Saturday 11 July 2015

ಇತ್ತೀಚೆಗೆ ಯಾಕೋ ಗೊತ್ತಿಲ್ಲ
ಕನ್ನಡಿಯ ಎದುರು ನಿಲ್ಲುವಾಗೆಲ್ಲಾ
ಗಲಿಬಿಲಿಗೊಳ್ಳುತ್ತೇನೆ,
ಅಲ್ಲಿ ಕಾಣುವ ನನ್ನದಲ್ಲದ ಬಿಂಬ
ಸಿಡುಕು ಮುಖ;ನಗುವಿಲ್ಲದ ಗೆರೆಗಳು
ಗಾಯದ ಕಲೆಗಳು;ಚಂಚಲ ಕಣ್ಣುಗಳಲ್ಲಿ
ನನ್ನನ್ನು ಕಾಣದೇ ಹತಾಶೆಗೊಳ್ಳುತ್ತೇನೆ.

ನಾನು ಕಂಡ ರೂಪ ಯಾರದ್ದು?
ಹೊರಗೆ ನಿಂತಿರುವ
ನಾನು ಯಾರು?
ಎಲ್ಲವೂ ಗೋಜಲು.
ಅದು ನಾನಲ್ಲ; ನಾನೆ?
ಅಥವಾ
ಮುಖವಾಡಗಳ ಮೊರೆಹೋಗಿದ್ದೇನಾ?
ಬರಿಯ ಪ್ರಶ್ನೆಗಳು.

ಬದುಕಿನಲ್ಲಿ ಕಳೆದುಹೋಗಿ
ಬಯಲನ್ನು ಮರೆತ
ನನ್ನ ಪರಿಚಯವೇ ನನಗಿಲ್ಲ.
ಇನ್ನು ಲೋಕಕ್ಕೆ ಹೇಗೆ ಹೇಳಲಿ
ನನ್ನ ಬಗ್ಗೆ?
ನೀರಿನಲ್ಲಿ ಕಲಸಿ ಹೋದ
ನೂರು ಬಣ್ಣಗಳಲ್ಲಿ
ನನ್ನ ಮೂಲ ಯಾವುದು?

ಜರಡಿಯಲ್ಲಿ ಸೋಸಿದರೂ
ಬಣ್ಣದ ನೀರು ಸೋರಿ ಹೋಗುತ್ತಿದೆ.

ಲೋಕದ ಕಣ್ಣಿನಲ್ಲಿ
ನನ್ನನ್ನು ನೋಡಿ ಸುಸ್ತಾಗಿದ್ದೇನೆ;
ಸರಿಗಳ ಸಿದ್ಧ ಮಾದರಿಗಳಿಗೆ
ಹಲವು ಬಾರಿ
ರೂಪಾಂತರಗೊಂಡಿದ್ದೇನೆ.

ನನ್ನನ್ನು ಕಾಣಲು
ಮನೆಯಲ್ಲಿನ ಕನ್ನಡಿ ಸಾಲುತ್ತಿಲ್ಲ;
ಲೋಕದ ಕಣ್ಣಿನ ಪೊರೆ ಸರಿಸಿ
ನನ್ನೊಳಗನ್ನು ತೋರಿಸುವ
ಕನ್ನಡಿ ಇಲ್ಲಿ ಸಿಗುತ್ತಿಲ್ಲ.



No comments:

Post a Comment