Saturday 19 May 2018

#ಕತೆ
#ಹೊಸದಿಗಂತ ಪುರವಣಿ ಆದ್ಯಂತದಲ್ಲಿ....                   

#ನೆಪ

ನಿನ್ನೆಯ ಮಳೆ ಸುರಿದ ರಸ್ತೆ ಮುಂಜಾನೆಯ ಎಳೆ ಬಿಸಿಲಿಗೆ ಯಾಥಾ ಪ್ರಕಾರ ಬೆಚ್ಚಗಿದ್ದರೂ ಇನ್ನೂ ಮಳೆ ಸುರಿದ ಮಣ್ಣಿನ ಘಮಲು ಬಿಟ್ಟಿರಲಿಲ್ಲ.ಸಾಲು ಮರದಿಂದ ಮುರಿದು ಬಿದ್ದ ಒಣ ಕಟ್ಟಿಗೆಯ ತುಂಡುಗಳು ಅಲ್ಲಲ್ಲಿ ಚೆದುರಿ ಬಿದ್ದಿದ್ದವು.ಅಷ್ಟು ಮೇಲಿನಿಂದ ಬಿದ್ದ ರಭಸಕ್ಕೆ ಕೆಲ ತುಂಡುಗಳು ರಸ್ತೆಗೆ ಡಿಕ್ಕಿಹೊಡೆದು ಮತ್ತಷ್ಟು ಹೋಳುಗಳಾಗಿ ಚಿಮ್ಮಿ ಅಕ್ಕಪಕ್ಕದ ಮನೆಯ ಕಾಂಪೌಂಡ್ ಗೆ ತಾಗಿ ಬಿದ್ದಿದ್ದವು. ಇರುವೆಗಳ ದೊಡ್ಡದೊಂದು ಸಾಲು ಮಣ್ಣನ್ನು ಕೊರೆದು ಸಾಗುತ್ತಿದ್ದುದು ಕುತೂಹಲಕಾರಿಯಾಗಿತ್ತು.ಅವುಗಳು ಎತ್ತಿಹಾಕಿದ ಮಣ್ಣು ಉದ್ದವಾದ ಸಾಲಾಗಿ ಹತ್ತಿರದಿಂದ ನೋಡಿದರೆ ಚೀನಾದ ಮಹಾಗೋಡೆಯನ್ನು ನೆನಪಿಸುತಿತ್ತು.ಯಾವತ್ತೂ ತುಸು ದೂರದವರೆಗೆ ಬೊಗಳಿಕೊಂಡೇ ಬರುವ ಕರಿಯ ನಾಯಿ ಇಂದೇಕೋ ರಸ್ತೆಯ ಅಂಚಿಗೆ ಬಾಲಮುದುರಿಕೊಂಡು ಮಲಗಿತ್ತು.ಬಹುಶಃ ನಿನ್ನೆಯ ಜೋರು ಮಳೆಗೆ ನಿಲ್ಲಲು ಎಲ್ಲಿಯೂ ಜಾಗ ಸಿಗದೇ ನೆಂದಿರಬೇಕು.ಆದರೂ ದಿನಾ ಬೊಗಳುವ ನಾಯಿಯ ಪರಿಚಿತ ಸ್ವಭಾವ ಕಾಣದೇ ಕೇಶವ  ಕ್ಣಣ ಬೆರಗಾದ.

ಮನದಲ್ಲಿ ನೂರು ಯೋಚನೆಗಳು ಅವನನ್ನು ತಿನ್ನುತ್ತಿದ್ದರೂ ಕಣ್ಡೆದುರು ನಡೆಯುವ ಸಂಗತಿಗಳಿಗೆ ಕೇಶವ ಸದಾ ತೆರೆದ ಕನ್ನಡಿ. ಅವನು ಈಗಾಗಲೇ ದಿನಾ ಒಂದಷ್ಟು ಹೊತ್ತು ಕೂರುವ ದೊಡ್ಡ ಅಶ್ವತ್ಥಕಟ್ಟೆಯನ್ನು ದಾಟಿ ಮುಂದೆ ಬಂದಿದ್ದ.ಅಲ್ಲಿಂದ ರಸ್ತೆ ಪಡೆದುಕೊಳ್ಳುವ ತಿರುವಿಗೆ ತಾಕಿಕೊಂಡೇ ಜನ್ನನ ವೆಲ್ಡಿಂಗ್ ಶಾಪ್ ಇದೆ.ವಾಪಾಸು ಬರುವಾಗ ಮೊನ್ನೆ ಕೊಟ್ಟಿದ್ದ ಗೇಟ್ ಬಗ್ಗೆ ಕೇಳಿಬರಬೇಕು. ತುಡುಗು ದನಗಳು ಮನೆಯ ಕಾಂಪೌಂಡ್ ಒಳಗೇ ನುಗ್ಗುತ್ತವೆ, ಆ ಗೇಟ್ ಒಂದು ರಿಪೇರಿ ಮಾಡಿಸೋ ಅಂತ ಅಮ್ಮ ಎಷ್ಟೋ ಸಾರಿ ಅಂದಿದ್ದರೂ ಮನಸ್ಸಾದದ್ದು ಮೊನ್ನೆಯೇ. ಇಲ್ಲಿಂದ ಇನ್ನು ಹೆಚ್ಚು ದೂರವಿಲ್ಲ. ನೇರ ಹೋಗಿ ಪಾಂಡುವಿನ ಬೀಡ ಅಂಗಡಿಯ ನಂತರ ಬಲಕ್ಕೆ ತಿರುಗಿದರೆ ರಸ್ತೆಗೆ ತಾಗಿಕೊಂಡೇ ಹೂವಿನ ಪಾರ್ಕ್ ಇದೆ.ಅಲ್ಲಿಯೇ ಅವಳು ಕೇಶವನನ್ನು ಕಾಣಲು ಹೇಳಿದ್ದು.ವೆಲ್ಡಿಂಗ್ ಶಾಪ್ ನ ಬಳಿ ನಿಂತ ಕೇಶವನ ಮನದಲ್ಲಿ ಮತ್ತೆ ತಳಮಳ.ಯಾಕಾಗಿ ಹೊರಟು ಬಂದೆ ನಾನು? ಮತ್ತೆ ಯಾರನ್ನು ನನ್ಮ ಜೀವಮಾನದಲ್ಲಿ ನೋಡಬಾರದು ಅಂತ ಅಂದುಕೊಂಡಿದ್ನೋ, ಅವರೇ ಮತ್ತೆ ಕರೆದಾಗ ಯಾಕೆ ಹಿಂದೆ ಮುಂದೆ ಯೋಚಿಸದೇ ಬಂದುಬಿಟ್ಟೆ? ಸ್ವಲ್ಪ ಹೊತ್ತು ಆ ಯೋಚನೆಯಲ್ಲಿಯೇ ಅಂತರ್ಮುಖಿಯಾದ. ದಿನವೂ ಮನೆಗೆ ಹಾಲು ಹಾಕುವ ಹುಡುಗ ಪರಿಚಯದ ನಗೆ ಬೀರಿ ಸೈಕಲ್ ನಿಂದ ಎರಡೂ ಕೈಯನ್ನು ಬಿಟ್ಟು ಸಿಳ್ಳೆ ಹೊಡೆಯುತ್ತಾ ರಸ್ತೆಯ ತಿರುವಲ್ಲಿ ಮರೆಯಾದ. ಮೀನಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡ ಹೆಂಗಸೊಬ್ಬಳು ದಾಟಿಹೋದಾಗ ಮೂಗಿಗೆ ಬಡಿದ ಮೀನಿನ ವಾಸನೆಗೆ ಕೇಶವ ಮತ್ತೆ ಗೆಲುವಾದ.ಹೋಗುವಾಗ ಮೀನು ತೆಗೆದುಕೊಂಡು ಹೋಗ್ಬೇಕು, ಅಮ್ಮನಿಗೆ ಬಂಗುಡೆ ಅಂದ್ರೆ ಪ್ರಾಣ. ನೂರಕ್ಕೆ ಎಷ್ಟು ಅಂತ ಕೇಳುವ ಅಂತ ಒಂದು ಕ್ಷಣ ಅನ್ನಿಸಿದರೂ ಕೇಳಲಿಲ್ಲ.ಯಾವುದೋ ಯೋಚನೆ ಸುಳಿದು ಅಪ್ರಯತ್ನವಾಗಿ ನಕ್ಕು ಬೆನ್ನಿಗೇ ಗಂಭೀರನಾದ ಮತ್ತು ಅನ್ಯಮನಸ್ಕನಾಗಿ ಮುಂದೆ ಸಾಗಿದ.

ಪಾಂಡುವಿನ ಬೀಡ ಅಂಗಡಿಯಲ್ಲಿ ಪೇಪರ್ ಓದುತ್ತಾ ಒಂದು ಪಾನ್ ಹಾಕದಿದ್ದರೆ ಕೇಶವನಿಗೆ ಸ್ಪಷ್ಟವಾಗಿ ಬೆಳಗಾಗುವುದೇ ಇಲ್ಲ.ಆದರೂ ಇಂದು ಯಾವತ್ತಿನ ಸಾದಾ ಬೀಡ ಹಾಕದೇ ಕಲ್ಕತ್ತ ಕಟ್ಟಿಸಿಕೊಂಡ.ಹಾಗೆಯೇ ಮೆಲ್ಲುತ್ತಾ ಪೇಪರ್ ಪುಟ ತಿರುಗಿಸಿ ಎಂದಿನಂತೆ ವಧೂವರರ ಜಾಹಿರಾತಿನ ಪುಟದಲ್ಲಿ ದೃಷ್ಟಿ ನೆಟ್ಟು ಕೂತ. ರಸ್ತೆಯಲ್ಲಿ ಬೆನ್ನಿಗೆ ಭಾರದ ಬ್ಯಾಗ್ ಹೊತ್ತುಕೊಂಡು ಟಿಫಿನ್ ಬಾಕ್ಸ್ ಬ್ಯಾಗ್ ನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿದ ಶಾಲಾ ಮಕ್ಕಳನ್ನು ಕಂಡು ಗಂಟೆಯ ನೆನಪಾಗಿ ಪೇಪರನ್ನು ಮಡಚಿ ಚಾಕಲೇಟ್ ಡಬ್ಬದ ಸಾಲಿನ ನಡುವೆ ತುರುಕಿಸಿದ. ಪಾಂಡುವನ್ನು‌ ಮಾತಾಡಿಸಬೇಕು ಅನ್ನಿಸಿದರೂ ಅವನು ಯಾರಿಗೋ ಬೊಂಡ ಕೆತ್ತುವುದರಲ್ಲಿ ಬ್ಯುಸಿಯಾಗಿದ್ದ. ರಸ್ತೆಗಿಳಿದು ಶಾಲಾ ಮಕ್ಕಳ ನೀಲಿ ಬಿಳಿಯಲ್ಲಿ ಒಂದಾದ.ಹಾಗೆ ನೋಡಿದರೆ ಅವಳು ಬಹಳ ದೂರದವಳೇನಲ್ಲ. ಹತ್ತಿರದ ಸಂಬಂಧಿಯೇ ಆಗಬೇಕು.ಮನೆಯೂ ಹೆಚ್ಚು ದೂರವಿಲ್ಲ. ಆದರೂ ಒಂದೇ ಶಾಲೆಗೆ ಹೋಗದ, ಒಂದೇ ದೇವಸ್ಥಾನಕ್ಕೆ ಹೋಗದ ನಾವಿಬ್ಬರೂ ಶಾಲೆಯ ದಿನಗಳಲ್ಲಿಯೇ ಹತ್ತಿರವಾದದ್ದು ಹೇಗೆ ಅನ್ನುವುದು ನೆನಪಾಗದೇ ಕೇಶವ ಗಲಿಬಿಲಿಗೊಂಡ. ಪ್ರೈಮರಿಯಲ್ಲಿದ್ದಾಗಲೇ ಅವಳ ಪರಿಚಯವಾದದ್ದು ಅನ್ನುವುದನ್ನು ಮತ್ತೆ ಮತ್ತೆ ಯೋಚಿಸುತ್ತಾ ಅದನ್ನೇ ಗಟ್ಟಿ ಮಾಡಿಕೊಂಡರೂ ಉಳಿದ ಯಾವುದೇ ವಿವರಗಳಿಗೆ ನೆನಪು ಜೊತೆ ನೀಡಲಿಲ್ಲ.ವೇಗವಾಗಿ ಹಾದು ಹೋದ ಬಸ್ಸು ಹೊಂಡದಲ್ಲಿದ್ದ ನೀರನ್ನು ಮಕ್ಕಳ ಮೇಲೆ ಪ್ರೋಕ್ಷಣೆ ಮಾಡಿತು. ಒಂದು ಹುಡುಗಿಯ ಯುನಿಫಾರ್ಮ್ ಸ್ವಲ್ಪ ಒದ್ದೆಯಾಗಿ ಅವಳ ಅಳು ಶುರುವಾದದ್ದೇ ಹತ್ತಿರವಿದ್ದ ಹುಡುಗ ಅತೀವ ಕಾಳಜಿಯಿಂದ ಸಂತೈಸುವುದನ್ನು ಕಂಡು ಕೇಶವ ಪುಟ್ಟ ಮಗುವಿನಂತೆ ನೋಡಿದ.ಮತ್ತೆ ನೆನಪುಗಳಿಗೆ ಜಾರಿದ.ಅವಳು ಅಪ್ಪನಿಲ್ಲದ ಹುಡುಗಿ.ಮನೆಯಿಂದ ಬರುವಾಗ ಅವಳ ಮುಖ ಗೆಲುವಾಗಿದ್ದನ್ನು ತಾನು ಕಂಡೇ ಇರಲಿಲ್ಲ ಅನ್ನುವ ಹೊಸ ಯೋಚನೆ ಸುಳಿದು ದಃಖಿತನಾದ.ಮತ್ತೆ ಆ ಶಾಲಾ ಮಕ್ಕಳ‌ ಗುಂಪಿನಲ್ಲಿರಲು ಮನಸ್ಸಾಗದೇ ವೇಗವಾಗಿ ನಡೆದು ಹೂವಿನ ಪಾರ್ಕ್ ತಲುಪಿದ.ಎಂದಿನಂತೆ ಒಂದು ಸುತ್ತು ವಾಕಿಂಗ್ ಮಾಡಲು ಇಂದೇಕೋ ಮನಸ್ಸಾಗದೇ ಆಗಷ್ಟೇ ಬಿರಿದು ನಗು ಚೆಲ್ಲುತ್ತಿದ್ದ ಗುಲಾಬಿ ಹೂವಿನ ಗಿಡಗಳಿದ್ದ ಪಕ್ಕದ ಬೆಂಚಿನಲ್ಲಿ ಕುಳಿತ. ಮುಳ್ಳುಗಳ ನಡುವೆ ಅರಳಿ ನಗುವ ಗುಲಾಬಿಯನ್ನೇ ನೋಡುತ್ತಾ ಕುಳಿತ ಕೇಶವ ಎಂದಿನಂತೆ ಗೆಲುವಾಗಲಿಲ್ಲ.ಹತ್ತಿರದ ಬೆಂಚಿನಲ್ಲಿ ಕುಳಿತಿದ್ದ ಮುದುಕ ಪರಿಚಿತ ನಗು ಬೀರಿದ. ಮೈಯೆಲ್ಲಾ ಬೆವರಾಗಿ ಕೂತಿದ್ದ. ನಿನ್ನೆ ಚೆಕಪ್ ಗೆ ಹೋಗೋದಿದೆ ಹೇಳಿದ್ದ.ಬಹುಶಃ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚು ಬಂದಿರಬೇಕು. ಎರಡು ಸುತ್ತು ಹೆಚ್ಚಿಗೆ ವಾಕಿಂಗ್ ಮಾಡಿದ ಹಾಗಿದೆ.‌ ಕಾಲೇಜಿನ ವರೈಟಿ ಡ್ರೆಸ್ ದಿನಕ್ಕೆ ಸೀರೆ ಉಟ್ಟ ಅವಳು ಬಂದು ನನ್ನ ಪಕ್ಕದಲ್ಲಿ ಕೂತಾಗ ಇಳಿಬಿಟ್ಟ ಅವಳ ಉದ್ದ ಕೂದಲ ರಾಶಿಯಲ್ಲಿ ನಗುತ್ತಿದ್ದ ಕೆಂಪು ಗುಲಾಬಿ ನೆನಪಾಗಿ ಕೇಶವ ಮತ್ತೆ ಗೆಲುವಾದ. ಹಿಂದಿನ ದಿನ ತಾನೇ ಕೊಟ್ಟಿದ್ದ ಹೂ ಅದು. ನಮ್ಮ ಪ್ರೀತಿ ಅವಳು ಮುಡಿದ ಹೂವಿನಲ್ಲಿ ಸಮೃದ್ಧವಾಗಿ ಅರಳುತಿತ್ತು.

ಬಣ್ಣದ ಚಿಟ್ಟೆಯೊಂದು ಹೂವಿಂದ ಹೂವಿಗೆ ಹಾರುತಿತ್ತು. ತನ್ನಷ್ಟಕ್ಕೇ ಅರಳಿ ನಿಂತಿದ್ದ ಹೂವಿನ ಮೇಲೆ ಕ್ಷಣ ಕಾಲ ಕುಳಿತು ರೆಕ್ಕೆ ಅಗಲಿಸುತಿದ್ದ ಚಿಟ್ಟೆ ಮತ್ತೆ ಬೇರೆ ಹೂವಿಗೆ ಹಾರುತಿದ್ದುದನ್ನು ಎವೆಯಿಕ್ಕದೇ ನೋಡುತಿದ್ದ ಕೇಶವ.ದಿನಾ ಹೆಂಡತಿ ಜೊತೆಗೇ ವಾಕಿಂಗ್ ಬರುತ್ತಿದ್ದ ಪರಿಚಿತ ಗಂಡಸು ಒಬ್ಬನೇ ನಡೆಯುತ್ತಿದ್ದ, ಯಾಕೋ ನಡಿಗೆಯಲ್ಲಿ ಗೆಲುವಿರಲಿಲ್ಲ.ಕೇಳಬೇಕು ಅನ್ನಿಸಿದರೂ ಸುಮ್ಮನಾದ.ಅವಳ ಮನೆಗೆ ಮೊದಲ ಬಾರಿ ಹೋದ ದಿನದ ನೆನಪು ಯಾಕೋ ಈ ನಡುವೆ ತೂರಿ ಬಂತು. ಅವರ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತಿದ್ದ ಹೆಂಡತಿ ಸತ್ತು ಎರಡು ಮಕ್ಕಳಿರುವ ಮಾವ ಅವಳನ್ನು ತನಗೇ ಮದುವೆ ಮಾಡಿಕೊಡಬೇಕು ಅಂತ ತಾಕೀತು ಹಾಕಿದ್ದ. ಆ ವಿಷಯವನ್ನು ಅವಳು ಹೇಳಿದ ದಿನವೇ ಅವಳ ಮನೆಗೆ ಹೋಗಿದ್ದ ಕೇಶವ. ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಶಕ್ತವಿರದಿದ್ದ ಅವಳ ಅಶಕ್ತ ತಾಯಿಯ ಎದುರು ತಾನು ಅವಳನ್ನು ಪ್ರೀತಿಸುವ ವಿಷಯ ಹೇಳಿ ಅವಳನ್ನೇ ಮದುವೆಯಾಗುವುದಾಗಿ ಹೇಳಿ ಬಂದಿದ್ದ.ಆಗ ಅವಳ ಕಣ್ಣುಗಳಲ್ಲಿ ಹೊಳೆದ ಬೆಳಕು ಮತ್ತೆ ಎರಡು ಎರಡು ವರ್ಷ ನಮ್ಮ ಪ್ರೀತಿಗೆ ದಾರಿ ದೀಪವಾಗಿತ್ತು. ಅವಳು ನಿರಾಳವಾಗಿದ್ದಳು.ಹೊತ್ತು ಏರುತಿದ್ದರೂ ಕೇಶವನಿಗೆ ಅಲ್ಲಿಂದ ಏಳುವ ಮನಸ್ಸಾಗಲಿಲ್ಲ.ಎದುರಿನ ಬೆಂಚಿನಲ್ಲಿ ವಾಕಿಂಗ್ ಮುಗಿಸಿದ ಪರಿಚಿತ ಮುದುಕ ತಾನು ತಂದಿದ್ದ ಪೇಪರ್ ಓದುವಲ್ಲಿ ತಲ್ಲೀಣನಾಗಿದ್ದ. ಹೆಂಡತಿಯಿಲ್ಲದೇ ಒಬ್ಬನೇ ಬಂದಿದ್ದ ಗಂಡಸು ಎಲ್ಲಿಯೂ ಕಾಣಲಿಲ್ಲ. ಬಹುಶಃ ಹೊರಟು ಹೋಗಿರಬೇಕು. ಜಾಜಿಯ ದಟ್ಟ ಬಳ್ಳಿ ಹಬ್ಬಿದ್ದ ಅಷ್ಟೇನೂ ಬೆಳಕು ಬೀಳದ ಸ್ಥಳದಲ್ಲಿದ್ದ ಬೆಂಚಿನಲ್ಲಿ ಪ್ರೇಮಿಗಳಿಬ್ಬರು ಸ್ಪರ್ಶ ಸುಖದಲ್ಲಿ ಮೈಮರೆತಿದ್ದರು. ಅವರ ಚಂಚಲ ಕಣ್ಣುಗಳಲ್ಲಿ ನಿರೀಕ್ಷೆಗಳನ್ನು ಕಂಡು ಕೇಶವನಿಗೆ ಅದೇಕೋ ಜೋರಾಗಿ ನಕ್ಕು ಬಿಡಬೇಕು ಅನ್ನಿಸಿತು.ಮರುಕ್ಷಣವೇ ತನ್ನ ಯೋಚನೆಗೆ ಬೆರಗಾಗಿ ಗಂಭೀರವಾಗಿ ಕುಳಿತುಕೊಂಡ.

ಹೋದ ಸಲ ಇದೇ ಬೆಂಚಿನ ಮೇಲೆ ಅವಳ ಜೊತೆಗೆ ಕೊನೆಯ ಬಾರಿ ಕೂತಿದ್ದು ನೆನಪಾಗಿ ಅಂತರ್ಮುಖಿಯಾದ.ಅವಳು ಕೆಲಸ ಸಿಕ್ಕಿ ಬೆಂಗಳೂರಿನಲ್ಲಿದ್ದಳು. ಕಳೆದ ದಸರಾಕ್ಕೆ ಊರಿಗೆ ಬಂದಾಗ ಇದೇ ಹೂವಿನ ಪಾರ್ಕ್ ಗೆ ಬರಲು ಹೇಳಿದಾಗ  ಕೇಶವ ಖುಷಿಯಿಂದ ಬಂದು ಕುಳಿತಿದ್ದ. ತಡವಾಗಿ ಬಂದ ಅವಳ ಮುಡಿಯಲ್ಲಿ ಎಂದಿನಂತೆ ಗುಲಾಬಿ ಇಲ್ಲದ್ದು ಕಂಡು ಯಾವುದೋ ಅವ್ಯಕ್ತ ಅಪರಿಚಿತ ಭಾವವೊಂದು ಮನದಲ್ಲಿ ಸುಳಿದು ಹೋಗಿ ಲಘುವಾಗಿ ಕಂಪಿಸಿದ್ದ. ಬಂದವಳೇ "ಥ್ಯಾಂಕ್ಸ್ ಕಣೋ ಕೇಶವ" ಅಂದು ಸ್ವಲ್ಪ ದೂರವೇ ಕುಳಿತುಕೊಂಡ ಅವಳನ್ನು ಅರ್ಥವಾಗದ ನೋಟದಿಂದ ನೋಡಿದ್ದ. ಮತ್ತೆ ಇಬ್ಬರಲ್ಲೂ ಮಾತಿಲ್ಲ.ಅವಳು ಏನನ್ನೋ ಹೇಳಬೇಕು ಅಂತ ಬಂದಿದ್ದಳು, ಆದರೆ ಅವಳಿಗೂ ಹೇಳಲಾಗದೇ ತನ್ನ ಉಗುರುಳೊಡನೆ ಆಟವಾಡುತ್ತಾ ಕುಳಿತುಬಿಟ್ಟಿದ್ದಳು. ಸಂಜೆ ಕಳೆದು ಕತ್ತಲು ಇಣುಕಲು ಶುರುವಾದಾಗ ಎದ್ದು ನಿಂತಳು. ಹೋಗುವ ಮೊದಲು ಬಹಳ ಕಷ್ಟದಲ್ಲಿ "ನಿನ್ನಸಹಾಯ ಇಲ್ಲದಿರುತಿದ್ದರೆ ಮಾವನನ್ನೇ ಮದುವೆಯಾಗಿ ನಾನು ಇಲ್ಲೇ ಕೊಳೆತಿರಬೇಕಿತ್ತು.ಥ್ಯಾಂಕ್ಸ್ ಕೇಶವ್" ಅಂತ ಹೇಳಿ ತಿರುಗಿ ನೋಡದೇ ಹೋಗಿದ್ದಳು.ಕೇಶವ ಅದೆಷ್ಟೋ ಹೊತ್ತು ಕತ್ತಲಲ್ಲಿ ಕುಳಿತೇ ಇದ್ದ. ಪ್ರೀತಿಯ ಇನ್ನೊಂದು ಆಯಾಮವನ್ನು ಕಂಡು  ಯಾವುದೂ ಸ್ಪಷ್ಟವಾಗದೇ ಎಲ್ಲ ಕಡೆಯೂ ಬರೇ ಕತ್ತಲು ತುಂಬಿಕೊಂಡಿತ್ತು. ಎಷ್ಟೋ ಹೊತ್ತಿನ ನಂತರ ಮನೆಗೆ ಬಂದಾಗ ಅಮ್ಮ ಕೈಯಲ್ಲೊಂದು ಕವರ್ ಕೊಟ್ಟು ಒಂದು ಕ್ಷಣ ದುರುಗುಟ್ಟಿ ನೋಡಿ ಹೋಗಿ ಮಲಗಿಕೊಂಡಿದ್ದಳು.ತೆರೆದು ನೋಡಿದರೆ ಅವಳ ಲಗ್ನ ಪತ್ರಿಕೆ! ಇಂದು ಪಾರ್ಕ್ ಗೆ ಬಂದಾಗ ಮೊದಲು ನೋಡಿದ್ದ ಗುಲಾಬಿಯನ್ನು ಮತ್ತೆ ಮತ್ತೆ ನೋಡುತ್ತಾ ಕಿತ್ತುಕೊಂಡ. ಆಸೆಯಾಗಿದ್ದರೂ ಯಾವತ್ತೂ ಕೇಶವ ಹೀಗೆ ಹೂ ಕೀಳುವ ಧೈರ್ಯ ಮಾಡಿರಲಿಲ್ಲ. ಕಿತ್ತ ಗುಲಾಬಿ ಕೈಯಲ್ಲಿ ಹಿಡಿದು ಸಂತೋಷ ತಾಳಲಾರದೇ ಜೋರಾಗಿ ಸಿಳ್ಳೆ ಹಾಕಿದ.

ಪೇಪರ್ ಮಡಚಿ ಹತ್ತಿರ ಬಂದ ಮುದುಕ "ಇವತ್ತೂ ಅವಳಿಗಾಗಿ ಕಾದು ಕುಳಿತಿದ್ದೀರಾ...ಸರಿ ಸರಿ ನಾಳೆ ಸಿಗೋಣ, ಹೇಗೂ ಬರ್ತೀರಲ್ಲ..." ನಕ್ಕು ಹೊರಟ.ಜಾಜಿ ಬಳ್ಳಿಯ ಕೆಳಗಿನ ಬೆಂಚೂ ಖಾಲಿಯಾಗಿತ್ತು.ಯಾವುದರ ಪರಿವೇ ಇಲ್ಲದೇ ಚಿಟ್ಟೆ ಮಾತ್ರ ನೆಮ್ಮದಿಯಿಂದ ಮತ್ತೊಂದು ಹೂವಿಗೆ ಹಾರುತಿತ್ತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

1 comment:

  1. Thank you so much for the wonderful information .This is really important for me .I am searching this kind of information from a long time and finally got it.
    Literally

    ReplyDelete