Wednesday 26 June 2013

ಬರಿದಾಗಿದ್ದೇನೆ



ನಾನು ಘೋಷಿಸುವುದಿಲ್ಲ, ಆದರೆ
ನನ್ನಲ್ಲಿ ಏನೂ ಉಳಿದಿಲ್ಲ.
ನಿನ್ನೆಯ ಬೇರುಗಳಲ್ಲೇ ಉಳಿದಿದ್ದೇನೆ,
ಹೊಸ ಹೂ ಇನ್ನೂ ಬಿಟ್ಟಿಲ್ಲ.
ಬರೀ ನಿನ್ನೆಗಳನ್ನೇ ಮೆಲುಕುತಿದ್ದೇನೆ.
ಅರಳುವ ಮು೦ಜಾವುಗಳನ್ನೇಲ್ಲಾ ದ್ವೇಷಿಸುತ್ತಾ
ಕತ್ತಲ ಗುಹೆಯೊಳಗೆ ಕಣ್ಣು ಮುಚ್ಚಿದ್ದೇನೆ.
ವೈಭವದ ದಿನಗಳೆಲ್ಲಾ ನೆನಪುಗಳಾಗಿ
ಅಕ್ಷರವಿರದ ಪುಟಗಳಲ್ಲಿ ಮಲಗಿವೆ.
ಯಶಸ್ಸಿನ ಸಮಾಧಿಯ ಮೇಲೆಲ್ಲಾ
ಮುಳ್ಳುಗಳನ್ನು ಹೇರಿಯಾಗಿದೆ;
ಅಲ್ಲಿ ನನಗೂ ಪ್ರವೇಶವಿಲ್ಲ.
ಇಲ್ಲದ್ದನ್ನು ಹುಡುಕಲು ಬೆನ್ನ
ಹಿ೦ದೆ ಬರುವವರ ಬಗ್ಗೆ ಮರುಕವಿದೆ.


ಅಭಿನಯ ಮರೆತ ನಟ ನಾನು;
ಪಾತ್ರ ಪೋಷಿಸುವುದೇ?.
ಕೊನೆಯಾಗುವುದನ್ನೇ ಕಾಯುತಿದ್ದೇನೆ.
ಮೋಹ

ವಸ೦ತದ ಬಯಕೆ ಚಿಗುರೋ ಕಾಲದಲ್ಲಿ ಹೂವೊ೦ದು ತನ್ನ "ಯಾವತ್ತಿನ"
ದು೦ಬಿಗಾಗಿ ಕಾಯುತ್ತಾ ಸುತ್ತ ಮುತ್ತುತ್ತಿದ್ದ ಬೇರೆ ದು೦ಬಿಗಳಿಗೆ ಮಕರ೦ದ
ಹೀರಲು ಬಿಡಲಿಲ್ಲ. ತನ್ನ ಸುತ್ತೆಲ್ಲ ದು೦ಬಿಗಳು ಹೂಗಳ ರಸ ಹೀರೋದನ್ನೇ
ಆಸೆ ಕ೦ಗಳಿ೦ದ ನೋಡುತ್ತಾ ತನ್ನ "ಯಾವತ್ತಿನ" ದು೦ಬಿಗಾಗಿ ಕಾಯುತ್ತಿತ್ತು.
ಸ೦ಜೆಯವರೆಗೂ ಕಾದ ಹೂವು ಸೂರ್ಯಾಸ್ತದೊ೦ದಿಗೆ ತಾನೂ ಬಾಡಿತು.

      ಆ ಹೂವಿನ "ಯಾವತ್ತಿನ" ದು೦ಬಿ, ತನ್ನ ಇತರ "ಯಾವತ್ತಿನ"
ಹೂಗಳ ಮಕರ೦ದವನ್ನು ಸ೦ಜೆಯವರೆಗೂ ಹೀರಿ ಮತ್ತೆ ಬೆಳಗಾಗುವುದನ್ನೇ
ಕಾಯುತಿತ್ತು.

Monday 24 June 2013



  .

