Wednesday 26 April 2017

ಮದುವೆ ಆಗಿ

"ಯಾಕೆ ಮದುವೆ ಆಗ್ತೀರಿ,ನಿಮ್ಗೆ ತಲೆ ಸರಿ ಇಲ್ವಾ ಆರಾಮವಾಗಿ ತಿರ್ಗಾಡೋದು ಬಿಟ್ಟು, ಅಲ್ಲಾ....ನಮ್ನನ್ನು ನೋಡಿ ಆದ್ರೂ ತಿಳ್ಕೋಬಾರ್ದಾ?.... "  ಮದುವೆ ಆಗೋ ಕಾಲಕ್ಕೆ ’ಅ೦ಕಲ್’ ಗಳ  ಇಂತಹ ಮಾತುಗಳನ್ನೆಲ್ಲಾ ದಿನೇ ದಿನೇ ಕೇಳಿ ಭಯದಿಂದ ನಡುಗಿ ಮದುವೆಯಾಗಿರುವ ನನ್ನ ಅಂತರಂಗದ ಗೆಳೆಯ, ಚಡ್ಡೀ ದೋಸ್ತ್ ಕೀರ್ತಿಯನ್ನ ಕೇಳಿದ್ದೆ..."ಹೇಗೆ ಮದುವೆ ಆಗಬಹುದಾ? ಎಲ್ಲರೂ ಹೆದರಿಸ್ತಾ ಇದ್ದಾರೆ..."  ಅ೦ತ ಮನದ ದುಗುಡವನ್ನು ಮು೦ದಿಟ್ಟರೆ, ಅವನೋ ..."ಮದುವೆ ಆಗ್ಲೇಬೇಕು ರವಿ, ಬರೀ ಎ೦ಜಾಯ್ಮೆ೦ಟ್ ಒ೦ದೇ ಲೈಫ಼್ ಅಲ್ಲ" ಅ೦ದಿದ್ದ...!  ಮತ್ತೆ ಗೊ೦ದಲಕ್ಕೆ ಬಿದ್ದರೂ ಕಾಣದಿಹ ದಾರಿಯಲಿ ಸೊಗಸಿರಬಹುದು ಎ೦ಬ ಸುಖದ ರಮ್ಯ ಕಲ್ಪನೆಗೆ ಮುದಗೊ೦ಡು ಮದುವೆ ಆಗಿಯೇ ನೋಡುವ ಅಂತ ಮುಂದಡಿ ಇಟ್ಟೆ. ತಲ ಕಾಣದ ಬಾವಿಯಲ್ಲಿ ಮುಳುಗು ಹಾಕಿ ಬಿದ್ದು ಮುಳುಗಿದ ಕೊಡಪಾನಗಳನ್ನು ತಂದು ಕೊಟ್ಟು ಹಳ್ಳಿಯ ಹೆಂಗಸರ ಹೀರೋ ಆದವನು, ಗೋವಾದ ಬೀಚ್ ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದವನು, ದಾಂಡೇಲಿಯ ಕಾಳೀನದಿಯಲ್ಲಿ ರಾಫ್ಟಿಂಗ್ .... ಎಂತೆಂತಹ ಸಾಹಸಗಳನ್ನು ಮಾಡಿದವನು, ಯಕಃಶ್ಶಿತ್ ಮದುವೆಗೆ ಹೆದರೋದಾ?  ಏನಂದಾರು ಜನ ಅಂತ ನನಗೆ ನಾನೇ ಧೈರ್ಯ, ಸಾಂತ್ವನ ಎರಡನ್ನೂ ತಂದುಕೊಂಡಿದ್ದೆ.

