Sunday 9 October 2011

ಹುಡುಕಾಟ 


ಇಲ್ಲಿ ಬಾಗಿಲುಗಳು ತೆರೆಯುವುದೇ ಇಲ್ಲ
ಸದಾ ಮುಚ್ಚಿಕೊಂಡೇ ಇರುತ್ತವೆ.
ಮುಚ್ಚಿದ ಒಂದೊಂದು ಬಾಗಿಲಿಗೂ  
ಬಗೆ ಬಗೆಯ ಚಿಲಕಗಳು;
ಅಕಸ್ಮಾತ್ ತೆರೆದು ಒಳ ನಡೆದರೂ
ಕಣ್ಣಿಗೆ ಕಾಣದಸ್ಟು ಮುಸುಕು.
ನಿಮ್ಮನ್ನು ಸ್ವಾಗತಿಸುವವರೂ ಇಲ್ಲ,
ನೀವು ಹುಡುಕಿಕೊಂಡು ಹೋಗುವ 
ಪ್ರೀತಿ ಇಲ್ಲಿ ದಕ್ಕುವುದೂ ಇಲ್ಲ.
ತೆರೆದ ಬಾಗಿಲಿಗೂ ಅಂತಹ ಬಿಗುಮಾನ,
ಯಾವಾಗ ಮುಚ್ಚುವುದೆಂಬ ತವಕ.
ಯಾಕೆಂದರೆ ಅದು ಬಯಸುವ ಅತಿಥಿ
ನೀವಲ್ಲ,ಅದಕ್ಕದು ಗೊತ್ತು;
ನೀವು ಬಯಸುವ ಮನಸ್ಸೂ
ಇದಲ್ಲ ಖಂಡಿತ.
ನೀವೀಗ ದಾರಿ ತಪ್ಪಿದ ಮಗ,
ಗೊತ್ತಾಗುವ ಹೊತ್ತಿಗೆ 
ತೆರೆದ ಬಾಗಿಲುಗಳೂ ಮುಚ್ಚಿರುತ್ತವೆ
ಮತ್ತೆಂದೂ ತೆರೆಯದ ಹಾಗೆ.


ಭಾವ ಸಮಾಧಿ


ಮನದ ಕ್ಯಾನ್ವಾಸ್ ಮೇಲೆ ಚೆಲ್ಲಿದ್ದ ರಂಗು 
ಬಗೆ ಬಗೆಯಾಗಿ ಹರಡಿ,
ಶುಭ್ರ ಬಿಳಿ ಬಣ್ಣಕ್ಕಿದ್ದ ಬಟ್ಟೆಯ ಮೇಲೆ
ನೂರು ಬಣ್ಣಗಳ ಚಿತ್ತಾರ;
ಚೌಕಟ್ಟಿಲ್ಲದೆ  ಗೊತ್ತು ಗುರಿಯಿಲ್ಲದೆ 
ಒಟ್ಟಾರೆ ಚೆಲ್ಲಿದ ರಂಗಿನ ಎರೆಚಾಟ.
ಭಾವನೆಗಳು ಬಣ್ಣಗಳೊಡನೆ ಮಿಳಿತವಾಗದೆ
ಅರಳಿದ ಕಾಗದದ ಹೂವು,
ಪರಿಮಳವಿಲ್ಲ,ಮಕರಂದವಿಲ್ಲ;
ಬರಿಯ ಬಣ್ಣ ,ಶುಷ್ಕ ಭಾವ.
ಬಣ್ಣ ಇನ್ನೂ ಇದೆ ಕ್ಯಾನ್ವಾಸ್ ಖಾಲಿ ಇದೆ,
ಮನದಲ್ಲಿ ಹೆಪ್ಪುಗಟ್ಟಿದ ಮೌನ.
ಭಾವನೆಗಳಿಗೆ ರಂಗು ಚೆಲ್ಲುವವರು ಯಾರು?
ಮನದ ಮುಗಿಲಿನ ತುಂಬಾ ಒಂದೇ ಬಣ್ಣ,
ಕದಲುವ ಮೋಡವಿಲ್ಲ,ಹಾರುವ ಹಕ್ಕಿ ಇಲ್ಲ;
ಬೀಸುವ ಗಾಳಿಗೂ ಉದಾಸೀನತೆ ಯಾಕೋ? 
ಬಣ್ಣ ಮಾಸಿದ ಹಾಗೆ ಇಲ್ಲಿ
ಎಲ್ಲವೂ ಭಾವ ಸಮಾಧಿ.


Tuesday 4 October 2011

ಮರೆವು ಬೇಕು 


ಮರೆವು ಬೇಕು ಮನಸಿಗೆ,
ಬದುಕಿನ ಸಂಕಷ್ಟಗಳ ನೆನಪು ಮತ್ತೆ ಮತ್ತೆ
ಬಾರದ ಹಾಗೆ;
ಸೋತು ಹೋದ ನಿರಾಸೆಯ ಕಾರ್ಮೋಡ 
ಮರಳಿ ಕವಿಯದ ಹಾಗೆ;
ಬಿಟ್ಟು ಹೋದ ಪ್ರೀತಿಯ ಭಾವ ತೀವ್ರತೆ 
ಇನ್ನು ಕಾಡದ ಹಾಗೆ;
ಮರೆವು ಬೇಕು ಮನಸಿಗೆ.

ಮನ ಕಲಕಿದ ಮನೆಯಾಕೆಯ ಬಿರು ನುಡಿಗಳು
ಕಣ್ಣ ಹನಿ ಗೂಡಿಸದ ಹಾಗೆ;
ಎತ್ತಿ ಆಡಿಸಿದ ಪ್ರೀತಿಯ ಮಕ್ಕಳ ನಿರ್ಲಕ್ಷದ
ನೋಟ ಚುಚ್ಚದ ಹಾಗೆ;
ಹೊಡೆದರೂ ಬಡಿದರೂ ಬಾಲ ಆಡಿಸಿ ಪ್ರೀತಿ ತೋರಿದ
ಸಾಕು ನಾಯಿಯ ಸಾವಿನ ಶುನ್ಯತೆ 
ಆವರಿಸದ ಹಾಗೆ;
ಅಂಗಳದಲ್ಲಿ ಬೆಳೆದ ಒಂಟಿ ಗುಲಾಬಿ ಗಿಡದ 
ಒಂದೇ ಹೂವನು ಯಾರೋ ಕಿತ್ತ 
ನೆನಪು ಬಾರದ ಹಾಗೆ;
ಮರೆವು ಬೇಕು ಮನಸಿಗೆ.

ಸಾಧನೆಯ  ಹಾದಿಯಲ್ಲಿ ತೆಗೆದುಕೊಂಡ 
ತಪ್ಪು ನಿರ್ಣಯಗಳು ಕುಟುಕದ ಹಾಗೆ;
ಅವಕಾಶ ನೂರಿದ್ದರೂ ಬಾಚಿಕೊಳ್ಳದ ನನ್ನ
ಉದಾಸೀನ ಕೆರಳಿಸದ ಹಾಗೆ;
ಎಲ್ಲಾ ಮರೆತು ಮತ್ತೆ ಬದುಕಿನ
ಹಳಿಗೆ ಮರಳುವ ಉತ್ಕಟ ಬಯಕೆಯ
ಕನಸು ಮಸುಕಾಗದ ಹಾಗೆ;

ಮರೆವು ಬೇಕು ಮನಸಿಗೆ.






 ಮುಖವಾಡ


ನಾವು ಬದುಕುತ್ತೇವೆ ಬರಿಯ
ಮುಖವಾಡಗಳ ಒಳಗೆ.

ಖಾಸಗಿತನದ ನೂರು ದುಗುಡಗಳ
ಹಂಚಿಕೊಳ್ಳದೆ, ಬದುಕು ಬತ್ತಲಾಗುವುದ 
ನೋಡಲಾಗದೆ ಒಳಗೆ ತೂರಿ ಕೊಳ್ಳುತ್ತೇವೆ.

ಕಪ್ಪು ಬಿಳುಪಿನ ವ್ಯಕ್ತಿತ್ವಕ್ಕೆ ರಂಗೆರಚಿ,
ಬೆಳೆಸಿಕೊಂಡ ಉನ್ನತ ವ್ಯಕ್ತಿತ್ವದ
ಬಣ್ಣ ಮಾಸುವುದ ನೋಡಲಾಗದೆ
ಬಚ್ಚಿಟ್ಟು ಕೊಳ್ಳುತ್ತೇವೆ.

ಸುಳ್ಳಿನ ಸರಮಾಲೆಯನೆ ಹೆಣೆದು,
ಹಾಕಿಕೊಂಡ ಮಾಲೆಯ ಮುತ್ತಿನ ಹಾರದ 
ಸತ್ಯ ಬಯಲಾಗುವುದ ನೋಡಲಾಗದೆ
ಅಡಗಿ ಕೊಳ್ಳುತ್ತೇವೆ.

ನಾವು ಬದುಕುತ್ತೇವೆ ಬರಿಯ
ಮುಖವಾಡಗಳ ಒಳಗೆ;
ಕಳಚಿ ಬೀಳುವ ಭಯದ ನಡುವೆಯೂ
ಗೊತ್ತಾಗದ ಹಾಗೆ.

ವಿಜ್ಞಾನ 


ಅಂದು ಮಗು 
ಅಮ್ಮನನ್ನು ಕೇಳಿತ್ತು,
ಚಂದಿರನೇತಕೆ ಓಡುವನಮ್ಮ?
ಮೋಡಕೆ  ಹೆದರಿಹನೆ ಎಂದು. 
ಇಂದು ಅದೇ ಮಗು
ಚಂದಿರನ ಮೇಲೆ ತಳವೂರಿ 
ಹೇಳಿತ್ತು,
ಭೂಮಿಯು ಏತಕೆ ತಿರುಗುವುದಮ್ಮ
ಜನರಿಗೆ ಹೆದರಿಹುದೇ?.