Wednesday, 26 April 2017

ಪಾಂಡು ಮತ್ತು ಸೈಕಲ್

ನಾನು ಪ್ರೈಮರಿಯಲ್ಲಿದ್ದಾಗ  ಸಿಗುವ ಬೇಸಿಗೆ ರಜೆಗಳನ್ನು ನನ್ನ ಮನೆಯಲ್ಲಿ ಎಂದೂ ಕಳೆದವನಲ್ಲ. ಬೇಸಿಗೆ ರಜೆಗಳು ಶುರು ಆದ ಕೂಡಲೇ ನನ್ನ ಕಾತರ ಚಡಪಡಿಕೆಗಳು ಹೆಚ್ಚಾಗುತ್ತಿದ್ದವು. ವರ್ಷವೂ ನನ್ನನ್ನು ಕರ್ಕೊಂಡು ಹೋಗಲು ಬರುತ್ತಿದ್ದ ಪಾಂಡುನ ಸೈಕಲ್ ಇನ್ನೂ ಯಾಕೆ ಬಂದಿಲ್ಲ?. ಅವನಿಗೆ ಇನ್ನೂ ರಜೆ ಸಿಕ್ಕಿಲ್ವಾ?, ಹೀಗೆ ನಿಲ್ಲದ ಯೋಚನೆಗಳು. ಪಾಂಡು ನನ್ನ ಅಮ್ಮನ ಅಕ್ಕನ ಮಗ, ಅವನೇನೂ ವಯಸ್ಸಿನಲ್ಲಿ ನನಗಿಂತ ತುಂಬಾ ದೊಡ್ಡವನಲ್ಲ .ಸುಮಾರು ಐದಾರ್ ವರ್ಷ ದೊಡ್ಡವನಿರಬಹುದು ಅಷ್ಟೇ. ಆದರೆ ಪ್ರತೀ ಬೇಸಗೆ ರಜೆಯಲ್ಲಿ ತಪ್ಪದೇ ಬಂದು ತನ್ನ ಮನೆಗೆ ಕರೆದುಕೊಂಡು ಹೋಗುತಿದ್ದ. ಈ ಪರಿಪಾಠ ನಾನು ಪ್ರೌಢಶಾಲೆಯ ಮೆಟ್ಟಿಲೇರುವ ತನಕವೂ ಬೆಳೆದುಕೊಂಡು ಬಂತು. ಹಾಗಂತ ತಪ್ಪಿದ್ದೇ ಇಲ್ಲ ಅಂತ ಅಲ್ಲ. ಒಂದು ಸಾರಿ ಈ ಯಜ್ಞಕ್ಕೂ ವಿಘ್ನ ಬಂದಿತ್ತು.

ಆ ಸಲದ ಬೇಸಗೆ ರಜೆಯಲ್ಲಿ ನಾನು ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದೆ ಸಪ್ಲಾಯರ್ ಆಗಿ. ಮೂರು ದಿನ ಕೆಲಸ ಮಾಡಿದ್ದೆ ಅಷ್ಟೇ;  ನಾಲ್ಕನೇ ದಿನ ಬೆಳಗ್ಗೆ ಟೇಬಲ್ ಸೆಟ್ ಮಾಡ್ತಾ ಇದ್ದಾಗ ಬೆನ್ನಿಗೆ ಗುದ್ದಿದ್ದು ಯಾರು ಅಂತ ತಿರುಗಿ ನೋಡಿದ್ರೆ ಎದುರು ನಿಂತಿದ್ದಾನೆ ಇದೇ ಪಾಂಡು. ನಡಿ ಹೋಗುವ ಅಂತ ಒಂದೇ ಮಾತು. " ಇಲ್ಲ, ಹಾಗೆಲ್ಲಾ ಬಿಡೋದಿಲ್ಲ ಹೋಟೇಲ್ ಧಣಿ. ಸೇರುವಾಗ್ಲೇ ಹೇಳಿದ್ದಾನೆ, ಎರಡು ತಿಂಗ್ಳು ಕೆಲ್ಸ ಮಾಡೋದಾದ್ರೆ ಮಾತ್ರ ತೆಗೊಳ್ಳೋದು ಅಂತ, ಆಯ್ತು ಹೇಳಿದ್ದೇನೆ" ಅಂದೆ.
"ಅದೆಲ್ಲಾ ನನ್ಗೆ ಗೊತ್ತಿಲ್ಲ, ಸೈಕಲ್ ಹತ್ತು. ನಾನು ಮಾತಾಡ್ತೇನೆ ಅವನತ್ರ" ಅಂತ ಹೇಳಿ ಹೋಟೆಲ್‌ ಮಾಲೀಕರ ಹತ್ರ ಹೋಗಿ ನನ್ನನ್ನು ಕರ್ಕೊಂಡು ಹೋಗುವ ವಿಷಯ ಹೇಳಿದ. ಅದಕ್ಕವರು ಕೆರಳಿ , " ಅದೆಲ್ಲಾ ಆಗಲ್ಲ, ಮೊದ್ಲೇ ಜನ ಇಲ್ಲ ಇಲ್ಲಿ. ಎರಡು ತಿಂಗ್ಳು ನಿಲ್ತೇನಂತ ಹೇಳಿ , ಈಗ ಹೋಗ್ತೇನಂದ್ರೆ ಬಿಡೋಕಾಗಲ್ಲ.ಹೋಗ್ ಹೋಗು ಕೆಲ್ಸ ನೋಡ್ಕೋ" ಅಂತ ಅವರ ಭಾಷಣ ಜಾರಿಯಲ್ಲಿರುವಾಗ್ಲೇ ನನ್ನ ಬಟ್ಟೆಯ ಗಂಟನ್ನು ತೆಕೊಂಡು ಪಲಾಯನಕ್ಕೆ ಸಿದ್ಧನಾಗಿದ್ದೆ. ಅದನ್ನು ನೋಡಿ ಇನ್ನೂ ಕೆರಳಿ ಕೆಂಡವಾಗಿ ನನ್ನ ಬಟ್ಟೆಯ ಗಂಟನ್ನು ಕಿತ್ಕೊಂಡು;  ಹೇಗೆ ಹೋಗ್ತಿಯಾ , ನಾನೂ ನೋಡ್ತೇನೆ ಅನ್ನೋ ಫೋಸ್ ಕೊಟ್ರು. ಅಷ್ಟೊತ್ತಿಗೆ ನನಗೂ ಜೋಶ್ ಬಂದು ಅದನ್ನು ನೀವೇ ಇಟ್ಕೋಳ್ಳಿ ಅಂತ ಹೇಳಿ ಪಾಂಡುನ ಸೈಕಲ್ ಹತ್ತಿಬಿಟ್ಟೆ. ಮತ್ತೆ ಆ ಬಟ್ಟೆಯ ಗಂಟನ್ನು ಅವರಿಂದ ಬಿಡಿಸಿಕೊಳ್ಳಿಕ್ಕೆ ಅಪ್ಪ ಹಲವು ಸುತ್ತುಗಳ ಬೈಗುಳದ ಫೈರಿಂಗ್ ಗೆ ಎದೆಯೊಡ್ಡಬೇಕಾಯ್ತು.

ಒಮ್ಮೆ ಅವನ ಮನೆಯನ್ನು ಸೇರಿದೆನೆಂದರೆ ಮತ್ತೆ ನಮ್ಮ ಮರಿ ಸೈನ್ಯಕ್ಕೆ ಯಾರ ಲಂಗು ಲಗಾಮೂ ಇರಲಿಲ್ಲ.ಅಲ್ಲಿ ಪಾಂಡುನ ತಂಗಿ ಪುಟ್ಟಿ ,ತಮ್ಮ ಸಂತು ಮತ್ತು ನಾನು ಸಮಯದ ಪರಿವೇ ಇಲ್ಲದೇ ಆಟದಲ್ಲಿ, ಜಗಳದಲ್ಲಿ ತಲ್ಲೀನರಾಗುತ್ತಿದ್ದೆವು. ಬರೇ ಆಟ ಮಾತ್ರವಲ್ಲದೇ ಸಣ್ಣಪುಟ್ಟ ಕೆಲಸಗಳೂ ನಮ್ಮ ತಂಡಕ್ಕೆ ನಿಗದಿಯಾಗುತ್ತಿದ್ದವು. ಅದರಲ್ಲಿ ಮುಖ್ಯವಾಗಿ ಮಾವಿನ ಕಾಯಿ ಕೀಳುವುದು. ಪಾಂಡು ಮರ ಹತ್ತಿ ಮಾವಿನ ಕಾಯಿ, ಹಣ್ಣು ಕಿತ್ತು ಕೆಳಗೆ ಹಾಕುತ್ತಿದ್ದ. ಹಾಗೆ ಬೀಳುವ ಕಾಯಿ ನೆಲದ ಮೇಲೆ ಬಿದ್ದು ಒಡೆಯದ ಹಾಗೆ ಮೊದಲೇ ಒಂದು ಗೋಣಿಚೀಲವನ್ನು ನಾನು ಮತ್ತು ಸಂತು ಅಡ್ಡ ಹಿಡಿದು ಅದರಲ್ಲೇ ಬೀಳುವ ಹಾಗೆ ಮಾಡುವುದು ನಮ್ಮ ಕೆಲಸ. ನಂತರ ವಿಸ್ತಾರವಾದ ತೆಂಗಿನ ತೋಟಕ್ಕೆ , ನೀರಿನ ಇಂಜಿನ್ ಚಾಲು ಮಾಡಿದ್ರೆ ಮುಖ್ಯ ನಾಲೆಯಲ್ಲಿ ಬರುತ್ತಿದ್ದ ನೀರನ್ನು ಪ್ರತೀ ತೆಂಗಿನ ಮರದ ಕೆಳಗೆ ಹಾಯಿಸುವುದು, ಬಿದ್ದ ತೆಂಗಿನ ಕಾಯಿಗಳನ್ನು ತಂದು ಅಂಗಳಕ್ಕೆ ಹಾಕುವ ಕೆಲಸಗಳನ್ನು ಬಿಟ್ಟರೆ ಉಳಿದದ್ದು ಬರೇ ಆಟ.

ಆಗ ಅವರ ಮನೆಯಲ್ಲಿ ಸೈಕಲ್ ಹೊಡೆಯುತ್ತಿದ್ದದ್ದು ಪಾಂಡು ಮಾತ್ರ. ಸೈಕಲ್ ಅಂದ್ರೆ ಅವನಿಗೆ ವಿಪರೀತ ವ್ಯಾಮೋಹ. ದಿನವಿಡೀ ಅದರ ಬಗ್ಗೆ ಅವನು ವಹಿಸುವ ನಿಗಾ ನೋಡುವಾಗ ನನಗೆ ನನ್ನ ಅಪ್ಪ , ನಮ್ಮ ಹಟ್ಟಿಯ ಜೋಡಿ ಕೋಣಗಳ ಬಗ್ಗೆ ವಹಿಸುವ ಕಾಳಜಿಯ ನೆನಪಾಗುತ್ತದೆ. ಆ ಸೈಕಲನ್ನು ಒರೆಸುವುದೇನು..ಅದರ ಚೈನ್ ಗೆ ಆಯಿಲ್ ಬಿಡುವುದೇನು..ಅದರ ಚಂದವನ್ನು ನೋಡಿಯೇ ತೀರಬೇಕು. ಪ್ರೀತಿಯಿಂದ ಸಾಕಿದ ಬೆಲೆಬಾಳುವ ಕುದುರೆಯಂತೆ ಆ ಸೈಕಲ್ ನ ಆರೈಕೆ ಮಾಡುತ್ತಿದ್ದ ಪಾಂಡು, ಬೇರೆಯವರಿಗೆ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಅವನು ಸೈಕಲ್ ಏರಿ ಹೊರಟನೆಂದರೆ ಥೇಟ್ ಐರಾವತವೇರಿದ ದೇವೇಂದ್ರನೇ. ಅಂತಹ ಅಮೂಲ್ಯವಾದ ಅವನ ವಸ್ತು ನಮ್ಮ ಪಾಲಿಗೆ ಕೈಗೆಟುಕದ ಮುಗಿಲತಾರೆ. ಸೈಕಲೆಂದರೆ ನಮಗೋ ತೀರದ ಕುತೂಹಲ. ದೊಡ್ಡಕಣ್ಣುಗಳಿಂದ ಅದರೆಡೆಗೇ ನೋಡಿ ನಾವೂ ಅದರ ಮೇಲೆ ಹತ್ತಿ ಸವಾರಿ ಮಾಡಬೇಕು ಅಂತ ಪ್ರತೀ ದಿನ ಆಸೆ ಪಡೋದಷ್ಟೇ ನಮ್ಮಿಂದ ಮಾಡಲು ಸಾಧ್ಯವಿದ್ದದ್ದು; ಈಡೇರುತ್ತಿರಲಿಲ್ಲ.  ಅಷ್ಟು ಚಂದವಿತ್ತು ಆ ಸೈಕಲ್. ಎರಡೂ ಹ್ಯಾಂಡಲ್ ನ ಕೊನೆಯಲ್ಲಿ ಜೋಡಿಸಿದ ಹಸಿರು ಜರಿಗಳು ಗಾಳಿಗೆ ತರುಣಿಯ ಕೂದಲಿನಂತೆ ಲಾಸ್ಯವಾಡುತ್ತಿತ್ತು. ಇನಿದನಿಯ ಬೆಲ್, ಕ್ಯಾರಿಯರ್ ಗೆ ಹಾಕಿದ ಚಂದದ ಪೆಟ್ಟಿಗೆ...ಹೀಗೆ ಅನೇಕ ಗುಣವಿಶೇಷಗಳಿದ್ದರೂ ಎಲ್ಲಕಿಂತ ಕುತೂಹಲ ಹುಟ್ಟಿಸುತ್ತಿದ್ದದ್ದು ಅದರ ಡೈನಮೋ. ಪೆಡಲ್ ಹೊಡೆದ ಹಾಗೇ ಬೆಳಕು ಕೊಡುತ್ತಿದ್ದ ಡೈನಮೋ ನನ್ನಲ್ಲಿ ಹುಟ್ಟಿಸುತ್ತದ್ದ ಬೆರಗು ಅಪಾರ. ಆ ಸೈಕಲ್ ನ ಮೇಲಿನ ಅವನ ಹಿಡಿತವೂ ಅದ್ಭುತ. ಮುಂದಿನ ಸರಳಿನ ಮೇಲೆ ನನ್ನನ್ನೂ ಹಿಂದಿನ ಕ್ಯಾರಿಯರ್ ಮೇಲೆ ಸಂತುನನ್ನೂ ಕೂರಿಸಿಕೊಂಡು ಪರ್ಕಳ ಪೇಂಟೆಯಿಂದ ಮನೆಗೆ ಆರಾಮವಾಗಿ ತ್ರಿಬ್ಬಲ್ ರೈಡ್ ಮಾಡುತ್ತಿದ್ದ. ಹೀಗೇ ಒಟ್ಟಿಗೆ ನಾವು ಸಂಜೆ ಬಾಬುವಿನ ಅಂಗಡಿಗೆ ಆಮ್ಲೇಟ್ ತಿನ್ನಲು ಹೋಗುತ್ತಿದ್ದ ನೆನಪು. ಆಗೊಮ್ಮೆ ಈಗೊಮ್ಮೆ ಹೀಗೆ ಅದರ ಮೇಲೆ ಕೂತು ಸೈಕಲ್ ಕಲಿಯುವ ನಮ್ಮ ಆಸೆ ಗರಿಗೆದರಿ ಕುಣಿಯಲಾರಂಬಿಸಿತು.

ಅವನಲ್ಲಿ ನಮ್ಮ ಸೈಕಲ್ ಕಲಿಯುವ ಆಸೆಯನ್ನು ತಿಳಿಸಬೇಕೆಂದು ಎಷ್ಟು ಬಾರಿ ಅಂದುಕೊಂಡರೂ ಅವನ ಗತ್ತು ಗಾಂಭೀರ್ಯದ ಮುಂದೆ ಎಲ್ಲವೂ ಟುಸ್ ಆಗುತ್ತಿತ್ತು. ಕೊನೆಗೂ ಒಂದು ದಿನ ಧೈರ್ಯ ಮಾಡಿ ಕೇಳಿದೆವು ನಮಗೂ ಸೈಕಲ್ ಕಲಿಸಿಕೊಡು ಎಂದು. ಸ್ವಲ್ಪ ಹೊತ್ತು ಸುಮ್ಮನಿದ್ದ ಪಾಂಡು ನಂತರ  ಯಕ್ಷಗಾನದ ದಶಕಂಠ ರಾವಣನ ಪಾತ್ರಧಾರಿ ನಕ್ಕ ಹಾಗೆ ಗಹಗಹಿಸಿ ನಕ್ಕು ಬಿಟ್ಟ. ನನಗೋ ಅವಮಾನವಾದಂತೆನಿಸಿ ಪೆಚ್ಚಾದೆ. ನಮ್ಮ ಸೊರಗಿ ಹೋದ ಮುಖಗಳನ್ನು ನೋಡಿ ಬಹುಶಃ ಅನುಕಂಪ ಉಕ್ಕಿರಬೇಕು.  ನಂತರ ಹೇಳಿದ, "ಸೈಕಲ್ ಕಲಿಯೋದು ಅಂದ್ರೆ ತಮಾಷೆಯ ಮಾತಲ್ಲ. ಅದಕ್ಕೆ ತುಂಬಾ ಧೈರ್ಯ ಬೇಕು. ಎದ್ದು ಬಿದ್ದು ಗಾಯಮಾಡಿಕೊಳ್ಳಲು ರೆಡಿ ಇದ್ರೆ ನಾನು ಕಳಿಸಿ ಕೊಡ್ತೇನೆ. ಆದ್ರೆ ನಾನು ಹೇಳಿದ ಹಾಗೇ ಪ್ರಾಕ್ಟೀಸ್ ಮಾಡ್ಬೇಕು" ಅಂತ ಸಣ್ಣ ಲೆಕ್ಚರ್ ಕೊಟ್ಟ.  ಏನೇ ಆಗ್ಲಿ, ಅಂತೂ ಕಲಿಸಲು ಒಪ್ಪಿದ್ನಲ್ಲ ಅನ್ನೋ ಸಮಾಧಾನ ನಮಗೆ. ಆದರೆ ಪಾಂಡು ಎಂತಹ ಖಡಕ್ ಟ್ರೈನರ್ ಅನ್ನೋದು ನಮಗೆ ಮೊದಲ ದಿನದಲ್ಲಿಯೇ ಅನುಭವಕ್ಕೆ ಬಂತು. ಹೋ...!, ಇವತ್ತು ಸೈಕಲ್ ಮೇಲೆ ನಮ್ಮ ಸವಾರಿ....ಅಂತ ಅಂದುಕೊಂಡು ನಾವು ಸೈಕಲ್ ಹತ್ರ ಬಂದದ್ದೇ ಬಂತು, ಆದ್ರೆ ನಿಜ ಸಂಗತಿ ಬೇರೆಯೇ ಇತ್ತು. ಅಲ್ಲಿ ಪಾಂಡುವಿನ ಟ್ರೈನಿಂಗ್ ಶೆಡ್ಯೂಲ್ ತಯಾರಾಗಿತ್ತು.  "ಮೊದಲು ಸೈಕಲ್ ನ್ನು ತಳ್ಳಿಕೊಂಡೇ ಹೋಗಬೇಕು, ಬೀಳದ ಹಾಗೇ ಆರಾಮವಾಗಿ ಸೈಕಲ್ ನ್ನು  ತಳ್ಳುವ ಬಲ ನಿಮಗೆ ಬಂದಿದೆ ಅಂತ ಗ್ಯಾರಂಟಿ ಆಗೋ ತನಕ ಇದೇ ಟ್ರೈನಿಂಗ್ ಅಂತ ಹೇಳಿ ಒಂದು ವಾರ ಬರೇ ಸೈಕಲ್ ತಳ್ಳಿಸಿದ. ಕಷ್ಟಪಟ್ಟು ನಾವು ಸೈಕಲ್ ತಳ್ಳೋದನ್ನ ಗದ್ದೆಯ ದಂಡೆಯ ಮೇಲೆ ಕುಳಿತು ಎಂಜಾಯ್ ಮಾಡುತ್ತಿದ್ದ. ಬೀಳಿಸಿದರೆ ವಾಚಾಮಗೋಚರ ಬೈದು ಆವತ್ತಿನ ಟ್ರೈನಿಂಗ್ ಗೆ ಪ್ಯಾಕಪ್ ಹೇಳುತ್ತಿದ್ದ. ಅಷ್ಟಕೇ ನಿಲ್ಲದೇ , ದಿನದ ಟ್ರೈನಿಂಗ್ ಮುಗಿದ ಕೂಡಲೇ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ವಹಿಸಿ ಬಿಡುತ್ತಿದ್ದ. ನಾನು ಅದರ ಟೈರ್ ಗಳಿಗೆ ಗಾಳಿ ಹಾಕಿದರೆ  ಸಂತುಗೆ ಗದ್ದೆಯ ಹತ್ತಿರದ ತೋಡಿಗೆ ಸೈಕಲ್ ತೆಗೆದುಕೊಂಡು ಹೋಗಿ ಚೆನ್ನಾಗಿ ತೊಳೆಯುವ ಕೆಲಸ, ಗದ್ದೆ ಕೆಲಸದ ನಂತರ ಕೋಣಗಳನ್ನು ನೀರಿಗೆ ತಂದು ತೊಳೆಯುವ ಹಾಗೆ. ಅದಾದ ನಂತರ  ಸೈಕಲ್ ನ್ನು  ಮನೆಯ ಅಂಗಳದ ಅದರ ಸ್ವಸ್ಥಾನದಲ್ಲಿಟ್ಟು ಬೀಗ ಹಾಕುವ ಜವಾಬ್ದಾರಿ ಪುಟ್ಟಿಯ ಪಾಲಿಗೆ.

ಒಂದು ವಾರದ ನಂತರ ಕಾಲನ್ನು ಪೆಡಲ್ ರಾಡ್ ಹಾಗೂ ಸೀಟ್ ರಾಡ್ ನ ಒಳಗೆ ತೂರಿಸಿ 'ಒಳಪೆಡ್ಳು' ಹೊಡೆಯುವ ವಿಧಾನವನ್ನು ತೋರಿಸಿಕೊಟ್ಟ. ಸೀಟ್ ಹತ್ತಿ ಕಲಿಯುವಷ್ಟು ಉದ್ದ ಆಗ ನಾವ್ಯಾರೂ ಇರಲಿಲ್ಲ. ಅಂತೂ ಅದೇ ವಿಧಾನದಿಂದ ಆ ಬೇಸಗೆ ರಜೆಯಲ್ಲಿ ನಾವು ಮೂವರೂ ಸೈಕಲನ್ನು ಒಳಪೆಟ್ಳು ಹೊಡೆದೇ ನಡೆಸಲು ಕಲಿತೆವು. ಒಳಪೆಡ್ಳಿನಿಂದ ಮುಖ್ಯ ಸೀಟಿಗೆ ಹತ್ತಿ ಸವಾರಿ ಮಾಡಲು ನಂತರ ಎಷ್ಟೋ ವರ್ಷಗಳು ಬೇಕಾದವು‌. ಮುಂದೆ ನಾವೆಲ್ಲರೂ ಸ್ಕೂಟರ್ ಬೈಕ್, ಕಾರ್ ಎಲ್ಲವನ್ನೂ ಕಲಿತೆವು. ಆದರೆ ಯಾವುದರಲ್ಲಿಯೂ ಇಷ್ಟು ಸ್ವರಸ್ಯ ಇರಲಿಲ್ಲ. ಹಾಗಾಗಿ ಸೈಕಲ್ ಕಲಿತಷ್ಟು ಶ್ರದ್ಧೆಯಿಂದ , ಭಯಭಕ್ತಿಯಿಂದ ಯಾವುದನ್ನೂ ಕಲಿತಿಲ್ಲ. ಯಾಕೆಂದರೆ ಆಗ ಪಾಂಡುನಂತ ಟ್ರೈನರ್ ನಮಗೆ ಸಿಗಲೇ ಇಲ್ಲ .

No comments:

Post a Comment