Tuesday 20 November 2018

ಪರಿಚಿತರಾಗುವುದೆಂದರೆ ಅದು
ಅಷ್ಟು ಸುಲಭದ ಕೆಲಸವೇ?

ಕೋಟೆ ಬಾಗಿಲು ತೆರೆದು
ಒಳ ಹೊಕ್ಕಾಗಲೂ
ಏಕಾಂಗಿ ಅನ್ನಿಸುವುದಾದರೆ,
ನಾವಿನ್ನೂ
ತೊಟ್ಟಿಕ್ಕುತ್ತಿರುವ ಒಂದೇ ಮಳೆಯ
ಬೇರೆ ಬೇರೆ ಬಿಂದುಗಳು.
ಅಷ್ಟಕ್ಕೂ ನಾವು‌
ಪರಿಚಿತರಾಗಿದ್ದು ಯಾವಾಗ?

ಒಟ್ಟಿಗಿದ್ದಾಗಲೂ
ನಿನ್ನೆಲ್ಲ ಮಾತು ಮೌನ
ಅಸಹನೆ ಕೋಪ
ನನಗರ್ಥವಾಗದೇ ಉಳಿದಿರುವಾಗ
ಪರಿಚಿತರಾಗಿದ್ದೇವೆನ್ನುವುದು
ಹಸಿ ಹಸಿ ಸುಳ್ಳಲ್ಲವೆ?

ನಿನ್ನ  ಬದುಕಿನ ಉತ್ಕಟ
ಕ್ಷಣಗಳಲ್ಲಿ
ತೀವ್ರವಾಗಿ ಕಾಡಿದ ನೆನಪುಗಳಲ್ಲಿ
ನಾನಿಲ್ಲವೆಂಬುದೇ ಸತ್ಯ
ಅನ್ನವುದಾದರೆ
ನಾವಿನ್ನೂ
ಯಾವತ್ತೂ ಸಂಧಿಸದ
ನಿರ್ಜನ ಬೀದಿಯ ಅನಾಮಿಕರು.

ಅದೆಷ್ಟು ಬೆಳಕಿತ್ತು
ಆ ಬೀದಿಯ ತುಂಬಾ.
ಕಣ್ಣಲ್ಲಿ ಹೊಳೆದದ್ದೇ ನೀನು ಮತ್ತು
ತುಂಬಿದ ಬೆಳದಿಂಗಳು!
ಎಲ್ಲವೂ ಎಲ್ಲರಿಗೂ
ಕಾಣುವಂತೆ ಅದೆಷ್ಟು ಸ್ಪಷ್ಟತೆ!
ಅಲ್ಲಿ ಯಾವುದೂ ಅಪರಿಚಿತ
ಅನಿಸಲೇ ಇಲ್ಲ.
ಇದೀಗ,
ಬೆಳಕು ಆರಿದ ಮೇಲೂ
ಆ ಬೀದಿ ಇನ್ನೂ ಪರಿಚಿತವೇ
ಆದರೆ,
ಅಲ್ಲಿ ಸಿಕ್ಕಿದ ನಾವು?

ಅನೇಕದಲ್ಲಿ ಏಕ!
ಅನ್ನವ ಭ್ರಮೆಯಲ್ಲಿ ಸುಖಿಸಿ,
ಅದನ್ನೇ ನಂಬುತ್ತಾ ಬದುಕಿದ್ದೇವೆ ಮತ್ತು
ಬಲು ದೂರ ಜೊತೆಯಾಗಿಯೇ
ಸಾಗಿ ಬಂದಿದ್ದೇವೆ.
ಆದರೆ ನಾವಿಂದೂ
ಒಳಗಿಳಿಯದ,
ಕಲಸಿ ಬಿಳಿಯಾಗದ
ನಿತ್ಯ ನೂತನ ಕಾಮನ ಬಿಲ್ಲು;
ಜಗದ ಕಣ್ಣು ಕುಕ್ಕುವ
ಎಷ್ಟೊಂದು ಬೆರಗಿನ ಬಣ್ಣಗಳು!

ಸಾಕಿನ್ನು,
ಮತ್ತೆ ಅಪರಿಚಿತರಾಗಿಬಿಡಬೇಕು
ಕಳೆದುಹೋದಂತೆ
ಯಾವುದೋ ಹೊಸ ಬೀದಿಯಲ್ಲಿ.
ಮತ್ತೆ ಮತ್ತೆ
ನಿನ್ನಲ್ಲಿ‌ ನನ್ನನ್ನು
ನನ್ನಲ್ಲಿ‌ ನಿನ್ನನ್ನು;
ಹುಡುಕುವ ಸಾರ್ಥಕ
ಸುಖಕ್ಕಾಗಿಯಾದರೂ.

# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Sunday 11 November 2018

ಸ್ವಗತ

ಬರವಣಿಗೆ ಒಂದು ಮೋಹಕ ತಾಲೀಮು ಅಂತ ನವೀನ್ ಹೇಳಿದ್ದು ಕೇಳಿ ಅದನ್ನೇ ವ್ರತದಂತೆ ಪಾಲಿಸಿ ದಿನಾ ಸ್ವಲ್ಪ ಹೊತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಬೇಕು ಅಂತ ಡಿಸೈಡ್ ಮಾಡಿದ್ದೆ.ಸ್ವಲ್ಪ ದಿನ ಅದನ್ನು ಚಾಚೂ ತಪ್ಪದೇ ಪಾಲಿಸಿಕೊಂಡೂ ಬಂದಿದ್ದೆ.ಆದರೆ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾದಂತೆ ಉದಾಸೀನ ಆವರಿಸಿ ಆ ಕ್ರಮ ತಪ್ಪಿಯೇ ಹೋಯಿತು.ಅದಕ್ಕೋ ನಾನು ಆರೋಪಿಸಿಕೊಂಡ ಕಾರಣಗಳು‌ ನೂರಾರು.ಕೆಲಸದ ಒತ್ತಡ, ಮಕ್ಕಳ ನಡುವೆ ಮನೆಯಲ್ಲಿ ಯಾವುದೇ ಬಿಡುವು ಸಿಕ್ಕದೇ ಇರವುದು...ಆದರೆ ಯೋಚಿಸುತ್ತಾ ಕೂತರೆ ಅದೆಷ್ಟು ಸುಳ್ಳುಗಳ ಸರಮಾಲೆ ಇದು ಅಂತ ಥಟ್ಟನೇ ಹೊಳೆದು ಬಿಡುತ್ತದೆ.

ಸಧ್ಯಕ್ಕೆ ತಲೆಯಲ್ಲಿ ಏನೂ‌ ಬೆಳೆಯುತ್ತಿಲ್ಲ, ಖಾಲಿಯಾಗಿದೆ ಅನ್ನುವ ಅರಿವಾಗಿ ಬೇರೇನಾದರೂ ಮಾಡುವ ಅಂತ ಗಹನವಾಗಿ ಯೋಚಿಸಿ, ಸುಮ್ನೆ ಪೆನ್ನು ಹಿಡ್ಕೊಂಡು ತಲೆಕೆರೆದುಕೊಂಡು ಕೂತ್ಕೊಳ್ಳುವುದಕ್ಕಿಂತ ಏನಾದರೂ ಓದೋಣ...ಅಧ್ಯಯನ ಮಾಡುವ ಅನ್ನುವ ನಿರ್ಧಾರ ಮಾಡಿದೆ. ಅದೇ ಸಂಜೆ ಸೀದಾ ಸ್ವಪ್ನ ಬುಕ್ ಹೌಸ್ ಗೆ ಹೋಗಿ ಕುಮಾರವ್ಯಾಸ ಭಾರತವನ್ನು ಬಹಳ ಪೂಜ್ಯನೀಯ ಭಾವನೆಯಿಂದ ಸುಮಾರ ಎರಡು ಸಾವಿರ ತೆತ್ತು ಮನೆಗೆ ತಂದೆ.ಅದೇ ರಾತ್ರಿಯಿಂದ ಅದರ ಓದೂ ಆರಂಭವಾಯಿತು.ತಂಬಾ ಖುಷಿ ಪಟ್ಟೆ ಕುಮಾರವ್ಯಾಸನ ಷಟ್ಪದಿಗಳನ್ನು ಓದುತ್ತಾ... ರಾತ್ರಿ ತಡವಾದರೆ ಬೆಳಗ್ಗೆ ಎದ್ದೂ ವಾಚನ ಮಾಡಿದ್ದೂ ಇದೆ.ಆದರೆ ಆ ಓದಿನ ತಂತು ಎಲ್ಲಿ ಯಾವಾಗ ಕಡಿದುಹೋಯಿತು ಅನ್ನುವುದು ನನ್ನ ನೆನಪಿಗೆ ಬರುತ್ತಿಲ್ಲ.ಮತ್ತೆ ಮುಂದುವರೆಸಬೇಕು ಅನ್ನುವ ಧೃಡ ಸಂಕಲ್ಪ ಮಾತ್ರ ಈಗ ಮನದಲ್ಲಿ ಉಳಿದುಕೊಂಡಿದೆ.

ಅಲ್ಲಿಗೆ ನಿಲ್ಲದೇ ಮಂಗಳೂರು ಗ್ರಂಥಾಲಯದಿಂದ ಹದಿನೈದು ದಿನಗಳಿಗೊಮ್ಮೆ ಮೂರು ಪುಸ್ತಕಗಳನ್ನು ತಂದು ಓದಲು ಶುರುಮಾಡಿದೆ.ಅದೊಂದು ವೈವಿಧ್ಯಮಯವಾದ ಓದು.ಬಹಳ‌ ಉಲ್ಲಾಸವಿತ್ತು.ಓದಲು ಪೂರಕವಾದ ಒಂದು‌ ವಾತಾವರಣ ನನ್ನ ಕೆಲಸದಲ್ಲಿಯೂ ಇತ್ತು.ಆದರೆ ಯಾವಾಗ ರೀವ್ಯಾಂಪ್ ಕೆಲಸ ಶುರು ಆಯಿತೋ ಮತ್ತೆ ಓದಲು ಆಗಲೇ ಇಲ್ಲ.ಸುಮ್ಮನೇ ಮೂರು ಪುಸ್ತಕಗಳನ್ನು ತಂದು ಹಾಗೆಯೇ ವಾಪಾಸು ಕೊಡುವ ಪರಿಸ್ಥಿತಿ. ಈಗ ಆ ರಗಳೆಯೇ ಬೇಡ ಅಂತ ತೀರ್ಮಾನಿಸಿ ಒಂದೇ ಪುಸ್ತಕ ತಂದರೂ ಅದು ವಾಪಾಸು ಕೊಡುವ ದಿನ ಮೀರಿ ಹೋಗಿದೆ.ಆದರೂ ತೆರೆದು ನೋಡಲು ಆಗದ ಕೆಲಸದ ಒತ್ತಡ.

ಬರೆಯುವ ಮತ್ತು ಓದಿನ ವಿಷಯ ಹೀಗಾದರೆ ಹಲವಾರು ಕಾರ್ಯಕ್ರಮಗಳಿಗೆ ಹೋಗಬೇಕೆಂದುಕೊಂಡರೂ ಹೋಗಲಾಗದೇ ಬಹಳ ಬೇಸರಗೊಂಡಿದ್ದೇನೆ.ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಇದರಲ್ಲಿ ಪ್ರಮುಖವಾದವುಗಳು.ಪಾಪುಗುರು, ಹೊಸಪೇಟೆಗುರು...ಹೀಗೆ ತಪ್ಪಸಿಕೊಂಡ ಪುಸ್ತಕ ಬಿಡುಗಡೆ ಸಮಾರಂಭಗಳೆಷ್ಟೋ.ಸಾಹಿತ್ಯ ಲೋಕದ ದಿಗ್ಗಜರು, ಆತ್ಮೀಯರು ಎಲ್ಲರನ್ನೂ ಭೇಟಿಯಾಗುವ ಒಂದು ಅವಕಾಶ ಕೈಜಾರಿಹೋಯಿತು.ಹಲವಾರು ಹೇಳಲು ಆಗದ ಕಾರಣಗಳು ಇದರ ಹಿಂದಿವೆ.ಇದನ್ನೆಲ್ಲಾ ಮೀರಿ ಹೋಗಲು ಆಗದೇ ಅನ್ನುವ ಪ್ರಶ್ನೆ ಮಾತ್ರ ಮತ್ತೆ ಮತ್ತೆ ಕಾಡುವುದುಂಟು.ನನ್ನನ್ನು ನಾನು ಕಳೆದು ಹೋಗುವ ಇಂತಹ ನನ್ನದೇ ಭಾವಲೋಕದ ಉತ್ಕಟ ಕ್ಷಣಗಳನ್ನು ಅನುಭವಿಸಲು ಯಾವುದೇ ಮಾರ್ಗವನ್ನಾದರೂ ತುಳಿಯಲು ಇನ್ಮುಂದೆ ಸಿದ್ಧವಾಗಬೇಕಿದೆ.

ಜೀವನ ಅನ್ನುವುದು ದೇವರು ಕೊಟ್ಟ ಒಂದು ಪ್ಯಾಕೇಜ್... ಅದರಲ್ಲಿ ನಮಗೆ ಬೇಕಾದದ್ದು, ಆ ಕ್ಷಣಕ್ಕೆ ಬೇಡವಾಗಿದ್ದು ಎಲ್ಲವೂ ಇದೆ.ಒಂದನ್ನು ಆಯ್ಕೆ ಮಾಡಿ ಇನ್ನೊಂದನ್ನು ಬೇಡ ಅಂದರೆ ಅದು ಆಗಲಿಕ್ಕಿಲ್ಲ.ಇಡಿಯಾಗಿಯೇ ಸ್ವೀಕರಿಸಬೇಕು.ಪ್ರತಿಕೂಲ ಪರಿಸ್ಥಿತಿಯನ್ನೂ ಹೇಗೆ ನಮಗೆ ಇಷ್ಟವಾಗುವ ತರಹ ಬದುಕುವುದೆಂದು ನಿರಂತರವಾಗಿ ಯೋಚಿಸುತ್ತಾ ಆ ಕಡೆಗೆ ಕಾರ್ಯ ಪ್ರವೃತ್ತರಾಗುವುದೊಂದೇ ನಮ್ಮ ಕೈಯಲ್ಲಿರುವುದು.ಮತ್ತು ಅದನ್ನಷ್ಟೇ ನಾವು ಮಾಡಬೇಕಾಗಿರುವುದು.ಈ ಸಣ್ಣ ಮಕ್ಕಳ ಬೆಳವಣಿಗೆ, ಆಟಪಾಠ, ಕೀಟಲೆ, ಅಳು,ನಗು ಎಲ್ಲವನ್ನೂ ಆಸ್ವಾದಿಸುವ ಕಾಲ.ಅದೇ ಸಮಯದಲ್ಲಿ ನನಗೆ ಕವಿಗೋಷ್ಠಿಯೂ ಆಗಬೇಕು, ಕಾರ್ಯಕ್ರಮಗಳೀಗೂ ಹೋಗಬೇಕೆಂದರೆ ಅದಾಗಲಿಕ್ಕಿಲ್ಲ. U have to choose ... ಆಯ್ಕೆಗಳನ್ನು ಮಾಡಲೇಬೇಕು ಮತ್ತು ಖಂಡಿತವಾಗಿಯೂ ನನಗೆ ಬೇಕಾದದ್ದನ್ನು,ಸಾಧ್ಯವಾಗುವುದನ್ನಷ್ಟೇ ಮಾಡುತ್ತೇನೆ.ಉಳಿದು ಹೋದದ್ದಕ್ಕೆ ಚಿಂತಿಸದೇ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Sunday 26 August 2018

ಎದೆಗೆ ಇಳಿಯಿತು ಒಲವ ಶ್ರಾವಣ
ನೀನು ನಕ್ಕು ನುಡಿಯೆ.
ಕರಗಿ ಹರಿಯಿತು ವಿರಹ ಬೇಸಗೆ
ನಿನ್ನ ಸನಿಹ ಮೆರೆಯೆ

ದಟ್ಟ ಕಾನನದ ಮೌನ ಕಾಡಲು
ನೇಹಕಿರುಳು ಸುರಿಯೆ
ಬಿಸಿಲಕೋಲಿನ ಮಾತಿನೊಲುಮೆಯು
ಬದುಕ ಕದವ ತೆರೆಯೆ

ಮುಗಿಲ‌ ಮನೆಯ ಬಿರುನುಡಿಯ ರಭಸಕೆ
ನಿಂತ ನೆಲವು ಕುಸಿಯೆ
ಮಳೆಯು ನಿಂತ ಹಸಿ ನವಿರು ಬಿಸಿಲಿಗೆ
ಮನದ ಬಣ್ಣ ಸೆಳೆಯೆ

# ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


Monday 2 July 2018

ಶಿಕ್ಷೆ

ಬಿಸಿಬಿಸಿ ಟೀ ಕುಡಿಯುತ್ತಾ ಗೇಟ್ ಗೆ ಸಿಕ್ಕಿಸಿದ್ದ ಪೇಪರನ್ನು ತೆಗೆದು ಎಂದಿನಂತೆ ಇಂದು ಕೂಡಾ ಮನೆಯ ಮೆಟ್ಟಿಲಿನ‌ ಮೇಲೆ‌ ಕುಳಿತು ಪೇಪರನ್ನು ತಿರುವತೊಡಗಿದ ಶೇಖರ್.ರಾಜಕೀಯದ ವಿಷಯಗಳಲ್ಲಿ ಎಳ್ಳಷ್ಟೂ ಅಭಿರುಚಿಯಿಲ್ಲದ ಶೇಖರ್ ಯಾವತ್ತೂ ಮೊದಲು ಓದುವುದು ಕ್ರೀಡಾ ಸುದ್ದಿಗಳನ್ನು.ಆದಿತ್ಯವಾರವಾದ್ದರಿಂದ ಮ್ಯಾಗಜೀನ್ ನ ಯಾವುದೋ ಒಂದು ಕತೆಯನ್ನು ಓದತೊಡಗಿದ ಬೆನ್ನಲ್ಲೇ ಅವನ ಮೊಬೈಲ್ ಎರಡು ಸಾರಿ ರಿಂಗ್ ಆಗಿತ್ತು.ನೋಡಿದರೆ ಪೋನ್ ಮಾಡಿದ್ದು ಅವನ‌ ಮಾವನ ಮಗಳು.ಹೇಳಿದ್ದು ಹಠಾತ್ತಾಗಿ ಎದೆನೋವು ಕಾಣಿಸಿಕೊಂಡದ್ದರಿಂದ ಮಾವನನ್ನು ಆಸ್ಪತ್ರೆಗೆ ಸೇರಿಸಿದ್ದ ವಿಷಯ.ಹೇಗೂ ಮಮತ ನಿನ್ನೆಯೇ ತವರು ಮನೆಗೆ ಹೋಗಿದ್ರಿಂದ ಏನೂ ಕೆಲಸಗಳಿರಲಿಲ್ಲ.ಹಾಗಾಗಿ ಹೆಚ್ಚಿನ ಯೋಚನೆಗಳಿಲ್ಲದೇ ತನ್ನ ಸ್ವಿಫ್ಟ್ ಕಾರಿನಲ್ಲಿ ಕಾರ್ಕಳಕ್ಕೆ ಹೊರಟ.

ಮಂಗಳೂರಿನಿಂದ ಕಾರ್ಕಳಕ್ಕೆ ಕಾರಿನಲ್ಲಿ ಬರೇ ಒಂದು ಗಂಟೆಯ ದಾರಿ.ಹೊರಗಿನ ಧೂಳು ಜೊತೆಗೆ ವಾಹನಗಳ ಕರ್ಕಶ ಶಬ್ದವೆಂದರೆ ಶೇಖರನಿಗೆ ಮೊದಲಿಂದಲೂ ಆಗುವುದೇ ಇಲ್ಲ.ಇಲ್ಲದ ತಲೆನೋವು ಪ್ರತ್ಯಕ್ಷವಾಗಿ ಬಿಡುತ್ತದೆ.ಗ್ಲಾಸ್ ಮೇಲೆ ಮಾಡಿ ಎ.ಸಿ.ಹಾಕಿದ.ಕಾರ್ ಕೂಳೂರು ಸೇತುವೆ ಬಿಡುತ್ತಲೇ ನೂರಾರು ಯೋಚನೆಗಳು ಮುತ್ತಿಕೊಂಡವು.ಅಪ್ಪ ಬೇಗ ತೀರಿಕೊಂಡು ಮನೆಯ ಸಮಸ್ತ ಜವಾಬ್ದಾರಿಯನ್ನೂ ತನ್ನ ಹೆಗಲ‌ಮೇಲೆ ಹೊತ್ತುಕೊಂಡಾಗ ಮಾವನದ್ದು ಕೇವಲ ಇಪ್ಪತೈದು ವರ್ಷ‌ ಅಂತ ಅಮ್ಮ ಆಗಾಗ ಹೇಳುವ ಮಾತು.ಜೊತೆಗೆ ಮೂವರು ತಂಗಿಯರ ಮದುವೆ,ಬಾಣಂತ ಆಂತ ಖರ್ಚುಗಳ ಮೇಲೆ ಖರ್ಚು.ಎಲ್ಲರ ಮದುವೆ ಆಗಿ ತನ್ನ ಮದುವೆ ಆಗುವಾಗ ಮಾವನಲ್ಲೂ, ಮನೆಯಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದವು ಮತ್ತು ಮದುವೆ ಆಗುವಾಗ ಮಾವನ ವಯಸ್ಸು ಮೂವತ್ತೆಂಟು ದಾಟಿತ್ತು.ಅಜ್ಜ ಅಜ್ಜಿ ಇದ್ದ ದಿನಗಳಲ್ಲಿ ಸದಾ ಬಂಧುಬಾಂಧವರಿಂದ ಗಿಜಿಗುಟ್ಟುತ್ತಿದ್ದ ಮನೆ ಅದು.ಅಜ್ಹನನ್ನು ನೋಡಿದ ನೆನಪು ನನಗಿಲ್ಲ.ಯಕ್ಷಗಾನ ಕಲಾವಿದರಂತೆ ಅವರು.ಹಾಗಾಗಿ ಮನೆಯಲ್ಲಿ ಯಕ್ಷಗಾನದ್ದೇ ವಾತಾವರಣ.ಹಾಲ್‌ನಲ್ಲಿ ದೊಡ್ಡದೊಂದು ಕಾಳಿಂಗ ನಾವಡರ ತಲೆಗೆ ಕೆಂಪು ಮುಂಡಾಸು ಸುತ್ತಿಕೊಂಡು ನಗುತ್ತಿದ್ದ ಪೋಟೋ. ನನಗೂ ಕಾಳಿಂಗ ನಾವಡರ ಮೇಲೆ, ಯಕ್ಷಗಾನದ ಮೇಲೆ ಪ್ರೀತಿ ಆಸಕ್ತಿ ಬೆಳೆಯಲು ಕಾರಣವಾಗಿದ್ದು ಇದೇ ಪೋಟೋ. ಈಗಲೂ ಇರಬಹುದಾ ಅದೇ ಪೋಟೋ? ಇವತ್ತು ಮನೆಗೆ ಹೋದಾಗ ನೋಡ್ಬೇಕು ಅಂದುಕೊಂಡ ಶೇಖರ್.

ರಸ್ತೆ ಬಹಳ ಚೆನ್ನಾಗಿದ್ದರೂ ಮಳೆಗಾಲದ ಹೊಡೆತಕ್ಕೆ ಅಲ್ಲಲ್ಲಿ ಒಂದೊಂದು ಹೊಂಡ ಬಿದ್ದಿವೆ.ಹಾಗಾಗಿ ತನ್ನ ಎಂದಿನ ವೇಗದಲ್ಲಿ ಕಾರು ಚಲಾಯಿಸಲು ಶೇಖರನಿಗೆ ಸಾಧ್ಯವಾಗಲಿಲ್ಲ. ಲಾಂಗ್ ಡ್ರೈವ್ ಹೋಗುವುದೆಂದರೆ ಶೇಖರನಿಗೆ ಬಹಳ ಇಷ್ಟ. ಆದರೆ ಎಂಜಾಯ್ ಮಾಡುವ ಮೂಡ್ ನಲ್ಲಿ ಇರಲಿಲ್ಲ.ಸುರತ್ಕಲ್ ಟೋಲ್ ಗೇಟ್ ನಲ್ಲಿ ಹಣ ಕಟ್ಟಿ ಮುಕ್ಕ ಬರುವಷ್ಟರಲ್ಲಿ ಮಳೆಯ ದಪ್ಪ ದಪ್ಪ ಹನಿಗಳು ಕಾರಿನ ಗ್ಲಾಸ್ ಮೇಲೆ ಬೀಳಲಾರಂಭಿಸಿ ಕ್ರಮೇಣ ಗಾಳಿ ಮಳೆ ಬಿರುಸಾಯಿತು.ವೈಪರ್ ಆನ್ ಮಾಡಿ ಕಾರಿನ ವೇಗವನ್ನು ತಗ್ಗಿಸಿದ.

ಆ ದಿನವಿನ್ನೂ ನನಗೆ ಚೆನ್ನಾಗಿ ನೆನಪಿದೆ.ಬಹುಶಃ ನಾನಾಗ ಪಿಯುಸಿಯಲ್ಲಿದ್ದೆ.ಅಮ್ಮ ಎಂದಿನ ಹಾಗೆ ಬುಟ್ಟಿಯಲ್ಲಿ ಮನೆಯಲ್ಲಿ ಬೆಳೆದ ತರಕಾರಿಯನ್ನೆಲ್ಲಾ ತಲೆಯ ಮೇಲೆ ಹೊತ್ತುಕೊಂಡು ಬೆಳಿಗ್ಗೆ ಬೇಗ ಮನೆ ಬಿಟ್ಟಿದ್ರು.ಹೆಚ್ಚಾಗಿ ಅವರು ಈ ತರಕಾರಿಗಳನ್ನೆಲ್ಲಾ ಪೇಟೆಯಲ್ಲಿ ಮನೆಮನೆಗೂ ಸುತ್ತಿ ಮಾರಾಟ ಮಾಡ್ತಾರೆ.ಎಲ್ಲಾ ಮಾರಾಟವಾದ ನಂತರ ಅದೇ ಹಣದಲ್ಲಿ ಮನೆಗೆ ಬೇಕಾದುದನ್ನೆಲ್ಲಾ ತೆಗೆದುಕೊಂಡು ಮಧ್ಯಾಹ್ನದ ಊಟದ ಹೊತ್ತಿಗೆ ಮನೆಗೆ ಬರುತ್ತಾರೆ.ಆದರೆ ಆ ದಿನ ಪೇಟೆಗೆ ಹೋದವರಿಗೆ ಆಘಾತ ಕಾದಿತ್ತು.ಅಮ್ಮನಿಗೆ ತೀವ್ರ ಹೃದಯಾಘಾತವಾಗಿದೆ, ಕೂಡಲೇ ಬರಬೇಕು ಅಂತ ಮಾನವನಿಂದ ಕರೆ ಬಂದಿತ್ತು.ತರಕಾರಿ ಬುಟ್ಟಿಯನ್ನು ಹೊತ್ತುಕೊಂಡೇ ಬಸ್ಸು ಹತ್ತಿ ತವರಿಗೆ ಹೋದರೂ ತನ್ನ ಅಮ್ಮನನ್ನು ಜೀವಂತ ನೋಡುವ ಭಾಗ್ಯ ನನ್ನ ಅಮ್ಮನಿಗೆ ಇರಲಿಲ್ಲ.ಅದೇನೂ ಸಾಯುವ ವಯಸ್ಸಾಗಿರಲಿಲ್ಲ.ಸಂಜೆ ಎದೆನೋವು ಅಂದಾಗ ಗ್ಯಾಸ್ಟ್ರಿಕ್‌ ಇರಬಹುದು ಅಂತ ವಾಯುಮಾತ್ರೆ ಕೊಟ್ಟಿದ್ರಂತೆ.ಸ್ವಲ್ಪ ಸರಿ ಆಯ್ತು ಅಂತ ರಾತ್ರಿ ಊಟದ ಹೊತ್ತಿಗೆ ಹೇಳಿಯೂ ಇದ್ದರು.ಆದರೆ ಬೆಳಿಗ್ಗೆ ಎದ್ದ ಕೂಡಲೇ ಮಗನ ಕೈಯಿಂದ ಕಾಫಿಯನ್ನು ಕೇಳಿ ಕುಡಿದಿದ್ದಾರೆ.ನಂತರ ಗೋಡೆಗೆ ಒರಗಿದವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.ಇದ್ದಾಗ ಎಲ್ಲರೊಂದಿಗೂ ನಗ್ತಾ ನಗ್ತಾ ಇದ್ದ ಅಜ್ಜಿ ಹೋಗುವ ಕಾಲಕ್ಕೆ ಯಾರಿಂದಲೂ ಚಾಕರಿ ಮಾಡಿಸಿಕೊಳ್ಳದ ಜೀವ.ಬಹಳ‌ ಒಳ್ಳೆಯ ಸಾವು.ಆದರೆ ಅದರ ಪರಿಣಾಮ ಅತೀ ಹೆಚ್ಚಾಗಿ ಆದದ್ದು ಮಾವನ ಮೇಲೆ.ಆಗಲೇ ಅಪ್ಪನನ್ನೂ ಕಳೆದುಕೊಂಡಿದ್ದ ಮಾವ ಈಗ ಅಮ್ಮನನ್ನೂ ಕಳೆದುಕೊಂಡು ಅನಾಥರಾಗಿಹೋದ್ರು.ಅಂದು ಎಲ್ಲರೂ ಬಹಳ ಇಷ್ಟಪಟ್ಟು ಆ ಮನೆಗೆ ಹೋಗುವುದಕ್ಕಾಗಿಯೇ ಕಾರಣವಾಗಿದ್ದ ಕೊಂಡಿಯೊಂದು ಕಳಚಿಕೊಂಡಿತ್ತು.

