Wednesday 26 April 2017

ಈ ದಾರಿಗಳು
ಸುಮ್ಮನೇ ಬಿದ್ದುಕೊಂಡಿರುತ್ತವೆ
ಹೊಟ್ಟೆ ತುಂಬಿದ ಹೆಬ್ಬಾವಿನಂತೆ.
ಅಸಲಿಗೆ ಈ ದಾರಿಗಳಿಗೆ
ಯಾವ ಆದಿಯೂ ಇಲ್ಲ
ಅಂತ್ಯವೂ ಇಲ್ಲ.
ಅವೆರಡೂ ಒಂದೇ ಬಿಂದುವಿನಲ್ಲಿ
ಮುಖಮುಖಿಯಾಗುತ್ತವೆ.

ನಿನ್ನನ್ನು ದಾಟಿ ಬಂದಿದ್ದೇನೆ....
ಅನ್ನುವ ಅಹಮಿಕೆಯೆಲ್ಲಾ
ದಾರಿ ಮಧ್ಯದ ಮಾತಷ್ಟೇ ಹೊರತು
ಇನ್ನೇನೂ ಇಲ್ಲ.
ಸುತ್ತಿ ಸುತ್ತಿ ಬಸವಳಿದು
ಓಟ ಮುಗಿಸಿದಾಗ ನಮ್ಮ ಅಸ್ತಿತ್ವಕ್ಕಿಲ್ಲಿ
ಯಾವ ಅರ್ಥವೂ ಉಳಿದಿರುವುದಿಲ್ಲ.

ಕಾಮದಹನವ ಮಾಡಿ
ಬದುಕಚೈತ್ರ ಚಿಗುರುವಾಗ,
ನಾವಿದ್ದದ್ದೇ ಹಬ್ಬದ ಬೀದಿ.
ಅಲ್ಲಿ ಬೇವೂ ಇದೆ;
ಬೆಲ್ಲವೂ ಇದೆ.
ಪ್ರೀತಿಪಾಕದ ಹದವರಿತು ನಡೆದಾಗ
ಬದುಕಿಲ್ಲಿ,
ಅಂತ್ಯ ಕಾಣದ ಯುಗಾದಿ...!

No comments:

Post a Comment