Saturday 12 August 2017

ಆಶಾಡದ ವಿರಹ ಕಳೆಯುತ್ತಿದ್ದಂತೆಯೇ ಮನಸ್ಸಿಗೆ ಏನೋ ಒಂದು ತೆರನ ನಿರಾಳ ಭಾವ. ಅದೇಕೊ ಗೊತ್ತಿಲ್ಲ, ನನಗೆ ಮೊದಲಿನಿಂದಲೂ ಆಶಾಡ ಅಂದ್ರೆ ಅಷ್ಟಕ್ಕಷ್ಟೇ. ಧೋ ಎಂದು ಸುರಿಯುವ ಮಳೆ ಭೂಮಿಗೂ ಬಾನಿಗೂ ಮಿಲನದೊಸಗೆಯ ಭಾಗ್ಯವನ್ನು ಕರುಣಿಸಿದರೆ ಇಳೆಯ ಪ್ರೇಮಿಗಳ ಪಾಲಿಗೆ ವಿರಹದ ಬೇಗೆ ಸುಡುವ ಕಾಲವಂತೆ, ಹೌದೋ ಅಲ್ವೋ ನನಗಂತೂ ಗೊತ್ತಿಲ್ಲ. ನನ್ನ ಅನುಭವಕ್ಕೆ ಎಂದೂ ಬಂದಿಲ್ಲ. ಆದರೆ ನನಗೆ ಆಶಾಡದ ಬಗ್ಗೆ ಬೇಸರ ಬರಲು ಮುಖ್ಯ ಕಾರಣ ಇದ್ದದ್ದು ಬೇರೆಯೇ ವಿಷಯದಲ್ಲಿ. ಜೂನ್ ನಲ್ಲಿ ಶಾಲೆ ಆರಂಭ ಆದ್ರೆ ಈ ನಾಗರಪಂಚಮಿ ಬರೋ ತನಕವೂ ನಿರಂತರ ಶಾಲೆ. ರಜೆ ಅಂತ ಶುರುವಾಗೋದು ಈ ನಾಗರಪಂಚಮಿಯಿಂದ. ನಮ್ಮ ಹಬ್ಬಗಳ ಸೀಸನ್ ಆರಂಭವಾಗೋದೂ ಈ ನಾಗರಪಂಚಮಿಯಿಂದಲೇ. ಅಲ್ಲೀತನಕ ನಮಗೆ ರಜೆ ಅಂತ ಸಿಗುತ್ತಿದ್ದುದು ಕೆಲವೇ ಸಂದರ್ಭಗಳಲ್ಲಿ ಮಾತ್ರ.

ಪಟಪಟ ಅಂತ ಶಾಲೆಯ ಹೆಂಚಿನಮೇಲೆ ಮಳೆಯ ದೊಡ್ಡ ದೊಡ್ದ ಹನಿಗಳು ಬಿದ್ದು ಜೋರಾದ ಶಬ್ದ ಬರುವಾಗ ಮೇಷ್ಟ್ರು ಪಾಠ ನಿಲ್ಲಿಸುತ್ತಿದ್ದರು, ಅಲ್ಲದೇ ಅಗ ಕವಿಯುವ ಮಳೆಯ ಕತ್ತಲೆಯಿಂದಾಗಿ ಕರೆಂಟ್ ಕನೆಕ್ಷನ್ ಇಲ್ಲದ ನಮ್ಮ ಶಾಲೆಯಲ್ಲಿ ಪಾಠ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಮನೆಗೆ ಹೋಗೋ ಹಾಗಿರಲಿಲ್ಲ...ಹೆಚ್ಚು ಮಾತಾಡೊ ಹಾಗೂ ಇರಲಿಲ್ಲ. ಹಾಗೇನಾದ್ರೂ ಮಾಡಿದ್ರೆ ಹೆಸರು ಬರೆದಿಟ್ಟು ಮೇಷ್ಟ್ರಿಗೆ ಕಂಪ್ಲೇಂಟ್ ಮಾಡ್ಲಿಕ್ಕೆ ಕ್ಲಾಸ್ ಲೀಡರ್ ನ ಹದ್ದಿನ ಕಣ್ಣುಗಳು ಸದಾ ಜಾಗ್ರತವಾಗಿರುತ್ತಿದ್ದವು. ಕಟ್ಟಿ ಹಾಕಿದಂತಹ ಪರಿಸ್ಥಿತಿ ನಮ್ಮದು.

ಜೋರ್ ಮಳೆ ಬಂದಾಗ ಒಬ್ಬ ಬಂದು ಮೇಷ್ಟ್ರು ಪಾಠ ಮಾಡುವ ಕೋಣೆಗೆ ನುಗ್ಗುತ್ತಿದ್ದ. ಅವನು ಬರುತ್ತಿದ್ದಂತೆ ಕೆಲವು ಹುಡುಗರ ಕಣ್ಣು ಖುಷಿಯಿಂದ ಅರಳುತ್ತಿದ್ದವು. ಅವನು ಬಂದು "ಹೊಳೆಯಲ್ಲಿ ನೀರು ಹೆಚ್ಚಾಗಿದೆ, ತಡ ಆದ್ರೆ ಮತ್ತೆ ದೋಣಿ ಇಳಿಸ್ಲಿಕ್ಕೆ ಆಗಲ್ಲ..." ಅಂತ ಹೇಳುವಾಗ ಪರಿಸ್ಥಿತಿಯನ್ನು ನೋಡಿ ಮೇಷ್ಟ್ರು "ಪೆರಂಪಳ್ಳಿ ಮನೆಯಿದ್ದವರು ಎದ್ದು ನಿಲ್ಲಿ" ಅನ್ನುತ್ತಿದ್ದರು. ಈ ಮಾತಿಗೇ ಜಾತಕಪಕ್ಷಿಯಂತೆ ಕಾಯುತ್ತಿದ್ದ ಹಾಗೆ, ಈಗಾಗಲೇ ತಮ್ಮ ಮುರುಕು ಬ್ಯಾಗ್ ಗಳಿಗೆ ಪುಸ್ತಕವನ್ನು ತುಂಬಿಸಿ ಲಂಕೆ ಹಾರಲು ಸಿದ್ದನಾದ ಹನುಮಂತನಂತೆ ತುದಿಗಾಲಿನಲ್ಲಿ ನಿಂತ ನಾಲ್ಕು ಹುಡುಗರು ಎದ್ದು ನಿಲ್ಲುತ್ತಿದ್ದರು. ಮತ್ತೆ ಮೇಷ್ಟ್ರು, "ನೀವು ಹೋಗ್ಬಹುದು...ಹುಷಾರಾಗಿ ಕರ್ಕೊಂಡು ಹೋಗಪ್ಪ" ಅಂತ ಆ ವ್ಯಕ್ತಿಗೆ ಹೇಳೋವಾಗ ಮರಿಕಪಿಗಳು ಛಂಗನೇ ಜಿಗಿಯುತ್ತಿದ್ದವು. ಹೋಗುವಾಗ ಇಡೀ ಕ್ಲಾಸ್ ನತ್ತ ಒಮ್ಮೆ ಅವರು ನೋಡುವ ನೋಟ ನನಗಿನ್ನೂ ನೆನಪಿದೆ. ನಂತರ ನಮಗೆ ಪಾಠ ಕೇಳುವ ಯಾವ ಮೂಡೂ ಇರ್ತಿರ್ಲಿಲ್ಲ. ಛೇ...ಬಡ್ಡಿಮಕ್ಳು, ನಮ್ಮನ್ನು ಉರಿಸಿ ಹೋದ್ವು. ಅವರಿಗೆ ಮಾತ್ರ ಯಾವಗ್ಳೂ ರಜೆ ,ಮಳೆ ಬಂದ್ರೆ....ನಾವು ಮಾತ್ರ ಕುತ್ಕೊಳ್ಬೇಕು...ಸ್ವಾಮಿ ದೇವರೆ, ಇವತ್ತು ಯಾರದ್ರು ಸತ್ತೇ ಹೋಗ್ಲಿ...ಒಂದು ದಿನ ರಜೆಯಾದ್ರೂ ಸಿಗಲಿ ಅಂತ ಆ ದೇವರಲ್ಲಿ ಕೊನೆಗೆ ಮೊರೆಯಿಡುತ್ತಿದ್ದೆ. ಮತ್ತೆ ಎಷ್ಟೋ ಸಮಯದ ನಂತರ ಗೊತ್ತಾದದ್ದು ಮಳೆ ಬಂದಾಗ ಮಕ್ಕಳನ್ನು ಕರ್ಕೊಂಡು ಹೋಗಲು ಬರುತ್ತಿದ್ದ ವ್ಯಕ್ತಿ ಶಾಲೆಗೂ ಆ ಊರಿಗೂ ನಡುವೆ ಹರಿಯುತ್ತಿದ್ದ ನದಿಯಲ್ಲಿ ಜನರನ್ನು ಈ ಬದಿಯಿಂದ ಅ ಬದಿಗೆ ಸಾಗಿಸುತ್ತಿದ್ದ ದೋಣಿ ನಡೆಸುವ ಅಂಬಿಗ ಅಂತ. ಆ ಕಾಲದಲ್ಲಿನ್ನೂ ಸೇತುವೆ ಆಗಿರಲಿಲ್ಲ. ಸೇತುವೆಯಾಗಿ ಈಗಿನ ಮಕ್ಕಳಿಗೆ ಅ ಸೌಭಾಗ್ಯವೂ  ಇಲ್ಲ. ಇದೆಲ್ಲದ್ರಿಂದ ಮುಕ್ತಿ ಸಿಗುತ್ತಿದ್ದುದು ಶ್ರಾವಣ ಶುರು ಆದ ನಂತರ ಸಿಗುತ್ತಿದ್ದ ಸಾಲು ಸಾಲು ರಜೆಗಳಿಂದಾಗಿ. ಇಷ್ಟು ದಿನ ಸುರಿಸುರಿದು ಮೋಡಗಳೆಲ್ಲಾ ಬರಿದಾದ ಹಾಗೆ ಮಳೆಯೂ ಸ್ವಲ್ಪ ದಿನ ರಜೆ ಸಾರುವ ಕಾಲವೇ ಈ ಶ್ರಾವಣ. ಗಣೇಶನ ಹಬ್ಬ, ವಿಟ್ಲಪಿಂಡಿಯ ಸಡಗರದ ರಜೆಗಳ ನಡುವೆ ಶಾಲೆ ಇದ್ದ ದಿನವೂ ಒಂದು ಗಂಟೆಯಾದರೂ ಗ್ರೌಂಡ್ ನ ಮುಖ ಕಾಣುತ್ತಿದ್ದೆವು. ಇವೇ ಆಗಿನ ದೊಡ್ಡ ದೊಡ್ಡ ಖುಷಿಗಳು.

ಹಾಗಾಗಿ ಆಶಾಡ ಪ್ರೇಮಿಗಳನ್ನು ವಿರಹ ವೇದನೆಗಾಗಿ ಕಾಡಿ ಶ್ರಾವಣದ ಮಿಲನಕ್ಕಾಗಿ ಕಾಯುವಂತೆ ಮಾಡುತ್ತಿದ್ದರೆ, ರಜೆಯಿಲ್ಲದೆ, ಶಾಲೆಯಲ್ಲಿ ಆಟವೂ ಇಲ್ಲದೇ  ನಿರಂತರ ಪಾಠದಿಂದ ಬೇಸತ್ತ ನಾವೂ ಕೂಡಾ ಶ್ರಾವಣಕ್ಕಾಗಿ ಕಾಯುತ್ತಿದ್ದ ಕಾಲವೂ ಒಂದಿತ್ತು.

No comments:

Post a Comment