Tuesday 12 December 2017

"ಅಯ್ಯೋ, ಪಾಪ ಕರ್ಣ. ಯಾಕಮ್ಮ ಕುಂತಿ ಮಗುವನ್ನು ನೀರಿನಲ್ಲಿ ಬಿಟ್ಟದ್ದು? ಕರುಣೆಯಿಲ್ಲದ ತಾಯಿ..."

ಮಗಳು ನೀರು ತುಂಬಿದ ಕಣ್ಣುಗಳಿಂದ ನಿನ್ನೆ ಕೇಳಿದ್ದ ಪ್ರಶ್ನೆ.ಅದೆಷ್ಟು ಬಾರಿ ನನ್ನನ್ನು ಕಾಡಿಲ್ಲ ಈ ಪ್ರಶ್ನೆ? ಏನೆಂದು ಉತ್ತರಿಸಲಿ? ಉತ್ತರಗಳಿರಲಿಲ್ಲ ನನ್ನಲ್ಲಿ. ರಚ್ಚೆ ಹಿಡಿದು ಮಳೆ ಸುರಿಯುತ್ತಿದೆ.ಸೃಷ್ಟಿಯನ್ನೆಲ್ಲಾ ತೋಯಿಸಿ ಎದುರಿಗೆ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ.ಅಂಗಳದ ತುಂಬೆಲ್ಲಾ ಹರಿಯುವ ಕೆಂಪು ಕೆಂಪು ನೀರು.ಹೌದು, ಯಾವುದೂ ನಿಂತ ನೀರಾಗಬಾರದು, ಸದಾ ಹರಿಯುತ್ತಲೇ ಇರಬೇಕು.ನಿಂತು ಪಾಚಿಗಟ್ಟುವುದು ನಾನು ಎಂದಿಗೂ ಯೋಚಿಸದ ಕನಸು. ಗಿರಿ ಕಂದರ ಎಲ್ಲವನ್ನೂ ಸರಿಸಿ ಮುಂದೆ ಸಾಗಿ ಸಾಗರ ಸೇರುವ ನದಿಯಂತೆ, ಬದುಕೂ ಸದಾ ಚಲನಶೀಲೆ. ಇದನ್ನೇ ತಾನೇ ನಾನು ನನ್ನ ಬದುಕಿನ ಸೂತ್ರವಾಗಿ ನೆಚ್ಚಿಕೊಂಡದ್ದು...! ಎಲ್ಲವೂ ಕೊಚ್ಚಿಕೊಂಡು ಹೋಗುವಾಗ ಮತ್ತೆ ಹರಿಯುವುದು ಅದೆಷ್ಟು ಕಷ್ಟ? ಆದರೂ ಅದು ಮಳೆಗೆ ಅದೆಷ್ಟು ಸಹಜ? ನನಗೆ?... ಮಳೆಯ ನೀರಿಗೆ ನೆನಪುಗಳ ಹಂಗಿಲ್ಲ.

ಅಂದು ಕೂಡಾ ಇಂತಹುದೇ ಒಂದು ಮಳೆ ಸುರಿಯುತ್ತಿದ್ದ ಸಂಜೆಯಲ್ಲಿ ಕನಸುಗಳ ಕಾಮನ ಬಿಲ್ಲನ್ನು ಹೊಸೆದುಕೊಂಡು ಕೂತಿದ್ದೆ.ಚೊಚ್ಚಲ ಬಸಿರು. ಒಂದು ವರ್ಷದ ನಮ್ಮ ಒಲವಲ್ಲಿ ಕುಡಿಯೊಡೆಯುತ್ತಿರುವ ಚಿಗುರನ್ನು ಬಸಿರಲ್ಲಿ ಹೊತ್ತುಕೊಂಡು ಮೆದುವಾಗಿದ್ದೆ.ಗೆಲುವಾಗಿದ್ದೆ, ಭೂಮಿಯಾಗಿದ್ದೆ. ಸಂಭ್ರಮ ಸಂತಸಗಳ ಕಾರಣವಾಗಿದ್ದೆ. ನನಗೂ ಗೊತ್ತಾಗಲೇ ಇಲ್ಲ, ಸಂತಸದಿಂದ ಸುರಿಯುವ ಮಳೆ ಮಿಂಚು ಸಿಡಿಲನ್ನೂ ತನ್ನೊಳಗೆ ಹೊತ್ತುಕೊಂಡಿದೆಯೆಂದು. ಸುಖದ ಕ್ಷಣಗಳು ಅದೆಷ್ಟು ಕ್ಷಣಿಕ! ಸುರಿಯುವ ಮಳೆಯಿಂದಾಗಿ ರಸ್ತೆ ಕಾಣದೇ ಇವರ ಬೈಕ್ ಬಸ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ...ಮಳೆ ನಿಂತಿತ್ತು. ನಿಲ್ಲುವ ಮೊದಲು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು. ಅಂಗಳದಲ್ಲಿ ಅಲ್ಲಲ್ಲಿ ನಿಂತ ಕೆಂಬಣ್ಣದ ನೀರು. ಉತ್ತರ ಕಾಣದ ಪ್ರಶ್ನೆಗಳನ್ನು ನನ್ನೆದುರು ಚೆಲ್ಲಿ ಮಳೆ ನಿಂತಿತ್ತು. ಯಾವುದರ ಪರಿವೇ ಇಲ್ಲದೆ ಕದಲುತ್ತಿರುವ ಬಸಿರು ನನ್ನನ್ನು ವಾಸ್ತವಕ್ಕೆ ಕರೆ ತಂದು ನಿಲ್ಲಿಸುತ್ತಿದೆ, ಸಂಭ್ರಮಕ್ಕೆ ಕಾರಣವಾಗಿದ್ದು ಈಗ ಬೃಹದಾಕಾರ ಪ್ರಶ್ನೆಯಾಗಿ ಎದುರಿಗೆ ನಿಂತಿದೆ. ಮತ್ತೆ ಮಳೆ ಸುರಿಯುತ್ತಿದೆ. ಅಂಗಳದ ತುಂಬೆಲ್ಲಾ ಹರಿಯುವ ನೀರು, ಅದೆಷ್ಟು ಸಲೀಸು...ಮಳೆಯ ನೀರಿಗೆ ನೆನಪುಗಳ ಹಂಗಿಲ್ಲ.

ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಾಗ ಒಳ್ಳೆಯ ಪುಸ್ತಕ ಓದ್ಬೇಕು ಅಂತ ಮಹಾಭಾರತವನ್ನು ತಂದು ಕೊಟ್ಟಿದ್ದೂ  ಅವನೇ.ಸಂತಸದ ಕ್ಷಣಗಳಲ್ಲಿ ಖುಷಿಯಿಂದ ಓದಿದ್ದ ಭಾರತ ಕತೆಯಲ್ಲಿ ಈಗ ನನ್ನ ಮನಸ್ಸನ್ನು ಪೂರ್ತಿಯಾಗಿ ಕಲಕ್ಕಿದ್ದು ಮಾತ್ರ ಕುಂತಿಯ ಪಾತ್ರ...ದೂರ್ವಾಸರು ಉಪದೇಶಿಸಿದ ಮಂತ್ರದ ಕುರಿತು ಕುತೂಹಲಿಯಾಗಿ ಮದುವೆಯ ಮೊದಲೇ ಬಸಿರಾಗಿದ್ದಳು. ಆತಂಕ, ಭಯದ ನಡುವೆಯೇ ಮಗುವನ್ನು ಹಡೆದಿದ್ದಳು.ಮುದ್ದಾಗಿದ್ದ ಗಂಡು ಮಗು. ಮಗುವಿನ ಮುಖ ನೋಡಿ ಲೋಕವನ್ನೇ ಮರೆತಳು ಕುಂತಿ. ತನ್ನೊಡಲೇ ಚಿಗುರಾಗಿ ಬೆಳೆದು ನಗುತ್ತಿದೆ. ಅಮ್ಮನಾದಳು ಕುಂತಿ! ಹಾಲುಣಿಸುವ ಅಮ್ಮನಾದಳು, ಲಾಲಿ ಹಾಡಿ ಕಂದನ ತಬ್ಬಿಕೊಳ್ಳುವ ಅಮ್ಮನಾದಳು. ಸಂಭ್ರಮ ಸಂಭ್ರಮ ಸಂಭ್ರಮ....ಎಲ್ಲಿಯವರೆಗೆ? ದಾಸಿ ಬಂದು ಎಚ್ಚರಿಸಿದಳು .ಸುಖದ ಕ್ಷಣಗಳು ಅದೆಷ್ಟು ಕ್ಷಣಿಕ. ಸಂತಸದ ಕಾರಣವಾಗಿದ್ದ, ಎದುರಿಗೆ ನಿರಾಳವಾಗಿ ಮಲಗಿದ್ದ ಮಗು, ನನ್ನ ಮಗು ಈಗ ಪ್ರಶ್ನೆಯಾಗಿ ಕಾಡುತ್ತಿದೆ...ಇದು ಯಾರ ಮಗು? ನನ್ನದೇ? ಏನೆಂದು ಉತ್ತರಿಸಲಿ ಈ ಲೋಕಕ್ಕೆ? ಮದುವೆಯ ಮೊದಲೇ ಮಗು? ಅಂದರೆ...ಅಂದರೆ, ಕುಂತಿ ಕನ್ಯೆಯಲ್ಲ...! ನನ್ನ ಮದುವೆಯ ಕನಸು? ಭವಿಷ್ಯ?. ಇಲ್ಲ ಹಾಗಾಗಬಾರದು...ನನ್ನದಲ್ಲ ಮಗು...ಈ ಮಗು ನನ್ನದಲ್ಲ! ಅಯ್ಯೋ ನನ್ನ ವಿಧಿಯೇ!...ಬಿಟ್ಟೇ ಬಿಟ್ಟಳು ನಗುವ ಮಗುವನ್ನು ಹರಿಯುವ ನೀರಿನಲ್ಲಿ...ಜೊತೆಗೆ ನೆನಪುಗಳನ್ನೂ...ಹರಿಯುವ ನದಿಗೆ ನೆನಪುಗಳ ಹಂಗಿಲ್ಲ...!

ಎಲ್ಲವನ್ನೂ ಕಳೆದುಕೊಂಡು ಬರಿಯ ಸಂತಾಪದ ಕಣ್ಣುಗಳಿಗೆ ಕಾರಣವಾಗಿದ್ದ  ಕ್ಷಣಗಳಲ್ಲೂ ಬಿಡದೇ ಕಾಡಿದಳು ಮತ್ತ ಮತ್ತೆ ಕುಂತಿ. ಕಣ್ಣೆದುರು ತೇಲಿ ಬಿಟ್ಟ ತೊಟ್ಟಿಲಲ್ಲಿ ನಗುವ ಮಗು! ಇಲ್ಲ, ಇದು ಸರಿಯಲ್ಲ.‌‌..ತಪ್ಪು ಮಾಡಿದಳು ಕುಂತಿ...ಹಾಗಾದರೆ ಯಾವುದು ಸರಿ? ಏನಿತ್ತು ಅವಳ ಮುಂದೆ ಬೇರೆ ಆಯ್ಕೆ?...ಎದುರಲ್ಲಿ ಶಾಂತವಾಗಿ ಹರಿಯುವ ನದಿ...ನದಿಯಲ್ಲೊಂದು ತೊಟ್ಟಿಲು...ಆದರೆ ಮಗುವಿಲ್ಲ! ಇಲ್ಲ,  ತೊಟ್ಟಿಲಲ್ಲಿ ಮಗುವಿಲ್ಲ.ನನ್ನ ಮಗು...ನನ್ನ ಮಗು...! ಕನಸೇ? ಇದು ಕನಸೇ? ಕೂತಲ್ಲಿ ನಿಂತಲ್ಲಿ ಕಾಡಿದ ಕುಂತಿ ಕೊನೆಗೂ ನನ್ನೊಳಗಿಳಿದಳು. ಇಲ್ಲ ಹಾಗಾಗಬಾರದು. ಕರ್ಣ ಪಟ್ಟ ಪಾಡು ನನ್ನ ಮಗುವಿಗೆ ಬರಬಾರದು...ಹಾಂ...ಹರಿಯುತ್ತಲೇ ಇರಬೇಕು ಎಲ್ಲವನ್ನು ಕೊಚ್ಚಿಕೊಂಡು ಹೋದರೂ ಹರಿಯುತ್ತಲೇ ಇರಬೇಕು.ನಿಂತ ನೀರಾಗಬಾರದು.ನಾನು ಮಳೆಯಾಗಬೇಕು, ಬಿಡದೇ ಸುರಿಯುವ ಮಳೆಯಾಗಬೇಕು. ನೆನಪುಗಳನ್ನೆಲ್ಲಾ ಕೊಚ್ಚಿಕೊಂಡು ಸದಾ ಹರಿಯುವ ನೀರಾಗಬೇಕು. ಕುಂತಿಯಂತೆ ಮಗುವನ್ನು ನೀರಲ್ಲಿ ತೇಲಿ ಬಿಡಲಾರೆ...ಈ ಮಗುವನ್ನುಳಿಸಿ ಬದುಕನ್ನು ನಿಂತ ನೀರಾಗಿಸಲಾರೆ.ನಾನು ಹರಿಯುವ ನದಿ.ನನಗೆ ಅಣೆಕಟ್ಟುಗಳಿಲ್ಲ.ಅಳು, ದುಃಖ, ಸಾಂತ್ವಾನ, ಸಮಾಧಾನ ಎಷ್ಟು ದಿನ?...ಎಲ್ಲವನ್ನೂ ಕಳೆದುಕೊಂಡೆ.ಎದುರಿಗೆ ಶಾಂತವಾಗಿ ಹರಿಯುವ ನದಿ...ತೇಲಿ ದೂರ ದೂರ ಸಾಗುತ್ತಿರುವ ತೊಟ್ಟಿಲು... ಬರಿಯ ತೊಟ್ಟಿಲು...ಕಂದನಿಲ್ಲದ ತೊಟ್ಟಿಲು...ಬರಿದಾದೆ, ಹಗುರಾದೆ...ಮತ್ತೆ ಹರಿಯುವ ನೀರಾದೆ...ಹರಿಯುವ ನೀರಿಗೆ ನೆನಪುಗಳ ಹಂಗಿಲ್ಲ.

ಯಾವುದೂ ನಿಲ್ಲುವುದಿಲ್ಲ...ಹರಿಯುವುದೇ ಬದುಕು! ಮತ್ತೆ ಮದುವೆ, ಮತ್ತೆ ಮಗು, ನಗು...ಬದುಕು ಸದಾ ಚಲನಶೀಲ.ಎಡಬಿಡದೇ ಸುರಿಯುವ ಮಳೆ, ಹರಿಯುತ್ತಿರುವ ನೀರು...ಈಗ ಮಗಳ ಪ್ರಶ್ನೆ...ಕೆಟ್ಟವಳು ಕುಂತಿ!...ಕುಂತಿ ಕೆಟ್ಟವಳು...ಕುಂತಿ...ನಿಜಕ್ಕೂ ಕುಂತಿ ಕೆಟ್ಟವಳೇ? ಹೇಗೆ  ಎದುರಿಗೆ ಇರಿಸಲಿ ಈ ಕುಂತಿಯನ್ನು? ಅರ್ಥವಾದಳೇ ಕುಂತಿ ನನ್ನ ಮಗಳ ಕಣ್ಣಿಗೆ? ಕುಂತಿಯಾಗದ ಹೊರತು ಕುಂತಿ ದಕ್ಕುವವಳಲ್ಲ.ಲೋಕಕ್ಕೆ ಹೇಳಲು ನನ್ನಲ್ಲಿ ನಿಜಕ್ಕೂ ಉತ್ತರಗಳಿಲ್ಲ. ನಾನು ಸುರಿಯುತ್ತಿರುವ ಮಳೆ.ಕೊಚ್ಚಿಕೊಂಡು ಹೋಗುವ ಮಳೆ...ನನಗಷ್ಟೇ ಗೊತ್ತಿರುವುದು.ಹರಿಯುವ ನೀರಿಗೆ ನೆನಪುಗಳ ಹಂಗಿಲ್ಲ.



ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Sunday 3 December 2017

ದೂರ ಹೋಗು ನೆನಪೇ
ಸುಳಿದು ನನ್ನ ಕಾಡಬೇಡ
ಒಲವ ಕದವ ತೆರೆದು
ಮೋಹಕ‌ ಸಂಚು ಹೂಡಬೇಡ
ತಣ್ಣಗಿದೆ ಈಗ ಎದೆಯ ಸುಡುವ ಜ್ವಾಲೆ
ಕೆಣಕದಿರು ಮತ್ತೆ ಶಂಕೆ ಧೂಮ ಮಾಲೆ

ಹರಿವ ನೀರಿನಲಿ ದಿಕ್ಕು ತಪ್ಪಿದ
ಬದುಕ‌ ನಾವೆಯೆಷ್ಟೋ
ಸುರಿವ ಮಳೆಯಲ್ಲಿ ನೀರು ಬತ್ತಿದ
ಕಣ್ಣ ತೊರೆಗಳೆಷ್ಟೋ
ಸುಮ್ಮನಿದೆ ಎಲ್ಲಾ ನೋಡಿ ಕೂಡಾ ತೀರ
ಮೊರೆಯುತಿರೆ ಅಲ್ಲಿ ಕಡಲ ಒಡಲು ಭಾರ

ಹೂವ ಮಕರಂದ ಹೀರಿದಾ ಭ್ರಮರ
ತಿರುಗಿ ಬಾರದಲ್ಲ
ಉರಿವ ದೀಪಕೆ ಸುಟ್ಟ ರೆಕ್ಕೆಗಳ
ಕನಸು ಕಾಡೂದಿಲ್ಲ
ಮಿನುಗುತಿದೆ ತಾರೆ ಇರುಳ ಬಾನ ತುಂಬ
ಮುಸುಕಿದರೆ ಮೋಡ ಒಂಟಿ ಚಂದ್ರ ಬಿಂಬ


ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ನನ್ನವಳು,
ಅಷ್ಟು ಬೇಗ ಅಂಕೆಗೆ
ಸಿಗದ ಅಸೀಮಳು.
ಅವಳು,
ಕೋಮಲ ಶುಧ್ಧತೆಯನ್ನೆಲ್ಲಾ
ದಾಟಿ ನಿಂತ ತೀವ್ರತೆಯ ಗಡಿಯವಳು,

ಅವಳ ಸುಕೋಮಲ
ಲಹರಿಗಳಲ್ಲೇ ಸದಾ ಅಲೆಯುವ,
ಅವಳಷ್ಟೇ ಪ್ರೀತಿಸುವ
ತೀವ್ರತೆಯ ಗಡಿಗಳನ್ನು ಎಂದೂ
ಮುಟ್ಟಲಾಗದ ನಾನು,
ಅವಳನ್ನು ಹುಡುಕುವುದು
ಕೋಮಲತೆಯ ನುಣುಪು ಗರಿಗಳಲ್ಲಿ.
ಬದುಕಿನ ಗತಿಗಳಲ್ಲಿ
ನಮ್ಮ ನಡುವಿನ ಅಂತರ ಬಹುದೂರ.
ನನಗೂ ಗೊತ್ತಿದೆ,
ಅವಳ
ಧಮನಿಗಳಲ್ಲಿ ಹರಿಯುವುದು
ಎಂದಿಗೂ ತೀರದ
ಕದನ ಕುತೂಹಲವೆಂದು.

ಹಾಗಂತ,
ಅಕಸ್ಮಾತ್ ಕೈಗೆ ಸಿಕ್ಕರೆ
ಸುಮ್ಮನೆ ನಿಲ್ಲದ,
ತಟ್ಟಂತ ಬಿಟ್ಟರೂ ಓಡದ
ರಚ್ಚೆ ಹಿಡಿದು ಅಳುವ
ಅತ್ತು ಅತ್ತು ನಗುವ
ಮಡಿಲ ಮಗುವಿನಂತವಳು.

ಅದಕ್ಕಾಗಿಯೇ,
ಪ್ರತೀ ಬಾರಿ ತಂಬೂರ ಶೃತಿ ಮಾಡಿ
ಅಭ್ಯಾಸಕ್ಕಿಳಿಯುತ್ತೇನೆ.
ಮನೆಬಾಗಿಲಿಗೆ ಸಿಂಗರಿಸಿದ
ಗರಿಯನ್ನು ಸ್ಪರ್ಶಿಸಿ
ಅವಳ ಗಡಿಗಳನ್ನು ಮುಟ್ಟುತ್ತೇನೆ;
ಮತ್ತು
ಸಿಕ್ಕರೂ ಸಿಕ್ಕಳೆಂಬ
ಆಸೆಯಿಂದ ಸಂಚರಿಸುತ್ತೇನೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ
ಹುರಿದುಂಬಿಸುವವರೆಗೂ
ಒಬ್ಬರ ಮೇಲೊಬ್ಬರಿಗೆ,
ಅಷ್ಟು ರೋಷವಿರಬಹುದೆಂಬ
ಕಲ್ಪನೆಯೂ ಇರಲಿಲ್ಲ.

ಅಂಕಕ್ಕೆ ಇಳಿದ ನಂತರ
ಮತ್ತೆ ಯೋಚನೆಗಿಲ್ಲಿ ಅವಕಾಶಗಳಿಲ್ಲ.
ಇರುವುದಿಷ್ಟೇ;
ನಾನೋ ನೀನೋ ಎನ್ನುವ
ಅಂತಿಮ ವ್ಯಾಪಾರ.

ಬೆನ್ನ ಹಿಂದೆ ನಿಂತವರಿಗೆ
ಇದು ಈ ಕ್ಷಣದ ಪಂದ್ಯವಷ್ಟೇ;
ಅವರ ಚೀಲಗಳಲ್ಲಿ
ಮತ್ತೂ ಇವೆ,
ಕಾಲಿಗೆ ಕತ್ತಿ ಕಟ್ಟಿಸಿಕೊಳ್ಳಲು
ಕಣ್ಣಿಗೆ ಬಟ್ಟೆಕಟ್ಟಿಕೊಂಡ
ಬೇರೆ ಬೇರೆ ಬಣ್ಣದ ಕೋಳಿಗಳು.

ಅಲ್ಲಿಯವರೆಗೆ,
ಅವುಗಳೀಗ ಒಂದೇ ಚೀಲದಲ್ಲಿ
ಸುಖವಾಗಿ ಮಲಗಿವೆ,
ಒಂದನ್ನೊಂದು ಅಪ್ಪಿಕೊಂಡು;

ಕಾಲಿಗೆ ಕತ್ತಿ ಕಟ್ಟುವುದೂ ಒಂದೇ,
ಮತ್ತು
ಕಣ್ಣಿಗೆ ಬಟ್ಟೆ ಕಟ್ಟುವುದೂ.
ಒಟ್ಟಿಗಿದ್ದವರೆಂದು
ಆ ಕ್ಷಣಕ್ಕೆ ಗೊತ್ತಾಗುವುದೇ ಇಲ್ಲ;
ಮತ್ತು ಅಂಕಕ್ಕೆ ರಂಗೇರಲು
ಅಷ್ಟೇ ಸಾಕು,
ಈ ಜನಕ್ಕೆ;
ಆ ಕ್ಷಣಕ್ಕೆ...!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನಮ್ಮ ಭಾರತ ಕೇವಲ ದೇಶವಲ್ಲ
ವಿಶ್ವದಿ ಪುಟಿಯುವ ಶಕ್ತಿ
ಈ ಭೂಮಿಯು ಬರಿಯ ಮಣ್ಣಲ್ಲ
ಮೋಕ್ಷವ ತೋರುವ ದೀಪ್ತಿ

ಇಲ್ಲಾಡುವ ಭಾಷೆಯು ನುಡಿಯಲ್ಲ
ಶಾಂತಿಯ ಪಠಿಸುವ ಮಂತ್ರ
ಇಲ್ಲಿರುವುದು ಕೇವಲ ಬದುಕಲ್ಲ
ಸಗ್ಗಕೆ ನಡೆಸುವ ಯಂತ್ರ

ಹರಿಯುವ ನದಿ ಬರಿ ನೀರಲ್ಲ
ಪಾಪವ ಕಳೆಯುವ ತೀರ್ಥ
ರಾಷ್ಟ್ರೀಯತೆ ಬರಿಯ ಘೋಷವಲ್ಲ
ಸಮತೆಯ ಸಾರುವ ಸೂತ್ರ

ಸ್ವಾತಂತ್ರ್ಯದ ಹಿಂದಿರುವ ತ್ಯಾಗ ಬಲಿದಾನಗಳನ್ನು ಮರೆಯದೇ ಇಂದಿನ ದಿನವನ್ನು ಹಬ್ಬವಾಗಿಸೋಣ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕೃಷ್ಣ ಕನ್ನಡಿ...

ಚಿತ್ರ: Avinash K Nagaraj

ಕೃಷ್ಣನ ಕೊಳಲಿನ ನಾದದಲಿ ಜಗದ ಒಲುಮೆಯಿದೆ
ನಗುವ ನವಿಲಿನ ಗರಿಯಲ್ಲಿ ಬಾಳಿನ ಚಿಲುಮೆಯಿದೆ
ಅವನಲ್ಲಿ ಇರಿಸು ಮನ
ಆ ಸನಿಹವೆ ಬೃಂದಾವನ

ಬೆಣ್ಣೆಯ ಕದಿಯುವ ಪೋರನ ಕಣ್ಣಲು
ಕಳ್ಳನೆ ಕಾಣಿಸಿದ
ಹೆಣ್ಣನು ಕಾಡುವ ಮಾರನ ಕೃತಿಯೊಳು
ಮಳ್ಳನೆ ಕಾಣಿಸಿದ
ಕಾಣಲು ಕನ್ನಡಿಯೊಳಗೆ ಕಂಡೆನು ನನ್ನದೇ ರೂಪ
ಕಾಣದು ಅಚ್ಯುತನೊಸಗೆ ಮುಸುಕಿರೆ ಮಾಯೆಯ ಧೂಪ

ಹೊಳೆಯುವ ಹೂವಿನ ಸೆಳೆತಕೆ ಸಿಕ್ಕಲು
ಪರವಶ ನಾನದೆ
ಚಿಕ್ಕೆಯ ಕದಿರನು ತೋರುವ ದುಂಬಿಗೆ
ಕುರುಡನು ನಾನದೆ
ಕಾಡಲು ಭಾವದ ಲಹರಿ ಕೇಳಿತು ಕೃಷ್ಣನ ಮುರಳಿ
ಕಳೆಯಿತು ಹೃನ್ಮನದಿರುಳು ನೋಡಲು ಮೈಮನವರಳಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ಅಪ್ರಮೇಯ

ಅವನೋ,
ಗೋವರ್ಧನ ಗಿರಿಯನ್ನು
ಕಿರುಬೆರಳಿನಲ್ಲೆತ್ತಿದ
ಅಸೀಮಬಲ;
ಆದರೂ
ಸಾಕಾಯಿತಲ್ಲ
ಅವನನ್ನೆತ್ತಲು
ಒಂದು ತಳಸೀದಳ?

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮಳೆಯ ದಟ್ಟಮೋಡಗಳು ಒತ್ತೊತ್ತಾಗಿ ಆಗಸದಲ್ಲಿ ಹಾಲು ತುಂಬಿದ ಹಸುವಿನ ಕೆಚ್ಚಲಿನಂತೆ ಇನ್ನೇನು ಸುರಿಯುವುದೊಂದೇ ತಡ ಎಂಬಂತೆ ಕಾಯುತ್ತಿದ್ದ ಒಂದು ಶ್ಯಾಮಲ ಸಂಜೆಯಲ್ಲಿ ಕನಸುಗಳ ಬೆನ್ನು ಹತ್ತಿ ಹೊರಟಿದ್ದೆ. ಮಳೆ ಸುರಿಯುವ ಮೊದಲಿನ ಕಡುಕಪ್ಪಾದ ಸಂಜೆಗಳ ಮೇಲೆ ನನಗ್ಯಾಕೋ ನಿಲ್ಲದ ನಿರಂತರ ಮೋಹ. ಅದೂ ಸ್ವಲ್ಪ ಗುಡುಗು ಸಿಡಿಲು ಇದ್ದರಂತೂ ಹಬ್ಬ ನನಗೆ. ಆದರೆ ಅದಕ್ಕಾಗಿ ಕಾರ್ತೀಕದವರೆಗೆ ಕಾಯಲೇ ಬೇಕು. ಇಂತಹ ಸಂಜೆಗಳು ನನ್ನ ನೆನಪುಗಳನ್ನು, ಕನಸುಗಳನ್ನು ಕೆಣಕುತ್ತಾ ಕೆಣಕುತ್ತಾ ಇರುಳಿನ ಸೆರಗಲ್ಲಿ ಖಾಲಿಯಾಗುತ್ತವೆ. ಮೊದಲ ದಿನದ ಶಾಲೆಗೆ ಅಳುತ್ತಾ ಹೋಗಿ, ಅಳುತ್ತಲೇ ಹಿಂದಿರುಗಿದಾಗ ಇಂತಹುದೇ ಒಂದು ಶ್ಯಾಮಲ ಸಂಜೆ! ಕಟಾವ್ ಆದ ಗದ್ದೆಯಲ್ಲಿ ಒಣಗಲು ಬಿಟ್ಟ ಬತ್ತದ ಸೂಡಿಗಳನ್ನು ಹುರಿಹಗ್ಗ ತೆಗೆದುಕೊಂಡು ಅಪ್ಪನೊಂದಿಗೆ ಓಡುವುದೂ ಇಂತಹುದೇ ಮಳೆ ಮೋಡಗಳ ಸಂಜೆಗಳಲ್ಲಿ! ಬೈಲ್ ಗದ್ದೆಗಳಲ್ಲಿ ಕಟ್ಟಿದ ದನಕರುವನ್ನು ತರಲು ಅಮ್ಮನು ಓಡುವ ಹುಸೇನ್ ಬೋಲ್ಟ್ ಓಟ! ಅಂಗಳದಲ್ಲಿ ಹಾಯಾಗಿ ಒಣಗುತ್ತಿದ್ದ ಅಡಿಕೆಗಳನ್ನು ಸಿಕ್ಕಿದ ಚೀಲಗಳಲ್ಲಿ ತುಂಬಿಸಿ, ಚೀಲ ಸಿಗದಿದ್ದರೆ ಬುಟ್ಟಿಗಳಲ್ಲಿ ತುಂಬಿಸುವ ಧಾವಂತಕ್ಕೆ ಕೆಲವು ಸಲ ಸೂರ್ಯನೂ ಇಣುಕುವುದುಂಟು ಮೋಡಗಳ ಮರೆಯಿಂದ!

ಹೀಗೆ ಗೊತ್ತುಗುರಿಯಿಲ್ಲದೆ ಹೊರಟಾಗ ಮನದಲ್ಲಿ ಲಂಗುಲಗಾಮಿಲ್ಲದ ಏನೇನೋ ಯೋಚನೆಗಳು  ಹೊರಗೆ ಸುರಿಯುವ ಮಳೆಗೆ ತಾಳ ಹಾಕುತ್ತಾ ಯಾವುದೋ ಹಳೆಯ ಅನಂತ್ ನಾಗ್ ಲಕ್ಷ್ಮಿ ಜೋಡಿಯ ಗೀತೆಯೊಂದನ್ನು ಗುನುಗುತ್ತದೆ. ಈ ಮಳೆ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳಿಗೆ ಅವಿನಾಭಾವ ಸಂಬಂಧ. ಯಾಕಿರಬಹುದೆಂದು ಕೆದಕುವಾಗ ಮನದ ಮೂಲೆಯಲ್ಲಿ ಇನ್ನೂ ರಿಪೇರಿಯಾಗದೇ ಬಿದ್ದಿದ್ದ ಒಂದು ರೇಡಿಯೋ ಸಿಕ್ಕಿತು.ರೇಡಿಯೋ...! ಆಗ ನಮ್ಮ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳೆಂದರೆ ರೇಡಿಯೋ ಮತ್ತು ಒಂದು ಉರೂಂಟ್ ಇದ್ದ ಸ್ಟೀಲ್ ನ ಕೀ ಕೊಡುವ ಅಲರಾಂ ಗಡಿಯಾರ. ಮತ್ತು ಅವೆರಡೂ ಸರಿಯಾಗಿದ್ದದ್ದು ನನ್ನ ಕೈಗೆ ಬರುವವರೆಗೆ ಮಾತ್ರ. ಯಾವುದನ್ನೂ ರಿಪೇರಿ ಮಾಡಬಲ್ಲ ಹುಡುಗ ಅನ್ನುವ ಭಾರೀ ಹೆಸರು ಗಳಿಸಿಕೊಂಡಿದ್ದ ನಾನು ಮೊದಲು ಕೈ ಹಾಕಿದ್ದು ಗಡಿಯಾರಕ್ಕೆ . ಸರಿ ಇದ್ದ ಗಡಿಯಾರವನ್ನು ಬಿಚ್ಚಿ ಅದರೊಳಗಿದ್ದ ಸ್ಟೀಲ್ ನ ಕರುಳನ್ನು ಹೊರ ತೆಗೆದು ಅದನ್ನೊಂದು ಶೋಪೀಸ್ ಮಾಡಿ ಬಿಡಲು ನನಗೇನೂ ಬಹಳ ಸಮಯ ತೆಗೆದುಕೊಂಡಿರಲಿಲ್ಲ.

ನಂತರ ನನ್ನ ಕಣ್ಣು ಬಿದ್ದದ್ದು ಈ ರೇಡಿಯೋ ಮೇಲೆ. ಮಂಗಳೂರು ಆಕಾಶವಾಣಿಯಷ್ಟೇ ಟ್ಯೂನ್ ಆಗಿದ್ದ ರೇಡಿಯೋದಲ್ಲಿ ಪ್ರಸಾರ ಆಗುತ್ತಿದ್ದ, ಕೃಷಿರಂಗ ಮತ್ತು ಯುವವಾಣಿಯ ಮೊದಲ ಟ್ಯೂನ್ ಗಳೆಂದರೆ ನನಗೆ ಅಚ್ಚುಮೆಚ್ಚು. ಈಗಲೂ ಕೃಷಿರಂಗಕ್ಕೆ ಅದೇ ಟ್ಯೂನ್ ಇದೆ. ಮತ್ತು ಒಳ್ಳೆಯ ಚಿತ್ರಗೀತೆಗಳು ಬರುತ್ತಿದ್ದರಿಂದ ಬಹಳ ಸಮಯ ಅದರ ರಿಪೇರಿಗೆ ಕೈಹಾಕಿರಲಿಲ್ಲ. ಆಗಲೇ ನನಗೆ ಅನಂತನಾಗ್ ಲಕ್ಷ್ಮಿ ಜೋಡಿಯ ಪದ್ಯಗಳ ಹುಚ್ಚು ಹಿಡಿದದ್ದು. ಎರಡು ಸಲ ಭಾನುವಾರದ ಕೋರಿಕೆ ಹಾಡಾಗಿ "ಅರಳಿದೇ ಅರಳಿದೇ ಮುದುಡಿದ ತಾವರೆ ಅರಳಿದೆ..." ಹಾಡು ಪ್ರಸಾರವಾಗಿತ್ತು. ಆದರೆ ಗೆಳೆಯನೊಬ್ಬ ," ಏನೋ...ಬರೀ ಮಂಗಳೂರು ಸ್ಟೇಷನ್ ಅಷ್ಟೇ ಕೇಳೋದಾ ನೀನು?... ಸ್ವಲ್ಪ ತಿರುಗಿಸು...ವಿವಿಧ್ ಭಾರತಿಯ ಸ್ಟೇಷನ್ ಗಳಲ್ಲದೇ ಶ್ರೀಲಂಕಾದ ಸ್ಟೇಷನ್ ಗಳೂ ಬರ್ತವೆ" ಅಂದಾಗಲೇ ರೇಡಿಯೋದ ಸುವರ್ಣ ದಿನಗಳು ಅಂತ್ಯವಾಗುವ ಕಾಲ ಸನ್ನಿಹಿತವಾಗಿತ್ತು. ಸಂಜೆ ಮನೆಗೆ ಹೋಗಿ ಬೇರೆ ಬೇರೆ ಸ್ಟೇಷನ್ ಗಳಿಗೆ ಟ್ಯೂನ್ ಮಾಡಲು ನೋಡಿದರೆ..ಊಹೂಂ...ಮಂಗಳೂರು ಬಿಟ್ಟು ಬೇರಾವುದೇ ಸ್ಟೇಷನ್ ಕೇಳಲೇ ಇಲ್ಲ. ಬರೇ ಗುರ್...ಅಂತ ಬೆಕ್ಕು ಪ್ರೀತಿಯಿಂದ ಕಾಲು ಸವರುವಾಗ ಮಾಡುವ ಶಬ್ದ ಮಾತ್ರ ಬರ್ತಾ ಇತ್ತು. ಹೋ..ಇಲ್ಲೇನೋ ಸಮಸ್ಯೆ ಇದೆ...ಅಂತ ನನ್ನ ರಿಪೇರಿ ಮೈಂಡ್ ಗೆ ಹೊಳೆದದ್ದೇ ತಡ...ಮುಂದಿನ ಅರ್ಧ ಗಂಟೆಯಲ್ಲಿ ಮಂಗಳೂರು ಸ್ಟೇಷನ್ ಕೂಡಾ..."ನಿಲಯದ ಇಂದಿನ ಪ್ರಸಾರವನ್ನು ಮುಕ್ತಾಯಗೊಳಿಸುತಿದ್ದೇವೆ..."  ಅಂತ ತನ್ನ ಕೊನೆಯ ವಾಕ್ಯವನ್ನುಸುರಿ ಪ್ರಾಣ ಬಿಟ್ಟಿತು.

ಹೀಗೆ ನನ್ನ ಬಾಲ್ಯದ ಬೆರಗಿನ ಅರಮನೆ ಆಗಿದ್ದ ಮಂಗಳೂರು ರೇಡಿಯೋ ಸ್ಟೇಷನ್ ಗೆ ಹೋದ ವರ್ಷ ನನ್ನ ಸ್ವರಚಿತ ಕವನ ವಾಚನ ಮಾಡಲು ಹೋಗಿ ಒಂದು ಆಸೆಯನ್ನು ತಣಿಸಿಕೊಂಡಿದ್ದೆ.ನಿನ್ನೆಯೂ ಮನದಲ್ಲೆಲ್ಲಾ ರೇಡಿಯೋನೇ ತುಂಬಿದಾಗ ಹಿಂದೆ ಮುಂದೆ ನೋಡದೆ ರೇಡಿಯೋ ಸಾರಂಗ್ ನ ಗೆಳೆಯ Abhishek Shetty ಗೆ  ಫೋನ್ ಮಾಡಿ ಸಾರಂಗದ ಬಣ್ಣಬಣ್ಣದ ಬದುಕಿಗೆ ಪ್ರವೇಶ ಪಡೆದೆ.ಒಳಗೆ ಹೋಗುತ್ತಲೇ ಬಹುಕಾಲದ ಎಫ್.ಬಿ. ಸ್ನೇಹಿತ Vk Kadaba  ನಗುವಿನ ಸ್ವಾಗತ ನೀಡಿದರು. ಮುಂದೆ ಸಾರಂಗದ ಕಾರ್ಯಕ್ರಮ, ಕಂಟ್ರೋಲ್ ರೂಮ್, ಲೈವ್ ರೂಮ್, ರೆಕಾರ್ಡಿಂಗ್ ರೂಮ್ ನ ವಿಷಯಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ, ಬಿಸಿಬಿಸಿ ಚಹಾ ಕುಡಿಸಿದ ಅಭಿಷೇಕ್  ನಂತರ ಒಂದು ಕ್ಷಣ ನನ್ನನ್ನೂ ಆರ್.ಜೆ. ಯಾಗಿಸಿದರು.

ಆದರೆ ಈ ಭೇಟಿಯ ಅಸಲೀ ವಿಷಯವಿದಲ್ಲ.  #TEAM #BLACKANDWHITE ಅನ್ನುವ ಒಂದು ಸಂಘಟನೆಯನ್ನು ಇತರ ಕೆಲವು ಗೆಳೆಯರೊಂದಿಗೆ ಸೇರಿ ಆರಂಭಿಸಿ ಮೊದಲ ಕಾರ್ಯಕ್ರಮವಾಗಿ ಹೋದ ವರುಷ "ಹಾಡು ಹುಟ್ಟುವ ಸಮಯ" ಎನ್ನುವ ಅಭೂತಪೂರ್ವ ಕಾರ್ಯಕ್ರಮವನ್ನು ಮಂಗಳೂರಿನ ಕಲಾ ರಸಿಕರಿಗೆ  ಕೊಟ್ಟವರು. ಹಿರಿಯ ಕವಿಗಳಾದ ಎಚ್.ಎಸ್.ವಿ ಮತ್ತು ಬಿ.ಆರ್.ಎಲ್. ಮಾತುಕತೆ ಜೊತೆಗೆ ಗಾಯಕ ರವಿ ಮೂರೂರ್ ತಂಡದಿಂದ ಅವರ ಭಾವಗೀತೆಗಳ ಪ್ರಸ್ತುತಿ...ತುಂಬಾ ಒಳ್ಳೆಯ ಆ ಕಾರ್ಯಕ್ರಮಕ್ಕೆ ನಾನೂ ಸಾಕ್ಷಿಯಾಗಿದ್ದೆ. ಈ ವರ್ಷ ಇದೇ ಸಂಘಟನೆ " ಅಮರ್ ಜವಾನ್ " ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ದಕ್ಷಿಣ ಕನ್ನಡದ ಹುತಾತ್ಮ ಯೋಧರನ್ನು ಸ್ಮರಿಸುತ್ತಾ ಅವರ ಕುಟುಂಬವನ್ನು ಅಭಿನಂದಿಸುವ ಒಂದು ಅರ್ಥಪೂರ್ಣ ಕಾರ್ಯಕ್ರಮ. ಈ ಎಲ್ಲಾ ಒಳ್ಳೆಯ ಅಭಿರುಚಿಯ ಕಾರ್ಯಕ್ರಮಗಳಿಗಾಗಿ ನಾನೂ ಇವರ ಬಳಗದೊ‌ದಿಗೆ ಕೈಜೋಡಿಸಿದ್ದೇ‌ನೆ.ನೀವೆಲ್ಲರೂ ಬನ್ನಿ, ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ.

ದಿನಾಂಕ: 20-08-2017
ಸ್ಥಳ : ಪುರಭವನ ಮಂಗಳೂರು
ಸಮಯ : 10am

ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ
ಯಾರೊ ತೋರಿದ ದಾರಿಯಲ್ಲಿ
ನಡೆದು ಬಳಲಿದೆ ಸುಮ್ಮನೆ
ಗಮ್ಯ ತಿಳಿಯದ ಗುಟ್ಟಿನಲ್ಲಿ
ಮರೆತು ಹುಡುಕಿದೆ ನನ್ನನೆ

ಗುರಿಯ ತೋರುವ ದಾರಿಗಳಿಗೆ
ಬೀಸಿ ಕರೆಯುವ ಕವಲಿದೆ
ಗುರುವು ಕಾಣದೆ ನಿಂತ ನಿಲುವಿಗೆ
ಅತ್ತ ಹೊರಳುವ ತೆವಲಿದೆ

ಹಕ್ಕಿ ಹಾಡನು ಹೆಕ್ಕಿ ನೋಡು
ಗೂಡು ಮಗ್ಗುಲ ಹಾಸಿಗೆ
ಬಣ್ಣ ಬಣ್ಣದ ಹಕ್ಕಿ ಕಾಡು
ಕೂಡಿ ಗದ್ದಲ ಸಂತೆಯೆ

ಯಾವ ಹಕ್ಕಿಯ ಕೊರಳ ದನಿಯ
ಜಾಡು ಹಿಡಿಯಲಿ ಇಂದು ನಾ?
ದಾರಿ ಕಳೆದು ಹೋಗಿ ಸೇರಲು
ತಾನು ಮುಟ್ಟುವೆ ಎಂದು ನಾ?

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಚಿತ್ರ ಕೃಪೆ: Gopi Hirebettu

ಭರಿಸಲಾಗದು ಮನೆಯಲಿ ನಿನ್ನಯ ಅನುಪಸ್ಥಿತಿ
ಹೇಗೆ ತಿಳಿಸಲಿ ಮನಸಿನ ನನ್ನ ಕಲಕುವ ಈ ಸ್ಥಿತಿ

ಅಪ್ಪ ನಿನ್ನನು ನೋಡಿದ ಒಂದೂ ನೆನಪು ನನಗಿಲ್ಲ
ನಿನ್ನ ಕತೆಯನು ಕೇಳುತಾ ಬೆಳೆದೆ ನಾನು ದಿನವೆಲ್ಲ
ಪುಟ್ಟ ಕಣ್ಣಲಿ ಎಂದಿಗೂ ಅಮ್ಮ ತೋರಿದ ಬೆರಗು ನೀ
ಕವಿದ ಮನದ ಇರುಳನು ಕಳೆಯೊ ಬೆಳಕ ಸೂರ್ಯ ನೀ
ನಿನ್ನ ನೆನಪೇ ನನ್ನ ಪೊರೆವ ಬೆಚ್ಚಗಿನ ಶ್ರೀರಕ್ಷೆಯು
ನೀನು ಕಂಡ ಕನಸೇ ನಾನು ನಡೆಯುವ ದಾರಿಯು

ಅಪ್ಪ ನಿನ್ನ ಕಾಣುವೆ ನಾ ಗಡಿಯ ಕಾಯುವ ಯೋಧರಲ್ಲಿ
ಶತ್ರು ಗುಂಡಿಗೆ ಹೆದರದೆ ಎದುರು ನಿಲ್ಲುವ ಛಾತಿಯಲ್ಲಿ
ದೇಶ ಕಾಯ್ದ ಸೈನಿಕ ಅನ್ನೋ ಹೆಮ್ಮೆ ನನಗಿದೆ
ಬಿಟ್ಟು ಹೋದ ಹೆಜ್ಜೆಯಲ್ಲಿ ಮುಂದೆ ಸಾಗುವ ಕನಸಿದೆ
ಆರದು ಎಂದೆಂದಿಗೂ ನೀನು ಹಚ್ವಿದ ದೀಪವು
ನಿನ್ನ ನೆನಪಲಿ ಮೊಳಗಿದೆ ರಾಷ್ಟ್ರಭಕ್ತಿಯ ಗೀತವು...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮೌನರಾಗ ಮಿಡಿದ ವೀಣೆ
ಒಲವ ಬೆರಳು ಸೋಕಲು
ಹರಿಯೆ ಯಮುನೆ ತೀರವೆಲ್ಲ
ಕಂದ ನಗುವ ತೊಟ್ಟಿಲು

ಪ್ರೇಮದುರಿಗೆ ಸೋಕಿ ತನುವು
ಜ್ವಾಲೆಯಾಗಿ ದಹಿಸಲು
ಕೂಡಿ ನಲಿದ ಮಧುರ ನೆನಪು
ಉಕ್ಕಿ ಯಮುನೆ ಹರಿಯಲು

ನಲ್ಲನಿರದ ಸಂಜೆ ಬಾನು
ಬಣ್ಣವಿರದೆ ಕಾಡಲು
ಸುಳಿದ ಗಾಳಿ ರೂಪ ತಳೆದು
ಬನದ ಹೂವು ಅರಳಲು

ಶ್ಯಾಮನೆದೆಯ ನಲ್ಮೆ ಕರವು
ಹೆರಳ ಸುಕ್ಕು ಬಿಡಿಸಲು
ಮಡಿಲ ಬೊಂಬೆ ಜೀವ ತಳೆದು
ಮುರಳಿ ನಾದ ಹೊಮ್ಮಲು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಹರವು ಭವ್ಯವೆಂದ ಜಗವು
ಸ್ಪರ್ಶದಲ್ಲೆ ಪುಳಕಗೊಂಡು
ದಕ್ಕಿತೆಲ್ಲ ತನ್ನ ಕೈಗೆ ಎಂದು ನಂಬಿದೆ
ತೀರ ತಾಕಿ ಕಳೆದು ಹೋದ
ಇಳಿಯದಂತ ರಭಸ ಕಂಡು
ಆಳದಲ್ಲೆ ಕಡಲ ಮನಸು ನೊಂದು ಬೆಂದಿದೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಜೊತೆಗಿದ್ದೂ
ಒಳಗಿಳಿಯಲಾಗದ ನೀನು;
ಒಳಗಿದ್ದೂ
ಜೊತೆಯಾಗದ ಮೀನು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನಿನ್ನಂತೆಯೇ ನಾನೂ ಕೆಲಸದಲ್ಲಿ
ತೊಡಗಿದೆ ಅವಿರತ;
ಎರಡು ದಿನಕ್ಕಿಂತ ಮುಂದೆ ಸಾಗಲಿಲ್ಲ
ಕಾಯಕದ ರಥ.

ನಿನ್ನಂತೆಯೇ ನಾನೂ ಯೋಚಿಸಿದೆ
ದೇಶಕ್ಕಾಗಿ ಕ್ಷಣಕ್ಷಣ;
ಕೀರ್ತಿಶನಿ ಲಾಲಸೆಯ ಕಾಂಚಾಣ
ಕುಣಿಸಿತು ಝಣಝಣ.

ಸಂಸಾರದ ಜೋಡಿ ಕಣ್ಣುಗಳ ಆಸೆಯ
ಬಲೆಯಲ್ಲೇ ನಾನು ಸೀಮಿತ;
ಸಾಗರದ ಕೋಟಿ ಕಣ್ಣುಗಳ ನಿರೀಕ್ಷೆಯ
ಭಾರದಲ್ಲೂ ನೀನು ಮಂದಸ್ಮಿತ.

ಹೆಜ್ಹೆಗಳ ಆರಂಭವಷ್ಟೇ;
ಏರಲಿದೆ ಬೆಟ್ಟದಷ್ಟು.

ದೇವರ ಆಶೀರ್ವಾದ ನಿಮಗಿರಲಿ
ನನ್ನ ನೆಚ್ಚಿನ ಪ್ರಾಧಾನಿಗೆ
ಹುಟ್ಟು ಹಬ್ಬದ ಶುಭಾಶಯಗಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಬಯಲಿನ ಮನೆಯ
ಕದವನು ತೆರೆಯದೆ
ಬೆಳಕಿನ ಅರಿವು ಕಾಣಿಸದು
ಒಳಗಿನ ಬೀದಿಯ
ಕಸವನು ಮರೆತರೆ
ನಿರ್ಮಲ ಶಾಂತಿ ಎಲ್ಲಿಯದು?

ಮನಸಿನ ಕುದುರೆಗೆ
ಲಗಾಮು ಬಿಗಿಯದೆ
ಸೇರುವ ದಾರಿಯು ಗುರಿಯಲ್ಲ
ತುಮುಲದ ತೆರೆಯನು
ಸರಿಸದೆ ನದಿಯಲಿ
ಮಾಡಿದ ಸ್ನಾನವು ಶುಚಿಯಲ್ಲ

ಬಯಕೆಯ ಮೀನಿಗೆ
ಕಾದಿಹ ಬಕಕೂ
ಧ್ಯಾನದ ಸ್ಥಿತಿಯ ಹಂಗಿಲ್ಲ
ಫಲವನು ಬಯಸದೆ
ಮಾಡುವ ಕರ್ಮಕೆ
ಸಿದ್ಧಿಯು ಎಂದಿಗು ತಪ್ಪಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಒಲವಿನ ನೋಟದ ಮಳೆಗೆ
ಒದ್ದೆಯಾಗಿದೆ ಎದೆನೆಲ
ಬಯಕೆಯ ಬೆಳಕಿನ ಕರೆಗೆ
ಮೊಗ್ಗು ಬಿರಿದೆದೆ ಹೂದಳ

ಕದಪಿನ ರಂಗಿನ ಕವಿತೆ
ಕಾಡಿ ಕಾಮನೆ ಚಂಚಲ
ಒನಪಿನ ಐಸಿರಿ ಲಲಿತೆ
ಮೋಡಿ ಮೈಮನ ನಿಶ್ಚಲ

ಮಾದಕ ಇಂಪಿನ ಕುಕಿಲ
ಹಿಗ್ಗಿ ಚಿಗುರಿದೆ ಮಾಮರ
ಮೋಹಕ ಕಂಪಿನ ಬಕುಲ
ಸುಗ್ಗಿ ಬೀಸಿದೆ ಚಾಮರ

ಕಾದಿಹೆ ಚೆಲುವೆಯ ಸೆರೆಗೆ
ಹಿಡಿದು ಕನಸಿನ ಪಂಜರ
ಬಾರೆಯ ಒಲುಮೆಯ ಮನೆಗೆ
ಹೆಣೆದು ಬದುಕಿನ ಹಂದರ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನವರಾತ್ರಿಗಳು ಭಕ್ತಿಯ ಆರಾಧನೆಯಲ್ಲಿ ಕಳೆದು ಹೋದದ್ದೇ ಗೊತ್ತಾಗಲಿಲ್ಲ. ನಿನ್ನೆ ವಿಜಯದಶಮಿ.ಮೈಸೂರಿನಲ್ಲಿ ನಾಡ ಹಬ್ಬ ದಸರಾದ ವಿಶ್ವವಿಖ್ಯಾತ ಜಂಬೂ ಸವಾರಿಯ ಮೆರವಣಿಗೆಯ ದಿನ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ನನ್ನ ಬಹುದಿನಗಳ ಕನಸು.ಅದು ಈ ಸಾರಿಯೂ ಈಡೇರಲಿಲ್ಲ ಬಿಡಿ.ಆದರೆ ಈ ನಮ್ಮ ಮಂಗಳೂರು ದಸರಾ ಮೆರವಣಿಗೆ ಕೂಡಾ ಶ್ರೀಮಂತಿಕೆಯಲ್ಲಿ, ಅದ್ಧೂರಿಯಲ್ಲಿ ಏನೂ ಕಮ್ಮಿಯಿಲ್ಲ. ಕೆ.ಪಿ.ಟಿ.ಯಲ್ಲಿ ಡಿಪ್ಲೋಮಾ ಕಲಿಯುವ ದಿನಗಳಲ್ಲಿ ರಾತ್ರಿಯಿಡೀ ಸುತ್ತಾಡಿ ಕೊನೆಗೆ ಲಾಲ್ ಭಾಗ್ ನ ರಸ್ತೆಗಳಲ್ಲಿ ನಿಂತುಕೊಂಡು ಮೆರವಣಿಗೆ ನೋಡಿದ ದಿನಗಳು ಇನ್ನೂ ಹಚ್ಚ ಹಸುರಾಗಿವೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಈ ಮೆರವಣಿಗೆ ತಯಾರಿಯ ಉತ್ಸಾಹಕ್ಕೇನೂ ಭಂಗ ಬಂದಿರಲಿಲ್ಲ. ನಿನ್ನೆ ಮಂಗಳೂರಿನ ಯಾವ ಭಾಗದಲ್ಲಿ‌ ನಡೆದುಕೊಂಡು ಹೋದರೂ ಅಲ್ಲಿ ಒಂದು ಟ್ಯಾಬ್ಲೋ ತಯಾರಿ ನಡೆಯುತ್ತಿರುವ ದೃಶ್ಯ ನಮ್ಮ ಕಣ್ಣಿಗೆ ಬೀಳದೇ ಇರದು. ಈ ಎಲ್ಲಾ ಸಂಭ್ರವವನ್ನೂ ಕಣ್ತುಂಬಿಕೊಳ್ಳಬೇಕೆಂದು ಮಂಗಳೂರಿಗೆ ಹೊರಟ ನನಗೆ ಈ ಎಲ್ಲಾ ಟ್ಯಾಬ್ಲೋ ತಯಾರಿಯ ದೃಶ್ಯಗಳನ್ನು ನೋಡುವ ಅವಕಾಶವೂ ಸಿಕ್ಕಿತು. ಗಣೇಶೋತ್ಸವದ ಮೆರವಣಿಗೆಗೆಂದು ಪರ್ಕಳದಲ್ಲಿ ನಮ್ಮ ಮಂಗಳ ಕಲಾ ಸಾಹಿತ್ಯ ವೇದಿಕೆಯಿಂದ ನಾವು ತಯಾರಿಸುತಿದ್ದ ಟ್ಯಾಬ್ಲೋನ ದಿನಗಳು ಫಕ್ಕನೇ ಕಣ್ಣೆದುರು ಬಂದವು. ಪ್ರತೀ ವರ್ಷ ಏನಾದರೂ ಹೊಸದನ್ನು ಕೊಡಬೇಕೆನ್ನುವ ತುಡಿತ, ರಾತ್ರಿ ಹಗಲೆನ್ನದೇ ಎರಡು ದಿನಗಳ‌ ಕೆಲಸ, ಎಲ್ಲಾ ಮುಗಿದ ನಂತರ ಅದರ ಮೇಲೆ ವೇಷ ಹಾಕಿ ಕುಳಿತುಕೊಳ್ಳುವ ಆತುರ...ಎಲ್ಲವೂ ನನ್ನ ಕಣ್ಣೆದುರು ಬಂದು ಆ ಟ್ಯಾಬ್ಲೋ ತಯಾರಿಯನ್ನು ಕುತೂಹಲದಿಂದ ನೋಡುವಂತೆ ಮಾಡಿತ್ತು.ಮೆರವಣಿಗೆ ಸಾಗುವ ಮುಖ್ಯ ರಸ್ತೆ ಅಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ವಿದ್ಯುತ್ ಅಲಂಕಾರಿಕ ದೀಪಗಳಿಂದ ಝಗಮಗಿಸುತಿದ್ದ ರಸ್ತೆಯ ಇಕ್ಕೆಲಗಳಲ್ಲಿ ದೊಡ್ದ ದೊಡ್ಡ ಶುಭಕೋರುವ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತಿದ್ದವು.ಮಧ್ಯಾನ್ಹ ನಾಲ್ಕು ಗಂಟೆಗೇ ಮುಖ್ಯ ರಸ್ತೆಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹೊರಬರಲು ಅರ್ಧ ಗಂಟೆಯೇ ಹಿಡಿದಿತ್ತು.

ತಮಟೆಯ ಲಯಬದ್ಧ ಬಡಿತದಲ್ಲಿ ಕುಣಿಯುವ ಹುಲಿಗಳ ದೊಡ್ಡ ತಂಡವೇ ಇತ್ತು. ಲಕ್ಷದ ಮೇಲೆ ಬಹುಮಾನವಿದ್ದ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಅಲ್ಲಲ್ಲಿ ತಾಲೀಮು ನಡೆಯುತಿತ್ತು. ದಸರಾದಲ್ಲಿ ಹುಲಿವೇಷ ಪ್ರಧಾನ ಆಕರ್ಷಣೆ.ಮೈಯಿಡೀ ಬಣ್ಣದ ಕುಸುರಿಯಲ್ಲಿ ಅರಳುವ ಹುಲಿಗಾಗಿ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೋರಿಸುವ ಆಸಕ್ತಿ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ.ಎಷ್ಟು ಮಳೆ ಬಂದರೂ ಎಲ್ಲಾ ಋತುಗಳಲ್ಲೂ ಬೆವರಿ ಚಂಡಿ ಮುದ್ದೆಯಾಗುವ ಮಂಗಳೂರಿನಲ್ಲಿ ದಿನವಿಡೀ ಮೈಯೆಲ್ಲಾ ಬಣ್ಣದೊಂದಿಗೆ ಕುಣಿದು ಕುಪ್ಪಳಿಸುವ ಹುಲಿಗಳನ್ನು ಕಂಡರೆ ನನಗೆ ಮೊದಲಿನಿಂದಲೂ ವಿಶೇಷ ಅಕ್ಕರೆ. ಎಲ್ಲಾ ಕಡೆಯ ಹುಲಿ ತಂಡದ ಕುಣಿತವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗುತಿದ್ದೆ. ಅಚಾನಕ್ ಆಗಿ ಒಂದು ಸಣ್ಣ ಹುಲಿ ನನ್ನ ಕಣ್ಣನ್ನು ಸೆಳೆಯಿತು. ಕಾಡು ಬಿಟ್ಟು ನಾಡಿಗೆ ಹೊಸದಾಗಿ ಬಂದ ಹುಲಿಯಂತೆ ಭಯಭೀತವಾಗಿ ಗುಂಪಿನಿಂದ ಪ್ರತ್ಯೇಕಗೊಂಡು ಏಕಾಂಗಿಯಾಗಿ ಅಲೆಯುತಿತ್ತು.
ದೊಡ್ಡ ತಂಡಗಳ ಕುಣಿತದಿಂದ ನೋಟವನ್ನು ಬಲವಂತದಿಂದ ಹೊರಳಿಸಿ ಈ ಸಣ್ಣ ಹುಲಿಯನ್ನು ಬೆನ್ನಟ್ಟಿಕೊಂಡು ಹೋದೆ.ಅದೂ ನಿರಾಯುಧನಾಗಿ! ನನ್ನ ಧೈರ್ಯವನ್ನು ನೀವು ಮೆಚ್ಚಲೇ ಬೇಕು. ಯಾವುದೇ ತಮಟೆ ಬಡಿತದ ಪಕ್ಕ ವಾದ್ಯಗಳ ಸದ್ದಿಲ್ಲದೇ ಅದು ಕುಣಿಯುತಿತ್ತು ಅಂಗಡಿಗಳ ಗಲ್ಲಾ ಪೆಟ್ಟಿಗೆಯ ಎದುರು.ನವರಾತ್ರಿಯ ಸಮಯದಲ್ಲಿ ಬೇರೆ ಬೇರೆ ರೀತಿಯ ವೇಷಗಳನ್ನು ಹಾಕಿಕೊಂಡು ಮನೆ, ಅಂಗಡಿಗಳಲ್ಲಿ ಪ್ರದರ್ಶನವನ್ನು ಕೊಟ್ಟು ಹಣ ಸಂಪಾದಿಸುವುದು ಹೊಸ ವಿಚಾರವೇನಲ್ಲ. ಆದರೆ ಈ ಹುಲಿಯನ್ನು ಬೆನ್ನಟ್ಟಲು ನನಗಿದ್ದ ಮುಖ್ಯ ಕುತೂಹಲ ಅದು ಪ್ರತೀ ಅಂಗಡಿಗೆ ಹೋದ ನಂತರ ಒಂದು ಮೂಲೆಯಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಕುಳಿತಿದ್ದ ಒಂದು ಹೆಂಗಸಿನ ಬಳಿ ಓಡಿ ಹೋಗುತಿತ್ತು.ಮತ್ತೆ ಸ್ವಲ್ಪ ಸಮಯದ ನಂತರ ಮತ್ತೊಂದು ಅಂಗಡಿಯ ಮುಂದೆ ನಿಲ್ಲುತಿತ್ತು. ಆ ಹುಲಿಯ ಕಣ್ಣುಗಳು ಬೇರೆ ಹುಲಿಗಳ ಕಣ್ಣುಗಳಂತೆ ಹೆದರಿಕೆಯನ್ನು ಹುಟ್ಟಿಸುತ್ತಿರಲಿಲ್ಲ.ಬದಲಾಗಿ ಅವುಗಳೇ ಹೆದರಿದ್ದವು. ಬೆದರಿದ ಹರಿಣಿಯ ಕಣ್ಣುಗಳಂತೆ ಈ ಹುಲಿಯ ಕಣ್ಣುಗಳು. ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು.ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು.

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಐಸ್ಕ್ರೀಮ್ ಗಾಡಿಯಿಂದ ಎರಡು ಚೋಕೊಬಾರ್ ನ್ನು ತಂದು ಎರಡನ್ನೂ ಅವನ ಕೈಗಿತ್ತೆ. ಎಷ್ಟೋ ದಿನಗಳಿಂದ ಬೇಟೆ ಸಿಗದೇ ಒದ್ದಾಡುತಿದ್ದ ಹುಲಿಯ ಎದುರು  ಕೊಬ್ಬಿದ ಜಿಂಕೆ ಕಂಡಾಗ ಹಾರಿ ಹಿಡಿದು ಗಬಗಬನೆ ತಿನ್ನುವಂತೆ ಎರಡೂ ಐಸ್ಕ್ರೀಮ್ ಗಳನ್ನೂ ತಿಂದಿತು ಈ ಪುಟಾಣಿ ಹುಲಿ.‌ ಹೊಟ್ಟೆ ಸ್ವಲ್ಪ ತಣ್ಣಗಾಗಿರಬೇಕು.ಹೆದರಿದ ಕಣ್ಣಿಗಳಿಂದ ನಿರಾಳತೆಯ ಭಾವ ಹೊರಹೊಮ್ಮಿತು. ಮತ್ತು ನಾನು ಒತ್ತಾಯ ಮಾಡಿ ಕೇಳಿದ್ದಕ್ಕೆ ತನ್ನ ಕತೆಯನ್ನು ನನ್ನ ಮುಂದೆ ಬಿಚ್ಚಿಟ್ಟಿತು.ಮೂಲೆಯಲ್ಲಿ ಕೂತ ಎರಡು ಮಕ್ಕಳ ತನ್ನ ತಾಯಿಗೆ ಬಿಕ್ಷಾಟನೆಯೇ ಪ್ರಮುಖ ಉದ್ಯೋಗ.ಈಗ ಆ ಸಣ್ಣ ಮಗುವಿನೊಂದಿಗೆ ಅವಳಿಗೆ ಹೆಚ್ಚು ಕಡೆ ಹೋಗಲಾಗದೇ ಕುಳಿತಲ್ಲೇ ಬಟ್ಟೆ ಹರಡಿ ಭಿಕ್ಷೆ ಕೇಳುತ್ತಾಳೆ. ತನ್ನನ್ನು ಯಾವುದೋ ಹುಲಿ ತಂಡದವರಿಗೆ ದಮ್ಮಯ್ಯ ಹಾಕಿ ಈ ಹುಲಿವೇಷವನ್ನು ಹಾಕಿಸಿದ್ದಾಳೆ.ಮತ್ತು ಅಂಗಡಿ ಅಂಗಡಿಗೆ ಕಳಿಸುತ್ತಾಳೆ.ಬೆಳಿಗ್ಗೆಯಿಂದ ಹೀಗೆ ಹೋಗಿ‌ ಹೋಗಿ ಸಣ್ಣ ಹುಲಿಯ ಪುಟ್ಟ ಪಾದಗಳು ದಣಿದಿವೆ.ನನಗಾಗಲ್ಲಮ್ಮಾ ಇನ್ನು... ಸಾಕು ಅಂತ ಎಷ್ಟು ಗೋಗರೆದರೂ ತಾಯಿ ಕೇಳುತ್ತಿಲ್ಲ. ಮಗುವಿಗೇನು ಗೊತ್ತು? ಇಂದು ವಿಜಯದಶಮಿ! ಕೆಡುಕಿನ ಮೇಲೆ ಒಳಿತಿನ ವಿಜಯದ ದಿನ. ಇವತ್ತು ದುಡಿದರೆ ವಾರವಿಡೀ ಸುಖವಾಗಿರಬಹುದು. ನಾನೂ ಹೊಟ್ಟೆತುಂಬಾ ಉಣ್ಣಬಹುದು.ತನ್ನಲ್ಲಿ ಸ್ವಲ್ಪವಾದರೂ ಹಾಲು ಉಕ್ಕಿದರೆ ಸದಾ ಹಾಲಿಗಾಗಿ ಅಳುವ ಸಣ್ಣ ಮಗುವಿಗೂ ಹಾಲೂಡಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಸಣ್ಣ ಹುಲಿಯನ್ನು ಮತ್ತೆ ಮತ್ತೆ ಬಲವಂತವಾಗಿ ಬೇಟೆಗೆ ತಳ್ಳುತಿದ್ದಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಭಾರಾವಾದ ಹೆಜ್ಜೆಗಳನ್ನು ಊರಿಕೊಂಡು ಸಣ್ಣ ಹುಲಿ ಹೊರಡುತ್ತದೆ ಮತ್ತೆ ಮತ್ತೆ ಬೇಟೆಗೆ!...ಸಣ್ಣ ಹುಲಿಯ ಮಾತು ಕೇಳಿ ಮನಸ್ಸು ಭಾರವಾಯ್ತು.ತಪ್ಪಿ‌ಅವನ ಅಪ್ಪನ ಬಗ್ಗೆ ಕೇಳಿದೆ. ಆಗ ಹುಲಿಯ ಕಣ್ಣಲ್ಲಿ ಉಕ್ಕಿದ ರೋಷ ನನ್ನನ್ನು ಅಟ್ಟಾಡಿಸಿ ಕೊಂದು ತಿನ್ನುವಷ್ಟಿತ್ತು.

ಹುಲಿ ಕುಣಿತದ ತಂಡಕ್ಕೆ ಅಂತಾನೇ ಇಟ್ಟುಕೊಂಡಿದ್ದ ದುಡ್ಡನ್ನು ಸಣ್ಣ ಹುಲಿಯ ಜೋಳಿಗೆಗೆ ಹಾಕಿ, ಆ ದಿನಕ್ಕಾಗುವಷ್ಟು ತಿಂಡಿಯನ್ನೂ ಕೊಟ್ಟು ಅವನನ್ನು ಕಳಿಸಿದೆ. ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದೆ. "ಎಲ್ಲಿದ್ದಿ ಮಾರಯಾ, ಸಿಗ್ತೇನಂತ ಹೇಳಿ ಪತ್ತೆನೇ ಇಲ್ಲ..." ಅಂತ ಮಂಜನ ಕಾಲ್ ಬಂತು. ಮನಸ್ಸು ಅರಳಿತು,ಮತ್ತೆ ಸಂಭ್ರಮದ ರಸ್ತೆಯಲ್ಲಿ ಮಂಜನ ಜೊತೆಗೆ ಹೆಜ್ಜೆ ಹಾಕಿದೆ.ದೇವಸ್ಥಾನ ಬೀದಿಯಲ್ಲೆಲ್ಲಾ ತಿರುಗಿ ನಮ್ಮ ಖಾಯಂ ಅಡ್ಡ ಪಬ್ಬಾಸ್ ಐಸ್ಕ್ರೀಮ್ ಪಾರ್ಲರ್ ಗೆ ಬಂದು ಕುಳಿತಾಗ ಮುಸ್ಸಂಜೆ ಕಳೆದು ರಾತ್ರಿ ಇಣುಕುತಿತ್ತು. ಪಬ್ಬಾಸ್ ಎದುರಿನಲ್ಲೇ ಹಾಕಿದ್ದ ದೊಡ್ಡ ವೇದಿಕೆಯಲ್ಲಿ ಆರ್ಕೆಸ್ಟ್ರಾ ತಂಡದ ಮೈಕ್ ಟೆಸ್ಟಿಂಗ್ ನಡೆಯುತಿತ್ತು. ಹೊರಗೆಲ್ಲಾ ಝಗಮಗಿಸುವ ಲೈಟಿಂಗ್ಸ್ ನಿಂದಾಗಿ ಮಾಮೂಲಿ ಹೋಗುವ ರಸ್ತೆಗಿಂದು ರಾಜಕಳೆ.ನಿಧಾನವಾಗಿ ರಸ್ತೆ ಸಂಭ್ರಮದ ಮೆರವಣಿಗೆಗೆ ಸಜ್ಜಾಗುತಿತ್ತು.ಇದೆಲ್ಲದರ ನಡುವೆಯೂ ಎದುರಿನ ಅಂಗಡಿಯ ಗಲ್ಲಾ ಪೆಟ್ಟಿಗೆಯೆದುರು ಕುಣಿದು ಮಾಲೀಕನ ಮುಖವನ್ನೇ ನೋಡುತಿದ್ದ ಸಣ್ಣ ಹುಲಿ ಕಾಣದೇ ಇರಲಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ವಿಶ್ವ ಶಾಂತಿ ಹಾಗೂ ಭಾತೃತ್ವದ ಶೃಂಗ ಸಭೆ
SDM COLLEGE MANGALORE
ಕವಿಗೋಷ್ಟಿ:

೧. ಹುಚ್ಚು

ಧರ್ಮಗಳ ತಿರುಳನರಿಯದೇ
ಶ್ರೇಷ್ಠತೆಯ ವ್ಯಸನಕ್ಕಿಳಿದ ಜನ
ಗಡಿ ಗಡಿಗಳ ನಡುವೆ
ಹಚ್ಚಿದರು ಕಿಚ್ಚು;
ಯಾವುದರ ಪರಿವೇ ಇಲ್ಲದೇ
ಗಡಿಗಳ ನಡುವೆ ಹುಟ್ಟಿ
ನಗುವ ಹೂವಿಗೆ ಮಾತ್ರ
ಶಾಂತಿಯ ಹುಚ್ಚು?

೩.ಭರವಸೆ

ಕೋಟಿ ತಾರೆ ಹೊಳೆದರೂ
ಬಾನಿನಲ್ಲಿ
ಜೀವಜಾಲಕ್ಕೆ
ಸೂರ್ಯನೊಬ್ಬನೇ ಬೆಳಕು
ಮತ ಧರ್ಮಗಳೆಷ್ಟಿದ್ದರೂ
ಜಗದಲ್ಲಿ
ಶಾಂತಿ ಮಂತ್ರಕ್ಕೆ
ಮಾನವತೆಯೊಂದೇ ಮಿಣುಕು

೩. ಧ್ಯೇಯ

ಸಾಲಾಗಿ ಹಚ್ಚಿಟ್ಟ ದೀಪಗಳು
ಸೂಸುವ ಬೆಳಕೊಂದೇ
ಶಾಂತ ಶೀತಲ;
ಗುರುವಾಗಿ ಹುಟ್ಟಿದ ಧರ್ಮಗಳು
ಹೇಳುವ ಆಶಯವೂ ಒಂದೇ
ಶಾಂತಿ ಸಕಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಪಯಣಿಸುವ ವೇಳೆಯಲಿ...

ಹೆಚ್ಚು ಕಡಿಮೆ ಖಾಲಿಯೇ ಇದ್ದ ಬಸ್ಸಿನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತಿದ್ದ ನನ್ನಲ್ಲೂ ಖಾಲಿ ಖಾಲಿಯಾದ ಭಾವ.ಹೊರಗೆ ಓಡುತ್ತಿರುವ ಸರ್ವ ಸೃಷ್ಟಿಯ ನಡುವೆಯೂ ನಾನು ಸ್ತಬ್ದವಾಗಿ ಕುಳಿತಿದ್ದೆ ಥೇಟ್ ನನ್ನ ಯೋಚನೆಗಳಂತೆ.ಕಾಲದೊಂದಿಗೆ ಯಾವತ್ತೂ ಹೆಜ್ಜೆ ಹಾಕಿಯೇ ಇಲ್ಲ ನೀನು... ಅನ್ನುವ ಅಮ್ಮನ ಮಾತು ತಲೆಯಲ್ಲಿ ಯಾವತ್ತೂ ಕೊರೆಯುವ ಗುಂಗೀ ಹುಳ. ಯೋಚನೆಗಳ‌ ನಡುವೆಯೇ ನನ್ನ ಹತ್ತಿರದ ಖಾಲಿ ಸೀಟ್ ನಲ್ಲಿ ಅವಳು ಬಂದು ಕುಳಿತುಕೊಂಡದ್ದು ಅರಿವಾಗಿ ಅವಳತ್ತ ತಿರುಗಿದೆ.ಒಂದು ನಗೆಯ ವಿನಿಮಯವಾದಾಗಲೇ, ಅರೇ...ಪರಿಚಯದವಳೇ?, ಹೆಸರು ನೆನಪಾಗುತಿಲ್ವೇ...ನನ್ನನ್ನು ನೋಡಿಯೇ ಹತ್ತಿರ ಕುಳಿತಿರ್ಬೇಕು...ಅಂದುಕೊಳ್ಳುವಷ್ಟರಲ್ಲಿಯೇ, "ಹಾಯ್'' ಅಂದ್ಳು. ಈಗ ತಾನೇ ಇಣುಕುತ್ತಿರುವ ಡಿಸೆಂಬರ್ ಚಳಿಗೆ ಮುದುಡಿ ಕುಳಿತ ನನ್ನ ಮೇಲೆ ಸೂರ್ಯನ ಬೆಚ್ಚಗಿನ ಎಳೆಯ ಕಿರಣ ಬಿದ್ದಂಗಾಯ್ತು. ಸ್ವಲ್ವವೇ ಅರಳಿ ಕುಳಿತೆ... ಇಬ್ಬನಿ ಬಿದ್ದು ಮುದುಡಿದ ನಾಚಿಗೆ ಮುಳ್ಳು ಬಿಸಿಲಿಗೆ ಅರಳಿದಂತೆ.ಪೆದ್ದು ಪೆದ್ದಾಗಿ ನಕ್ಕೆ. ''ಯಾಕೆ ಶಶಿ...ನನ್ನ ಗುರ್ತ ಸಿಗ್ಲಿಲ್ಲಾ?..'' ಅಂದಾಗ ಯಾರಪ್ಪಾ ಇವಳು? ಎಲ್ಲೋ ನೋಡಿದ ಹಾಗೇ ಇದೆ, ನನ್ನ ಹೆಸ್ರು ಬೇರೆ ಕರಿತಿದ್ದಾಳೆ...ಏನ್ ಹೇಳೋದೀಗ...ಅಂತ ಚಡಪಡಿಸುತ್ತಿರುವಾಗ ನನಗೆ ಕಷ್ಟವೇ ಕೊಡದೇ, " ನಾನು ಕಣೋ, ಸ್ಮಿತಾ...ನಿನ್ನದೇ ಕಾಲೇಜ್, ಕಲಾ ವಿಭಾಗ" ಅಂದಾಗಲೂ ಎಲ್ಲಿ ನೋಡಿದ್ದು ಅಂತ ಸ್ಪಷ್ಟವಾಗದೇ ಯೋಚಿಸತೊಡಗಿದೆ.ನಾನು ಮೌನವಾದದ್ದು ನೋಡಿ ಕೊಂಚ ಹತಾಶಳಾದಂತೆ ಕಂಡ ಅವಳು " ಯಾಕೆ, ಬೇರೆ ಸೀಟ್ ಗೆ ಹೋಗ್ಬೇಕಾ?..." ಅಂದ್ಳು. "ಹೇ..ಹೇ..ಬೇಡ ಬೇಡ, ನನಗೂ ಕಂಪೆನಿ ಬೇಕು" ಅನ್ನೋದಷ್ಟೇ ಆಯಿತು ನನ್ನಿಂದ...ಪುಣ್ಯಕ್ಕೆ ಸೀಟ್ ಬಿಟ್ಟು ಹೋಗ್ಲಿಲ್ಲ.ಆದರೆ ಇಷ್ಟು ಹೇಳಿದ ಮೇಲೂ ನನ್ನಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದದ್ದು ಬೇಸರವಾಗಿರಬೇಕು ಅವಳಿಗೆ. ಮತ್ತೆ ಮಾತಾಡದೇ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಮೊಬೈಲ್ನಲ್ಲಿ ಬ್ಯುಸಿ ಆದಳು.

ಚೆಲುವೆಯ ಸಾನಿಧ್ಯ ಆಸ್ವಾದಿಸುವುದನ್ನು ಬಿಟ್ಟು ಮತ್ತೆ‌ ಮನಸ್ಸು ಯೋಚನೆಯ ಬೀದಿಗಿಳಿಯಿತು.ಹುಡುಗಿಯರೆಂದರೆ ಮಾರು ದೂರ ಓಡುವ ನನ್ನ ಮೊಬೈಲ್ ಕಾಂಟೆಕ್ಟ್ ಲಿಸ್ಟ್ ನಲ್ಲಿ ಹುಡುಗಿಯರ ನಂಬರುಗಳೇ ಇಲ್ಲ.ಎಲ್ಲೋ ಮರೆಯಲ್ಲಿ ನಿಂತು ಹಕ್ಕಿ ವೀಕ್ಷಣೆಯ ಅಭ್ಯಾಸವಿದ್ದರೂ ಎದುರಲ್ಲಿ ನಿಂತು ಮಾತಾಡುವಾಗ ನಾನೀಗಲೂ ಉತ್ತರಕುಮಾರನೇ.ನನ್ನ ಕಾಲೇಜ್ ಫ್ರೆಂಡ್ಸ್ ಕಾಲೇಜು ಕಾರಿಡಾರ್ ನಲ್ಲಿ ಹುಡುಗಿಯರ ಜೊತೆಗೆ, ಬಸ್ ಸ್ಟ್ಯಾಂಡ್ನಲ್ಲಿ ಪಾರ್ಕ್ನಲ್ಲಿ  ತಮ್ಮ ತಮ್ಮ ಗರ್ಲ್ಸ್ ಫ್ರೆಂಡ್ಸ್ ಗಳ ಜೊತೆಯಲ್ಲಿ ಚಕ್ಕಂದವಾಡುವಾಗ ದೂರದಲ್ಲಿ ನೋಡಿ ಅಸೂಯೆಯಲ್ಲಿ ವಿಲ ವಿಲ ಒದ್ದಾಡಿದರೂ ಅವಕಾಶವಿದ್ದಾಗ ಸದುಪಯೋಗ ಮಾಡಿಕೊಳ್ಳುವ ಕಲೆಯೂ ಸಿದ್ಧಿಸಿಲ್ಲ.ಎಲ್ಲರೂ ಹೇಳುವಂತೆ ನಾನೊಬ್ಬ ರಿಜಿಡ್ ವ್ಯಕ್ತಿತ್ವದವನು.ಸುಲಭವಾಗಿ ಯಾರೊಂದಿಗೂ ಬೆರೆಯಲಾರದ ಶುಕಮುನಿ.ಎಲ್ಲಾ ಯೋಚನೆಗಳಿಂದ ಹೊರಬಂದು ಅವಳತ್ತ ನೋಡಿದರೆ ಸೀಟಿಗೊರಗಿ ಕಣ್ಣು‌ಮಚ್ಚಿದ್ದಾಳೆ. ಬಹುಶಃ ಯಾವುದೋ ಹಾಡಿನ ಗುಂಗಲ್ಲಿರಬೇಕು.ಹಳದಿ ಟೀ ಶರ್ಟ್ ನೀಲಿ ಜೀನ್ಸ್ ತೊಟ್ಟಿರುವ ಬಳುಕುವ ನೀಳ‌ ಶರೀರ.ಮುಂಗುರುಳೊಂದು ಅವಳ ಕೆನ್ನೆಯ ಮೇಲೆ ಹಿತವಾಗಿ ಲಾಸ್ಯವಾಡುತ್ತಿದೆ.ಮುಚ್ಚಿದ ರೆಪ್ಪೆಗಳಡಿಯಲ್ಲಿ ಚಂಚಲ ಕಣ್ಣುಗಳು ಕದಲಿದಂತೆ ಭಾಸವಾಗುತ್ತಿದೆ.ಮಿತವಾಗಿ ತುಟಿಗೆ ಮೆತ್ತಿದ ಗುಲಾಬಿ ರಂಗಿನಲ್ಲಿ ಆಹ್ವಾನ ಎದ್ದು ಕಾಣುತ್ತಿದೆ.ಅವಳು ನೋಡದಿದ್ದರೂ ಅವಳನ್ನು ನೋಡಲು ಭಯವಾಗಿ ಮತ್ತೆ ಕಿಟಕಿಯ ಹೊರಗೆ ಇಣುಕಿದರೂ ನೋಟದಲ್ಲಿ ತುಂಬಿಕೊಂಡ ಒಲುಮೆಯ ತುಂಬು ಪೌರ್ಣಿಮೆ! ಸಂಜೆಯ ಹಿತವಾದ ತಂಗಾಳಿ ಮೈಗೆ ಸೋಕಿ ಹುಚ್ಚು ಕಾಮನೆಗಳನ್ನು ಕೆರಳಿಸುತ್ತಿದೆ.ಹತ್ತಿರವೇ ಕುಳಿತಿದ್ದರೂ ಅದೆಷ್ಟು ದೂರ ನಮ್ಮ ನಡುವೆ. ಕಿಟಕಿ ಬಿಟ್ಟು ಅವಳೆಡೆಗೆ ಸರಿದು ಕುಳಿತೆ.ಹಿತವಾಗಿ ಮೈ ತಾಗುವಷ್ಟು ಹತ್ತಿರ.ಅವಳನ್ನು ಸೋಕಿ ಬರುತ್ತಿದ್ದ ತಂಗಾಳಿಯಿಂದ ಮನದಲ್ಲಿ ಮಲ್ಲಿಗೆ ಅರಳುತ್ತಿರುವ ಘಮ!.ಯಾವುದೋ ದಿವ್ಯ ಘಳಿಗೆಯಲ್ಲಿ ಅವಳ ಕೈಗೆ ಕೈ ಸೋಕಿದಾಗ ಮೃದುತ್ವದ ಸ್ಪರ್ಶದಲ್ಲಿ ಸಾವಿರ ದೀಪಗಳು ಒಮ್ಮೆಲೇ ಉರಿದಂತೆ ಪುಳಕಿತನಾದೆ.

ಯಾರಪ್ಪಾ ಈ ಸ್ಮಿತಾ?...ನಿಲ್ಲದ ಹುಡುಕಾಟದಲ್ಲಿ ತಲೆ  ಬಿಸಿಯೇರಿತು.ಯಾರೇ ಆಗಲಿ, ಅವಳು ಇಷ್ಟು ಆತ್ಮೀಯತೆಯಲ್ಲಿ ಮಾತಾಡುವಾಗ, ನಗುವಾಗ ನಾನು ಸುಮ್ಮನಿರಬಾರದಿತ್ತು.ಏನಂದುಕೊಂಡ್ಳೋ ನನ್ನ ಬಗ್ಗೆ....ಹತ್ತಿರವೇ ಕುಳಿತಿದ್ದಾಳೆ. ಮಾತಾಡಿಸಿಯೇ ಬಿಡುವ ಅಂತ ಗಟ್ಟಿ ನಿರ್ಧಾರ ಮಾಡಿ ಅವಳತ್ತ ತಿರುಗಿದರೆ ಅವಳಿನ್ನೂ ಮುಚ್ಚಿದ ಕಣ್ಣು ತೆರೆದಿಲ್ಲ.ಸರಿ, ಎದ್ದ ಕೂಡಲೇ ಮಾತಾಡಿಸುವ, ಯಾವ ಸ್ಮಿತಾಳೇ ಆಗಿರಲಿ...ನನ್ನ ಸ್ಮಿತಾವಾದರೆ ಅದೆಷ್ಟು ಹಿತ ಅಂತ ಯೋಚಿಸಿ ಅವಳು ಕಣ್ತೆರೆಯುವ ದಿವ್ಯ ಘಳಿಗೆಯನ್ನೇ ಕಾಯುತ್ತಾ ಕುಳಿತೆ.

ಬಸ್ಸು ಬೈಲೂರು ಸ್ಟ್ಯಾಂಡ್ ನಲ್ಲಿ ನಿಲ್ಲುತ್ತಲೇ ಸಡನ್ ಆಗಿ ಎದ್ದು ನಿಂತಳು.ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ಎಲ್ಲಿಲ್ಲದ ಧೈರ್ಯ ಒಗ್ಗೂಡಿಸಿ ತುಟಿಯ ಮೇಲೆ ಬಲವಂತದ ನಗು ಚೆಲ್ಲಿ "ಸ್ಮಿತಾ...." ಅಂದೆ. ಮುಂದೆ ಹೋದವಳು ಒಂದು ಕ್ಷಣ ನಿಂತು, ನಂತರ ನನ್ನ ಕಡೆಗೆ ತಿರುಗಿ ಹತ್ತಿರ ಬಂದು,
" ಕ್ಷಮಿಸಿ, ನನ್ನ ಹೆಸರು ಸ್ಮಿತಾ ಅಲ್ಲ.ಮಮತ ಅಂತ. ನನಗೆ ನಿಮ್ಮ ಪರಿಚಯವಿಲ್ಲ. ಹಿಂದಿನ ಸೀಟ್ ನಲ್ಲಿ ಎರಡು ಸ್ಟಾಪ್ ಹಿಂದೆ ಇಳಿದ ವ್ಯಕ್ತಿ ನನ್ನನ್ನು ಫಾಲೋ ಮಾಡ್ತಿದ್ದ. ಓಡಿ ಓಡಿ ಸಿಕ್ಕಿದ ಈ ಬಸ್ ಹತ್ತಿದೆ.ಅವನೂ ಹತ್ತಿದ. ಏನೂ ತೋಚದೇ ನಿಮ್ಮ ಹತ್ತಿರ ಕುಳಿತೆ.ನೀವೆಲ್ಲೋ ನೋಡ್ತಿದ್ರಿ.ನಿಮ್ಮ ಕಾಲೇಜ್ ಐಡಿಯಿಂದ ಹೆಸರು ನೋಡಿ ಮಾತಾಡಿಸಿದೆ. ಇವನ್ಯಾರೋ ಪರಿಚಯದ ಹುಡುಗ ಅಂತ ತಿಳಿದು ಅವನೂ ಇಳಿದು ಹೋದ...ಥ್ಯಾಂಕ್ಯೂ" ಅಂತ ಹೇಳಿ ಮತ್ತೆ ಹಿಂದೆ ತಿರುಗದೇ,ಒಲುಮೆಯ ಭಾಗವೇ ಬದುಕಿನಿಂದ ದೂರ ಹೋದಂತೆ ಬಸ್ಸಿನಿಂದ ಇಳಿದು ಹೋದಳು.

ಆವರಿಸಿದ ಗಾಢ ಅಂಧಕಾರದ ಶೂನ್ಯದಲ್ಲಿ ಅವಳು ಇಳಿದು ಹೋದ ದಾರಿಯನ್ನೇ ನೋಡುತ್ತಾ ಕಿಟಕಿಯಿಂದ ಹೊರಗೆ ನೋಡಿದರೆ ಸೃಷ್ಟಿಯೆಲ್ಲಾ ಓಡುತ್ತಿತ್ತು ಯಥಾ ಪ್ರಕಾರ. ಹತ್ತಿರದ ಖಾಲಿ ಸೀಟು ನನ್ನನ್ನು ಅಣಕಿಸಿದಂತೆ ಭಾಸವಾಗಿ ಕುಳಿತಲ್ಲೇ ಸ್ತಬ್ದನಾದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಹೆಚ್ಚು ದಿನಗಳಿಲ್ಲ,
ಇನ್ನೇನು ಬಂದೇ ಬಿಟ್ಟಿತು ನೋಡಿ
ಕಾಲನ ಮಾಗಿ.

ಚಿಗುರಿ ನಳನಳಿಸಿ
ಹಣ್ಣುಬಿಟ್ಟ ಗೊಂಚಲು ತೊನೆದು
ಕೊಟ್ಟು ಕೊಟ್ಟೂ ಬರಿದಾಗಿ
ತೊಟ್ಟು ಕಳಚುವ ದಿವ್ಯ ಕಾಲ.

ಸುಲಭವಲ್ಲ,
ಸುರಿಸುರಿದು ಖಾಲಿಯಾಗುತ್ತಾ
ಮೋಹ ಕಳಚಿ
ಬಯಲಿನಲ್ಲಿ ನಿಲ್ಲುವುದು.
ಮುಸುಕುವ ಮಂಜಿನ ಎದುರೂ
ನಿಲ್ಲುವುದೇ ಇಲ್ಲ;
ನಿರಂತರ ಸುರಿವ ಮಳೆಯ ಸೆಳೆತ!

ಮಾಗಿ ಬರುವ ಮುನ್ನ
ಮಾಗಬೇಕು ಇಲ್ಲಿ;
ಬಾಗಿ ಹೊಸ ಬೀಜಕ್ಕೆ
ಒಲುಮೆಯ ನೀರೆರೆದು
ಚಿಗುರ ಕಂಡು ಸಂಭ್ರಮಿಸಬೇಕಿಲ್ಲಿ.

ಅದುವೇ ಬದುಕ ಮಗ್ಗಿ;
ನಿಜದ ಸುಗ್ಗಿ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಮಾತು ಮರೆತ ಸಹನೆಯಲ್ಲಿ
ಒಲುಮೆ ಹೂವು ನರಳಿದೆ
ಕೋಶ ತೆರೆದು ಬಂದರಷ್ಟೆ
ಚಿಟ್ಟೆಗೊಂದು ಬದುಕಿದೆ

ಮೌನ ಕಣಿವೆ ಆಳದಲ್ಲಿ
ದನಿಯು ಮರೆತ ಮಾತಿದೆ
ಶಬ್ದ ಸೀಮೆ ಆಚೆಯೆಲ್ಲೊ
ಮೌನ ಸುಖದ ಭ್ರಮೆಯಿದೆ

ಹಮ್ಮು ಬಿಮ್ಮು ಗೋಡೆಯಲ್ಲಿ
ಮೌನವರಳಿ ನಗುತಿದೆ
ಅಂಕೆ ಶಂಕೆ ನೆರಳಿನಲ್ಲಿ
ಶೂನ್ಯವೊಂದು ಕಾಡಿದೆ

ದಾರ ಕಡಿದ ನನ್ನ ದನಿಯು
ನಲ್ಮೆ ಬಾನ ಹಾರಲಿ
ಮೌನಕಲ್ಲು ಸೀಮೆ ದಾಟಿ
ಕಾದ ಎದೆಯ ತಣಿಸಲಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಈ ಭೂತವೊಂದು ಮೈಯಲ್ಲಿ ಹೊಕ್ಕಿ
ಕುಣಿದು ಧೀಂ ತಕಿಟ ತಕಿಟ
ಎಷ್ಟು ಹೊದ್ದರೂ ಒಳ ಸುಳಿಗೆ ಸಿಕ್ಕಿ
ನಡುವೆಲ್ಲ ಕೊರೆವ ಕೀಟ

ಬೋಳಾದ ಮರಕು ಹಸಿ ಚಿಗುರ
ಬಯಕೆ ಅಹಾ! ನಿಮಿರಿ ಎಂಥ ಪುಳಕ
ಕಾದು ಕುದಿದ ನರನಾಡಿ ಉರಿಗೆ
ಸರಿ ರಾತ್ರಿ ನೀರ ಜಳಕ

ಮೋಡವೆಲ್ಲವೂ ಪೂರ್ಣಕುಂಭ
ಕಂಡಂತೆ ಜೋಡಿ ತೊನೆದಾಟ
ಮಾವು ತೂಗೊ ಗಿಡ ಭಾರವಂತೆ
ಅಲ್ಲಿ ಕಚ್ಚೊ ಗಿಳಿಯ ಕಾಟ

ಶಾಂತ ದೀಪದ ಒಡಲು ಚಂಚಲ
ಬೀಸಿ ಮಾಗಿ ಚಳಿಗಾಳಿ
ಒದ್ದೆಒದ್ದೆ ಹಸಿ ಕನಸ ನಿದ್ದೆಗೂ
ಕಾಮಪುಷ್ಪ ಶರ ಧಾಳಿ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ಜೋಡಿ

"ಯಾರು ಏನಾದ್ರೂ ಹೇಳ್ಲಿ, ಆದರೆ ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅವಳು..."
ಅಂತ ರಜನಿ ಹೇಳಿದಾಗ ಶಶಿ ಇನ್ನೂ ಯೋಚನೆಯಲ್ಲಿಯೇ ಇದ್ದ. ಎಷ್ಟು ಚಂದದ ಹುಡುಗಿ ಅವಳು,ಬಳುಕುವ ಬಳ್ಳಿ ತರಹ ಅವನ ಪಕ್ಕದಲ್ಲಿ ನಿಂತಿದ್ಳು...ಅವಳಿಗೆ ಕಂಪೇರ್ ಮಾಡಿದ್ರೆ ಹುಡುಗನೇ ಸಾಧಾರಣ ಅನ್ನಿಸುತಿದ್ದ. ಆದ್ರೂ ಇವಳು ಹೀಗೆ ಹೇಳ್ತಿದ್ದಾಳೆ ಅಂದ್ರೆ? ಅಲ್ಲ, ಇವಳಿಗೆ ಅದು ಯಾವ ಜೋಡಿ ಸರಿ ಅಂತ ಅನಿಸಿದೆ ಇದುವರೆಗೆ. ಚಂದದ ಜೋಡಿ ಅಂತ ಇವಳ ಬಾಯಲ್ಲಿ ನಾನಿದುವರೆಗೂ ಕೇಳಿದ ನೆನಪೇ ಇಲ್ವಲ್ಲ ಅಂತ ಯೋಚಿಸಿ ತಲೆ ಕೊಡವಿಕೊಂಡ.
"ಏನ್ರೀ ಅದು? ಅಷ್ಟು ಸಿರೀಯಸ್ ಆಗಿ ಯೋಚನೆ ಮಾಡ್ತಿದ್ರಿ...ನಾನೇನಾದ್ರೂ ನಿಮ್ಮನ್ನ ಸೀರೆ ಸೆಲೆಕ್ಷನ್ ಮಾಡು ಅಂದ್ನಾ?".
ಸೀರೆ ಅಂದಾಕ್ಷಣ ಮೊನ್ನೆ ಮದುವೆಗೆ ಮಾಡಿದ ಶಾಪಿಂಗ್ ನಲ್ಲಿ ಕೊಟ್ಟ ತನ್ನ ಅರ್ಧ ಸಂಬಳದ ಬಿಲ್ ನೆನಪಾಗಿ, ಇನ್ನು ಸುಮ್ಮನಿದ್ದರೆ ನಿಜವಾಗಿಯೂ ಶಾಪಿಂಗ್ ಹೋಗ್ಬೇಕಾದೀತು ಅಂದುಕೊಂಡು,
"ಅಲ್ಲ ಕಣೆ, ಏನಾಗಿದೆ ಜೋಡಿಗೆ? ಎಷ್ಟು ಚಂದ ಇದ್ದಾಳೆ ಹುಡುಗಿ, ಒಳ್ಳೆ..."
ಏನೋ ಹೇಳ್ಲಿಕ್ಕೆ ಹೋಗಿ ನಾಲಿಗೆ ಕಚ್ಚಿಕೊಂಡ.
"ಆಹಹಹಹಾ...ಹುಡ್ಗಿ ಅಂದ್ರೆ ಆಯ್ತು, ಜೊಲ್ಲು ಸುರಿಸ್ತೀರಾ...ನನ್ಗೊತ್ತಿಲ್ವಾ ನಿಮ್ ಬುದ್ದಿ? ಎಲ್ಲ ಗಂಡಸರೂ ಒಂದೇ"
ಕೋಪದಲ್ಲಿ ರಜನಿ ಮುಖ ಕೆಂಪಾಯ್ತು. ಹೋ...ಹೇಳ್ಬಾರ್ದಿತ್ತು ಹಾಗೆ, ಇನ್ನು ವಿಪರೀತಕ್ಕೆ ಹೋದ್ರೆ ಕಷ್ಟ ಅಂದ್ಕೊಂಡು,
" ಅಯ್ಯೋ, ನಾನೆಲ್ಲಿ ಹಾಗಂದ್ನೇ...ಒಳ್ಳೆಯ ಜೋಡಿ ಅಂತ ಅಷ್ಟೇ ನಾನು ಹೇಳ್ಲಿಕ್ಕೆ..."
ಕೇಳುವ ತಾಳ್ಮೆ ಅವಳಿಗಿದ್ದಿದ್ದರೆ...,
" ಸಾಕು ಸಾಕು, ಬೇರೆ ಹುಡ್ಗಿಯರನ್ನು ಹೊಗಳೋದೇ ಆಯ್ತು..‌.ನನ್ನಲ್ಲಿ ಮಾತ್ರ ಸಾವಿರ ಹುಡುಕ್ತೀರಾ? ನಾನೊಬ್ಳು ಇದ್ದೇನಲ್ವಾ ನೀವು ಹೇಳಿದ್ದನ್ನು ಕೇಳ್ಕೊಂಡು ಇರ್ಲಿಕ್ಕೆ...ಏನ್ ಚಂದ ಕಂಡ್ರಿ ಅವಳಲ್ಲಿ?" ನೇರ ವೈಯಕ್ತಿಕವಾಗಿ ಬಿಟ್ಟಿತು ವಿಷಯ ರಜನಿಯ ಈ ಬಾಣದೊಂದಿಗೆ.
ಇಂತಹ ಚರ್ಚೆ ನಡೆಯುತ್ತಿರುವುದು ಇದೇ ಮೊದಲಲ್ಲ, ಮುಂದುವರೆಸಿದರೆ ಆ ದಿನ ಮತ್ತೆ ಮಾತಿಲ್ಲ.ಮೌನ ಮನೆಯ ಸಂದುಗೊಂದುಗಳಲ್ಲಿ ಆವರಿಸಿ ಅಸಹನೀಯವಾಗುತ್ತದೆ ಅನ್ನುವುದನ್ನು ತಿಳಿಯದವನೇನಲ್ಲ ಶಶಿ.ಆದರೂ ಪ್ರತೀ ಬಾರಿ ಇಂತಹ ವಿಷಯ ಬಂದಾಗ ನಾನೇಕೆ ಸುಮ್ಮನಿರಲ್ಲ ಅಂದುಕೊಂಡ ಶಶಿ,
"ಇರ್ಲಿ ಬಿಡೇ...ನನ್ನ ಕಣ್ಣಿಗೆ ಕಂಡದ್ದು ಹೇಳಿದೆ...ನಮಗ್ಯಾಕೆ ಅವರ ವಿಷಯ...?" ಅಂದರೂ  ಪಟ್ಟು ಬಿಡದ ರಜನಿ,
"ಸಾಕು ನಿಮ್ಮ ಸಮರ್ಥನೆ. ನನಗೊತ್ತಿಲ್ವಾ ನಿಮ್ಮ ವಿಷ್ಯ? ಮೊನ್ನೆ ಮದುವೆಯಲ್ಲಿ ಬಫೆ ಸಾಲಿನಲ್ಲಿ ನಿಂತಿದ್ದಾಗ ಎದುರಿನ ಹುಡ್ಗಿ ನಿಮ್ಮನ್ನು ದುರುಗುಟ್ಟಿಕೊಂಡು ನೋಡಿ ಬೇರೆ ಲೈನಿಗೆ ಹೋದ್ಳು..ಏನ್ ಮಾಡಿದ್ರಿ ನೀವು ಅವಳಿಗೆ...?".
ಈಗ ಶಶಿ ನಿಜವಾಗಿಯೂ ಗಲಿಬಿಲಿಗೊಂಡ. ಮೊನ್ನೆ ನಡೆದ ಆ ಘಟನೆ ಇವಳು ನೋಡ್ಲಿಲ್ಲ ಅಂತಾನೇ ಅಂದ್ಕೊಂಡಿದ್ದೆ. ನೋಡಿಯೂ ಇದುವರೆಗೆ ಹೇಗೆ ಸುಮ್ಮನಿದ್ದಾಳೆ ಈ ಶೀಘ್ರ ಪ್ರತಿಕ್ರಿಯೆಗಾರ್ತಿ?...ಕಬ್ಬಿಣ ಕಾದ ಸಮಯಕ್ಕೆ ಹೊಡೆಯುವ ಕಲೆ ಯಾವತ್ತು ಕಲಿತ್ಲು ಇವಳು? ಛೇ! ವಿಷಯ ಎಲ್ಲೆಲ್ಲೋ ಹೋಗ್ತಾ ಇದೆಯಲ್ಲ...ಸುಮ್ನೆ ಅವಳು ಹೇಳಿದ್ದಕ್ಕೆ, ಹೌದು;  ಜೋಡಿ ಸರಿ ಇಲ್ಲ.ಅವಳು ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅಂತಿದ್ರೆ ನನ್ನ ಗಂಟೇನು ಹೋಗ್ತಿತ್ತು? ಇನ್ನೇನೇನು ಕಾದಿದೆಯೋ? ಯೋಚಿಸುತ್ತಿರುವಾಗಲೇ ತಲೆಗೊಂದು ಮೊಟಕಿ,
" ಹೇಳ್ರೀ..." ಅಂದ್ಳು.
 "ಹೋ ಅದಾ...ಅದು ನಿನ್ನ ಮಗರಾಯ ಮಾಡಿದ್ದು.ನಾನಲ್ಲ ಕಣೆ. ಅವನನ್ನು ನಾನು ಎತ್ಕೊಂಡಿದ್ನಲ್ಲ..ಅವಳು ಎದುರು ಇದ್ಳು, ಇವನ ಕೈ ಸುಮ್ಮನಿರಬೇಕಲ್ಲ...ಅವಳು ಮುಡಿದಿದ್ದ ಗುಲಾಬಿ ಕಿತ್ತು ನನ್ನ ಕೈಗೆ ಕೊಟ್ಟ...ನಾನು ಬೇಡ, ಬೇಡ ಅನ್ನುವಷ್ಟರಲ್ಲಿ ಗುಲಾಬಿ ನನ್ನ ಕೈಯಲ್ಲಿತ್ತು. ಅವಳು ಹಿಂದೆ ನೋಡಿದಾಗ ನನ್ನ ಕೈಯಲ್ಲಿ ರೋಜ್...ನಾನು ಹೇಳಿದೆ ಅವಳಿಗೆ, ಮಗು ಮಾಡಿದ್ದು ಅಂತ. ಆದ್ರೂ ಕೇಳದೆ ಸಿಟ್ಟು ಮಾಡ್ಕೊಂಡು ಬೇರೆ ಕಡೆ ಹೋದ್ಳು...ನಾನೇನು ಮಾಡ್ಲಿ?" . ಅಂದದ್ದೇ ತಡ,
"ಛೀ... ನಾನೂ ಕೇಳ್ಬೇಕು ಅಂತನೇ ಇದ್ದೆ.ಗಡಿಬಿಡಿಯಲ್ಲಿ ಮರೆತು ಹೋದೆ.ಅಲ್ಲಾ...ಹೋಗೋವಾಗ ಎಲ್ಲೂ ಹೂ ತೆಕೊಂಡಿಲ್ಲ...ಆದರೂ ಅಲ್ಲಿ, ಆ ಊಟದ ಸಾಲಿನಲ್ಲಿ ನಂಗೆ ಹೂ ಕೊಟ್ಟಾಗ್ಲೇ ಅನುಮಾನ ಬಂತು.ಏನೋ ಕಿತಾಪತಿ ಮಾಡಿದ್ದೀರಾ ಅಂತ, ಆದ್ರೂ ಮುಡ್ಕೊಂಡೆ ನೀವು ಕೊಟ್ಟದ್ದು ಅಂತ...ಯಾರ್ಯಾರೋ ಮುಡಿದ ಹೂ ಕೊಟ್ರಲ್ಲ, ಅಸಹ್ಯ. ಇನ್ನು ಮಾತಾಡ್ಬೇಡಿ ನನ್ನತ್ರ..." ಮತ್ತೆ ಮಾತಿಗೆ ಯಾವ ಅವಕಾಶವೂ ಇಲ್ಲದ ಹಾಗೆ ತೆರೆ ಎಳೆದು ಹೋದ್ಳು.

ಮಗು ಕೈಯಲ್ಲಿ , ಎದುರಿನ ಹುಡುಗಿ ಮುಡಿದ ಹೂ ಕಿತ್ತು ಕೊಟ್ಟಾಗ ಹೆಂಡತಿಯೆದುರು ಏನೂ ಹೇಳಲು ತೋಚದೇ, ಹಾಲ್ ನ ಎಂಟ್ರೆನ್ಸ್ ನಲ್ಲಿಟ್ಟಿದ್ದ ಸ್ವಾಗತ ಕೋರುವ ಪುಟಾಣಿ ಕೊಟ್ಟದ್ದು ಅಂತ ಹೇಳಿ ಹೆಂಡತಿ ಮುಡಿಯುವಂತೆ ಮಾಡಿದ್ದ. ಅವಳಿಗೆ ಆಗ ಗೊತ್ತಿರಲಿಲ್ಲ. ಯಾರೋ ಅವಳ ಕಿವಿ ಊದಿರಬೇಕು,ಹಾಳಾಗಿಹೋಗ್ಲಿ ಎಂದು ಶಪಿಸಿದ ಶಶಿ.

ಆ ಘಟನೆ ಈಗ ಇಬ್ಬರ ಮನದಿಂದಲೂ ಮರೆಯಾಗಿದೆ.ಇಂದು ಕೂಡಾ ಶಶಿ ಒಂದು ಮದುವೆಗೆ ಹೋಗಿ ಬಂದಿದ್ದ.ಆಫೀಸಿನಿಂದ ನೇರವಾಗಿ ಹೋಗಿದ್ದರಿಂದ ಫ್ಯಾಮಿಲಿಯನ್ನು ಕರ್ಕೊಂಡು ಹೋಗಿರಲಿಲ್ಲ. ಮನೆಗೆ ಬಂದವನೇ,
"ಛೇ, ಈಗಿನ ಹುಡುಗ್ರಿಗೆ ಟೇಸ್ಟೇ ಇಲ್ಲ. ಲವ್ ಈಸ್ ಬ್ಲೈಂಡ್ ಅಂತಾರಲ್ಲ.ಸರಿಯಾಗಿ ಹೇಳಿದ್ದಾರೆ ಯಾರೋ...ಇಲ್ಲದಿದ್ರೆ".
ರಜನಿಯ ಕಿವಿ ನೇರವಾಗಿ, " ಏನ್ರೀ, ಏನಾಯ್ತು?...ಯಾರ ಬಗ್ಗೆ ಮಾತಾಡ್ತಿದ್ದೀರಿ?".
"ಮತ್ತೆ ಯಾರ ಬಗ್ಗೆ?...ಇವತ್ತಿನ ಜೋಡಿ ಬಗ್ಗೆ. ಯಾರು ಏನಾದ್ರೂ ಹೇಳ್ಲಿ, ಆದರೆ ಅವನಿಗೆ ಹೇಳಿದ ಹುಡುಗಿಯೇ ಅಲ್ಲ ಅವಳು.ಒಂದು ಬಣ್ಣ, ಒಂದು ರೂಪ...ಏನೂ ಇಲ್ಲ.ಎಷ್ಟು ಚಂದದ ಹುಡುಗ ಅವನು..." ಆಚೆ ನೋಡಿ ಹೇಳುತಿದ್ದರೂ ಶಶಿಯ ಒಂದು ಕಣ್ಣು ಹೆಂಡತಿಯ ಕಡೆಯೇ ನೆಟ್ಟಿತ್ತು.
" ಮತ್ತೆ ನಾನು ಸುಮ್ನೆನಾ ಹೇಳೋದು...ಇವತ್ತಾದ್ರೂ ಗೊತ್ತಾಯ್ತಲ್ಲ ನಿಮ್ಗೆ. ಇರಿ, ಬಿಸಿ ಬಿಸಿ ನೀರುಳ್ಳಿ ಬಜೆ ಮತ್ತು ಟೀ ತರ್ತೇನೆ..." ಅಂದು ರಜನಿ ಒಳಗೆ ಹೋದ್ಳು.

ಪ್ರೇಯಸಿಯ ಎದುರು ಕವಿಯಾದರೆ ಹಿತ; ಹೆಂಡತಿಯ ಎದುರು ಕಿವಿಯಾದರೆ ಹಿತ...ಮಾತಾಡಿ ಗೆದ್ದವರಿಲ್ಲ ಈ ಹೆಂಡತಿಯೆನ್ನುವ ಅಪ್ರಮೇಯ ಎದುರು ಅನ್ನುವ ಹೊಸ ಸತ್ಯದ ಅರಿವಾಗಿ ಸಣ್ಣದಾಗಿ ಶಿಳ್ಳೆ ಹೊಡೆದು ಬಿಸಿ ಬಿಸಿ ಟೀಗಾಗಿ ಕಾಯುತ್ತಾ ಕೂತ ಶಶಿಯ ಮುಖದಲ್ಲಿ ಗೆಲುವಿನ ಕಳೆಯಿತ್ತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕೊನೆಗೂ ನೀನು ಬರಲೇ ಇಲ್ಲ,
ನಾನಂದುಕೊಂಡಂತೆ;
ಹಾಗಾಗಿ ನನ್ನಲ್ಲಿ ಯಾವುದೇ
ದೂರುಗಳಿಲ್ಲ.

ನನ್ನೆಲ್ಲ ಇರವು ಅರಿವುಗಳನ್ನೂ
ಮೂಟೆಗಟ್ಟಿ ಎಸೆದುಬಿಟ್ಟಿದ್ದೆ
ನಿಜವಾಗಿಯೂ ಅಲ್ಲಿ
ಯಾವುದನ್ನೂ ಉಳಿಸಲಾಗಲಿಲ್ಲ.
ಹೊರಗೆ ಜಗಮಗಿಸುವ ಬೆಳಕು,
ಮುಖಗಳ‌ ಮೇಲೆ ಮಾತ್ರ
ಕುಣಿಯುವ ಕತ್ತಲು.

ಮಿಂಚೊಂದು ಹೊಳೆದಂತೆ
ಕೈಯೆತ್ತಿ ಮೊರೆಯಿಟ್ಟೆ;
ಇನ್ನೂ ಕೊನೆಯ ಅಂಕ
ಇರುವಂತೆಯೇ ಅಕ್ಷಯವಾಗುವ
ಕ್ಷಣಕ್ಕಾಗಿ ಕಾತರಿಸುತ್ತಾ.

ಇಲ್ಲ,
ಕತೆಯಾಗುವ ಯಾವುದೂ
ಮತ್ತೆ ಸಂಭವಿಸಲೇ ಇಲ್ಲ;
ಎದುರಿನ ಪ್ರೇಕ್ಷಕರೂ
ಎಂದಿನ ಪರಧಿ ದಾಟದೇ
ತಮ್ಮ ತಮ್ಮ ನಿರೀಕ್ಷೆಯಲ್ಲಿಯೇ
ಇದ್ದರು,
ಪರದೆ ಬೀಳುವವರೆಗೆ;
ಕತ್ತಲಾಗುವವರೆಗೆ.

ನನ್ನೊಳಗಿದ್ದ ಕತ್ತಲು
ಹೊರಗೂ ಆವರಿಸಿ
ನಿರಾಳಳಾದೆ;
ಎಲ್ಲಾ ಮುಗಿದ ಮೇಲಿನ
ಅವನ‌ ಭಾವದಂತೆಯೇ.

- - - - - - - - - - - - - - - - - - - - -

ಹೆಣ್ಣಿನ ಮೊರೆ ನಿನಗೆ
ತಲುಪಿದ ದಾಖಲೆಗಳು ಇಲ್ಲಿ
ಸಿಗುವುದಿಲ್ಲ;
ನಿನ್ನ ಕುರುಹುಗಳಿರದ
ತಮ್ಮದೇ ರಾಜ್ಯದಲ್ಲಿ ದುಃಶ್ಯಾಸನರು
ಸೋಲುವುದೂ ಇಲ್ಲ.

ಅವಳಿಗೆ ಮಾತ್ರ
ಅಕ್ಷಯವಾದ ಸೀರೆ
ಮತ್ತೆ ಯಾರಿಗೂ ಸಿಗಲೇ ಇಲ್ಲ;
ಅಂದು ತಲೆ ತಗ್ಗಿಸಿ ಕುಳಿತವರು
ಇಂದಿಗೂ ಎದ್ದಿಲ್ಲ,
ಬಹುಶಃ ಎಂದಿಗೂ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಎದೆನೆಲದ ಕುದಿಗೆಲ್ಲ
ಹದವಾದ ಮಳೆ ಸುರಿದು
ಮೆದುವಾಗಿ ಲವಲವಿಕೆ ಮನದ ತುಂಬ
ಮುದದಲ್ಲಿ ಮುಳುಗಿರಲು
ಚದುರಿ ಕರಿಮೋಡಗಳು
ಕದಿರೊಂದು ಬಳುಕಿತ್ತು ಚಂದ್ರ ಬಿಂಬ

ಮುಂಗುರುಳು ತುಟಿತಾಕಿ
ಕೆಂಗರುವು ಕುಣಿದಂತೆ
ಚೆಂಬವಳ ಹೊಳೆದಿತ್ತು ಕೆನ್ನೆಯಲ್ಲಿ
ಅಂಗನಾಮಣಿಯವಳು
ಸಿಂಗರದಿ ಬರುವಾಗ
ಬೆಂಗದಿರ ಕಳೆಯಿಲ್ಲ ಬಾನಿನಲ್ಲಿ

ನೋಟ ಮರೆವಾ ಚೆಲುವು
ಮಾಟಗೊಳಿಸುತಲಿರಲು
ಕೋಟೆಯರಮನೆಯೆಲ್ಲ ಬರಿದೆ ನೆನಪು
ಮೀಟಿ ಮನಸಿನ ತಂತಿ
ನಾಟ ರಾಗವು ನುಡಿಯೆ
ದಾಟಿಯೆಲ್ಲವ ಬರಿದೆ ನಿನ್ನ ವಶವು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ಸೂರ್ಯಕಿರಣಕೆ ಬಿರಿದು ನಗುತಲಿಹುದು ನೋಡು
ಮಂದಾರ ಪುಷ್ಪವು ಚೆಲುವಿನಲ್ಲಿ
ಒಲವ ಹಾಡನು ಗುನುಗಿ ಸೆಳೆವ ದುಂಬಿಯ ಕಂಡು
ಬಾಗಿಹುದು ಸಿರಿಮೊಗವು ನಾಚಿಕೆಯಲಿ

ಹೂವ ತೋಟದ ತುಂಬ ಬಣ್ಣಬಣ್ಣದ ಕನಸು
ರೆಕ್ಕೆ ಬೀಸುತ ಬಳಿಗೆ ಸುಳಿಯುವಂತೆ
ಎದೆಎದೆಯು ಒಲವಲ್ಲಿ ಕಟ್ಟಿ ಜೇನಿನ ಗೂಡು
ಹುಡುಕಿ ಹೊರಡುವ ಹೆಣ್ಣು ರಾಣಿಯಂತೆ

ಯಾರ ಕುಡಿ ನೋಟದ ನೆನಪ ಸುಳಿಯಲಿ ಸಿಲುಕಿ
ಕೆಂಪು ಕದಪಿನ ತುಂಬ ಹೊಳೆವ ಮಿಂಚು
ದೀಪಗೆಂಪಿಗೆ ಸೋತು ಮೋಹದಲಿ‌ ಉರಿವಂತೆ
ಕಣ್ಣ ಸುಳಿಯಲಿ ಇಹುದು ಬಲೆಯ ಸಂಚು

ಮೈಮನದ ತುಂಬೆಲ್ಲ ಒಲವು ಕುಡಿಯೊಡೆದಿರಲು
ಕಂಡ ಲೋಕವು ಎಲ್ಲ ನಗುವ ಹೆಣ್ಣು
ಬೋಳಾದ ಮರ ಚಿಗುರಿ ಹಸಿರು ನೆಲೆಯಾಗಿರಲು
ಹಾಡು ಹಕ್ಕಿಯು ಕುಳಿತು ತೂಗಿ ಹಣ್ಣು


ತಿರುಗಿ ಕಳೆವ ಕಾಲವನ್ನು
ಹೊರೆಯ ಹೊತ್ತು ಹಾಳುಮಾಡಿ
ಹರೆಯ ಕರಗಿತೆಂದು ಮರುಗಿ ಹಳೆಯ ಜೋಡಿಯು
ಮರೆತ ದಿನದ ನೆನಪು ಕಾಡಿ
ಕರೆದರವರು ಸಭೆಯನೊಂದು
ಸರಿದು ನೋಡುವಂತೆ ಮತ್ತೆ ಪರದೆ ತೆರೆದರು

ಹೊತ್ತು ಮುಳುಗೊ ಸಮಯದಲ್ಲಿ
ಕತ್ತು ನೇರ ಮಾಡಿನಿಂತು
ಎತ್ತ ಹೋದನೆಂದು ಪತಿಯು ದಿನವು ಕೊರಗಿಹೆ
ಮತ್ತೆ ಬರದ ಹಾದಿ ನೋಡಿ
ಅತ್ತುಗರೆದು ಮಗನ‌ ಜೊತೆಗೆ
ಸುತ್ತು ಹಾಕಿ ಪೇಟೆ ಪೂರ ನಾನು ಬಳಲಿಹೆ

ಕೇಳಿ ಸತಿಯ ಕೊಂಕು ಮಾತು
ಗೇಲಿ ಮಾಡಿದಂತೆ ತೋರಿ
ನೀಲಿ ಬಾನಿನತ್ತ ನೋಡಿ ಚಿಂತೆ ಮಾಡಲು
ತೇಲಿ ಹಳೆಯ ದಿನಗಳಲ್ಲಿ
ಕೀಳು ಜನರ ಸಂಗಮಾಡಿ
ಗೀಳು ಹತ್ತಿ ಕೆಟ್ಟೆನಂದು ಜೂಜು ಕಾಡಲು

ಎಲ್ಲ ಕೇಳಿ ಸುಮ್ಮನಿದ್ದು
ಬಿಲ್ಲು ಹೆದೆಯನೇರದಿರಲು
ಸುಳ್ಳನೆಂದು ಸತಿಯು ತನ್ನನೆಂದುಕೊಂಡರೆ
ಒಳ್ಳೆಯವರ ನಡುವಿನಲ್ಲು
ಸಲ್ಲಲಿಲ್ಲವೆಲ್ಲು ನೀನು
ಮಳ್ಳಿಯಂತೆ ಮಂದಿ‌ ನಡುವೆ ಜಗಳವಾಡಿದೆ

ಗತದ ನೆನಪು ಮಾಡಿ ಕೊಡಲು
ಕಿತಮನೆಂದು ಸಿಡುಕಿ ಮುನಿದು
ಗತಿಸಿ ಹೋದ ತಾಯ ನೆನೆದು ದೂರ ಕುಳಿತಳು
ಸತಿಯ ಕೂಡೆ ಜಗಳವಾಡಿ
ಪತಿಯು ಗೆಲುವು ಕಾಣದೆಂದು
ಹಿತದ ಮಾತು ಮತಿಗೆ ತಾಕಿ ಮುಗುಳು ನಕ್ಕನು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು