Saturday 19 May 2018

ಸಮುದ್ರದ ನೀರು ಮತ್ತೆ ಮತ್ತೆ ಬಂದು ಮರಳನ್ನು ಸ್ಪರ್ಶಿಸಿ ಒಂದಷ್ಟು ದೂರ ಹಿಂದೆ ಹೋಗುತ್ತಿತ್ತು.ಆದರೆ ಅಲ್ಲಿಯೇ ನಿಲ್ಲಲೂ ಆಗದೇ ಮತ್ತೆ ಓಡಿ ಬಂದು ಏನನ್ನೋ ಪಿಸು ನುಡಿದು ಹೋಗುತ್ತಿತ್ತು.ಮರಳು ಏನನ್ನೋ ನೆನೆದು ಅಲ್ಲಿಯೇ ನಾಚಿ ನೀರಾಗುತ್ತಿತ್ತು. ಮತ್ತೆ ಒಣಗಿ ಅಲೆಯ ಬರುವಿಕೆಗಾಗಿ ಕಾಯುತ್ತಿತ್ತು. ಈ ವ್ಯವಹಾರದಲ್ಲಿಯೇ ನೆಟ್ಟಿದ್ದ ನನಗೆ ಸೂರ್ಯ ಪಡುವಣದಲ್ಲಿ ಪೂರ್ತಿಯಾಗಿ ಇಳಿದು ಹೋದದ್ದು ಅರಿವಾಗಲೇ ಇಲ್ಲ.ಅಕಸ್ಮಾತ್ ಆಗಿ ಅತ್ತ ನೋಡಿದ ನನ್ನ ಕಣ್ಣುಗಳಿಗೆ ರಾಚಿದ್ದು ಸೂರ್ಯ ಬಾನಿನಂಚಿನಲ್ಲಿ ಕಲಸಲು ಮರೆತು ಹೋದ ಕೆಂಬಣ್ಣಗಳ ರಾಶಿ.

"ಹೇಯ್ ಅಲ್ಲಿ ನೋಡೋ, ಬಾನು ರವಿಯ ವಿರಹದಲ್ಲಿ ಬೇಯುತ್ತಿದ್ದ ಹಾಗೆ ಕಾಣ್ತಿದೆ ಅಲ್ವಾ...ಕೆಂಪು ಬೇಸರ, ಏಕಾಂತದಲ್ಲಿ ಬೇಯುವ ಸಂಕೇತ..."

ಇಂತದ್ದೇ ಒಂದು ಬೇಸಗೆಯ ಸಂಜೆಯಲ್ಲಿ  ನನ್ನ ಕಿವಿಗೆ ಅವಳ  ಬಿಸಿಯುಸಿರು ತಾಕುವಷ್ಟು ಹತ್ತಿರ ಕುಳಿತಿದ್ದ ಅವಳು ಹೇಳಿದ್ದ ಮಾತುಗಳು ಇಂದ್ಯಾಕೋ ಕಿವಿಯಲ್ಲಿ ಗುಂಯ್ಗುಡುತ್ತಿವೆ. ಅನುಭವವಿದ್ದು ಹೇಳಿದ ಮಾತುಗಳಾ ಇವು? ಗೊತ್ತಿಲ್ಲ, ಆದರೆ ಆ ಕ್ಷಣಕ್ಕೆ ಅದ್ಯಾವುದೂ ನನ್ನ ತಲೆಯಲ್ಲಿ ಮೂಡಿರದ ಪ್ರಶ್ನೆಗಳು.

" ಸರಿಯಾಗಿ ನೋಡು, ಮಧ್ಯಾಹ್ನವೆಲ್ಲಾ ವಿರಹದ ಬೇಗೆಯಲ್ಲಿ ಬೆಂದ ಸೂರ್ಯ ಸಂಜೆಯ ಅಷ್ಟೂ ಹೊತ್ತು ಪ್ರಣಯದಲ್ಲಿ ತನ್ಮಯನಾಗಿದ್ದಾನೆ. ಅದಕ್ಕೇ ಬಾನಿನ ಕೆನ್ನೆಗಳು ನಾಚಿಕೆಯಲ್ಲಿ ಕೆಂಪೇರಿವೆ. ಕೆಂಪು ಪ್ರಣಯದ ಸಂಕೇತ"

ನಮ್ಮ ನಡುವಿನ ಹೆಚ್ಚಿನ ಸಂಭಾಷಣೆಗಳು ಮಾತಿನಲ್ಲಿ ಮುಗಿದುದಕ್ಕಿಂತ ಮೌನದಲ್ಲಿ ಕೊನೆಯಾದದ್ದೇ ಹೆಚ್ಚು.

ಈಗಲೂ ಹಾಗೆಯೇ ಅನ್ನಿಸಬಹುದಾ ಅಂತ ದಿಗಂತದಂಚನ್ನು ನೋಡಿದೆ.ಅಲ್ಲಿ ಸೂರ್ಯನಿರದ ಸಂಜೆ ಬಾನು ನಿಧಾನವಾಗಿ  ಕತ್ತಲೆಗೆ ಜಾರುತ್ತಿತ್ತು.ಕೆಂಬಣ್ಣವೆಲ್ಲಾ ಒಂದರಲ್ಲೊಂದು ಬೆರೆತು ಗಾಢ ಕಪ್ಪುಬಣ್ಣ ಆವರಿಸುತ್ತಿತ್ತು.ಕೆಂಪು ಬಣ್ಣ ಕ್ಷಣಿಕವಾದದ್ದು  ಕಪ್ಪುಬಣ್ಣ ಒಂದೇ ಶಾಶ್ವತ ಅಂತ ಯಾಕೋ ಬಲವಾಗಿ ಅನ್ನಿಸಲಾರಂಭಿಸಿತು.

ಅಂದು ಕೊನೆಯ ಬಾರಿಗೆ ಮರಳಿನಲ್ಲಿ ನಮ್ಮಿಬ್ಬರ ಹೆಸರುಗಳನ್ನು ಬೆಸೆದು ದೊಡ್ದದಾದ ಹೃದಯವನ್ನು ಕೆತ್ತಿದ್ದಳು. ಜೊತೆಯಲ್ಲಿ ಹೆಜ್ಜೆ ಹಾಕಿ ದಡವನ್ನು ಬಿಟ್ಟಾಗ ಯಾಕೋ ಹಿಂತಿರುಗಿ ನೋಡುವ ಮನಸ್ಸಾಗಿರಲಿಲ್ಲ.ನೋಡಿದ್ದರೆ ಸಮುದ್ರದ ಅಲೆ ಮರಳ ರಾಶಿಯನ್ನು ಚುಂಬಿಸುವ ಆತುರದಲ್ಲಿ ಆ ಹೃದಯದರಮನೆಗೆ ಲಗ್ಗೆ ಹಾಕಿದ್ದೂ ಅರಿವಿಗೆ ಬರುತ್ತಿತ್ತೋ ಏನೋ.

ಶಾಶ್ವತವಾದ ಕಪ್ಪಿಗೆ ಮರಳುವ ಮುನ್ನ ನಮ್ಮ‌ ಬದುಕು ಸುಳ್ಳು ಬಣ್ಣಗಳಲ್ಲಿ ಹೇಗೆ ಕಳೆದು ಹೋಗುತ್ತದೆ ಅನ್ನುವ ಸತ್ಯ ಗೋಚರಿಸಿ ಮನಸ್ಸು ಕಂಪಿಸಿತು. ಸಂಬಂಧಗಳೂ ಇದಕ್ಕೆ ಹೊರತಲ್ಲ ಅಲ್ವಾ? ಹೊರಗೆ ನೀರವ ಮೌನದಲ್ಲಿ ಕಡಲು ತನ್ನಷ್ಟಕ್ಕೇ  ಭೋರ್ಗರೆಯುತ್ತಿತ್ತು.ಬಣ್ಣಗಳು ಕಳೆದು ಹೋದ ಮನಸ್ಸನ್ನು ಕಪ್ಪು ಆವರಿಸುತ್ತಿತ್ತು.ಯಾವುದೇ ಪ್ರತಿರೋಧ ತೋರದೇ ಕಣ್ಮುಚ್ಚಿ ಕುಳಿತಾಗ ಅಲೆ ಬಂದು ಕುಳಿತ ದಡದ ಮರಳನ್ನು ಹಿತವಾಗಿ ಸ್ಪರ್ಶಿಸಿತು.

No comments:

Post a Comment