Wednesday, 26 April 2017

ಕರಗಿದ ಮಂಜು

ನಾನು ಅಂದುಕೊಂಡ 'ಪ್ರೀತಿ' ಯಾಕೆ ಇಷ್ಟು ಬೇಗ ಸೊರಗಿತು? ಹಾಗಾದ್ರೆ ನಾನು ಪ್ರೀತಿಯಲ್ಲಿ ಇರಲಿಲ್ಲವಾ?  ರಶ್ಮಿ ಯಾಕೆ ಆವತ್ತು ನನ್ನ ಕಣ್ಣಿಗೆ ಚಂದ ಕಾಣಲಿಲ್ಲ?  ಆವತ್ತೇ ಯಾಕೆ ಅವಳು ಕುಳ್ಳಿ ದಪ್ಚ, ಬಣ್ಣ ಕಪ್ಪು ಅಂತೆಲ್ಲಾ ಅನ್ನಿಸಿದ್ದು? ಅದಕ್ಕೆಲ್ಲಾ ಪುಷ್ಟಿ ನೀಡುವಂತೆ ಗೆಳೆಯ ಸುಧೀರ್ ಆಡಿದ ಮಾತುಗಳು, " ಲವ್ ಈಸ್ ಬ್ಲೈಂಡ್ ಅನ್ನೋದು ನಿನ್ನನ್ನು ನೋಡಿಯೇ ಗೊತ್ತಾಯ್ತು, ಹೋಗಿ ಹೋಗಿ ಆ ಹುಡುಗಿಯನ್ನು ಲವ್ ಮಾಡ್ತಿದ್ದಿಯಲ್ಲ, ನಿಂಗೇನು ಹುಚ್ಚಾ? ಅವಳನ್ನು ಬಿಟ್ರೆ ಬೇರೆ ಹುಡ್ಗೀನೇ ಸಿಗ್ಲಿಲ್ವಾ?" ಅಂತ. ಒಟ್ಟಾರೆಯಾಗಿ ನನ್ನ ಮನಸ್ಸು ತುಮುಲಗಳ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡಿತು.

ಆ ದಿನದಿಂದ ರಶ್ಮಿ ಜೊತೆಯಲ್ಲಿ ಸರಿಯಾಗಿ ಮಾತಾಡಿದ್ದೇ ಇಲ್ಲ. ಅವಳನ್ನು ಅವಾಯ್ಡ್ ಮಾಡುತ್ತಲೇ ಬಂದೆ. ಅವಳಿಗೂ ಈ ಅನುಮಾನ ಬಂತು.ಆ ದಿನದಿಂದ ಅವಳು ನನ್ನಲ್ಲಿದ್ದ ಅವಳ 'ಶಶಿ' ಯನ್ನು ಹುಡುಕುವ ಹರಸಾಹಸ ಮಾಡಿ ಸೋತಳು. "ಶಶಿ, ನೀನು ಮೊದಲಿನಂತಿಲ್ಲ" ಅಂದ್ಳು. ಅದು ನನಗೆ ಗೊತ್ತಿತ್ತು. ಇಷ್ಟು ದಿನದ ಗಾಢ ಪ್ರೀತಿ ಆವತ್ತಿನ ಒಂದು ಭೇಟಿಯಲ್ಲಿ ಸೊರಗಿದ್ದು ಯಾಕೆ? ಅವಳ ಕಾಲ್, ಮೆಸೇಜ್ ಗಾಗಿ ಕಾತರದಿಂದ ಕಾಯುತ್ತಿದ್ದ ನಾನೇಕೆ ನಿರ್ಲಕ್ಷ್ಯ ವಹಿಸಿದೆ?  ಮಾತುಗಳು ಯಾಕೆ ಬೇಡವಾದವು? ನಿರಂತರವಾಗಿ ತಲೆ ಕೊರೆಯುತ್ತಿವೆ. ನೋಡಿದ ಎಲ್ಲಾ ಹುಡುಗಿಯರೊಂದಿಗೆ ಅವಳನ್ನು ಕಂಪೇರ್ ಮಾಡತೊಡಗಿದೆ. ಕೆಲವೊಮ್ಮೆ ಖುಷಿ ಮತ್ತೊಮ್ಮೆ ಛೇ, ನನ್ನ ಹುಡುಗಿ ಅವರಂತಿಲ್ಲ ಅಂತ ಬೇಸರ. ಅವಳ ಪ್ರೀತಿಗೆ ನಾನು ಅರ್ಹ ವ್ಯಕ್ತಿ ಅಲ್ಲವಾ? ಮೊನ್ನೆ ಮೊನ್ನೆ ಅವಳಿಗೆ ಬೇರೆ ಪ್ರೊಪೋಸಲ್ಸ್ ಬಂದಾಗ ತುಟಿಪಿಟಿಕ್ ಎನ್ನದೇ ಮೌನ ವಹಿಸಿದ್ದು ಈಗ ತೀವ್ರವಾಗಿ ಕಾಡಲಾರಂಬಿಸಿತು. ಪ್ರೀತಿಸಿದ್ದು ಖಂಡಿತಾ ಸುಳ್ಳಲ್ಲ. ಆದರೆ ಈಗ ಈ ರೀತಿಯ ಭಾವನೆ ಕಾಡುತ್ತಿರುವುದೂ ಸುಳ್ಳಲ್ಲ...! ಜೀವನವೇ ಸಾಕಾಗಿ ಹೋಯ್ತು. ರಸಿಕತೆ ಎಲ್ಲಾ ಮಾಯ ಆಗಿ ಆಧ್ಯಾತ್ಮದತ್ತ ವಾಲುವ ಸಾಧ್ಯತೆಯೊಂದು ನನ್ನ ತಲೆಯಲ್ಲಿ ಹೊಕ್ಕಿದ್ದು ಕಂಡು ತೀರಾ ಅಚ್ವರಿ ಆಯ್ತು. ಇನ್ನು ರಶ್ಮಿಯ ಮನಸ್ಥಿತಿ ಹೇಗಾಗಿರಬೇಡ, ಆತ್ಮೀಯತೆ ಮಾತಾಡುತ್ತಿದ್ದ ತನ್ನ 'ಗಂಡ' ನ ಉದಾಸೀನ ಭಾವ ಕಂಡು ಅವಳ ಹೆಣ್ಣು ಮನಸ್ಸು ಗಲಿಬಿಲಿಗೊಂಡಿರಬೇಕು. ಒಂದು ಕ್ಷಣ ನಾನು ಹೇಳಿದ ಮಾತು; " ಆವತ್ತು ನಿನ್ನೊಂದಿಗೆ ಯಾಕೋ ಮಾತಾಡುವ ಮನಸ್ಸಾಗಲಿಲ್ಲ"....ಅವಳು ನಿಸ್ತೇಜ ಕಣ್ಣುಗಳಿಂದ ನನ್ನನ್ನು ಭಾವಶೂನ್ಯವಾಗಿ ನೋಡಿದ ನೋಟ ಈಗಲೂ ಎದೆಯನ್ನು ಸಾವಿರ ಈಟಿಗಳಿಂದ ಚುಚ್ವುತ್ತಿದೆ. ಆ ದಿನದ ನಂತರ ಅವಳ ಪ್ರತಿಕ್ರಿಯೆ ಮನಕಲಕುವಂತಿತ್ತು. ಅವಳನ್ನು ಏನೇನೋ ಕೆಟ್ಟ ಕನಸುಗಳು, ಯೋಚನೆಗಳು ಮುತ್ತಿಬಿಟ್ಟವು. "ನೀನಿಲ್ಲದೇ ಬದುಕಲಾರೆ ಶಶಿ" ಅಂದು ಬಿಟ್ಳು. ಅಷ್ಟು ಮಾತ್ರ ಅವಳಿಂದ ಹೇಳಲು ಸಾಧ್ಯವಾದದ್ದು ಮಾತ್ರವಲ್ಲದೇ ಅವಳಿಗೆ ಹೇಳಲೂ ಅಷ್ಟೇ ಇದ್ದದ್ದು. ಅದೇ ನಾನು ಅವಳಿಂದ ಕೇಳಿದ ಕೊನೆಯ ಮಾತು.ನಿಜವಾಗಿಯೂ ಅವಳು ನನ್ನಿಂದ ಬಯಸಿದ್ದು ನಿರ್ಮಲವಾದ ಪ್ರೀತಿ ಮಾತ್ರ. ಅದು ಸುದೀರ್ಘ ಮತ್ತು ಯಾವುದೇ ಶರತ್ತು ಇಲ್ಲದ್ದು. ನಾನು ಯಾವಾಗಲೂ ಹೇಳುತ್ತಿದ್ದೆ, ನನ್ನದು ಅನ್ ಕಂಡೀಷನಲ್ ಲವ್ ಅಂತ. ಆದರೆ ಅದು ಬರೀ ಬೂಟಾಟಿಕೆಯ ಮಾತುಗಳು ಅಂತ ಈಗ ಅರ್ಥ ಆಗುತ್ತಿದೆ. ಸದಾ ಅವಳಿಗೆ "ಕಡಿಮೆ ತಿನ್ನು, ದಪ್ಪ ಆಗ್ಬೇಡ, ಆ ಡ್ರೆಸ್ ಹಾಕ್ಬೇಡ, ಅಲ್ಲಿಗೆಲ್ಲಾ ಹೋಗ್ಬೇಡ, ಅವನೊಂದಿಗೆ ಮಾತಾಡ್ಬೇಡ......".  ಓಹ್, ಎಷ್ಟೊಂದು ಕಂಡೀಷನ್ಸ್ ಗಳು?...ಆದರೂ ನನ್ನದು ಅನ್ ಕಂಡೀಷನಲ್ ಲವ್ ಅನ್ನೋದನ್ನೂ ಒಪ್ಪಿಕೊಂಡಿದ್ದ ಹುಡುಗಿ ಅವಳು.

ನಮ್ಮನ್ನು ಪ್ರೀತಿಸುವ ಹುಡುಗಿಯೇ ನಮ್ಮ ಬಾಳ ಸಂಗಾತಿಯಾದ್ರೆ ಜೀವನ ತುಂಬಾ ಸುಖಮಯ ರಸಮಯ ಆಗಿರುತ್ತದೆ ಅನ್ನೋದು ನಾನೂ ಒಪ್ಪುವ ಸರಳ ಸತ್ಯ. ಆದರೂ ನನಗಾಗಿ ಮಿಡಿಯುವ ,ಪ್ರೀತಿಸುವ ,ಹೇಗಿದ್ದರೂ ನನ್ನನ್ನು ಒಪ್ಪಿಕೊಳ್ಳುವ ತುಂಬು ಪ್ರೀತಿಯ ಹುಡುಗಿ ಸಿಕ್ಕಿರುವಾಗ ಯಾಕೆ ಬೇಡದ ಶರತ್ತು ಹಾಕ್ತೀಯ ಶಶಿ? ಯಾವತ್ತೂ ಭಾವಜೀವಿ, ಕವಿಮನಸ್ಸು ಅಂದುಕೊಳ್ಳುವ ; ಬೇರೆಯವರೂ ಹಾಗೇ ಹೇಳಲಿ ಎಂದು ಬಯಸುವ ನಿರ್ದಿಷ್ಟ ವ್ಯಕ್ತಿತ್ವ ಇಲ್ಲದ ವ್ಯಕ್ತಿ ನೀನು. ಇನ್ನೊಂದು ಜೀವದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ, ಅದಕ್ಕೆ ಸ್ಪಂದಿಸುವ ಮನಸ್ಸೂ ನಿನಗಿಲ್ಲದೇ ಹೋಯಿತೇ?  ಹಾಗಾದರೆ ಆ ಮಾತುಗಳೆಲ್ಲಾ ಬರೀ ಆದರ್ಶಕ್ಕೇ ಸೀಮಿತನಾ? ಧಿಕ್ಕಾರವಿರಲಿ ನಿನ್ನ ಕವಿಮನಸ್ಸಿಗೆ. ನೀನು ಕೇವಲ ಸೌಂದರ್ಯದ ಆರಾಧಕನಾಗಿದ್ರೆ ಅವಳೊಂದಿಗೆ ಮೊದಲೇ ಹೇಳಿ ಬಿಡಬಹುದಾಗಿತ್ತು. ಈಗ ಪ್ರೀತಿಯ ದಾರಿಯಲ್ಲಿ ಅವಳೊಡನೆ ಬಹುದೂರ ಸಾಗಿ ಬಂದ ಮೇಲೆ  ಅವಳ ಕೈ ಬಿಡಬೇಕೆಂಬ ಒಂದು ಸಣ್ಣ ಭಾವ ನಿನ್ನಲ್ಲಿ ಮೂಡಿದರೂ ಅದು ಅಕ್ಷಮ್ಯ ಅಪರಾಧ. ನಾನು ನಿನ್ನನ್ನು ಯಾವತ್ತೂ ಕ್ಷಮಿಸೋದಿಲ್ಲ. ಪ್ರೀತಿ ಬಯಸಿ ಸಿಗಲಾರದೇ, ಈಗಾಗಲೇ ಸೋತುಹೋದ ಹುಡುಗಿ ಅವಳು. ಈ ಪ್ರೀತಿಗೀತಿ ಬೇಡ ಅಂತ ಊರಿಂದ ದೂರ ಹೋಗಿ‌ ಹೃದಯವನ್ನು ಕಲ್ಲು ಮಾಡಿಕೊಂಡಿದ್ದವಳು. ಅಲ್ಲಿ ಮತ್ತೆ ಪ್ರೀತಿಯ ಅಮೃತ ಸಿಂಚನ ಮಾಡಿ , ಅವಳ ಮನದ ಬರಡು ಅಂಗಳದಲ್ಲಿ ಮತ್ತೆ ಒಲವಿನ ಹೂವರಳಿಸಿ ಸಂತಸದಲ್ಲಿ ನಳನಳಿಸುವಂತೆ ಮಾಡಿದ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದಾಳೆ; ಮಗು ತನ್ನ ಬೊಂಬೆಯನ್ನು ಪ್ರೀತಿಸುವಂತೆ. ಈಗೇನಾದ್ರು ನೀನು ಅವಳನ್ನು ನೆಗ್ಲೆಕ್ಟ್ ಮಾಡಿದ್ರೆ ಮತ್ತೆ ಗಂಡು ಜಾತಿಯ ಮೇಲೆ ಅವಳ ನಂಬಿಕೇನೆ ಹೊರಟುಹೋಗಬಹುದು. ಅದು ದೊಡ್ಡ ನಂಬಿಕೆ ದ್ರೋಹ. ನಿನ್ನ ಸ್ನೇಹಿತರಿಗೆ ಸಿಕ್ಕಿದ ಹುಡುಗಿಯರನ್ನೆಲ್ಲಾ ನೋಡಿ ಅವರೊಡನೆ ಇವಳನ್ನು ಕಂಪೇರ್ ಮಾಡತೊಡಗಿದ್ದು ನಿನ್ನ ತಪ್ಪು. ಮದುವೆ ಆದ ಮೇಲೂ ಹೀಗೆನೇ ಮಾಡ್ತಿಯಾ? ಹೆಂಡತಿ ಬೋರ್ ಆದ್ಳು ಅಂತ ಬೇರೆ ಕಡೆ ನೋಡ್ತಿಯಾ? ಅವಳಿಗೆ ಮೋಸ ಮಾಡ್ತಿಯಾ? . ಶಶಿ, ಬದುಕು ನೀನಂದುಕೊಂಡ ಹಾಗೆ ಸುಲಭವಾಗಿಲ್ಲ. ಬೇರೆಯವರ ಜೊತೆ ಇವಳನ್ನು ಹೋಲಿಸಿ ಚಂದ ಇಲ್ಲ, ಇವಳಿಗೇನೂ ಗೊತ್ತಿಲ್ಲ ಅಂತ ಯಾವತ್ತೂ ಯೋಚಿಸ್ಬೇಡ. ಅವಳು ಹೇಗಿದ್ದಾಳೆಯೋ ಹಾಗೆಯೇ ಒಪ್ಪಿಕೊಂಡು ಪ್ರೀತಿಸುವ ಮನಸ್ಸು ನಿನ್ನದಾಗಬೇಕು. ಎಲ್ಲರಿಗೂ ಎಲ್ಲವೂ ಸಿಕ್ಕಲ್ಲ. ನಿನ್ನ ಮೇಲೆ ಪ್ರಣಾನೇ ಇಟ್ಟುಕೊಂಡಿದ್ದಾಳೆ. ನಿನ್ನ ಮೇಲೆ ಎಷ್ಟು ನಂಬಿಕೆ ಇಟ್ಟುಕೊಂಡಿದ್ದಾಳೆ ಅಂತ ಅವಳು ತನ್ನ ಸರ್ವಸ್ವವನ್ನೂ ನಿನಗೆ ಒಪ್ಪಿಸಿದಾಗಲೇ, ನಿನಗೆ ಅರಿವಾಗಬೇಕಿತ್ತು‌. ಹಾಗೆ ಮಾಡಲು ಅವಳೇನೂ ಮುಗ್ದ ಏನೂ ಗೊತ್ತಿಲ್ಲದ ದಡ್ಡ ಹುಡುಗಿ ಅಲ್ಲ. ಅರ್ಥ ಮಾಡಿಕೋ, ಕೇವಲ ಸೌಂದರ್ಯ ಮಾತ್ರ ಬೇಕಾಗಿರೋದಲ್ಲ ಬದುಕಿಗೆ. ಅದು ಶಾಶ್ವತನೂ ಅಲ್ಲ. ನೀನೇನೂ ಸಾಧನೆ ಮಾಡಿದರೂ ಮನೆಗೆ ಬಂದಾಗ ಪ್ರೀತಿಯಿಂದ ಆದರಿಸುವ ಪತ್ನಿಯೇ ಬದುಕಿನ ಜೀವಾಳ.

ತುಮುಲಗಳ ತೆರೆ ಸರಿದು ಹರಿವ ನದಿ ನಿಲ್ಲಲಿ. ಮನಸ್ಸು ಒಂದಿಷ್ಟು ಶಾಂತಗೊಳ್ಳಲಿ. ಪ್ರಶಾಂತವಾದ ಮನಸ್ಸಿನಿಂದ ಅವಳನ್ನು ಜೀವನ ಪರ್ಯಂತ ಪ್ರೀತಿಸು‌ .ಬಹಳ ದಿನಗಳ ನಂತರ ನಿನ್ನೊಡನೆ ನೀನು ಮಾತಿಗಿಳಿದು ಅಂತರಂಗವನ್ನು ಪ್ರಶ್ನಿಸಿದ್ದಿಯ.ಈ ಮಂಥನ ನಿನಗೊಂದು ಹೊಸ ಆಯಾಮವನ್ನು ನೀಡಲಿ.ಅವಳನ್ನು ಒಂದು ವಸ್ತು ಎಂದು ಪರಿಗಣಿಸದೇ ಅವಳೂ ಒಂದು ಭಾವನೆಗಳ ಮೂಟೆ ಅನ್ನೋದು ಇಂದು ನಿನಗೆ ಅರಿವಾಗಿದೆ. ಇನ್ನೆಂದೂ ಹೀಗಾಗದಿರಲಿ.ಯಾವುದೋ ಕೆಟ್ಟ ಇರುಳಲ್ಲಿ ಕಂಡ ಕರಾಳ ಕನಸು ಮತ್ತೆಂದೂ ಬೀಳದಿರಲಿ.....

No comments:

Post a Comment