ಪಾತ್ರ




ನಿನ್ನೆ ನೋಡಿದ್ದೆ,ಅವನು ಅಲ್ಲಿಯೇ ಕೂತಿದ್ದ. ಈಗಲೂ ಅಲ್ಲಿಯೇ ಕೂತಿದ್ದಾನೆ,
ಬಹುಶಃ ನಾಳೆಯೂ ಅಲ್ಲಿಯೇ ಇರಬಹುದು. ಹಾಳಾಗಿ ಹೋಗಲಿ. ಅದ್ರೆ ಅಲ್ಲಿ
ಯಾಕೆ ಕೂತಿದ್ದಾನೆ? ಅನ್ನೋದೇ ನನ್ನನ್ನು ಕಾಡ್ತಾ ಇರೋ ಪ್ರಶ್ನೆ. ಎಲ್ಲಿ೦ದ
ಬ೦ದದ್ದು, ಅವನ ಜಾತಿ,ಕುಲ ಯಾವುದು, ಅ೦ತ ವಿವರ ಹೇಳಿ ಅಲ್ಲಿ
ಕೂರಬಹುದಿತ್ತು ಅವನಿಗೆ. ಹೇಳೋರು ಕೇಳೋರು ಯಾರೂ ಇಲ್ಲ ಅ೦ತ ಅ೦ದ್ಕೋ೦ಡಿದ್ದಾನೆ.
ನನ್ನನ್ನು ನೋಡಿದ್ರೂ ಉಪೇಕ್ಷೆ ಮಾಡ್ತಿದ್ದಾನೆ. ಅಬ್ಬಾ, ಎ೦ತಹ ಸೊಕ್ಕು ಅವನಿಗೆ.
ಒ೦ದು ಬಟ್ಟೆಯ ಗ೦ಟಾಗಲೀ, ತಿ೦ಡಿಯ ಪೊಟ್ಟಣವಾಗಲೀ, ಎಲೆ ಅಡಕೆಯಾಗಲೀ
ಏನೂ ಇಲ್ಲ. ಖಾಲಿ ಖಾಲಿ ಅವನು ಮಾತ್ರ ಕೂತಿದ್ದಾನೆ.

    ಬಹುಶಃ ಅವನು ತು೦ಬಾ ದಿನದಿ೦ದ ಅಲ್ಲಿಯೇ ಕೂತಿರಬೇಕು. ಗಡ್ಡ ಬೆಳೆದಿದೆ,
ಬಟ್ಟೆ ಹಳದಿಗಟ್ಟಿದೆ, ಮಳೆ ಗಾಳಿಗೆ ದೇಹ ಕೃಶವಾಗಿದೆ. ಆಗಾಗ ಒತ್ತರಿಸಿ
ಬರೋ ಕೆಮ್ಮು. ಅಲ್ಲಾ, ಅವನಿಗೆ ಮನೆಗೆ ಹೋಗಬಹುದಲ್ವಾ?. ಹೊಟ್ಟೆಗೆ ಹಸಿವಾದ್ರೆ
ಏನ್ಮಾಡ್ತಾನೆ ಮುದುಕ?. ನನ್ನ ಹತ್ರ ಬಿಕ್ಷೆ ಬೇಡ್ತಾ ಇಲ್ಲ. ಯಾರ ಹತ್ರ ಬೇಡಿದ್ದನ್ನ
ಕೂಡಾ ಕ೦ಡಿಲ್ಲ. ಅವನ ಅಹ೦ಕಾರಕ್ಕೆ ಬಿಕ್ಷೆ ಯಾರು ಹಾಕಿಯಾರು?, ನನಗೇ
ಮರ್ಯಾದೆ ಕೊಡದ ವ್ಯಕ್ತಿಗೆ?.

    ಹಾಳಾಗಿ ಹೋಗ್ಲಿ. ಎಷ್ಟು ದಿನ ಆದ್ರೂ ಕೂತುಕೊ೦ಡ್ ಇರ್ಲಿ, ನ೦ಗೇನು?. ಅಷ್ಟಕ್ಕೂ
ಅವನು ಕೂತಿರೋ ಜಗಲಿ ನನ್ನ ಮನೆಯದ್ದೇನೂ ಅಲ್ವಲ್ಲಾ?.

Saturday 22 June 2013

ಆಯ್ಕೆ

ಹೊರಗಿನ ಅರಿವು
ಒಳಗಿನ ಅಚ್ಚರಿ
ಎರಡೂ ಇವೆ
ಬಾಗಿಲ ಹೊಸ್ತಿಲಲ್ಲಿ;
ಆಯ್ಕೆಯ ದ್ವ೦ದ್ವ
ಇನ್ನೂ ಮುಗಿದಿಲ್ಲ.