Sunday 3 December 2017

ಪಯಣಿಸುವ ವೇಳೆಯಲಿ...

ಹೆಚ್ಚು ಕಡಿಮೆ ಖಾಲಿಯೇ ಇದ್ದ ಬಸ್ಸಿನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತಿದ್ದ ನನ್ನಲ್ಲೂ ಖಾಲಿ ಖಾಲಿಯಾದ ಭಾವ.ಹೊರಗೆ ಓಡುತ್ತಿರುವ ಸರ್ವ ಸೃಷ್ಟಿಯ ನಡುವೆಯೂ ನಾನು ಸ್ತಬ್ದವಾಗಿ ಕುಳಿತಿದ್ದೆ ಥೇಟ್ ನನ್ನ ಯೋಚನೆಗಳಂತೆ.ಕಾಲದೊಂದಿಗೆ ಯಾವತ್ತೂ ಹೆಜ್ಜೆ ಹಾಕಿಯೇ ಇಲ್ಲ ನೀನು... ಅನ್ನುವ ಅಮ್ಮನ ಮಾತು ತಲೆಯಲ್ಲಿ ಯಾವತ್ತೂ ಕೊರೆಯುವ ಗುಂಗೀ ಹುಳ. ಯೋಚನೆಗಳ‌ ನಡುವೆಯೇ ನನ್ನ ಹತ್ತಿರದ ಖಾಲಿ ಸೀಟ್ ನಲ್ಲಿ ಅವಳು ಬಂದು ಕುಳಿತುಕೊಂಡದ್ದು ಅರಿವಾಗಿ ಅವಳತ್ತ ತಿರುಗಿದೆ.ಒಂದು ನಗೆಯ ವಿನಿಮಯವಾದಾಗಲೇ, ಅರೇ...ಪರಿಚಯದವಳೇ?, ಹೆಸರು ನೆನಪಾಗುತಿಲ್ವೇ...ನನ್ನನ್ನು ನೋಡಿಯೇ ಹತ್ತಿರ ಕುಳಿತಿರ್ಬೇಕು...ಅಂದುಕೊಳ್ಳುವಷ್ಟರಲ್ಲಿಯೇ, "ಹಾಯ್'' ಅಂದ್ಳು. ಈಗ ತಾನೇ ಇಣುಕುತ್ತಿರುವ ಡಿಸೆಂಬರ್ ಚಳಿಗೆ ಮುದುಡಿ ಕುಳಿತ ನನ್ನ ಮೇಲೆ ಸೂರ್ಯನ ಬೆಚ್ಚಗಿನ ಎಳೆಯ ಕಿರಣ ಬಿದ್ದಂಗಾಯ್ತು. ಸ್ವಲ್ವವೇ ಅರಳಿ ಕುಳಿತೆ... ಇಬ್ಬನಿ ಬಿದ್ದು ಮುದುಡಿದ ನಾಚಿಗೆ ಮುಳ್ಳು ಬಿಸಿಲಿಗೆ ಅರಳಿದಂತೆ.ಪೆದ್ದು ಪೆದ್ದಾಗಿ ನಕ್ಕೆ. ''ಯಾಕೆ ಶಶಿ...ನನ್ನ ಗುರ್ತ ಸಿಗ್ಲಿಲ್ಲಾ?..'' ಅಂದಾಗ ಯಾರಪ್ಪಾ ಇವಳು? ಎಲ್ಲೋ ನೋಡಿದ ಹಾಗೇ ಇದೆ, ನನ್ನ ಹೆಸ್ರು ಬೇರೆ ಕರಿತಿದ್ದಾಳೆ...ಏನ್ ಹೇಳೋದೀಗ...ಅಂತ ಚಡಪಡಿಸುತ್ತಿರುವಾಗ ನನಗೆ ಕಷ್ಟವೇ ಕೊಡದೇ, " ನಾನು ಕಣೋ, ಸ್ಮಿತಾ...ನಿನ್ನದೇ ಕಾಲೇಜ್, ಕಲಾ ವಿಭಾಗ" ಅಂದಾಗಲೂ ಎಲ್ಲಿ ನೋಡಿದ್ದು ಅಂತ ಸ್ಪಷ್ಟವಾಗದೇ ಯೋಚಿಸತೊಡಗಿದೆ.ನಾನು ಮೌನವಾದದ್ದು ನೋಡಿ ಕೊಂಚ ಹತಾಶಳಾದಂತೆ ಕಂಡ ಅವಳು " ಯಾಕೆ, ಬೇರೆ ಸೀಟ್ ಗೆ ಹೋಗ್ಬೇಕಾ?..." ಅಂದ್ಳು. "ಹೇ..ಹೇ..ಬೇಡ ಬೇಡ, ನನಗೂ ಕಂಪೆನಿ ಬೇಕು" ಅನ್ನೋದಷ್ಟೇ ಆಯಿತು ನನ್ನಿಂದ...ಪುಣ್ಯಕ್ಕೆ ಸೀಟ್ ಬಿಟ್ಟು ಹೋಗ್ಲಿಲ್ಲ.ಆದರೆ ಇಷ್ಟು ಹೇಳಿದ ಮೇಲೂ ನನ್ನಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದದ್ದು ಬೇಸರವಾಗಿರಬೇಕು ಅವಳಿಗೆ. ಮತ್ತೆ ಮಾತಾಡದೇ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಮೊಬೈಲ್ನಲ್ಲಿ ಬ್ಯುಸಿ ಆದಳು.

ಚೆಲುವೆಯ ಸಾನಿಧ್ಯ ಆಸ್ವಾದಿಸುವುದನ್ನು ಬಿಟ್ಟು ಮತ್ತೆ‌ ಮನಸ್ಸು ಯೋಚನೆಯ ಬೀದಿಗಿಳಿಯಿತು.ಹುಡುಗಿಯರೆಂದರೆ ಮಾರು ದೂರ ಓಡುವ ನನ್ನ ಮೊಬೈಲ್ ಕಾಂಟೆಕ್ಟ್ ಲಿಸ್ಟ್ ನಲ್ಲಿ ಹುಡುಗಿಯರ ನಂಬರುಗಳೇ ಇಲ್ಲ.ಎಲ್ಲೋ ಮರೆಯಲ್ಲಿ ನಿಂತು ಹಕ್ಕಿ ವೀಕ್ಷಣೆಯ ಅಭ್ಯಾಸವಿದ್ದರೂ ಎದುರಲ್ಲಿ ನಿಂತು ಮಾತಾಡುವಾಗ ನಾನೀಗಲೂ ಉತ್ತರಕುಮಾರನೇ.ನನ್ನ ಕಾಲೇಜ್ ಫ್ರೆಂಡ್ಸ್ ಕಾಲೇಜು ಕಾರಿಡಾರ್ ನಲ್ಲಿ ಹುಡುಗಿಯರ ಜೊತೆಗೆ, ಬಸ್ ಸ್ಟ್ಯಾಂಡ್ನಲ್ಲಿ ಪಾರ್ಕ್ನಲ್ಲಿ  ತಮ್ಮ ತಮ್ಮ ಗರ್ಲ್ಸ್ ಫ್ರೆಂಡ್ಸ್ ಗಳ ಜೊತೆಯಲ್ಲಿ ಚಕ್ಕಂದವಾಡುವಾಗ ದೂರದಲ್ಲಿ ನೋಡಿ ಅಸೂಯೆಯಲ್ಲಿ ವಿಲ ವಿಲ ಒದ್ದಾಡಿದರೂ ಅವಕಾಶವಿದ್ದಾಗ ಸದುಪಯೋಗ ಮಾಡಿಕೊಳ್ಳುವ ಕಲೆಯೂ ಸಿದ್ಧಿಸಿಲ್ಲ.ಎಲ್ಲರೂ ಹೇಳುವಂತೆ ನಾನೊಬ್ಬ ರಿಜಿಡ್ ವ್ಯಕ್ತಿತ್ವದವನು.ಸುಲಭವಾಗಿ ಯಾರೊಂದಿಗೂ ಬೆರೆಯಲಾರದ ಶುಕಮುನಿ.ಎಲ್ಲಾ ಯೋಚನೆಗಳಿಂದ ಹೊರಬಂದು ಅವಳತ್ತ ನೋಡಿದರೆ ಸೀಟಿಗೊರಗಿ ಕಣ್ಣು‌ಮಚ್ಚಿದ್ದಾಳೆ. ಬಹುಶಃ ಯಾವುದೋ ಹಾಡಿನ ಗುಂಗಲ್ಲಿರಬೇಕು.ಹಳದಿ ಟೀ ಶರ್ಟ್ ನೀಲಿ ಜೀನ್ಸ್ ತೊಟ್ಟಿರುವ ಬಳುಕುವ ನೀಳ‌ ಶರೀರ.ಮುಂಗುರುಳೊಂದು ಅವಳ ಕೆನ್ನೆಯ ಮೇಲೆ ಹಿತವಾಗಿ ಲಾಸ್ಯವಾಡುತ್ತಿದೆ.ಮುಚ್ಚಿದ ರೆಪ್ಪೆಗಳಡಿಯಲ್ಲಿ ಚಂಚಲ ಕಣ್ಣುಗಳು ಕದಲಿದಂತೆ ಭಾಸವಾಗುತ್ತಿದೆ.ಮಿತವಾಗಿ ತುಟಿಗೆ ಮೆತ್ತಿದ ಗುಲಾಬಿ ರಂಗಿನಲ್ಲಿ ಆಹ್ವಾನ ಎದ್ದು ಕಾಣುತ್ತಿದೆ.ಅವಳು ನೋಡದಿದ್ದರೂ ಅವಳನ್ನು ನೋಡಲು ಭಯವಾಗಿ ಮತ್ತೆ ಕಿಟಕಿಯ ಹೊರಗೆ ಇಣುಕಿದರೂ ನೋಟದಲ್ಲಿ ತುಂಬಿಕೊಂಡ ಒಲುಮೆಯ ತುಂಬು ಪೌರ್ಣಿಮೆ! ಸಂಜೆಯ ಹಿತವಾದ ತಂಗಾಳಿ ಮೈಗೆ ಸೋಕಿ ಹುಚ್ಚು ಕಾಮನೆಗಳನ್ನು ಕೆರಳಿಸುತ್ತಿದೆ.ಹತ್ತಿರವೇ ಕುಳಿತಿದ್ದರೂ ಅದೆಷ್ಟು ದೂರ ನಮ್ಮ ನಡುವೆ. ಕಿಟಕಿ ಬಿಟ್ಟು ಅವಳೆಡೆಗೆ ಸರಿದು ಕುಳಿತೆ.ಹಿತವಾಗಿ ಮೈ ತಾಗುವಷ್ಟು ಹತ್ತಿರ.ಅವಳನ್ನು ಸೋಕಿ ಬರುತ್ತಿದ್ದ ತಂಗಾಳಿಯಿಂದ ಮನದಲ್ಲಿ ಮಲ್ಲಿಗೆ ಅರಳುತ್ತಿರುವ ಘಮ!.ಯಾವುದೋ ದಿವ್ಯ ಘಳಿಗೆಯಲ್ಲಿ ಅವಳ ಕೈಗೆ ಕೈ ಸೋಕಿದಾಗ ಮೃದುತ್ವದ ಸ್ಪರ್ಶದಲ್ಲಿ ಸಾವಿರ ದೀಪಗಳು ಒಮ್ಮೆಲೇ ಉರಿದಂತೆ ಪುಳಕಿತನಾದೆ.

ಯಾರಪ್ಪಾ ಈ ಸ್ಮಿತಾ?...ನಿಲ್ಲದ ಹುಡುಕಾಟದಲ್ಲಿ ತಲೆ  ಬಿಸಿಯೇರಿತು.ಯಾರೇ ಆಗಲಿ, ಅವಳು ಇಷ್ಟು ಆತ್ಮೀಯತೆಯಲ್ಲಿ ಮಾತಾಡುವಾಗ, ನಗುವಾಗ ನಾನು ಸುಮ್ಮನಿರಬಾರದಿತ್ತು.ಏನಂದುಕೊಂಡ್ಳೋ ನನ್ನ ಬಗ್ಗೆ....ಹತ್ತಿರವೇ ಕುಳಿತಿದ್ದಾಳೆ. ಮಾತಾಡಿಸಿಯೇ ಬಿಡುವ ಅಂತ ಗಟ್ಟಿ ನಿರ್ಧಾರ ಮಾಡಿ ಅವಳತ್ತ ತಿರುಗಿದರೆ ಅವಳಿನ್ನೂ ಮುಚ್ಚಿದ ಕಣ್ಣು ತೆರೆದಿಲ್ಲ.ಸರಿ, ಎದ್ದ ಕೂಡಲೇ ಮಾತಾಡಿಸುವ, ಯಾವ ಸ್ಮಿತಾಳೇ ಆಗಿರಲಿ...ನನ್ನ ಸ್ಮಿತಾವಾದರೆ ಅದೆಷ್ಟು ಹಿತ ಅಂತ ಯೋಚಿಸಿ ಅವಳು ಕಣ್ತೆರೆಯುವ ದಿವ್ಯ ಘಳಿಗೆಯನ್ನೇ ಕಾಯುತ್ತಾ ಕುಳಿತೆ.

ಬಸ್ಸು ಬೈಲೂರು ಸ್ಟ್ಯಾಂಡ್ ನಲ್ಲಿ ನಿಲ್ಲುತ್ತಲೇ ಸಡನ್ ಆಗಿ ಎದ್ದು ನಿಂತಳು.ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ಎಲ್ಲಿಲ್ಲದ ಧೈರ್ಯ ಒಗ್ಗೂಡಿಸಿ ತುಟಿಯ ಮೇಲೆ ಬಲವಂತದ ನಗು ಚೆಲ್ಲಿ "ಸ್ಮಿತಾ...." ಅಂದೆ. ಮುಂದೆ ಹೋದವಳು ಒಂದು ಕ್ಷಣ ನಿಂತು, ನಂತರ ನನ್ನ ಕಡೆಗೆ ತಿರುಗಿ ಹತ್ತಿರ ಬಂದು,
" ಕ್ಷಮಿಸಿ, ನನ್ನ ಹೆಸರು ಸ್ಮಿತಾ ಅಲ್ಲ.ಮಮತ ಅಂತ. ನನಗೆ ನಿಮ್ಮ ಪರಿಚಯವಿಲ್ಲ. ಹಿಂದಿನ ಸೀಟ್ ನಲ್ಲಿ ಎರಡು ಸ್ಟಾಪ್ ಹಿಂದೆ ಇಳಿದ ವ್ಯಕ್ತಿ ನನ್ನನ್ನು ಫಾಲೋ ಮಾಡ್ತಿದ್ದ. ಓಡಿ ಓಡಿ ಸಿಕ್ಕಿದ ಈ ಬಸ್ ಹತ್ತಿದೆ.ಅವನೂ ಹತ್ತಿದ. ಏನೂ ತೋಚದೇ ನಿಮ್ಮ ಹತ್ತಿರ ಕುಳಿತೆ.ನೀವೆಲ್ಲೋ ನೋಡ್ತಿದ್ರಿ.ನಿಮ್ಮ ಕಾಲೇಜ್ ಐಡಿಯಿಂದ ಹೆಸರು ನೋಡಿ ಮಾತಾಡಿಸಿದೆ. ಇವನ್ಯಾರೋ ಪರಿಚಯದ ಹುಡುಗ ಅಂತ ತಿಳಿದು ಅವನೂ ಇಳಿದು ಹೋದ...ಥ್ಯಾಂಕ್ಯೂ" ಅಂತ ಹೇಳಿ ಮತ್ತೆ ಹಿಂದೆ ತಿರುಗದೇ,ಒಲುಮೆಯ ಭಾಗವೇ ಬದುಕಿನಿಂದ ದೂರ ಹೋದಂತೆ ಬಸ್ಸಿನಿಂದ ಇಳಿದು ಹೋದಳು.

ಆವರಿಸಿದ ಗಾಢ ಅಂಧಕಾರದ ಶೂನ್ಯದಲ್ಲಿ ಅವಳು ಇಳಿದು ಹೋದ ದಾರಿಯನ್ನೇ ನೋಡುತ್ತಾ ಕಿಟಕಿಯಿಂದ ಹೊರಗೆ ನೋಡಿದರೆ ಸೃಷ್ಟಿಯೆಲ್ಲಾ ಓಡುತ್ತಿತ್ತು ಯಥಾ ಪ್ರಕಾರ. ಹತ್ತಿರದ ಖಾಲಿ ಸೀಟು ನನ್ನನ್ನು ಅಣಕಿಸಿದಂತೆ ಭಾಸವಾಗಿ ಕುಳಿತಲ್ಲೇ ಸ್ತಬ್ದನಾದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment