Monday 6 March 2017

ಎಷ್ಟೋ ದಿನಗಳಿಂದ ಮನೆಯಲ್ಲಿ ಬೇಡಿಕೆ ಇದ್ದಿದ್ದರೂ ನಾನು ಆ ಕಪಾಟು ಮನೆಗೆ ತಂದದ್ದು ಪರ್ಕಳದಲ್ಲಿ ಸ್ನೇಹಿತ ಫರ್ನಿಚರ್ ಅಂಗಡಿ ತೆರೆದ ನಂತರವೇ.ಅದೂ ಕೂಡಾ ದೀಪಾವಳಿಯಲ್ಲಿ ಅವನು ಕೊಟ್ಟ 'ಭಾರೀ ಕಡಿತದ' ದೆಸೆಯಿಂದ. ಅಂಗಡಿಯ ಝಗಮಗಿಸುವ ದೀಪಗಳಲ್ಲಿ ತುಂಬಾ ಚಂದ ಕಂಡ ಅದರ ನಿಜ ರೂಪ , ಮದುಮಗಳು ವೇಷ ಕಳಚಿ ನಿಂತ ಹಾಗೇ  ಮನೆಗೆ ತಂದ ದಿನವೇ ಗೊತ್ತಾಗಿ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಬಾಗಿಲು ತೆರೆಯುವಾಗ ಕಿರ್ರ್..‌ರ್...ರ್...ಎಂದು ಕರ್ಕಶವಾಗಿ ಕೂಗುವ ಅದರ ಕರ್ಣಕಠೋರ ಶಬ್ದ ಕೇಳಿಯೇ ನಾನು ಗೆಳೆಯನ ಮೇಲೆ ಹರಿಹಾಯ್ದಿದ್ದೆ.  "ಕಡಿತ ಕಡಿತ ಅಂತ ಹೇಳಿ ಯಾವುದೇ ಹಳೆಯ ಮಾಲನ್ನು ನನಗೆ ದಾಟಿಸಿದ್ದಿಯಲ್ಲಾ ಮಾರಾಯ"  ಅಂತ ಸರಿಯಾಗಿ ದಬಾಯಿಸಿದೆ.ಅದಕ್ಕೆ ಅವನು " ಹೊಸದೆಲ್ಲಾ ಹಾಗೆಯೇ, ಸ್ವಲ್ಪ ದಿನ ಶಬ್ದ ಮಾಡ್ತದೆ, ನಂತರ ಸರಿ ಹೋಗ್ತದೆ ಬಿಡು.ನಿನಗೆ ಇನ್ನು ಗೊತ್ತಾಗ್ತದೆ ನೋಡು" ಅಂತ ಕಣ್ಣು ಹೊಡೆದು ನಗುವಿನಲ್ಲೇ ಮಾತನ್ನು ತೇಲಿಸಿಬಿಟ್ಟಿದ್ದ.

ಹಾಗೇ ಆ ಅಲಮಾರು ನಮ್ಮ ಮನೆಗೆ ಬಂದದ್ದು, ಅಥವಾ ಕಳಪೆ ಎಂದು ಕಂಡದ್ದೆಲ್ಲಾ ಆ ದಿನದ ಸುದ್ದಿಯಷ್ಟೇ.ಬರೇ ಇಷ್ಟೇ ಆಗಿದ್ದರೆ ಅದರ ಬಗ್ಗೆ ಹೇಳಿಕೊಳ್ಳುವ ಅಗತ್ಯ ಇರಲಿಲ್ಲ ಬಿಡಿ.ಆದರೆ ಅದೂ ಕೂಡಾ ನಮ್ಮ ಮನೆಯಲ್ಲಿ ಒಂದು ಮಹತ್ವದ ವಸ್ತು ಎಂದು ಅದರ ಇರುವಿಕೆಯನ್ನು ತೋರಿಸಿದ್ದರಿಂದಲೇ ಅದರ ಬಗ್ಗೆ ಹೇಳುತಿದ್ದೇನೆ.ನನ್ನ ಮದುವೆಗೆ ಒಂದು ವಾರವಿದ್ದಾಗ ನಡೆದ ಒಂದು ಘಟನೆ ಆ ಕಪಾಟಿಗೆ ನಮ್ಮ ಮನೆಯಲ್ಲಿ , ಮನದಲ್ಲಿ ಶಾಶ್ವತವಾದ ಸ್ಥಾನಮಾನವನ್ನು ಕೊಟ್ಟಿದೆ.ನಾನು ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ಇರುತ್ತಿದ್ದೆಯಾದ್ದರಿಂದ ಮನೆಯಲ್ಲಿ ಇರುವುದು ಅಪ್ಪ ಅಮ್ಮ ಇಬ್ಬರೇ. ಮದುವೆಗೆ ಒಂದೇ ವಾರವಿದ್ದುದರಿಂದ ತಯಾರಿ ಭರ್ಜರಿಯಾಗಿಯೇ ಸಾಗಿತ್ತು.ಒಡವೆ ವಸ್ತ್ರಗಳನ್ನೆಲ್ಲಾ ಖರೀದಿಸಿ ಆಗಿತ್ತು.ಅಳಿದೂರಿನಲ್ಲಿ ಉಳಿದವನೇ ಗೌಡ ಅನ್ನೋ ಹಾಗೆ ಇದ್ದ ಒಂದೇ ಅಲಮಾರಿಗೆ ರಾಜಕಳೆ ಬಂದಿತ್ತು. ಏನು ತಂದರೂ ಆ ಕಪಾಟಿನ ಒಳಗೆ ತುರುಕಿಸುವುದು ನನ್ನಮ್ಮನ ಇಷ್ಟದ ಕೆಲಸವಾಯ್ತು.ಮದುವೆಗೆ ಅಂತ ಖರೀದಿಸಿದ ಚಿನ್ನ ಮಾತ್ರವಲ್ಲದೇ, ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯ ಸಿಗದೇ ಈ ಅಲಮಾರುವನ್ನೇ ಉಚಿತ ಲಾಕರ್ ಅಂತ ಪರಿಗಣಿಸಿ ತನ್ನ ಮನೆಯಲ್ಲಿದ್ದ ಚಿನ್ನವನ್ನೂ ತಂದು ಇಟ್ಟಿದ್ದಳು ನನ್ನ ಅಕ್ಕ. ಹಾಗಾಗಿ ಈ ಅಲಮಾರು ನಮ್ಮ ಮನೆಯಲ್ಲಿ ಅತ್ಯಂತ ಬೆಲೆಬಾಳುವ ವಸ್ತುವಾಗಿತ್ತು . ಈ ವಿಷಯ ಮನೆಯವರಿಗಷ್ಟೇ ಗೊತ್ತಿದ್ದರೆ ಅದೇನೂ ಅಷ್ಟು ದೊಡ್ಡ ಸಂಗತಿಯಾಗುತ್ತಿರಲಿಲ್ಲ ಬಿಡಿ; ಆದರೆ ಹೊರಗಿನವರಿಗೂ ಈ ವಿಷಯ ಗೊತ್ತು ಅಂತ ನಮಗೆ ಗೊತ್ತಿಲ್ಲದ್ದು ಅಪಾಯಕಾರಿಯಾಗಿತ್ತು.

ಈ ಅಲಮಾರಿಗೆ ಬೀಗ ಹಾಕುವ ಸೌಲಭ್ಯ ಇದ್ದಿದ್ದರೂ, ಬೀಗ ಹಾಕಿದರೂ ಬೀಗದ ಕೈಯನ್ನು ಅದರ ಜಾಗದಿಂದ ಕದಲಿಸುವ ಸಂಪ್ರದಾಯ ಮಾತ್ರ ನಮ್ಮ ಮನೆಯಲ್ಲಿ ಇರಲಿಲ್ಲ. ಬೀಗದ ಕೈ ತೆಗೆದು ಬೇರೆ ಕಡೆ ಇಟ್ಟರೆ ಅದು ಕಳೆದುಹೋಗಬಹುದು ಎಂಬ ಭೀತಿಯೇ ಕಪಾಟಿನ ಬೀಗ ಹಾಕಿದರೂ ಬೀಗದ ಕೈಯನ್ನು ಅಲ್ಲೇ ಇಟ್ಟಿರಲು ಕಾರಣ.ಆ ರಾತ್ರಿಯೂ ಕೂಡಾ ಹಾಗೆಯೇ ಇತ್ತು ಅಲಮಾರಿಯ ಪರಿಸ್ಥಿತಿ. ಅಪ್ಪ ಹೊರಗೆ ಹಾಲ್ ನಲ್ಲಿ ಮಲಗಿದರೆ ಅಮ್ಮ ಒಳಗಿನ ಕೋಣೆಯಲ್ಲಿ ಮಲಗಿದ್ದರು.ಅದೇನೋ ದೊಡ್ಡ ಶಬ್ದವಾದಂತಾಗಿ ಅಮ್ಮನಿಗೆ ಎಚ್ಚರವಾದಾಗ ಸಮಯ ಬೆಳಗಿನ ಮೂರು ಗಂಟೆ. ಹೋ...ಒಲೆಯ ಬದಿಯಲ್ಲಿ ಇಟ್ಟಿದ್ದ ಹಾಲಿನ ಪಾತ್ರೆಯ ಮುಚ್ಚಳ ಬೀಳಿಸಿ ಹಾಲು ಕುಡಿದು ಖಾಲಿ ಮಾಡಿತೋ ಏನೋ ದರಿದ್ರ ಬೆಕ್ಕು...ನೋಡುವ ಅಂತ ಅಮ್ಮ ಎದ್ದು ಕೋಣೆಯ ದೀಪ ಹಾಕಿದಾಗ ಎದುರಿನ ದೃಶ್ಯ ಕಂಡು ಶಾಕ್ ಹೊಡೆದಂತೆ ನಿಂತು ಬಿಟ್ಟರು.

ಕಳ್ಳನೊಬ್ಬ ಅಲಮಾರಿಯ ಬಾಗಿಲು ತೆರೆದು ಒಳಗೆ ಟಾರ್ಚ್ ಹಾಕಿ ಹುಡುಕುತಿದ್ದಾನೆ.ಬಟ್ಟೆಗಳ ರಾಶಿ ಎಲ್ಲಾ  ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದಿವೆ.ಎಷ್ಟು ಹೊರಗೆ ಎಸೆದರೂ ಮುಗಿಯದ ದ್ರೌಪದಿಯ ಅಕ್ಷಯ ಸೀರೆಯಂತೆ ಇನ್ನೂ ಉಳಿದಿರುವ ಬಟ್ಟೆಯ ರಾಶಿಯನ್ನು ಸರಿಸಿ ಕೆಳಗಿನ ಲಾಕರ್ ನಲ್ಲಿ ಹಣ, ಒಡವೆ ಇರಬಹುದೆಂದು ಒಂದೇ ಸಮನೆ ಹುಡುಕಾಡುತಿದ್ದಾನೆ. ಆ ಗಡಿಬಿಡಿಯಲ್ಲಿ ಅಮ್ಮ ಎದ್ದು ಬಂದ ಅರಿವೂ ಅವನಿಗಾಗಿಲ್ಲ. ಆದರೆ ಯಾವಾಗ ಕೋಣೆಯ ದೀಪ ಉರಿಯಿತೋ , ಮೈಮೇಲೆ ಬಿಸಿ ನೀರು ಬಿದ್ದ ಹಾಗೇ ಅಲ್ಲಾಡಿ ಹೋಗಿದ್ದಾನೆ. ವೃತ್ತಿಪರ ಕಳ್ಳನಲ್ಲವಾದ್ದರಿಂದ ಅವನೂ ಹೆದರಿ ಓಡುವ ರಭಸಕ್ಕೆ ಅಮ್ಮನನ್ನು ತಳ್ಳಿ ಶರವೇಗದಲ್ಲಿ ಜಾಗ ಖಾಲಿ ಮಾಡಿದ್ದಾನೆ. ಆದರೆ ಇಷ್ಟೆಲ್ಲಾ ಆಗುವಾಗ ಅಮ್ಮನ ಬಾಯಿಂದ ಒಂದು ಬೊಬ್ಬೆ ಬಿಟ್ಟರೆ ಮತ್ತೇನೂ ಇಲ್ಲ. ಆ ಬೊಬ್ಬೆಯ ಲಾಭದ ಫಲವಾಗಿ ಅಪ್ಪ ಎದ್ದು ಬರುವಾಗ ಕಳ್ಳನ ಮಹಾ ಪಲಾಯನವೂ ಆಗಿ ಹೋಗಿದೆ. ಹಾಗಾಗಿ ಅಪ್ಪನಿಗೆ ಪ್ರಕರಣದ ಅರಿವಾಗಿಲ್ಲ. ಕಳ್ಳ ಓಡುವ ಗಡಿಬಿಡಿಗೆ ತಳ್ಳಿದ ವೇಗಕ್ಕೆ ಅಮ್ಮ ನೆಲದ ಮೇಲೆ ಬಿದ್ದು, ನಂತರ ಸಾವರಿಸಿ ಕುಳಿತಿದ್ದಾರೆ. ಆದರೆ ಅಪ್ಪನಿಗೆ ಈ ಎಲ್ಲಾ ಸುಳಿವಿಲ್ಲದ್ದರಿಂದ ಅಚ್ಚರಿಯಾಗಿ ಅಮ್ಮನನ್ನು ಕೇಳಿದ್ರೆ ಶಾಕ್ ನಿಂದ ಭೂತ ಹೊಕ್ಕ ಮೈಯಂತಾಗಿರುವ ಅಮ್ಮನಿಂದ ಯಾವ ಮಾತೂ ಹೊರಡುತ್ತಿಲ್ಲ. ಸಕಾಲಿಕ ಉಪಚಾರ ಮಾಡಿದ ನಂತರ ಹೊರಲೋಕಕ್ಕೆ ಬಂದ ಅಮ್ಮ ಯಾವುದಕ್ಕೂ ಉತ್ತರ ಕೊಡದೇ, " ಹೋಯ್ತು...ಎಲ್ಲಾ ಹೋಯ್ತು. ಸರ್ವನಾಶ ಆಯ್ತು. ಎಲ್ಲಾ ಕದ್ಕೊಂಡು ಹೋದ. ಅಯ್ಯೋ ದೇವರೇ ನಾನೇನು ಮಾಡ್ಲಿ .." ಅಂತ ಒಂದೇ ಸಮನೆ ಅಳುವಿನ ಕೋಡಿ ಹರಿಸುತಿದ್ದಾರೆ.ಸುಮ್ಮನೇ ನೋಡೋದಷ್ಟೇ ಉಳಿಯಿತು ಅಪ್ಪನ ಪಾಲಿಗೆ‌. ಅತ್ತೂ ಅತ್ತೂ ಕಣ್ಣೀರು ಬತ್ತಿ ಹೋದ ನಂತರ ಅರೆತೆರೆದಿದ್ದ ಅಲಮಾರಿಯನ್ನು ತೆರೆದು ತಾನು ಒಡವೆ ಹಣ ಇಟ್ಟಿದ್ದ ಗುಪ್ತ ಜಾಗವನ್ನು ಪರಿಶೀಲಿಸಲು ; ಅರೆ...! ಹಾಗೇ ಇದೆ. ಯಾವುದೂ ಅವನ ಕೈಗೆ ಸಿಕ್ಕಿಲ್ಲ , ಅಂತ ಗೊತ್ತಾದ ನಂತರ ಅಪ್ಪನಿಗೆ ವಿಷಯ ತಿಳಿದದ್ದು.

" ಏನೋ ಶಬ್ದ ಆಗಿ ನನಗೆ ಎಚ್ಚರ ಆಯ್ತು. ಬಹುಶಃ ಆ ದರಿದ್ರ ಬೆಕ್ಕು ಎಲ್ಲಿ ಹಾಲಿನ ಪಾತ್ರೆಯ ಮುಚ್ಚಳ ಬೀಳಿಸಿ ,ಇನ್ನೆಲ್ಲಿ ಇದ್ದ ಹಾಲೆಲ್ಲಾ ಖಾಲಿ ಮಾಡಿದ್ರೆ ನಿಮ್ಗೆ ಬೆಳಿಗ್ಗೆ ಚಹಕ್ಕೆ ಹಾಲಿಲ್ಲ ಅಂತ ಎಣಿಸಿ ಎದ್ದು ಲೈಟ್ ಹಾಕಿ ನೋಡ್ತೇನೆ, ಯಾರೋ ಕಪಾಟಿನ ಬೀಗ ತೆಗೆದು ಟಾರ್ಚ್ ಹಾಕಿ ಹುಡುಕ್ತಾ ಇದ್ದಾನೆ. ಕೈಯಲ್ಲಿ ಚೀಲ ಬೇರೆ ಇದೆ. ಹಣ ಚಿನ್ನ ಎಲ್ಲಾ ಹೋಯ್ತು ಅಂತ ನಿಮ್ಗೆ ಬೊಬ್ಬೆ ಹಾಕಿದೆ..ಅಷ್ಷ್ರಲ್ಲಿ ನನ್ನನ್ನು ತಳ್ಳಿ ಹೋದ..‌ಅಬ್ಭಾ! ನಿಮ್ಮ ನಿದ್ರೆಯೇ...ಸದ್ಯ ಏನೂ ಹೋಗಿಲ್ಲ...ಮಗನಿಗೆ ಸುಮ್ನೆ ಬಯ್ತಾ ಇದ್ದೆ...ಎಂತಾ ಗುಜುರಿ ಕಪಾಟ್ ತಂದಿದಿಯಾ ಅಂತ...ಓಪನ್ ಮಾಡೋವಾಗ ಕಿರ್ರ್ ರ್ ರ್ ರ್...ಶಬ್ದ ಬರ್ತದೆ ಅಂತ. ಆದ್ರೆ ಅದೇ ಈಗ ನಮ್ಮನ್ನು ಉಳಿಸಿದೆ"        ಅಂತ ಹೇಳಿ ಮುಗಿಸಿದ್ರು.

ಬೆಳಿಗ್ಗೆ ಪೋನ್ ಮಾಡಿ ನನಗೆ ವಿಷಯ ತಿಳಿಸಿದಾಗ ಆ ಪರಿಸ್ಥಿತಿಯಲ್ಲೂ ನಗು ಬಂತು. ಅಲಮಾರಿಗೆ ಲಾಕರ್ ಇದ್ದರೂ ಹಳೆಯ ಕಾಲದವರು ಮಾತ್ರ ಬದಲಾಗೋದೇ  ಇಲ್ಲ. ಮೊದಲಿನಿಂದಲೂ ಹಣ ಚಿನ್ನವನ್ನೆಲ್ಲಾ ಬಟ್ಟೆಯ ರಾಶಿಯಡಿಯೆಲ್ಲೋ ಅಡಗಿಸಿಡುವುದು ಅವರ ರೂಡಿ.ಅಮ್ಮನೂ ಅದಕ್ಕೆ ಹೊರತಾಗಿರಲಿಲ್ಲ. ಈಗ ಕಪಾಟಿನೊಳಗೆ ಲಾಕರ್ ಇದ್ದರೂ ಚಿನ್ನ ಹಣವೆಲ್ಲಾ ಈಗಲೂ ಬಟ್ಟೆಯ ರಾಶಿಯ ಒಳಗೆಲ್ಲೋ...!. ಅರ್ಜೆಂಟ್ ಗೆ ಮನೆಯವರಿಗೆ ಬೇಕಿದ್ರೂ ಅಮ್ಮನೇ ಬೇಕು, ಹುಡುಕಿ ಕೊಡ್ಲಿಕ್ಕೆ. ಅದು ಕಳ್ಳನಿಗೆ ಗೊತ್ತಾಗದೇ ಅಡ್ಡ ಇದ್ದ ಬಟ್ಟೆ ಹೊರಗೆಸೆದು ಬರೀ ಲಾಕರ್ ಹುಡುಕಿ ಏನೂ ಸಿಗದೇ ಬರಿಗೈಯಲ್ಲಿ ಪಲಾಯನ ಮಾಡಿದ್ದಾನೆ. ಬೆಟ್ಟ ಅಗೆದರೂ ಒಂದು ಇಲಿಯನ್ನೂ ಹಿಡಿಯಲಾಗದಂತಹ ಪರಿಸ್ಥಿತಿ ಅವನದ್ದು. ನಾನು ಪೋನ್ ಮಾಡಿ ಫರ್ನೀಚರ್ ಅಂಗಡಿ ಗೆಳೆಯನಿಗೆ ವಿಷಯ ಹೇಳಿ " ನಿನ್ನ ಅಲಮಾರಿಯ ಶಬ್ದದಿಂದ ನನ್ನ ಗಂಟು ಉಳಿಯಿತು, ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಳ್ಳುತಿದ್ದೆ" ಅಂತ ಹೇಳುವಾಗ ಆ ಅಲಮಾರಿಯ ಮೇಲೆ ನನಗೆ,  ನನ್ನ ಹೊಸ ಹೆಂಡತಿಯ ಮೇಲೆ ಇರುವಷ್ಟೇ ಪ್ರೀತಿ ಉಕ್ಕಿತು.
ಅವನೋ " ನೋಡಿದ್ಯಾ...ಸುಮ್ನೆ ನನ್ಗೆ ಬಯ್ತಾ ಇದ್ದಿ. ಈ ಶಬ್ದ ಕೂಡಾ ನನ್ನ ಅಲಮಾರಿಯ ವಿಶೇಷತೆಗಳಲ್ಲಿ ಒಂದು ಮಾರಯಾ"  ಅಂತ ಜೋರಾಗಿ ನಕ್ಕ.

ನಂತರ ಎಂದೂ ಆ ಕಪಾಟಿನ ಶಬ್ದ ನಮಗೆ ಕರ್ಣ ಕಠೋರವಾಗಿ ಕೇಳಿಸದೇ, ಎಮ್.ಎಸ್. ಸುಬ್ಬಲಕ್ಷ್ಮಿಯ ನಿತ್ಯನೂತನ ಸುಪ್ರಭಾತದಂತೆ ನಾದಮಯವಾಗಿತ್ತು.

No comments:

Post a Comment