Saturday 19 May 2018

#ಹೊಸವರ್ಷದ
#RESOLUTION

ಏನೂ ಕೆಲಸವಿಲ್ಲದೇ ಸುಮ್ಮನೇ ಕುಳಿತ ತಕ್ಷಣ ಮನಸ್ಸು ನನ್ನ ಮಾತು ಕೇಳದೇ ನನ್ನನ್ನೇ ಆಳಲು ಶುರು ಮಾಡಿಬಿಡುತ್ತದೆ .ಅಲ್ಲಿಯವರೆಗೆ ನನ್ನ ಅಧೀನದಲ್ಲಿದೆ ಅಥವಾ ಅಂತದ್ದೇನೂ ಇಲ್ಲವೇ ಇಲ್ಲ ಅನ್ನುವ ರೀತಿಯಲ್ಲಿ ಅಗೋಚರವಾಗಿದ್ದು ಬಿಡುವ ಈ ಮನಸ್ಸೆಂಬ ಮಾಯಾ ಜಿಂಕೆ ಕ್ಷಣ ಸುಮ್ಮನೆ ಕುಳಿತೆ ಎಂದರೆ ಅದಕ್ಕೆ ಸಹಿಸ್ಲಿಕ್ಕೇ ಆಗಲ್ಲ.ಆದರೂ ಆ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸುವುದಿಲ್ಲ ನಾನು. ಆ ಅರ್ಜುನನಿಗೇ ತನ್ನ ಮನಸ್ಸನ್ನು ಕಂಟ್ರೋಲ್ ಮಾಡ್ಲಿಕ್ಕೆ ಕೃಷ್ಣನ ಗೀತೋಪದೇಶ ಬೇಕಾಯ್ತು ಅನ್ನುವಾಗ ಇನ್ನು ನನ್ನಂತವರ ಪಾಡೇನು? ವಿಷಯ ಅದಲ್ಲ.ನನಗೆ ಬೇಕಾದ ವಿಷಯಗಳತ್ತ ನನ್ನನ್ನು ಕರೆದೊಯ್ದು ನನಗೆ ಬೇಕಾದವರೊಂದಿಗೇ ತಂದು ನಿಲ್ಲಿಸಿದ್ರೆ ಈ ಮನಸ್ಸಿನ ಯಾವ ವ್ಯವಹಾರಗಳ ಕುರಿತೂ ನನ್ನ ತಕರಾರೇನೂ ಇಲ್ಲ. ಹಾಗೆಯೇ ಹಗಲುಗನಸುಗಳಲ್ಲಿ ವಿಹರಿಸುವುದೆಂದರೆ ನನಗೂ ಬಹಳ ಇಷ್ಟದ ಸಂಗತಿ. ಆದರೆ ಹಾಗೆ ಎಂದಿಗೂ ನಡೆಯುವುದೇ ಇಲ್ಲ. ನನಗೆ ಇಷ್ಟವಾಗದೇ ಬದಿಗಿರಿಸಿದ ವಿಷಯಗಳು, ಮಾಡದೇ ಉಳಿದಿರುವ ಬೆಟ್ಟದಷ್ಟು ಕೆಲಸಗಳು, ಕನಸಿನಲ್ಲೂ ಕನವರಿಸದೇ ಇರುವ ನಾರುವ ಸಂಬಂಧಗಳು, ಹೂತಿಟ್ಟಿರುವ ಕಿರಿಕಿರಿ ನೆನಪುಗಳು....ಉಫ್! ಈ ಮನಸ್ಸೆಂಬ ಹಿತಶತ್ರು ಹೆಕ್ಕಿ ತರುವ ನೆನಪುಗಳು ಒಂದೆರಡೇ? ಯಾಕಾದರೂ ಖಾಲಿ ಕೂತೆನೋ ಅನ್ನುವಷ್ಟರ ಮಟ್ಟಿಗೆ ನನ್ನ ಭಾವನೆಗಳನ್ನು ಕಲಕಿಬಿಡುತ್ತದೆ. ಆದರೂ ಈ ಬಾರಿಯ ನೆನಪು ಅಷ್ಟೊಂದು ಬೇಸರವನ್ನುಂಟು ಮಾಡಲಿಲ್ಲ.ಬದಲಿಗೆ ತುಟಿಂಚಿನಲ್ಲಿ ಸಣ್ಣ ನಗೆಯೊಂದು ಮೂಡಿ ಆಹ್ಲಾದವನ್ನುಂಟು ಮಾಡಿತು.

ಹೊಸವರ್ಷ ಇನ್ನೇನು ಹೊಸ್ತಿಲಲ್ಲಿ ಬಂದು ನಿಂತಿದೆ.ಮತ್ತೊಂದು ವರ್ಷ ಬದುಕಿನ ಮಗ್ಗುಲು ತಿರುಗಿದ್ದು ಬಿಟ್ಟರೆ ಈಗೀಗ ನನಗೆ ಅಂತಹ ಹೊಸತೇನನ್ನೂ ಹೊತ್ತುಕೊಂಡು ಬರುತ್ತಿಲ್ಲ ಈ ಹೊಸ ವರುಷದ ಪರಿಕಲ್ಪನೆ.ಆದರೂ ಕೆಲವರಿಗೆ ಇವೆಲ್ಲಾ ಬಹಳ ಸಂಭ್ರಮದ ಕ್ಷಣಗಳಾದರೆ, ಹಲವರಿಗೆ ನಡೆದು ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡುವ ಮತ್ತು ಎಲ್ಲವನ್ನೂ ಮೆಲುಕು ಹಾಕುತ್ತಾ ಹೊಸ ಯೋಜನೆಗಳನ್ನು ಹಾಕಿಕೊಳ್ಳುವ ಒಂದು ನಿಲ್ದಾಣ.ಹಾಗಂತ ಈ ಹುಚ್ಚು ನನಗೂ ಇರಲಿಲ್ಲವೆಂದಲ್ಲ.
ಒಂದಾನೊಂದು ಕಾಲದಲ್ಲಿ ನಾನು ಮಾಡಿದ ಅಂತಹ ಒಂದು ಭಯಂಕರವಾಗಿ ಪ್ಲಾನು ಹೊಸ ವರ್ಷಗಳ ಹೊಸ್ತಿಲಲ್ಲಿ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ.

ಆ ವರ್ಷದ ಜನವರಿ ಒಂದರ ಮೊದಲೇ ಹಲವಾರು ಯೋಜನೆಗಳ ಬಗ್ಗೆ ನನ್ನಲ್ಲಿಯೇ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೆ. ಈ ವರ್ಷದ ಅಂತ್ಯದೊಳಗೆ ಈ ಒಂದು ವಿಷಯದಲ್ಲಾದರೂ ಅಪ್ರತಿಮ ಸಾಧನೆ ಮಾಡಬೇಕು, ಎಕ್ಸೆಲ್ ಆಗಬೇಕು ಅನ್ನುವ ಧೃಡ ನಿರ್ಧಾರವನ್ನು ಮಾಡಿಕೊಂಡಿದ್ದೆ.ಆ ದಿನಗಳಲ್ಲಿ ನಾನು ಕ್ರಿಕೆಟನ್ನು ಭಯಂಕರವಾಗಿ ಹಚ್ಚಿಕೊಂಡಿದ್ದೆ. ಒಂದು ರೀತಿಯಲ್ಲಿ ಈಟ್ ಕ್ರಿಕೆಟ್; ಡ್ರೀಮ್ ಕ್ರಿಕೆಟ್ ತರಹ! ಮತ್ತು ಆ ವರ್ಷ ಕ್ರಿಕೆಟ್ ನಲ್ಲಿ ಬಹಳ‌ ಒಳ್ಳೆಯ ಫಾರ್ಮ್ ನಲ್ಲಿಯೂ ಇದ್ದೆ ನಾನು ಆಡಿದ ಪಂದ್ಯಗಳಲ್ಲಿ. ಈ ಸಾರಿ ಏನೇ ಆಗಲಿ, ಜಿಲ್ಲಾ ಕ್ರಿಕೆಟ್ ಟೀಂಗೆ ಸೆಲೆಕ್ಟ್ ಆಗಲೇಬೇಕು ಅನ್ನುವುದೇ ನನ್ನ ಆ ವರ್ಷದ ಅಲ್ಟಿಮೇಟ್ ಗೋಲ್ ಆಗಿ‌ ಸೆಟ್ ಮಾಡಿದೆ. ಸರಿ ಅದನ್ನು ಸಾಧಿಸಿಯೇ ಬಿಡಬೇಕು ಅನ್ನುವ ಹುಮ್ಮಸ್ಸಿನಲ್ಲಿ ಮೂರು ತಿಂಗಳ ಕೋಚಿಂಗ್ ನ್ನು ಸೇರಿಯೇ ಬಿಟ್ಟೆ. ಬೆಳಿಗ್ಗೆ ಬೇಗನೇ ಎದ್ದು ಒಂದು ಗಂಟೆ ಜಾಗಿಂಗ್ ಮಾಡಿದ ನಂತರ ಕೋಚಿಂಗ್ ಸೆಂಟರ್. ಅಲ್ಲಿ ನನ್ನ ವೇಗದ ಬೌಲಿಂಗ್ ನ ತರಬೇತಿ. ನೆಟ್ಸ್ ನಲ್ಲಿ ಬಹಳ ಪರಿಶ್ರಮ ಮಾಡಿದೆ. ಇನ್ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಗಳನ್ನು ಕಲಿಯಲು ಶ್ರೀನಾಥ್, ಮೆಕ್ ಗ್ರಾಥ್, ಅಕ್ರಮ್ ರ ಬೌಲಿಂಗ್ ವಿಡಿಯೋಗಳನ್ನು ನೋಡುವುದು, ಸಾಧ್ಯವಾದ ಎಲ್ಲಾ ಮ್ಯಾಚ್ ಗಳನ್ನು ನೋಡುವುದು...ವಿಕ್ರಂ ರಾಥೋಡ್, ಸಿದ್ಧು ಓಪನಿಂಗ್ ಮಾಡುತ್ತಿದ್ದ ಅತ್ಯಂತ ರನ್ ಬರ ಇದ್ದ ಟೆಸ್ಟ್ ಮ್ಯಾಚ್ ಗಳನ್ನೂ ಬಿಡದೇ ನೋಡಿದ್ದೇನೆಂದರೆ...ಈಗ ಕಲ್ಪನೆಗೂ ನಿಲುಕದ್ದು. ಅಬ್ಭಾ! ಅದೇನು ಡೆಡಿಕೇಶನ್. ಜಿಲ್ಲಾ ಕ್ರಿಕೆಟ್ ಗೆ ಸೆಲೆಕ್ಟ್ ಆಗಿ ಮುಂದೆ ಇಂಡಿಯಾ ಟೀಮ್ ನಲ್ಲಿ ಆಡಿ ಮ್ಯಾಚ್ ಗೆಲ್ಲಿಸಿದಂತಹ ಅದೆಷ್ಟು ಕನಸುಗಳು! ಕಾಲೇಜ್ ಗೆ ಹೋಗುವಾಗ ಬರುವಾಗಲೆಲ್ಲಾ ಬೌಲಿಂಗ್ ಮಾಡುತ್ತಾ ಒಂದಷ್ಟು ದೂರಕ್ಕೆ ಓಡುವ ವಿಚಿತ್ರ ಚಟ ಬೇರೆ ಬೆಳೆದುಬಿಟ್ಟಿತ್ತು.

ಅಂತೂ ಕೊನೆಗೆ ಆ ಸೆಲೆಕ್ಷನ್ ದಿನವೂ ಬಂತು. ಬೇಗನೇ ಎದ್ದು ಚೆನ್ನಾಗಿ ಬೌಲಿಂಗ್ ಪ್ರಾಕ್ಟೀಸ್ ಮಾಡಿ, ಹತ್ತಿರವಿದ್ದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆಮಾಡಿಸಿ, ಸೆಲೆಕ್ಟ್ ಆದರೆ ಶಿವನ ಪಕ್ಕದಲ್ಲಿಯೇ ಪ್ರತಿಷ್ಠಿತರಾಗಿದ್ದ ವಿಘ್ನ ವಿನಾಯಕನಿಗೆ ನೂರು ತೆಂಗಿನಕಾಯಿಯ ಮೂಡುಗಣಪತಿ ಸೇವೆ ಮಾಡಿಸುವ ಹರಕೆ ಹೊತ್ತು ಸೆಲೆಕ್ಷನ್ ಕ್ಯಾಂಪನ್ನು ಸೇರಿದೆ. ಬಂದು ನೋಡಿದರೆ ಯಾವುದೋ ದೊಡ್ಡ ಸಮುದ್ರಕ್ಕೆ ಬಂದ ಹಾಗಿನ ಅನುಭವ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮುಗಿದ ಆ ಸೆಲೆಕ್ಷನ್ ಇನ್ನೂ ಯಾವುದೋ ಅಪೂರ್ಣ ಕನಸಿನಿಂದ ಎದ್ದು ಕುಳಿತ ಹಾಗಿದೆ. ಹಲವು ಸುತ್ತಗಳಲ್ಲಿದ್ದ ಆ ಸೆಲೆಕ್ಷನ್ ನನ್ನನ್ನು ಬಹಳ ಬಳಲಿಸಲಿಲ್ಲ! ಒಂದನೇ ಸುತ್ತಿನಲ್ಲಿಯೇ ಅತ್ಯಂತ ಗೌರವಪೂರ್ವಕವಾಗಿ ಹೊರನಡೆದ ನನ್ನಲ್ಲಿ ಇದ್ದ ಭಾವ ಸಿಟ್ಟೋ, ಅಸೂಯೆಯೋ ಅಥವಾ ಹತಾಶೆಯೋ ತಿಳಿಯಲಿಲ್ಲ.ನನ್ನನ್ನು ಅಪ್ರತಿಮ ಕ್ರಿಕೆಟರ್ ಮಾಡುತ್ತೇನೆಂದು ನನಗೇ ಮತ್ತೆ ಮತ್ತೆ ಸುಪ್ತವಾಗಿ ಭರವಸೆಯನ್ನು ಕೊಟ್ಟ ಬದುಕು ಯಾಕೆ ಹೀಗೆ ಮಾಡಿತು? ಈ ಬದುಕಿನ ಗುರು ಮಾಡಿದ್ದು ಸರಿಯೇ? ನನಗೆ ಮಾತ್ರ ಈ ಆಟದ ರಹಸ್ಯಗಳನ್ನು ಕಲಿಸುತ್ತೇನೆಂದ ಈ ಗುರು ನನಗೆ ಗೊತ್ತಿಲ್ಲದೇನೇ ಎಷ್ಟೊಂದು ಜನರಿಗೆ ನನಗಿಂತ ಚೆನ್ನಾಗಿ ಕಲಿಸಿದೆ? ಯಾಕೆ ಹೀಗೆ ನಂಬಿಕೆ ದ್ರೋಹ ನನ್ನ ಜೊತೆಗೆ?
ಇಂತಹುದೇ ಸಮಸ್ಯೆ ಎದುರಾದಾಗ ಹೇಗೆ ಅರ್ಜುನ ಗುರು ದ್ರೋಣಾಚಾರ್ಯರಿಗೆ ದಂಬಾಲುಬಿದ್ದು ಏಕಲವ್ಯನ ಹೆಬ್ಬೆರಳು ಕಿತ್ತುಕೊಂಡ ಗುರುದಕ್ಷಿಣೆಯ ನೆಪದಲ್ಲಿ? ನನಗಿಂತ ಚೆನ್ನಾಗಿ ಬೌಲಿಂಗ್ ಮಾಡಿದ ಎಲ್ಲರ ಹೆಬ್ಬೆರಳನ್ನೂ ಕಿತ್ತು ನನಗೆ ನ್ಯಾಯ ದೊರಕಿಸಬೇಕಾದ ನನ್ನ ಬದುಕಿನ ಗುರು ಮಾತ್ರ ಕೊನೆಗೂ ದ್ರೋಣಾಚಾರ್ಯನಾಗಲೇ ಇಲ್ಲ. ನಾನು ಮಾತ್ರ ಅಲ್ಲಿಯೇ ಉಳಿದೆ ನನ್ನ ಬದುಕಿನ ಕೊನೆಯ ಸೆಲೆಕ್ಷನ್ ಕ್ಯಾಂಪ್ ನ ಹೊರಬಾಗಿಲ್ಲಿ!

ನಿರಾಸೆಯನ್ನೇ ಹೊದ್ದು ಮನೆಯ ಮೆಟ್ಟಿಲು ಏರುತ್ತಿದ್ದಾಗ ಎಲೆ ಅಡಕೆ ಜಗಿಯುತ್ತಾ ನಿರಾಳವಾಗಿ ಕೂತಿದ್ದ ಅಪ್ಪ ರಿಸಲ್ಟ್ ನ್ನು ಈ ಮೊದಲೇ ಊಹಿಸಿದ್ದ ಹಾಗೆ ತಣ್ಣನೆಯ ದನಿಯಲ್ಲಿ "ಬ್ಯಾಟ್ ಧರ್ಲೆರ್ ಪೋಟ್ ಭರತ್ ನಾಹಿ ರೇ; ಕಾಯ್ ತರೀ ವ್ಯಾಪ್ತ್ ಕರ್ಲೆವೆ ( ಬ್ಯಾಟ್ ಹಿಡಿದರೆ ಹೊಟ್ಟೆ ತಂಬಲ್ಲ ಕಣೋ; ಚೆನ್ನಾಗ್ ಓದಿ ಏನಾದ್ರೂ ಕೆಲ್ಸ ಹುಡ್ಕೋಬೇಕು).." ಅಂದಾಗ ಏನೂ ಮಾತಾಡದೇ ಒಳಸೇರಿದ್ದೆ...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment