Wednesday, 5 February 2014

ರವಿಯಿ೦ದ ಸ೦ಧ್ಯೆಯವರೆಗಿನ ದಾರಿ


ದಿನಕ್ಕೆ ನೂರು ಸ೦ದೇಶ
ಹುಸಿ ಗದರಿಕೆಯೇ ಆದೇಶ
ಪ್ರೀತಿಯದು; ಸ೦ಧ್ಯೆಯ ನಶಾ,
ನಾನವಳ ನ೦ದೀಶ.

ಕೇಳದೆಯೇ ಮುತ್ತು
ಹಸಿಯದೆಯೇ ತುತ್ತು,
ಮನೆಯೇ ಸ್ವರ್ಗ; ನಾನೇ ದೇವೇ೦ದ್ರ.

ದಿನದ ಅಡುಗೆ ರುಚಿ
ನಡುವೆ ಪಾತ್ರೆಯಲ್ಲೂ ಶುಚಿ,
ನನ್ನದೇ ಅಡುಗೆ ಮನೆ; ನಾನೇ ನಳರಾಜ.

ಬಟ್ಟೆಗಳ ನಡುವೆ ನಾನೇನೆ
ಮಗುವಿನ ಡೈಪರೂ ನ೦ದೇನೇ,
ಮನೆಯೇ ಕೈಲಾಸ; ನನ್ನದೇ ಕಾಯಕ.

ಮಾತಿಗೊ೦ದು ಗುದ್ದು
ಮೌನಕ್ಕೂ ಮರು ಸದ್ದು,
ಅಡಗುತಿದೆ ಎಲ್ಲೋ ನನ್ನಿರುವು.
ವಾಸಿಯಾಗುವ ರೋಗವಲ್ಲ;
ಇದು ಹರಡುವ ಶಿಲೀ೦ದ್ರ,
ನಾನೀಗ ಕರಗುವ ರವೀ೦ದ್ರ!!!.
ಗೋರಿ ಮೇಲಿನ ಬದುಕು


ಭೂತ ಕಾಲದ ಗೋರಿಯ ಕೆದಕಿದಷ್ಟೂ
ಕನಸುಗಳು ಮಾರಾಟಕ್ಕಿವೆ.
ಎಷ್ಟು ಸಾರಿ ಕರೆದರೂ,
ಕಹಳೆ ಶ೦ಖ ಊದಿದರೂ ನಿಲ್ಲದ ಪ್ರತಿಧ್ವನಿ.
ಇದ್ದವರದ್ದೋ?;ಸತ್ತವರದ್ದೋ?.
ಚಿವುಟಿದಷ್ಟೂ ಚಿಗುರುವ,
ರಕ್ತ ಚಿಮ್ಮಿದಷ್ಟೂ ಕೊನರುವ ಜೀವನ.
ಮಾತು ಯಾರದ್ದೋ?; ಮೌನ ಯಾರದ್ದೋ?.
ಪಾಳುಬಿದ್ದ ಅರಮನೆಯ ಒಳಗೆಲ್ಲೋ,
ಅಳುವ ಕ೦ದನ ಮಾರ್ದನಿ;
ಉತ್ತರಾಧಿಕಾರಿಯ ಆಗಮನ...?,
ಕಣ್ಣ ಸನ್ನೆ ಯಾರದ್ದೋ?; ತ೦ತ್ರ ಯಾರದ್ದೋ?.
ರುಧ್ರಭೂಮಿಯಲ್ಲಿ ನಿಲ್ಲದ ರಣಕೇಕೆ.
ಹುಡುಕಿ ಹೊರಟವ ಬುದ್ಧನಾದ;
ಶಸ್ತ್ರ ತೊರೆದವ ಅಶೋಕನಾದ,
ಸೊಕ್ಕಿ ಮೆರೆದವ ರಾಜನಾಗಿದ್ದು ಮಾತ್ರ ಇತಿಹಾಸ.
ಏನು ಮೆರೆಯಿತೋ?; ಬದುಕು ಬಾಳಿತೋ?.
ಓದಲು ಸಿಕ್ಕಿದ್ದು ಬರೀ ಮುಖವಾಣಿ!.
ಗಡಿ,ಕೀರ್ತಿ,ಪೌರುಷ ಬರೀ ಭೂತಕಷ್ಟೇ,
ವರ್ತಮಾನ?, ಅದು ಬೇರೆಯೇ.
ಸಾಲು ಮರದ ಕೆಳಗೆ  ನೆರಳ ವಿಲೇವಾರಿ;
ನೆತ್ತಿ ಮೇಲೆ ಬೀಳೋ ತರಗಲೆಗಳೆಷ್ಟೋ?.
ತನ್ನವರ ನಡುವೆ ಕಳೆದು ಹೋಗೊ ಸ೦ಕಟ,
ತಿರುಗಿ ನೋಡಿದ್ದು ಸುಳ್ಳೇ?; ಬದುಕು ನಕ್ಕಿದ್ದು ಸುಳ್ಳೇ?.
ಸಾವಿರದ ಮನೆಯ ಸಾಸಿವೆ ತೀರಿದೆ,
ಅತ್ತು ಬರಿದಾದರೆ ಮತ್ತೂ ಇದೆ ಹಾಡು!.

