Saturday 19 May 2018

ಎಪ್ರಿಲ್ ಬಂತೆಂದರೆ ಗೊತ್ತೇ ಇಲ್ಲದ ಹಾಗೆ ಮನದಲ್ಲಿ ಬೆಚ್ಚಗಿನ ಭಾವವೊಂದು ಬತ್ತದ ಅಂತರಗಂಗೆಯಂತೆ ದಿನವಿಡೀ ಹರಿಯಲಾರಂಬಿಸುತ್ತದೆ.ದಿನವಿಡೀ ಎಷ್ಟೇ ಬೆವರಿಳಿಸುವ ಸೆಕೆಯಿದ್ದರೂ ಈ ಬೇಸಗೆಯ ಸಂಜೆಗಳೆಂದರೆ ನನಗೆ ಬಹಳ ಆಪ್ಯಾಯಮಾನ.ಎಷ್ಟು ವರ್ಷಗಳಿಂದ ಇದೇ ದಾರಿಯಲ್ಲಿ ನಡೆಯುತ್ತಿದ್ದೇನೋ? ಯಾವುದೇ ಯೋಚನೆಯಲ್ಲಿದ್ದರೂ ನಡೆಯುವ ಹೆಜ್ಜೆಗಳು ದಾರಿ ತಪ್ಪಿಸುವುದಿಲ್ಲ.ಎತ್ತರವಾಗಿ ಬೆಳೆದು ನಿಂತ ಧೂಪದ ಮರಗಳ ನಡುವಿನಿಂದ ಇಣುಕುವ ಸೂರ್ಯನ ಸಂಜೆಯ ಕಿರಣಗಳು, ಕಾಲಿಗೆ ತೊಡರುವ ಅರ್ಧ ಸಿಪ್ಪೆ ತೆರೆದ ಧೂಪದ ಕಾಯಿಗಳು, ಅರಳಿ ನಿಂತ ಬೇಲಿ ಹೂಗಳು...ಅರೆ ಯಾವುದೂ ಈ ಇಷ್ಟೂ ವರ್ಷಗಳಲ್ಲಿ ಬದಲಾಗಲೇ ಇಲ್ಲ.ಜೊತೆಯಲ್ಲಿ ನೀನಿಲ್ಲವೆನ್ನುವುದೊಂದು ಬಿಟ್ಟರೆ ಎಲ್ಲವೂ ಹಾಗೆಯೇ ಇದೆ.ನನ್ನ ಜೊತೆಜೊತೆಗೇ ನಡೆಯುತ್ತಿದೆ.

ನೆನಪಿದೆಯಾ ನಿನಗೆ? ಪ್ರತೀ ಸೋಮವಾರ ತಪ್ಪದೇ ಹೋಗುತ್ತಿದ್ದ ಮಹಾಲಿಂಗೇಶ್ವರ ದೇವಸ್ಥಾನದ ದಾರಿಯಲ್ಲಿರುವ ಗುಲ್ಮೊಹರ್ ಮರ?.ಈ ವರ್ಷ ಕೂಡಾ ತನ್ನ ರಿವಾಜು ತಪ್ಪಿಸಿಲ್ಲ ಅದು.ವರ್ಷವಿಡೀ ಧರಿಸಿದ ಎಲೆಗಳನ್ನೆಲ್ಲಾ ಕಳಚಿಕೊಂಡು ದಟ್ಟವಾದ ಕೆಂಪು ಹೂಗಳನ್ನು ಮುಡಿಗೇರಿಸಿಕೊಂಡು ನಳನಳಿಸುತ್ತಿದೆ.ನಿನಗಂತೂ ದೇವರ ಮೇಲೆ ನಂಬಿಕೆ ಇರಲಿಲ್ಲ.ಬರೇ ಈ ಮರದ ಹೂಗಳನ್ನು ನೋಡ್ಲಿಕ್ಕೇ ನನ್ನ ಜೊತೆ ಬರುತ್ತಿದ್ದದ್ದು ನನಗೆ ಗೊತ್ತಿಲ್ಲದೇ ಇಲ್ಲ.ದೇವರಿಗಿಂತಲೂ ಈ ಮರಕ್ಕೇ ಹೆಚ್ಚು ಸುತ್ತು ಬರುತ್ತಿದ್ದದಲ್ವಾ ನೀನು? ದೇವಸ್ಥಾನದಿಂದ ವಾಪಾಸು ಬರುವಾಗ ಯಾಕೋ ನೆನಪಾಯಿತು.ತುಂಬಾ ಹೊತ್ತು ಆ ಮರದ ಹತ್ತಿರವೇ ನಿಂತಿದ್ದೆ.ಪರಿಚಯದ ಎಲ್ಲರೂ ಹಾದು ಹೋದರು.ನಿನ್ನೊಬ್ಬಳನ್ನು ಬಿಟ್ಟು.ಅಲ್ಲಿಯೇ ಎಷ್ಟು ಹೊತ್ತು ನಿಂತಿದ್ನೋ ಗೊತ್ತಿಲ್ಲ.ಬರಿಯ ಹೂಗಳನ್ನು ಬಿಟ್ಟುಕೊಂಡು ಸಂಭ್ರಮಪಡುತ್ತಿದ್ದ ರೀತಿ,ಅದು ಗುಲ್ಮೊಹರ್ ನ ಅಸಲಿ‌ಮುಖ ಅಂತ ನನಗ್ಯಾಕೋ ಅನಿಸಲೇ ಇಲ್ಲ ನೋಡು.ಎಲೆಗಳನ್ನು ಕಳಚಿಕೊಂಡ ದುಃಖವನ್ನು ಮರೆಯಲು ಹೂಗಳ ಮುಖವಾಡ ಧರಿಸಿದಂತೆ ಭಾಸವಾಯಿತು.ಕೇಳಿದರೆ ನೀನು ನಗುತ್ತಿ ಅಂತ ನನಗೆ ಗೊತ್ತು. "ಎಲ್ಲದರಲ್ಲೂ ವಿಷಾದವನ್ನೇ ಯಾಕೋ ಹುಡುಕ್ತಿಯಾ? ಸಂಭ್ರಮಪಡಲೂ ಕಾರಣಗಳನ್ನು ಹುಡುಕ್ತಿಯ ನೀನು...ಇದ್ದ ಹಾಗೇ ನೋಡಲು ಬರುವುದೇ ಇಲ್ಲ ನಿನಗೆ..." ಎಷ್ಟು ಸಾರಿ ಕೇಳಿಲ್ಲ ನಾನು ನಿನ್ನ ಮಾತುಗಳನ್ನು.ಹೋ! ನಾನಿನ್ನೂ ಹಾಗೆಯೇ ಇದ್ದೇನೆ,ಅದೇ ಮನೋಭಾವ,ಚೂರೂ ಬದಲಾಗಲಿಲ್ಲ ನೋಡು.ಆದರೆ ನೀನು? ಬರುವಾಗ ಬೊಗಸೆಗೆ ಸಿಕ್ಕಿದಷ್ಟು ಹೂಗಳನ್ನು ಬಾಚಿ ತಂದಿದ್ದೇನೆ.ಕೈಗೆ ಸಿಗದ ಹೂಗಳೆಷ್ಟೋ!

ದೇವರ ಗುಡ್ಡದ ಮೇಲೆ ಬಂದಾಗ ಜಾತ್ರೆಗಾಗಿ ಸಜ್ಜಾಗುತ್ತಿರುವ ದೇವಸ್ಥಾನ, ಸ್ವಲ್ಪವಷ್ಟೇ ಪತಾಕೆ ಕಟ್ಟಲು ಬಾಕಿ ಉಳಿದ ರಥ... ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ.ಬಾಲ್ಯದಲ್ಲಿ ರಥ ನೋಡಲು ಇಲ್ಲಿ ನಿಲ್ಲುತ್ತಿದ್ದ ಸಂಭ್ರಮ ನೆನಪಾಯ್ತು.ಕೆಳಗಿಳಿಯುವ ಗದ್ದೆಯಂಚಿನಲ್ಲಿರುವ ನೆಕ್ಕರೆ ಮಾವಿನ ಮರ ಎಷ್ಟು ಕಾಯಿ ಬಿಟ್ಟಿದೆ ಗೊತ್ತಾ? ಚಂದ್ರಮೌಳೇಶ್ವರನ ಸಣ್ಣ ರಥದ ಹಾಗೆ ಸಮೃದ್ದ! ಮರದ ತುಂಬಾ ಪೊದೆಪೊದೆಯಾಗಿ ಚಿಗುರಿದ ಹಸುರು.ಪೂರ್ತಿ ಪತಾಕೆ ಕಟ್ಟಿದ ರಥದ ಹಾಗೆ ಎಷ್ಟೊಂದು ಎಲೆಗಳು.ಹೂಗಳೆಲ್ಲಾ ಕಾಯಿಗಳಾಗಿ ತೂಗುತ್ತಿವೆ.ಒಳಗಿನ ಆನಂದವೇ ಹೊರಗೂ ತೂರಿ ಬಂದಂತೆ! ಇಲ್ಲಿ ಮಾತ್ರ ಯಾವ ವಿಷಾದವೂ ಕಾಡಲಿಲ್ಲ.ಗಾಳಿಗೆ ಹಿತವಾಗಿ ತೂಗುತ್ತಿರುವ ಗೊಂಚಲು ಗೊಂಚಲು ಕಾಯಿಗಳನ್ನು ಕೀಳಲು ಯಾಕೆ ಮನಸ್ಸಾಗಲಿಲ್ಲ? ಯಾರಿಗಂತ ಕೀಳಲಿ?

ಅಲ್ಲಿ ನಿಂತಿರುವಾಗಲೇ ಜೋಡಿಯೊಂದು ದೇವಸ್ಥಾನದ ದಾರಿಯಲ್ಲಿ ಹೋಗುತ್ತಿತ್ತು.ಗುರುತು ಸಿಕ್ಕಿದಾಗ ಏನ್ ಆಶ್ಚರ್ಯ ಅಂತೀಯಾ? ಅವನನ್ನು ಈ ಜನ್ಮದಲ್ಲಿ ಪ್ರೀತ್ಸಲ್ಲ ಅಂದಿದ್ದ ವತ್ಸಲ, ನಿನ್ನ ಕ್ಲೋಸ್ ಫ್ರೆಂಡ್! ಮಾತಿನ ಸಂಭ್ರಮದಲ್ಲಿ ಮುಳುಗಿದ್ದವರಿಗೆ ನನ್ನ ಅಸ್ತಿತ್ವದ ಅರಿವಾಗಲಿಲ್ಲ.ನೋಡುತ್ತಾ ನಿಂತೆ.ಒಂಟಿಯಾಗಿ ನಿಂತಿದ್ದ ನನ್ನ ತಲೆಯ ಮೇಲೆ ಗೊಂಚಲು ಗೊಂಚಲು ಕಾಯಿಗಳು ಹಿತವಾಗಿ ತೂಗುತ್ತಿದ್ದವು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment