಕಾಲದಲ್ಲೇ ಅಪಾರ ಗೌರವವಿತ್ತು.

ಕಾವ್ಯ ಅಂದರೆ ಸತ್ತ್ವಯುತ ಭಾವಗಳ ಒಂದು ತೆರನಾದ ಹರಿವು. ಕವಿಯ ಕಲ್ಪನೆಯ ಅಭಿವ್ಯಕ್ತಿಯೇ ಕಾವ್ಯ. ಕಾವ್ಯಕ್ಕೆ ಯಾವುದೂ ವಸ್ತುವಾಗಬಲ್ಲುದು ಅದಕ್ಕೆ ನಿರ್ಬಂಧವಿಲ್ಲ. ಕವಿ ಬರೆಯುವುದು ಭಾವಸತ್ಯವನ್ನೇ ಆದರೂ ಅಲ್ಲಿ ಬಾಹ್ಯ ಸತ್ಯವೇ ಅದರ ಆತ್ಮವಾಗಿರುತ್ತದೆ.

ಯುವಕವಿ ಶ್ರೀ ರವೀಂದ್ರ ನಾಯಕರ ಈ ಕವನ ಸಂಕಲನ ಅವರ ಸ್ಫೂರ್ತಿಗೆ ಸಾಕ್ಷಿಯಾಗಿ ನಿಲ್ಲಬಲ್ಲುದು. ಬಹುಶಃ ಈ ಕವಿಯ ಆರಂಭದ ಕವನ ಸಂಕಲನವಿದು. ಹಾಗಾಗಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಅವರಿಗಿಂತ ಹಿರಿಯವನಾದ ನನ್ನ ಕರ್ತವೆಂದು ಬಗೆದು ಮುನ್ನುಡಿಯನ್ನು ಬರೆಯಲು ಒಪ್ಪಿಕೊಂಡೆ. ಇವರು ಆಯ್ದುಕೊಂಡ ವಸ್ತುವನ್ನು ಕಾವ್ಯವಾಗಿ ಅಭಿವ್ಯಕ್ತಿಸಲು ಹೊರಟಾಗ ಹಲವೆಡೆ ತುಸು ದೀರ್ಘಸೂತ್ರವಿದ್ದರೂ, ಕೆಲವೆಡೆ ಶಬ್ದಗಳ ಸಶಕ್ತ ಪ್ರಯೋಗದಲ್ಲಿ ಹಿಂದುಳಿದಂತೆ ಕಂಡರೂ ಇವರ ಪ್ರತಿಯೊಂದು ಕವನಗಳಲ್ಲೂ ಅನೇಕ ಮಹತ್ತ್ವಪೂರ್ಣ ಸಾಲುಗಳು ನಮ್ಮ ಗಮನ ಸೆಳೆಯುತ್ತದೆ.

ಅವರ ಉರಿದು ಉರಿಸುವುದೆಂದರೆ ಕವನವನ್ನು ಗಮನಿಸಿ... ನಾವು ತೀರವಾಗಿ ಬಯಸಿದವರು ನಮಗೆ ಸಿಗದೆ ದೂರದಲ್ಲೇ ನಿಂತು ಮರೀಚಿಕೆಯಾಗಿ ದ್ವೇಷದ ಉರಿಯಲ್ಲಿ ಉರಿದು ಸಿಗುವಂತೆ ಅಣಕಿಸಿ ನಗತೊಡಗಿ ಸಿಗದೆ ನಮ್ಮ ಹೊಟ್ಟೆ ಉರಿಸಿದರೆ ಹೇಗಾಗಬೇಡ.

ಅದನ್ನೇ ರವೀಂದ್ರ ನಾಯಕರ

"ಉರಿದು ಉರಿಸುವುದೆಂದರೆ ಬಹುಶಃ ಇದೇ ಇರಬೇಕು

ಅಲ್ಲಿಯೆ ನಿಂತು ನಗುತ್ತಿಯ "

ಎಂದು ವಿಡಂಬಿಸಿದ್ದಾರೆ.

ಮತ್ತೆ ಹೇಳುತ್ತಾರೆ ನಿನಗದೆ ಸುಖವೆನಿಸಿದರೆ ಅಲ್ಲಿಯೇ ಇರು. ತಾನು ಬಯಸಿದ್ದನ್ನು ತನಗೆ ಸಿಗದಿದ್ದರೂ ಅದರ ಸುಖವನ್ನೇ ಬಯಸುವ ಪ್ರೇಮಪೂರ್ಣ ಮನಸ್ಸಿನ ಸ್ಥಿತಿಯದು. ಪ್ರೀತಿಯೆಂದರೆ ಸಾಂಗತ್ಯದ  ಅನುಭವವೇ ಆಗಬೇಕೆಂದೇನಿಲ್ಲ. ಆತ್ಮನೂ ಸಂಧಾನವೂ ಆಗಬಲ್ಲುದಲ್ಲವೆ? ಹಾಗಾಗಿ ಜಿಂಕೆಗಳು ಆಟವಾಡುವಾಗ ಅದನ್ನು ಮನೆಗೆ ಕರಕೊಂಡು ಬರಬೇಕು ಅನಿಸಿದರೂ ಈ ಕವಿಗೆ ತಕ್ಷಣ ಹುಲ್ಲಿನ ನೆನಪಾಗಿ ಮನೆ ಅವುಗಳಿಗೆ ಮರುಭೂಮಿಯಾಗಬಹುದು. ಅವು ಮನೆಯ ವಾತಾವರಣದಲ್ಲಿ ಬದುಕಲಾರವು ಎಂಬ ಸತ್ಯ ತಕ್ಷಣದಲ್ಲೇ ಅರಿವಾಗುತ್ತದೆ. ಪ್ರಕೃತಿಯಲ್ಲಿ ಆನಂದ ನಾದದಲ್ಲಿ ರಮಣೀಯ ಲವಲವಿಕೆಯಲ್ಲಿ ಹಾರಾಡುತ್ತಿದ್ದ ಗಿಳಿಯನ್ನು ಪಂಜರದೊಳಗಿಟ್ಟರೆ ಕೃತಾರ್ಥವೇನು? ನಮ್ಮ ಪ್ರೀತಿಯಲ್ಲಿ ಚಿನ್ನದ ಪಂಜರದಲ್ಲೆ ಇಟ್ಟರೂ ಗಿಳಿಗದು ಸ್ವರ್ಗವಲ್ಲ.

ಇವರ ‘ನನ್ನೊಲವಿಗೆ’ ಕವನದಲ್ಲಿ ಚತುರ್ಮಾತ್ರಾ ಲಯವಿದೆ. ಉದಾ:
ಪ್ರೇಮದ | ಶರಧಿಗೆ |ಬೀಸಿದ |ಬಲೆಯಲಿ |

ಕವನದಲ್ಲಿ ರಸ ಧ್ವನಿ ಔಚಿತ್ಯ ಎಂಬ. ರತ್ನತ್ರಯಗಳು ಬಹಳ
ಮುಖ್ಯಪಾತ್ರ ವಹಿಸುತ್ತದೆ. ರಸವಿಲ್ಲದೆ ಧ್ವನಿಯಿಲ್ಲದೆ ಔಚಿತ್ಯವಿಲ್ಲದೆ ಕವನಗಳು ಜೀವಿಸಲಾರವು. ‘ಧ್ವನಿ’ ನೇರವಾಗಿ ಸಾಕ್ಷಾತ್ಕಾರಗೊಳ್ಳುವುದಲ್ಲ. ಅದು ಸುಪ್ತವಾಗಿರುತ್ತದೆ. ಅಲ್ಲಮ ಪ್ರಭು ತನ್ನ ವಚನದಲ್ಲಿ ದೇವರ ನಿಲುವನ್ನು ‘ಶಬ್ದದೊಳಗಿನ ನಿಶ್ಯಬ್ದದಂತೆ’ ಎಂದು  ಹೇಳಿದಂತೆ ಧ್ವನಿಯೂ ಶಬ್ದದೊಳಿಗಿನ ಒಂದು ನಿಶ್ಯಬ್ದ. ಆ ನಿಶ್ಯಬ್ದವನ್ನು ಜ್ಞಾನಪೂರ್ಣ ಮನಸ್ಸು ಮಾತ್ರ ಕಾಣಬಲ್ಲುದು, ಆಲಿಸಬಲ್ಲುದು. ಧ್ವನಿ ವಾಚ್ಯಾರ್ಥವನ್ನು ಮೀರಿ ನಿಲ್ಲುವಂಥದ್ದು. ಒಂದೇ ಮಾತಿನಲ್ಲಿ ಹಲವರ್ಥಗಳನ್ನು ಬಿಂಬಿಸಬಲ್ಲದ ಸಾಮರ್ಥ್ಯ ಇದಕ್ಕಿದೆ, ಇದನ್ನೆ ಬಲ್ಲವರು ಕಿರಿದರೊಳ್ ಪಿರಿದರ್ಥವಂ ಪೇಳ್ವ ಜಾಣ್ಮೆ’ ಎಂದರು. ಆ ಜಾಣ್ಮೆಯಿಲ್ಲದೆ ಕವಿ ತನ್ನ ಕಾವ್ಯಯಾನದಲ್ಲಿ ಸಶಕ್ತವಾಗಿ ಸಾಫಲ್ಯದ ಗುರಿಮುಟ್ಟಲಾರ.

ರಸವೆಂದರೆ ತಿರುಳು ಎಂಬ ಅರ್ಥವೂ ಇದೆ. ಭಾವ ರಸದ ಸಂಬಂಧ ಅವಿನಾಭಾವವಾದದ್ದು. ರಸವು ಭಾವಜನ್ಯ. ಭಾವ ಲೌಕಿಕವಾದದ್ದು ರಸ ಲೋಕೋತ್ತರವಾದದ್ದು. ಭಾವದಲ್ಲಿ ದುರ್ಭಾವಗಳಿರಬಹುದು. ಆದರೆ ರಸ ಶುದ್ಧವಾದದ್ದು ಸಾಹಿತಿ ಸಿಪಿಕೆಯವರು ಇದನ್ನು ಶ್ರುತಪಡಿಸಿದ್ದಾರೆ.
ಅವರು ಭಾವ ಮತ್ತು ರಸದ ಬಗ್ಗೆ ಹೇಳುತ್ತಾ “ಭಾವವಿಲ್ಲದೆ ರಸವಿಲ್ಲ, ಭಾವ ಶುದ್ಧದ ಸಂಯಮಿತ ರೂಪವೆ” ರಸವೆನ್ನಬಹುದು ಎನ್ನುತ್ತಾರೆ. ಇದು ಹೌದು. ಭಾವ ಶುದ್ಧದ ಸಂಯಮಿತ ರೂಪದಲ್ಲಿ ಕವನ ಮೈದಳೆದರೆ ಮಾತ್ರ ರಸಿಕ ಜನಮಾನಸದಲ್ಲಿ ಆನಂದವನ್ನೇ ನೀಡುತ್ತದೆ.

ಕವನ ಕಟ್ಟುವಾಗ ಶಬ್ದಕ್ಕಾಗಿ ಶಬ್ದವನ್ನು ಕಟ್ಟಬಾರದು ಅದು ಕಾವ್ಯದ ದೃಷ್ಟಿಯಿಂದ ಅದು ಔಚಿತ್ಯಪೂರ್ಣವಾಗಬೇಕು. ಭಾವ ಶಬ್ದ ರಸೋತ್ಪತ್ತಿಗೆ ನಾದವಾಗಬೇಕು.

" ಹಸಿವು ತೀರಿದ ಮೇಲೆ " ಎಂಬ ಕವನದಲ್ಲಿ ರವೀಂದ್ರ ನಾಯಕರು
 "ಹಸಿವು ತೀರಿದ ಮೇಲೆ ಮತ್ತೆ ಇನ್ನೆಂದೂ ಕೈಗೆ ಸಿಗದ ಹಾಗೆ ದೂರ ಎತ್ತಿ ಬಿಸಾಡಬೇಕು " ಅನ್ನುತ್ತಾರೆ. ಈ ಸಾಲುಗಳಲ್ಲಿ ಅಧ್ಯಾತ್ಮದ ಚಿಂತನೆಗಳಿವೆ.
ಪಂಚಭೂತಾತ್ಮಕವಾದ ಈ ಜಗತ್ತಿನಲ್ಲಿ ನಮಗೆ ಅರಿಷಡ್ವರ್ಗಗಳ ಸೆಳೆತವಿದೆ.
ಈಷಣತ್ರಯಗಳ ಬಂಧನವಿದೆ. ಇಲ್ಲಿ ಕಾಯ ಅನಿತ್ಯವಾಗಿದೆ; ಅಸತ್ಯವಾಗಿದೆ.
ಆತ್ಮ ನಿತ್ಯ ಶಾಶ್ವತವಾಗಿದ್ದು ಸತ್ಯವಾಗಿದೆ. ಆದರೆ ಇಲ್ಲಿ ಅನಿತ್ಯವೂ ಅಸತ್ಯವೂ
ಆದ ಕಾಯದ ಬಂಧನದಲ್ಲಿ ಆತ್ಮ ಬಂಧಿಯಾಗಿರುತ್ತದೆ. ಅದಕ್ಕೆಬಿಡುಗಡೆಯಲ್ಲಿಯೇ ಆನಂದವಿರುವುದು. ಇಲ್ಲಿ  ಸಗುಣ ಕಾಯದ ಬಯಕೆಗಳು ತೀರದೆ ಆತ್ಮಕ್ಕೆ ಬಿಡುಗಡೆಯಿಲ್ಲ. ಹಾಗಾಗಿ ಒಮ್ಮೆ ಆಶೆ
ತೀರಿದ ಮೇಲೆ ಅದನ್ನು ಹತ್ತಿಕ್ಕಿ ಈ ಕಾಯವನ್ನು ತ್ಯಜಿಸಬೇಕು ಅಂದರೆ ಆತ್ಮಹತ್ಯೆಮಾಡಿಕೊಳ್ಳಬೇಕೆಂದು ಅರ್ಥವಲ್ಲ. ನಾವು ನಿರ್ಮೋಹಿಗಳಾಗಿ ನಮಗೆ ಮರಣವೂ ಮಹಾ ನವಮಿಯಾಗಬೇಕೆಂಬುವುದೇ ಇದರ ಧ್ವನಿ. ಇಲ್ಲಿ ದೂರ
ಎತ್ತಿ ಬಿಸಾಡಬೇಕು ಎಂಬ ರವೀಂದ್ರ ನಾಯಕರ ಮಾತೂ ವ್ಯಾಮೋಹವಿಲ್ಲದೆ ಕಾಯವನ್ನು ತ್ಯಜಿಸಬೇಕೆಂಬ ಅರ್ಥವನ್ನು ಕೊಡುತ್ತದೆ. ನಾನು ನನ್ನದು ಎಂಬ ಸ್ವಾರ್ಥವನ್ನು ಮರೆತಾಗ ನಿರ್ಮೋಹತ್ತ್ವಕ್ಕೆ ದಾರಿಯಾಗುತ್ತದೆ. ಈ ಕಾಯಕ್ಕೆಮತ್ತೆ ಮತ್ತೆ ನಾವು ಅಂಟಿಕೊಳ್ಳದಿರಲು ಸಾಧ್ಯವಾಗುತ್ತದೆ.
    ನಾವೊಂದು ಆ ಪೂರ್ಣದಿಂದ ಸಿಡಿದುಬಿದ್ದ ಬಿಂದು. ಈ ಬಿಂದು ಮತ್ತೆ ಆ
ಪೂರ್ಣವನ್ನು ಸೇರಿ ಒಂದಾಗಬೇಕು. ಅದೇ ಮುಕ್ತಿ. ಉಪ್ಪಿನ ಗೊಂಬೆಯೊಂದನ್ನು ಸಮುದ್ರಕ್ಕೆ ಬಿಸಾಡಿದಾಗ ಅದು ಮತ್ತೆಂದೂ ಕೈಗೆ ಸಿಗದೆ ಸಮುದ್ರವೇ ಆಗುವಂತೆ ಈ ಮುಕ್ತಿಯ ಸ್ವರೂಪವಿರುತ್ತದೆ. ಸಾಲೋಕ್ಯ,
ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ಚತುರ್ವಿದ ಮುಕ್ತಿಗಳಲ್ಲಿ ಇದು ಸಾಯುಜ್ಯವಾಗಿದೆ. ಅಲ್ಲಿ ಮತ್ತೆ "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ" ಎಂಬ ಬಂಧನಗಳಿರುವುದಿಲ್ಲ.. ರವೀಂದ್ರನಾಯಕರ ಇನ್ನೆಂದೂ ಕೈಗೆ ಸಿಗದ ಹಾಗೆ ದೂರ ಎತ್ತಿ ಬಿಸಾಡಬೇಕೆಂಬ ಮಾತೂಸಾಯುಜ್ಯ ಮುಕ್ತಿಯನ್ನೇ ಸೂಚಿಸುವಂತಿದೆ.
    ಎಲ್ಲಿ ಒಲವಿರುತ್ತದೋ ಅಲ್ಲಿ ಚೆಲುವಿರುತ್ತದೆ. ಇವೆರಡೂ ಇದ್ದಲ್ಲಿ ಶಿವವಿರುತ್ತದೆ. ಅದೇ ಸತ್ಯವಾಗಿರುತ್ತದೆ. ಆದ್ದರಿಂದ ಅಲ್ಲಿ ಗೆಲುವಿರುತ್ತದೆ. ಈ ಹೊತ್ತಗೆಯಲ್ಲಿ ರವೀಂದ್ರ ನಾಯಕರು ಒಲವನ್ನು ಮೆರೆದಿದ್ದಾರೆ, ಚೆಲುವನ್ನು ಹರಡಿದ್ದಾರೆ. ಶಿವವನ್ನು ಮುಟ್ಟಿದ್ದಾರೆ. ಸತ್ಯವನ್ನು ದರ್ಶಿಸಿದ್ದಾರೆ. ಆ ನಿಟ್ಟಿನಲ್ಲಿ ಅವರು ಯುವಕವಿಗಳಿಗೆ ಮಾದರಿಯಾಗಿದ್ದಾರೆ ಇಲ್ಲಿರುವ ಪ್ರತಿಯೊಂದು ಕವನ ರತ್ನದ ಹರಳಾಗಿ ಕವನಗಳ ಗೊಂಚಲು ರತ್ನಮಾಲೆಯಾಗಿ ಕನ್ನಡಾಂಬೆಗೆ ಸಮರ್ಪಿಸಲ್ಪಟ್ಟಿದೆ.

ರವೀಂದ್ರ ನಾಯಕರ ಈ ಕೃತಿಯಲ್ಲಿ -----ಕವನಗಳಿವೆ. ಇವುಗಳ ಒಳಗೂ ಒಂದೊಂದು ಬಗೆಯ ತತ್ತ್ವದ ತುಣುಕುಗಳಿವೆ. ಸಮಾಜದ ಕೊರಳಿದೆ. ಕರುಳಿದೆ. ಮುಗ್ಧವೂ ಪ್ರೌಢವೂ ಆದ ಮನಸ್ಸಿನ ಮಿಡಿತಗಳಿವೆ. ಮುಂದೆಯೂ ಅವರ ಕಲಿಕೆ ನಿರಂತರವಾಗಲಿ. ಎಂದಿಗೂ ಕಲಿಕೆಗೆ ಕೊನೆಯಿಲ್ಲ. ಕವಿಯಾಗಲಿ ಸಾಹಿತಿಯಾಗಲಿ ಯಾರೇ ಆಗಲಿ ಕಲಿಯುತ್ತಾ ಬೆಳೆಯುತ್ತಾನೆ ಬೆಳೆಯುತ್ತಾ ಉಳಿಯುತ್ತಾನೆ. ರವೀಂದ್ರ ನಾಯಕರೂ ಇನ್ನೂ ಬೆಳೆಯಲಿ, ಬೆಳೆಯುತ್ತಾ ಉಳಿಯಲಿ ಈ ಸಾರಸ್ವತ ಸಾಮ್ರಾಜ್ಯದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಲಿ ಎಂದು ನಾನು ಹಾರೈಸುತ್ತೇನೆ.

ಗಣೇಶ ಕೊಲೆಕಾಡಿ

ಶ್ರೀ ಛಂದಃಪದ್ಮ

ಅತಿಕಾರಿ ಬೆಟ್ಟು

ವಯ ಮೂಲ್ಕಿ

ಮಂಗಳೂರು, ದ.ಕ.

574171

Wednesday 5 August 2015

ಓ ಮಹಾತ್ಮಾ
ನೀನಿನ್ನೆಷ್ಟು ಬಾರಿ ಸಾಯಬೇಕೋ?
ಸತ್ತು ಗೋರಿಯೊಳಗೆ ಮಲಗಿರುವ
ನಿನ್ನನ್ನು ಮತ್ತೆ ಮತ್ತೆ ಹೊರಗೆಳೆದು
ಕೊಲ್ಲುವುದೇ
ಎಲ್ಲದಕ್ಕೂ ಪರಿಹಾರವಾದ ಮೇಲೆ.

ಮನುಕುಲದ ಹೂವ
ಹೊಸಕಿರುವವರಿಗಾಗಿ ನಾವೀಗ
ಗುಡಿ ಕಟ್ಟುತಿದ್ದೇವೆ.
ನೀನು ಮೊದಲಿನಿಂದಲೂ
ಬೀದಿಯಲ್ಲೇ ಕುಳಿತವನು
ಅಲ್ಲೇ ಮಲಗಿದವನು,
ನಿನಗೆ ಬೇಸರವಾಗಲಿಕ್ಕಿಲ್ಲ;
ನಿನ್ನನ್ನಲ್ಲೇ ಪ್ರತಿಷ್ಟಾಪಿಸಿದ್ದೇವೆ.

ನಿನ್ನ ಕೋಲಿಗೆ ಹೆದರುವವರು
ಇಲ್ಲಿ ಯಾರೂ ಉಳಿದಿಲ್ಲ;
ನಾವೆಲ್ಲಾ ಕೋವಿಯನ್ನು
ಅಪ್ಪಿಕೊಂಡಿದ್ದೇವೆ.



Sunday 2 August 2015

ಮೋಡ ಸರಿದು ಬೆಳಕು ಮೂಡಿ
ಸೂರ್ಯ ಬಂದಾನಲ್ಲೋ
ಆಸೆಯ ಸೂರ್ಯ ಬಂದಾನಲ್ಲೋ||

ಬಾನ ಸೆರೆಯೊಡೆದು
ಇಳೆಯ ಸೆಳೆಗೇ ಸೋತು
ಹೊಸತನದ ಮಧುವಾ ಚೆಲ್ಲಿ|
ಇರುಳ ಕನಸ  ಕಳೆದು
ಬಾಳಿನರ್ಥವ ತೆರೆದ
ಚೆಲುವಾದ ರಂಗಾವಲ್ಲಿ||

ಒಲವ ಮಳೆಯೊಳಗೆ
ಬಿಸಿಲ ಬಯಕೆಯು ಕಾಡಿ
ಮೋಹಕ ಕಾಮನಬಿಲ್ಲು|
ಮಂಜು ಪರದೆಯ ಸರಿಸಿ
ಇರುವ ಅರಿವನು ಬೆಳಗೋ
ಇದು ನಿಜವು ದೇವರ ಸೊಲ್ಲು||


                            ರವೀಂದ್ರ ನಾಯಕ್

Friday 31 July 2015

ನಭದಲ್ಲಿ ನೋಡು ಹೊಳೆಯುತ್ತಿದೆ ತಾರೆ
ನನ್ನ ಕಾಂತೆ ನೋಡು ಬಾರೆ|

ಹೊಸಬಾಳ ಹೊಸ್ತಿಲಲಿ ಇಂದು
ಹಾರೈಕೆಯ ಮಳೆಯಲ್ಲಿ ಮಿಂದು|
ಏರುತ್ತಿದೆ ನೋಡು ನನ್ನಲಿ ಆವೇಗ
ಓ ಮೇಘ, ನೋಡು ಬೇಗ||

ನವಯುಗದ ಆರಂಭವ ನೋಡು
ಹೆಜ್ಜೆ ಹೆಜ್ಜೆಯು ಕೂಡೆ ಹಾಡು|
ಈ ಯುಗಳ ಗೀತೆಯ ಪಲ್ಲವಿಯು ನೀನೆ
ನೋಡು ನಲ್ಲೆ,ನೀನು ಇಲ್ಲೆ||

ಭರವಸೆಗಳ ಬೆಳಕಾಗಿ ನೀನು
ಜೊತೆಯಾಗಿರಲು ಇನ್ನೇನು|
ನಗು ಚೆಲ್ಲುವ ಮೊಗವು ಹಾಲ್ಜೇನ ಸವಿಯು
ನಿನ್ನ ಒಲವು, ಬಾಳ ಸಿಹಿಯು||
ಎಲ್ಲೇ ನನ್ನವನು,ಸಖಿ?
ಬಾಳನು ಬೆಳಗುವ ಶಶಿಮುಖನು||

ಪ್ರೇಮದ ಕಿಡಿಯನು ಹೊತ್ತಿಸಿ ಕಾಡುವ
ವಿರಹದಿ ಬೇಯುವ ಚಂದವ ನೋಡುವ|
ಮನದ ಬಯಕೆಯ ತನುವಲಿ ಅರಸುವ
ಒಲವಲಿ ಮುದ್ದಿಸಿ ತೋಳಲು ಬಳಸುವ||

ರಾಧೆಯ ಒಲವಲಿ ಜಗವನೆ ಮರೆಯುವ
ಕಣ್ಮನ ಸೆಳೆಯುವ ರೂಪಿನ ಒಡೆಯನ|
ಚೆಲುವಿನ ನೀರೆಯ ಮನವನು ಕದಿಯುವ
ಮೋಹನ ಮುರಳಿಯ ಗಾನದ ಸೊಬಗಿನ||

ಗಂಗೆಯ ತಂಪನು ಮುಡಿಯಲಿ ಧರಿಸಿಹ
ಹಾಲಾಹಲವ ನಗುತಲಿ ಕುಡಿದಿಹ|
ಭಕುತರ ಪ್ರೀತಿಗೆ ಕ್ಷಣದಲಿ ಕರಗುವ
ವರಗಳ ನೀಡುವ ಸುಂದರ ಶಿವನ||


Friday 24 July 2015

ತಿರುಗುತ್ತಿರುವ ಕಾಲವನ್ನು ನಿಲ್ಲಿಸಿ
ಕೇಳಬೇಕಿದೆ ಈಗ,
ಮುಂದೆಯೂ ಕುಲದ
ಹುಟ್ಟಿನ ಮೂಲ ಕೆದಕುವುದಾದರೆ
ನನಗಿಷ್ಟೇ ಸಾಕು;
ನಿನ್ನೊಂದಿಗೆ ಸಾಗುವುದು
ಇನ್ನು ಸಾಧ್ಯವಿಲ್ಲ.

ಅನುಕಂಪದ ಕಣ್ಣುಗಳ
ದೃಷ್ಟಿ ತೆಗೆಯದ ಹೊರತು;
ಇಲ್ಲಿ ಬದುಕು ಸುಲಭವಲ್ಲ. 

Thursday 23 July 2015

ಎದೆಯ ಒಲವ ಪಾತ್ರೆ
ಬರಿದಾಗಿದೆ;
ಒಳಗೆಲ್ಲಾ ಭಣ ಭಣ
ಪಸೆಯಿಲ್ಲದ ಮರುಭೂಮಿ.

ನೀನೆದ್ದು ಹೋದ ಮೇಲೆ
ಹೊಸದಾಗಿ ಏನೂ ಬೆಳೆದಿಲ್ಲ;
ಮತ್ತೆ ಹಸನು ಮಾಡಿ ಬಿತ್ತಿದರೂ
ಈ ನೆಲದಲ್ಲಿ
ಮೊಳಕೆಯೊಡೆದೀತು ಅಂತ
ಯಾವ ಖಾತರಿಯೂ ಇಲ್ಲ.

* * * * * * *

ಈ ಬೆಳದಿಂಗಳನ್ನು
ಸ್ವಲ್ಪ ಸ್ವಲ್ಪವೇ ಒಳಗಿಳಿಸಿಕೊಳ್ಳಬೇಕು;
ಬೆಳೆಯುವ ಕಡಿಯುವ
ತೇಪೆ ಹಚ್ಚುವ
ಅದೇ ಅದೇ ಕೆಲಸವನ್ನೆಲ್ಲಾ
ಬೆಳಕಿಗೇ ಬಿಟ್ಟು ಕೊಟ್ಟು.

ಅಷ್ಟಕ್ಕೂ ಬದುಕೆಂದರೆ
ಬರೇ ಇಷ್ಟೇ ಅಲ್ಲವಲ್ಲ;
ಗೋರಿ ತಬ್ಬಿದ ಗಿಡದಲ್ಲೂ
ಹೂ ಅರಳುತ್ತದೆ
ಅಂದ ಮೇಲೆ?.



Thursday 16 July 2015

ರಾಧೇಯ


ಹುಟ್ಟು ನನ್ನ ಕೈಯಲ್ಲಿರಲಿಲ್ಲ;
ನೀನು ಹೆತ್ತು
ಬೀದಿಗೆ ಹಾಕಿದಾಗಲೇ
ಅಮ್ಮ
ಸತ್ತುಹೋದಳು.

ಆದರೆ ಬದುಕು
ನನ್ನ ಕೈಯಲ್ಲಿತ್ತು.
ದಡ ಸೇರಲು ಆಸರೆಯಿತ್ತು.

ಈಗ ನೀನು ಬಂದು
ಮಗನೇ, ಅಂದಾಗಲೇ
ಮತ್ತೆ
'ನನ್ನ ಅಮ್ಮ'
 ಸತ್ತು ಹೋದಳು.

Tuesday 14 July 2015

ಬದುಕು ಮತ್ತು ಬಯಲು



೧.
ಸದಾ
ಕತ್ತಲಲ್ಲಿ ಬದುಕುವ
ಬಾವಲಿಗೆ
ಬೆಳಕಿನ ಹಂಗಿಲ್ಲ;
ಬಯಲ ಬೆಳಕೆಲ್ಲಾ
ಒಳಗೆ ತುಂಬಿದರೂ
ನನಗೆ
ಕಣ್ಣು ಕಾಣುತ್ತಿಲ್ಲ.

೨.
ಬಯಲಿನಲ್ಲಿ
ಮರವೊಂದು ಎಲೆಗಳನ್ನುದುರಿಸಿ
ಬೋಳಾಗಿ ನಿಂತಿತ್ತು ;
ಥೇಟ್
ಒಂಟಿ ಕಾಲಲ್ಲಿ ನಿಂತ
ಭೈರಾಗಿಯಂತೆ.

೩.
ಮೊಳಕೆಯೊಡೆದ ಬೀಜದ
ಸಂಭ್ರಮ ಅರಿವಾಗೋದು
ಬಯಲಿನಲ್ಲಿಯೇ,
ಹೊರತು
ಮಣ್ಣಿನ ಒಳಗಲ್ಲ.

೪.
ಬಯಲಾಗೋದು ಅಂದರೆ
ಬರೀ ಬೆತ್ತಲಾಗೋದಲ್ಲ;
ತನ್ನೊಳಗನ್ನು ತೆರೆದು
ಕೀರ್ತಿ ಕಿರೀಟ ಕಳಚಿ
ತನ್ನನ್ನು ತಾನೇ
ಕಳೆದುಕೊಳ್ಳುವ ಆನಂದ.

Monday 13 July 2015

ಅನ್ನ
ಪೂರ್ತಿ ಬೇಯುವ ಮೊದಲೇ
ಮಡಕೆಯ ನೀರು ಖಾಲಿ;
ಪಾಲಿಗೆ ದಕ್ಕಿದ್ದು
ಅರೆ ಬೆಂದ ಅನ್ನ.

ಅದು
ನಾಲಗೆಗೆ ರುಚಿಸುವಷ್ಟು
ಹಸಿವೆ ಇಲ್ಲ;
ಹಾಗೆಂದು
ಬಿಟ್ಟರೆ ಇಲ್ಲಿ ಬೇರೆ
ಗತಿಯೂ ಇಲ್ಲ.

ಬಲವಂತದಿಂದ ತಿನ್ನುವ
ನಾನು;
ತೆನಲಿರಾಮನ ಬೆಕ್ಕು.

ಹಸಿವೆ ತೀರಿತು,
ಅಂದುಕೊಂಡದ್ದೇ ಸುಳ್ಳು ;
ಮತ್ತೆ
ಒಲೆ ಉರಿಸಲೇ ಬೇಕು,
ಪೂರ್ತಿ ಬೇಯುವ ತನಕ
ಇಲ್ಲಿ ಕಾಯಲೇಬೇಕು.

Saturday 11 July 2015

ಇತ್ತೀಚೆಗೆ ಯಾಕೋ ಗೊತ್ತಿಲ್ಲ
ಕನ್ನಡಿಯ ಎದುರು ನಿಲ್ಲುವಾಗೆಲ್ಲಾ
ಗಲಿಬಿಲಿಗೊಳ್ಳುತ್ತೇನೆ,
ಅಲ್ಲಿ ಕಾಣುವ ನನ್ನದಲ್ಲದ ಬಿಂಬ
ಸಿಡುಕು ಮುಖ;ನಗುವಿಲ್ಲದ ಗೆರೆಗಳು
ಗಾಯದ ಕಲೆಗಳು;ಚಂಚಲ ಕಣ್ಣುಗಳಲ್ಲಿ
ನನ್ನನ್ನು ಕಾಣದೇ ಹತಾಶೆಗೊಳ್ಳುತ್ತೇನೆ.

ನಾನು ಕಂಡ ರೂಪ ಯಾರದ್ದು?
ಹೊರಗೆ ನಿಂತಿರುವ
ನಾನು ಯಾರು?
ಎಲ್ಲವೂ ಗೋಜಲು.
ಅದು ನಾನಲ್ಲ; ನಾನೆ?
ಅಥವಾ
ಮುಖವಾಡಗಳ ಮೊರೆಹೋಗಿದ್ದೇನಾ?
ಬರಿಯ ಪ್ರಶ್ನೆಗಳು.

ಬದುಕಿನಲ್ಲಿ ಕಳೆದುಹೋಗಿ
ಬಯಲನ್ನು ಮರೆತ
ನನ್ನ ಪರಿಚಯವೇ ನನಗಿಲ್ಲ.
ಇನ್ನು ಲೋಕಕ್ಕೆ ಹೇಗೆ ಹೇಳಲಿ
ನನ್ನ ಬಗ್ಗೆ?
ನೀರಿನಲ್ಲಿ ಕಲಸಿ ಹೋದ
ನೂರು ಬಣ್ಣಗಳಲ್ಲಿ
ನನ್ನ ಮೂಲ ಯಾವುದು?

ಜರಡಿಯಲ್ಲಿ ಸೋಸಿದರೂ
ಬಣ್ಣದ ನೀರು ಸೋರಿ ಹೋಗುತ್ತಿದೆ.

ಲೋಕದ ಕಣ್ಣಿನಲ್ಲಿ
ನನ್ನನ್ನು ನೋಡಿ ಸುಸ್ತಾಗಿದ್ದೇನೆ;
ಸರಿಗಳ ಸಿದ್ಧ ಮಾದರಿಗಳಿಗೆ
ಹಲವು ಬಾರಿ
ರೂಪಾಂತರಗೊಂಡಿದ್ದೇನೆ.

ನನ್ನನ್ನು ಕಾಣಲು
ಮನೆಯಲ್ಲಿನ ಕನ್ನಡಿ ಸಾಲುತ್ತಿಲ್ಲ;
ಲೋಕದ ಕಣ್ಣಿನ ಪೊರೆ ಸರಿಸಿ
ನನ್ನೊಳಗನ್ನು ತೋರಿಸುವ
ಕನ್ನಡಿ ಇಲ್ಲಿ ಸಿಗುತ್ತಿಲ್ಲ.



Wednesday 27 May 2015

ಬೆಳಕಿಗೆ ಕಣ್ಣು ತೆರೆಯುವ
ಮೊದಲೇ ನಾನಾ ದಾರಗಳಿಂದ
ಬಿಗಿದು ಬೀಗ
ಜಡಿಯಲಾಗಿದೆ.
ಎಳೆ ಬಿಸಿಲುಗೂ
ಸುಡುವ ದೇಹಕ್ಕೆ
ಬಲವಂತದ ಬಂಧನ.
ಕಷ್ಟಪಟ್ಟು ಕಣ್ಣು ತೆರೆದು
ನೋಡುತ್ತೇನೆ,
ಎದುರಿಗೆ ಚಿತ್ರ  ವಿಚಿತ್ರ
ವೇಷಭೂಷಣದ,
ಬೇರೆ ಬೇರೆ ಬಣ್ಣಗಳ ಜನರು.
ಅವರ ಕೈಗಳಲ್ಲಿ ಬೇರೆ ಬೇರೆ
ಕೀಲಿ ಕೈಗಳು.

ಪ್ರಶ್ನಾರ್ಥಕವಾಗಿ ನೋಡಿದೆ,
'ಯಾವ ಕೀಲಿಕೈಯಾದರೂ
ಆರಿಸಿಕೋ,
ಅವರು ನಿನ್ನನ್ನು ಬಿಡಿಸಿ
ತಮ್ಮೊಂದಿಗೆ ಕರೆದೊಯ್ಯುತ್ತಾರೆ,
ತಮ್ಮವರನ್ನಾಗಿ ಮಾಡುತ್ತಾರೆ'
ಯಾರ ಮಾತೋ ತಿಳಿಯಲಿಲ್ಲ.

ಬಲವಂತದ ಆಯ್ಕೆಯ
ಈ ಪ್ರಕ್ರಿಯೆ
ಬಿಡುಗಡೆಯೋ, ಮತ್ತೆ
ಬಂಧನವೋ
ಅರಿಯದ ಸ್ಥಿತಿ.

ಯಾರ ಬಂಧಿಯಾಗಲೂ
ಮನಸ್ಸಾಗದೇ,
ಲೋಕಕ್ಕೂ ಬರಲಾಗದೇ,
ತೆರೆದ ಕಣ್ಣು
ಮತ್ತೆ ಮುಚ್ಚಿದವು;
ಮತ್ತೆಂದೂ ತೆರೆಯದಂತೆ.

ಯಾರದ್ದೋ ಬದುಕನ್ನು
ನೋಡುವಾಗ
ಯಾರದ್ದೋ ಮಾತುಗಳನ್ನು
ಕೇಳುವಾಗ
'ಅವರು' ಇಲ್ಲವಾದುದಕ್ಕೆ
ಇವರು ಹಂಬಲಿಸುವಾಗ
ನನಗೂ ಉತ್ಕಟವಾಗಿ
ಅನ್ನಿಸುವುದುಂಟು;
ನನಗೂ ಎಂದು
ಆ ' ಇಲ್ಲವಾಗುವಿಕೆ'
ಆ ಶೂನ್ಯ
ಲಭ್ಯವಾಗುವುದೆಂದು?.

ಬಹುಶಃ ಆಗಲಾದರೂ ನಾನು
'ಅವರನ್ನು'
ಉತ್ಕಟವಾಗಿ ಪ್ರೀತಿಸಬಹುದು,
ಅವರಿಗಾಗಿ
ಹಂಬಲಿಸಬಹುದು,
ಅವರು ಇಲ್ಲದಿರುವುದಕ್ಕೆ;
ಎಲ್ಲರೂ ಗಮನಿಸುವಂತೆ
ಕೊರಗಬಹುದು ಎಂದು.

ಕಣ್ಣೆದುರಿರುವಾಗ ಯಾಕೋ
ಭಾವ ಉಕ್ಕುತ್ತಿಲ್ಲ.
ನಡೆವಾಗ ಮುಗಿದೇ
ತೀರಬೇಕು
ಈ ಸೊಗಸು ಕಾಲ;
ಇನ್ನೊಂದಿಷ್ಟು ಉಳಿದು
ಕಾಲು ಸೋತು ಕುಳಿತಾಗ,
ಓಡುವ ಕಾಲುಗಳ
ವ್ಯಂಗ್ಯ ನೋಟದಲ್ಲಿ
ಕ್ರೂರವಾದೀತು
ಅದೇ ಕಾಲ.


ನನಗೆ ಎಲ್ಲರ ಬದುಕನ್ನು
ಇಣುಕಿ ನೋಡುವ
ಕೆಟ್ಟ ಚಪಲ.
ಇಲ್ಲಿ ನನಗೆ ಸಿಕ್ಕದ್ದು,
ಸಿಕ್ಕಿಯೂ ಇಷ್ಟವಿಲ್ಲದ್ದು;
ಯಾರಿಗೆಲ್ಲಾ ಸಿಕ್ಕಿದೆಯೋ?
ಇದ್ದರೆ ಅದು ಎಂಥದ್ದು,
ಎಂದು ಕಾಣೋ ಆತುರ.

ಆದರೆ ಪ್ರತೀ ಸಲವೂ
ಹೀಗೆ ತಡಕಾಡುವಾಗ ಅಚ್ಚರಿಗೊಳ್ಳುತ್ತೇನೆ.
ಅವರ ಆಸ್ತಿಯನ್ನು
ಆಸೆಯಿಂದ ನೋಡುವಾಗ ,
ಅಲ್ಲಿ ದಕ್ಕಿದ ವಸ್ತುವಿಗಾಗಿ
ಅಸೂಯೆ ಪಡುವಾಗ
ಅವರನ್ನು ಹುಡುಕುತ್ತೇನೆ.
ಎಲ್ಲಾ ಇದ್ದರೂ
ಅವರು ಮಾತ್ರ ಅಲ್ಲಿ
ಸಿಗುವುದೇ ಇಲ್ಲ.
ಅವರು ಅವರ ಪರಿಧಿಯನ್ನು ದಾಟಿ
ಇನ್ಯಾರದೋ ಬದುಕನ್ನು
ಇಣುಕುತಿರುತ್ತಾರೆ...!

ಓ ಬದುಕೇ
ನೀನೇಕೆ ಹೀಗೆ?.

Friday 6 February 2015

ಅವಳು ಯಾರೊಂದಿಗೋ ಮಾತಾಡುತ್ತಿದ್ದಾಳೆ
ಜೋರಾಗಿ ಇರಬೇಕು,
ಅವಳ ಭಂಗಿ ನೋಡಿದಾಗ
ಹಾಗೆಯೇ ಅನಿಸುತ್ತಿದೆ.
ನಾನೋ ಪಿಳಿಪಳಿ ನೋಡುತ್ತಲೇ ಇದ್ದೇನೆ.
ಕಿವಿ ಮಂದವಾಗಿದೆ,
ದೃಷ್ಟಿ ಮಸುಕಾದರೂ
ಕಣ್ಣುಗಳು ನಿರೀಕ್ಷೆಯಲ್ಲಿವೆ.
ಅವಳ ಪ್ರತಿ ಮಾತುಗಳನ್ನೂ ನೋಡುತ್ತಿದ್ದೇನೆ,
ಹಾರುವ ಮುಂಗುರಳನ್ನು ಕಿವಿಯ ಹಿಂದೆ
ಸೇರಿಸುವಾಗಲೊಮ್ಮೆ ನನ್ನನ್ನು ನೋಡುತ್ತಾಳೆ.
ತುಟಿಯ ಚಲನೆ,ಕೈಗಳ ಮಾಟ
ನಗು,ಬೇಸರದ ನೆರಿಗೆಗಳು;
ಬಹುಶಃ ನನ್ನ ಬಗ್ಗೆಯೇ ಮಾತಾಡುತ್ತಿದ್ದಾಳೆ.

ಗುೂ ನನಗೂ ಅದೇ ಬೇಕು,
ಜಗತ್ತು ನನ್ನ ಕುರಿತೇ ಮಾತಾಡಬೇಕು,
ತಲೆ ಕೆಡಿಸಿಕೊಳ್ಳಬೇಕು.
ಅವರೆಲ್ಲರ ದಿನಚರಿಯಲ್ಲಿ ನಾನಿರಬೇಕು.
ನೀವು ಬೇಕಾದರೆ ಚಪಲವೆನ್ನಿ ಇದನ್ನೂ,
ಅವಳನ್ನು ನೋಡುವುದೂ.
ನಾನು ನೋಡುತ್ತಲೇ ಇದ್ದೇನೆ.

ಇಲ್ಲಿ ಕುಳಿತೇ ಕತ್ತಲಾಯಿತು
ಅವಳು ಮಾತು ನಿಲ್ಲಿಸಿದಳು
ಕೆಲಸದ ಅವಧಿ ಮುಗಿದಿರಬೇಕು.
ಈಗ ಬಂದ ದಪ್ಪ ಗಂಡಸು ಖಂಡಿತವಾಗಿಯೂ
ನನ್ನ ಬಗ್ಗೆ ಮಾತಾಡುತ್ತಿಲ್ಲ.
ಬೇಸರ ಬರುವ ಮೊದಲೇ
 ಹೊರಟುಬಿಡುತ್ತೆೇನೆ.
ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳದ
ಜನರೊಂದಿಗೆ ನನಗೇನು ಕೆಲಸ?.