Wednesday 7 June 2017

ಕುರಂಬ್ (ಕೊರಂಬು)

ಮಳೆಗಾಲ ಶುರು ಆಯ್ತು ಅಂತ ಆದ್ರೆ ನಮ್ಮ ಮನೆಯಲ್ಲಿ  ಹೊಸ ಕೊಡೆ ಖರೀದಿ ಮಾಡುವ ಆತುರ. ನನಗೊಂದು ಕಪ್ಪು ಬಣ್ಣದ್ದು, ಹೆಂಡ್ತಿಗೊಂದು ಹೂಗಳಿರುವ ಬಣ್ಣ ಬಣ್ಣದ್ದು ಆದ್ರೆ  ಮಗಳಿಗೆ ಚೋಟ ಭೀಮ್ ನೋ, ಡೋರಾನೋ ಕೊಡೆಯ ಡೇರೆಯ ಮೇಲಿರಲೇ ಬೇಕು. ಅಮ್ಮನಿಗೆ ನೀರು ಒಳಗೆ ಬೀಳದ ಕೊಡೆ ಅಂತ ಆದ್ರೆ ಆಯ್ತು.ಹೀಗೆ ಕೊಡೆಯ ಶಾಪಿಂಗ್ ಅಂದ್ರೆ ಸುಮ್ನೆ ಅಲ್ಲ. ಎಲ್ಲರಿಗೂ ತೃಪ್ತಿ ಮಾಡಬೇಕಾದ್ರೆ ಕೆಲವು ಅಂಗಡಿ ಆದ್ರೂ ಸುತ್ತಲೇ ಬೇಕು.

ನಿನ್ನೆಯಿಂದ ಇಲ್ಲಿ ಜೋರು ಮಳೆ. ಮಗಳಿಗೆ ಶಾಲೆ ಶುರು ಆದಾಗಲೇ ಮಳೆ ಕೂಡಾ ಶುರುವಾಗಿದೆ. ಮಗಳಿಗೆ ಹೇಳಿದ್ದೆ, "ಬೇಡ ಮಾರಯ್ತಿ ಕೊಡೆ, ನಿಂಗೊಂದು ಚಂದದ ರೈನ್ ಕೋಟ್ ಕೊಡಿಸ್ತೇನೆ...ಎಷ್ಟು ದೊಡ್ಡ ಮಳೆ ಬಂದ್ರೂ ಚಂಡಿ ಆಗಲ್ಲ" ಅಂತ. ಆದ್ರೆ ಅವಳೆಲ್ಲಿ ಕೇಳ್ತಾಳೆ?...
" ಬೇಡ ಪಪ್ಪಾ, ನಂಗೆ ಕೊಡೆನೇ ಬೇಕು...ವೈಷ್ಣವಿ ಆಂಗ್ರೀ ಬರ್ಡ್ಸ್ ಇರುವ ಪಿಂಕ್ ಕಲರ್ ಕೊಡೆ ತರ್ತಾಳೆ, ಎಷ್ಟು ಚೆನ್ನಾಗಿದೆ ಗೊತ್ತಾ? ನಂಗೂ ಹಾಗಿದ್ದೇ ಬೇಕು...ಮತ್ತೆ ಪ್ರತೀಕ್, ಆಯಿಷ್ ಎಲ್ಲರೂ ಕೊಡೆನೇ ತರೋದು...ನಿಂಗೆ ಗೊತ್ತಿಲ್ಲ, ಅಮ್ಮನ ಹತ್ರ ಕೇಳು " ಅಂತ ಮಾತಿಗೆ ಅವಕಾಶನೇ ಕೊಡದೇ ಆರ್ಡರ್ ಮಾಡಿದ್ಮೇಲೆ ತೆಪ್ಪಗಾದೆ.
ಬಿಸಿ ಟೀ ಕುಡಿಯುತ್ತಾ ಹೊರಗೆ ಸುರಿಯಿವ ಮಳೆಯನ್ನೇ ನೋಡುತ್ತಾ ಕುಳಿತಿದ್ದೆ. ಫಕ್ಕನೇ ಮನಸ್ಸು ಬಾಲ್ಯದತ್ತ ನೆಗೆಯಿತು. ನಾನು ಶಾಲೆಗೆ ಹೋಗುವಾಗ ನನಗೆ ಕೊಡೆ ಸಿಕ್ಕಿದ್ದು ಹೈಸ್ಕೂಲ್ ನಲ್ಲಿರಬೇಕು ಅಲ್ಲಿತನಕ ರೈನ್ ಕೋಟೇ ಹಾಕ್ಕಂಡು ಹೋದದ್ದು.....ಅಮ್ಮ ಕೂಡಾ ನನ್ನನ್ನು ಶಾಲೆ ತನಕ ಬಿಡ್ಲಿಕ್ಕೆ ಬರ್ತಿದ್ಳು, ಅವಳ ಕುರಂಬ್ ತೆಗೆದುಕೊಂಡು.

ಆಗ ನಮ್ಮ ಮನೆಯಲ್ಲಿ ಕೊಡೆ ಇನ್ನೂ ಕಾಲಿಟ್ಟಿರಲಿಲ್ಲ. ಕೊಡೆಗೆ ಹಾಕುವಷ್ಟು ದುಡ್ಡು ಅಪ್ಪನ ಹತ್ರ ಇರಲಿಲ್ಲವಾ ಅಥವಾ ಕೊಡೆ ಜೋರು ಮಳೆಗೆ ಏನೂ ಉಪಯೋಗ ಇಲ್ಲ ಅಂತನೋ ಅದೆಷ್ಟು ಜೋರು ಮಳೆಗಾಲವಾದರೂ ಮನೆಯಲ್ಲಿ ಮಳೆಯಿಂದ ರಕ್ಷಣೆಗೆ ಬಳಸುತ್ತಿದ್ದುದು ಕುರಂಬ್ ಮಾತ್ರ. ಕೊಂಕಣಿಯಲ್ಲಿ ಕುರಂಬ್ ಅಂತ ಕರೆಯುವ ಇದಕ್ಕೆ ಕೊರಂಬು, ಗೊರಬು ಅಂತನೂ ಕರೆಯುತ್ತಾರೆ ತುಳು ಮತ್ತು ಕನ್ನಡದಲ್ಲಿ. ಬಿಲ್ಲಿನ ಆಕಾರದಲ್ಲಿ ಬಿದಿರಿನಿಂದ ಮಾಡುವ ಈ ಕುರಂಬ್ ಹಿಂತಲೆಯ ಮೇಲೆ ಇಟ್ಟುಕೊಂಡ್ರೆ ಬೆನ್ನು ಪೂರಾ ಕವರ್ ಆಗಿ ತೊಡಯ ತನಕ ನೀರು ಬೀಳದಂತೆ ನೋಡಿಕೊಳ್ಳುತ್ತದೆ. ಬಿದಿರಿನ ಅಸ್ಥಿಪಂಜರಕ್ಕೆ ದೊಡ್ಡ ಎಲೆಗಳನ್ನು ಸರಿಯಾಗಿ ಪೋಣಿಸಿರುವ ಈ ಕುರಂಬ್ ಗೆ  ಕರಾವಳಿ ಕಡೆ ಮಳೆಗಾಲದಲ್ಲಿ ಇನ್ನಿಲ್ಲದ ಬೇಡಿಕೆ ಇತ್ತು. ಸರಿಯಾಗಿ ಇಟ್ಟುಕೊಂಡರೆ ಮೂರ್ನಾಲ್ಕು ಮಳೆಗಾಲ ಬಾಳಿಕೆ ಬರುವಂತಹ ಗಟ್ಡಿಮುಟ್ಟು ಈ ಕುರಂಬ್. ಗದ್ದೆ ಉಳುವಾಗ, ನೇಜಿ ತೆಗೆಯುವಾಗ, ನಟ್ಟಿ ಮಾಡುವಾಗ ಹೀಗೆ ಎಲ್ಲಾ ಸಂದರ್ಭಗಳಲ್ಲಿ ಈ ಕುರಂಬ್ ಹಳ್ಳಿಗರ ಹತ್ತಿರದ ಒಡನಾಡಿ.

ಪ್ರೈಮರಿ ಶಾಲೆಗೆ ಹೋಗುವ ನನ್ನಂತಹ ಮಕ್ಕಳಿಗೆ ಅಪ್ಪ ಅಮ್ಮ ತೆಗೆದು ಕೊಡುತ್ತಿದ್ದುದು ಪ್ಲಾಸ್ಟಿಕಿನ ಕಲರ್ ಕಲರ್ ರೈನ್ ಕೋಟ್. ಅದರ ಮೇಲೆಲ್ಲಾ ಚಿಕ್ಕ ಚಿಕ್ಕ ಹೂಗಳಿರುತ್ತಿದ್ದ ರೈನ್ ಕೋಟ್ ಗಳೆಂದರೆ ನನಗೆ ಬಹಳ ಇಷ್ಟ. ಅಪರೂಪಕ್ಕೆ ಕೆಲವರು ಕೊಡೆ ಹಿಡ್ಕೊಂಡು ಬರುತ್ತಿದ್ದವರೂ ಇದ್ರು.ಆದರೆ ಜೋರು ಗಾಳಿ ಮಳೆಯಲ್ಲಿ ಅವರ ಕೊಡೆ ಗಾಳಿಗೆ ವಿರುದ್ದವಾಗಿ ಮೇಲ್ಮುಖವಾಗಿ ತಿರುಗಿ ಬಿಡುತ್ತಿತ್ತು.ಅವರು ಪೂರ್ತಿ ಒದ್ದೆಯಾದ್ರೆ ನಮಗೆ ಖುಷಿಯೋ ಖುಷಿ.ಆದರೆ ಕೆಲವು ಮಳೆಗೆ ಈ ರೈನ್ ಕೋಟ್ ಗಳೂ ಅಸಹಾಯಕವಾಗುತ್ತಿದ್ದವು. ಆಗೆಲ್ಲಾ ನಮ್ಮನ್ನು ಸುರಕ್ಷಿತವಾಗಿ , ಒದ್ದೆಯಾಗದಂತೆ ಶಾಲೆವರೆಗೆ ಮುಟ್ಟಿಸುತ್ತಿದ್ದದ್ದು ಅಮ್ಮನ ಕುರಂಬ್ ಗಳೇ.

ಬೆಳಗ್ಗೆಯೇ ಜೋರು ಮಳೆ ಬಂದು ಅಂಗಳ ತುಂಬಿ ನೀರು ಹರಿಯುತ್ತಿದ್ದರೆ ಅಪ್ಪ ಶಾಲೆಗೆ ಹೋಗೋದೇ ಬೇಡ ಅಂತಿದ್ರು. ಆದರೆ ಅಮ್ಮನ ದಿನಚರಿಯಲ್ಲಿ ಮಕ್ಕಳು ಶಾಲೆಗೆ ಹೋಗಲೇ ಬೇಕು ಮತ್ತು ಮಕ್ಕಳನ್ನು ಶಾಲೆವರೆಗೆ ಬಿಡುವ ಕೆಲಸವನ್ನು ಅವರೇ ವಹಿಸಿಕೊಳ್ಳುತ್ತಿದ್ದರು. ಅವರ ನಟ್ಟಿಯ ದೊಡ್ಡ ಕುರಂಬ್ ಹಿಡಿದು ಅದರೊಳಗೆ ನನ್ನನ್ನು ಹಿಡಿದುಕೊಂಡು ಕರ್ಕೊಂಡು ಹೋಗ್ತಿದ್ರು. ಅಪ್ಪನ ಮಾತು ಕೇಳಿ ಉದಾಸೀನವಾಗಿ ಮನೆಯಲ್ಲಿರುವ ಅಂದುಕೊಂಡ್ರೂ ಅಮ್ಮ ಬಿಡುತ್ತಿರಲಿಲ್ಲ. ಶಾಲೆ ಹತ್ತಿರದವರೆಗೆ ಬೆಚ್ಚಗೆ ಕುರಂಬ್ ಅಡಿಯಲ್ಲಿ ಹೋದ್ರೂ ಶಾಲೆ ತಲುಪಿದ ಕೂಡ್ಲೇ ನಾಚಿಕೆಯಾಗುತ್ತಿತ್ತು. ಗೆಳೆಯರು ನೋಡಿ ನಗುತ್ತಿದ್ದುದನ್ನು ನೋಡಲಾಗದೇ ಅಮ್ಮನಿಗೆ ಶಾಲೆ ಹತ್ತಿರದವರೆಗೆ ಬರಲು ಬಿಡುತ್ತಲೇ ಇರಲಿಲ್ಲ. ಎಷ್ಟೋ ಬಾರಿ ಅಮ್ಮನಿಗೆ ಬೈದದ್ದೂ ಉಂಟು. "ನಿನಗೆ ಆಗ್ಲೇ ಹೇಳಿದ್ನಲ್ಲ, ಇಸ್ಕೂಲ್ ಹತ್ರದವರೆಗೆ ಬರ್ಬೇಡ ಅಂತ...ಎಲ್ಲಿ ಕೇಳ್ತಿಯಾ ನೀನು, ಈಗ ನೋಡು ಎಲ್ರೂ ನಗ್ತಿದ್ದಾರೆ...ಹೋಗು ಬೇಗ" ಅಂತ ಅಮ್ಮನನ್ನು ಗದರಿಸುವಾಗ ಸುಮ್ಮನೇ ನಗ್ತಾ ಹಿಂತಿರುಗೋಳು, ಆಗ ಮತ್ತೊಮ್ಮೆ ಅಮ್ಮನನ್ನು ಕರೆದು, " ಸಂಜೆ ತಿಂಡಿ ಮಾಡಿ ಇಡು..." ಅಂತ ಹೇಳಿಯೇ ಶಾಲೆಯೊಳಗೆ ಓಡುತ್ತಿದ್ದೆ.
ಅಮ್ಮ ಕುರಂಬ್ ಒಳಗೆಯೇ ನಗುತ್ತಿದ್ಳು.

ಈಗ ಸ್ಕೂಟಿಯೋ, ಕಾರಿನಲ್ಲೋ ಮಗಳನ್ನು ಸ್ಕೂಲ್ ವರೆಗೆ ಬಿಟ್ಟು ಬರುವಾಗ ಕೊಡೆ ಓಪನ್ ಆದ್ರೆ ಆಯ್ತು ಇಲ್ಲದಿದ್ರೆ ಇಲ್ಲ. ಮಳೆಯಲ್ಲಿ ನಡೆಯುವ ಸುಖ ಈಗಿನ ಮಕ್ಕಳಿಗೂ ಸಿಗಬೇಕು...ನಾಳೆ ನಡೆದೇ ಹೋಗುವ ಅಂತ ಮಗಳಿಗೆ ಹೇಳ್ಬೇಕು. ಅಂತೂ ಈ ಕೊಡೆಯ ಶಾಪಿಂಗ್ ನಡುವೆ ಕುರಂಬ್ ಯಾನೆ ಕೊರಂಬು ಯಾನೆ ಗೊರಬಿನ ನೆನಪಾಯ್ತು...

No comments:

Post a Comment