Saturday 12 August 2017

ನನಗೆ ಪುರಾಣದ ಪಾತ್ರಗಳು ಮೊದಲು ಪರಿಚಯವಾದದ್ದೇ ಡಾ| ರಾಜ್ ಸಿನಿಮಾಗಳ ಮೂಲಕ.ರಾಜ್ ಸಿನಿಮಾಗಳ ಹುಚ್ಚು ಅಭಿಮಾನಿಯಾಗಿದ್ದ ನಾನು ಅವರ ಪೌರಾಣಿಕ ಕತೆಯ ಸಿನಿಮಾಗಳನ್ನು ಬಹುತೇಕ ಎರಡೆರಡು ಸಲ ನೋಡಿದ್ದೇನೆ. ಅದರಲ್ಲೂ ಬಬ್ರುವಾಹನ, ಭಕ್ತ ಪ್ರಹ್ಲಾದ, ಮಯೂರ,ಸತ್ಯಹರಿಶ್ಚಂದ್ರದಂತಹ ಸಿನಿಮಾಗಳು ನನ್ನ ಮನಸ್ಸಿನಲ್ಲಿ ಉಂಟುಮಾಡಿದ ಬೆರಗು, ರೋಮಾಂಚನ ಇನ್ನೂ ಮಾಸದೆ ಹಸಿರುಹಸಿರಾಗಿವೆ. ಈಗಲೂ ಟಿ.ವಿ‌ಯಲ್ಲಿ ಬಂದರೆ ಅದೇ ಬೆರಗಿನಿಂದ ನೋಡುತ್ತೇನೆ.

ಬಬ್ರುವಾಹನ ಚಿತ್ರದ,  " ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ...", ಮಯೂರದ "ಈ ಮಣಿಕಿರೀಟ ನಿನಗೆ ಬೇಡವೆ? ಈ ರತ್ನ ಸಿಂಹಾಸನ ನಿನಗೆ ಬೇಡವೇ? ಈ ಸಾಮ್ರಾಜ್ಯ ನಿನಗೆ ಬೇಡವೇ? ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೇ ಅಮ್ಮಾ?.....ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂಧವರ್ಮಾ!!!..." ಅಂತಹ ಸಂಭಾಷಣೆಗಳಲ್ಲಿ ನನಗೆ ರಾಜ್ಕುಮಾರ್ ಕಾಣಿಸೋದೇ ಇಲ್ಲ .ಬದಲಾಗಿ ಯುದ್ಧರಂಗದಲ್ಲಿ ಕಲಿ ಅರ್ಜುನನ ಎದುರು ಕೆಚ್ಚದೆಯಿಂದ ನಿಂತ ಬಬ್ರುವಾಹನ, ಅಮ್ಮನ ಸಮಾಧಿಯೆದುರು ಕಂಬನಿಗರೆಯುತ್ತಲೇ ಪಲ್ಲವರನ್ನು ಕನ್ನಡ ನಾಡಿನಿಂದ ಹೊರಹಾಕುವ ಪ್ರತಿಜ್ಞೆಯನ್ನು ಮಾಡುವ ವೀರ ಕನ್ನಡಿಗ ಮಯೂರನೇ ಕಾಣುತ್ತಾನೆ. ಅದು ಡಾ| ರಾಜ್ ಅಭಿನಯದ ಗತ್ತು ಗೈರತ್ತು ಸೌಂದರ್ಯ.

ನಾನು ಅತಿಯಾಗಿ ಮೆಚ್ಚಿದ ಮತ್ತೊಂದು ಸಿನಿಮಾ ಕವಿರತ್ನ ಕಾಳಿದಾಸ. ಸುಕೋಮಲೆಯಾದ ಶಕುಂತಲೆ,  "ಅ...ಆ್ಹ....ಅನಸೂಯೆ...ಪ್ರಿಯಂವದೆ ಕಟ್ಟಿದ ಈ ವಲ್ಕಲ ಬಹಳ ಬಿಗಿಯಾಗಿ ನನ್ನ ಎದೆ ನೋಯುತ್ತಿದೆ, ಸ್ವಲ್ಪ ಸಡಿಲಗೊಳಿಸು...." ಎಂದು ಗೋಗರೆವಾಗ ಸಖಿ ಪ್ರಿಯವಂದೆ, " ಹ್ಮ್....ಎದೆಯನ್ನು ಉಬ್ಬಿಸುತ್ತಿರುವ ನಿನ್ನ ಯೌವನವನ್ನು ನಿಂದಿಸು, ನನ್ನನ್ನಲ್ಲ" ಎಂದು ಶಕುಂತಲೆಯ ತುಂಬಿದ ಯೌವನವನ್ನು ನೋಡುವಾಗ, ದುಂಬಿಯೊಂದು ಮಕರಂದವನ್ನು ಹೀರಲು ಶಕುಂತಲೆಯ ಅಧರವನ್ನು ಮುತ್ತಿಕ್ಕುವ ದೃಶ್ಯ ಕಂಡು ದುಷ್ಯಂತ, "ಆಹಾ ...ಆ ಚಂದುಟಿಯನ್ನು ಚುಂಬಿಸುತ್ತಿರುವ ದುಂಬಿಯೇ...ನೀನೇ ಭಾಗ್ಯಶಾಲಿ" ಎಂದು ಉಧ್ಗರಿಸುತ್ತಾನೆ...ಈ ದೃಶ್ಯಗಳನ್ನು ಕಂಡಾಗ ಜಯಪ್ರದಳ ಮೋಹಕ ಚೆಲುವಿಗೆ ಕ್ಲೀನ್ ಬೋಲ್ಡ್ ಆಗಿದ್ದೆ. ಮೊದಲು ಕುರಿ ಕಾಯುವ ಪೆದ್ದನಾಗಿ, ನಂತರ ಕಾಳಿ ಕೃಪಕಟಾಕ್ಷದಿಂದ ಕಾಳಿದಾಸನಾಗಿ, ದುಷ್ಯಂತನಾಗಿ, ಪ್ರೇಮಿಯಾಗಿ, ವಿರಹಿಯಾಗಿ,ವಿರಾಗಿಯಾಗಿ ರಾಜ್ಕುಮಾರ್ ಅಭಿನಯ ಮನೋಜ್ಞ.

ಪುರಾಣದ ಕೆಲವು ಪಾತ್ರಗಳು ನನ್ನನ್ನು ಈವರೆಗಿನ ಬದುಕಿನುದ್ದಕ್ಕೂ ಕಾಡುತ್ತಲೇ ಬಂದಿವೆ.ಅಂಬೆ, ಊರ್ಮಿಳಾ, ಅಹಲ್ಯೆ ಮತ್ತು ಈ ಶಕುಂತಲ. ಎಲ್ಲರೂ ಬಹುತೇಕ ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ಬೆಂದವರೇ.ಮೊದಲ ಮೂವರ ಬಗ್ಗೆ  ಇನ್ನೊಮ್ಮೆ ಅಂತಹ ಸಂಧರ್ಬ ಬಂದಾಗ ಬರೆಯುತ್ತೇನೆಂದು ಹೇಳುತ್ತಾ ಈ ಲೇಖನವನ್ನು ಶಕುಂತಲೆಗೆ ಸೀಮಿತಗೊಳಿಸುತ್ತೇನೆ. ಶಕುಂತಲೆ ದುಷ್ಯಂತರ ಗಾಂಧರ್ವ ವಿವಾಹ, ಉಂಗುರ, ದೂರ್ವಾಸರ ಶಾಪ, ದುಷ್ಯಂತನ ನಿರಾಕರಣೆ, ತನ್ನ ಪ್ರಿಯತಮನಿಂದ ತಿರಸ್ಕೃತಳಾದ ಶಕುಂತಲೆಯ ವಿರಹ...ಇವುಗಳ‌‌ ಸುತ್ತ ಗಿರಕಿಹೊಡೆಯುತ್ತದೆ ಈ ಕತೆ. ದೂರ್ವಾಸರ ಶಾಪದಿಂದಾಗಿ ದುಃಶ್ಯಂತ ಶಕುಂತಲೆಯೊಂದಿಗಿನ ಪ್ರಕರಣವನ್ನೇ ಮರೆಯುತ್ತಾನೆ. ಇನ್ನು ಕಾದು ಪ್ರಯೋಜನವಿಲ್ಲವೆಂದು ಕಣ್ವ ಮಹರ್ಷಿ ತನ್ನ ಶಿಷ್ಯಂದಿರ ಜೊತೆಯಲ್ಲಿ ದುಷ್ಯಂತನ ಅರಮನೆಗೆ  ಕಳುಹಿಸುತ್ತಾನೆ ಶಕುಂತಲೆಯನ್ನು. ಆದರೆ ರಾಜ ಸಭೆಯಲ್ಲಿ ನೀನಾರೆಂದು ಗೊತ್ತೇ ಇಲ್ಲ ಅಂತ ದುಷ್ಯಂತನಿಂದ ತಿರಸ್ಕೃತಳಾದಾಗ ಬೆರಳಿಗೆ ತೊಡಿಸಿದ ಉಂಗುರಕ್ಕಾಗಿ ತಡಕಾಡುತ್ತಾಳೆ. ಆದರೆ ಅಲ್ಲೂ ವಿಧಿ ಅವಳನ್ನು ವಂಚಿಸುತ್ತದೆ...ಉಂಗುರವಿಲ್ಲದ ಬೋಳು ಬೆರಳನ್ನು ಕಂಡು ಪೆಚ್ಚಾಗಿ ನಿಂತಾಗ ನೆರೆದ ಮಂದಿರ ವ್ಯಂಗ್ಯ ನೋಟಗಳನ್ನು ಎದುರಿಸಲಾಗದೇ ಅಪಾರ ಅವಮಾನದಿಂದ ಕುಸಿಯುತ್ತಾಳೆ.
ಜಿ.ಎಸ್.ಎಸ್. ಈ ಸನ್ನಿವೇಶವನ್ನು ತಮ್ಮ ಒಂದು ಕವನದಲ್ಲಿ ಅಮೋಘವಾಗಿ ಕಟ್ಟಿಕೊಡುತ್ತಾರೆ...

"ಉಂಗುರದ ಬೆರಳನು ಸವರಿ ಬೆಚ್ಚಿದಳಬಲೆ;
ಇದ್ದ ಸೇತುವೆ ಮುರಿದು ದಾರಿಯಿಲ್ಲ.
ಭೋರ್ಗರೆವ ಹೊನಲನೀಸುವುದೆ ನೆನಪಿನ ದೋಣಿ?
ಕೊಂಕು ನಗೆಗಳ ಮೊಳಗು ಸುತ್ತ ಮುತ್ತ.
ಸುತ್ತ ಕಣೆ ಹೂಡಿರಲು, ದಿಕ್ಕು ತಪ್ಪಿದ ಜಿಂಕೆ;
ದೇಗುಲದ ಮೂಲೆಯಲಿ ದೀಪವಾರಿದ ಮೇಲೆ
ನಿಂತ ದೀಪದ ಮಲ್ಲಿ!..."

ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು   ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ. ಆ ಅಜಾಗರೂಕತೆಯಿಂದಲೇ ಅವಳು ಉಂಗುರವನ್ನು ಕಳೆದುಕೊಂಡಳು. ಈ ಉಂಗುರದ ವಿಷಯ ಬಂದಾಗ ನನ್ನ ಮನಸ್ಸು ತ್ರೇತಾಯುಗಕ್ಕೆ ಜಿಗಿಯುತ್ತಿದೆ.ಅಲ್ಲಿ ಹನುಮಂತ ಲಂಕೆಗೆ ಹಾರಲು ತಯಾರಾಗಿ ನಿಂತಿದ್ದಾನೆ. ಸೀತೆಯನ್ನು ಕಂಡಾಗ ತಾನು ರಾಮದೂತನೆಂಬ ಸಾಕ್ಷಿಗೆ, ಸೀತೆಗೆ  ತೋರಿಸಲು ರಾಮ ಕೊಟ್ಟ ಉಂಗುರವನ್ನು ಪಡೆದುಕೊಂಡಿದ್ದಾನೆ. ನಂತರ ಲಂಕೆಗೆ ಹಾರಿ ಸೀತೆಯನ್ನು ಕಂಡು ಉಂಗುರ ತೋರಿಸಿ....ಅರೆ ಎಷ್ಟು ಸಲೀಸು...ಉಂಗುರ ಕಂಡು ಸೀತೆಗೆ ರಾಮದೂತನೆಂದು ನಂಬಿಕೆ ಹುಟ್ಟಿ.....ಸುಖಾಂತ್ಯ!!!. ಅರೆ ಶಕುಂತಲೆಯ ವಿಷಯದಲ್ಲಿ ಆಗದಿದ್ದುದು ಇಲ್ಲಿ ಯಾಕಾಯ್ತು? ಅದಕ್ಕೂ ಇದಕ್ಕೂ ಏನಾದರೂ ಕನೆಕ್ಷನ್ ಇದೆಯಾ?....ನನಗನ್ನಿಸುತ್ತದೆ ಹೌದು, ಖಂಡಿತವಾಗಿಯೂ ಇದೆ! ಯೋಚಿಸಿ...ಇಲ್ಲಿ ಹನುಮಂತನಿಗೆ ಸೀತೆಯ ಪರಿಚಯವೇ ಇಲ್ಲ. ಈ ಮೊದಲು ಎಲ್ಲೂ ನೋಡಿಲ್ಲ. ತಾನು ಸೀತಾಮಾತೆಯನ್ನು ಸಂಧಿಸಿದಾಗ ಅವಳಿಗೆ ಖಂಡಿತವಾಗಿಯೂ ತನ್ನ ಗುರುತು ಸಿಕ್ಕಲ್ಲ ಅನ್ನುವುದು ಹನುಮಂತನಿಗೆ ಗೊತ್ತು. ಅದಕ್ಕಾಗಿಯೇ ರಾಮ ಕೊಟ್ಟ ಗುರುತಿನ ಉಂಗುರಕ್ಕೆ ಬಹಳ ಮಹತ್ವ ಕೊಟ್ಟು, ಸಾವಿರ ಸಾವಿರ ಯೋಜನಾ ದೂರವನ್ನು ಕ್ರಮಿಸಿ ಬಂದಿದ್ದರೂ ಉಂಗುರವನ್ನು ಬಹಳ ಜೋಪಾನವಾಗಿ ತನ್ನ ಬಳಿ ಇಟ್ಟುಕೊಂಡಿದ್ದ. ಉಂಗುರ ಕಳೆದು ಹೋಗಿದ್ದರೆ ತಾನು ಅಷ್ಟು ಕಷ್ಟಪಟ್ಟು ಹಾರಿದ್ದು ವ್ಯರ್ಥ ಅನ್ನುವ ಸ್ಪಷ್ಟ ಕಲ್ಪನೆ ಹನುಮನಿಗಿತ್ತು...ಆದರೆ ಕೇವಲ ಒಂದು ನದಿ ದಾಟುವಾಗ ಶಕುಂತಲೆ ಉಂಗುರವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಅವಳು ಆ "ಗುರುತಿನ ಉಂಗುರ" ಕ್ಕೆ ಮಹತ್ವ ಕೊಡದೇ ದುಷ್ಯಂತನ ಪ್ರೇಮವನ್ನು ನಂಬಿದ್ದು! (ವಿಷಯದ ಮಹತ್ವಕ್ಕಾಗಿ ದೂರ್ವಾಸರ ಶಾಪವನ್ನು ಕಡೆಗಣಿಸಲಾಗಿದೆ!).

ಇನ್ನೊಂದು ಆಯಾಮದಲ್ಲಿ ಈ ಎಲ್ಲಾ ವಿಷಯಗಳು ನನ್ನನ್ನು ಕಾಡುವುದುಂಟು. ಪೌರಾಣಿಕ ಪಾತ್ರಗಳಿಂದ ಬಿಡಿಸಿಕೊಂಡು ನಮ್ಮ ನಿತ್ಯದ ಬದುಕಿಗೆ ಬರೋಣ. ನಮ್ಮ ಬದುಕಿನ‌ ಭಾಗವೇ ಆದಂತಹ ಹೆಂಡತಿ ಮಕ್ಕಳು, ಅಪ್ಪ ಅಮ್ಮ ,ಅಣ್ಣತಮ್ಮ, ಅಕ್ಕತಂಗಿಯರ ಜೊತೆಗೆ ನಮ್ಮದು ಯಾವತ್ತೂ ಸಿಡುಕು ಮುಖ, ಲೆಕ್ಕಾಚಾರದ ಮಾತುಗಳು. ಅವರೊಂದಿಗೆ Taken for granted ಅನ್ನುವ ತರಹದ ವರ್ತನೆ ನಮ್ಮದು. ಅವರಿಗೆ ಯಾವುದೇ ಸ್ಪೆಷಲ್‌ ಉಂಗುರದ ಗುರುತುಗಳು, ನಗೆಯ ಗುರುತುಗಳ ಅಗತ್ಯ ಇಲ್ಲವೆಂದೇ ಭಾವಿಸುತ್ತೇವೆ ಮತ್ತು ಹಾಗೆಯೇ ನಡೆಯುತ್ತೇವೆ. ಯಾಕೆಂದರೆ ಅವರು ಹೇಗಿದ್ದರೂ ನಮ್ಮವರೇ ಅನ್ನುವ ಉದಾಸೀನ ಭಾವ.ದುಷ್ಯಂತನ ಜೊತೆಯ ಶಕುಂತಲೆಯ ಮನಸ್ಥಿತಿಯಂತೆ. ಅದೇ ಊರ ಮೂಲೆ ಮನೆಯ ಅಪರೂಪದಲ್ಲಿ ಅಪರೂಪಕ್ಕೆ ಮನೆಗೆ ಬರುವ ಅತಿಥಿಯೊಂದಿಗೋ ನಾವು ಉದಾರ ನಗೆಯ ವ್ಯಾಪಾರಿಗಳು!  ಅವರೊಂದಿಗೆ ಅದೇನು ಕುಶಲ ಮಾತುಕತೆ...ಯೋಗ ಕ್ಷೇಮ ವಿಚಾರಣೆ, ಅಬ್ಬಬ್ಬಾ!!!...ಅವರನ್ನು ಯಾವತ್ತೂ Taken for granted ರೀತಿ ನೋಡುವುದೇ ಇಲ್ಲ. ಅವರೊಂದಿಗೆ ಎಲ್ಲವೂ ಸಲೀಸು. ಅಲ್ಲಿ ನಮಗೆ ಗುರುತುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹನುಮಂತ ಸೀತೆಯ ಭೇಟಿಯಂತೆ! ಈ ಧಾವಂತದ ಬದುಕಿನಲ್ಲಿ ಇದನ್ನೆಲ್ಲಾ ಯೋಚಿಸಲು ಅವಕಾಶವೇ ಇಲ್ಲದಿದ್ದಾಗ ಇನ್ನು ಬದಲಾಗಬೇಕು ಅನ್ನುವುದೊಂದು ಕನಸು.

ಇಷ್ಟೆಲ್ಲಾ ನೆನಪಾಗಲು ಕಾರಣ, ಇಂದು ಮಗಳ ಶಾಲೆಯ ಫ್ಯಾನ್ಸಿ ಡ್ರೆಸ್ ಕಾಂಪಿಟೀಶನ್ ನಿಂದಾಗಿ. ಮೊನ್ನೆಯಿಂದ ತಲೆ ಕೆರೆದೂ ಕೆರೆದೂ...ಕೊನೆಗೂ ಶಕುಂತಲೆಯ ಪಾತ್ರವೇ ಓಕೆ ಅಂತಾದ ಮೇಲೆಯೇ ಈ  ಹುಡುಕಾಟಕ್ಕೆ ವಿರಾಮವಿತ್ತದ್ದು. ಶಕುಂತಲೆಯ ಉಡುಪಿನಲ್ಲಿ ಹೇಗೆ ಮುದ್ದು ಮದ್ದಾಗಿ ಕಾಣ್ತಿದ್ಳು ನೋಡಿ ನನ್ನ ಮಗಳು ಸಾನ್ವಿ...

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment