Wednesday 26 April 2017

ಬೇಸಿಗೆ ಶಿಬಿರ.

ಪ್ರತೀ ಬಾರಿ ಬೇಸಿಗೆ ರಜೆಯಲ್ಲಿ ನಾನು ಮಾವನ ಮನೆಯಲ್ಲಿಯೇ ಇರುವುದು. ಅವರ ತೋಟದಲ್ಲಿ ವರ್ಷಕ್ಕೊಂದು ದೊಡ್ಡ ಆಟದ ಮನೆಯನ್ನು ಕಟ್ಟುವುದು, ಮತ್ತು ಆ ಬೇಸಿಗೆಯ ಎಲ್ಲಾ ಆಟಗಳನ್ನು ಅಲ್ಲಿಯೇ ಆಡುವುದು ಪ್ರತೀ ವರ್ಷ ತಪ್ಪದೇ ನಡೆದುಕೊಂಡು ಬಂದಿತ್ತು. ಆ ವರ್ಷ ನಾನು ಏಳನೇ ಕ್ಲಾಸ್ ನಲ್ಲಿದ್ದೆ. ಕ್ಲಾಸ್ ನ ವಾರದ ಡಿಬೇಟ್, ಹಾಡು ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸಿ ಗಮನಸೆಳೆದಿದ್ದೆ. ಹಾಗಾಗಿ ಆ ವರ್ಷ ನಡೆಯುವ ತಾಲೂಕು ಮಟ್ಟದ ಬೇಸಿಗೆ ಶಿಬಿರದಲ್ಲಿ ನನ್ನ ಹೆಸರನ್ನು ಸೇರಿಸಿದ್ದು ನನಗೆ ಗೊತ್ತೇ ಇರಲಿಲ್ಲ.

ನಾನು ಎಂದಿನಂತೆ ಮಾವನ ಮನೆಗೆ ಸಿದ್ದನಾಗುತ್ತಿದ್ದೆ ನನ್ನ ಬಡ್ಗ್ ಬಜಾರ್ ಗಳೊಂದಿಗೆ.ಹೊರಡುವ ಮೊದಲ ದಿನ ಅಪ್ಪ ಕರೆದು ಹೇಳಿದ್ರು, " ಈ ಸಲ ಮಾವನ ಮನೆಗೆ ಹೋಗೋದಲ್ಲ....ಮಂಗನ ಹಾಗೆ ಆಟ ಆಡ್ಲಿಕ್ಕೆ. ಸಣ್ಣ ಮಗು ಅಲ್ಲ ಈಗ ನೀನು. ನಿನ್ನ ಮೇಷ್ಟ್ರು ನಿನ್ನನ್ನು ಈ ಸಲದ ಬೇಸಿಗೆ ಶಿಬಿರಕ್ಕೆ ಹಾಕಿದ್ದಾರೆ.ಹೋಗಿ ಅವರು ಹೇಳಿದ ಹಾಗೆ ಕೇಳ್ಕೊಂಡು ಗಲಾಟೆ ಮಾಡದೇ ಇರ್ಬೇಕು". ತಲೆ ಮೇಲೆ ದೊಡ್ಡ ತೆಂಗಿನ ಕಾಯಿ ಬಿದ್ದಂತಾಗಿ " ನಾನು ಹೋಗಲ್ಲ. ನಾಳೆ ಬರ್ತಾನೆ ಅಣ್ಣ, ಅಲ್ಲಿ ಮನೆ ಮಾಡ್ಲಿಕ್ಕೆ ಉಂಟು...." ಅಂದಾಗ "ಹೋಗೋದಿಲ್ವಾ...ನಿನಗೆ..ತಡಿ ಮಾಡ್ತೇನೆ..." ಅಂತ ಹೇಳಿ ಹುಣಸೆ ಬೆತ್ತದಿಂದ ಕುಂಡೆಗೆ ಹೊಡೆದ ನಾಲ್ಕು ಪೆಟ್ಟಿನ ನೋವು ಮರೆಯುವ ಮೊದಲೇ ನಾನು ಬೇಸಿಗೆ ಶಿಬಿರದಲ್ಲಿದ್ದೆ.

'ಎಂತಾ ಕರ್ಮ ಮರ್ರೆ, ಓಡೋದು, ಟೊಂಕದ ಆಟ, ಕಲರ್ ಯಾವ್ದು ಹೇಳೋದು, ಏನೇನೋ ಲೆಕ್ಕ ಹಾಕೋದು, ಚಿತ್ರ ಬರೆಯೋದು ( ಕಲರ್ ಕೊಡ್ಲಿಕ್ಕೆ ಕಲರ್ ಪೆನ್ಸಿಲ್ ಒಂದಿದ್ದರೆ ಒಂದಿಲ್ಲ), ಹಾಡ್ಲಿಕ್ಕೆ ಬರದಿರೋರೂ ಒತ್ತಾಯದಲ್ಲಿ ಹಾಡೋದು....ಅಬ್ಬಾ...ಕೇಳ್ಲಿಕ್ಕೆ ಸಾಧ್ಯ ಇಲ್ಲ.ನನ್ನ ಸ್ಕೂಲ್ ನವರೊಬ್ರೂ ಇಲ್ಲ. ಯಾವಾಗ ಮುಗಿತದಾ' ಅಂತ ನನ್ನಷ್ಟಕ್ಕೆ ಯೋಚಿಸೋದೇ ಕೆಲ್ಸ ಆಗೋಯ್ತು. ಅದೂ ಅಲ್ಲದೇ ನನ್ನ ಅಧಿಕ ಪ್ರಸಂಗದಿಂದಾಗಿ ನನ್ನನ್ನು ರೇಗಿಸೋರ ಒಂದು ಗುಂಪೇ ಇತ್ತು. " ಅಯೆಡ ಏರ್ ಪಾತೆರ್ನು...ಪರ್ಕಳದ ಪಿರ್ಕಿ ...ಮಲ್ಲ ಶೋ..ಮಲ್ಪುವೆ" (ಅವನತ್ರ ಯಾರು ಮಾತಾಡೋದು....ಪರ್ಕಳದ ಹುಚ್ಚ...‌ದೊಡ್ಡ ಜನರ ಹಾಗೆ ಮಾಡ್ತಾನೆ) ಅಂತ ಹೇಳುವಾಗ ಪರ್ಕಳ ಊರಿನವರಾರೂ ಇಲ್ಲದ್ದು ನನಗೆ ಇನ್ನೂ ಕಿರಿಕಿರಿ ಎಣಿಸುತ್ತಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದವರದ್ದು ಇನ್ನೂ ದೊಡ್ಡ ಉಪದ್ರ. ಬಹುಶಃ ಕೆಲವರಿಗೆ ಆಕಸ್ಮಿಕವಾಗಿ ದೊರೆಯುವಂತಹ (ಬೇಕಾದವರು ಸಿಗದಿದ್ರೆ ಮತ್ತೆ ಸಿಕ್ಕವರು ನಡಿತದೆ ಅನ್ನುವಂತೆ) ಈ 'ಸಂಪನ್ಮೂಲ ವ್ಯಕ್ತಿ' ಯ ಪಟ್ಟದಿಂದಾಗಿ ತಮ್ಮಲ್ಲಿರುವ ಬಂಡವಾಳವನ್ನೆಲ್ಲಾ ಇಲ್ಲಿ ಪ್ರದರ್ಶಿಸಿ ಬಿಡುತ್ತಾರೆ, ಅದು ವಿಷಯಕ್ಕೆ ಅಗತ್ಯವಿರಲಿ ಇಲ್ಲದಿರಲಿ....ಕೇಳುವ ಕಿವಿ ಎದುರಿಗೆ ಉಂಟಲ್ಲ ಅನ್ನುವ ಗ್ಯಾರಂಟಿಯಿಂದ. ಅವರು ತಮ್ಮ ಬಂಡವಾಳದ ತೋರಿಕೆಯಲ್ಲಿ ನನಗೆ ರಾಕ್ಷಸರಾಗಿ ಕಾಣುತ್ತಿದ್ದರು.

ಆ ದಿನ ಖೋ ಖೋ ಆಟ ಆಡಿಸುತ್ತಿದ್ದರು. ಇದು ನನಗೆ ತುಂಬಾ ಇಷ್ಟವಾದ ಆಟವಾದ್ದರಿಂದ ಖುಷಿಯಲ್ಲಿ ಆಡುತ್ತಿದ್ದೆ. ಆದರೂ ಮಧ್ಯದಲ್ಲಿ ಔಟ್ ಆಗಿ ಸೈಡಿಗೇ ನಿಂತಿದ್ದೆ. ಆಗ ಬೆನ್ನ ಮೇಲೆ ಒಂದು ಹೊಡೆತ ಬಿತ್ತು . ಹೆಚ್ಚಾಗಿ ಖೋ ಖೋ ಆಟದಲ್ಲಿ ನಮಗೆ ಆಗದ ಆಟಗಾರರಿಗೆ ಖೋ ಕೊಡೋವಾಗ ಬರೀ ಬೆನ್ನಿಗೆ ಮುಟ್ಟಿ 'ಖೋ' ಹೇಳದೇ   ಜೋರಾಗಿ ಬಡಿಯೋದು, ಅದೂ ಪೆಟ್ಟು ಎಷ್ಟು ಕಾಯಬೇಕಂದ್ರೆ ಹೊಡೆದ ನಮ್ಮ ಅಂಗೈಯೇ ಚುರುಗುಟ್ಟೋ ತರಹ. ಆದರೆ ಈಗ ನಾನು ಔಟ್ ಆಗಿ ಹೊರಗಿರೋವಾಗ ಯಾರಪ್ಪಾ ,ಈ ತರಹ 'ಖೋ' ಕೊಟ್ಟದ್ದು ಅಂತ ಸಿಟ್ಟಲ್ಲಿ ಮುಷ್ಟಿ ಬಿಗಿಹಿಡಿದೇ ತಿರುಗಿದಾಗ, ಅಲಾ...ಮಾವನ ಮಗ ನಿಂತಿದ್ದಾನೆ, ಯಕ್ಷಗಾನದಲ್ಲಿ ಅರ್ಜುನ ನೆನದಾಗ ಮುಗುಳ್ನಗುತ್ತಾ ಪ್ರತ್ಯಕ್ಷವಾಗುವ ಕೃಷ್ಣ ಪರಮಾತ್ಮನಂತೆ. ಆಶ್ಚರ್ಯವಾದರೂ ನಗೆಯ ಮರ್ಮ ಮಾತ್ರ ಗೊತ್ತಾಗಲಿಲ್ಲ...." ನೀನೇನೋ ಇಲ್ಲಿ....ಯಾರು ಹೇಳಿದ್ರು...ಹೇಗೆ ಗೊತ್ತಾಯ್ತು...."  ಅಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ ನನ್ನಿಂದ್ದಾದ್ರೂ ಒಂದಕ್ಕೂ ಉತ್ತರ ಕೊಡದೇ ಕಣ್ಸನ್ನೆಯಲ್ಲೇ  'ಬಾ ನನ್ನ ಜೊತೆ...' ಅಂತ ಸೀದಾ ಮುಂದೆ ಹೋದ. ಏನೂ ಅರ್ಥವಾಗದೇ ಅವನ ಹಿಂದೆ ನಡೆದೆ‌.

"ಸಾರ್,  ರವಿಯ ಅಜ್ಜಿ ಇವತ್ತು ಬೆಳಿಗ್ಗೆ ತೀರ್ಕೊಂಡ್ರು.ಕರ್ಕೊಂಡು ಬಾ ಅಂತ ನನ್ನನ್ನು ಕಳ್ಸಿದ್ದಾರೆ. ದಯಮಾಡಿ ಕಳ್ಸಿಕೊಡಿ..." ಅಣ್ಣ ಶಿಬಿರದ ವ್ವವಸ್ಥಾಪಕರಲ್ಲಿ ಹೇಳುತ್ತಿರುವಾಗ ನನಗೆ ಅಳುವೇ ಬಂತು. 'ಅಯ್ಯೋ...ಅಜ್ಜಿ...' ಅಂತ ಕಣ್ಣೀರು ತುಂಬಿಕೊಳ್ಳುವಾಗ, "ಹೌದಾ...ಸರಿಯಪ್ಪಾ..‌.ಕರ್ಕೊಂಡು ಹೋಗು. ಬೇಗ ಹೊರಡಿ" ಅಂತ ಮ್ಯಾನೇಜರ್ ಹೇಳುವಾಗಲೇ ನಾನು ನನ್ನ ಬ್ಯಾಗ್ ತೆಗೆದುಕೊಂಡು ಹೊರಬಂದಿದ್ದೆ.

ಗೇಟ್ ಹೊರಗೆ ಬಂದು " ಅಣ್ಣ , ಏನಾಯ್ತಣ್ಣ...ನನ್ನ ಅಜ್ಜಿಗೆ..." ಅಳುವಲ್ಲೇ ಕೇಳಿದಾಗ ಅವನೋ ಮುಗುಳ್ನಕ್ಕು " ಬೇಗ ಬೇಗ ಸೈಕಲ್ ಹತ್ತು...ನಿನ್ನ ಅಜ್ಜಿಗೇನಾಗಿದೆ...ಚೆನ್ನಾಗಿದ್ದಾರೆ...ನಮ್ಮ ಮನೆಗೆ ಹೋಗೋಣ....ನಿಂಗೆ ಬೇರೆ ಕೆಲ್ಸ ಇಲ್ವಾ‌‌‌‌...ಶಿಬಿರ ಗಿಬಿರ...." ಅಂತ ಹೇಳಿದಾಗ ಅವನ ಬೆನ್ನಿಗೊಂದು 'ಖೋ' ಕೊಟ್ಟಿದ್ದೆ. " ಅಲ್ಲ.‌‌‌‌...ಆ ಮ್ಯಾನೇಜರ್ ನಮ್ಮ ಸ್ಕೂಲ್ ನವನಲ್ಲ. ಇಲ್ಲದಿದ್ರೆ ನಿನ್ನ ನಾಟಕ ನಡಿತಿರ್ಲಿಲ್ಲ. ಹೋದ ವರ್ಷದ ಕ್ರಿಕೆಟ್ ಟೂರ್ನಮೆಂಟ್ಗೇ ನಾನು ನನ್ನ ಅಜ್ಜಿಯನ್ನು 'ಕೊಂದಿದ್ದೆ'....ಹ್ಹ ಹ್ಹ ಹ್ಹ" ಅಂತ ನಾನು ನಗುವಾಗ ನನ್ನ ಕಡೆ ಅವನು ನೋಡಿದ ನೋಟದಲ್ಲಿ 'ಎಲಾ, ಬಡ್ಡೀ ಮಗನೇ' ಅಂದಂತಹ ಭಾವ ಇತ್ತು...

No comments:

Post a Comment