ಸುಮ್ಮನೆ ಬಿಟ್ಟರೆ ಕಿರೀಟವೂ ವ್ಯರ್ಥ;
ಚಲಾವಣೆಯಲ್ಲಿದ್ದರೆ ಮಾತ್ರ ಹೊಸತು ಅರ್ಥ.
ಹಸಿವು ತೀರಿದ ಮೇಲೆ


ಹಸಿವು ತೀರಿದ ಮೇಲೆ
ಮತ್ತೆ,ಇನ್ನೆ೦ದೂ ಕೈಗೆ ಸಿಗದ ಹಾಗೆ,
ದೂರ ಎತ್ತಿ ಬಿಸಾಡಬೇಕು.
ಅ೦ಟಿಕೊಳ್ಳುವ ಕೃತ್ರಿಮ; ಜಾರಿಕೊಳ್ಳುವ ಅಕ್ರಮ,
ಈ ಕ್ಷಣಕ್ಕಿಷ್ಟು ಸಾಕು.
ಕಹಿಯೂ ಇಲ್ಲ,ಹೇಸಿಗೆ ಹುಟ್ಟುವ ಮುನ್ನ
ದೂರ ಎದ್ದು ನಡೆದು ಬಿಡಬೇಕು.
ಬಯಕೆ ಇತ್ತು; ತೀರಿತು.
ಎಲ್ಲಾ ತೆರೆದು ಬಟಾಬಯಲಾಗುವಲ್ಲೇ
ಮತ್ತೆ ಮುಚ್ಚಿಕೊಳ್ಳುವ ಆತುರ!.

ಆನ೦ದ; ತನ್ನ ತಾನು ಸೃಷ್ಟಿಸಿಕೊಳ್ಳದೇ?.

ಮೊಗೆ ಮೊಗೆದು ಕೊಟ್ಟೆ; ಅಷ್ಟೇ ಪಡೆದೆ?
ಇಲ್ಲ, ತನ್ನದಾಗದ ಇನ್ನೇನೋ ಇದೆ.
ಪ್ರೀತಿಯ ತೀವ್ರತೆ, ನೆನಪುಗಳ ನಡುವೆ
ಕಾಡುವ ಕೊರತೆಗಳ ನೋವು.
ಬಿಡಿ ಬಿಡಿ ಚಿತ್ರಗಳು; ಪೂರ್ಣವಾಗಲೇ ಇಲ್ಲ.

ಹಸಿವು ತೀರಿದ ಮೇಲೆ
ತಿನ್ನುವ ಆತುರವೂ ಇಲ್ಲ;
ಹಳಸಿದರೂ ಅದು ನನ್ನದಲ್ಲ.
ಫಲ

ಕನಸು ಮಾರುತ್ತಿದ್ದವನಿಗೀಗ
ಕಣ್ಣ ತುಂಬಾ ನಿದ್ದೆ ;
ಕೊಂಡವರು ಆ ಕನಸಿಗಾಗಿ
ದುಡಿಯುವ 
ಬೆವರ ಮುದ್ದೆ.
ಎರಕ

ಎಷ್ಟು ಸಾರಿ ಹೇಳೋದು ನಿನಗೆ?
ಸರಿಯಾಗಿ ನೋಡು , ಮತ್ತೆ ಮಾಡು;
ಮಾತು ಸರಿಯಿಲ್ಲ, ಮೌನ ಒಳಿತಲ್ಲ.
ಹೀಗೆ ಕೂರು,ಹಾಗೆ ನಡೆ,
ಅದು ರಕ್ಕಸ ನಗು
ಅದು ಹೆಣ್ಣಿಗ ಅಳು 
ನಮ್ಮ ಹಾಗೆ ಆಗೋದು ಯಾವಾಗ?

ಅವನು ಹೇಗಿದ್ದಾನೆ ನೋಡು ,
ಅವನಂತೆ ನೀನಾಗು.
ಗುಬ್ಬಚ್ಚಿಗಳ ಹಿಂಡಲ್ಲೇ
ಹೊಟ್ಟೆ ತುಂಬೀತೇ?
ಕನಸು ಕಂಡಿದ್ದು ಸಾಕು.

ತಾನೆ ತಾನಾಗಿ ಅರಳುತ್ತಿದ್ದ 'ಅವನು',
ಮತ್ತೆ ಮೊಗ್ಗಾಗಿ 'ಲೋಕ ನೋಡಿ'
ಕಲಿತಿದ್ದ, ಸುಶಿಕ್ಷಿತನಾಗಿದ್ದ.
ತನಗೆಂದೇ ಸಿದ್ದವಾದ ಮುಖವಾಡ ಧರಿಸಿ ಎಲ್ಲರೊಳಗೊಂದಾದ.
ತನ್ನ ತಪ್ಪು ತಿದ್ದಿದ, ಬೆಳೆದ
ಹೊಸ ಜೀವ, ಮತ್ತಷ್ಟು ಮುಖವಾಡಗಳು ;
ತನ್ನ ಕೈಯಿಂದ ಸಿದ್ಧಗೊಂಡ
ಧನ್ಯಭಾವ 'ಅವನಿಗೆ'.

ಬೆರೆಸಿ ಕಲಸಿ ಹದಗೊಂಡ
ಹಸಿ ಮಣ್ಣು ಲೋಕದ
ಎರಕದಲ್ಲಿ ಮಡಿಕೆಯಾಗುತಿತ್ತು.
ಸದ್ದಿಲ್ಲದೆ ಅರಳುತ್ತಾ ,ಬಾಡುತ್ತಾ ಉದುರುತ್ತಾ ಮತ್ತೆ ಮೊಗ್ಗಾಗುತಿದ್ದ
ಪಾರಿಜಾತ ಸುಖವಾಗಿ ನಗುತಿತ್ತು.
ಆಸೆ

ಆಸೆಯನ್ನೇ ತ್ಯಜಿಸಿ
ಬುದ್ಧನಾದವನೆದುರು
ಆಸೆಕಂಗಳ ಹುಡುಗಿ 
ತನ್ನ ಆಸೆಯ ಪೂರೈಕೆಗಾಗಿ 
ಪ್ರಾರ್ಥಿಸಿದಳು!
ಹಂತ 

ನಿದ್ದೆಯಿರದ ರಾತ್ರಿಗಳಲ್ಲಿ ಕನಸುಗಳನ್ನು ಕರೆಯುತ್ತೇನೆ,
ಕತ್ತಲು ಮುಗಿದು ಬೆಳಕು ಇಣುಕುವ ಮೊದಲು
ಕಣ್ಣು ತೆರೆದೇ ಮಲಗುತ್ತೇನೆ.
ಅವಳು ಹೂವಾಗಿ ಅರಳಿದ್ದು,
ನಾನು ಮಳೆಯಾಗಿ ಇಳಿದದ್ದು,
ಕನಸಲ್ಲಿ ನೆನಪಾಗಿ ಬಯಕೆ ಚಿಗುರುವಲ್ಲಿ 
ಕಾತರದಿಂದ ಕಾಯುತ್ತೇನೆ.
ಮಣ್ಣ ಕಣ ಕಣ ಪ್ರೀತಿಯ ಮುಚ್ಚಟೆಯಲ್ಲಿ
ಹೊಸ ಬೀಜ ಗರ್ಭ ಕಟ್ಟಿ ;
ಬೆಳೆದು ಬೇಲಿ ಜಿಗಿದು,
ಕತ್ತಲು ಬೆಳೆದು ಬೆಳಕಿಗೆ ಮೈ ಒಡ್ಡುವಲ್ಲಿ
ಎಚ್ಚರವಾಗೇ ಕನಲುತ್ತೇನೆ.
ಕತ್ತಲೂ ಸಾಯುವುದು ಬಯಸುವುದಿಲ್ಲ;
ಅದಕ್ಕೆಂದೇ ಬೆಳಕಿಗೆ ದೀಪವಿಡುತ್ತೇನೆ.
ರೆಕ್ಕೆ ಬಂದ ಹಕ್ಕಿ ಗೂಡು ಕಟ್ಟಿ ,
ಹಾರಲು ಕಲಿಸಿದವರನ್ನು ಹಂಗಿಸಿ ಹಾರುವಲ್ಲಿ,
ಖುಷಿಯಿಂದ ಕೇಕೆ ಹಾಕುತ್ತೇನೆ;
ಬೇರು ಕಡಿದ ಹಾರಾಟ ಕಂಡು
ಕೈ ಬೀಸುತ್ತೇನೆ.
ಮರಳದವರನ್ನು ಕಾಯುತ್ತಾ
ಬೇರಿಗೆ ಅಂಟಿದವರನ್ನು ಕರೆದು ಕೂರಿಸುತ್ತೇನೆ,
ಕನಸಿನ ಮೂಲೆಯಲ್ಲಿ ಸುಮ್ಮನೆ ನಗುತ್ತೇನೆ.
ಚಕ್ರ ಉರುಳಾಗಿ, ಬಯಕೆ ಬೆವರಾಗಿ;
ಹೊಸ ಜೀವ ಕದಲಿದಂತೆ,
ನೋವ ಬಸುರಿನಲ್ಲಿ ಕ್ಷಣದ ನಲಿವು!.
ತಿರುಗಿ ನೋಡಲು ಹೆದರುತ್ತಾ,
ಕನಸುಗಳಲ್ಲಿ ನಾನು ಸಾಕ್ಷಿಯಾಗುತ್ತೇನೆ.


ನಗುತ್ತೇನೆ,ಅಳುತ್ತೇನೆ, ಮಾತು ಒಡೆದು
ಮೌನವಾಗಿ ಮಲಗುತ್ತೇನೆ.
ಮತ್ತೆ ಎಲ್ಲವೂ ಕನಸೆಂದು
ಫಕ್ಕನೇ ಚೀರಿ ಎಚ್ಚರಗೊಳ್ಳುತ್ತೇನೆ.