ಹೊರಗೆ ಮಳೆ ನಿಂತಿತ್ತು.ಆಗಲೇ ಕಾರು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿತ್ತು.ಮಳೆ ಬಿದ್ದ ಮಣ್ಣಿನ ಪರಿಮಳದ ಆಸೆಯಿಂದ ಕಾರ್ ನ ಗ್ಲಾಸನ್ನು ಕೆಳಗೆ ಮಾಡಿದ.ಇನ್ನೂ ಸಣ್ಣಗೆ ಹನಿಯುತ್ತಿರುವ ಮಳೆಯ ಹಿತವಾದ ಗಾಳಿ ಕಾರಿನೊಳಗೆ ನುಗ್ಗಿತು.ಒಮ್ಮೆ ಜೋರಾಗಿ ಉಸಿರೆಳೆದುಕೊಂಡ ಶೇಖರ್ ಮಳೆಯಲ್ಲಿ ನೆನೆದ ಪ್ರಕೃತಿಯನ್ನು ನೋಡತೊಡಗಿದ.ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಷ್ಟಾಗಿ ಇಲ್ಲದಿದ್ದರೂ ವೇಗ ಹೆಚ್ಚು ಮಾಡುವ ಮನಸ್ಸು ಮಾಡಲಿಲ್ಲ‌.

ಅಂದ ಹಾಗೆ ಮನುಷ್ಯ ಯಾವಾಗ ಹೆಚ್ಚು ಖುಷಿಯಿಂದ ಇರುತ್ತಾನೆ?ಮದುವೆಯ ಮೊದಲೋ ಅಥವಾ ಮದುವೆಯ ನಂತರವೊ? ಇದೆಂತಹ ಪ್ರಶ್ನೆ ಎಂದು ತಲೆ ಕೊಡವಿಕೊಂಡ ಶೇಖರ್.ಅಷ್ಟಕ್ಕೂ ಬದುಕಿನ‌ ಸಂತೋಷಗಳಿಗೂ ಈ ಮದುವೆಗೂ ಯಾವ ಸಂಬಂಧ? ಆದರೆ ಯಾಕೋ ಮಾವನ ಬದುಕನ್ನು ನೋಡುವಾಗ ಸಂತೋಷ ಮತ್ತು ಮದುವೆಯ ನಡುವೆ ಬಹಳ ಅಂತರವಿದೆ ಅಂತ ಅನ್ನಿಸಿತು.ಎಲ್ಲಾ ತಂಗಿಯರ ಮದುವೆಯ ನಂತರ ಒಂಟಿಯಾದ ಎಷ್ಟೋ ವರ್ಷಗಳ‌ ಬಳಿಕ ಮಾವನ‌ ಮದುವೆಯಾದದ್ದು.ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ,ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು. ಮದುವೆಯಾದ ಎರಡು ವರ್ಷಕ್ಕೇ ನಿಂತ  ದಂಪತಿಗಳ ನಡುವಿನ ಮಾತುಕತೆ ಈಗಲೂ ಶುರುವಾಗಿಲ್ಲ. ಭಾರೀ ಒಳ್ಳೆಯ ಹುಡುಗ, ಒಳ್ಳೆಯ ಮನೆತನ, ಆಸ್ತಿ ಇದೆ, ಅದಿದೆ ಇದಿದೆ ಅಂತ ಹೇಳಿ ಎಲ್ಲಾ ಸೇರಿ ನನ್ನ ತಲೆಯ ಮೇಲೆ ಕಲ್ಲು ಚಪ್ಡಿ ಎತ್ತಿ ಹಾಕಿದ್ರು ಇವನಿಗೆ ಕಟ್ಟಿಹಾಕಿ ಅಂತ ಮಾಮಿ ಹೇಳುತಿದ್ದುದನ್ನು ಎಷ್ಟೋ ಸಾರಿ ಕೇಳಿದ್ದೇನೆ.ಆದರೆ ನನ್ನ ಕಣ್ಣಿಗೆ ಮಾತ್ರ ಅಂದಿಗೂ ಇಂದಿಗೂ ಮಾವನಲ್ಲಿ ಯಾವುದೇ ದೋಷವೂ ಕಾಣಲೇ ಇಲ್ಲ.ಅದು ಯಾವ ರೀತಿಯಲ್ಲಿ ನೋಡಿದರೂ.ಮಾವನೂ ಮಾಮಿಗೆ ಅದೆಷ್ಟೋ ಸಾರಿ ಬುದ್ದಿ ಹೇಳಿ ನೋಡಿದ್ರು,ಬೇರೆಯವರ ಹತ್ರ ಹೇಳಿಸಿದ್ರು, ಕೊನೆಗೆ ಪಂಚಾಯತಿ ಕೂಡಾ ಕರೆಸಿ ಮಾತನಾಡಿಸಿದ್ರು.ಆದರೂ ಮಾಮಿ ಸರಿಯಾಗಲೇ ಇಲ್ಲ.ಇದೆಲ್ಲದರ ಪರಿಣಾಮ‌ ಮಾತ್ರ ಆದದ್ದು ಮಾವನ ಮೇಲೆ.ಬದುಕು ಮೊದಲಿಗಿಂತಲೂ ಕಷ್ಟವಾಯ್ತು.ಸಮಯಕ್ಕೆ ಸರಿಯಾಗಿ ಅಡುಗೆ ಮಾಡದೇ, ರಾತ್ರಿ ಸ್ವಲ್ಪ ತಡವಾಗಿ ಬಂದರೂ ಮನೆ ಬಾಗಿಲು ತೆರೆಯದೇ, ಮನೆಗೆ ಬಂದವರೊಡನೆ ಸರಿಯಾಗಿ‌ ಮುಖ ಕೊಟ್ಟು ಮಾತಾಡದೇ ಮಾವನಿಗೆ ಕಗ್ಗಂಟಾಗಿಯೇ ಉಳಿದಳು.ತುಂಬಾ ಸಲ‌ ಯೋಚಿಸಿದ್ದೇನೆ ಯಾಕೆ ಹೀಗೆ ಅಂತ?ಗಂಡು ಹೆಣ್ಣಿನ‌ ನಡುವಿನ‌ ಆರಂಭದ ಆಕರ್ಷಣೆ ಅಷ್ಟು ಬೇಗೆ ಕರಗಲು ಕಾರಣವೇನು? ಜೀವಮಾನವಿಡೀ‌ ಅನ್ಯೋನ್ಯವಾಗಿರುವ ದಂಪತಿಗಳ‌ ನಡುವಿನ ಆ ಗುಟ್ಟೇನು? ಅರ್ಥವೇ ಅಗುವುದಿಲ್ಲ.ನನಗಿನ್ನೂ ಚೆನ್ನಾಗಿ ನೆನಪಿದೆ.ಯಾವುದೋ ಒಂದು ಪಂಚಾಯತಿಯಲ್ಲಿ, " ನನ್ನನ್ನೇನು ಹಂಗಿಸೋದು? ನಾನಲ್ಲ, ಇದಕ್ಕೆಲ್ಲಾ ಕಾರಣ ಓ ಇವರಿದ್ದಾರಲ್ಲ...ಇವರು.ದುಡಿದದ್ದನ್ನೆಲ್ಲಾ ಆ ರಂಡೆಗೇ ಹೋಗಿ ಸುರೀಲಿ ಮತ್ತು ಅಲ್ಲಿಯೇ ಹೋಗಿ ಮಲಗ್ಲಿ.ಮನೆ ಉದ್ಧಾರ ಆಗ್ತದೆ...ಎಲ್ಲಾ ನನ್ಗೇ ಹೇಳ್ಲಿಕ್ಕೆ ಬಂದ್ರು, ಹೋಗಿ ಹೋಗಿ..." ಅಂತ ಮಾಮಿ ಹೇಳಿದ ಮಾತಿಗೆ ಎಲ್ಲರೂ ಬೆಚ್ಚಿ ಬಿದ್ದಿದ್ರು! ಮಾಮಿ ಹಚ್ಚಿದ ಆ ಕಿಡಿ ಮತ್ತೆ ನಂದಿಹೋಗಲೇ ಇಲ್ಲ.ನನಗೆ ಗೊತ್ತಿದ್ದ ಹಾಗೆ ಮತ್ತೆ ಯಾರೂ ಇವರ ಪಂಚಾಯತಿಗೆ ಹೋಗಲೇ ಇಲ್ಲ.

ಬೆಳ್ಮಣ್ ನಲ್ಲಿ ಕಾರು ಬದಿಗೆ ನಿಲ್ಲಿಸಿ ಸಿಗರೇಟ್ ಹಚ್ಚಿದ ಶೇಖರ್. ರಸ್ತೆ ಅಗಲೀಕರಣದ ಕೆಲಸ ನಡಿತಾ ಇತ್ತು.ಪರಿಚಿತವಿದ್ದ ದ್ವಾರಕಾ ಹೋಟೇಲ್ ಅರ್ಧ ಗೋಡೆಗಳನ್ನು ಕೆಡವಿಕೊಂಡು ನಿಂತಿತ್ತು. ಮುಂದಿನ ಸಾರಿ ಬರುವಾಗ ಖಂಡಿತವಾಗಿಯೂ ಇದರ ಕುರುಹುಗಳು ಸಿಗಲಿಕ್ಕಿಲ್ಲ.ಇಂದು ನಾನು ನೋಡಿದ್ದು ಒಂದು ರೀತಿಯಲ್ಲಿ ಅಂತಿಮ ದರ್ಶನ ಅನ್ನುವ ಒಳ ಸುಳಿವು ಬಂದು ಮನಸ್ಸಿಗೆ ಹೇಗೇಗೋ ಅನ್ನಿಸಿತು ಒಂದು ಕ್ಷಣ.ಬೇರೆಲ್ಲಿ ಹೋಟೆಲ್ ಇಟ್ಟಿದ್ದಾರೋ ವಿಚಾರಿಸಬೇಕು ಅಂದುಕೊಂಡ.ಬಹುಶಃ ಬೆಳ್ಮಣ್ ನ ಸಂತೆ ಇರಬೇಕು.ಲಾರಿಯಿಂದ ತರಕಾರಿಗಳನ್ನು ಇಳಿಸುವಲ್ಲಿ ನಿರತರಾಗಿದ್ದ ಜನರನ್ನು ಒಂದು ಕ್ಷಣ ದಿಟ್ಟಿಸಿ ನೋಡಿ ಬೆರಳಿಗೆ ಬಿಸಿ ತಾಗಲು ಆರಂಭವಾಗಿದ್ದ ಸಿಗರೇಟ್ ತುಂಡನ್ನು ನೆಲಕ್ಕೆಸೆದು ಚಪ್ಪಲಿಯಿಂದ ಹೊಸಕಿ ಕಾರ್ ಸ್ಟಾರ್ಟ್ ಮಾಡಿದ.

"ಹುಡುಗಿ ಚೆನ್ನಾಗಿದ್ದಾಳೆ, ಓದಿದ್ದಾಳೆ  ಎಲ್ಲಾ ಸರಿ. ಆದರೂ ಚೆನ್ನಾಗಿ ವಿಚಾರಿಸು.ಅವಳಿಗೆ ಈ ಮೊದಲು ಯಾರ ಜೊತೆ ಕೂಡಾ ಒಡನಾಟ ಇರಲಿಲ್ಲ ಅನ್ನೋದನ್ನ ಮೊದಲು ಖಾತ್ರಿ ಮಾಡಿ ಮುಂದಿನ ಸಿದ್ಧತೆಗೆ ಮಾತು ಕೊಡು...ಯಾರನ್ನೂ ನಂಬೋಕಾಗಲ್ಲ.ಆಮೇಲೆ ನಮ್ಮ ತಲೆ ಮೇಲೆ ನಮ್ಮ ಕೈ..."
ನನ್ನ ಮದುವೆಯ ಸಂದರ್ಭದಲ್ಲಿ ಮಾಮ ಹೇಳಿದ ಮಾತುಗಳನ್ನು ಹಲವಾರು ಬಾರಿ ಮೆಲುಕು ಹಾಕಿದ್ದೇನೆ.ಅದು ನನ್ನನ್ನು ಉದ್ದೇಶಿಸಿ ಹೇಳಿದ್ದರೂ ನಿಜವಾಗಿಯೂ ಅಂದು ಮಾವ ಆಡಿದ್ದು ಅವರಿಗೇ ಹೇಳುತಿದ್ದ ಸ್ವಗತವೆಂಬತ್ತಿತ್ತು.
ಹಾಗಾದ್ರೆ ಮಾಮಿಗೆ ಮದುವೆಯ ಮೊದಲು ಬೇರೆಯವರ ಜೊತೆ ಒಡನಾಟವಿತ್ತೇ? ಅದು ಗೊತ್ತಿಲ್ಲದೇ ಮಾವ ಮದುವೆಯಾದರೆ? ಇದ್ದರೂ ಮಾಮಿ ಯಾಕೆ ಹೇಳಲಿಲ್ಲ? ಯಾವ ಒತ್ತಡ ಅವರನ್ನು ಸುಮ್ಮನಿರುವಂತೆ ಮಾಡಿತು? ಯಾರನ್ನು ಕೇಳುವುದು? ಉತ್ತರವಿಲ್ಲದ ಪ್ರಶ್ನೆಗಳು. ಇನ್ನು ಮಾವನ ಮೇಲೆ ಮಾಡಿದ್ದ ಅರೋಪದಲ್ಲಿ ಎಷ್ಟು ನಿಜ? ಅದರ ಸರೆಗನ್ನು ಹಿಡಿದು ಹೊರಟರೆ ಆ ಹೆಂಗಸಿನ‌ ಜೊತೆ ನಿಂತು ಮಾತಾಡಿದ್ದು, ಅವರ ಗದ್ದೆಯನ್ನು ಉಳುಮೆ ಮಾಡಿ ಕೊಟ್ಟದ್ದು, ಅವರ ಅಂಗಳದಲ್ಲಿ ಚಪ್ಪರ ಹಾಕಿದ ವಿಷಯಗಳಷ್ಟೇ ಸಿಗುತ್ತವೆ.ಹಾಗಾದರೆ ಮಾಮಿ ಮಾಡಿದ ಆರೋಪದಲ್ಲಿ ನಿಜವಾಗಿಯೂ ಕಂಡದ್ದೆಷ್ಟು? ಅಥವಾ ಸಂಸಾರ ಸುಖ ಸಿಗದ ಹತಾಷೆಯಲ್ಲಿ ಆಡಿದ ಮಾತುಗಳಾಗಿದ್ದಿರಬಹುದು ಮಾಮಿ ಹೇಳಿದ್ದ ಮಾತುಗಳು ಅಂತ ನನಗೆ ಎಷ್ಟೋ ಸಾರಿ ಅನ್ನಿಸಿದೆ.ಆ ಹೇಳಿಕೆಯಲ್ಲಿ ಎಷ್ಟು ನಿಜವಿರಬಹುದು? ಒಂದು ವೇಳೆ ನಿಜವೇ ಆಗಿದ್ದರೂ ನನ್ನ ಮನಸ್ಸು ಈಗಲೂ ಮಾವನ ಪರವೇ ನಿಲ್ಲುತ್ತದೆ. ಯಾವ ಸುಖ ಇತ್ತು ಮಾವನಿಗೆ? ಎಷ್ಟೇ ದುಡಿದು ಏನೆಲ್ಲಾ ಗಳಿಸಿದರೂ ಕೊನೆಗೆ ಮರಳುವುದು ಮನೆಗೇ ತಾನೆ? ಅಲ್ಲಿ ಮುಖ್ಯವಾಗಿ ಅವನಿಗೆ ಮನಃಶ್ಯಾಂತಿ ಇಲ್ಲದೇ ಹೋದರೆ ಸುಖವನ್ನು ಹೊರಗೆ ಅರಸಿದ್ದರಲ್ಲಿ ತಪ್ಪೇನು? ಹಾಗೇಯೇ ಆಗಿದ್ದರೂ ಮಾಮಿಯೇ ತಪ್ಪಿದಸ್ಥಳು ಅನ್ನಿಸುತ್ತದೆ ಈ ವಿಷಯದಲ್ಲಿ. ಸಂಸಾರದಲ್ಲಿ ಸಂಗಾತಿಗೆ ಸುಖವನ್ನು ನಿರಾಕರಿಸುವುದು ಅಪರಾಧವಾಗುತ್ತದೆ.ಇದನ್ನು ಕೋರ್ಟ್ ಕೂಡಾ ಒಪ್ಪುತ್ತದೆ.ಅಷ್ಟಾಗಿಯೂ ಯೌವನ ಕಳೆದು ಮುಪ್ಪಿನ ಬಾಗಿಲನ್ನು ತಟ್ಟುವಾಗ ಎಷ್ಟೇ ಬಿಗಿಯಾದ ಮನುಷ್ಯ ಕೂಡಾ ಮೆತ್ತಗಾಗುತ್ತಾನಂತೆ.ಆದರೆ ಇಲ್ಲಿ ಅದೂ ಕಾಣುತ್ತಿಲ್ಲ.ಯಾವುದೇ ಬದಲಾವಣೆಯಿಲ್ಲದ, ಮಾತಿಲ್ಲದ ಬಲವಂತಕೆ ಕಟ್ಟಿಬಿದ್ದ ಸಂಸಾರ ಇದು.ಹದವಾಗಲೇ ಇಲ್ಲ ಇನ್ನೂ.ಮಳೆಯಿರದೇ ಸದಾ ಬಿರುಕು ಬಿಟ್ಟ ನೆಲ.

ಕಾರು ಪಾರ್ಕ್ ಮಾಡಿ ಆಸ್ಪತ್ರೆಗೆ ಹೋದಾಗ ಆಗಲೇ ಅಪ್ಪ ಅಮ್ಮ ಅಲ್ಲಿ ಬಂದಾಗಿತ್ತು.ಮತ್ತು ಅಮ್ಮನ ದುಃಖ ಕಟ್ಟೆಯೊಡೆದ ರೀತಿಯಲ್ಲಿಯೇ ಗೊತ್ತಾಯಿತು ಶೇಖರನಿಗೆ ಅಲ್ಲಿನ ಸ್ಥಿತಿ. ಒಮ್ಮೆ ಮಾವನ ಮುಖ ನೋಡಿ ಬಂದು ಮಾವನ ಮಗಳನ್ನು ಸಂತೈಸತೊಡಗಿದ.ಮಾಮಿಯ ಸುಳಿವಿರದಿದ್ದರೂ ಕೇಳುವ ಮನಸ್ಸು ಮಾಡಲಿಲ್ಲ. ನನ್ನನ್ನು ಈ ರೀತಿ ನರಳಿಸಿದ ಅವಳಿಗೆ ತಕ್ಕ ಶಾಸ್ತಿ ಮಾಡ್ತೇನೆ ಅಂತ ಮಾವ ಆಗಾಗ ಹೇಳುವುದಿತ್ತು ಮತ್ತು ಇದಕ್ಕಿಂತ ದೊಡ್ಡ ಶಿಕ್ಷೆ ಕೊಡಲು ಮಾನವನಿಂದ ಖಂಡಿತವಾಗಿಯೂಸಾಧ್ಯವಾಗುತ್ತಿರಲಿಲ್ಲ. ಚಿರನಿದ್ರೆಯಲ್ಲೂ ಮಾವನ ಮುಖದ ಮೇಲೆ ಒಂದು ವಿಚಿತ್ರ ಸಮಾಧಾನದ ಕಳೆಯಿದ್ದದ್ದು ತನ್ನ ಭ್ರಮೆಯಿರಲಿಕ್ಕಿಲ್ಲ ಎಂದುಕೊಂಡ ಶೇಖರ್.

Friday 29 June 2018

#ನೆನಪಿನ_ಮಳೆ

ಎಷ್ಟು ಹೊತ್ತು ಹಾಗೆಯೇ ಕುಳಿತಿದ್ನೋ ಮನೆಯ ಮೆಟ್ಟಿಲ ಮೇಲೆ. ಎಡೆಬಿಡದೇ ಮಳೆ ಸುರಿಯುತ್ತಲೇ ಇದೆ ನಿಲ್ಲುವ ಯಾವುದೇ ಸೂಚನೆ ಇಲ್ಲದೇ.ಮೇಲಿನ ಗದ್ದೆಯಿಂದ ಹರಿದು ಬರುತ್ತಿರುವ ಕೆಂಪು ನೀರು ಅಂಗಳದ ಮಣ್ಣಿನ ತುಳಸಿಕಟ್ಟೆಯ ಎರಡೂ ಕಡೆಗಳಿಂದ ಹರಿದುಹೋದರೂ ಪಾದ ಮುಳುಗುವಷ್ಟು ನೀರು ಅಂಗಳದಲ್ಲಿ. ಮೊನ್ನೆ ಮಾವನ ಮಗ ಬಂದಿದ್ದಾಗ ಆಡಲು ಮಾಡಿಟ್ಟ ತೆಂಗಿನ ಮಡಲಿನ ಕ್ರಿಕೆಟ್ ಬ್ಯಾಟ್ ತೇಲಿ ಹೋಗುತ್ತಿದೆ.ಹೆಂಚಿನಿಂದ ಧಾರೆಧಾರೆಯಾಗಿ ಸರಿಯುವ ನೀರು ಮಾಡಿಗೂ ಅಂಗಳಕ್ಕೂ ಬಿಗಿದು ಕಟ್ಟುತ್ತಿದೆ ಸಾಲು ಸಾಲು ಕಂಬಿಗಳನ್ನು.ಅವುಗಳ ಒಳಗೆ ನಾನು ಬಂಧಿ! ಗಾಳಿ ಜೋರಾಗಿ ಬೀಸಿದಾಗೊಮ್ಮೆ ದೂರಕ್ಕೆ ಚಿಮ್ಮಿ ಕಂಬಿ ತುಂಡಾಗಿ ಬಂಧ ಮುಕ್ತ.ಮೆಟ್ಟಿಲ ಮೇಲೆ ನಿಂತು ಹೊರಗೆ ಕೈಚಾಚಿ ಆ ನೀರಿನ ಕಂಬಿಗಳನ್ನು ಕತ್ತರಿಸುವುದೆಂದರೆ ನನಗೆ ಬಹಳ ಇಷ್ಟದ ಕೆಲಸ. ಅಂಗೈ ಮೇಲೆ ನೀರು ಬೀಳುತ್ತಿರಬೇಕು ಯಾರೋ ಮೇಲಿಂದ ನೀರು ಹೊಯ್ದಂತೆ.ಅಷ್ಟು ಮಳೆಯಲ್ಲಿಯೂ ಎದುರಿನ ಸೀತಾಫಲದ ಮರದ ಟೊಂಗೆಗಳಲ್ಲಿ ಗೀಜಗದ ಹಕ್ಕಿಗಳು ಕಿಚಪಚ ಶಬ್ದ ಮಾಡುತ್ತಾ ಮಳೆಯಲ್ಲಿ ಮೀಯುತ್ತಿವೆ.

ನನ್ನದೇ ಲೋಕದಲ್ಲಿ ಹೊಕ್ಕಿ ಕಳೆದು ಹೋಗಿದ್ದರೂ ದೂರದ ಗದ್ದೆಯ ಬದುವಿನಿಂದ ಅಮ್ಮ ನೆನೆಯುತ್ತಾ ಬರುತ್ತಿರುವುದು ಗೊತ್ತಾಗಿ ಅದುವರೆಗೂ ಅರಿವಿಗೆ ಬಾರದಿದ್ದ ಚಳಿ ನನ್ನೊಳಗೆ ತುಂಬಿಕೊಳ್ಳತೊಡಗಿತು.ಮತ್ತು ಅದರ ಹಿಂದೆಯೇ ಅಮ್ಮ ಹೇಳಿದ್ದ ಕೆಲಸದ ನೆನಪು ಕೂಡಾ.ಅಷ್ಟರಲ್ಲಾಗಲೇ ಅಮ್ಮ ಮನೆ ತಲುಪಿ ನನ್ನ ಕಿವಿ ಪೀಂಟಿಸಿ "ಎಷ್ಟು ಹೊತ್ತು ನಿನಗೆ? ಕೊಡೆ ತರ್ಲಿಕ್ಕೆ ಹೇಳಿದ್ದಲ್ವಾ...ಇಲ್ಲಿ ಬಂದು ನೀರಲ್ಲಿ ಆಟ ಆಡ್ತಾ ಕೂತ್ಕೊಂಡ.ಏನ್ ಮಳೆ ನೋಡೇ ಇಲ್ವಾ ಇದುವರೆಗೂ? ಇಷ್ಟು ದೊಡ್ಡವನಾದ್ರೂ ಬುದ್ದಿ ಬೆಳಿಲಿಲ್ಲ.ಅಲ್ಲಿ ನಿನ್ನ ಅಪ್ಪ ಮಳೆಗೆ ಎಲ್ಲಾ ಚಂಡಿ ಆದ್ರು...ಎಲ್ಲಾ ನನ್ನ ಕರ್ಮ..." ಮಳೆಯ ವೇಗದೊಡನೇ ಅಮ್ಮನ ಬೈಗುಳನೂ ಹೆಚ್ಚಾಗುತ್ತಿತ್ತು.ಎರಡೂ ನಿಲ್ಲುವ ಲಕ್ಷಣ ಕಾಣದೇ ಕೊಡೆಯ ಒಳಗೆ ಸೇರಿ ಬೈಲ್ ನ ಹಾದಿ ಹಿಡಿದಿದ್ದೆ. ಅಲ್ಲಿ ನೋಡಿದ್ರೆ ಪಾಪ ಅಪ್ಪ ಮಳೆಯ ನಡುವೆಯೂ ಕೋಣಗಳ ಹಿಂದೆ ಇನ್ನೂ ಹೈ...ಹೈ...ಬಲತ್...ಹಂಬಾs ಅಂತ ತಿರುಗುತ್ತಲೇ ಗದ್ದೆ ಉಳುತಿದ್ದಾನೆ.ಮೈಮೇಲೆ ರಪರಪ ಆಂತ ಬೀಳುತ್ತಿರುವ ಮಳೆ ಹನಿಯ ಯಾವುದೇ ಪರಿವೆಯೂ ಇಲ್ಲದೆ.ತಲೆಗೆ ಕಟ್ಟಿದ ಮುಂಡಾಸು ಚಂಡಿ ಮುದ್ದೆಯಾಗಿ ಅಪ್ಪ‌ ಕೂಡಾ ಮಳೆಯ ಒಂದು ಭಾಗವೇ ಎಂಬಂತೆ ಕಾಣುತ್ತಿದ್ದಾರೆ.ಆದರೂ ಓಡಿ ಹೋಗಿ ಅಪ್ಪನ ಕೆಲಸ ನಿಲ್ಲಿಸಿ ಕೊಡೆ ಕೊಡುವ ಮನಸ್ಸಾಗಲೇ ಇಲ್ಲ.ಆ ಮಗ್ನತೆ, ಯಾವತ್ತೋ ತಿಂದದ್ದನ್ನೇ ಮೆಲುಕು ಹಾಕಿತ್ತಾ ಸಾಗುವ ಜೋಡಿ ಕೋಣಗಳು,ಅವರೆಡನ್ನೂ ಒಂದಾಗಿಸಿದ್ದ ಬಣ್ಣದ ನೊಗ, ನೇಗಿಲು,ಅಪ್ಪ ಮತ್ತು ಬುಡಮೇಲಾಗುತ್ತಿದ್ದ ಗದ್ದೆಯ ಮಣ್ಣು ಎಲ್ಲಾ ಸೇರಿ ಒಂದು ಕಲಾತ್ಮಕ ಚಿತ್ರವೇ ಕಣ್ಣ ಮುಂದೆ ನಡೆದುಹೋಗುತ್ತಿದೆ.ಹೇಗೆ ತಾನೇ ಅದನ್ನು ಅಳಿಸಿ ಹಾಕಲಿ? ಹೀಗಂದುಕೊಳ್ಳುತ್ತಲೇ ಗದ್ದೆಗೆ ತಾಗಿಕೊಂಡಿರುವ ತೋಡಿಗೆ ಚಾಚಿಕೊಂಡಿದ್ದ ತೆಂಗಿನ‌ಮರದ ಬುಡದ ಕೆಳಗೆ ಬಿಚ್ಚಿದ ಕೊಡೆಯ ಒಳಗೆ ಬೆಚ್ಚಗೆ ಕುಳಿತು ನೋಡತೊಡಗಿದೆ.

ಮುಂಗಾರು ಆರಂಭವಾಗಿ ವಾರವಾಗಿದೆಯಷ್ಟೇ.ಊರಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.ನಮ್ಮ ಈ ಪಕ್ಕದ ಗದ್ದೆಗಳಲ್ಲಿ ಆಗಲೇ ಎರಡೆರಡು ಸಾರಿ ಉತ್ತಾಗಿದೆ.ಕೆಲವು ಗದ್ದೆಗಳಲ್ಲಿ ಈಗಾಗಲೇ ಬಿತ್ತೂ ಆಗಿದೆ. ಇನ್ನು ಏನಿದ್ದರೂ ಎಷ್ಟು ಬೇಕೋ ಅಷ್ಟು ನೀರು ನಿಲ್ಲಿಸಿ ಕಳೆಗಿಡಗಳನ್ನು ತೆಗೆಯುವುದಷ್ಟೇ ಕೆಲಸ. ಮದ್ಯದಲ್ಲಿ ಒಮ್ಮೆ ಒಂದು ಬುಟ್ಟಿ ಯೂರಿಯಾ ಚೆಲ್ಲಿದರೆ ಆಯಿತು.ಮತ್ತೆ ಹಸನಾದ ನೇಜಿ ತಯಾರು.ಅಷ್ಟು ಫಲವತ್ತಾದ ಗದ್ದೆಗಳು ಅವು.ನೀರು ತುಂಬಿಕೊಂಡ ಗದ್ದೆಗಳಲ್ಲಿ ಸಣ್ಣಗೆ ಮೊಳಕೆಯೊಡೆಯುತ್ತಿರುವ ಭತ್ತ.ದೊಡ್ಡ ದೊಡ್ಡ ಸಪೂರ ಕಾಲುಗಳನ್ನು ಊರಿ ಧ್ಯಾನಸ್ಥವಾಗಿರುವ ಬಿಳಿಯ ಕೊಕ್ಕರೆಗಳು.ಸಣ್ಣಗೆ ಹನಿಯುವ ಮಳೆ, ಆಗಸದ ತುಂಬೆಲ್ಲಾ ಕರಿಯ ಮೋಡ...ಈ ವಾತಾವರಣವನ್ನು ನೋಡಲೆಂದೇ ಗದ್ದೆಯ ಬದಿಗೆ ಬರುವ ಹುಚ್ಚು ನನಗೆ. ಈ ಯೂರಿಯಾ ಹಾಕುವ ದಿನಗಳಲ್ಲಿ ಗದ್ದೆಗಳನ್ನು ಬಹಳ ಜಾಗುರೂಕತೆಯಿಂದ ಕಾವಲು ಕಾಯಬೇಕಾಗುತ್ತದೆ.ಆ ದಿನ ಮಳೆ ಬಂದರೆ ಎಲ್ಲವೂ ಹರಿದು ಹೋಗುವ ಭಯ ಒಂದು ಕಡೆಯಾದರೆ ಇನ್ನೊಂದು ಭಯವೂ ಇದೆ.ಸಂಜೆಯ ವೇಳೆಗೆ ಯೂರಿಯಾ ಹಾಕಿ ಹಾಗೆಯೇ ಹೋದರೆ ಮರುದಿನ ಬೆಳಗ್ಗೆ ಅದು ಬೇರೆ ಗದ್ದೆಯ ಪಾಲಾಗುವುದು ಹೆಚ್ಚು.ಕೆಳಗಿನ ಗದ್ದೆಗಳಿಗೆ ನೀರಿಲ್ಲ ಅಂತ ನೆಪ ಮಾಡಿ ನಮ್ಮ ಗದ್ದೆಯಿಂದ ಅವರ ಗದ್ದೆಗಳಿಗೆ ನೀರು ಹಾಯಿಸುವ ನೆಪದಲ್ಲಿ ಗದ್ದೆಯ ಬದು ಸ್ವಲ್ಪ ಸರಿಸಿದರೆ ಯೂರಿಯವೆಲ್ಲಾ ಆ ಗದ್ದೆಯ ಪಾಲು.

ಆದರೆ ನಮ್ಮದು ಮಾತ್ರ ಇದು‌ ಮೊದಲ ದಿನ‌ದ ಉಳುಮೆ.ಅದಕ್ಕೂ ಕಾರಣ ಉಂಟು.ಹೋದ ವರ್ಷದವರೆಗೆ ನಮ್ಮ ಹಟ್ಟಿಯನ್ನು ತುಂಬಿದ್ದ ಕೋಣದ ಜೋಡಿಯನ್ನು ಈ ಜನವರಿಯಲ್ಲಿ ಮಾರಿ ಆಗಿತ್ತು.ಆ ಜೋಡಿಗಳಲ್ಲಿ ಒಂದರ ಕೋಡುಗಳು ಹೊರಕ್ಕೆ ಚಾಚಿಕೊಂಡು ದೂರದಿಂದ ಬುಲೆಟ್ ಗೆ ಹಾಕಿದ ಅಗಲವಾದ ರಾಡ್ ತರಹ ಕಾಣುತ್ತಿತ್ತು. ಆದರೆ ಅದೇನೂ ಕೋಣಗಳ ಕಾರ್ಯಕ್ಷಮತೆಯ ಅಳತೆಗೋಲಿನಲ್ಲಿ ಬರುತ್ತಿಲ್ಲದಿದ್ದರೂ ಜೋಡಿಯಾಗಿ ಹೋಗುವಾಗ 'ಚಂದ' ಕಾಣುತ್ತಿರಲಿಲ್ಲ.ಅದೂ ಅಪ್ಪನ ಮನಸ್ಸಿಗೆ ಸರಿಹೊಂದದೇ, ಸಕಾಲದಲ್ಲಿ ವ್ಯವಹಾರವೂ ಕುದುರಿದ್ದರಿಂದ ಅವನ್ನು ಕೊಟ್ಟುಬಿಟ್ಟಿದ್ದರು.ಈ ಕೋಣಗಳನ್ನು ಕೊಡುವುದು ಮತ್ತು ಮನೆ ಮನೆಯ ಹಟ್ಟಿ ಹುಡುಕಿ ಹೊಸ ಜೋಡಿಗಳನ್ನು ತರುವುದೆಂದರೆ ಅಪ್ಪನಿಗೆ ಒಂಥರಾ ಹುಚ್ಚು.ಮತ್ತು ಅವು ಸರಿಕಾಣದಿದ್ದರೆ ಮತ್ತೆ ಹುಡುಕಾಟ.ಒಂದು ವರ್ಷ ಮೂರು ಮೂರು ಜೋಡಿಗಳು ನಮ್ಮ ಹಟ್ಟಿಯನ್ನು ಕಂಡಿದ್ದು ಇನ್ನೂ ನೆನಪಿದೆ.ಆದರೆ ಈ ಬಾರಿ ಕೊಟ್ಟ ನಂತರ ಎರಡು ತಿಂಗಳು ಸುಮ್ಮನಿದ್ದ ಅಪ್ಪ ಎಪ್ರಿಲ್ ಕೊನೆ ಬರುತ್ತಿದ್ದ ಹಾಗೇ ಕೋಣಗಳ ಖರೀದಿಗೆ ಓಡಾಡಲಾರಂಭಿಸಿದ್ದರು.ಆದ್ರೆ ಅಷ್ಟೊತ್ತಿಗೆ ಕೊಡಲು ಯಾರೂ ತಯಾರಿರುವುದಿಲ್ಲ.ಮುಂಗಾರು ಆರಂಭವಾದರೆ ಅವರಿಗೂ ಉಳುಮೆಗೆ ಬೇಕಲ್ಲ.ಅದೂ ಅಲ್ಲದೇ ಬೇಸಿಗೆಯಲ್ಲಿ ಕೋಣಗಳಿಗೆ ಬೇಯಿಸಿದ ಹುರುಳಿ, ಎಣ್ಣೆ ಕೊಟ್ಟು ಚೆನ್ನಾಗಿ ಸಾಕುತ್ತಿದ್ದರು.ಅಷ್ಟೆಲ್ಲಾ ಮಾಡಿ ಸಾಕಿದ ನಂತರ ಯಾರೂ ಕೊಡುವ ಬಗ್ಗೆ ಯೋಚನೆ ಕೂಡಾ ಮಾಡುವುದಿಲ್ಲ.ಹಾಗಾಗಿ ನಮಗೂ ಯಾವುದೇ ನುರಿತ ಕೋಣದ ಜೋಡಿ ಸಿಗದೇ ಹೊಸ ಕೋಣದ ಜೋಡಿಯನ್ನೇ ತರಬೇಕಾಯಿತು ಘಟ್ಟಕ್ಕೆ ಹೋಗಿ.ನೋಡಲೇನೋ‌ ತುಂಬಾನೇ ಚಂದ ಇದ್ದವು.ಪ್ರಾಯದಲ್ಲೂ ತರುಣ ಜೋಡಿ.ಎರಡೂ ಅಷ್ಟೇನೂ ಕಪ್ಪಲ್ಲದ ಬೂದು ಬಿಳಿಯ ಬಣ್ಣ,ನುಣುಪಾಗಿ ಉದ್ದವಿದ್ದ ರೋಮಗಳು,ಕೋಡುಗಳು ಕೂಡಾ ಒಂದೇ ತೆರನಾಗಿ ನೋಡಲು ಬಹಳ ಚಂದ ಇದ್ದವು.ಆದರೆ ಬರಿಯ ಚಂದವನ್ನಿಟ್ಟು ಏನು ಮಾಡುವುದು?.ಅವು ನಮ್ಮ‌ಹಟ್ಟಿಯನ್ನು ಸೇರಿಕೊಂಡಾಗಲೇ ಮುಂಗಾರು ಆರಂಭವಾಗಿತ್ತು.ಉಳುಮೆಗೆ ಅವನ್ನು ತಯಾರು ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ವಾಸು ನಾಯ್ಕನನ್ನು ಕರೆದು ಬಹಳ ಕಷ್ಟಪಟ್ಟು ಅವುಗಳಿಗೆ ಮೂಗುದಾರವನ್ನು ಈಗಾಗಲೇ ಹಾಕಿದ್ದರೂ ಹಟ್ಟಿಯಿಂದ ಸೀದದಲ್ಲಿ ಗದ್ದೆಯವರೆಗೆ ತರಲು ಬಹಳ ಕಷ್ಟಪಡಬೇಕಾಗಿತ್ತು.ಗದ್ದೆಯ ನಡುವಿನ ಬದುವಿನಿಂದ ನಡೆಯಲು ಅಭ್ಯಾಸವಿಲ್ಲದ ಅವು ಬೇರೆಯವರ ಗದ್ದೆಯಲ್ಲಿ‌ ಬೆಳೆದ ಹಸಿರು ಹುಲ್ಲನ್ನು ಕಂಡು ಓಡುತ್ತಿತ್ತು. ಆ ಗದ್ದೆಗಳಲ್ಲಿ ಯಾವುದೇ ಫಸಲು ಇಲ್ಲದ್ದರಿಂದ ಯಾವುದೇ ಸಂಕಷ್ಟಕ್ಕೆ ಒಳಗಾಗಲಿಲ್ಲ.

ನಮ್ಮ ಹಟ್ಟಿ ಸೇರಿದ ನಂತರ ಮೊದಲ ಬಾರಿ ಗದ್ದೆ ಉಳುವ ಟ್ರೈನಿಂಗ್ ಗಾಗಿ ಗದ್ದೆಗೆ ಕರೆದುಕೊಂಡ ಹೋದದ್ದು ಇಳಿ ಸಂಜೆಯ ಹೊತ್ತಿನಲ್ಲಿ. ಎರಡು ಬಿಳಿಯ ಕೊಕ್ಕರೆಗಳು ಎಲ್ಲಿಂದಲೋ ಪುರ್ರನೇ ಹಾರಿಬಂದು ಜನ್ಮಾಂತರದ ಬಂಧವೋ ಎನ್ನುವಂತೆ ಬೊಳ್ಳನ ತಲೆಯ ಮೇಲೆ ಕೂತು ಹೇನು ಹೆಕ್ಕುವ ಕೆಲಸದಲ್ಲಿ ನಿರತವಾದವು.ಆ ನೋಟ ದೂರದಿಂದ ನೋಡುವವರಿಗೆ ಬೊಳ್ಳನ ತಲೆಯ ಮೇಲೆ ಯಾರೋ ಬಿಳಿಯ ಮುಂಡಾಸು ಕಟ್ಟಿದಂತೆ ಕಾಣುತ್ತಿತ್ತು.ಹೆಚ್ಚು ಹೊತ್ತು ಅವುಗಳನ್ನು ಹಾಗೆಯೇ ಬಿಟ್ಟರೆ ಕಿವಿಗೆ ಗಾಳಿ ತುಂಬಿಕೊಂಡ ಎಳೆ ಕರು ಓಡುವ ಹಾಗೆ ಓಡುವ ಅಪಾಯವಿತ್ತು.ಅಷ್ಟೆಲ್ಲಾ ಗೊತ್ತಿದ್ದರೂ ಹುಟ್ಟಾ ಕೆಲಸಗಳ್ಳನಾದ ನಾನು ಇದನ್ನೆಲ್ಲಾ ಅಪ್ಪನಿಗೆ ಹೇಳುವ ಚಾನ್ಸೇ ಇರಲಿಲ್ಲ ಬಿಡಿ. ಗೋವಿಂದನೊಡನೆ ಮಾತಾಡುತ್ತಾ ಅವರಿಂದ ಪಡೆದ ಬೀಡಿಯನ್ನು ಸೇದುತ್ತಾ ನಿಂತಿದ್ದ ಅಪ್ಪನಿಗೆ ಅದ್ಯಾವುದೋ ದಿವ್ಯ ಗಳಿಗೆಯಲ್ಲಿ ಈ ಸ್ಪೆಷಲ್ ಟ್ರೈನಿಂಗ್ ನ ನೆನಪು ಬಂದದ್ದೇ ತಡ ಕೋಣಗಳೆರಡು ನೊಗಕ್ಕೆ ಭಾರೀ ಕಷ್ಟದಲ್ಲಿ ಜೋತುಬಿದ್ದು ನಡುವೆ ಕಟ್ಟಿದ ನೇಗಿಲಿಗೆ ಕೈಯೊಡ್ಡಿ ಅಪ್ಪ ತಯಾರಾದರು. ನುರಿತ ಕೋಣಗಳು ಹೈ...ಹೈ...ಅಂತ ಸಿಗ್ನಲ್ ಕೊಟ್ಟ ತಕ್ಷಣ ಅಥವಾ ಕೋಲಿನಿಂದ ಬೆನ್ನಿಗೆ ಒಂದು ಪೆಟ್ಟು ಕೊಟ್ಟ ತಕ್ಷಣ ಸರಳರೇಖೆಯಲ್ಲಿ ಒಂದೇ ತೆರನಾಗಿ ಹೊರಡುತ್ತವೆ. ಆದರೆ ಏನೂ ಗೊತ್ತಿಲ್ಲದ ಈ ಹೊಸ ಜೋಡಿ ಎಷ್ಟು ಹೊಡೆದರೂ ಮುಂದೆ ಹೋಗಲಾರದು.ಹೆಚ್ಚಂದರೆ ದಿಕ್ಕೆಟ್ಟು ಓಡಬಹುದು.ಅದಕ್ಕಾಗಿಯೇ ಎರಡೂ ಕೋಣಗಳ ಮೂಗುದಾರಗಳಿಗೆ ಉದ್ದದ ಸಪೂರ ಹಗ್ಗವನ್ನು ಕಟ್ಟಿ, ಅದನ್ನು ಹಿಡಿದುಕೊಂಡು ಮುಂದೆ ಸಾಗುವ ದಾರಿಕರಿರಬೇಕು.ಅದಕ್ಕಾಗಿ ನಾನು ತಯಾರಾಗಿಯೇ ಇದ್ದೆ.ಆದರೆ ಯಾಕೋ ಅಂದು  ಅನ್ಯಮನಸ್ಕನಾಗಿಯೇ ಇದ್ದೆ.ಅದಕ್ಕೂ ಬಲವಾದ ಕಾರಣವಿತ್ತು. ಮೊದಲೇ ಹೊರಡುವಾಗ ಅಪ್ಪನ ಕೈಯಲ್ಲಿ ಪಟ್ಟು ತಿಂದಿದ್ದೆ.ವಿಷಯ ಸಿಂಪಲ್, ಕೋಣಕ್ಕೆ ಹೊಡೆದು ದಾರಿಗೆ ತರುವ ಕೋಲಿನ ವಿಷಯದಲ್ಲಿ ಅಪ್ಪನೊಂದಿಗೆ ನಡೆದ ಸಣ್ಣ  ಜಟಾಪಟಿಯೇ ಇದಕ್ಕೆಲ್ಲಾ ಕಾರಣ.ಕೋಲು ತಯಾರು ಮಾಡಿ ಇಡಲು ಬೆಳಿಗ್ಗೆಯೇ ಹೇಳಿದ್ದರೂ ನಾನು ಮಾಡಿರಲಿಲ್ಲ.ಮದ್ಯಾಹ್ನ ಊಟದ ಹೊತ್ತಿಗೆ ಅಮ್ಮ ನೆನಪು ಮಾಡಿದ್ದರಿಂದ ಎರಡುವರೆ ಅಡಿ ಉದ್ದದ ಒಂದು ಕರ್ಮರದ ಕೋಲನ್ನು ಮುರಿದು ತಂದಿದ್ದೆ.ಮತ್ತೆ ಗದ್ದೆಗೆ ಹೊರಡುವಾಗ ಅದೇ ಕೋಲನ್ನು ಅಪ್ಪನಿಗೆ ಕೊಟ್ಟಿದ್ದೆ.ಆದರೆ ಅದರ ಮೊದಲ ಪ್ರಯೋಗ ನನ್ನ ಮೇಲೆಯೇ ಆಗಿ ಸಹಸ್ರ ನಾಮಾರ್ಚನೆಯಾದಾಗಲೇ ಮಾಡಿದ "ತಪ್ಪಿನ" ಅರಿವಾಗಿತ್ತು. ಈ ಉಳುಮೆಗೆ  ಉಪಯೋಗಿಸಲ್ಪಡುವ ವಸ್ತುಗಳಲ್ಲೆಲ್ಲಾ ಅಪ್ಪನಿಗೆ ವಿಪರೀತ ಅನ್ನಿಸುವಷ್ಟು ವ್ಯಾಮೋಹ.ಅದು ಅವರು ಅಂದುಕೊಂಡ ರೀತಿಯಲ್ಲಿಯೇ ಇರಬೇಕು.ಊಟದ ವಿಷಯದಲ್ಲಿ ಬೇಕಾದರೂ ಸುಮ್ಮನಿದ್ದಾರು ಆದರೆ ಈ ವಿಷಯದಲ್ಲಿ ಮಾತ್ರ ಒಂದು ಆಚೀಚೆ ಆದರೆ ಅವರು ಸಹಿಸುವುದಿಲ್ಲ.ನೊಗದ ಹಗ್ಗಗಳು ಒಂದೇ ಸಮನಾಗಿದ್ದು ಕೋಣದ ಕುತ್ತಿಗೆಗೆ ಸುತ್ತುಬರುವ ಹಗ್ಗ ಎಲ್ಲಿಯೂ ನಾರು ಎದ್ದು ಬಂದು ಚುಚ್ಚುವಂತಿರಬಾರದು.ನೇಗಿಲಿನ ಚೂಪಾದ ತುದಿಯ ಪ್ಲೇಟ್ ನ ನಟ್ ಬೋಲ್ಟ್ ಗಳೆಲ್ಲಾ ಟೈಟ್ ಆಗಿರ್ಬೇಕು. ಕೋಣಗಳು ಬೇರೆ ಗದ್ದೆಗಳ ಬೆಳೆಗಳನ್ನು ತಿನ್ನದಂತೆ ಅವುಗಳ ಮೂತಿಗೆ ಅಡ್ಡವಾಗಿ ಕಟ್ಟುವ ಬುಟ್ಟಿ ಎಲ್ಲೂ ಹರಿದಿರದೇ ಸರಿಯಾಗಿ ನಿಲ್ಲುವಂತಿರಬೇಕು.ಮತ್ತು ವಿಶೇಷವಾಗಿ ಕೋಣಗಳಿಗೆ ಡೈರೆಕ್ಷನ್ ಕೊಡುವ "ಎರಡುವರೆ" ಅಡಿ ಉದ್ದದ ಕೋಲು! ಇದಂತೂ ಅವರ ಟೆಸ್ಟ್ ಗಳಲ್ಲಿ ಪಾಸಾಗಲೇ ಬೇಕು.ಅದು ಎರಡುವರೆ ಅಡಿ ಉದ್ದವೇ ಏಕಿರಬೇಕು ಅಂತ ನಾನ್ಯಾವತ್ತೂ ಅಪ್ಪನಲ್ಲಿ ಪ್ರಶ್ನೆ ಮಾಡಿಲ್ಲ.ಆದ್ದರಿಂದಾಗಿ ನಿಮ್ಮಷ್ಟೇ ಕುತೂಹಲ ನನಗೂ ಇದೆ.ಕರ್ಮರ ಮರದ್ದು ಆದರೆ ಅದು ಬೆಸ್ಟ್. ಅದನ್ನು ತಂದು ಅಂಗಳದಲ್ಲಿ ಒಂದು ಅಡ್ಡ ಪಂಚೆ ಕಟ್ಟಿ ಕುಳಿತುಕೊಂಡು ಕತ್ತಿಯಿಂದ ಆ ಕೋಲಿನ ಎರಡೂ ತುದಿಯನ್ನು ನುಣ್ಣಗೆ ಬೋಳಿಸಿ,ಇಡೀ ಕೋಲಿನ ಸಿಪ್ಪೆ ತೆಗೆದು ಎರಡೆರಡು ಸಾರಿ ಕತ್ತಿಯ ಕಿಸುಲಿ ಹಾಕಿ ನೈಸ್ ಮಾಡದಿದ್ರೆ ಅವರಿಗೆ ಆ ರಾತ್ರಿ ನಿದ್ದೆ ಹತ್ತಲಾರದು.ಕೆಲವು ಸಾರಿ ಇನ್ನೂ ಮೂಡ್ ಇದ್ದರೆ ಹಿಡಿ ಹತ್ತಿರ ಮಾತ್ರ ಅದರ ಸಿಪ್ಪೆಯನ್ನು ಉಳಿಸಿಕೊಂಡು ಅದಕ್ಕೊಂದು ಡಿಫರೆಂಟ್ ಟಚ್ ಕೊಡುವುದೂ ಉಂಟು.ಅಂತಹ ಐದಾರು ಕೋಲುಗಳು ಹಟ್ಟಿಯ ಎದುರಲ್ಲಿ ನೇತಾಡುತ್ತಿದ್ದರೇ ಅವರಿಗೆ ಸಮಾಧಾನ....ಈಗಿನ ಬೆಡ್ ರೂಮ್ ನಲ್ಲಿ‌ ತರತರಹದ ಬೆಲ್ಟ್ ಗಳು ನೇತಾಡುವಂತೆ.ಅಂತಹ ಕೋಲನ್ನು ಬಯಸುತ್ತಿದ್ದವರ ಎದುರಿಗೆ ಮರದಿಂದ ಕಡಿದ ಕಟ್ಟಿಗೆಯನ್ನು ಕೊಟ್ಟರೆ ಬಿಸಿ ಏರದೇ ಇದ್ದೀತೇ? ಆದರೆ ಯಾವುದೋ ಆಲೋಚನೆಯಲ್ಲಿದ್ದ ನಾನು ಹಾಗೆ ಮಾಡಿ ಸರೀ ಪೆಟ್ಟು ತಿಂದಿದ್ದೆ.ನಂತರವೇ ಆ ಕೋಲು ಅಪ್ಪನ ಮಾದರಿಗೆ ಬದಲಾದದ್ದು. ಹಾಗಾಗಿ ಅಪ್ಪನ ಮೇಲೆ ಸ್ವಲ್ಪ ಸಿಟ್ಟಿತ್ತು.ಅದನ್ನು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದೆ.

