Tuesday 18 November 2014

ಉರಿದು ಉರಿಸುವುದೆಂದರೆ
ಬಹುಶಃ ಇದೇ ಇರಬೇಕು.
 ಅಲ್ಲಿಯೇ ನಿಂತು ನಗುತ್ತಿಯ,
ನಿನಗದೇ ಸುಖ ಅನ್ನಿಸಿದರೆ
ಅಲ್ಲಿಯೇ ಇರು,
ನನ್ನ ಒತ್ತಾಯವೇನೂ ಇಲ್ಲ.
ದೀಪದ ಮೋಹಕ್ಕೆ
ಹಾರುವ ಪತಂಗವನ್ನೇನೂ
ನಾನು ತಡೆಯುವುದಿಲ್ಲ.
ತನ್ನ ಮಿತಿಯ ಮೀರದ ಮಾತಿನೊಂದಿಗೆ
ನನ್ನ ಮೌನಕ್ಕೂ ಅಸಹನೆ ಇದೆ.

ಹಸಿರ ಬಯಲಿನಲ್ಲಿ
ಜಿಂಕೆಗಳು ಸರಸವಾಡುವಾಗ,
ಮನೆಗೇ ಕರೆದುಕೊಂಡು ಬರಬೇಕು
ಅಂತ ನನಗೂ ಅನ್ನಿಸುವುದುಂಟು.
ಮರುಕ್ಷಣವೇ ಹಸಿರಿನ ನೆನಪಾಗುವುದು.
ನನ್ನ ಮನೆಯ ಮರುಭೂಮಿಯಲ್ಲಿ
ಬಹುಶಃ ಅವು ಬದುಕಲಾರವು.
ಮರುಕ್ಷಣ ಅವುಗಳ ಸರಸ ಕಂಡು
ಖಿನ್ನನಾಗಿ ವಾಪಸಾಗುತ್ತೇನೆ.

ಹೀಗೂ ಇರಬಹುದಿತ್ತು
ಒಂದರೊಳಗೊಂದು ಬೆಸೆದುಕೊಂಡು
ಆಲದ ಮರದಲ್ಲಿ ಕೂರುವ ಹಕ್ಕಿಗಳಂತೆ.
ಬೇಡನೊಬ್ಬ ಕಲ್ಲು ಹೊಡೆದರೆ
ಪುರ್ರನೆ ಹಾರಿ; ತಿರುಗಿ ಮತ್ತೆ
ಬಂದು ಕೂಡುವಂತೆ.
ನಗುವ ಚಿಲಿಪಿಲಿ ಸದ್ದಲಿ
ಬೇಡ, ಕಲ್ಲು ಎರಡೂ ಮರೆವಂತೆ.
ಯಾಕೆ ಕಲ್ಲನ್ನೇ ನೆಪ ಮಾಡಿ
ದೂರ ಕುಳಿತೆ?.

ಮಾತಿನ ನಿರೀಕ್ಷೆ ಇದ್ದಲ್ಲೇ
ಮೌನಕ್ಕೆ ಮೊರೆ ಹೋಗುವ
ನನ್ನ ಹೇಡಿ ಮನಸ್ಸಿನ ಬಗೆಗೆ
ನನಗೂ ಕೋಪವಿದೆ.
ಕೋಪ ಕಳೆದು ಬೆಳಕಾದಾಗ
ನಿರಾಳಗೊಳ್ಳುತ್ತೇನೆ.
ಗೆಲ್ಲಿಸದಿದ್ದರೂ ನನ್ನನ್ನು ಸಾಯಿಸುವುದಿಲ್ಲ.
ಮತ್ತೆ ಬದುಕು ಯಥಾ ಪ್ರಕಾರ ಸಾಗುತ್ತದೆ.
ನನ್ನ ಈ ಮನಸ್ಸಿನ ಬಗ್ಗೆ ಯೋಚಿಸಿದಷ್ಟೂ
ಪ್ರೀತಿ ಉಕ್ಕುತ್ತದೆ.

Thursday 13 November 2014

ಮಗಳೇ
ಮರಳದಂಡೆಯ ಮೇಲೆ
ಹೇಗೆ ಕಟ್ಟಲಿ ಮನೆ?
ಇಟ್ಟಿಗೆ ಇಲ್ಲದ,
ಹೆಂಚು ಹಾಕಲಾಗದ ಮನೆ.
ನಿನ್ನ ಕಾಲನ್ನು ಒಳಗಿಟ್ಟು
ಮೇಲೆ ಮರಳ ರಾಶಿಯ ಸುರಿದು
ಕೈಯಿಂದ ಒತ್ತಿ ಮಾಡಿದ ಮನೆಯನ್ನೇ ಕೆಡವುತಿದ್ದಿ,
ಕೈತಟ್ಟಿ ನಗುತ್ತಿದ್ದಿ,
ಎಷ್ಟೊಂದು ಮುಗುದೆ ನೀನು?
ನಿನಗಿನ್ನೂ ಅರ್ಥವಾಗುತ್ತಿಲ್ಲ,
ಹೊರಗೆ ಬಂದು ಬಂದು
ಬಯಲು ಕಾಣುವ ಆತುರದಲ್ಲಿ
ಮನೆಯನ್ನು ಕೆಡವಿ ಪಿಳಿ ಪಳಿ ನೋಡುತ್ತಿದ್ದಿ.
ಹೇಗೆ ಕಟ್ಟಲಿ ಮನೆ?

ನೋಡು ಮೇಲೆ ಎಷ್ಟೊಂದು ಹದ್ದುಗಳು
ಹಾರುತ್ತಿವೆ,ಕುಕ್ಕಲು ನೋಡುತ್ತಿವೆ;
ಅವುಗಳ ಕಣ್ಣಿಂದ ನಿನ್ನ
ಬಚ್ಚಿಡಬೇಕು.
ಅಲೆಗಳು ದಂಡೆಯ ಮೇಲೆಯೇ
ನುಗ್ಗುತ್ತಿವೆ,
ನಿನ್ನ ಪಾದ ಸೋಕಬಾರದು.
ಜಗದ ಕಪ್ಪು ಕನ್ನಡಕದೊಳಗಿನ
ದೃಷ್ಟಿ ಹೇಗಿದೆಯೋ?
ಸೂರ್ಯನೂ ಇಣಿಕುತ್ತಾನೆ
ಮೋಡದ ಮರೆಯಿಂದ.
ಬೆಳಕನ್ನು ಕಂಡು ಸಂಭ್ರಮಿಸುವುದೋ,
ನೆರಳಿಗೆ ಹೆದರುವುದೋ,
ಅರಿವಾಗುತ್ತಿಲ್ಲ.

ಸ್ವಲ್ಪ ಸುಮ್ಮನಿರು
ಮನೆ ಕಟ್ಟುವವರೆಗೂ
ಬಾಗಿಲು ಹಾಕುವವರೆಗೂ.