ಚಂದನದ ಗೊಂಬೆ ಪಿಕ್ಚರ್ ನ ಲಕ್ಷ್ಮಿಯನ್ನು ನೋಡಿ ನಾನು ಮದುವೆಯಾಗುವ ಹುಡುಗಿಯೂ ಹೀಗೆಯೇ ಇರಬೇಕು ಅಂತ ಯೋಚನೆ ಮಾಡಿದ್ದೆ. ಆಹಾ....ಎಷ್ಟು ಚಂದ ನಾಚ್ಕೊಳ್ತಾಳೆ, ರೀ...ರೀ..ರೀ...ಅಂತ ಗಂಡನನ್ನು ಕರೆಯುವಾಗ ಮೈಮನಗಳಲ್ಲಿ ಅದೆಂತಹ ಪುಳಕ, ಕಚಗುಳಿಯಿಟ್ಟಂತಾಗಿ ನನ್ನ ಮನದಲ್ಲಿ ಅವಳ ರೂಪವೇ ಅಚ್ಚೊತ್ತಂತಾಗಿ ಯಾವ ಹುಡುಗಿಯೂ ಒಪ್ಪಿಗೆಯಾಗುತ್ತಿರಲಿಲ್ಲ. ಪ್ರತೀ ಸಲ ಹುಡುಗಿ ನೋಡೋಕೆ ನನ್ನೊಂದಿಗೆ ಗೆಳೆಯ ಮಂಜನನ್ನು ಕರೆದೊಯ್ಯುತ್ತದ್ದೆ. ಅವನೋ ಗಡದ್ದಾಗಿ ಉಪ್ಪಿಟ್ಟು ಕಾಪಿಯೋ, ಇಡ್ಲಿ ಸಂಬಾರೋ ತಿನ್ನುವುದು ಬಿಟ್ರೆ ಹುಡುಗಿ ಬಗ್ಗೆ ನೋ ಕಮೆಂಟ್ಸ್...ಹುಡುಗಿ ಬಗ್ಗೆ ಕೇಳಿದ್ರೆ, "ಊಟ ಮಾಡೋನಿಗೆ ಎಲೆಯಲ್ಲಿ ಏನನ್ನು ಬಡಿಸ್ಕೊಳ್ಬೇಕು ಅನ್ನೋದು ಗೊತ್ತಿರ್ ಬೇಕು...ನನ್ನ ಕೇಳಿದ್ರೆ....ನಾನು ಬಂದದ್ದು ತಿಂಡಿ ತಿನ್ಲಿಕ್ಕೆ..." ಅಂತ ದೇಶಾವರಿ ನಗೆ ನಗುತ್ತಿದ್ದ ಬಡ್ಡೀ ಮಗ. ಸರಿ, ಯಾರ್ಯಾರನ್ನು ಕೇಳಿದ್ರೆ ಉಪ್ಯೋಗ್ ಇಲ್ಲ. ನಾನೇ ನಿರ್ಧಾರ ತಗೋಳ್ಬೇಕು ಅನ್ನೋ ಸರಿಯಾದ ನಿರ್ಧಾರ ಬಂದು, ಇನ್ನು ನೋಡಿದ್ರೆ ಒಂದೆರಡು ಹುಡುಗಿ ಮಾತ್ರ. ಅದಕ್ಕೆ ಪುಷ್ಟಿ ನೀಡುವ ಹಾಗೇ ಗೆಳೆಯನ ಮುತ್ತುಗಳು,    " ಮತ್ಯೇನೋ...ಇನ್ನೂ ಹಳೇ ಲಕ್ಷ್ಮೀಯನ್ನು ತಬ್ಕೊಂಡಿದ್ದಿಯಾ.‌‌‌..ಈಗ ಕಾಲ ಅಪ್ಡೇಟ್ ಆಗಿದೆ. ನೀನಿನ್ನು ಅಲ್ಲೇ ಇದ್ರೆ ನಿಂಗೆ ಲಕ್ಷ್ಮೀ ಏಜ್ ನವಳೇ ಸಿಗ್ತಾಳೆ. ಯಾವುದೋ ದಿವ್ಯ, ಭವ್ಯ, ಐಶ್ವರ್ಯನನ್ನು ಒಪ್ಕೊಳ್ಳೋದು ಬಿಟ್ಟು". ನನಗೂ ಸರಿ ಅನಿಸಿತು.

"ಹುಡುಗಿ ಎತ್ರ ಅಷ್ಟಿಲ್ಲದಿದ್ರೂ ಲಕ್ಷಣ ಇದ್ದಾಳೆ, ಕೂದ್ಳು ಉದ್ದ ಇಲ್ಲದಿದ್ರೂ ಮಲ್ಲಿಗೆ ಮುಡಿಬಹುದು ಕ್ಲಿಪ್ ಹಾಕಿ....." ಅಂತ ಮೊದಲ ಬಾರಿ ಏನೇನೋ ಕನ್ಫೂಸಿಂಗ್ ಕಮೆಂಟ್ಸ್ ಕೊಟ್ಟು ತಿನ್ನುವುದರಲ್ಲಿ ಮಗ್ನನಾದ ಮಂಜ.ಮೋಹದ ಮಾಯೆ ಕವಿಯುವಾಗ ಏನೂ ಕಾಣುದಿಲ್ವಂತೆ, ಬಹುಶಃ ಆಗ ತಾನೇ ಅರಳಿದ ಪ್ರೆಶ್ ಹೂಗಳಿಂದ ಕಟ್ಟಿದ ಬಾಣ ಬಿಟ್ಟಿರಬೇಕು ಮನ್ಮಥ ನನ್ನ ಮೇಲೆ. ಯಾವ ಮಾತುಗಳೂ, ಯಾವ ಲಕ್ಷ್ಮಿಯ ಫಿಗರೂ ನನ್ನ ಮುಂದೆ ಬಾರದೇ ಧೊಪ್ ಎಂದು ಅವಳ ಮೋಹ ಪಾಶದಲ್ಲಿ ಬಿದ್ದು ಬಿಟ್ಟು ಯಾವಾಗ ಓಕೆ ಅಂದೆನೋ ನನಗೇ ಗೊತ್ತಿಲ್ಲ.ಸರಿ ಮದುವೆ ಆಯ್ತು ಒಂದು 'ಶುಭ' ಘಳಿಗೆಯಲ್ಲಿ.

ಮೊದಲ ರಾತ್ರಿ, ಹನಿಮೂನ್ ಎ೦ಬ ಬ್ಯಾಚುಲರ್ ಮನಸಿನ ಸುಖದ ಬೆಚ್ಚನೆಯ ಮಧುರ ಕನಸುಗಳೆಲ್ಲಾ ಅವಳ ಕೈಯ ಮದರ೦ಗಿಯ ಬಣ್ಣ ಕಳಚುವ ಮೊದಲೇ ತನ್ನ ನಿಜ ಸ್ವರೂಪವನ್ನು ತೋರಿಸಿಬಿಟ್ಟಿತ್ತು. ಮದುವೆ ದಿನ ಉಟ್ಟದ್ದೇ ಕೊನೆ, ಆ ಸೀರೆಯನ್ನು ಕಪಾಟಿನ ಒಳಗೆಲ್ಲೋ, ಸುಲಭದಲ್ಲಿ ಕೈಗೆ ಸಿಗದ ಹಾಗೆ ಎಸೆದು ಬಣ್ಣಬಣ್ಣದ ಜೀನ್ಸ್ ಪ್ಯಾಂಟ್ ಟೀಶರ್ಟ್ ಗಳಿಂದ ತನ್ನ ವಾರ್ಡ್‌ರೋಬ್‌ ನ್ನು ಸಿಂಗರಿಸಿದ್ಳು. ಮಾರ್ಕೆಟ್ ಹೋದ್ರೂ ಅದೇ, ದೇವಸ್ಥಾನ ಹೋದ್ರೂ ಅದೇ. ನೋಡಿ ನೋಡಿ 'ಸಿಟ್ಟು' ಬಂದು "ಸೀರೆ ಇಲ್ವಾ ಉಡ್ಲಿಕ್ಕೆ..." ಅಂದ್ರೆ ಇಲ್ಲ ಅಂದ್ಳು. "ಮತ್ತೆ ಹುಡುಗಿ ನೋಡ್ಲಿಕ್ಕೆ ಬಂದಾಗ ಅಷ್ಟು ಚಂದದ ಸೀರೆ ಉಡ್ಕೊಂಡಿದ್ದಿ..?" ಕೇಳಿದ್ರೆ " ಅದಾ, ನನ್ನ ಅಕ್ಕನ ಸೀರೆ ಅದು, ಹೇಗಾದ್ರೂ ಮಾಡಿ ನಿಮ್ಮನ್ನು ಯಾಮಾರಿಸ್ಬೇಕಲ್ಲಾ....ಅದಕ್ಕೆ ಬ್ಯೂಟಿ ಪಾರ್ಲರ್ ನವಳನ್ನು ಕರೆಸಿ ಅವಳಿಗೆ ಇನ್ನೂರ್ ರೂಪಾಯಿ ಕೊಟ್ಟು ಉಡ್ಸಿದ್ದು. ಈಗ್ಲೂ ಸೀರೆ ಉಡ್ಬೇಕು ಅಂದ್ರೆ ದಿನ ಅವಳಿಗೆ ಇನ್ನೂರು ರೂಪಾಯಿ ಕೊಡ್ಬೇಕಾಗ್ತದೆ....ನಂಗೆ ಸೀರೆ ಉಡೋಕೆ ಬರಲ್ಲ " ಅಂತ ರಾಗವಾಗಿ ಹೇಳ್ಬಿಟ್ಳು. ಆದ್ರೂ ಪಟ್ಟು ಬಿಡದೇ ನೀನು ಉಡ್ಳೇ ಬೇಕು ಅಂತ ಒತ್ತಾಯ ಮಾಡಿದಾಗ, " ಇದೇನ್ರೀ ನಿಮ್ಮ ಗೋಳು, ದಿನಾ ಸೀರೆ ಉಡ್ಕೊಂಡು ಮಲ್ಲಿಗೆ ಮುಡಿಲಿಕ್ಕೆ ನನ್ನ ನೆಂಟ್ರ ಮದುವೆ ಇದ್ಯಾ? ....ನನ್ಗೊತ್ತು ನಿಮ್ಮ ಚಂದನದ ಗೊಂಬೆಯ ಬಗ್ಗೆ . ನಿಮ್ಮ ಫ್ರೆಂಡ್ ಮಂಜ ಎಲ್ಲಾ ಹೇಳಿದ...ಅದೊಂದೇ ಅಲ್ಲ ಅವಳು ಪಿಕ್ಚರ್ ಮಾಡಿರೋದು, ಜೂಲಿ ಕೂಡಾ ಮಾಡಿದ್ದಾಳೆ. ಅದು ನೋಡಿ, ಈಗಿನ ಕಾಲಕ್ಕೆ ಸರಿಯಾಗಿದೆ. ಅದರಲ್ಲಿರೋದೂ ಲಕ್ಷ್ಮೀನೇ.... ಹಳ್ಳಿ ಹೈದ...ಹ್ಹ ಹ್ಹ ..." ಅಂತ ನಕ್ಕಾಗ ಮಂಜ ಸಿಕ್ರೆ ಇಲ್ಲೇ ಹೂತ್ ಹಾಕೋವಷ್ಟು ಸಿಟ್ಟು ಬಂತು. ನನ್ನ ಮರ್ಯಾದೆ ತೆಗೆಯೋಕೆ ನನ್ ಜೊತೆ ಇರೋದು, ಸಿಕ್ಕು ..ಮಗ ನಿಂಗೆ ಐತೆ...ಅಂತ ಹೆಂಡತಿಯ ಎದುರು ನಡೆಯದ ನನ್ನ ಸಿಟ್ಟನ್ನು ಮಂಜನ ಕಡೆ ತಿರುಗಿಸಿದೆ. ಮತ್ತೆಂದೂ ಸೀರೆ ಬಗ್ಗೆ ಮಾತಾಡದೇ ಚಂದನದ ಗೊಂಬೆ ಪಿಕ್ಚರನ್ನು ಮೊಬೈಲ್ ನಿಂದ ಡಿಲೀಟ್ ಮಾಡಿದೆ.

ದಿನೇ ದಿನೇ ಸೋಲತೊಡಗಿದೆ.ಹೆಂಡತಿಯ ಮಾತಿನಾಚೆ ವಾಲತೊಡಗಿದೆ.ಉಫ್...ಎಷ್ಟೊಂದು ಕೆಲಸ...ಮುದುವೆ ಅಂದ್ರೆ ಬರೀ ಹೆಂಡತಿ ಜೊತೆ ಸುತ್ತಾಡೋದು , ಪಿಕ್ಚರ್ ನೋಡೋದು, ನಾನು ಕೆಲಸಕ್ಕೆ ಹೋಗೋದು, ಸಂಜೆ ಬರೋವಾಗ ಮನೆಯ ಗೇಟ್ ಗೆ ಮುಖಯಾನಿಸಿ ಕಾಯುತ್ತಾ ನಿಂತ ಹೆಂಡತಿ....ಆಹಾ...ಎಷ್ಟೆಲ್ಲಾ ಕಲ್ಪನೆ ಇತ್ತು. ಆದರೆ ಇದೇನು ನಡೆಯುತ್ತಿದೆ ಅನ್ನೋದೇ ಅರ್ಥ ಆಗ್ಲಿಲ್ಲ. ಬರೇ ಅಷ್ಟೇ ಅಲ್ಲ. ನೀನಂದುಕೊಂಡ ಲೋಕದಾಚೆ ಇನ್ನು ಎಷ್ಟೋ ಜವಾಬ್ದಾರಿಗಳಿವೆ‌. ಅದೂ ಮದುವೆಯ ಜೊತೆ ಜೊತೆಗೇ ಬರೋದು. ಇಲ್ಲಿ ಒಂದು ತೆಗೆದುಕೊಂಡು ಇನ್ನೊಂದನ್ನು ಬಿಡುವಂತಿಲ್ಲ. ಎಲ್ಲವೂ ಪ್ಯಾಕೇಜ್ ಆಗಿಯೇ ಬರುವುದು. ಬೇರೆ ವಿಧಿಯಿಲ್ಲ.ಅಡುಗೆ ಮನೆ ಸೆಟ್ಟಿ೦ಗ್ , ತರಕಾರಿ ತರುವುದು, ಗ್ಯಾಸ್ ಹಾಲು ಶಾಪಿ೦ಗ್....ಬಟ್ಟೆ ಒಣಗಿಸಲು....ಅಬ್ಭಾ, ಒ೦ದೊ೦ದೇ ಕದವನ್ನು ತೆರೆಯುತ್ತಾ ತನ್ನ ಅವಶ್ಯಕತೆಗಳನ್ನು ತೋರಿಸತೊಡಗಿದಾಗ ’ಅ೦ಕಲ್’ ಗಳ ಮಾತಿನ ಹಿನ್ನಲೆಯನ್ನು ಅರ್ಥೈಸತೊಡಗಿದ್ದೆ.
ಅಪರೂಪಕ್ಕೆ ಎಸ್.ಮ್.ಎಸ್, ಕಾಲ್ ನಲ್ಲೇ ಸಿಗುತಿದ್ದ ಸಿ೦ಗಾರಿ ದಿನದ ಇಪ್ಪತ್ನಾಲ್ಕು ಗ೦ಟೆಯೂ ಕಣ್ಣೆದುರಿಗೆ ಕಾಣುವ ಕ್ಯಾಲೆ೦ಡರ್ ಆಗಿ ಮೊಳೆ ಹೊಡೆದು ಕೂತಾಗ  ಮೊಬೈಲ್ ಸದ್ದಿಲ್ಲದೇ ಮೂಲೆ ಸೇರಿತ್ತು. ಅವಳ ಹಿ೦ದೆ೦ದೂ ಕಾಣದ ಹಲವಾರು ಚರ್ಯೆಗಳನ್ನು  ಕ೦ಡಾಗ ನಿಜವಾಗಿಯೂ ಅನ್ನಿಸಿದ್ದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು. ನಿಜವಾಗಿಯೂ ಹೆದರಿ ಹೋದೆ.

ಆದರೆ ನನ್ನ ಹೆದರಿಕೆ ಭಯ ಅರ್ಥವಿಲ್ಲದ್ದು, ಅದು ಬರಿಯ ಕಲ್ಪನೆ, ಕನಸು ಮಾತ್ರ ಅ೦ತ ಸಾಬೀತುಪಡಿಸಿದ್ದೂ ಅವಳ ಪ್ರೀತಿಯೇ. ಯಾವುದೂ ಬದಲಾಗಿಲ್ಲ . ಸುಖ ಸಂಸಾರಕ್ಕೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಯಾರೋ ಕೇಳಿದ್ರಂತೆ ನಮ್ಮ ಬುದ್ದಿವಂತ ತಿಮ್ಮನನ್ನ, ಈ ಪ್ರಪಂಚದಲ್ಲಿ ಎಷ್ಟು ವಿಧದ ಸಂಸಾರವಿದೆ ಅಂತ. ಅದಕ್ಕೆ ನಮ್ಮ ತಿಮ್ಮ ಹೇಳಿದ್ದು ಎಷ್ಟು ಸರಿ ಇದೆಯಂದ್ರೆ , ಅವನ ಮಾತಲ್ಲೇ ಕೇಳಿ,  "ಈ ಪ್ರಪಂಚದಲ್ಲಿ ಎಷ್ಟು ಜೋಡಿಗಳಿವೆಯೋ ಅಷ್ಟೇ ವಿಧದ ಸಂಸಾರಗಳಿವೆ".  ಹಾಗಾಗಿ ಹೀಗೆ ಮಾಡಿದ್ರೆ ಮಾತ್ರ ನಿಮ್ಮ ಸಂಸಾರಿಕ ಬದುಕು ಹಸನಾಗ್ತದೆ, ಹಾಗೆ ಮಾಡಿದ್ರೆ ಎಕ್ಕೊಟ್ಟು ಹೋಗ್ತದೆ ಅಂತ ಹೇಳೋರು ಯಾರೂ ಇಲ್ಲ. ಎಲ್ಲವೂ ನಮ್ಮ ಕೈಯಲ್ಲೇ ಇದೆ.  ನಮ್ಮ ಪ್ರೀತಿಯೂ ಕೂಡಾ...ಕಲ್ಪಿಸಿ ಹೆದರಿದ ಟಿಪಿಕಲ್ ಹೆ೦ಡ್ತಿ ಆಗದೇ ಇಷ್ಟು ವರ್ಷಗಳ ನ೦ತರವೂ ಗೆಳತಿಯಾಗಿ ಇದ್ದು, ಅದೇ ಪ್ರೀತಿ, ಕಾತರ, ಬಿಸಿ, ಹುಸಿಮುನಿಸು, ನಿರ೦ತರ ಓಲೈಕೆಯ ಸಿ೦ಧುವಾಗಿ.
ಅವಳನ್ನು ನೋಡುವಾಗ ಲಕ್ಷ್ಮೀನಾರಾಯಣ ಭಟ್ಟರ ಕವಿತೆಯ ಸಾಲುಗಳು ನೆನಪಾಗುತ್ತವೆ...

"ಹೆ೦ಡತಿಯೆ೦ದರೆ ಖ೦ಡಿತ ಅಲ್ಲ
ದಿನವೂ ಕುಯ್ಯುವ ಭೈರಿಗೆ;
ಭ೦ಡರು ಯಾರೋ ಹೇಳುವ ಮಾತು
ಬೈದವರು೦ಟೇ ದೇವಿಗೆ"

ಅದೆಷ್ಟು ಸತ್ಯ ಅಲ್ವಾ?. ಇಲ್ಲಿ ಒಬ್ಬರಿಗೆ ಎಲ್ಲವೂ ಸಿಕ್ಕಿರುವುದಿಲ್ಲ. ನಾವು ಸಲಹೆ ಕೇಳೊವಾಗ ಮಾತ್ರ ನಮಗೆ ಅಂತವರೇ ಸಿಕ್ಕಿರುತ್ತಾರೆ, ದಾರಿ ತಪ್ಪಿಸಿ ಟೆನ್ಶನ್ ಕೊಡೋಕೆ. ನಾನು ಅ೦ದುಕೊ೦ಡಿರದ ಸುಖದ ಸ೦ಸಾರದಿ೦ದ ಈಗೀಗ ದಿ ಮೋಷ್ಟ್ ಎಲಿಜಿಬಲ್ ಬ್ಯಾಚುಲರ್ ಗಳಿಗೆ ಮದುವೆಯ ಬ೦ಧನಕ್ಕೆ ಧೈರ್ಯದಿ೦ದ ಬನ್ನಿ ಅ೦ತ ಹೇಳುವ ಸ್ಥಿತಿಗೆ ಬ೦ದಿದ್ದೆನೆ.

No comments:

Post a Comment