ಅಂತೂ ಇಂತು ಅದೂ ಬಂದು ಬಿಟ್ಟಿತು ಈ ಕೋಣಗಳ ಟ್ರೈನಿಂಗ್ ಮೂಲಕ. ಎರಡೂ ಕೋಣಗಳ ಮೂಗುದಾರಕ್ಕೆ ಕಟ್ಟಿದ್ದ ಹಗ್ಗಗಳನ್ನು ಹಿಡಿದುಕೊಂಡು ಮುಂದೆ ಹೋದೆ.ಸ್ವಲ್ಪ ಎಳೆದ ನಂತರ, ಅಪ್ಪನಿಂದ ಅವುಗಳ ಬೆನ್ನಿಗೆ ಎರಡು ಪೆಟ್ಟು ಬಿದ್ದ ನಂತರ ಅಡ್ಡಾದಿಡ್ಡಿಯಾಗಿ ಹೋಗಲು ಆರಂಭಿಸಿದವು.
ಹಾಗೆಯೇ ಎರಡು ಸುತ್ತು ನೇಗಿಲನ್ನು ಗದ್ದೆಗೆ ಒತ್ತದೇ ಕೋಣಗಳಿಗೆ ಯಾವುದೇ ಭಾರವನ್ನು ಕೊಡದೇ ಸಲೀಸಾಗಿ ಮುಂದುವರೆಯಿತು. ಆಗ ಜಾಗೃತವಾಯ್ತು ಅಪ್ಪನ ಮೇಲಿನ ಸಿಟ್ಟು! ಮುಂದಿನ ಸುತ್ತಿನಲ್ಲಿ ನೇಗಿಲನ್ನು ಸ್ವಲ್ಪ ಸ್ವಲ್ಪವೇ ಒತ್ತಿ
ಕೋಣಗಳಿಗೆ ಭಾರಕೊಡಲು ಆರಂಭಿಸಿದಾಗ ನಾನು ಎಡಗಡೆಯ ಕೋಣದ ಮೂಗುದಾರವನ್ನು ಒಮ್ಮೆಲೇ ಅಗತ್ಯಕಿಂತ ಹೆಚ್ಚಾಗಿ ಜೋರಾಗಿ ಎಳೆದೆ.ಅಷ್ಟೇ ಸಾಕಾಯ್ತು. ಯಾವತ್ತಿಗೂ ಅನುಭವವಿರದ ಗದ್ದೆ ಉಳುವಾಗಿನ ಹೆಗಲ ಭಾರ ಮತ್ತು ಈ ಮೂಗುದಾರ ಎಳೆದ ನೋವು ಒಂದಾಗಿ ಅದು ಕಂಗಾಲಾಗಿ ಛಂಗನೇ ಹಾರಿ ಓಡಲು ಆರಂಭಿಸಿತು.ಈ ಆಕಸ್ಮಿಕ ಘಟನೆಯಿಂದ ಅಪ್ಪ ಕೂಡಾ ಒಮ್ಮೆಗೇ ಕಕ್ಕಾಬಿಕ್ಕಿಯಾದರೂ ಅವರ ಅನುಭವ ಕೋಣಗಳನ್ನು ಹಿಡಿದು ನಿಲ್ಲಿಸಿತು.ಆದರೆ ಅಷ್ಟರಲ್ಲಾಗಲೇ ಅನಾಹುತ ಆಗಿ ಹೋಗಿತ್ತು.ಕೋಣ ಹಾರಿದ ರಭಸಕ್ಕೆ ನೇಗಿಲ ಚೂಪಾದ ತುದಿ ಅದರ ಹಿಂಗಾಲಿಗೆ ತಾಗಿ ದೊಡ್ಡ ಗಾಯವೇ ಆಗಿಹೋಯ್ತು.ಆ ದಿನ ಅಪ್ಪ ಬಹಳ ಬೇಸರ ಮಾಡಿಕೊಂಡ್ರು.ಇದಕ್ಕೆ ಕಾರಣ ಕೂಡಾ ಏನಂತ ಗೊತ್ತಾದರೂ ಅಪ್ಪ ಆ ದಿನ ಏನೂ ಮಾತಾಡಲಿಲ್ಲ.ಸದ್ಯ ಬದುಕಿದೆಯಾ ಬಡ ಜೀವ ಅಂತ ನಿರಾಳನಾದೆ.ಆದರೆ ಅದು ಕ್ಷಣಿಕ ಅಂತ ಗೊತ್ತಾದದ್ದು ಮಾರನೇ ದಿನ ನಾನೇ ತಂದು ಕೊಟ್ಟಿದ್ದ ಕರ್ಮರದ ಕೋಲು ಮುರಿದು ಹೋಗುವಷ್ಟು ಅಪ್ಪ ಹೊಡೆದಾಗ.ಮತ್ತೆ ಆ ಗಾಯ ವಾಸಿಯಾಗಲು ವಾರಗಟ್ಟಲೇ ತೆಗೆದುಕೊಂಡಾಗ ಮಾತ್ರ ನನಗೂ ಬೇಸರ ಆಯ್ತು.ನಂತರದ ಟ್ರೈನಿಂಗ್ ಮಾತ್ರ ಯಾವುದೇ ತೊಂದರೆಗಳಿಲ್ಲದೇ ನಡೆದು ಸ್ವಲ್ಪ ತಡವಾದರೂ ಈಗ ಗದ್ದೆ ಉಳುಮೆಗೆ ತಯಾರಾದಂತಾಯಿತು.

ಕೊನೆಗೂ ಅಪ್ಪ ಗದ್ದೆಯನ್ನು ಎರಡು ರೌಂಡ್ ಉತ್ತು ಕೋಣಗಳನ್ನು ಬಂಧಮುಕ್ತ ಮಾಡಿ ನನ್ನ ಕರೆದಾಗಲೇ ವಾಸ್ತವಕ್ಕೆ ಬಂದು, ಮಳೆ ನಿಂತ ಅರಿವಾಗಿ ಕೊಡೆ ಮಡಚಿ ಕೋಣಗಳನ್ನು ನನ್ನ ಸುಪರ್ಧಿಗೆ ತೆಗೆದುಕೊಂಡೆ.ಉತ್ತು ಆದ ನಂತರ ಅವುಗಳನ್ನು ತೊಳೆಯುವುದು ನನ್ನ ಕೆಲಸ ಮತ್ತು ಅದು ನನ್ನ ಅತ್ಯಂತ ಖುಷಿಯ ಕೆಲಸವೂ ಕೂಡಾ.ಆದರೂ ಅವುಗಳನ್ನು ಸ್ವಲ್ಪ ಹೊತ್ತು ಫ್ರೀಯಾಗಿ ಬಿಟ್ಟು ಅವುಗಳ ಚೇಷ್ಟೆಗಳನ್ನು ನೋಡುವುದುಂಟು.ತನ್ನ ಕೋಡುಗಳಿಂದ ದಂಡೆಯ ಮಣ್ಣನ್ನು ತೆಗೆದು ಹಸಿ ಹಸಿ ಕೆಂಪು ಮಣ್ಣನ್ನು ಕೋಡುಗಳಿಗೆ ಮತ್ತಿಕೊಳ್ಳುವ ಮತ್ತು ಆ ಮೂಲಕ ದಂಡೆಯೂ ಕೂಡಾ ಹಳೆಯ ಪೊರೆಗಳನ್ನು ಕಳಚಿ ಹೊಸ ಮಣ್ಣಿನಿಂದ ಕಂಗೊಳಿಸುವ ಚಂದವನ್ನು ಕಾಣುವುದೇ ಒಂದು ಸೊಬಗು.ಮತ್ತೆ ಅವುಗಳಿಗೆ ತೋಡಿನ ದಾರಿ ಹೇಳಿಕೊಡಬೇಕಾಗಿಲ್ಲ.ಚೆನ್ನಾಗಿ ತೊಳೆದು ನನ್ನ ಇಷ್ಟದ ಬೊಳ್ಳನ ಬೆನ್ನಿನ ಮೇಲೆ ಕುಳಿತು ರಾಜಕುಮಾರ್ ಸ್ಟೈಲ್ ನಲ್ಲಿ..."ಯಾರೇ ಕೂಗಾಡಲಿ ಊರೇ ಹೋರಾಡಲಿ ಕೋಣ ನಿನಗೆ ಸಾಟಿಯಿಲ್ಲ...ನಿನ್ನ ನೆಮ್ಮದಿಗೆ ಭಂಗವಿಲ್ಲ...ಅರೆ ಹುಂಯ್ಕ್ ...ಅರೆ ಹುಂಯ್ಕ್...ಬುರ್ರಾ..." ಅಂತ ಹಾಡುತ್ತಾ ಬರುವಾಗ ಅಪ್ಪ ಬೀಡಿಯ ಹೊಗೆಯೊಂದಿಗೆ ತಾದಾತ್ಮ್ಯ ಸಾಧಿಸಿರುತ್ತಾರೆ.

*****************************************

ಎಷ್ಟೋ ವರ್ಷಗಳ ಬಳಿಕ‌ದ ಈ ಮುಂಗಾರಿನ‌ ಮಳೆಗೆ ಅಂಗಳ ತುಂಬಿ ಹರಿಯುತ್ತಿರುವ ಕೆಂಬಣ್ಣದ ನೀರನ್ನು ಕಣ್ಣಿನಲ್ಲಿ ತುಂಬಿಕೊಂಡು, ಹೊಸ್ತಿಲಲ್ಲಿ ನಿಂತು ಹೆಂಚಿನ ಸಾಲುಗಳಿಂದ ಬೀಳುವ ಮಳೆನೀರಿಗೆ ಬೊಗಸೆಯೊಡ್ಡಿದಾಗ ಸಿಗುವ ನೆನಪುಗಳು ಅದೆಷ್ಟೋ....!

Saturday 19 May 2018

#ಕತೆ
#ಹೊಸದಿಗಂತ ಪುರವಣಿ ಆದ್ಯಂತದಲ್ಲಿ....                   

#ನೆಪ

ನಿನ್ನೆಯ ಮಳೆ ಸುರಿದ ರಸ್ತೆ ಮುಂಜಾನೆಯ ಎಳೆ ಬಿಸಿಲಿಗೆ ಯಾಥಾ ಪ್ರಕಾರ ಬೆಚ್ಚಗಿದ್ದರೂ ಇನ್ನೂ ಮಳೆ ಸುರಿದ ಮಣ್ಣಿನ ಘಮಲು ಬಿಟ್ಟಿರಲಿಲ್ಲ.ಸಾಲು ಮರದಿಂದ ಮುರಿದು ಬಿದ್ದ ಒಣ ಕಟ್ಟಿಗೆಯ ತುಂಡುಗಳು ಅಲ್ಲಲ್ಲಿ ಚೆದುರಿ ಬಿದ್ದಿದ್ದವು.ಅಷ್ಟು ಮೇಲಿನಿಂದ ಬಿದ್ದ ರಭಸಕ್ಕೆ ಕೆಲ ತುಂಡುಗಳು ರಸ್ತೆಗೆ ಡಿಕ್ಕಿಹೊಡೆದು ಮತ್ತಷ್ಟು ಹೋಳುಗಳಾಗಿ ಚಿಮ್ಮಿ ಅಕ್ಕಪಕ್ಕದ ಮನೆಯ ಕಾಂಪೌಂಡ್ ಗೆ ತಾಗಿ ಬಿದ್ದಿದ್ದವು. ಇರುವೆಗಳ ದೊಡ್ಡದೊಂದು ಸಾಲು ಮಣ್ಣನ್ನು ಕೊರೆದು ಸಾಗುತ್ತಿದ್ದುದು ಕುತೂಹಲಕಾರಿಯಾಗಿತ್ತು.ಅವುಗಳು ಎತ್ತಿಹಾಕಿದ ಮಣ್ಣು ಉದ್ದವಾದ ಸಾಲಾಗಿ ಹತ್ತಿರದಿಂದ ನೋಡಿದರೆ ಚೀನಾದ ಮಹಾಗೋಡೆಯನ್ನು ನೆನಪಿಸುತಿತ್ತು.ಯಾವತ್ತೂ ತುಸು ದೂರದವರೆಗೆ ಬೊಗಳಿಕೊಂಡೇ ಬರುವ ಕರಿಯ ನಾಯಿ ಇಂದೇಕೋ ರಸ್ತೆಯ ಅಂಚಿಗೆ ಬಾಲಮುದುರಿಕೊಂಡು ಮಲಗಿತ್ತು.ಬಹುಶಃ ನಿನ್ನೆಯ ಜೋರು ಮಳೆಗೆ ನಿಲ್ಲಲು ಎಲ್ಲಿಯೂ ಜಾಗ ಸಿಗದೇ ನೆಂದಿರಬೇಕು.ಆದರೂ ದಿನಾ ಬೊಗಳುವ ನಾಯಿಯ ಪರಿಚಿತ ಸ್ವಭಾವ ಕಾಣದೇ ಕೇಶವ  ಕ್ಣಣ ಬೆರಗಾದ.

ಮನದಲ್ಲಿ ನೂರು ಯೋಚನೆಗಳು ಅವನನ್ನು ತಿನ್ನುತ್ತಿದ್ದರೂ ಕಣ್ಡೆದುರು ನಡೆಯುವ ಸಂಗತಿಗಳಿಗೆ ಕೇಶವ ಸದಾ ತೆರೆದ ಕನ್ನಡಿ. ಅವನು ಈಗಾಗಲೇ ದಿನಾ ಒಂದಷ್ಟು ಹೊತ್ತು ಕೂರುವ ದೊಡ್ಡ ಅಶ್ವತ್ಥಕಟ್ಟೆಯನ್ನು ದಾಟಿ ಮುಂದೆ ಬಂದಿದ್ದ.ಅಲ್ಲಿಂದ ರಸ್ತೆ ಪಡೆದುಕೊಳ್ಳುವ ತಿರುವಿಗೆ ತಾಕಿಕೊಂಡೇ ಜನ್ನನ ವೆಲ್ಡಿಂಗ್ ಶಾಪ್ ಇದೆ.ವಾಪಾಸು ಬರುವಾಗ ಮೊನ್ನೆ ಕೊಟ್ಟಿದ್ದ ಗೇಟ್ ಬಗ್ಗೆ ಕೇಳಿಬರಬೇಕು. ತುಡುಗು ದನಗಳು ಮನೆಯ ಕಾಂಪೌಂಡ್ ಒಳಗೇ ನುಗ್ಗುತ್ತವೆ, ಆ ಗೇಟ್ ಒಂದು ರಿಪೇರಿ ಮಾಡಿಸೋ ಅಂತ ಅಮ್ಮ ಎಷ್ಟೋ ಸಾರಿ ಅಂದಿದ್ದರೂ ಮನಸ್ಸಾದದ್ದು ಮೊನ್ನೆಯೇ. ಇಲ್ಲಿಂದ ಇನ್ನು ಹೆಚ್ಚು ದೂರವಿಲ್ಲ. ನೇರ ಹೋಗಿ ಪಾಂಡುವಿನ ಬೀಡ ಅಂಗಡಿಯ ನಂತರ ಬಲಕ್ಕೆ ತಿರುಗಿದರೆ ರಸ್ತೆಗೆ ತಾಗಿಕೊಂಡೇ ಹೂವಿನ ಪಾರ್ಕ್ ಇದೆ.ಅಲ್ಲಿಯೇ ಅವಳು ಕೇಶವನನ್ನು ಕಾಣಲು ಹೇಳಿದ್ದು.ವೆಲ್ಡಿಂಗ್ ಶಾಪ್ ನ ಬಳಿ ನಿಂತ ಕೇಶವನ ಮನದಲ್ಲಿ ಮತ್ತೆ ತಳಮಳ.ಯಾಕಾಗಿ ಹೊರಟು ಬಂದೆ ನಾನು? ಮತ್ತೆ ಯಾರನ್ನು ನನ್ಮ ಜೀವಮಾನದಲ್ಲಿ ನೋಡಬಾರದು ಅಂತ ಅಂದುಕೊಂಡಿದ್ನೋ, ಅವರೇ ಮತ್ತೆ ಕರೆದಾಗ ಯಾಕೆ ಹಿಂದೆ ಮುಂದೆ ಯೋಚಿಸದೇ ಬಂದುಬಿಟ್ಟೆ? ಸ್ವಲ್ಪ ಹೊತ್ತು ಆ ಯೋಚನೆಯಲ್ಲಿಯೇ ಅಂತರ್ಮುಖಿಯಾದ. ದಿನವೂ ಮನೆಗೆ ಹಾಲು ಹಾಕುವ ಹುಡುಗ ಪರಿಚಯದ ನಗೆ ಬೀರಿ ಸೈಕಲ್ ನಿಂದ ಎರಡೂ ಕೈಯನ್ನು ಬಿಟ್ಟು ಸಿಳ್ಳೆ ಹೊಡೆಯುತ್ತಾ ರಸ್ತೆಯ ತಿರುವಲ್ಲಿ ಮರೆಯಾದ. ಮೀನಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡ ಹೆಂಗಸೊಬ್ಬಳು ದಾಟಿಹೋದಾಗ ಮೂಗಿಗೆ ಬಡಿದ ಮೀನಿನ ವಾಸನೆಗೆ ಕೇಶವ ಮತ್ತೆ ಗೆಲುವಾದ.ಹೋಗುವಾಗ ಮೀನು ತೆಗೆದುಕೊಂಡು ಹೋಗ್ಬೇಕು, ಅಮ್ಮನಿಗೆ ಬಂಗುಡೆ ಅಂದ್ರೆ ಪ್ರಾಣ. ನೂರಕ್ಕೆ ಎಷ್ಟು ಅಂತ ಕೇಳುವ ಅಂತ ಒಂದು ಕ್ಷಣ ಅನ್ನಿಸಿದರೂ ಕೇಳಲಿಲ್ಲ.ಯಾವುದೋ ಯೋಚನೆ ಸುಳಿದು ಅಪ್ರಯತ್ನವಾಗಿ ನಕ್ಕು ಬೆನ್ನಿಗೇ ಗಂಭೀರನಾದ ಮತ್ತು ಅನ್ಯಮನಸ್ಕನಾಗಿ ಮುಂದೆ ಸಾಗಿದ.

ಪಾಂಡುವಿನ ಬೀಡ ಅಂಗಡಿಯಲ್ಲಿ ಪೇಪರ್ ಓದುತ್ತಾ ಒಂದು ಪಾನ್ ಹಾಕದಿದ್ದರೆ ಕೇಶವನಿಗೆ ಸ್ಪಷ್ಟವಾಗಿ ಬೆಳಗಾಗುವುದೇ ಇಲ್ಲ.ಆದರೂ ಇಂದು ಯಾವತ್ತಿನ ಸಾದಾ ಬೀಡ ಹಾಕದೇ ಕಲ್ಕತ್ತ ಕಟ್ಟಿಸಿಕೊಂಡ.ಹಾಗೆಯೇ ಮೆಲ್ಲುತ್ತಾ ಪೇಪರ್ ಪುಟ ತಿರುಗಿಸಿ ಎಂದಿನಂತೆ ವಧೂವರರ ಜಾಹಿರಾತಿನ ಪುಟದಲ್ಲಿ ದೃಷ್ಟಿ ನೆಟ್ಟು ಕೂತ. ರಸ್ತೆಯಲ್ಲಿ ಬೆನ್ನಿಗೆ ಭಾರದ ಬ್ಯಾಗ್ ಹೊತ್ತುಕೊಂಡು ಟಿಫಿನ್ ಬಾಕ್ಸ್ ಬ್ಯಾಗ್ ನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿದ ಶಾಲಾ ಮಕ್ಕಳನ್ನು ಕಂಡು ಗಂಟೆಯ ನೆನಪಾಗಿ ಪೇಪರನ್ನು ಮಡಚಿ ಚಾಕಲೇಟ್ ಡಬ್ಬದ ಸಾಲಿನ ನಡುವೆ ತುರುಕಿಸಿದ. ಪಾಂಡುವನ್ನು‌ ಮಾತಾಡಿಸಬೇಕು ಅನ್ನಿಸಿದರೂ ಅವನು ಯಾರಿಗೋ ಬೊಂಡ ಕೆತ್ತುವುದರಲ್ಲಿ ಬ್ಯುಸಿಯಾಗಿದ್ದ. ರಸ್ತೆಗಿಳಿದು ಶಾಲಾ ಮಕ್ಕಳ ನೀಲಿ ಬಿಳಿಯಲ್ಲಿ ಒಂದಾದ.ಹಾಗೆ ನೋಡಿದರೆ ಅವಳು ಬಹಳ ದೂರದವಳೇನಲ್ಲ. ಹತ್ತಿರದ ಸಂಬಂಧಿಯೇ ಆಗಬೇಕು.ಮನೆಯೂ ಹೆಚ್ಚು ದೂರವಿಲ್ಲ. ಆದರೂ ಒಂದೇ ಶಾಲೆಗೆ ಹೋಗದ, ಒಂದೇ ದೇವಸ್ಥಾನಕ್ಕೆ ಹೋಗದ ನಾವಿಬ್ಬರೂ ಶಾಲೆಯ ದಿನಗಳಲ್ಲಿಯೇ ಹತ್ತಿರವಾದದ್ದು ಹೇಗೆ ಅನ್ನುವುದು ನೆನಪಾಗದೇ ಕೇಶವ ಗಲಿಬಿಲಿಗೊಂಡ. ಪ್ರೈಮರಿಯಲ್ಲಿದ್ದಾಗಲೇ ಅವಳ ಪರಿಚಯವಾದದ್ದು ಅನ್ನುವುದನ್ನು ಮತ್ತೆ ಮತ್ತೆ ಯೋಚಿಸುತ್ತಾ ಅದನ್ನೇ ಗಟ್ಟಿ ಮಾಡಿಕೊಂಡರೂ ಉಳಿದ ಯಾವುದೇ ವಿವರಗಳಿಗೆ ನೆನಪು ಜೊತೆ ನೀಡಲಿಲ್ಲ.ವೇಗವಾಗಿ ಹಾದು ಹೋದ ಬಸ್ಸು ಹೊಂಡದಲ್ಲಿದ್ದ ನೀರನ್ನು ಮಕ್ಕಳ ಮೇಲೆ ಪ್ರೋಕ್ಷಣೆ ಮಾಡಿತು. ಒಂದು ಹುಡುಗಿಯ ಯುನಿಫಾರ್ಮ್ ಸ್ವಲ್ಪ ಒದ್ದೆಯಾಗಿ ಅವಳ ಅಳು ಶುರುವಾದದ್ದೇ ಹತ್ತಿರವಿದ್ದ ಹುಡುಗ ಅತೀವ ಕಾಳಜಿಯಿಂದ ಸಂತೈಸುವುದನ್ನು ಕಂಡು ಕೇಶವ ಪುಟ್ಟ ಮಗುವಿನಂತೆ ನೋಡಿದ.ಮತ್ತೆ ನೆನಪುಗಳಿಗೆ ಜಾರಿದ.ಅವಳು ಅಪ್ಪನಿಲ್ಲದ ಹುಡುಗಿ.ಮನೆಯಿಂದ ಬರುವಾಗ ಅವಳ ಮುಖ ಗೆಲುವಾಗಿದ್ದನ್ನು ತಾನು ಕಂಡೇ ಇರಲಿಲ್ಲ ಅನ್ನುವ ಹೊಸ ಯೋಚನೆ ಸುಳಿದು ದಃಖಿತನಾದ.ಮತ್ತೆ ಆ ಶಾಲಾ ಮಕ್ಕಳ‌ ಗುಂಪಿನಲ್ಲಿರಲು ಮನಸ್ಸಾಗದೇ ವೇಗವಾಗಿ ನಡೆದು ಹೂವಿನ ಪಾರ್ಕ್ ತಲುಪಿದ.ಎಂದಿನಂತೆ ಒಂದು ಸುತ್ತು ವಾಕಿಂಗ್ ಮಾಡಲು ಇಂದೇಕೋ ಮನಸ್ಸಾಗದೇ ಆಗಷ್ಟೇ ಬಿರಿದು ನಗು ಚೆಲ್ಲುತ್ತಿದ್ದ ಗುಲಾಬಿ ಹೂವಿನ ಗಿಡಗಳಿದ್ದ ಪಕ್ಕದ ಬೆಂಚಿನಲ್ಲಿ ಕುಳಿತ. ಮುಳ್ಳುಗಳ ನಡುವೆ ಅರಳಿ ನಗುವ ಗುಲಾಬಿಯನ್ನೇ ನೋಡುತ್ತಾ ಕುಳಿತ ಕೇಶವ ಎಂದಿನಂತೆ ಗೆಲುವಾಗಲಿಲ್ಲ.ಹತ್ತಿರದ ಬೆಂಚಿನಲ್ಲಿ ಕುಳಿತಿದ್ದ ಮುದುಕ ಪರಿಚಿತ ನಗು ಬೀರಿದ. ಮೈಯೆಲ್ಲಾ ಬೆವರಾಗಿ ಕೂತಿದ್ದ. ನಿನ್ನೆ ಚೆಕಪ್ ಗೆ ಹೋಗೋದಿದೆ ಹೇಳಿದ್ದ.ಬಹುಶಃ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚು ಬಂದಿರಬೇಕು. ಎರಡು ಸುತ್ತು ಹೆಚ್ಚಿಗೆ ವಾಕಿಂಗ್ ಮಾಡಿದ ಹಾಗಿದೆ.‌ ಕಾಲೇಜಿನ ವರೈಟಿ ಡ್ರೆಸ್ ದಿನಕ್ಕೆ ಸೀರೆ ಉಟ್ಟ ಅವಳು ಬಂದು ನನ್ನ ಪಕ್ಕದಲ್ಲಿ ಕೂತಾಗ ಇಳಿಬಿಟ್ಟ ಅವಳ ಉದ್ದ ಕೂದಲ ರಾಶಿಯಲ್ಲಿ ನಗುತ್ತಿದ್ದ ಕೆಂಪು ಗುಲಾಬಿ ನೆನಪಾಗಿ ಕೇಶವ ಮತ್ತೆ ಗೆಲುವಾದ. ಹಿಂದಿನ ದಿನ ತಾನೇ ಕೊಟ್ಟಿದ್ದ ಹೂ ಅದು. ನಮ್ಮ ಪ್ರೀತಿ ಅವಳು ಮುಡಿದ ಹೂವಿನಲ್ಲಿ ಸಮೃದ್ಧವಾಗಿ ಅರಳುತಿತ್ತು.

ಬಣ್ಣದ ಚಿಟ್ಟೆಯೊಂದು ಹೂವಿಂದ ಹೂವಿಗೆ ಹಾರುತಿತ್ತು. ತನ್ನಷ್ಟಕ್ಕೇ ಅರಳಿ ನಿಂತಿದ್ದ ಹೂವಿನ ಮೇಲೆ ಕ್ಷಣ ಕಾಲ ಕುಳಿತು ರೆಕ್ಕೆ ಅಗಲಿಸುತಿದ್ದ ಚಿಟ್ಟೆ ಮತ್ತೆ ಬೇರೆ ಹೂವಿಗೆ ಹಾರುತಿದ್ದುದನ್ನು ಎವೆಯಿಕ್ಕದೇ ನೋಡುತಿದ್ದ ಕೇಶವ.ದಿನಾ ಹೆಂಡತಿ ಜೊತೆಗೇ ವಾಕಿಂಗ್ ಬರುತ್ತಿದ್ದ ಪರಿಚಿತ ಗಂಡಸು ಒಬ್ಬನೇ ನಡೆಯುತ್ತಿದ್ದ, ಯಾಕೋ ನಡಿಗೆಯಲ್ಲಿ ಗೆಲುವಿರಲಿಲ್ಲ.ಕೇಳಬೇಕು ಅನ್ನಿಸಿದರೂ ಸುಮ್ಮನಾದ.ಅವಳ ಮನೆಗೆ ಮೊದಲ ಬಾರಿ ಹೋದ ದಿನದ ನೆನಪು ಯಾಕೋ ಈ ನಡುವೆ ತೂರಿ ಬಂತು. ಅವರ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತಿದ್ದ ಹೆಂಡತಿ ಸತ್ತು ಎರಡು ಮಕ್ಕಳಿರುವ ಮಾವ ಅವಳನ್ನು ತನಗೇ ಮದುವೆ ಮಾಡಿಕೊಡಬೇಕು ಅಂತ ತಾಕೀತು ಹಾಕಿದ್ದ. ಆ ವಿಷಯವನ್ನು ಅವಳು ಹೇಳಿದ ದಿನವೇ ಅವಳ ಮನೆಗೆ ಹೋಗಿದ್ದ ಕೇಶವ. ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಶಕ್ತವಿರದಿದ್ದ ಅವಳ ಅಶಕ್ತ ತಾಯಿಯ ಎದುರು ತಾನು ಅವಳನ್ನು ಪ್ರೀತಿಸುವ ವಿಷಯ ಹೇಳಿ ಅವಳನ್ನೇ ಮದುವೆಯಾಗುವುದಾಗಿ ಹೇಳಿ ಬಂದಿದ್ದ.ಆಗ ಅವಳ ಕಣ್ಣುಗಳಲ್ಲಿ ಹೊಳೆದ ಬೆಳಕು ಮತ್ತೆ ಎರಡು ಎರಡು ವರ್ಷ ನಮ್ಮ ಪ್ರೀತಿಗೆ ದಾರಿ ದೀಪವಾಗಿತ್ತು. ಅವಳು ನಿರಾಳವಾಗಿದ್ದಳು.ಹೊತ್ತು ಏರುತಿದ್ದರೂ ಕೇಶವನಿಗೆ ಅಲ್ಲಿಂದ ಏಳುವ ಮನಸ್ಸಾಗಲಿಲ್ಲ.ಎದುರಿನ ಬೆಂಚಿನಲ್ಲಿ ವಾಕಿಂಗ್ ಮುಗಿಸಿದ ಪರಿಚಿತ ಮುದುಕ ತಾನು ತಂದಿದ್ದ ಪೇಪರ್ ಓದುವಲ್ಲಿ ತಲ್ಲೀಣನಾಗಿದ್ದ. ಹೆಂಡತಿಯಿಲ್ಲದೇ ಒಬ್ಬನೇ ಬಂದಿದ್ದ ಗಂಡಸು ಎಲ್ಲಿಯೂ ಕಾಣಲಿಲ್ಲ. ಬಹುಶಃ ಹೊರಟು ಹೋಗಿರಬೇಕು. ಜಾಜಿಯ ದಟ್ಟ ಬಳ್ಳಿ ಹಬ್ಬಿದ್ದ ಅಷ್ಟೇನೂ ಬೆಳಕು ಬೀಳದ ಸ್ಥಳದಲ್ಲಿದ್ದ ಬೆಂಚಿನಲ್ಲಿ ಪ್ರೇಮಿಗಳಿಬ್ಬರು ಸ್ಪರ್ಶ ಸುಖದಲ್ಲಿ ಮೈಮರೆತಿದ್ದರು. ಅವರ ಚಂಚಲ ಕಣ್ಣುಗಳಲ್ಲಿ ನಿರೀಕ್ಷೆಗಳನ್ನು ಕಂಡು ಕೇಶವನಿಗೆ ಅದೇಕೋ ಜೋರಾಗಿ ನಕ್ಕು ಬಿಡಬೇಕು ಅನ್ನಿಸಿತು.ಮರುಕ್ಷಣವೇ ತನ್ನ ಯೋಚನೆಗೆ ಬೆರಗಾಗಿ ಗಂಭೀರವಾಗಿ ಕುಳಿತುಕೊಂಡ.

ಹೋದ ಸಲ ಇದೇ ಬೆಂಚಿನ ಮೇಲೆ ಅವಳ ಜೊತೆಗೆ ಕೊನೆಯ ಬಾರಿ ಕೂತಿದ್ದು ನೆನಪಾಗಿ ಅಂತರ್ಮುಖಿಯಾದ.ಅವಳು ಕೆಲಸ ಸಿಕ್ಕಿ ಬೆಂಗಳೂರಿನಲ್ಲಿದ್ದಳು. ಕಳೆದ ದಸರಾಕ್ಕೆ ಊರಿಗೆ ಬಂದಾಗ ಇದೇ ಹೂವಿನ ಪಾರ್ಕ್ ಗೆ ಬರಲು ಹೇಳಿದಾಗ  ಕೇಶವ ಖುಷಿಯಿಂದ ಬಂದು ಕುಳಿತಿದ್ದ. ತಡವಾಗಿ ಬಂದ ಅವಳ ಮುಡಿಯಲ್ಲಿ ಎಂದಿನಂತೆ ಗುಲಾಬಿ ಇಲ್ಲದ್ದು ಕಂಡು ಯಾವುದೋ ಅವ್ಯಕ್ತ ಅಪರಿಚಿತ ಭಾವವೊಂದು ಮನದಲ್ಲಿ ಸುಳಿದು ಹೋಗಿ ಲಘುವಾಗಿ ಕಂಪಿಸಿದ್ದ. ಬಂದವಳೇ "ಥ್ಯಾಂಕ್ಸ್ ಕಣೋ ಕೇಶವ" ಅಂದು ಸ್ವಲ್ಪ ದೂರವೇ ಕುಳಿತುಕೊಂಡ ಅವಳನ್ನು ಅರ್ಥವಾಗದ ನೋಟದಿಂದ ನೋಡಿದ್ದ. ಮತ್ತೆ ಇಬ್ಬರಲ್ಲೂ ಮಾತಿಲ್ಲ.ಅವಳು ಏನನ್ನೋ ಹೇಳಬೇಕು ಅಂತ ಬಂದಿದ್ದಳು, ಆದರೆ ಅವಳಿಗೂ ಹೇಳಲಾಗದೇ ತನ್ನ ಉಗುರುಳೊಡನೆ ಆಟವಾಡುತ್ತಾ ಕುಳಿತುಬಿಟ್ಟಿದ್ದಳು. ಸಂಜೆ ಕಳೆದು ಕತ್ತಲು ಇಣುಕಲು ಶುರುವಾದಾಗ ಎದ್ದು ನಿಂತಳು. ಹೋಗುವ ಮೊದಲು ಬಹಳ ಕಷ್ಟದಲ್ಲಿ "ನಿನ್ನಸಹಾಯ ಇಲ್ಲದಿರುತಿದ್ದರೆ ಮಾವನನ್ನೇ ಮದುವೆಯಾಗಿ ನಾನು ಇಲ್ಲೇ ಕೊಳೆತಿರಬೇಕಿತ್ತು.ಥ್ಯಾಂಕ್ಸ್ ಕೇಶವ್" ಅಂತ ಹೇಳಿ ತಿರುಗಿ ನೋಡದೇ ಹೋಗಿದ್ದಳು.ಕೇಶವ ಅದೆಷ್ಟೋ ಹೊತ್ತು ಕತ್ತಲಲ್ಲಿ ಕುಳಿತೇ ಇದ್ದ. ಪ್ರೀತಿಯ ಇನ್ನೊಂದು ಆಯಾಮವನ್ನು ಕಂಡು  ಯಾವುದೂ ಸ್ಪಷ್ಟವಾಗದೇ ಎಲ್ಲ ಕಡೆಯೂ ಬರೇ ಕತ್ತಲು ತುಂಬಿಕೊಂಡಿತ್ತು. ಎಷ್ಟೋ ಹೊತ್ತಿನ ನಂತರ ಮನೆಗೆ ಬಂದಾಗ ಅಮ್ಮ ಕೈಯಲ್ಲೊಂದು ಕವರ್ ಕೊಟ್ಟು ಒಂದು ಕ್ಷಣ ದುರುಗುಟ್ಟಿ ನೋಡಿ ಹೋಗಿ ಮಲಗಿಕೊಂಡಿದ್ದಳು.ತೆರೆದು ನೋಡಿದರೆ ಅವಳ ಲಗ್ನ ಪತ್ರಿಕೆ! ಇಂದು ಪಾರ್ಕ್ ಗೆ ಬಂದಾಗ ಮೊದಲು ನೋಡಿದ್ದ ಗುಲಾಬಿಯನ್ನು ಮತ್ತೆ ಮತ್ತೆ ನೋಡುತ್ತಾ ಕಿತ್ತುಕೊಂಡ. ಆಸೆಯಾಗಿದ್ದರೂ ಯಾವತ್ತೂ ಕೇಶವ ಹೀಗೆ ಹೂ ಕೀಳುವ ಧೈರ್ಯ ಮಾಡಿರಲಿಲ್ಲ. ಕಿತ್ತ ಗುಲಾಬಿ ಕೈಯಲ್ಲಿ ಹಿಡಿದು ಸಂತೋಷ ತಾಳಲಾರದೇ ಜೋರಾಗಿ ಸಿಳ್ಳೆ ಹಾಕಿದ.

ಪೇಪರ್ ಮಡಚಿ ಹತ್ತಿರ ಬಂದ ಮುದುಕ "ಇವತ್ತೂ ಅವಳಿಗಾಗಿ ಕಾದು ಕುಳಿತಿದ್ದೀರಾ...ಸರಿ ಸರಿ ನಾಳೆ ಸಿಗೋಣ, ಹೇಗೂ ಬರ್ತೀರಲ್ಲ..." ನಕ್ಕು ಹೊರಟ.ಜಾಜಿ ಬಳ್ಳಿಯ ಕೆಳಗಿನ ಬೆಂಚೂ ಖಾಲಿಯಾಗಿತ್ತು.ಯಾವುದರ ಪರಿವೇ ಇಲ್ಲದೇ ಚಿಟ್ಟೆ ಮಾತ್ರ ನೆಮ್ಮದಿಯಿಂದ ಮತ್ತೊಂದು ಹೂವಿಗೆ ಹಾರುತಿತ್ತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ಹೊಸವರ್ಷದ
#RESOLUTION

ಏನೂ ಕೆಲಸವಿಲ್ಲದೇ ಸುಮ್ಮನೇ ಕುಳಿತ ತಕ್ಷಣ ಮನಸ್ಸು ನನ್ನ ಮಾತು ಕೇಳದೇ ನನ್ನನ್ನೇ ಆಳಲು ಶುರು ಮಾಡಿಬಿಡುತ್ತದೆ .ಅಲ್ಲಿಯವರೆಗೆ ನನ್ನ ಅಧೀನದಲ್ಲಿದೆ ಅಥವಾ ಅಂತದ್ದೇನೂ ಇಲ್ಲವೇ ಇಲ್ಲ ಅನ್ನುವ ರೀತಿಯಲ್ಲಿ ಅಗೋಚರವಾಗಿದ್ದು ಬಿಡುವ ಈ ಮನಸ್ಸೆಂಬ ಮಾಯಾ ಜಿಂಕೆ ಕ್ಷಣ ಸುಮ್ಮನೆ ಕುಳಿತೆ ಎಂದರೆ ಅದಕ್ಕೆ ಸಹಿಸ್ಲಿಕ್ಕೇ ಆಗಲ್ಲ.ಆದರೂ ಆ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸುವುದಿಲ್ಲ ನಾನು. ಆ ಅರ್ಜುನನಿಗೇ ತನ್ನ ಮನಸ್ಸನ್ನು ಕಂಟ್ರೋಲ್ ಮಾಡ್ಲಿಕ್ಕೆ ಕೃಷ್ಣನ ಗೀತೋಪದೇಶ ಬೇಕಾಯ್ತು ಅನ್ನುವಾಗ ಇನ್ನು ನನ್ನಂತವರ ಪಾಡೇನು? ವಿಷಯ ಅದಲ್ಲ.ನನಗೆ ಬೇಕಾದ ವಿಷಯಗಳತ್ತ ನನ್ನನ್ನು ಕರೆದೊಯ್ದು ನನಗೆ ಬೇಕಾದವರೊಂದಿಗೇ ತಂದು ನಿಲ್ಲಿಸಿದ್ರೆ ಈ ಮನಸ್ಸಿನ ಯಾವ ವ್ಯವಹಾರಗಳ ಕುರಿತೂ ನನ್ನ ತಕರಾರೇನೂ ಇಲ್ಲ. ಹಾಗೆಯೇ ಹಗಲುಗನಸುಗಳಲ್ಲಿ ವಿಹರಿಸುವುದೆಂದರೆ ನನಗೂ ಬಹಳ ಇಷ್ಟದ ಸಂಗತಿ. ಆದರೆ ಹಾಗೆ ಎಂದಿಗೂ ನಡೆಯುವುದೇ ಇಲ್ಲ. ನನಗೆ ಇಷ್ಟವಾಗದೇ ಬದಿಗಿರಿಸಿದ ವಿಷಯಗಳು, ಮಾಡದೇ ಉಳಿದಿರುವ ಬೆಟ್ಟದಷ್ಟು ಕೆಲಸಗಳು, ಕನಸಿನಲ್ಲೂ ಕನವರಿಸದೇ ಇರುವ ನಾರುವ ಸಂಬಂಧಗಳು, ಹೂತಿಟ್ಟಿರುವ ಕಿರಿಕಿರಿ ನೆನಪುಗಳು....ಉಫ್! ಈ ಮನಸ್ಸೆಂಬ ಹಿತಶತ್ರು ಹೆಕ್ಕಿ ತರುವ ನೆನಪುಗಳು ಒಂದೆರಡೇ? ಯಾಕಾದರೂ ಖಾಲಿ ಕೂತೆನೋ ಅನ್ನುವಷ್ಟರ ಮಟ್ಟಿಗೆ ನನ್ನ ಭಾವನೆಗಳನ್ನು ಕಲಕಿಬಿಡುತ್ತದೆ. ಆದರೂ ಈ ಬಾರಿಯ ನೆನಪು ಅಷ್ಟೊಂದು ಬೇಸರವನ್ನುಂಟು ಮಾಡಲಿಲ್ಲ.ಬದಲಿಗೆ ತುಟಿಂಚಿನಲ್ಲಿ ಸಣ್ಣ ನಗೆಯೊಂದು ಮೂಡಿ ಆಹ್ಲಾದವನ್ನುಂಟು ಮಾಡಿತು.

ಹೊಸವರ್ಷ ಇನ್ನೇನು ಹೊಸ್ತಿಲಲ್ಲಿ ಬಂದು ನಿಂತಿದೆ.ಮತ್ತೊಂದು ವರ್ಷ ಬದುಕಿನ ಮಗ್ಗುಲು ತಿರುಗಿದ್ದು ಬಿಟ್ಟರೆ ಈಗೀಗ ನನಗೆ ಅಂತಹ ಹೊಸತೇನನ್ನೂ ಹೊತ್ತುಕೊಂಡು ಬರುತ್ತಿಲ್ಲ ಈ ಹೊಸ ವರುಷದ ಪರಿಕಲ್ಪನೆ.ಆದರೂ ಕೆಲವರಿಗೆ ಇವೆಲ್ಲಾ ಬಹಳ ಸಂಭ್ರಮದ ಕ್ಷಣಗಳಾದರೆ, ಹಲವರಿಗೆ ನಡೆದು ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡುವ ಮತ್ತು ಎಲ್ಲವನ್ನೂ ಮೆಲುಕು ಹಾಕುತ್ತಾ ಹೊಸ ಯೋಜನೆಗಳನ್ನು ಹಾಕಿಕೊಳ್ಳುವ ಒಂದು ನಿಲ್ದಾಣ.ಹಾಗಂತ ಈ ಹುಚ್ಚು ನನಗೂ ಇರಲಿಲ್ಲವೆಂದಲ್ಲ.
ಒಂದಾನೊಂದು ಕಾಲದಲ್ಲಿ ನಾನು ಮಾಡಿದ ಅಂತಹ ಒಂದು ಭಯಂಕರವಾಗಿ ಪ್ಲಾನು ಹೊಸ ವರ್ಷಗಳ ಹೊಸ್ತಿಲಲ್ಲಿ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ.

ಆ ವರ್ಷದ ಜನವರಿ ಒಂದರ ಮೊದಲೇ ಹಲವಾರು ಯೋಜನೆಗಳ ಬಗ್ಗೆ ನನ್ನಲ್ಲಿಯೇ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೆ. ಈ ವರ್ಷದ ಅಂತ್ಯದೊಳಗೆ ಈ ಒಂದು ವಿಷಯದಲ್ಲಾದರೂ ಅಪ್ರತಿಮ ಸಾಧನೆ ಮಾಡಬೇಕು, ಎಕ್ಸೆಲ್ ಆಗಬೇಕು ಅನ್ನುವ ಧೃಡ ನಿರ್ಧಾರವನ್ನು ಮಾಡಿಕೊಂಡಿದ್ದೆ.ಆ ದಿನಗಳಲ್ಲಿ ನಾನು ಕ್ರಿಕೆಟನ್ನು ಭಯಂಕರವಾಗಿ ಹಚ್ಚಿಕೊಂಡಿದ್ದೆ. ಒಂದು ರೀತಿಯಲ್ಲಿ ಈಟ್ ಕ್ರಿಕೆಟ್; ಡ್ರೀಮ್ ಕ್ರಿಕೆಟ್ ತರಹ! ಮತ್ತು ಆ ವರ್ಷ ಕ್ರಿಕೆಟ್ ನಲ್ಲಿ ಬಹಳ‌ ಒಳ್ಳೆಯ ಫಾರ್ಮ್ ನಲ್ಲಿಯೂ ಇದ್ದೆ ನಾನು ಆಡಿದ ಪಂದ್ಯಗಳಲ್ಲಿ. ಈ ಸಾರಿ ಏನೇ ಆಗಲಿ, ಜಿಲ್ಲಾ ಕ್ರಿಕೆಟ್ ಟೀಂಗೆ ಸೆಲೆಕ್ಟ್ ಆಗಲೇಬೇಕು ಅನ್ನುವುದೇ ನನ್ನ ಆ ವರ್ಷದ ಅಲ್ಟಿಮೇಟ್ ಗೋಲ್ ಆಗಿ‌ ಸೆಟ್ ಮಾಡಿದೆ. ಸರಿ ಅದನ್ನು ಸಾಧಿಸಿಯೇ ಬಿಡಬೇಕು ಅನ್ನುವ ಹುಮ್ಮಸ್ಸಿನಲ್ಲಿ ಮೂರು ತಿಂಗಳ ಕೋಚಿಂಗ್ ನ್ನು ಸೇರಿಯೇ ಬಿಟ್ಟೆ. ಬೆಳಿಗ್ಗೆ ಬೇಗನೇ ಎದ್ದು ಒಂದು ಗಂಟೆ ಜಾಗಿಂಗ್ ಮಾಡಿದ ನಂತರ ಕೋಚಿಂಗ್ ಸೆಂಟರ್. ಅಲ್ಲಿ ನನ್ನ ವೇಗದ ಬೌಲಿಂಗ್ ನ ತರಬೇತಿ. ನೆಟ್ಸ್ ನಲ್ಲಿ ಬಹಳ ಪರಿಶ್ರಮ ಮಾಡಿದೆ. ಇನ್ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಗಳನ್ನು ಕಲಿಯಲು ಶ್ರೀನಾಥ್, ಮೆಕ್ ಗ್ರಾಥ್, ಅಕ್ರಮ್ ರ ಬೌಲಿಂಗ್ ವಿಡಿಯೋಗಳನ್ನು ನೋಡುವುದು, ಸಾಧ್ಯವಾದ ಎಲ್ಲಾ ಮ್ಯಾಚ್ ಗಳನ್ನು ನೋಡುವುದು...ವಿಕ್ರಂ ರಾಥೋಡ್, ಸಿದ್ಧು ಓಪನಿಂಗ್ ಮಾಡುತ್ತಿದ್ದ ಅತ್ಯಂತ ರನ್ ಬರ ಇದ್ದ ಟೆಸ್ಟ್ ಮ್ಯಾಚ್ ಗಳನ್ನೂ ಬಿಡದೇ ನೋಡಿದ್ದೇನೆಂದರೆ...ಈಗ ಕಲ್ಪನೆಗೂ ನಿಲುಕದ್ದು. ಅಬ್ಭಾ! ಅದೇನು ಡೆಡಿಕೇಶನ್. ಜಿಲ್ಲಾ ಕ್ರಿಕೆಟ್ ಗೆ ಸೆಲೆಕ್ಟ್ ಆಗಿ ಮುಂದೆ ಇಂಡಿಯಾ ಟೀಮ್ ನಲ್ಲಿ ಆಡಿ ಮ್ಯಾಚ್ ಗೆಲ್ಲಿಸಿದಂತಹ ಅದೆಷ್ಟು ಕನಸುಗಳು! ಕಾಲೇಜ್ ಗೆ ಹೋಗುವಾಗ ಬರುವಾಗಲೆಲ್ಲಾ ಬೌಲಿಂಗ್ ಮಾಡುತ್ತಾ ಒಂದಷ್ಟು ದೂರಕ್ಕೆ ಓಡುವ ವಿಚಿತ್ರ ಚಟ ಬೇರೆ ಬೆಳೆದುಬಿಟ್ಟಿತ್ತು.

ಅಂತೂ ಕೊನೆಗೆ ಆ ಸೆಲೆಕ್ಷನ್ ದಿನವೂ ಬಂತು. ಬೇಗನೇ ಎದ್ದು ಚೆನ್ನಾಗಿ ಬೌಲಿಂಗ್ ಪ್ರಾಕ್ಟೀಸ್ ಮಾಡಿ, ಹತ್ತಿರವಿದ್ದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆಮಾಡಿಸಿ, ಸೆಲೆಕ್ಟ್ ಆದರೆ ಶಿವನ ಪಕ್ಕದಲ್ಲಿಯೇ ಪ್ರತಿಷ್ಠಿತರಾಗಿದ್ದ ವಿಘ್ನ ವಿನಾಯಕನಿಗೆ ನೂರು ತೆಂಗಿನಕಾಯಿಯ ಮೂಡುಗಣಪತಿ ಸೇವೆ ಮಾಡಿಸುವ ಹರಕೆ ಹೊತ್ತು ಸೆಲೆಕ್ಷನ್ ಕ್ಯಾಂಪನ್ನು ಸೇರಿದೆ. ಬಂದು ನೋಡಿದರೆ ಯಾವುದೋ ದೊಡ್ಡ ಸಮುದ್ರಕ್ಕೆ ಬಂದ ಹಾಗಿನ ಅನುಭವ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮುಗಿದ ಆ ಸೆಲೆಕ್ಷನ್ ಇನ್ನೂ ಯಾವುದೋ ಅಪೂರ್ಣ ಕನಸಿನಿಂದ ಎದ್ದು ಕುಳಿತ ಹಾಗಿದೆ. ಹಲವು ಸುತ್ತಗಳಲ್ಲಿದ್ದ ಆ ಸೆಲೆಕ್ಷನ್ ನನ್ನನ್ನು ಬಹಳ ಬಳಲಿಸಲಿಲ್ಲ! ಒಂದನೇ ಸುತ್ತಿನಲ್ಲಿಯೇ ಅತ್ಯಂತ ಗೌರವಪೂರ್ವಕವಾಗಿ ಹೊರನಡೆದ ನನ್ನಲ್ಲಿ ಇದ್ದ ಭಾವ ಸಿಟ್ಟೋ, ಅಸೂಯೆಯೋ ಅಥವಾ ಹತಾಶೆಯೋ ತಿಳಿಯಲಿಲ್ಲ.ನನ್ನನ್ನು ಅಪ್ರತಿಮ ಕ್ರಿಕೆಟರ್ ಮಾಡುತ್ತೇನೆಂದು ನನಗೇ ಮತ್ತೆ ಮತ್ತೆ ಸುಪ್ತವಾಗಿ ಭರವಸೆಯನ್ನು ಕೊಟ್ಟ ಬದುಕು ಯಾಕೆ ಹೀಗೆ ಮಾಡಿತು? ಈ ಬದುಕಿನ ಗುರು ಮಾಡಿದ್ದು ಸರಿಯೇ? ನನಗೆ ಮಾತ್ರ ಈ ಆಟದ ರಹಸ್ಯಗಳನ್ನು ಕಲಿಸುತ್ತೇನೆಂದ ಈ ಗುರು ನನಗೆ ಗೊತ್ತಿಲ್ಲದೇನೇ ಎಷ್ಟೊಂದು ಜನರಿಗೆ ನನಗಿಂತ ಚೆನ್ನಾಗಿ ಕಲಿಸಿದೆ? ಯಾಕೆ ಹೀಗೆ ನಂಬಿಕೆ ದ್ರೋಹ ನನ್ನ ಜೊತೆಗೆ?
ಇಂತಹುದೇ ಸಮಸ್ಯೆ ಎದುರಾದಾಗ ಹೇಗೆ ಅರ್ಜುನ ಗುರು ದ್ರೋಣಾಚಾರ್ಯರಿಗೆ ದಂಬಾಲುಬಿದ್ದು ಏಕಲವ್ಯನ ಹೆಬ್ಬೆರಳು ಕಿತ್ತುಕೊಂಡ ಗುರುದಕ್ಷಿಣೆಯ ನೆಪದಲ್ಲಿ? ನನಗಿಂತ ಚೆನ್ನಾಗಿ ಬೌಲಿಂಗ್ ಮಾಡಿದ ಎಲ್ಲರ ಹೆಬ್ಬೆರಳನ್ನೂ ಕಿತ್ತು ನನಗೆ ನ್ಯಾಯ ದೊರಕಿಸಬೇಕಾದ ನನ್ನ ಬದುಕಿನ ಗುರು ಮಾತ್ರ ಕೊನೆಗೂ ದ್ರೋಣಾಚಾರ್ಯನಾಗಲೇ ಇಲ್ಲ. ನಾನು ಮಾತ್ರ ಅಲ್ಲಿಯೇ ಉಳಿದೆ ನನ್ನ ಬದುಕಿನ ಕೊನೆಯ ಸೆಲೆಕ್ಷನ್ ಕ್ಯಾಂಪ್ ನ ಹೊರಬಾಗಿಲ್ಲಿ!

ನಿರಾಸೆಯನ್ನೇ ಹೊದ್ದು ಮನೆಯ ಮೆಟ್ಟಿಲು ಏರುತ್ತಿದ್ದಾಗ ಎಲೆ ಅಡಕೆ ಜಗಿಯುತ್ತಾ ನಿರಾಳವಾಗಿ ಕೂತಿದ್ದ ಅಪ್ಪ ರಿಸಲ್ಟ್ ನ್ನು ಈ ಮೊದಲೇ ಊಹಿಸಿದ್ದ ಹಾಗೆ ತಣ್ಣನೆಯ ದನಿಯಲ್ಲಿ "ಬ್ಯಾಟ್ ಧರ್ಲೆರ್ ಪೋಟ್ ಭರತ್ ನಾಹಿ ರೇ; ಕಾಯ್ ತರೀ ವ್ಯಾಪ್ತ್ ಕರ್ಲೆವೆ ( ಬ್ಯಾಟ್ ಹಿಡಿದರೆ ಹೊಟ್ಟೆ ತಂಬಲ್ಲ ಕಣೋ; ಚೆನ್ನಾಗ್ ಓದಿ ಏನಾದ್ರೂ ಕೆಲ್ಸ ಹುಡ್ಕೋಬೇಕು).." ಅಂದಾಗ ಏನೂ ಮಾತಾಡದೇ ಒಳಸೇರಿದ್ದೆ...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
Photo: Naveen Kumar

#ಬದುಕು

೧)

ಬಾಚಿದಷ್ಟು ಮರಳು
ಈ ಜಗಕ್ಕೆಲ್ಲಾ ಸುಖದ ಮರುಳು;
ಸೋರಿ ಉಳಿದಷ್ಟು ಮಾತ್ರ
ಬೊಗಸೆಗೆ ದಕ್ಕುವುದಿಲ್ಲಿ ಬದುಕ ಹರಳು!

೨)

ಯಾವ ಸೂತ್ರದೊಳಗೂ
ನಿಲುಕದ ಬದುಕೊಂದು ವಿಚಿತ್ರ;
ಬೆನ್ನ ಹಿಂದೆ ಸದ್ದಿಲ್ಲದೇ
ತಿರುಗುತ್ತಿದೆ ಅವನ ಕಾಲಚಕ್ರ!

