Sunday 13 April 2014

ಎಲ್ಲರ ಮನೆಯಲ್ಲೂ ಕೇಳುತ್ತಿತ್ತು
ಆಗಾಗ ಬೀದಿಯಲ್ಲೂ ಮೊರೆಯುತ್ತಿತ್ತು.
ನನಗೋ ಕುತೂಹಲದ ವಿಷಯ ,
ಎಲ್ಲೋ ಕೇಳಿದ ವಸ್ತು ;
ಪ್ರತ್ಯಕ್ಷ ನೋಡದ ನಿಗೂಢತೆ.
ಮನೆಯಲ್ಲಿಯೇ ಇದ್ದರೂ 
ಜೊತೆಯಾಗಿ ಸಿಗುತ್ತಿದ್ದರೂ
ಯಾವತ್ತೂ ಕಿಡಿ ಸೋಕಿರಲಿಲ್ಲ.
ಆಗೆಲ್ಲಾ ನಾನೂ ಅಂದುಕೊಳ್ಳುತ್ತಿದ್ದೆ
ಇದು ಬರೀ ಕತೆಗಳಿಗೆ ಮೀಸಲು,
ಸತ್ಯ ಇರಲಿಕ್ಕಿಲ್ಲ; ತಮಾಷೆಗೆ ಮಾತ್ರ .
ಶಾಂತ ಸಾಗರ ಕಲಕುವುದು
ದಡದಲ್ಲಿ ಕೂತು ಕಲ್ಲೆಸೆವವರ ಗುಣ,ಎಲ್ಲರದ್ದೂ ಅಲ್ಲ .
ಹಾಗಂತ ವಿಶ್ವಾಸವಿತ್ತು.
ಬೇಸರ ಕೂಡಾ ಆದದ್ದಿದೆ.
ಅವರಲ್ಲಿ ಇವರಲ್ಲಿ ಮತ್ತೊಬ್ಬರ ಮನೆಯಲ್ಲಿ
ಇದು ಸಂಭವಿಸಿದಾಗ
ನನಗೆ ಮಾತ್ರ ಇಲ್ಲ ಅನ್ನೋ ಬೇಜಾರು .

ಈಗ ಸಂಭ್ರಮದಲ್ಲಿದ್ದೇನೆ,
ದೇವರು ಕಣ್ಣು ಬಿಟ್ಟ .
ಕೊನೆಗೂ ಕೊನೆಗೂ
ನಮ್ಮ ಮನೆಯಲ್ಲೂ ಶುರುವಾಗಿದೆ
'ಈ' ಸುಪ್ರಭಾತ.
ಬೆಂಕಿ ಹೊತ್ತಿಕೊಂಡಿದೆ;
ನಾನು ಚಳಿ ಕಾಯಿಸುತ್ತಿದ್ದೇನೆ!.
ಬರುವಿಯಾದರೆ ಇಂದೇ ಬಾ
ನಾಳೆಗಾಗಿ ನಾನು ಕಾಯುತ್ತಿಲ್ಲ.
ಪ್ರೀತಿ ವಿರಹ ಮುನಿಸು ಕನಸು
ಎಲ್ಲವನ್ನೂ ಬಚ್ಚಿಟ್ಡಿದ್ದೇನೆ,
ಯಾರಿಗೂ ಕೊಡಲಿಷ್ಟವಿಲ್ಲ;
ಬೆಲೆ ತಿಳಿಯದಿದ್ದರೂ
ಅದು ನಿನಗೇ ಸೇರಬೇಕಲ್ಲ.
'ನಾಳೆಗಳೇ' ನಿನ್ನ ಆಯ್ಕೆಯಾದರೆ
ಇರಲಿ ಬಿಡು.
ಹಣತೆಗಳನ್ನು ಹಚ್ಚಿಟ್ಟಿದ್ದೇನೆ,
ಉರಿಯುತ್ತಲೇ ಇದೆ; ಉರಿಯಲಿ ಬಿಡು.
ಇಂದು ನನ್ನ ಇರುವಿಗೆ;
ನಾಳೆ ಮೌನದ ಗುರುತಿಗೆ.




ಕತೆಯಾಗಿಸಿ

ಕತೆಯಾಗಲು ಕೂತಿದ್ದೇನೆ,
ನಿಮ್ಮದೇ ರಸ್ತೆಯ ತಿರುವುಗಳಲ್ಲಿ
ಬೇಗನೇ ಎತ್ತಿಕೊಳ್ಳಿ
ಬಣ್ಣ ಬಣ್ಣದ ಕನಸುಗಳ ಮುಡಿಸಿ
ಕತ್ತಲ ಸುರಂಗದ ಬೆಳಕಾಗಿಸಿ,
ಹೆಣ್ಣಿನ ಹೊಟ್ಟೆಯ ಕಿಚ್ಚಾಗಿಸಿ
ಗಂಡಿನ ಮೈಯ ಸೊಕ್ಕಾಗಿಸಿ
ನಿಮಗೇ ಬಿಟ್ಟದ್ದು.

ಹರಿವ ನದಿಯಾಗಿಸಿ
ಮೊರೆವ ಕಡಲಾಗಿಸಿ
ಇಲ್ಲವೇ ನಿಂತ ನೀರಾಗಿಸಿ
ಹೂವಾಗಿಸಿ ಹಣ್ಣಾಗಿಸಿ
ಬತ್ತದ ತೆನೆಯಾಗಿಸಿ
ಕಾಡುವ ಕಳೆಯಾಗಿಸಿ
ನನಗೇನು; ಕರೆದಲ್ಲಿ ನಾನಿದ್ದೇನೆ.

ತಲೆಗೆ ಕಿರೀಟ ತೊಡಿಸಿ
ಸಿಂಹಾಸನದ ಮೇಲೆ ಮೆರೆಸಿ
ಯುದ್ಧದಲ್ಲಿ ಕಡಿಸಿ,
ತಿರುಕನ ಕೈಯ ಪಾತ್ರೆಯಾಗಿಸಿ
ಸೂಳೆಯ ಬದುಕ ಕನಸಾಗಿಸಿ
ಬೀದಿಯ ಧೂಳಲ್ಲಿ ಹೊರಾಳಾಡಿಸಿ
ನಿಜಕ್ಕೂ ನನ್ನಲ್ಲಿ ಬೇಡಿಕೆಗಳಿಲ್ಲ.

ದೇವರಾಗಿಸಿ, ಧರ್ಮವಾಗಿಸಿ
ತಲೆ ಕೆಡಿಸಿ, ಹೊರಳಿಸಿ
ವೈರುದ್ಯಗಳ ನಡುವೆ ನರಳಿಸಿ;
ಶಿಲುಬೆಗೇರಿಸಿ.
ನನ್ನ. ಮೈಯ ಮುಳ್ಳುಗಳೇನೂ ಅರಳುವುದಿಲ್ಲ!.

ಹಾಗಂತ ನನ್ನಲ್ಲಿ ಭ್ರಮೆಗಳಿಲ್ಲ,
ಪಾತ್ರ ಸಂಚಾರಗಳ ಭಾವ ನಿಮ್ಮದೇ
ಅಂತೆಯೇ ನೋವು ನಲಿವು.
ನಿಮ್ಮನ್ನು ನೀವು ನೋಡಿಕೊಳ್ಳುವ
ಬರಿಯ ಕನ್ನಡಿ ನಾನು.

ನಿಮ್ಮ ಕತೆಗಳಲ್ಲಿ 'ನಾನಿಲ್ಲ'.
ಎದೆಯ ಬೀದಿಯ ಚರಂಡಿ
ಕೊಳೆತು ನಾರುತ್ತಿದೆ; ನೆನಪುಗಳ ಕಳೇಬರ
ಅಲ್ಲಿ ಎಸೆದದ್ದಕ್ಕೊ?

................................

ಬದುಕಿನ ಸಾವಿರ
ಜಂಜಾಟಗಳ ನಡುವೆ
'ಪ್ರೀತಿಸುತ್ತೀಯ'
ಅನ್ನುವುದೊಂದೇ ಭರವಸೆ.
ಆ ಆಸೆಯಲ್ಲೇ
ಕಾಯುತ್ತೇನೆ ನಾಳೆಗಾಗಿ.
ಇಲ್ಲದಿದ್ದ
ರೆ ಇರುಳು ಯಾವತ್ತೋ
ನನ್ನ ನುಂಗಿರುತಿತ್ತು.

ಪ್ರೀತಿ ಬೆಳಕು ಅಲ್ವಾ?

ಅಸಹಾಯಕ


ಅತಿಯಾಗಿ ಪ್ರೀತಿಸುವ
ಬದುಕಿನೊ೦ದಿಗೇ ಹೋರಾಡುವ
ನಾನೀಗ ಅಸಹಾಯಕ.

ಕನಸುಗಳನ್ನೆಲ್ಲಾ ಹಸಿವಿನ ಹಾದಿಯಲ್ಲಿ
ಮಾರಿಬಿಟ್ಟಿದ್ದೇನೆ.
ಕನಸುಗಳು ಕಾಣದ೦ತೆ
ನಿದ್ರೆಯೊ೦ದಿಗೇ ಒಪ್ಪ೦ದವಾಗಿ
ರೆಪ್ಪೆಗಳು ಮುಚ್ಚದ೦ತೆ
ಎಚ್ಚರಗೊಳ್ಳುತ್ತೇನೆ.

ಆಸೆಯ ದು೦ಬಿಗಳನ್ನು
ಹತ್ತಿರ ಸುಳಿಯ ಬಿಡುತ್ತಿಲ್ಲ.
ಹೀರುವ ಮಕರ೦ದದ ಬಯಕೆಗಳಿಗೆ
ಮತ್ತೆ ಮೊಗ್ಗಾಗುತ್ತೇನೆ.
ಮನದ೦ಗಳದಲ್ಲೀಗ
ಯಾವ ಹೂವೂ ಅರಳುತ್ತಿಲ್ಲ.

ನೈಜತೆಯ ಕುರುಹುಗಳೆಲ್ಲಾ
ಮುಖವಾಡದೊಳಗೆ ಬಚ್ಚಿಟ್ಟಿದ್ದೇನೆ.
ಲಾಭ ನಷ್ಟಗಳ ಲೆಕ್ಕಾಚಾರಗಳಲ್ಲೇ
ಒಣ ಆದರ್ಶಗಳನ್ನೂ
ತಕ್ಕಡಿಯಲ್ಲಿ ತೂಕಕ್ಕಿಟ್ಟಿದ್ದೇನೆ.
ವರ್ತಕರ ಬೀದಿಗಳಲ್ಲೀಗ
ನನ್ನ ಅಪಮೌಲ್ಯವಾಗಿದೆ.

ನನ್ನನೀಗ ಯಾರೂ ಕೊಳ್ಳುತ್ತಿಲ್ಲ.
ಬದುಕಿನ ಜೂಜಾಟದಲ್ಲಿ
ಹರಾಜೂ ಕೂಗುತ್ತಿಲ್ಲ.
ಹೊಸ ಕನಸಿಲ್ಲದ
ಆಸೆಯ ಸೆಳೆಯಿಲ್ಲದ
ನೈಜತೆಯ ನಡೆಯಿಲ್ಲದ
ನಾನೀಗ ನಾನಾಗಿಯೇ ಉಳಿದಿಲ್ಲ.

ಬದುಕಿನ ವೈರುಧ್ಯಗಳ ನಡುವೆ
ಉಸಿರಿನ್ನೂ ಆಡುತ್ತಿದೆ.
ಮುಳ್ಳುಗಳ ನಡುವೆ ಸದ್ದಿಲ್ಲದೇ
ಅರಳಿದ ಹೂವೂ ನರಳುತ್ತಿದೆ.