Sunday 9 October 2011

ಹುಡುಕಾಟ 


ಇಲ್ಲಿ ಬಾಗಿಲುಗಳು ತೆರೆಯುವುದೇ ಇಲ್ಲ
ಸದಾ ಮುಚ್ಚಿಕೊಂಡೇ ಇರುತ್ತವೆ.
ಮುಚ್ಚಿದ ಒಂದೊಂದು ಬಾಗಿಲಿಗೂ  
ಬಗೆ ಬಗೆಯ ಚಿಲಕಗಳು;
ಅಕಸ್ಮಾತ್ ತೆರೆದು ಒಳ ನಡೆದರೂ
ಕಣ್ಣಿಗೆ ಕಾಣದಸ್ಟು ಮುಸುಕು.
ನಿಮ್ಮನ್ನು ಸ್ವಾಗತಿಸುವವರೂ ಇಲ್ಲ,
ನೀವು ಹುಡುಕಿಕೊಂಡು ಹೋಗುವ 
ಪ್ರೀತಿ ಇಲ್ಲಿ ದಕ್ಕುವುದೂ ಇಲ್ಲ.
ತೆರೆದ ಬಾಗಿಲಿಗೂ ಅಂತಹ ಬಿಗುಮಾನ,
ಯಾವಾಗ ಮುಚ್ಚುವುದೆಂಬ ತವಕ.
ಯಾಕೆಂದರೆ ಅದು ಬಯಸುವ ಅತಿಥಿ
ನೀವಲ್ಲ,ಅದಕ್ಕದು ಗೊತ್ತು;
ನೀವು ಬಯಸುವ ಮನಸ್ಸೂ
ಇದಲ್ಲ ಖಂಡಿತ.
ನೀವೀಗ ದಾರಿ ತಪ್ಪಿದ ಮಗ,
ಗೊತ್ತಾಗುವ ಹೊತ್ತಿಗೆ 
ತೆರೆದ ಬಾಗಿಲುಗಳೂ ಮುಚ್ಚಿರುತ್ತವೆ
ಮತ್ತೆಂದೂ ತೆರೆಯದ ಹಾಗೆ.


ಭಾವ ಸಮಾಧಿ


ಮನದ ಕ್ಯಾನ್ವಾಸ್ ಮೇಲೆ ಚೆಲ್ಲಿದ್ದ ರಂಗು 
ಬಗೆ ಬಗೆಯಾಗಿ ಹರಡಿ,
ಶುಭ್ರ ಬಿಳಿ ಬಣ್ಣಕ್ಕಿದ್ದ ಬಟ್ಟೆಯ ಮೇಲೆ
ನೂರು ಬಣ್ಣಗಳ ಚಿತ್ತಾರ;
ಚೌಕಟ್ಟಿಲ್ಲದೆ  ಗೊತ್ತು ಗುರಿಯಿಲ್ಲದೆ 
ಒಟ್ಟಾರೆ ಚೆಲ್ಲಿದ ರಂಗಿನ ಎರೆಚಾಟ.
ಭಾವನೆಗಳು ಬಣ್ಣಗಳೊಡನೆ ಮಿಳಿತವಾಗದೆ
ಅರಳಿದ ಕಾಗದದ ಹೂವು,
ಪರಿಮಳವಿಲ್ಲ,ಮಕರಂದವಿಲ್ಲ;
ಬರಿಯ ಬಣ್ಣ ,ಶುಷ್ಕ ಭಾವ.
ಬಣ್ಣ ಇನ್ನೂ ಇದೆ ಕ್ಯಾನ್ವಾಸ್ ಖಾಲಿ ಇದೆ,
ಮನದಲ್ಲಿ ಹೆಪ್ಪುಗಟ್ಟಿದ ಮೌನ.
ಭಾವನೆಗಳಿಗೆ ರಂಗು ಚೆಲ್ಲುವವರು ಯಾರು?
ಮನದ ಮುಗಿಲಿನ ತುಂಬಾ ಒಂದೇ ಬಣ್ಣ,
ಕದಲುವ ಮೋಡವಿಲ್ಲ,ಹಾರುವ ಹಕ್ಕಿ ಇಲ್ಲ;
ಬೀಸುವ ಗಾಳಿಗೂ ಉದಾಸೀನತೆ ಯಾಕೋ? 
ಬಣ್ಣ ಮಾಸಿದ ಹಾಗೆ ಇಲ್ಲಿ
ಎಲ್ಲವೂ ಭಾವ ಸಮಾಧಿ.


Tuesday 4 October 2011

ಮರೆವು ಬೇಕು 


ಮರೆವು ಬೇಕು ಮನಸಿಗೆ,
ಬದುಕಿನ ಸಂಕಷ್ಟಗಳ ನೆನಪು ಮತ್ತೆ ಮತ್ತೆ
ಬಾರದ ಹಾಗೆ;
ಸೋತು ಹೋದ ನಿರಾಸೆಯ ಕಾರ್ಮೋಡ 
ಮರಳಿ ಕವಿಯದ ಹಾಗೆ;
ಬಿಟ್ಟು ಹೋದ ಪ್ರೀತಿಯ ಭಾವ ತೀವ್ರತೆ 
ಇನ್ನು ಕಾಡದ ಹಾಗೆ;
ಮರೆವು ಬೇಕು ಮನಸಿಗೆ.

ಮನ ಕಲಕಿದ ಮನೆಯಾಕೆಯ ಬಿರು ನುಡಿಗಳು
ಕಣ್ಣ ಹನಿ ಗೂಡಿಸದ ಹಾಗೆ;
ಎತ್ತಿ ಆಡಿಸಿದ ಪ್ರೀತಿಯ ಮಕ್ಕಳ ನಿರ್ಲಕ್ಷದ
ನೋಟ ಚುಚ್ಚದ ಹಾಗೆ;
ಹೊಡೆದರೂ ಬಡಿದರೂ ಬಾಲ ಆಡಿಸಿ ಪ್ರೀತಿ ತೋರಿದ
ಸಾಕು ನಾಯಿಯ ಸಾವಿನ ಶುನ್ಯತೆ 
ಆವರಿಸದ ಹಾಗೆ;
ಅಂಗಳದಲ್ಲಿ ಬೆಳೆದ ಒಂಟಿ ಗುಲಾಬಿ ಗಿಡದ 
ಒಂದೇ ಹೂವನು ಯಾರೋ ಕಿತ್ತ 
ನೆನಪು ಬಾರದ ಹಾಗೆ;
ಮರೆವು ಬೇಕು ಮನಸಿಗೆ.

ಸಾಧನೆಯ  ಹಾದಿಯಲ್ಲಿ ತೆಗೆದುಕೊಂಡ 
ತಪ್ಪು ನಿರ್ಣಯಗಳು ಕುಟುಕದ ಹಾಗೆ;
ಅವಕಾಶ ನೂರಿದ್ದರೂ ಬಾಚಿಕೊಳ್ಳದ ನನ್ನ
ಉದಾಸೀನ ಕೆರಳಿಸದ ಹಾಗೆ;
ಎಲ್ಲಾ ಮರೆತು ಮತ್ತೆ ಬದುಕಿನ
ಹಳಿಗೆ ಮರಳುವ ಉತ್ಕಟ ಬಯಕೆಯ
ಕನಸು ಮಸುಕಾಗದ ಹಾಗೆ;

ಮರೆವು ಬೇಕು ಮನಸಿಗೆ.






 ಮುಖವಾಡ


ನಾವು ಬದುಕುತ್ತೇವೆ ಬರಿಯ
ಮುಖವಾಡಗಳ ಒಳಗೆ.

ಖಾಸಗಿತನದ ನೂರು ದುಗುಡಗಳ
ಹಂಚಿಕೊಳ್ಳದೆ, ಬದುಕು ಬತ್ತಲಾಗುವುದ 
ನೋಡಲಾಗದೆ ಒಳಗೆ ತೂರಿ ಕೊಳ್ಳುತ್ತೇವೆ.

ಕಪ್ಪು ಬಿಳುಪಿನ ವ್ಯಕ್ತಿತ್ವಕ್ಕೆ ರಂಗೆರಚಿ,
ಬೆಳೆಸಿಕೊಂಡ ಉನ್ನತ ವ್ಯಕ್ತಿತ್ವದ
ಬಣ್ಣ ಮಾಸುವುದ ನೋಡಲಾಗದೆ
ಬಚ್ಚಿಟ್ಟು ಕೊಳ್ಳುತ್ತೇವೆ.

ಸುಳ್ಳಿನ ಸರಮಾಲೆಯನೆ ಹೆಣೆದು,
ಹಾಕಿಕೊಂಡ ಮಾಲೆಯ ಮುತ್ತಿನ ಹಾರದ 
ಸತ್ಯ ಬಯಲಾಗುವುದ ನೋಡಲಾಗದೆ
ಅಡಗಿ ಕೊಳ್ಳುತ್ತೇವೆ.

ನಾವು ಬದುಕುತ್ತೇವೆ ಬರಿಯ
ಮುಖವಾಡಗಳ ಒಳಗೆ;
ಕಳಚಿ ಬೀಳುವ ಭಯದ ನಡುವೆಯೂ
ಗೊತ್ತಾಗದ ಹಾಗೆ.

ವಿಜ್ಞಾನ 


ಅಂದು ಮಗು 
ಅಮ್ಮನನ್ನು ಕೇಳಿತ್ತು,
ಚಂದಿರನೇತಕೆ ಓಡುವನಮ್ಮ?
ಮೋಡಕೆ  ಹೆದರಿಹನೆ ಎಂದು. 
ಇಂದು ಅದೇ ಮಗು
ಚಂದಿರನ ಮೇಲೆ ತಳವೂರಿ 
ಹೇಳಿತ್ತು,
ಭೂಮಿಯು ಏತಕೆ ತಿರುಗುವುದಮ್ಮ
ಜನರಿಗೆ ಹೆದರಿಹುದೇ?.

Monday 26 September 2011

ಸಾಟಿ 

ಗೆಳೆಯಾ
ಸಾಗರ ಆಳಕ್ಕಿಳಿದು 
ಮುತ್ತುಗಳ ಹೆಕ್ಕಿ ತಂದು
ಪೋಣಿಸಿದ ಮುತ್ತಿನ ಹಾರ 
ಕೂಡಾ ಸಾಟಿಯಲ್ಲ;
ನೀ ನನಗಿತ್ತ
ಹೂ ಮುತ್ತಿಗೆ!.
ದೃಷ್ಟಿ 

ಕತ್ತು ಉದ್ದ ಮಾಡಿ ನೋಡುತಿದ್ದೇನೆ
ಆದರೂ ಎಲ್ಲವನ್ನು ನೋಡಲಾಗುತ್ತಿಲ್ಲ.
ಹಳೇ ಗೋರಿಯ ಮೇಲೆ ಅರಳಿ ನಿಂತ 
ಚೆಂಗುಲಾಬಿ,ಸಾಯುತ್ತಿರುವ ಬೇರು,
ಮರುಭೂಮಿಯಲ್ಲಿ ನಡೆದು ಸುಸ್ತಾದ
ಒಂಟೆಯ ಕಾಲಿನ ಗಾಯ,ಕೀವು ತುಂಬಿದ ಬಾವು;
ಸಾಗರದಾಳದಲ್ಲಿ ಅಸ್ತಿತ್ವಕ್ಕಾಗಿ 
ಓಡುತ್ತಿರುವ ಸಣ್ಣ ಮೀನುಗಳು,
ಕೆಲವು ಕಣ್ಣಿಗೆ ಕಾಣುತ್ತಿವೆ
ಮನಸ್ಸಿಗೆ ಗೋಚರಿಸುತ್ತಿಲ್ಲ.
ಮತ್ತೆ ಕೆಲವು ಕಣ್ಣಿಗೆ ಕಾಣುವಸ್ಟು
ಹತ್ತಿರದಲ್ಲೇ ಘಟಿಸುತ್ತಿವೆ.
ಅತ್ತ ಕಡೆ ಲಕ್ಷ ಕೊಡುವ ಅಗತ್ಯಕ್ಕೆ
ಯಾವ ಕಾರಣಗಳೂ ಸ್ಪಸ್ಟವಾಗುತ್ತಿಲ್ಲ.
ವಿಷಯಗಳಿಗೆ ವಾಚ್ಯವಾಗುವ;
ಸೂಕ್ಷ್ಮಗಳಿಗೆ ಸೂಚ್ಯಾವಾಗುವ,
ಕಲೆ ಎಲ್ಲರಿಗೂ ಕರಗತವಾಗುವುದಿಲ್ಲ.
ಅಭ್ಯಾಸವಾದವರು ಯಾವುದಕ್ಕೂ ಸ್ಪಂದಿಸುವುದಿಲ್ಲ,
ಅವರದ್ದು ಬೇರೆಯೇ ಲೋಕ.
ನೋಡಿದವರು ತೆರೆದುಕೊಳ್ಳುತ್ತಾರೆ,
ಕಣ್ಣು ಮುಚ್ಚಿದವರು ಮರೆಯುತ್ತಾರೆ.
ಇದು ಹೀಗೆಯೇ,ಅದು ಹಾಗೆಯೇ;
ಅಂತೇನೂ ಇಲ್ಲ.
ನೋಡುವ ದೃಷ್ಟಿಯಲ್ಲೇ ಲೋಕ.


Saturday 24 September 2011

ಅರಿವು


ಗೆಳತೀ 
ಹೃದಯ ಮಂದಿರದಲ್ಲಿಟ್ಟು
ಪೂಜಿಸಿದೆ ನಿನ್ನ;
ಆದರೆ ನಿನ್ನ ಒಲವು
ಬೇರೆ ಭಕ್ತನ ಮೇಲೆ ಇತ್ತು,
ಅರಿವಾಗಲಿಲ್ಲ!.
ಮಾತು-ಮುತ್ತು. 


ಮಾತಿಗೆ ಮಾತು ಬೆಳೆದರೆ
ಛಿದ್ರ ಸಂಸಾರ;
ತುಟಿಗೆ ತುಟಿ ಬೆರೆತರೆ
ಆನಂದ ಸಾಗರ!.

ಸತ್ಯ 


ಹಣಕ್ಕಾಗಿ ಮನುಷ್ಯ 
ಹೆಣಗಾಡುತ್ತಾನೆ;
ಎಲ್ಲಾ ದಕ್ಕಿದರೂ
ಕೊನೆಗೆ
ಹೆಣವಾಗುತ್ತಾನೆ!.

Friday 16 September 2011

ಇಲ್ಲದುದರೆಡೆಗೆ



ಕತ್ತಲ ಸಾಮ್ರಾಜ್ಯದಲ್ಲೂ
ಬೆಳಕಿಗಾಗಿ ಹಂಬಲಿಸಿದೆ;
ಮಿಂಚುಹುಳ ನಕ್ಕಿತು.
ಬರಡು ಭೂಮಿಯಲ್ಲೂ
ಹನಿ ನೀರಿಗಾಗಿ ಹುಡುಕಾಡಿದೆ;
ಓಯಸಿಸ್  ಉಕ್ಕಿತು.
ಸುತ್ತ ಮುತ್ತ ಪ್ರೀತಿಯ ಜೀವ ಇದ್ದರೂ
ನಿನ್ನ ಪ್ರೀತಿಗಾಗಿ ಪರಿತಪಿಸಿ
ಅವರ ದೂರವಿರಿಸಿದೆ;
ಜೀವನ ಕುಕ್ಕಿತು.



ಕಾರಣ

ನನ್ನ ನಗುವಿಗೂ 
ಅಳುವಿಗೂ
ಕಾರಣ ನೀನಲ್ಲ;
ಮಾಸಿ ಹೋದ ನೆನಪುಗಳು
ಹೃದಯ ಕಲಕುವುದಿಲ್ಲ!.

Thursday 15 September 2011

ಬೇಗ ಬಾ


ಆಡು ಬಾ ಕಾಡು ಬಾ,
ಬೇಸರವ ನೀಗು ಬಾ.
ಮನದ ತುಂಬಾ ಖಾಲಿ ಭಾವ
ತುಂಬು ಬಾ, ನೀ ಬೇಗ ಬಾ.

ಹನಿಗಾಗಿ ಕಾದ ಇಳೆ,ದೂರ ಎಲ್ಲೊ ಸೋನೆ ಮಳೆ
ಭೂಮಿ ಬಾನ ನಡುವೆ ಯಾಕೋ; ತೀರದಿಹ ಹುಸಿ ಮುನಿಸು.

ಹುಣ್ಣಿಮೆಯ ಚಂದ್ರನಿಲ್ಲ, ಆಗಸದಿ ತಾರೆ ಇಲ್ಲ
ಕತ್ತಲ ಮರೆಯೊಳಗೆ ಎಲ್ಲೊ; ಕೇಳದಿಹ ಪಿಸು ಮಾತು.

ಮುಗಿಲಿನ ಬಣ್ಣವೆಲ್ಲ, ಸಾಗರದಿ ಲೀನವಾಗಿ
ಬಿರುಗಾಳಿ ಬಯಲೆಲ್ಲಾ; ಸುಡುತಿಹುದು ತಂಗಾಳಿ.

ಶೂನ್ಯ ಭಾವ ಬಿಡದೆ ಕಾಡಿ, ಉದಯರವಿಗೂ ನಿಶೆಯ ಮೋಡಿ
ಸಮಯ ಸಾಗದಾಗಿದೆ; ನಿನ್ನ ಕನಸೂ ಬಾರದೆ?.



ನಮ್ಮ ಬಾಳು


ಮಾತಿನ ಅರಮನೆಯೇ ನಮ್ಮ ಬಾಳು ಗೆಳೆಯ
ಮೌನದ ಉಯ್ಯಾಲೆ ಜೀಕಬೇಕು ಅರೆ ಘಳಿಗೆ,
ಹಮ್ಮು ಬಿಮ್ಮು ಮುನಿಸು,ಸರಿಸಬೇಕು ತೆರೆಯಾ
ಮುತ್ತಿನ ಅರಿವಳಿಕೆ ಸುಖದಾ ದೀವಳಿಗೆ.

ನಿನ್ನ ನಗೆ ಅಲೆ ಅಲೆಯೂ ಸಂತಸದ ಹಾಲ್ಗಡಲು
ನಿನ್ನೊಲುಮೆ ಕ್ಷಣ ಕ್ಷಣವೂ ಹೂಮಳೆಯ ಕರಿಮುಗಿಲು,
ನೀನಿರೆ ಪಯಣಿಗ, ಆನುದಿನವು ಜೊತೆಯಾಗಿ
ನಡೆವ ಹಾದಿಯೆಲ್ಲ ನಲ್ಮೆಯ ಸ್ವಾಗತವು.

ಬಾಳಿನ ರಸ ಘಳಿಗೆ ಕನಸುಗಳೇ ನಿಜವಾಗಿ
ಸಂಸಾರ ವರ್ತುಲದಿ ಗೆಳೆತನವೆ ಸವಿಯಾಗಿ,
ಸುಮಗಳು ಅರಳಿದಂತೆ ನಲಿಯುವ ಚಿಂತೆ ಮರೆತು
ಸ್ವರ್ಗದ ಸುಖವಿಲ್ಲೇ ಕಾಣಬೇಕು ಗೆಳೆಯ.

ನೀನಿಲ್ಲದೆ 


ಒಂದಿನಿತೂ ಬೇಸರವಿಲ್ಲದೆ ಕಳೆದ 
ನಿನ್ನೆಯ ಸಂಜೆಯೇ ಒಂದು ಅಚ್ಚರಿ;
ಸಂಜೆಯಾದರೆ ಸಾಕು 
ಕಾಡುವ ನಿನ್ನ ಪಿಸು ಮಾತು
ಅರ್ಥವಿಲ್ಲದ ಹುಸಿ ಮುನಿಸು,
ಬೆಚ್ಚಗಿನ ಸ್ಪರ್ಶ,ಹೂಮುತ್ತು
ನಿನ್ನ ಬಗೆಗಿನ ನೆನಪುಗಳೇ ಹಾಗೆ.
ನೆನಪುಗಳು ಒತ್ತರಿಸಿದಾಗ 
ಮನದ ಮುಗಿಲಿನಲ್ಲಿ ಬೇಸರದ ಕಾರ್ಮೋಡ,
ಪದಗಳಲ್ಲಿ ಕಟ್ಟಿ ಕೊಡಲಾಗದ ನಿರ್ಭಾವುಕತನ.
ನೀನು ದೂರ ಇರುತಿದ್ದ ಪ್ರತಿ ಸಂಜೆ 
ಎಲ್ಲವೂ ಕಳೆದುಕೊಂಡ ಭಾವ;
ಲೋಕವೆಲ್ಲಾ ಜಡವಾಗಿ ಬಿದ್ದುಕೊಂದಂತೆ
ಚಲನೆಗೆ ನಿನ್ನ ಇರವೇ ಕೀಲಿ ಕೈ,
ಆ ತರ ಪ್ರತಿಭಟಿಸುತಿದ್ದ ಮನಸ್ಸು
ನೀನಿಲ್ಲದೆ ನಿರಾಳವಾಗಿದ್ದು ಹೇಗೆ?
ದೂರದ ಬೆಟ್ಟ ನಿನ್ನ ಕಣ್ಣಿಗೂ ನುಣ್ಣಗೆ ಕಂಡಿದ್ದು,
ಅರಳಿ ಹೂ ಬಿಡುತಿದ್ದ ಪ್ರೀತಿಗೆ
ಹೃದಯ ಮಂದಿರದ ಪೂಜ್ಯತೆಗೆ 
ನೀನೆ ಲೋಕ ಎಂದು ಮೈಮರೆತ ಮನಸ್ಸಿಗೆ,
ಉತ್ಕಟ ನಿರೀಕ್ಷೆಗಳಿಗೀಗ ಶೂನ್ಯ ಭಾವ.
ಬಿರುಗಾಳಿಯ ನಂತರದ ನಿಶ್ಯಬ್ದತೆ
ಸುನಾಮಿಯ ಬಳಿಕದ ಸ್ತಬ್ದತೆ,
ಈಗ ಮನಸ್ಸನ್ನವರಿಸಿರುವುದು ಸುಳ್ಳಲ್ಲ.
ಸಂಜೆಗಳು ಮರುಕಳಿಸುತ್ತಿವೆ,ನಾನಿಲ್ಲೇ ಕೂತಿದ್ದೇನೆ.
ನೀನಿಲ್ಲ ಅನ್ನುವುದೊಂದು ಬಿಟ್ಟರೆ
ಜಗತ್ತು ಇನ್ನು ಸುಂದರವಾಗಿದೆ.


Monday 25 July 2011

ಭಾವನಾ    


ಯಾವುದೋ ಭಾವ ಯಾರಿಗೋ ಮೀಸಲು
ಹೃದಯದೊಳಗಿನ ತುಮುಲ ಬಲ್ಲವರು ಯಾರು?

ಮನಸು ಮನಸಿನ ಮಾತು ಅರಿಯುವ ಮೊದಲೇ
ಸ್ವಂತ ನನಗೆಂದು ಕಾಡುವುದು ತರವೇ?;
ಅಂತರಂಗದ ದನಿಯ ಕೇಳುವಾ ಮೊದಲೇ
ಇನ್ನು ಸಾಕೆಂದು ಹೊರಡುವುದು ಸರಿಯೇ?.

ಹುಚ್ಚು ಮನಸಿಯ ತುಂಬ ನಿನ್ನ ವದನದ ಬಿಂಬ
ಕಣ್ಣೀರುಗರೆಯದ ಕಣ್ಣುಗಳೇ ಭಾರ;
ಮೂಕ ಹೃದಯದ ಕದವ ತೆರೆದ ಮಾತಿನ ಲಹರಿ
ಭಾವ ಮರೆಸುವ ನಗುವು ಎಲ್ಲೋ ದೂರ. 

ಮೌನ ಮಾತಿನ ನಡುವೆ ಎಂದೂ ನಿಲ್ಲದ ಜಗಳ
ಸ್ನೇಹ ಪ್ರೀತಿಯ ಸಂಕ ಕಟ್ಟುವವರು ಯಾರು?;
ಮನಸು ಹೃದಯದ ಬೆಸುಗೆ,ಭಾವ ಬಂಧನ ಸರಳ
ಹಕ್ಕಿ ಹಾಡಿನ ಕೊರಳ ಮರೆತವರು ಯಾರು?


Sunday 24 July 2011

ಅಪ್ಪನಾಗಿದ್ದೇನೆ 


ಈಗೀಗ ಎಲ್ಲವೂ ಅರ್ಥವಾಗುತ್ತಿದೆ,
ಅಪ್ಪನ ಅಸಹನೆ,ಅಮ್ಮನ ತೊಳಲಾಟ 
ಮಕ್ಕಳ ಬಗೆಗಿನ ಅವರ ತಲ್ಲಣ;
ಅವರ ಹಿತನುಡಿಗೆಲ್ಲಾ ಕಿವುಡಾಗುತ್ತಿದ್ದ ,
ಅವರ ಆದರ್ಶಗಳಿಗೆಲ್ಲಾ ಕುರುಡಾಗುತ್ತಿದ್ದ,
ಅವರ ನಂಬಿಕೆಗಳ ಬುಡ ಕತ್ತರಿಸುತ್ತಿದ್ದ,
ನಿನ್ನೆಯವರೆಗಿನ ಕ್ಷಣಗಳ ಬಗ್ಗೆ ಮರುಕವಿದೆ.
ನಿರೀಕ್ಷೆಯ ಅವರ ಕಣ್ಣುಗಳಲ್ಲಿ ಕಂಬನಿ 
ಮಳೆಗರೆದ ದಿನಗಳೂ ಹಸುರಾಗಿವೆ.
ಅವರ ಪ್ರೀತಿ ನಾಟಕವೆನಿಸುತ್ತಿತ್ತು.
ವೃದ್ದಾಪ್ಯದ ಅವರ ಸೇವೆಗೆ ನಮ್ಮನ್ನು 
ತಯಾರು ಮಾಡುತ್ತಿದ್ದರೇನೋ?
ಅವರ ಬೆಂಬಲದಲ್ಲೆಲ್ಲೋ ಅತಿ ಹಂಬಲದ 
ನಿರೀಕ್ಷೆ ಕಾಣುತ್ತಿದ್ದಾಗ,ಪಡುತ್ತಿದ್ದ
ಅವರ ಮರುಕದ ಬಗ್ಗೆ ನೊಂದುಕೊಂಡಿರಲಿಲ್ಲ.
ತೀರ ನಿನ್ನೆಯವರೆಗೂ,
ನನ್ನ ಮಗು ನನ್ನ ನೋಡಿ 
ಕಣ್ಣರಳಿಸಿ ನಕ್ಕು ನನ್ನ
'ಅಪ್ಪಾ' ಎಂದು ಕೂಗುವವರೆಗೂ!.

ಈಗೀಗ ಎಲ್ಲವೂ ಅರ್ಥವಾಗುತ್ತಿದೆ,
ಯಾಕೆಂದರೆ ನಾನು ಅಪ್ಪನಾಗಿದ್ದೇನೆ.

Wednesday 13 July 2011

ಬಿಡುಗಡೆ

ಜೇಡರ ಬಲೆಗೆ ಕನಸಿನ ಕುಸುರಿ
ಅಂಟಿ ಕುಳಿತಿದೆ ನಂಟನು ಬಿಡದೆ;
ಭಾವದ ಸುಳಿಗೆ ಮನಸಿನ ಲಹರಿ
ಬಿಡದೆ ತಿರುಗಿದೆ, ಸಂಕಟ ಪಡದೆ?

ಗಗನದ ಮೇಲೆ ಮಿನುಗುವ ಸಾಲೇ
ನೋವ ಕಾವನು ಸ್ವಲ್ಪ ಮರೆಸೀತೇ?;
ಸಾಗರದೊಳಗೆ ಅಲೆಗಳ ಲೀಲೆ
ತುಮುಲ ತೆರೆಯನು ಸ್ವಲ್ಪ ಸರಿಸೀತೇ?

ಹಕ್ಕಿಯ ಬಳಗ ಹಾರುತ ದೂರ
ಅಳುವ ಒಡಲನು ನಕ್ಕು ನಗಿಸೀತೇ?
ಹೂಬನದೊಳಗೆ ಹಾಡುವ ದುಂಬಿ
ಸುಂದರ ಬದುಕ ಕದವ ತೆರೆಸೀತೇ?



Friday 1 July 2011

ನನ್ನವಳಿಗೆ

ಹೆಜ್ಜೆ ಗುರುತು ಮೂಡಿದೆ
ಮನದಂಗಳದಲ್ಲಿ ನಿನ್ನದೇ;
ನಿನ್ನ ನೆನಪ ಮಧುರ ವೀಣೆ
ಮೀಟುತ್ತಿದೆ ನನ್ನೆದೆ.

       ಭರವಸೆಗಳ ಕಾರಂಜಿ
       ಚಿಮ್ಮುತ್ತಿದೆ ಮೆಲ್ಲಗೆ;
       ಮೈಮನಗಳಿಗೆ ಕಂಪೆರೆಯುತ್ತಿದೆ 
       ನೀ ಮುಡಿದಾ ಮಲ್ಲಿಗೆ.

ನಿನ್ನ ಸಣ್ಣ ನೋಟಕ್ಕೆ 
ಬದುಕ ಕಿಟಕಿ ತೆರೆದಿದೆ;
ಬೆಚ್ಚನೆಯ ಹೂ ಸ್ಪರ್ಶಕ್ಕೆ
ಬಾಳಕೊಂಡಿ ಬೆಸೆದಿದೆ.

       ಸರಸ ವಿರಸ ಏನೇ ಇರಲಿ 
       ಒಂದಾಗಿ ಬೆರೆಯುವ;
       ಸಮರಸದ ಸಾರ ಇರಲಿ
       ಪ್ರೀತಿಯಿಂದ ಸವಿಯುವ.

ಎನ್ನ ಮನದ ಮೂಕ ಭಾಷೆ
ಮಾತಾಗಿ ನುಡಿದಿದೆ;
ಒಡಲಾಳದ ಭಾವ ತೃಷೆ
ಕವಿತೆಯಾಗಿ ಹಾಡಿದೆ.







ಋಣ 

ಪ್ರಿಯೆ
ನೀನು ನಕ್ಕು ನಲಿದು
ನನ್ನೊಂದಿಗಿದ್ದ
ಕ್ಷಣಗಳಿಗೆ ಹೇಗೆ ಬೆಲೆ ಕಟ್ಟಲಿ?
ಅಂದಾಗ
ಸಿಹಿ ಮುತ್ತನಿತ್ತು
ಋಣಭಾರ ಹೆಚ್ಚಿಸಿದೆಯಲ್ಲೇ?


ನಿರ್ಲಕ್ಷ

ಅಂದೇ
ಹೇಳಬೇಕೆಂದಿದ್ದೆ
ನನ್ನೆದೆಯ ನೂರು
ಭಾವಗಳ,
ಯಾರೋ ಹೇಳಿದರು
ಅಮಾವಾಸ್ಸೆಯಂದು
ಚಂದಿರ ಮೂಡುವುದಿಲ್ಲ;
ಮುಂದೆ ಬೆಳದಿಂಗಳ
ನಾ ಕಾಣಲೇ ಇಲ್ಲ!.


ಇಷ್ಟ

ನನ್ನಾಕೆಗೆ ನಾನು ಮಾಡಿದ
ಅಡುಗೆ ಇಷ್ಟ,
ನನಗೆ ಅವಳ ಕೈ
ಅಡುಗೆ ಇಷ್ಟ;
ಮನೆಯಲ್ಲಿ ಮಾತ್ರ
ನಡೆಯುವುದು
ಅವಳ ಇಷ್ಟ!. 

ಹೆಸರು

ಮನೆಯಲ್ಲಿ ಯಾವ 
ಕೆಲಸ ನಡೆದರೂ
ಹೆಸರು ನನ್ನ ಹೆಂಡತಿಯದೇ;
ಅಡುಗೆ ವಿಷಯದಲ್ಲೂ
ಕೂಡಾ!.

Thursday 30 June 2011

ನಿರೀಕ್ಷೆ

ನೂರೆಂಟು ಹೊಸ ಕನಸುಗಳ ಹೊತ್ತು
ಹೊಸ ಸೀರೆ,ಮುಡಿ ತುಂಬಾ ಅರೆಬಿರಿದ ಮಲ್ಲಿಗೆ:
ಎಂದೋ ಕಾದು ಕುಳಿತಿದ್ದೇನೆ  ನಾನು,
ಬರುವನೇನೆ ಸಖಿ ಚೆಲುವ?

ಅಂದು ಬಂದಿದ್ದ ಹೊಸ ಹುಡುಗ
ಆಹಾ! ಚಿಗುರು ಮೀಸೆ ಸುಂದರಾಂಗ;
ಹೊಟ್ಟೆ ತುಂಬಾ ಉಪ್ಪಿಟ್ಟು ಕಾಫಿ
ಕುಡಿದು ಎಲ್ಲಿ ಮಾಯವಾದ?

ನಿನ್ನೆ ಬಂದಿತ್ತು ಅವನಿಂದ ಉತ್ತರ,
ಸ್ವಾಮೀ ನಾನು ಆರಡಿ, ನಿಮ್ಮ ಹುಡುಗಿ
ಬರೇ ನಾಲ್ಕಡಿ,ನನ್ನ ಕ್ಷಮಿಸಿಬಿಡಿ;
ಕುಸಿದು ಬಿತ್ತು ಮತ್ತೊಂದು ಆಶಾ ಗೋಪುರ.

ರೂಪ ಬಣ್ಣ,ಹಣ ಅಂತಸ್ಥಿಕೆ,
ನಿಮ್ಮ ಆಸೆಗಳಿಗೆ ಎಲ್ಲಿದೆ ಅಂಕೆ?
ನೆರೆಹೊರೆ ಮಂದಿಗೊಂದಿ ಎಲ್ಲ ವಿಚಾರಿಸಿ,
ಇನ್ನು ತೀರಲಿಲ್ಲವೇ ನನ್ನ ಮೇಲಿನ ಶಂಕೆ?

ಹೇಳುತ್ತೇನೆ ಕೇಳು ಹುಡುಗ
ನನಗೂ ಮನಸ್ಸಿದೆ,ಹುಡುಗಾಟ ಸಲ್ಲ;
ಎಲ್ಲದಕ್ಕೂ ಹೊಂದಿಸಲು ರೇಟು,
ನಾನೇನು ಮಾರ್ಕೆಟಿನ ಹೊಸ ಸರಕೆ?

ನಿಮಗೋ ದಿನಕ್ಕೊಂದು ಹಾಡು,ಬಾಡದ ಹೂವು
ಕೇಳಿದಿರಾ ಎಂದಾದರು ನನ್ನ ಇಸ್ಟವನ್ನ?
ಹೃದಯದಲ್ಲಿ  ಬಚ್ಚಿಟ್ಟ ಪ್ರೇಮ ಪಲ್ಲವಿ;
ಕೇಳುವವರ್ರ್ಯಾರು  ಎನ್ನ ಭಾವಗೀತೆಯನ್ನ?

ಮತ್ತೆ ಸಿಂಗರಿಸಿಕೊಂಡು ಕೂತಿದ್ದೇನೆ
ಮನದಲ್ಲೊಂದು ಹೊಸ ಕವನ,ಹೊಂಬಣ್ಣ;
ಬರುವ ಗಂಡಾದರೂ ಒಪ್ಪಲಿ ಎನ್ನ,
ಇಂತಹ ಪರೀಕ್ಷೆ ಏನು ಚೆನ್ನ?














Wednesday 29 June 2011

modala kavana

ದಿನಕರನಿಗೆ

ಬಾನಂಚಿನಲಿ ಕತ್ತಲ ಮಸುಕು ಇಣುಕಿ
ಹಕ್ಕಿಗಳು ವಿರಹ ಗೀತೆ ಗುನುಗುತಿರುವಾಗ,
ಬರಲಿರುವ ನಿಶೆಗೆ ಹೆದರಿ ಹೋಗಿ 
ಮುಖವೆತ್ತದೆ  ಕಮಲ ಬಾಡುತಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಅಜ್ಞಾನದ ಮುಸುಕು ಎಲ್ಲೆಡೆ ಹರಡಿ
ಜ್ಞಾನದ ದೀಪ ನಂದಿ ಹೋಗಿರುವಾಗ,
ಅಲೆಗಳ ಆರ್ಭಟವಿಲ್ಲದೆ ಹೋಗಿ
ಕಡಲ ಒಡಲು ಬತ್ತಿ ಹೋಗಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಕಡಲ ತೀರದಿ ಮೂಡುವ ನಿನ್ನ
ಹೊಂಬಣ್ಣ ನೋಡಲು ಹವಣಿಸುತಿರುವಾಗ,
ಮನ ಸೂರೆ ಮಾಡುವ ದಿವ್ಯ ರೂಪವ
ಚಿತ್ರಿಸಲು ನಾಂದಿ ಹಾಡಿರುವಾಗ,
    ಕರಗಿ ಹೋಗದಿರು ರವಿ
    ಇರುಳ ಮರೆಯಾಗಿ.
ಕಡಲ ತೀರದ ತಲ್ಪದಿ ಕುಳಿತು
ಕುಂಚ ಹಿಡಿದು ಚಿಂತಿಸುತಿರುವಾಗ,
ಮನದಲ್ಲಿ ಮೂಡುವ ಕಲ್ಪನೆಗಳಿಗೆ
ರೂಪ ನೀಡಲು ಕಾತರಿಸುತಿರುವಾಗ,
     ಕರಗಿ ಹೋಗದಿರು ರವಿ
     ಇರುಳ ಮರೆಯಾಗಿ.

(ಸ್ಫೂರ್ತಿ: ಹಾಡಿ ಬಿಡು ಕೋಗಿಲೆಯೇ ಕಾಯದೆ ಚೈತ್ರಕ್ಕಾಗಿ  , ಕವನ) 



Tuesday 28 June 2011

ಗಾಡಿ 

ನಿಂತಿದೆ ನನ್ನೊಂದಿಗೆ ನನ್ನ ಗಾಡಿ,
ಬೆಳಿಗ್ಗೆಯಿಂದ ಎಳೆದೆಳೆದು ಸುಸ್ತಾಗಿ 
ದಣಿದು ನಿಂತಿದ್ದೇನೆ,
ಒಂದಿಸ್ತ್ತು ವಿರಾಮಕ್ಕಾಗಿ.
ಬದುಕು ಜಟಕಾ ಬಂಡಿ,
ಓಡಿದರೆ ಓಟ, ಮಾತ್ರ ನನ್ನ ಆಟ;
ನನ್ನ ಗಾಡಿಗೇನು ಗೊತ್ತು?
ತೋರಿಸುವುದುಂಟು ಆಗಾಗ ನಖರ .
ಬಾರಕೊಲಿನ ರುಯ್ಯನೆ ಗಾಳಿ,
ಬಾಯಿ ತುಂಬಾ ನಿಲ್ಲದ ಬೈಗಳು 
ಅದಕ್ಯಾಕೋ ತುಂಬಾ ಇಷ್ಟ.
ನನ್ನ ಹೊಟ್ಟೆ ತುಂಬಿಸಲು ಓಡಿ ಓಡಿ,
ಸಡಿಲಗೊಂಡ ಚುರುಕು ಚಕ್ರಗಳು.
ಗಾಡಿ ನಿಂತರೆ ಬದುಕು ನಿಂತ ನೀರು.
ಸಾಗುತ್ತಿರಲಿ ಮುಂದೆ ಮುಂದೆ,
ಎಂದೆಂದೂ ನಿಲ್ಲದೆ: ಬದುಕು ನಡುಗದೆ.
ಇರುಳಿನಾಚೆಗೂ ಮತ್ತೆ ಹಗಲಿದೆ,
ವಿರಾಮದ ನಂತರ ಕೆಲಸವಿದೆ ಮುಂದೆ,
ಇಲ್ಲದೆ ಹೋದರೆ ನನ್ನದೇನಿದೆ ಇಲ್ಲಿ?
ಗಾಡಿ ಓಡುತ್ತಿದೆ;
ಜಗತ್ತು ಸಾಗುತ್ತಿದೆ. 



ಅಭಿವ್ಯಕ್ತ 


ಬಾನಎತ್ತರಕ್ಕೇರುವ ಮಾನವನ ಆಸೆ,
ಇರಬೇಕು ತನ್ನ ಇತಿಮಿತಿಗಳರಿವು;
ಬೇರುಗಳ ನೆಲದಲ್ಲಿಯೇ ಆಳಕ್ಕಿಳಿಸಿ 
ಮಣ್ಣಿನ ಸತ್ವ,ಸಂಸ್ಕೃತಿಯ ಹೀರಿ,
ಮಾಡಬೇಕು ಗಗನ ಚುಂಬಿಸುವ ಆಸೆ.
ರೆಕ್ಕೆ ಮೂಡಿದೊಡನೆಯೇ ಹಾರುವ 
ಪುಟ್ಟ ಹಕ್ಕಿಯ ಬಯಕೆ,
ಕನ್ನಡಿಯೊಳಗಿನ ತನ್ನ ಪ್ರತಿಬಿಂಬಕ್ಕೆ
ತಾನೇ ಮುತ್ತಿಕ್ಕಿದಂತೆ;
ಬಿಸಿಲುಗುದುರೆಯ ಬೆನ್ನ ಹತ್ತಿ 
ಮಾಯಾ ಜಿಂಕೆಯ ಬೇಟೆ?
ಕೈಗೆಟಕುವುದು ಅಂದುಕೊಳ್ಳುವಾಗ
ಮರೆಯಾಗುವುದು ನೆರಳು.
ಕಾಗದದ ದೋಣಿಯಲ್ಲಿ ದಡ ಸೇರುವ ತವಕ,
ಮುಳುಗುವ ಸೂರ್ಯನ ಹಿಡಿದಿಡುವ ಧಾವಂತ,
ಭಾವುಕ ಮನದ ನವಿರು  ಅಭಿವ್ಯಕ್ತಿ.
ಬದುಕು

ಬದುಕು, ಹಾಗಂದರೇನು?
ನೋವು ನಲಿವಿನ ಮಿಶ್ರಣವೇ?
ನಿನ್ನೆ ಕಂಡ, ನಾಳೆ ಕಾಣದ
ವರ್ತಮಾನದ ಸಮಸ್ಯೆಯೇ?
ಜಾತಿ,ಮತ,ಧರ್ಮದ ಭದ್ರ ಗೋಡೆಯ
ನಡುವೆ ತನ್ನತನವ
ಮರೆಯುವ ಪಂಜರವೇ?
ಅಥವಾ
ಕಾಲದ ಸರಳುಗಳ ಹಿಂದೆ 
ಬಂಧಿಯಾಗಿ ನರಳಿ 
ಬೆಳಕು ಕಾಣುವ ನೀರೀಕ್ಷೆಯೇ?
ಅರ್ಥವಾಗುತ್ತಿಲ್ಲ;
ಹಾಗಾದರೆ ಮತ್ತೇನು?
ಜನನ ಮರಣಗಳ ನಡುವೆ 
ಸಾಗುವ ಕವಲು ದಾರಿ,
ನಡುವೆ ಅದೆಷ್ಟೋ ತಿರುವುಗಳು;
ದಾರಿಯ ಆಯ್ಕೆ ಮಾತ್ರ
ಅವರವರಿಗೆ ಬಿಟ್ಟಿದ್ದು,
ಅವರವರ ಬುದ್ದಿಗೆ ತೋಚಿದ ಹಾಗೆ.
ಅಲ್ಲ,  ನಮಗ್ಯಾಕೆ ಬೇಕು ಬದುಕಿನ 
ಅರ್ಥ ಹುಡುಕುವ ಸಾಹಸ?
ಬನ್ನಿ,  ಮೊದಲು 
ಬದುಕಲು ಕಲಿಯೋಣ; ಏನಂತೀರಿ?.



Monday 27 June 2011

ಹತಾಶೆ

ಬಾಳ ಹಾದಿಯ ತುಂಬಾ
ಚೆಲ್ಲಿದ್ದ ಕನಸುಗಳ ಎತ್ತಿಕೊಳ್ಳಲಾಗಲಿಲ್ಲ;
ಬಣ್ಣ ಕಳೆದು ಹೋಗುವ ಮುನ್ನ
ಬದುಕ ಕಟ್ಟಿ ಕೊಳ್ಳಲಾಗಲಿಲ್ಲ;
ಪ್ರತೀ ಮುಂಜಾವು ಎಬ್ಬಿಸಿದರೂ
ಕಣ್ಣು ತೆರೆದು ನೋಡಲಾಗಲೇ ಇಲ್ಲ.




ಕಾರಣ

ನಿನ್ನ ನಗುವಿಗೆ 
ಕಾರಣ
ಹೇಳಿ  ಹೋಗು ಗೆಳತೀ;
ಇಲ್ಲದಿದ್ದರೆ
ಈ ಪ್ರೀತಿಗೆ 
ನಾನು ಜವಾಬ್ದಾರನಲ್ಲ.


ಅಗತ್ಯ

ನೂರು ಸಲ ಯೋಚಿಸಿದ್ದೆ 
ನಿನ್ನ ಮದುವೆ
ಆಗುವ ಮೊದಲು;
ನನಗೇನು ಗೊತ್ತಿತ್ತು
ಮತ್ತೊಂದು ಸಲ 
ಅಗತ್ಯ ಇತ್ತೆಂದು?.



                                                                                                                                        ಮದುವೆ

ಮದುವೆ ದಿನದ 
 ಗಮ್ಮತ್ತೆ?;
ವರುಷ ಮೀರಿದರೆ
ನಾಪತ್ತೆ?.


ಈ ಕ್ಷ್ಶಣ 

ಈಗಿರುವ ಕ್ಷ್ಶಣ
ಜೀವನದ
ಅತ್ಯಮೂಲ್ಯ ಹೊತ್ತು;
ಕಾಲಕ್ಕೆ
ಹಿಂದಕ್ಕೋಡಿ
ಅಭ್ಯಾಸವಿಲ್ಲ!.

    ಕ್ಷ್ಶಣಿಕ 

ಭಾವನೆಗಳು 
ಉಧ್ಭವಿಸುವ
ಕ್ಷ್ಶಣ
ಮಾತ್ರ
ಅದರ ತೀವ್ರತೆ!

       ವಿಸ್ಮಯ

ನನ್ನ ಬಗ್ಗೆ ಬೇಸರಿಸಿಕೊಳ್ಳಲು 
ನಿನಗೆ ನೂರು 
ಕಾರಣಗಳು ಸಿಗಬಹುದಾದರೆ 
ಹೆಮ್ಮೆಗೆ
ಒಂದೂ ಸಿಗಲಾರದೆ?