೩)

ದಡದಲ್ಲಿಯೇ ನಿಂತು ನಿರಾಳ
ಕಾಯುತ್ತಿರುವ ಬದುಕು ನಮ್ಮ ಸೊತ್ತು?
ದೂರದಲ್ಲಿ ಆರುತ್ತಿರುವ ಬೆಳಕು
ತೀರಕ್ಕೂ ಇರುಳ ಚೆಲ್ಲುವುದೆಷ್ಟು ಹೊತ್ತು?

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ಕಂಬಳ

ಇಂದು ಸುರತ್ಕಲ್ ನ ಮಾಧವನಗರದಲ್ಲಿ ಜಾತ್ರೆಯ ಸಂಭ್ರಮ.ರಾಮ-ಲಕ್ಷ್ಮಣ ಎನ್ನುವ ಹೆಸರಿನ ಜೋಡುಕೆರೆ ಕಂಬಳವನ್ನು ನೋಡಲು ಕಿಕ್ಕಿರಿದ ಜನ ಸಮೂಹ ಕಂಬಳದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.ಇದು ಕೇವಲ‌ ಒಂದು ಕ್ರೀಡೆಯಾಗಿರದೇ ತುಳುನಾಡಿನ ಜನಪದದಲ್ಲಿ ಬೆರೆತು ಹೋದ ಸಂಭ್ರಮ, ಉತ್ಸವ, ಪರಂಪರೆಯೆನ್ನುವುದು ಮತ್ತೆ ಮತ್ತೆ ಸಾಬೀತಾಗುವಂತೆ ಇತ್ತು ಇಂದು ನಡೆದ ಹೊನಲು ಬೆಳಕಿನ ಕಂಬಳ.ಸುಮಾರು ೭೯ ಜೊತೆ ಕೋಣಗಳು ಭಾವಹಿಸಿದ್ದ ಈ  ಸ್ಪರ್ಧೆಗೆ ಮಧ್ಯಾಹ್ನದಿಂದಲೇ ಒಂದು ವಿಶಿಷ್ಠವಾದ ಕಳೆ ಮೂಡಿಬಂದಿತ್ತು.

ಕೋಣಗಳನ್ನು ಚೆನ್ನಾಗಿ ತೊಳೆದು, ಸಿಂಗರಿಸಿದ ನಂತರ ಎರಡೂ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ, ಆ ನೊಗದ ಮಧ್ಯೆ ಕಟ್ಟಿದ ಹಗ್ಗವನ್ನು ಹಿಡಿದು ಸಾಲು ಸಾಲು ಕೋಣಗಳು ಕಣಕ್ಕಿಳಿಯಲು ತಯಾರದ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.ಆ ಕೋಣಗಳ ಜೊತೆಯಲ್ಲಿ ಓಡುವ ವ್ಯಕ್ತಿಯ ಮೈಕಟ್ಟು ಥೇಟ್ ಕಡೆದಿಟ್ಟ ಶಿಲೆಯಂತೆ. ಓಟಕ್ಕೆ ಕೋಣಗಳನ್ನು ಅಣಿಮಾಡಿಸುವುದು ಅಷ್ಟು ಸುಲಭವಾದ ಕೆಲಸ ಅಲ್ಲ ಅನ್ನುವುದು ಇಂದು ಬಹಳ‌ ಹತ್ತಿರದಿಂದ ನೋಡಿದಾಗಲೇ ಗೊತ್ತಾದ ಸತ್ಯ.

ಈ ಎಲ್ಲಾ ಸೊಬಗನ್ನು ನೋಡುತ್ತಾ ಆಡ್ಡಾಡುತ್ತಿರುವಾಗ ಗೆಳೆಯ ಕರುಣಾಕರ್ ತನ್ನ ಕಂಬಳದ ಕೋಣದ ಜೋಡಿನೊಂದಿಗೆ ಮಾತಿಗೆ ಸಿಕ್ಕಿದ್ದು ಈ ಕಂಬಳದ ಬಗ್ಗೆ  ಬಹಳಷ್ಟು ವಿಷಯಗಳನ್ನು ತಿಳಿಯುವಂತಾಯ್ತು. ಇಂದು ನಡೆಯುತ್ತಿದ್ದ ಕಂಬಳ‌ದ ಸ್ಪರ್ಧೆ ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಇತ್ತು.ಹಗ್ಗದ ಓಟ, ನೇಗಿಲು ಓಟ ಮತ್ತು ಹಲಗೆ ಓಟ. ಮೂರನ್ನೂ ನೋಡಿದ್ದರೂ ಅದರ ಬಗ್ಗೆ ಅದರಲ್ಲಿ ಪಳಗಿದವರಿಂದ ಮಾಹಿತಿಯನ್ನು ಕೇಳುವುದೇ ಒಂದು ಖುಷಿ. ಅವನು ಹೇಳಿದ ಪ್ರಕಾರ;

ಎರಡೂ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ, ಆ ನೊಗದ ಮಧ್ಯೆ ಕಟ್ಟಿದ ಹಗ್ಗವನ್ನು ಹಿಡಿದು ಓಡಿಸುವ ಪಂದ್ಯ ಹಗ್ಗದ ಓಟದ ವಿಭಾಗವಾದರೆ, ನೊಗದ ಮಧ್ಯೆ ಮರದಿಂದ ಮಾಡಿದ ಉದ್ದನೆಯ ಕೋಲನ್ನು ಕಟ್ಟಿ ಅದರ ಕೊನೆಗೆ ಇರುವ ನೇಗಿಲಿನ ಆಕಾರದ ಕೋಲನ್ನು ಹಿಡಿದು ಓಡಿಸುವ ಸ್ಪರ್ಧೆಯ ಹೆಸರು ನೇಗಿಲು ಓಟ. ಇದರಲ್ಲಿ ವೇಗವಾಗಿ ಓಡಿದ ಜೋಡಿ ಗೆದ್ದಂತೆ.

ಮತ್ತೆ ಇನ್ನೊಂದು ಸ್ಪರ್ಧೆ ಇತ್ತು.ಅದು ಸ್ವಲ್ಪ ವಿಭಿನ್ನ ಮತ್ತು ಇನ್ನೂ ಹೆಚ್ಚಿನ ಕೌಶಲ್ಯ ಬೇಡುವಂತಹ ಆಟ. ಕಂಬಳದ ಓಟದ ಗದ್ದೆಯಲ್ಲಿ ನಿಗದಿತ ಎತ್ತರದಲ್ಲಿ ಅಡ್ಡವಾಗಿ ಬಟ್ಟೆ ಕಟ್ಟಿದ್ದನ್ನು ಮೊದಲೇ ಗಮನಿಸಿದ್ದೆ.ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗಕ್ಕೆ, ಕೊನೆಯಲ್ಲಿ ಹಲಗೆ ಇರುವ ಒಂದು ಮರದ ಕೋಲನ್ನು ಕಟ್ಟುತ್ತಾರೆ.ಕೋಣಗಳನ್ನು ಓಡಿಸುವಾಗ ಆ ಹಲಗೆ ಮೇಲೆ ಒಂದು‌ಕಾಲನ್ನು ಇಟ್ಟು ಓಡಬೇಕು ಮತ್ತು ಓಟದ ಮಧ್ಯೆ ಆ ಹಲಗೆಯಿಂದ ಕೆಸರನ್ನು ಮೇಲೆ ಕಟ್ಟಿದ ಬಟ್ಟೆಗೆ ಚಿಮ್ಮಿಸುವುದು ಬಹಳ ಮುಖ್ಯ. ಯಾರು ಅತೀ ಎತ್ತರಕ್ಕೆ ನೀರನ್ನು ಚಿಮ್ಮಿಸುತ್ತಾರೋ ಅವರು ವಿನ್ನರ್!

ಸುಮಾರು ಏಳೆಂಟು ವರುಷಗಳಾಗಿಬಹುದು ನಮ್ಮ ಹಟ್ಟಿಯಲ್ಲಿ ಕೋಣಗಳು ಮರೆಯಾಗಿ. ಅದರ ಮೊದಲು ನಮ್ಮ ಹಟ್ಟಿಯಲ್ಲಿ ವರ್ಷಕ್ಕೆರಡು ಜೊತೆ ಕೋಣಗಳು ಬದಲಾಗುತ್ತಿದ್ದವು. ಕೋಣಗಳ ಜೋಡಿಯ ಮೇಲೆ‌ ಅಪ್ಪನಿಗೆ ಒಂದು ತೆರನಾದ ವಿಚಿತ್ರ ಮೋಹ. ಹಟ್ಟಿಯಲ್ಲಿ ಚಂದದ ಕೋಡುಗಳು ಇರುವುದು ಆ ದಿನಗಳಲ್ಲಿ ಒಂದು ಪ್ರತಿಷ್ಟೆಯ ವಿಷಯವೂ ಹೌದು.ಹೊಸ ಕೋಣಗಳ ಖರೀದಿ, ಅವುಗಳಿಗೆ ಕೊಡುತ್ತಿದ್ದ ತರಬೇತಿ, ಉಳುಮೆ ಆದ ನಂತರ ಅವುಗಳನ್ನು ಹತ್ತಿರ ಇದ್ದ ತೋಡಿನಲ್ಲಿ ತೊಳೆಯುತ್ತಿದ್ದ ಸಂಭ್ರಮ,ಒಳ್ಳೆಯ ಪೌಷ್ಟಿಕ ಆಹಾರವನ್ನು ಹಾಕಿ ಸಾಕುತ್ತಿದ್ದ ರೀತಿ ಎಲ್ಲವೂ ಇಂದಿನ ಕಂಬಳದ ಕೋಣಗಳನ್ನು ನೋಡುವಾಗ ನೆನಪಿಗೆ ಬಂದವು. ಎಷ್ಟು ಬೇಗ ಒಂದು ಬದುಕಿನ ಕಾಲಘಟ್ಟವನ್ನು ಸಾಗಿ ಮುಂದೆ ಬಂದಿದ್ದೇವೆ ಅನ್ನುವ  ಯೋಚನೆ ಬಂದು, ಆ ಮತ್ತೆ ಬಾರದ, ಇತಿಹಾಸವೇ ಆಗಿ ಹೋದ ದಿನಗಳ ಬಗ್ಗೆ ನೆನೆದು ಮನಸ್ಸು ಖಿನ್ನವಾಯಿತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅರಳಿ ನಗುವ ಹೂವಿನಲ್ಲಿ
ಕುಳಿತಿದ್ದ ದುಂಬಿ ಹಾರಿ,
ಬಿರಿಯುತಿದ್ದ ಮೊಗ್ಗಿನೆದರು
ಹಾಡಿ ಸೆಳೆದಿದೆ.

ದುಂಬಿಯ ಝೇಂಕಾರದಲ್ಲಿ
ಮೈಯ ಮರೆತ ಮೊಗ್ಗು ಯಾಕೊ,
ಅರಳಿ ನಗುವ ಸುಖವನ್ನೆ
ಮರೆತು ನಿಂತಿದೆ.

ಹೂವ ಬಿಟ್ಟು ಮೊಗ್ಗಿನಲ್ಲಿ
ಕುಳಿತ ದುಂಬಿ ಹಾಡು ಕರಗಿ,
ಕಳಚಿ ಬಿದ್ದ ಮೊಗ್ಗು ಮರೆತು
ಜೇನು ನೆಕ್ಕಿದೆ.

ಸಹಜವಾಗಿ ಅರಳುವಲ್ಲಿ
ಹೂವ ಚೆಲುವು ಮಾಸದೆಂದು,
ಹುಡುಕಿ ಬರುವ ದುಂಬಿ ನೂರು
ಸಾರಿ ಹೇಳಿದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮರದ ಬುಡದಲ್ಲಿ ಬಿತ್ತಿದ
ಬೀಜಕ್ಕೆ ನೆರಳು ಸಿಕ್ಕಿತು;
ಬಯಲ ಬಿಸಿಲಲ್ಲಿ ಬಿದ್ದ
ಬೀಜಕ್ಕೆ ಬೆಳಕು ದಕ್ಕಿತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಹಾಗೆಲ್ಲಾ ಒಪ್ಪಿಕೊಳ್ಳುವುದಾಗಿದ್ದರೆ -
ಬಿಡಿಬಿಡಿಯಾಗಿ ಅರಳಿದ್ದ ಹೂಗಳನ್ನೆಲ್ಲಾ
ದಾರದಲ್ಲಿ ಬಿಗಿದು
ಪೋಣಿಸುವ ಅಗತ್ಯವೇನಿತ್ತು ಹೇಳಿ?
ಬೆಳಕಿರುವವರೆಗಾದರೂ
ನಗುತ್ತಿದ್ದವು ಗಿಡದಲ್ಲಿಯೇ;
ಅಷ್ಟಕ್ಕೂ ಚಿವುಟಲೇ ಬೇಕೆನ್ನುವ
ಹಟವಾದರೂ ನನಗೇನಿತ್ತು ಹೇಳಿ?

ಅದೆಷ್ಟು ದಾಟಿಸಿದರೂ
ಕೆಲವೊಂದು
ನಿಮ್ಮಲ್ಲಿಯೇ ಉಳಿದು ಬಿಡುತ್ತವೆ,
ಬಿಕರಿಯಾಗದೇ ಉಳಿದ
ಸಂತೆಯ ಸರಕುಗಳಂತೆ.

ಹಾಗೆಲ್ಲಾ ಖಾಲಿಯಾಗುತ್ತಿದ್ದರೆ -
ಬಾಡಿಹೋಗುತ್ತಿದ್ದ ಹೂಗಳಿಗೆಲ್ಲಾ
ಮತ್ತೆ ಮತ್ತೆ ನೀರುಣಿಸಿ
ತಾಜಾ ಮಾಡುವ ಅಗತ್ಯವೇನಿತ್ತು ಹೇಳಿ?

ಇಲ್ಲಿ ಎಲ್ಲವೂ,
ಬಿಸಿಯಾಗಿರಬೇಕು
ಅಥವಾ
ಬಿಗಿಯಾಗಿರಬೇಕು.

ಅಷ್ಟಕ್ಕೂ,
ನಿಗಿನಿಗಿ ಹೊಳೆಯುವಷ್ಟು
ಕಾಯಿಸಲೇ ಬೇಕೆನ್ನುವ ತುರ್ತು
ನನಗಾದರೂ ಏನಿತ್ತು ಹೇಳಿ?

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಭೀಷ್ಮನಂತೆಯೇ ಅವನಿನ್ನೂ
ಶರಶಯ್ಯೆಯಲ್ಲಿ ಮಲಗಿದ್ದಾನೆ,
ಎದೆಗೆ ನಾಟದ ಬಾಣದಿಂದಾಗಿ
ಜೀವವಿನ್ನೂ ಹಿಡಿದುಕೊಂಡು.

ಕಿಟಕಿಯಿಂದ ಇಣುಕುವ ಕೋಲು ಬಿಸಿಲಿಗೆ
ಅವನು ಮೊದಲಿನಂತೆ ದೃಷ್ಠಿ
ನೆಡುವುದಿಲ್ಲ,
ಹೊರಗಿನ ಗದ್ದಲಗಳಿಗೆ
ಅವನ ಕಿವಿಗಳು ಮೊದಲಿನಂತೆ
ತೆರೆಯುವುದೂ ಇಲ್ಲ.
ಆದರೂ ಅವನ ಕಾತರದ ಕಣ್ಣುಗಳು
ಕತ್ತಲಲ್ಲೂ ಮಿನುಗುತ್ತವೆ,
ಎಂದೋ ಬೀಳುವ ನಕ್ಷತ್ರದ
ನಿರೀಕ್ಷೆಯಲ್ಲಿ ಹಣ್ಣಾಗುತ್ತಾ;
ಮೈಯೆಲ್ಲಾ ಕಣ್ಣಾಗುತ್ತಾ...
ಆ ಮುಖಾಮುಖಿಯಲ್ಲಿ ಅವನಲ್ಲೊಂದು
ಕೊನೆಯ ಪ್ರಾರ್ಥನೆಯಿದೆ!

ಹಾಗಂತ ಈ ಕುರುಕ್ಷೇತ್ರದ
ಯುದ್ಧವನ್ನು ಪೂರ್ತಿಯಾಗಿ
ನೋಡಲೇಬೇಕೆನ್ನುವ ಹಪಾಹಪಿಯೇನೂ
ಅವನಿಗೆ ಇದ್ದಂತಿಲ್ಲ.
ಯಾರ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ
ಅವನಲ್ಲಿ ಅಸಕ್ತಿಯೂ ಇಲ್ಲ.
ಅಷ್ಟಕ್ಕೂ ಅವನು
ಯಾರ ಹಂಗಿನ ತುತ್ತಿಗೂ ಬಿದ್ದವನಲ್ಲ!

ಆದರೆ,
ಅವನಲ್ಲಿ ಈಗ
ನಿಜಕ್ಕೂ ಆಯ್ಕೆಗಳು ಉಳಿದಿಲ್ಲ;
ಯಾಕೆಂದರೆ ಅವನು
ಇಚ್ಛಾಮರಣಿಯಲ್ಲ!
#ಸೀತಕ್ಕನವಠಾರ

ಅವರು ಮನೆಗೆ ಬರುವುದೆಂದರೆ ಅದು‌ ಸುಮ್ಮನೆ ಅಲ್ಲ.ಅಲ್ಲಿ ಏನಾದರೊಂದು ಘಟಿಸಲೇಬೇಕು.ಊರಿನ ಎಲ್ಲಾ ಮನೆಯ ಒಗ್ಗರಣೆಯ ಪರಿಮಳವನ್ನು ಉಡಿಯಲ್ಲಿಯೇ ಕಟ್ಟಿಕೊಂಡು ಬರುವ ಅವರು ಮನೆಯೊಳಕ್ಕೆ ಕಾಲಿಟ್ಟರೆಂದರೆ ನಮ್ಮ ಮನದೊಳಗೆ ಶಾಂತವಾಗಿ ಹರಿಯುತಿದ್ದ ನದಿಯಲ್ಲಿ ತುಮುಲಗಳ ತೆರೆಗಳು ಹಿಂದುಮುಂದಿಲ್ಲದೇ ಎದ್ದವೆಂದೇ ಅರ್ಥ.ಯಾವುದಕ್ಕೂ ಮೊದಲು ಅವರ ಪರಿಚಯ ಮಾಡಿಕೊಳ್ಳುವ.ಅವರೇ ನಮ್ಮ ಊರಿನ ಎಪ್ಪತ್ತು ದಾಟಿದ ಒಂಟಿ ಮಹಿಳೆ ಸೀತಕ್ಕ. ನಮ್ಮ ಊರಿನಲ್ಲಿ ಅವರು ಯಾರಿಗೂ ಸಂಬಂಧದಲ್ಲಿ ಅಕ್ಕ ಅಲ್ಲ. ಆದರೆ ಅಬಾಲ ವೃದ್ಧರಾಗಿ ಎಲ್ಲರೂ ಅವರನ್ನು ಕರೆಯುವುದು ಮಾತ್ರ ಸೀತಕ್ಕ ಅಂತನೇ. ಹಾಗಂತ ಅವರನ್ನು ಬೆನ್ನು ಬಾಗಿದ, ಕೈಯಲ್ಲಿ ಕೋಲು ಹಿಡಿದುಕೊಂಡಿರುವ, ತಲೆ ಮೇಲೆ ಸೆರಗು ಹಾಕಿದ ಭಂಗಿಯಲ್ಲಿ ನೀವು ಯೋಚಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ.ಅವರು ನಮ್ಮ ಊರಿನಲ್ಲಿ ಅತ್ಯಂತ ಚಟುವಟಿಕೆಯ,ಲವಲವಿಕೆಯ ವ್ಯಕ್ತಿಗಳಲ್ಲಿ ಒಬ್ಬರು ಅಂತ ಯಾವುದೇ ಗೊಂದಲವಿಲ್ಲದೇ ಸಲೀಸಾಗಿ ಹೇಳಿಬಿಡಬಹುದು.ಅಂತಹ ವ್ಯಕ್ತಿ ಯಾರ ಮನೆಗೂ ಹೋಗಿಲ್ಲ ಅಂದರೆ ಆ ದಿನ ಅವರಿಗೆ ಮೈ ಹುಷಾರಿಲ್ಲ ಅಂತಾನೇ ಲೆಕ್ಕ.ಮತ್ತು ಆ ದಿನ ಮಾತ್ರ ಸೀತಕ್ಕನ ನಾಯಿ ನಮ್ಮ ಮನೆಯ ಮುಂದೆ ಬಂದು ಕೂರೋದು ಮತ್ತು ಊಟ ಹಾಕುವವರೆಗೂ ಬಾಲ ಅಲ್ಲಾಡಿಸೋದು! ಮನೆಯಿಂದ ಸೀತಕ್ಕನ ಸವಾರಿ ಹೊರಟಿತೆಂದರೆ ಅವರ ಹಿಂದೆ ಅವರ ನಾಯಿಯೂ ಇರಲೇ ಬೇಕು.ಅವರನ್ನು ನೋಡುವಾಗಲೆಲ್ಲಾ ಮಲೆಗಳಲ್ಲಿ ಮದುಮಗಳು ಕಾದಂಬರಿಯ ನಾಯಿಗುತ್ತಿಯ ನೆನಪಾಗದೇ ಇರುವುದಿಲ್ಲ.ಆದರೆ ಈ ನಾಯಿಗೆ ಬೇರೆ ಹೆಸರೆಂಬುದಿಲ್ಲ.ಎಲ್ಲರಿಗೂ ಅದು ಸೀತಕ್ಕನ ನಾಯಿ ಅಷ್ಟೇ.

ಸೀತಕ್ಕ ಸೀದಾ ಸೀದಾ ಮನೆಯೊಳಗೆ ಕಾಲಿಟ್ಟದ್ದನ್ನು ನಾನಿದುವರೆಗೂ‌ ಕಂಡೇ ಇಲ್ಲ.ಅಂಗಳದಲ್ಲಿ ಬರುತ್ತಲೇ ಅವರಿಗೆ ಬೇಕಾದಷ್ಟು ವಿಷಯಗಳು ಸಿಗುತ್ತವೆ ನಮ್ಮನ್ನು ಮನೆ‌ ಒಳಗಿನಿಂದ ಹೊರಗೆ ಬರುವಂತೆ ಮಾಡಲು."ಛೇ, ಈ ಮರದ ಕಟ್ಟಿಗೆಗಳನ್ನು ಹೀಗೆ ಎಸೆದರೆ ಯಾವುದಕ್ಕಾದೀತು? ಕೊಟ್ಟಿಗೆಯಲ್ಲಿ ಜಾಗ ಇಲ್ವಾ? ಹಾಗೂ ನಿಮಗೆ ಇಲ್ಲಿಯೇ ಇಡಬೇಕಂದ್ರೂ, ಓ...ಆ ತೆಂಗಿನ ಮರಕ್ಕೆ ತಾಗುವ ಹಾಗೆ ಸರ್ತ ಇಡೋದಲ್ವಾ?.." ಅಂತಾನೋ, " ಅಯ್ಯೋ ದೇವ್ರೇ...ಆ ತೊಂಡೆ ಬಳ್ಳಿಯನ್ನು ಇನ್ನೂ ನೆಲದಲ್ಲಿಯೇ ಬಿಟ್ಟಿದ್ದೀರಲ್ವಾ, ನಿಮಗೆ ಮಂಡೆ ಸಮ ಉಂಟಾ? ನಾಲ್ಕು ಕಟ್ಟಿಗೆ ನೆಟ್ಟು ಅದ್ರ ಮೇಲಾದ್ರೂ ಬಿಡ್ಲಿಕ್ಕೆ ನಿಮಗೆಂತ ಮಂಡೆಮಾರಿ? ಚಪ್ಪರ ಆದ್ರೂ ನಾಲ್ಕು ದಿನ ತಡ ಆದ್ರೆ ನಡೀತದೆ..." ಅಂತಾನೋ ಅಥವಾ ಕಣ್ಣಿಗೆ ಬಿದ್ದ ಇನ್ಯಾವುದನ್ನೋ ಹೇಳಿ ಒಟ್ಟಾರೆ ನಮ್ಮನ್ನು ಹೊರಗೆ ಕರೆಯದೇ ಬಿಡುವುದಿಲ್ಲ ಈ ಸೀತಕ್ಕ.ನಾವು ಮನೆಯಿಂದ ಹೊರಗೆ ಬಂದು ಅವರ ಮಾತುಗಳಿಗೆಲ್ಲಾ ಹೂಂಗುಟ್ಟಿದರೆ ಬಚಾವ್! ಏನಾದ್ರೂ ಅದು ಹಾಗಲ್ಲ ಹೀಗಲ್ಲ ಅಂತ ಹೇಳಿಬಿಟ್ರೆ ಮುಗಿಯಿತು ಕತೆ.ಆ ದಿನ ನಮ್ಮ ಗ್ರಹಚಾರ ನೆಟ್ಟಗಿಲ್ಲ ಅಂತಾನೇ ಲೆಕ್ಕ.ಮತ್ತೆ ಆ ತೊಂಡೆಕಾಯಿಯ ಕೃಷಿ, ನಮ್ಮ ಅಪ್ಪ ಇದ್ದ ದಿನಗಳಲ್ಲಿ ಇದ್ದ ಕೃಷಿಯ ವೈಭವ ಮತ್ತು ಪರೋಕ್ಷವಾಗಿ ನನ್ನ ಕೈಯಿಂದ ಹಾಳಾಗುತ್ತಿರುವ ಈ ಕೃಷಿ ಎಲ್ಲದರ ಬಗ್ಗೆಯೂ ರಾತ್ರಿ ಊಟದ ಸಮಯದವರೆಗೂ ಹೇಳಿ, ಮತ್ತೊಮ್ಮೆ ಅವರ ಮಾತಿಗೆ ಎದುರು ಮಾತಾಡೋದಿಲ್ಲ ಅಂತ ಪ್ರಮಾಣ ಮಾಡುವಷ್ಟರ ಮಟ್ಟಿಗೆ ನಮ್ಮನ್ನು ಹಿಂಡಿಹಿಪ್ಪೆ ಮಾಡಿಬಿಡುತ್ತಾರೆ.ನಂತರಾದ್ರೂ ಮನೆಗೆ ನೆಟ್ಟಗೆ ಹೋಗ್ತಾರಾ? ಅದೂ ಇಲ್ಲ. ನಮ್ಮ ಮನೆಯಿಂದ ಅವರ ಮನೆಗೆ ಹೋಗುವ ದಾರಿಯಲ್ಲಿ ಸಿಗುವ ಐದಾರು ಮನೆಯವರೊಂದಿಗೆ ನನ್ನ ಬಗ್ಗೆ ದೂರು ಹೇಳಿ,ಅವರೂ ನಾಳೆ ತೊಂಡೆಕಾಯಿ ಬಳ್ಳಿಗೇಕೆ ಚಪ್ಪರ ಹಾಕಿಲ್ಲ ಅಂತ ಕೇಳ್ಲಿಕ್ಕೆ ನಮ್ಮ ಮನೆಗೆ ಬರುವ ಹಾಗೆ ಮಾಡಿ  ಹೋಗುತ್ತಾರೆ.

ಇಂತಹ ಸೀತಕ್ಕ ಗಂಡನ ಬಗ್ಗೆ ವಿಚಾರಿಸಿದರೆ ಮಾತ್ರ ಅಂತರ್ಮುಖಿಯಾಗುತ್ತಾಳೆ. ನಮಗೆ ಅರ್ಥವಾಗದ ತತ್ವಜ್ಞಾನ ಮಾತಾಡುತ್ತಾಳೆ.ಅಲ್ಲೀತನಕ ಓತಪ್ರೋತವಾಗಿ ಹರಿಯುತ್ತಿದ್ದ ಮಾತುಗಳು ಮಳೆ ನಿಂತ ಹಾಗೆ ನಿಂತು ಬಿಡುತ್ತವೆ.ನಾನು ಮತ್ತು ನನ್ನ ಓರಗೆಯವರು ನಮಗೆ ಬುದ್ದಿ ಬರುವ ತನಕವೂ ಸೀತಕ್ಕನ ಗಂಡ ತೀರಿಕೊಂಡಿದ್ದಾರೆ ಅಂತಾನೇ ತಿಳ್ಕೊಂಡಿದ್ದೆವು. "ನನಗೂ ಸರಿಯಾಗಿ ಗೊತ್ತಿಲ್ಲ, ಆದ್ರೆ ಇವರೇ ಬಿಟ್ಟು ಬಂದದ್ದು ಅಂತ ಹೇಳ್ತಾರೆ. ನಾನು ಮದುವೆಯಾಗಿ ಈ ಮನೆಗೆ ಬಂದಾಗಿನಿಂದ ನೋಡ್ತಾ ಇದ್ದೇನೆ ಆವತ್ತಿನಿಂದ ಅವರು ಅದೇ ಮನೆಯಲ್ಲಿದ್ದಾರೆ..." ಅಂತ ಅಮ್ಮ ಒಮ್ಮೆ ಹೇಳಿದ್ದರು ಯಾವುದೋ ವಿಷಯಕ್ಕೆ ಸೀತಕ್ಕನ ಗಂಡನ ವಿಷಯ ಬಂದಾಗ.ನನಗೂ ಈ ಬಗ್ಗೆ ಕೂತೂಹವಿದ್ದರೂ ಅವರ ಬಾಯಿಗೆ ಹೆದರಿ ಕೆದಕ್ಲಿಕ್ಕೆ ಹೋಗುವ ಸಾಹಸ ಮಾಡಿರಲಿಲ್ಲ.ಆದರೆ ಆ ಸಂದರ್ಭವೂ ಒಮ್ಮೆ ಬಂತು.ಹೀಗೆಯೇ ಅವತ್ತೊಮ್ಮೆ ಅಂಗಳದಲ್ಲಿಯೇ ನಿಂತು ನನ್ನ ಮೇಲಿನ ಮೇಲಿನ ಪ್ರೀತಿಯಿಂದ ಹಿಗ್ಗಾಮುಗ್ಗವಾಗಿ ತನ್ನ ಪ್ರಖರವಾದ ಮಾತಿನ ಬಾಣಗಳಿಂದ ನನ್ನನ್ನು ತಿವಿಯುತಿದ್ದಾಗ ಪ್ರತಿ ಆಕ್ರಮಣ ಮಾಡಲು ಏನೂ ತೋಚದೇ, " ಸೀತಕ್ಕಾ ನೀನ್ಯಾಕೆ ಗಂಡನನ್ನು ಬಿಟ್ಟು ಬಂದದ್ದು? ಕುಡುಕ್ನಾಗಿದ್ನಾ ಅವನು?..." ಅಂತ ಕೇಳಿಯೇ ಬಿಟ್ಟೆ.ಮೌನವೇ ಆವರಿಸಿ ಬಿಟ್ಟಿತು.ಮಾತೇ ಆಡ್ಲಿಲ್ಲ ಸೀತಕ್ಕ.ಹೋ...ಸಿಟ್ಟು ಬಂದಿರ್ಬೇಕು, ವಾಪಾಸು ಹೋಗ್ತಾರೆ ಈಗ ಅಂದ್ಕೊಂಡೆ. ಆದರೆ ಹಾಗೇನೂ ಮಾಡದೇ ತುಳಸೀ ಕಟ್ಟೆಯ ಹತ್ತಿರ ಇದ್ದ ಮಸೆಕಲ್ಲಿನ ಮೇಲೆ ಒಂದು ಕಾಲಿಟ್ಟು ತನ್ನ ಕತ್ತಿ ಮಸೆಯಲು ಶುರು ಮಾಡಿದ್ಳು, ಅದಕ್ಕಾಗಿಯೇ ಬಂದಿದ್ದೇನೆ ಎಂಬಂತೆ.ಸ್ವಲ್ಪ ಹೊತ್ತು ಮಸೆದ ನಂತರ ತನ್ನ ತೋರು ಬೆರಳನ್ನು ಕತ್ತಿಯ ಅಲಗಿಗೆ ತಾಗಿಸುತ್ತಾ " ಹಾಂ, ಈಗ ಹರಿತ ಆಯ್ತು.ಕತ್ತಿ ಹರಿತ ಇಲ್ಲಂದ್ರೆ ಯಾವುದಕ್ಕೂ ಉಪ್ಯೋಗಿಲ್ಲ ನೋಡು.ಒಂದು ರೀತಿಯಲ್ಲಿ ಈ ಬಿಸಿ ಚಾ ಇದ್ದ ಹಾಗೆ.ಬಿಸಿಬಿಸಿ ಇದ್ದಾಗ ಮಾತ್ರ ಕುಡಿಬಹುದು, ಆದ್ರೆ ತಣ್ಣಗಾದ್ರೆ ಕುಡಿಯೋಕೆ ಆಗಲ್ಲ ಅಲ್ವಾ? ಸ್ಥಿತಿ ಮುಖ್ಯ, ಬರೇ ಚಾ ಅಲ್ಲ..." ಅಂತ ಹೇಳಿ ನಮ್ಮ‌ಮನೆ ಹಿಂದಿನ ತೋಟಕ್ಕೆ ತಾಗಿ ಇದ್ದ ಅವರ ಗದ್ದೆಗೆ ಹೋದ್ರು.ಸೀತಕ್ಕನ ಜೊತೆ ಅವರ ಗಂಡನ ವಿಷಯ ಕೇಳ್ಬಾರ್ದು, ಕೇಳಿದ್ರೆ ಏನೇನೋ ಹೇಳ್ತದೆ ಅಂತ ಹೇಳೋದನ್ನ ನಾನೂ ಕೇಳಿದ್ದೆ. ನಿಜ ಆಯ್ತು.ಅವರೇನು ಹೇಳಿದ್ರು ಅಂತ ಅರ್ಥವಾಗದೇ ಬಹುಶಃ ಎಪ್ಪತ್ತು ದಾಟಿತಲ್ವಾ, ಅರಳು ಮರುಳು ಇರ್ಬೇಕು ಅಂದ್ಕೊಂಡೆ.ಇನ್ನು ಆ ವಿಷಯದಲ್ಲಿ ಕೇಳಲೇ ಬಾರದು ಅಂತ ನಿರ್ಧಾರ ಮಾಡಿ ಬೇರೆ ಕೆಲಸದಲ್ಲಿ ಮಗ್ನನಾದೆ.ಸುಮಾರು ಅರ್ಧ ಗಂಟೆ ಕಳೆದಿರಬಹುದು, ಮತ್ತೆ ಸೀತಕ್ಕನ‌ ಮಾತು ಕೇಳಿ ಅಂಗಳಕ್ಕೆ ಕಾಲಿಟ್ಟೆ.ನನ್ನ ನೋಡುತ್ತಲೇ, " ಏನೋ, ನಿನಗೆ ನನ್ನ ಗಂಡನ ವಿಷಯ ಬೇಕಾ? ಹೌದು ನಾನೇ ಅವರನ್ನ ಬಿಟ್ಟು ಬಂದೆ.ಹಾಗಂತ ಈಗ ನಾನು ಯಾರ ಮನೆಯಲ್ಲಿಯೂ ಬೇಡಿ ಅನ್ನ ತಿನ್ತಾ ಇಲ್ಲ.ನಿನ್ನ ಮನೆಗೂ ಬಂದಿಲ್ಲ.ನಾಳೆ ಸತ್ತರೆ ನನ್ನ ಮನೆಯಲ್ಲಿಯೇ ಸಾಯ್ತೇನೆ...ನಿನ್ನೆ ಮೊನ್ನೆ ಹುಟ್ಟಿದೋರೆಲ್ಲಾ ಕೇಳುವ ಹಾಗಾಯ್ತು..." ಅಂತ ಅಷ್ಟು ಹೇಳ್ಲಿಕ್ಕೇ ವಾಪಾಸು ಬಂದವರಂತೆ ಬಂದು ದುಡುದುಡು ಅಂತ ಹೋಗಿ ಬಿಟ್ರು. " ಯಾಕೋ ಅವರನ್ನ ಕೆಣಕ್ಲಿಕ್ಕೆ ಹೋದದ್ದು" ಅಂತ ಅಮ್ಮ ಹೊರಗೆ ಬಂದು, "ನಿನಗೆ ಗೊತ್ತಿಲ್ಲ, ನೀನಿನ್ನೂ ಚಿಕ್ಕವನು ಆಗ.ಅವರ ಗಂಡ ಸೀತಕ್ಕನ ಮನೆಗೆ ಆವಾಗಾವಾಗ ಬರೋರು. ಆದ್ರೆ ಈ ಹೆಂಗಸಿನದ್ದೇ ಬಾಯಿ ಜೋರು.ಪ್ರತೀ ಸಲನೂ ಗಂಡನಿಗೆ ಬಯ್ದು ಅವಮಾನ ಮಾಡಿ ಮನೆಯೊಳಗೇ ಸೇರಿಸ್ಕೊಳ್ತಿರ್ಲಿಲ್ಲ.ಅದೂ ಎಂತ ಬಯ್ಗಳು ಅಂತಿಯಾ...ರಾಮ ರಾಮ ಅಸಹ್ಯ.ಆ ಗಂಡಸಿಗೆ ಹೇಗಾಗಿರ್ಬೇಕು? ರಾತ್ರಿ ತನ್ನ ಊರಿಗೆ ಹೋಗ್ಲಿಕ್ಕಾಗದೆ ಎಷ್ಟೋ ಸಾರಿ ನಮ್ಮ ಮನೆಯಲ್ಲಿ ಉಳ್ಕೊಳ್ತಿದ್ರು. ಅದೆಷ್ಟು ಸಲ ಅತ್ತು ಹೋಗಿಲ್ಲ ಅವರು.ತುಂಬಾ ಪಾಪದವ್ರು.ನಾನೂ ಇತ್ತೀಚೆಗೆ ಕೇಳಿದ ಸುದ್ದಿ ,ಅವರಿಗೂ ಈಗ ಬೇರೆ ಮದುವೆಯಾಗಿ ಮಕ್ಳಿದ್ದಾರೆ ಅಂತ..." ಅಂತ ಹೇಳಿದಾಗ ಇನ್ನು ಈ ವಿಷಯದಲ್ಲಿ ಮಾತುಕತೆ ಬೇಡ ಅಂತ ಅನ್ನಿಸಿತು.

ಅವರಿಗೊಬ್ರು ಹತ್ತಿರದ ಸಂಬಂಧಿ ಇದ್ರು, ಹೆಸರು ಪಾಂಡು ಅಂತ.ಅವರು ಆಗಾಗ ಅವರ ಮನೆಗೆ ಬರೋದನ್ನ ನಾನು ನೋಡಿದ್ದೆ.ಈ ಪಾಂಡುವಿನ ಮೇಲೆ ಸೀತಕ್ಕನಿಗೆ ಒಂದು ರೀತಿಯ ಪುತ್ರವಾತ್ಸಲ್ಯ, ಎಲ್ಲಿಲ್ಲದ ಮಮಕಾರ.ಪ್ರತೀ ಸಲ ಸೀತಕ್ಕ ಮಾತಿಗೆ ನಿಂತಾಗ ಈ ಪಾಂಡುವಿನ ಹೆಸರು ಸುಳಿಯದೇ ಇರುವುದಿಲ್ಲ.' ನಮ್ಮ ಪಾಂಡು ಹೀಗೆ ಹೇಳ್ತಿದ್ದ',  'ಒಮ್ಮೆ ಪಾಂಡು ಹತ್ರ ಹೇಳ್ಬೇಕು' ಹೀಗೆ ಯಾವ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಂಡುವಿನ ಮೊರೆ ಹೋಗ್ತಿದ್ಳು ಸೀತಕ್ಕ.ಅಷ್ಟು ವಿಶ್ವಾಸ ಈ ಪಾಂಡುವಿನ ಮೇಲೆ. ಸುಮಾರು ಐದಾರು ವರ್ಷಗಳಿಂದ ಈಚೆಗೆ ಸೀತಕ್ಕನ ಮನೆಯ ಖಾಯಂ ಸದಸ್ಯನಾಗಿದ್ದ ಈ ಪಾಂಡು.ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ನನ್ನ ಗಮನಕ್ಕೆ ಬಂದ ವಿಷಯವೆಂದರೆ, ಸೀತಕ್ಕನ ಮಾತುಗಳಲ್ಲಿ ಎಲ್ಲಿಯೂ ಈ ಪಾಂಡುವಿನ ಪ್ರಸ್ತಾಪ ಬಾರದೇ ಇರುವುದು! ಬಹಳ ಸಲ‌ ಯೋಚಿಸಿದ್ದೆ ಕೇಳ್ಬೇಕು ಅಂತ. ಆದರೆ ಅವರ ಗಂಡನ ವಿಷಯವಾಗಿ ಆದ ಮುಜುಗರದಿಂದಾಗಿ ಕೇಳಿರಲಿಲ್ಲ.ಮೊನ್ನೆ ಅದಕ್ಕೂ ಒಂದು ಸಮಯ ಸಿಕ್ಕಿ, " ಸೀತಕ್ಕ, ಈಗ ನೀವು ಪಾಂಡುವಿನ ವಿಷಯ ಹೇಳುವುದೇ ಇಲ್ಲ, ಯಾಕೆ?" ಅಂತ ಕೇಳಿದರೆ ಸೀತಕ್ಕ ಏಕ್ ದಮ್‌ಗರಂ ಆದ್ಳು.ನಂತರ ಸ್ವಲ್ಪ ಸಾವರಿಸಿಕೊಂಡು ತಣ್ಣಗಿನ ಧ್ವನಿಯಲ್ಲಿ,
" ಕೋಗಿಲೆಯ ಸ್ವರ ಚಂದ, ಹಾಡುತ್ತೆ ಅಂತ ಹೇಳಿ ಕಾಗೆ ಅದರ ಮೊಟ್ಟೆಯನ್ನು ತನ್ನ ಗೂಡಿನಲ್ಲಿಟ್ಟು ಮರಿ ಮಾಡಲ್ಲ.ತಿಳಿಯದೇ, ಇದು ಕೋಗಿಲೆಯ ಮೊಟ್ಟೆ ಅಂತ ಗೊತ್ತಾಗದೇ ಅದನ್ನೂ ಮರಿ ಮಾಡ್ತದೆ.ಗೊತ್ತಾದ ಮೇಲೆ ಓಡ್ಸುತ್ತೆ.ಆದ್ರೆ ಮನುಷ್ಯರಿಗೆ ಕೊನೆವರೆಗೂ ಗೊತ್ತಾಗಲ್ಲ ನೋಡು ಯಾರು ತನ್ನವರು ಯಾರು ಹೊರಗಿನ ಒಳ್ಳೆಯ ಮಾತಾಡುವ ಮೋಸದ ಕೋಗಿಲೆ ಅಂತ...ಈ ಪಾಂಡು ಕೂಡಾ ಅಂತಹ ಒಂದು ಕೋಗಿಲೆ..." ಅಂತ ಹೇಳಿ ಮೌನವಾದ್ಳು. ಮತ್ತೆ ತಿಳಿದುಬಂದ ವಿಷಯವೇನೆಂದರೆ ಪಾಂಡು ಈ ಸೀತಕ್ಕನ ಬಳಿ ಇದ್ದ ಹತ್ತೆಕರೆ ಆಸ್ತಿಯ ಸಲುವಾಗಿ ಸೀತಕ್ಕನ ಹಿತೈಸಿಯಂತೆ ಇದ್ದ ಅವರ ಜೊತೆಯಲ್ಲಿ.ಈ ಮುದುಕಿ ಸತ್ತರೆ ಆಸ್ತಿ ತನ್ನ ಹೆಸರಿಗೆ ಮಾಡಿಸ್ಬಹುದು ಅಂತ.ಆದ್ರೆ ಯಾವಾಗ ಸೀತಕ್ಕ ತನ್ನ ಆಸ್ತಿನೆಲ್ಲಾ ಯಾವುದೇ ಅನಾಥಾಶ್ರಮಕ್ಕೆ ಈಗಾಗ್ಲೆ ವಿಲ್ ಮಾಡಿಸಿದ್ದಾಳೆ ಅಂತ ಗೊತ್ತಾಯ್ತೋ ಆ ನಂತರದಿಂದ ಈ ಪಾಂಡುವಿನ ಸವಾರಿ ಇತ್ತ ಬಂದಿಲ್ಲ.ಅವನ ವಿಷಯದಲ್ಲಿ ಸೀತಕ್ಕ ಸಾಕಷ್ಟು ನೊಂದುಕೊಂಡಿದ್ಳು ಮಾತ್ರವಲ್ಲದೇ ಮೊದಲಿನ ಲವಲವಿಕೆಯೂ ಅವಳಲ್ಲಿ ಕಾಣ್ತಾ ಇರ್ಲಿಲ್ಲ.
.....……………………………………………………………………

ಎರಡು ದಿನದಿಂದ ಸೀತಕ್ಕನ ನಾಯಿ ನಮ್ಮ ಮನೆಯಲ್ಲಿಯೇ ಊಟಕ್ಕೆ ಕಾಯುತ್ತಿತ್ತು.  ಹೋ,  ಸೀತಕ್ಕನಿಗೆ ಹುಷಾರಿರ್ಲಿಕ್ಕೆ ಇಲ್ಲ, ನೋಡ್ಕೊಂಡು ಬರ್ತೇನೆ ಅಂತ ಅಮ್ಮ ಅವರ ಮನೆಗೆ ಹೋದಾಗಲೇ ಗೊತ್ತಾದದ್ದು ಸೀತಕ್ಕ ಇಹಲೋಕ ತ್ಯಜಿಸಿದ್ದ ವಿಷಯ.ಇದ್ದಾಗ ಅತೀ ಹೆಚ್ಚು ಸದ್ದು ಮಾಡಿದ ಸೀತಕ್ಕನದ್ದು ಯಾರಿಗೂ ಭಾರವಾಗದ,ತನ್ನ ಇಚ್ಛೆಯ ತಣ್ಣನೆಯ ಸಾವು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಮುದ್ರದ ನೀರು ಮತ್ತೆ ಮತ್ತೆ ಬಂದು ಮರಳನ್ನು ಸ್ಪರ್ಶಿಸಿ ಒಂದಷ್ಟು ದೂರ ಹಿಂದೆ ಹೋಗುತ್ತಿತ್ತು.ಆದರೆ ಅಲ್ಲಿಯೇ ನಿಲ್ಲಲೂ ಆಗದೇ ಮತ್ತೆ ಓಡಿ ಬಂದು ಏನನ್ನೋ ಪಿಸು ನುಡಿದು ಹೋಗುತ್ತಿತ್ತು.ಮರಳು ಏನನ್ನೋ ನೆನೆದು ಅಲ್ಲಿಯೇ ನಾಚಿ ನೀರಾಗುತ್ತಿತ್ತು. ಮತ್ತೆ ಒಣಗಿ ಅಲೆಯ ಬರುವಿಕೆಗಾಗಿ ಕಾಯುತ್ತಿತ್ತು. ಈ ವ್ಯವಹಾರದಲ್ಲಿಯೇ ನೆಟ್ಟಿದ್ದ ನನಗೆ ಸೂರ್ಯ ಪಡುವಣದಲ್ಲಿ ಪೂರ್ತಿಯಾಗಿ ಇಳಿದು ಹೋದದ್ದು ಅರಿವಾಗಲೇ ಇಲ್ಲ.ಅಕಸ್ಮಾತ್ ಆಗಿ ಅತ್ತ ನೋಡಿದ ನನ್ನ ಕಣ್ಣುಗಳಿಗೆ ರಾಚಿದ್ದು ಸೂರ್ಯ ಬಾನಿನಂಚಿನಲ್ಲಿ ಕಲಸಲು ಮರೆತು ಹೋದ ಕೆಂಬಣ್ಣಗಳ ರಾಶಿ.

"ಹೇಯ್ ಅಲ್ಲಿ ನೋಡೋ, ಬಾನು ರವಿಯ ವಿರಹದಲ್ಲಿ ಬೇಯುತ್ತಿದ್ದ ಹಾಗೆ ಕಾಣ್ತಿದೆ ಅಲ್ವಾ...ಕೆಂಪು ಬೇಸರ, ಏಕಾಂತದಲ್ಲಿ ಬೇಯುವ ಸಂಕೇತ..."

ಇಂತದ್ದೇ ಒಂದು ಬೇಸಗೆಯ ಸಂಜೆಯಲ್ಲಿ  ನನ್ನ ಕಿವಿಗೆ ಅವಳ  ಬಿಸಿಯುಸಿರು ತಾಕುವಷ್ಟು ಹತ್ತಿರ ಕುಳಿತಿದ್ದ ಅವಳು ಹೇಳಿದ್ದ ಮಾತುಗಳು ಇಂದ್ಯಾಕೋ ಕಿವಿಯಲ್ಲಿ ಗುಂಯ್ಗುಡುತ್ತಿವೆ. ಅನುಭವವಿದ್ದು ಹೇಳಿದ ಮಾತುಗಳಾ ಇವು? ಗೊತ್ತಿಲ್ಲ, ಆದರೆ ಆ ಕ್ಷಣಕ್ಕೆ ಅದ್ಯಾವುದೂ ನನ್ನ ತಲೆಯಲ್ಲಿ ಮೂಡಿರದ ಪ್ರಶ್ನೆಗಳು.

" ಸರಿಯಾಗಿ ನೋಡು, ಮಧ್ಯಾಹ್ನವೆಲ್ಲಾ ವಿರಹದ ಬೇಗೆಯಲ್ಲಿ ಬೆಂದ ಸೂರ್ಯ ಸಂಜೆಯ ಅಷ್ಟೂ ಹೊತ್ತು ಪ್ರಣಯದಲ್ಲಿ ತನ್ಮಯನಾಗಿದ್ದಾನೆ. ಅದಕ್ಕೇ ಬಾನಿನ ಕೆನ್ನೆಗಳು ನಾಚಿಕೆಯಲ್ಲಿ ಕೆಂಪೇರಿವೆ. ಕೆಂಪು ಪ್ರಣಯದ ಸಂಕೇತ"

ನಮ್ಮ ನಡುವಿನ ಹೆಚ್ಚಿನ ಸಂಭಾಷಣೆಗಳು ಮಾತಿನಲ್ಲಿ ಮುಗಿದುದಕ್ಕಿಂತ ಮೌನದಲ್ಲಿ ಕೊನೆಯಾದದ್ದೇ ಹೆಚ್ಚು.

ಈಗಲೂ ಹಾಗೆಯೇ ಅನ್ನಿಸಬಹುದಾ ಅಂತ ದಿಗಂತದಂಚನ್ನು ನೋಡಿದೆ.ಅಲ್ಲಿ ಸೂರ್ಯನಿರದ ಸಂಜೆ ಬಾನು ನಿಧಾನವಾಗಿ  ಕತ್ತಲೆಗೆ ಜಾರುತ್ತಿತ್ತು.ಕೆಂಬಣ್ಣವೆಲ್ಲಾ ಒಂದರಲ್ಲೊಂದು ಬೆರೆತು ಗಾಢ ಕಪ್ಪುಬಣ್ಣ ಆವರಿಸುತ್ತಿತ್ತು.ಕೆಂಪು ಬಣ್ಣ ಕ್ಷಣಿಕವಾದದ್ದು  ಕಪ್ಪುಬಣ್ಣ ಒಂದೇ ಶಾಶ್ವತ ಅಂತ ಯಾಕೋ ಬಲವಾಗಿ ಅನ್ನಿಸಲಾರಂಭಿಸಿತು.

ಅಂದು ಕೊನೆಯ ಬಾರಿಗೆ ಮರಳಿನಲ್ಲಿ ನಮ್ಮಿಬ್ಬರ ಹೆಸರುಗಳನ್ನು ಬೆಸೆದು ದೊಡ್ದದಾದ ಹೃದಯವನ್ನು ಕೆತ್ತಿದ್ದಳು. ಜೊತೆಯಲ್ಲಿ ಹೆಜ್ಜೆ ಹಾಕಿ ದಡವನ್ನು ಬಿಟ್ಟಾಗ ಯಾಕೋ ಹಿಂತಿರುಗಿ ನೋಡುವ ಮನಸ್ಸಾಗಿರಲಿಲ್ಲ.ನೋಡಿದ್ದರೆ ಸಮುದ್ರದ ಅಲೆ ಮರಳ ರಾಶಿಯನ್ನು ಚುಂಬಿಸುವ ಆತುರದಲ್ಲಿ ಆ ಹೃದಯದರಮನೆಗೆ ಲಗ್ಗೆ ಹಾಕಿದ್ದೂ ಅರಿವಿಗೆ ಬರುತ್ತಿತ್ತೋ ಏನೋ.

ಶಾಶ್ವತವಾದ ಕಪ್ಪಿಗೆ ಮರಳುವ ಮುನ್ನ ನಮ್ಮ‌ ಬದುಕು ಸುಳ್ಳು ಬಣ್ಣಗಳಲ್ಲಿ ಹೇಗೆ ಕಳೆದು ಹೋಗುತ್ತದೆ ಅನ್ನುವ ಸತ್ಯ ಗೋಚರಿಸಿ ಮನಸ್ಸು ಕಂಪಿಸಿತು. ಸಂಬಂಧಗಳೂ ಇದಕ್ಕೆ ಹೊರತಲ್ಲ ಅಲ್ವಾ? ಹೊರಗೆ ನೀರವ ಮೌನದಲ್ಲಿ ಕಡಲು ತನ್ನಷ್ಟಕ್ಕೇ  ಭೋರ್ಗರೆಯುತ್ತಿತ್ತು.ಬಣ್ಣಗಳು ಕಳೆದು ಹೋದ ಮನಸ್ಸನ್ನು ಕಪ್ಪು ಆವರಿಸುತ್ತಿತ್ತು.ಯಾವುದೇ ಪ್ರತಿರೋಧ ತೋರದೇ ಕಣ್ಮುಚ್ಚಿ ಕುಳಿತಾಗ ಅಲೆ ಬಂದು ಕುಳಿತ ದಡದ ಮರಳನ್ನು ಹಿತವಾಗಿ ಸ್ಪರ್ಶಿಸಿತು.
ಎಪ್ರಿಲ್ ಬಂತೆಂದರೆ ಗೊತ್ತೇ ಇಲ್ಲದ ಹಾಗೆ ಮನದಲ್ಲಿ ಬೆಚ್ಚಗಿನ ಭಾವವೊಂದು ಬತ್ತದ ಅಂತರಗಂಗೆಯಂತೆ ದಿನವಿಡೀ ಹರಿಯಲಾರಂಬಿಸುತ್ತದೆ.ದಿನವಿಡೀ ಎಷ್ಟೇ ಬೆವರಿಳಿಸುವ ಸೆಕೆಯಿದ್ದರೂ ಈ ಬೇಸಗೆಯ ಸಂಜೆಗಳೆಂದರೆ ನನಗೆ ಬಹಳ ಆಪ್ಯಾಯಮಾನ.ಎಷ್ಟು ವರ್ಷಗಳಿಂದ ಇದೇ ದಾರಿಯಲ್ಲಿ ನಡೆಯುತ್ತಿದ್ದೇನೋ? ಯಾವುದೇ ಯೋಚನೆಯಲ್ಲಿದ್ದರೂ ನಡೆಯುವ ಹೆಜ್ಜೆಗಳು ದಾರಿ ತಪ್ಪಿಸುವುದಿಲ್ಲ.ಎತ್ತರವಾಗಿ ಬೆಳೆದು ನಿಂತ ಧೂಪದ ಮರಗಳ ನಡುವಿನಿಂದ ಇಣುಕುವ ಸೂರ್ಯನ ಸಂಜೆಯ ಕಿರಣಗಳು, ಕಾಲಿಗೆ ತೊಡರುವ ಅರ್ಧ ಸಿಪ್ಪೆ ತೆರೆದ ಧೂಪದ ಕಾಯಿಗಳು, ಅರಳಿ ನಿಂತ ಬೇಲಿ ಹೂಗಳು...ಅರೆ ಯಾವುದೂ ಈ ಇಷ್ಟೂ ವರ್ಷಗಳಲ್ಲಿ ಬದಲಾಗಲೇ ಇಲ್ಲ.ಜೊತೆಯಲ್ಲಿ ನೀನಿಲ್ಲವೆನ್ನುವುದೊಂದು ಬಿಟ್ಟರೆ ಎಲ್ಲವೂ ಹಾಗೆಯೇ ಇದೆ.ನನ್ನ ಜೊತೆಜೊತೆಗೇ ನಡೆಯುತ್ತಿದೆ.

ನೆನಪಿದೆಯಾ ನಿನಗೆ? ಪ್ರತೀ ಸೋಮವಾರ ತಪ್ಪದೇ ಹೋಗುತ್ತಿದ್ದ ಮಹಾಲಿಂಗೇಶ್ವರ ದೇವಸ್ಥಾನದ ದಾರಿಯಲ್ಲಿರುವ ಗುಲ್ಮೊಹರ್ ಮರ?.ಈ ವರ್ಷ ಕೂಡಾ ತನ್ನ ರಿವಾಜು ತಪ್ಪಿಸಿಲ್ಲ ಅದು.ವರ್ಷವಿಡೀ ಧರಿಸಿದ ಎಲೆಗಳನ್ನೆಲ್ಲಾ ಕಳಚಿಕೊಂಡು ದಟ್ಟವಾದ ಕೆಂಪು ಹೂಗಳನ್ನು ಮುಡಿಗೇರಿಸಿಕೊಂಡು ನಳನಳಿಸುತ್ತಿದೆ.ನಿನಗಂತೂ ದೇವರ ಮೇಲೆ ನಂಬಿಕೆ ಇರಲಿಲ್ಲ.ಬರೇ ಈ ಮರದ ಹೂಗಳನ್ನು ನೋಡ್ಲಿಕ್ಕೇ ನನ್ನ ಜೊತೆ ಬರುತ್ತಿದ್ದದ್ದು ನನಗೆ ಗೊತ್ತಿಲ್ಲದೇ ಇಲ್ಲ.ದೇವರಿಗಿಂತಲೂ ಈ ಮರಕ್ಕೇ ಹೆಚ್ಚು ಸುತ್ತು ಬರುತ್ತಿದ್ದದಲ್ವಾ ನೀನು? ದೇವಸ್ಥಾನದಿಂದ ವಾಪಾಸು ಬರುವಾಗ ಯಾಕೋ ನೆನಪಾಯಿತು.ತುಂಬಾ ಹೊತ್ತು ಆ ಮರದ ಹತ್ತಿರವೇ ನಿಂತಿದ್ದೆ.ಪರಿಚಯದ ಎಲ್ಲರೂ ಹಾದು ಹೋದರು.ನಿನ್ನೊಬ್ಬಳನ್ನು ಬಿಟ್ಟು.ಅಲ್ಲಿಯೇ ಎಷ್ಟು ಹೊತ್ತು ನಿಂತಿದ್ನೋ ಗೊತ್ತಿಲ್ಲ.ಬರಿಯ ಹೂಗಳನ್ನು ಬಿಟ್ಟುಕೊಂಡು ಸಂಭ್ರಮಪಡುತ್ತಿದ್ದ ರೀತಿ,ಅದು ಗುಲ್ಮೊಹರ್ ನ ಅಸಲಿ‌ಮುಖ ಅಂತ ನನಗ್ಯಾಕೋ ಅನಿಸಲೇ ಇಲ್ಲ ನೋಡು.ಎಲೆಗಳನ್ನು ಕಳಚಿಕೊಂಡ ದುಃಖವನ್ನು ಮರೆಯಲು ಹೂಗಳ ಮುಖವಾಡ ಧರಿಸಿದಂತೆ ಭಾಸವಾಯಿತು.ಕೇಳಿದರೆ ನೀನು ನಗುತ್ತಿ ಅಂತ ನನಗೆ ಗೊತ್ತು. "ಎಲ್ಲದರಲ್ಲೂ ವಿಷಾದವನ್ನೇ ಯಾಕೋ ಹುಡುಕ್ತಿಯಾ? ಸಂಭ್ರಮಪಡಲೂ ಕಾರಣಗಳನ್ನು ಹುಡುಕ್ತಿಯ ನೀನು...ಇದ್ದ ಹಾಗೇ ನೋಡಲು ಬರುವುದೇ ಇಲ್ಲ ನಿನಗೆ..." ಎಷ್ಟು ಸಾರಿ ಕೇಳಿಲ್ಲ ನಾನು ನಿನ್ನ ಮಾತುಗಳನ್ನು.ಹೋ! ನಾನಿನ್ನೂ ಹಾಗೆಯೇ ಇದ್ದೇನೆ,ಅದೇ ಮನೋಭಾವ,ಚೂರೂ ಬದಲಾಗಲಿಲ್ಲ ನೋಡು.ಆದರೆ ನೀನು? ಬರುವಾಗ ಬೊಗಸೆಗೆ ಸಿಕ್ಕಿದಷ್ಟು ಹೂಗಳನ್ನು ಬಾಚಿ ತಂದಿದ್ದೇನೆ.ಕೈಗೆ ಸಿಗದ ಹೂಗಳೆಷ್ಟೋ!

ದೇವರ ಗುಡ್ಡದ ಮೇಲೆ ಬಂದಾಗ ಜಾತ್ರೆಗಾಗಿ ಸಜ್ಜಾಗುತ್ತಿರುವ ದೇವಸ್ಥಾನ, ಸ್ವಲ್ಪವಷ್ಟೇ ಪತಾಕೆ ಕಟ್ಟಲು ಬಾಕಿ ಉಳಿದ ರಥ... ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ.ಬಾಲ್ಯದಲ್ಲಿ ರಥ ನೋಡಲು ಇಲ್ಲಿ ನಿಲ್ಲುತ್ತಿದ್ದ ಸಂಭ್ರಮ ನೆನಪಾಯ್ತು.ಕೆಳಗಿಳಿಯುವ ಗದ್ದೆಯಂಚಿನಲ್ಲಿರುವ ನೆಕ್ಕರೆ ಮಾವಿನ ಮರ ಎಷ್ಟು ಕಾಯಿ ಬಿಟ್ಟಿದೆ ಗೊತ್ತಾ? ಚಂದ್ರಮೌಳೇಶ್ವರನ ಸಣ್ಣ ರಥದ ಹಾಗೆ ಸಮೃದ್ದ! ಮರದ ತುಂಬಾ ಪೊದೆಪೊದೆಯಾಗಿ ಚಿಗುರಿದ ಹಸುರು.ಪೂರ್ತಿ ಪತಾಕೆ ಕಟ್ಟಿದ ರಥದ ಹಾಗೆ ಎಷ್ಟೊಂದು ಎಲೆಗಳು.ಹೂಗಳೆಲ್ಲಾ ಕಾಯಿಗಳಾಗಿ ತೂಗುತ್ತಿವೆ.ಒಳಗಿನ ಆನಂದವೇ ಹೊರಗೂ ತೂರಿ ಬಂದಂತೆ! ಇಲ್ಲಿ ಮಾತ್ರ ಯಾವ ವಿಷಾದವೂ ಕಾಡಲಿಲ್ಲ.ಗಾಳಿಗೆ ಹಿತವಾಗಿ ತೂಗುತ್ತಿರುವ ಗೊಂಚಲು ಗೊಂಚಲು ಕಾಯಿಗಳನ್ನು ಕೀಳಲು ಯಾಕೆ ಮನಸ್ಸಾಗಲಿಲ್ಲ? ಯಾರಿಗಂತ ಕೀಳಲಿ?

ಅಲ್ಲಿ ನಿಂತಿರುವಾಗಲೇ ಜೋಡಿಯೊಂದು ದೇವಸ್ಥಾನದ ದಾರಿಯಲ್ಲಿ ಹೋಗುತ್ತಿತ್ತು.ಗುರುತು ಸಿಕ್ಕಿದಾಗ ಏನ್ ಆಶ್ಚರ್ಯ ಅಂತೀಯಾ? ಅವನನ್ನು ಈ ಜನ್ಮದಲ್ಲಿ ಪ್ರೀತ್ಸಲ್ಲ ಅಂದಿದ್ದ ವತ್ಸಲ, ನಿನ್ನ ಕ್ಲೋಸ್ ಫ್ರೆಂಡ್! ಮಾತಿನ ಸಂಭ್ರಮದಲ್ಲಿ ಮುಳುಗಿದ್ದವರಿಗೆ ನನ್ನ ಅಸ್ತಿತ್ವದ ಅರಿವಾಗಲಿಲ್ಲ.ನೋಡುತ್ತಾ ನಿಂತೆ.ಒಂಟಿಯಾಗಿ ನಿಂತಿದ್ದ ನನ್ನ ತಲೆಯ ಮೇಲೆ ಗೊಂಚಲು ಗೊಂಚಲು ಕಾಯಿಗಳು ಹಿತವಾಗಿ ತೂಗುತ್ತಿದ್ದವು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Friday 18 May 2018

#ಐಸ್ಕ್ಯಾಂಡಿ....

ಕೈಕಂಬದಲ್ಲಿ ಸೆಲೂನ್ ಹೊರಗಡೆ ಕುಳಿತಿದ್ದೆ ನನ್ನ ಸರದಿಗಾಗಿ ಕಾಯುತ್ತಾ.ಎಲ್ಲಿಂದಲೋ ಪುರ್ರನೇ ಹಾರಿ ಬಂದ ಗುಬ್ಬಿಗಳಂತೆ ಬಂದ ಪುಟಾಣಿಗಳಿಂದಾಗಿ ಬಿಕೋ ಅನ್ನುತ್ತಿದ್ದ ಪಕ್ಕದ ಅಂಗಡಿ ನೋಡುನೋಡುತ್ತಿದ್ದಂತೆಯೇ ತುಂಬಿ ಹೋಯ್ತು. ಅಂಗಡಿಯೆಲ್ಲಾ ಹಕ್ಕಿಗಳ ಕಲರವದಿಂದ ತುಂಬಿ ವಾತಾವರಣಕ್ಕೇ ಲವಲವಿಕೆ ಬಂತು.ಅದು ಬಹುಶಃ ಅಂಗಡಿಯಾತನಿಗೆ ನಿತ್ಯದ ವ್ಯವಹಾರ. ಎಲ್ಲರದ್ದೂ ಒಂದೇ ಬೇಡಿಕೆ.ಅದನ್ನು ಪೂರೈಸುವುದಷ್ಟೇ ಆತನ ಕೆಲಸ.ಪುಟಾಣಿಗಳ ಗುಂಪು ಮೆಲ್ಲನೇ ಕರಗುವಾಗ ಎಲ್ಲರ ಕೈಯಲ್ಲೂ ಒಂದು ರೂಪಾಯಿಯ ಕೋಲ್ಡ್ ಪೆಪ್ಸಿ.ಅದರಲ್ಲಿ ಕೆಲವೊಂದು ಕೋಲ, ಕೆಲವೊಂದು ಆರೆಂಜ್. ಹಲವಾರು ನೆನಪುಗಳು ಒಮ್ಮೆಗೇ ಮನದಲ್ಲಿ ಸುಳಿದು ಮನಸ್ಸು ಅರಳಿದ್ದು ಮುಖದ ಮೇಲೆ ಕಾಣುವಂತಿತ್ತು.ಆದರೂ ಕೆಲವು ಹುಡುಗರು ಮಾತ್ರ ಖಾಲಿ‌ ಕೈಯಲ್ಲಿ ಇನ್ನೂ ಅಲ್ಲಿಯೇ ನಿಂತಿದ್ದರು.ಕರೆದು ಕೇಳಿದೆ, ಯಾಕೆ ನೀವು ತಗೊಲಲ್ವಾ ಅಂತ.ಅವರಿಂದ ಏನೂ ಉತ್ತರ ಬಾರದೇ ಇದ್ದಾಗ ಅಂಗಡಿಯವನನ್ನು ಕೇಳಿದೆ.ಅದಕ್ಕವನು " ಹೋ ಬಿಡಿ ಸರ್, ಇದು ನಿತ್ಯದ ಕತೆ.ಎಲ್ಲರೂ ಬರ್ತಾರೆ ಪೆಪ್ಸಿಗಾಗಿ.ಒಂದು ರೂಪಾಯಿ ಕೊಟ್ಟವರಿಗೆಲ್ಲಾ ಕೊಡ್ತೇನೆ.ಕೆಲವರತ್ರ ದುಡ್ಡಿರಲ್ಲ, ಫ್ರೆಂಡ್ಸ್ ತೆಗ್ಸಿ ಕೊಡ್ತಾರೆ ಅಂತ ಅವರ ಜೊತೆಗೇ ಬರ್ತಾರೆ.ದಿನ ಎಲ್ಲಿ ಕೊಡ್ಲಿಕ್ಕಾಗ್ತದೆ ಅವರಿಗೆ...ಹಾಗಾಗಿ ಕೆಲವು ದಿನ ಇವರಿಗೆ ಸಿಗಲ್ಲ..."

ಎಷ್ಟೊಂದು ಸಣ್ಣ ಸಣ್ಣ ಆಸೆಗಳು, ಆದರೂ ಕೈಗೂಡೋದು ಎಷ್ಟು ಕಷ್ಟ ಅಲ್ವಾ?

ನೆನಪುಗಳು ಒಂದರ ಮೇಲೊಂದರಂತೆ ದಾಂಗುಡಿಯಿಟ್ಟು ಮನಸ್ಸು ಬಾಲ್ಯಕ್ಕೆ ಜಿಗಿಯಿತು.ಅವು ಬೇಸಿಗೆಯ ರಜೆಯ ದಿನಗಳು.ಬೆಳಗ್ಗೆಯಿಂದ ಅಂಗಳಕ್ಕೆ, ಗದ್ದೆಗೆ ಆಡಲು ಇಳಿದರೆ ಯಾವುದೂ ನೆನಪಾಗುತ್ತಿರಲಿಲ್ಲ..ಊಟಕ್ಕೆ ಬನ್ನಿ ಅಂತ ಅಮ್ಮ ದೊಣ್ಣೆ ತಂದು ನಮ್ಮ ಹಿಂದೆ ಓಡುವಾಗಲೇ ಆಟಕ್ಕೆ ಬ್ರೇಕ್ ಬೀಳುತ್ತಿದ್ದದ್ದು.ಇದರ ನಡುವೆಯೂ ಒಂದು ಕೂಗಿಗೆ, ಒಂದು ಸಿಗ್ನಲ್ ಗೆ ನಮ್ಮ ಕಿವಿಗಳು ಕಾತರದಿಂದ ಕಾಯುತ್ತಲೇ ಇರುತ್ತಿದ್ದವು.ಆ ಧ್ವನಿ ನಮ್ಮನ್ನು ತಲುಪುವುದೇ ತಡ ಯಾವುದೋ ಮೋಹನ ಮುರಳಿಯ ದನಿಗೆ ಶತಮಾನಗಳಿಂದ ಕಾಯುತ್ತಾ ಕುಳಿತಿದ್ದೆವೇನೋ ಎಂಬಂತೆ ಆಟವನ್ನೆಲ್ಲಾ ಬಿಟ್ಟು ಓಡುತ್ತಿದ್ದೆವು.ಆ ಮಧುರ ಧ್ವನಿ ಮತ್ತಾವುದೂ ಅಲ್ಲ...ಅದು,  ಎರಡು ದಿನಗಳಿಗೊಮ್ಮೆ ಬೆಳಗ್ಗೆ ಹನ್ನೊಂದು ಗಂಟೆಯ ಬಿಸಿಲಲ್ಲಿ ಬರುತ್ತಿದ್ದ ಕೃಷ್ಣಪ್ಪನ ಸಂಗಮ್ ಐಸ್ ಕ್ಯಾಂಡಿಯ ಸೈಕಲ್ ನ ಪೋಂ...ಪೋಂ...ಸಿಗ್ನಲ್! ಮನೆ ಹತ್ತಿರದವರೆಗೆ ಬರಲು ದಾರಿಯ ವ್ಯವಸ್ಥೆ ಇಲ್ಲದ್ದರಿಂದ ಮನೆಯಿಂದ ಸುಮಾರು ಅರ್ಧ ಕಿ.ಮೀ.ದೂರದ ಗುಡ್ಡದ ರಸ್ತೆಯಲ್ಲಿಯೇ ನಿಂತು ನಮ್ಮ ಕಿವಿಗಳನ್ನು ತಲುಪುವವರಗೂ ಹಾರ್ನ್ ಮಾಡುತ್ತಿದ್ದ.ಅದು ನಮ್ಮ ಕಿವಿಗಳನ್ನು ತಲುಪಿದ್ದೇ ತಡ...ಮತ್ತೆ ತಡ ಮಾಡುತ್ತಿರಲಿಲ್ಲ, ಮನೆಯ ಒಳಗೆ ಓಡಿ ಹಣಕ್ಕಾಗಿ ಅಮ್ಮನ್ನು ಪೀಡಿಸಿ ಹಣ ಪಡೆದು ಓಡುತ್ತಿದ್ದೆವು ಐಸ್ ಕ್ಯಾಂಡಿಗಾಗಿ, ಗೊಲ್ಲನ ಕೊಳಲನಾದಕ್ಕೆ ಮನಸೋತು ಓಡಿಬರುವ ಗಂಗೆ ಗೌರಿಗಳಂತೆ! ಕ್ಯಾಂಡಿಯನ್ನು ಚೀಪುತ್ತಾ ಮರಳಿ ಬರುವಾಗ ಕಾಲವೇ ಕರಗಿ ಹೋಗುತ್ತಿತ್ತು ಮಕ್ಕಳ ಸಂತೋಷದ ಆ ಕ್ಷಣಗಳಲ್ಲಿ.ಕೆಲವೊಮ್ಮೆ ಮನೆಯವರೆಲ್ಲರಿಗೂ ಐಸ್ ಕ್ಯಾಂಡಿಯ ದಾಹವಾಗುವುದುಂಟು...ಆಗ ಅಗಲವಾದ ಬಟ್ಟಲನ್ನು ಹಿಡಿದುಕೊಂಡು ಹೋಗುತ್ತಿದ್ದೆವು...ಬರುವಾಗ ಐಸ್ ಕ್ಯಾಂಡಿ ಕರಗಿದರೂ ಅದರ ನೀರಾದರೂ ಮನೆಯ ಹಿರಿಯರಿಗೆ ಉಳಿಯುತ್ತಿತ್ತು!

ಆ ಐಸ್ ಕ್ಯಾಂಡಿಯನ್ನು ಚೀಪದ ದಿನಗಳೆಂದರೆ ನಮಗೆ ಏನನ್ನೋ ಕಳೆದುಕೊಂಡಂತೆ.ಹೆಚ್ಚಾಗಿ ಬೇಸಗೆಯ ದಿನಗಳಲ್ಲಿ ಮಾತ್ರ ಬರುತ್ತಿದ್ದ ಈ ಕೃಷ್ಣಪ್ಪ ನಮ್ಮ ಪಾಲಿಗೆ ಬಲು ಹತ್ತಿರದ ನೆಂಟನಾದರೆ ನನ್ನ ಅಪ್ಪನ ಪಾಲಿಗೆ ತೀರದ ತಲೆನೋವಾಗಿದ್ದ ಅನ್ನುವುದು ಆಗ ನನಗೆ ತಿಳಿದಿರಲೇ ಇಲ್ಲ ಮತ್ತು ಬಹಳ ದಿನಗಳವರೆಗೆ ಕೂಡಾ! ಎಲ್ಲಾ ದಿನ ಈ ಐಸ್ ಕ್ಯಾಂಡಿಗಾಗಿ ಐದು ಹತ್ತು ರೂಪಾಯಿ ಕೊಡುವುದೆಂದರೆ ಅದು ಸಣ್ಣ ಮೊತ್ತವಾಗಿರಲಿಲ್ಲ‌ ಅಪ್ಪನ ಪಾಲಿಗೆ.ಬೇಸಾಯವನ್ನೇ ನಂಬಿಕೊಂಡಿದ್ದ ಆದಾಯ, ಕೂಡು ಕುಟುಂಬವಾದ್ದರಿಂದ ಮನೆ ತುಂಬಾ ಮಕ್ಕಳು....ಅವರಿಗೆಲ್ಲಾ ವಾರದಲ್ಲಿ ಮೂರು ನಾಲ್ಕು ದಿನ ಈ ಐಸ್ ಕ್ಯಾಂಡಿ ಕೊಡ್ಸೋದಂದ್ರೆ ಸುಲಭದ ಮಾತಾಗಿರಲಿಲ್ಲ.ಈ ಯಾವುದೇ ವಿಷಯ ಗೊತ್ತಿಲ್ಲದೇ ನಾವು ದಿನಾ ದಿನ ಕ್ಯಾಂಡಿಗಾಗಿ ಕಾತರದಿಂದ ಕಾಯುತ್ತಿದ್ದೆವು.ಯಾವತ್ತೂ ನಮಗೆ ನಿರಾಶೆಯನ್ನುಂಟು ಮಾಡುತ್ತಿರಲಿಲ್ಲ.

ಆದರೆ ಈ ನಮ್ಮ ಸಂತೋಷದ ಕ್ಷಣಗಳ ಮೇಲೆ ಯಾವ ಕೆಟ್ಟ ದೈವದ ಕಣ್ಣು ಬಿತ್ತೋ, ಯಾರು ನಮ್ಮ ಖುಷಿಯನ್ನು ಕಂಡು ಕರುಬಿದರೋ ಗೊತ್ತಿಲ್ಲ....ಗುರುವಾರದ ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ಹನ್ನೊಂದು ಕಳೆದು ಗಂಟೆ ಹನ್ನೆರಡಾದರೂ ಹಾರ್ನ್ ಕೇಳಲೇ ಇಲ್ಲ. ಗುರುವಾರ ತಪ್ಪದೇ ಬರುತ್ತಿದ್ದ ಸಂಗಮ್ ನ ಕೃಷ್ಣಪ್ಪ ಆ ದಿನ ಹಾರ್ನ್ ಹಾಕಲೇ ಇಲ್ಲ.ಬಹುಶಃ ಹಾರ್ನ್ ಕೆಟ್ಟು ಹೋಗಿರಬೇಕು ಅಂತ ಗುಡ್ಡದ ರಸ್ತೆಯವರೆಗೂ ಹೋದರೆ ಅಲ್ಲಿ ಐಸ್ ಕ್ಯಾಂಡಿ ಗಾಡಿ ಇರಲೇ ಇಲ್ಲ.ನಿರಾಶೆಯಿಂದ ವಾಪಾಸಾದೆವು.ಆದರೆ ಇದು ಮತ್ತೆ ಹೀಗೆಯೇ ಮುಂದುವರೆದಾಗ ನಮಗಾದ ಬೇಸರಕ್ಕೆ ಮಿತಿಯೇ ಇರಲಿಲ್ಲ.ಮತ್ತೆ ಆ ವರ್ಷದ ಬೇಸಿಗೆಯಲ್ಲಿ ಸಂಗಮ್ ಐಸ್ ಕ್ಯಾಂಡಿಯ ಕೃಷ್ಣಪ್ಪನ ಸೈಕಲ್ ಹಾರ್ನ್ ಕೇಳಲೇ ಇಲ್ಲ.ಯಾವುದೋ ಒಂದು ರೂಟೀನ್ ಅನ್ನು ನಾವು ಕಳೆದುಕೊಂಡೇ ವರ್ಷದ ಬೇಸಗೆಯ ರಜೆಯನ್ನು ಮುಗಿಸಿದೆವು.ಆದರೆ ಹಾಠಾತ್ ಆಗಿ ಕೃಷ್ಣಪ್ಪನ ಸೈಕಲ್ ಕಣ್ಮರೆಯಾದದ್ದು ಹೇಗೆ ಅಂತ ಗೊತ್ತಾಗಲೇ ಇಲ್ಲ.ಮತ್ತು ಆ ಸೀಕ್ರೇಟ್ ಗೊತ್ತಾಗಲು ಮತ್ತೆ ಮುಂದಿನ‌ ವರ್ಷದ ಊರ ಜಾತ್ರೆಯೇ ಬರಬೇಕಾಯಿತು.ಊರಿನ ಜಾತ್ರೆಯಲ್ಲಿ ಸುತ್ತಾಡಿ ಐಸ್ ಕ್ಯಾಂಡಿ ಕೊಳ್ಳಲೆಂದು ಹೋದಾಗ ಇದೇ ಕೃಷ್ಣಪ್ಪ ಇದ್ದದ್ದನ್ನು ನೋಡಿ ಅಲ್ಲಿಗೆ ಹೋದಾಗ ಕೃಷ್ಣಪ್ಪನ ಕಣ್ಮರೆಯ ವಿಷಯ ತಿಳಿಯಿತು.ಪ್ರತೀ ದಿನ ಮಕ್ಕಳ ಐಸ್ ಕ್ಯಾಂಡಿಗಾಗಿ ಹಣ ಕೊಡಲಾಗದೇ ಅಪ್ಪ‌ ಮತ್ತು ಹಳ್ಳಿಯ ಕೆಲವರು ಕೃಷ್ಣಪ್ಪನನ್ನು ಊರಿಗೇ ಬರದಂತೆ ತಾಕೀತು ಮಾಡಿದ್ದೇ ಆ ವರ್ಷದ ಹಠಾತ್ ಕಣ್ಮರೆಗೆ ಕಾರಣವಾಗಿತ್ತು!

ಎಷ್ಟೊಂದು ಸಣ್ಣ ಸಣ್ಣ ಆಸೆಗಳು, ಆದರೂ ಕೈಗೂಡೋದು ಎಷ್ಟು ಕಷ್ಟ ಅಲ್ವಾ?

ಆಗ ಸಿಟ್ಟಿನಿಂದ ಅಪ್ಪನ ಹತ್ತಿರ ಜಗಳ ತೆಗೆದಿದ್ದರೂ ಈಗ ಅರ್ಥವಾಗುತ್ತದೆ ಅಪ್ಪನ ಆ ಅಸಹಾಯಕತೆ. ನೆನಪುಗಳಿಂದ ಹೊರಬಂದು ಉಳಿದ ಮಕ್ಕಳಿಗೆ ಪೆಪ್ಸಿ ಕೊಡಿಸಿ ಕಳಿಸಿದೆ.ಅವರು ಚೀಪುತ್ತಾ ಹೋದಾಗ ಅವರ ಕಣ್ಣುಗಳಲ್ಲಿ ಕಾಣುತ್ತಿದ್ದ ಸಂತೋಷದಲ್ಲಿ ಮತ್ತೆ ಐಸ್ ಕ್ಯಾಂಡಿಗಾಗಿ ಕಾತರದಿಂದ ಕಾಯುತ್ತಿದ್ದ ಮಗುವಾದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು