ಬದುಕು
ಬದುಕು, ಹಾಗಂದರೇನು?
ನೋವು ನಲಿವಿನ ಮಿಶ್ರಣವೇ?
ನಿನ್ನೆ ಕಂಡ, ನಾಳೆ ಕಾಣದ
ವರ್ತಮಾನದ ಸಮಸ್ಯೆಯೇ?
ಜಾತಿ,ಮತ,ಧರ್ಮದ ಭದ್ರ ಗೋಡೆಯ
ನಡುವೆ ತನ್ನತನವ
ಮರೆಯುವ ಪಂಜರವೇ?
ಅಥವಾ
ಕಾಲದ ಸರಳುಗಳ ಹಿಂದೆ
ಬಂಧಿಯಾಗಿ ನರಳಿ
ಬೆಳಕು ಕಾಣುವ ನೀರೀಕ್ಷೆಯೇ?
ಅರ್ಥವಾಗುತ್ತಿಲ್ಲ;
ಹಾಗಾದರೆ ಮತ್ತೇನು?
ಜನನ ಮರಣಗಳ ನಡುವೆ
ಸಾಗುವ ಕವಲು ದಾರಿ,
ನಡುವೆ ಅದೆಷ್ಟೋ ತಿರುವುಗಳು;
ದಾರಿಯ ಆಯ್ಕೆ ಮಾತ್ರ
ಅವರವರಿಗೆ ಬಿಟ್ಟಿದ್ದು,
ಅವರವರ ಬುದ್ದಿಗೆ ತೋಚಿದ ಹಾಗೆ.
ಅಲ್ಲ, ನಮಗ್ಯಾಕೆ ಬೇಕು ಬದುಕಿನ
ಅರ್ಥ ಹುಡುಕುವ ಸಾಹಸ?
ಬನ್ನಿ, ಮೊದಲು
ಬದುಕಲು ಕಲಿಯೋಣ; ಏನಂತೀರಿ?.
No comments:
Post a Comment