Friday 2 June 2017

ಅನುಸಂಧಾನ
(ಸಣ್ಣಕತೆ)


ನವ್ಯ 


ಛೇ, ಏನೆಲ್ಲಾ ಅಂದುಕೊಂಡಿದ್ದೆ. ತುಂಬಾ ಇಷ್ಟ ಪಡುವ ಗಂಡ, ಮುದ್ದಾದ ಮಕ್ಕಳು, ಚಂದದ ಮನೆ...ಆದರೆ ಸಿಕ್ಕಿದ್ದು? ಯಾವ ಜನ್ಮದಲ್ಲಿ ಯಾರ ಮನೆ ಒಡೆದಿದ್ನೋ ಗೊತ್ತಿಲ್ಲ.... ಈಗ ಅನುಭವಿಸ್ತಾ ಇದ್ದೇನೆ. ಅಕ್ಕನ ಮದುವೆ ಸಮಯದಲ್ಲಿ ಚೆಲ್ಲುಚೆಲ್ಲಾಗಿ ಎಲ್ಲರೊಂದಿಗೆ ಮಾತಾಡ್ತಾ ಇದ್ದಾಗ, "ಹಾಗೆಲ್ಲಾ ಗಂಡುಬೀರಿ ತರ ಆಡ್ಬೇಡ..‌‌‌.ಅದ್ಹೇಗೆ ನಾಳೆ ಗಂಡನ ಮನೆಯಲ್ಲಿ ಸಂಸಾರ ಮಾಡ್ತೀಯಾ?"  ಅಂತ ಬೈದ ಅಮ್ಮನಿಗೆ ಎಷ್ಟು ಧಿಮಾಕಿನಿಂದ ಹೇಳಿದ್ದೆ, " ನೋಡ್ತಾ ಇರಿ, ಎಷ್ಟು ಒಳ್ಳೆ ಮನೆ ಸಿಗ್ತದೆ ನನಗೆ ಅಂತ...ಶ್ರೀಮಂತ ಗಂಡ....ಯಾರ್ ಬರ್ತಾರೆ ಆಗ ನಿನ್ನ ಮನೆಗೆ...ಅಕ್ಕ ಅಸೂಯೆ ಪಡ್ತಾಳೆ ಆಗ, ನೋಡ್ತಾ ಇರು"...ಅದೆಷ್ಟು ಆತ್ಮವಿಶ್ವಾಸದಿಂದ ಮನೆಯಲ್ಲಿ ಹೇಳಿದ್ದೆ...ತವರಿಗೆ ಹೋಗದ ಹಾಗೇ ಮಾಡಿಬಿಟ್ಟಿತಲ್ಲ ನನ್ನ ವಿಧಿ.ನಗ್ತಾಳೆ ಅಕ್ಕ ಈಗ.‌‌‌..ಅಮ್ಮ ಏನು ಕಡಿಮೆಯಾ? ಯಾರನ್ನು ಅಂದು ಏನು ಪ್ರಯೋಜನ. ನಾನೇ ತೋಡಿಕೊಂಡ ಗುಂಡಿ ಇದು.ಎಲ್ಲಾ ನನ್ನದೇ ತಪ್ಪು.


ಮೋಹನ


ತಪ್ಪಲ್ಲ, ಖಂಡಿತಾ ತಪ್ಪಲ್ಲ. ಪ್ರತೀ ಹೆಣ್ಣೂ ತನ್ನ ವೈವಾಹಿಕ ಜೀವನದ ಬಗ್ಗೆ ತನ್ನದೇ ಆದ ಕಲ್ಪನೆಯನ್ನು , ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾಳೆ.ಅದು ಸಹಜ ಮಾತ್ರ, ತಪ್ಪಲ್ಲ. ಆದರೆ ಸಿಕ್ಕಿದ ನಂತರ...ಅರೆ ಇದಲ್ಲ ನಾನು ಬಯಸಿದ್ದು, ನನಗೆ ಆ ತರ ಬೇಕಾಗಿತ್ತು, ಇನ್ನೂ ಒಳ್ಳೆಯ ಬದುಕು ನನ್ನ ಹಕ್ಕಾಗಿತ್ತು, ನನಗೆ ಸಿಕ್ಕಿದ್ದು ಅದಲ್ಲ ಅಂತ ಕೊರಗಿ ಇರೋ ಚಂದದ ಬದುಕನ್ನೇ ನಿತ್ಯ ನರಕ ಮಾಡಿಕೊಂಡ್ರೆ ನನ್ನಂತಹ ಗಂಡಂದಿರ ಪಾಡೇನು?.
ಪ್ರೀತಿ ಅನ್ನೋದು ಎರಡು ಹೃದಯಗಳ , ಗಂಡು ಹೆಣ್ಣಿನ ನಡುವಿನ ವಿಷಯವಾಗಿದ್ದರೂ ಮದುವೆ ಅಂದರೆ ಬರೇ ಅಷ್ಟೇ ಅಲ್ವಲ್ಲ? ಅದು ಎರಡು ಮನೆಗಳ ಮಿಲನ. ಅಲ್ಲಿ ಎಲ್ಲರ ಮನಸೂ ಕೂಡಬೇಕು. ಎಲ್ಲರೂ ಗಂಡನ ಹಾಗೇ ಇರಲಿಕ್ಕಿಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗಬೇಕಲ್ವಾ? ಹೌದು ಎರಡು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ನನಗೆ ನೀನು, ನಿನಗೆ ನಾನು ಅಂತ ಪ್ರಣಯ ಪಕ್ಷಿಗಳಾಗಿ ಯಾರ ಹಂಗೂ ಇಲ್ಲದೆ ಹಾರಾಡಿದ್ವಿ. ಆಗೆಲ್ಲಾ ನಾನು ನಿನ್ನ ಕಣ್ಣುಗಳಲ್ಲಿ ಕಾಣುತ್ತಿದ್ದುದು ಕೊನೆಯಾಗಲು ಸಾಧ್ಯವೇ ಇಲ್ಲದಂತಹ ಸಾಗರ ಪ್ರೇಮ. ನಡೆ ನುಡಿ ಎಷ್ಟು ಚೆನ್ನ...ಮಾಡುವ ಅಡುಗೆಗೆ ಅದೆಷ್ಟು ರುಚಿ...ಆ ದೇವರು ನನಗಾಗಿಯೇ ಸ್ಪೆಷಲ್ ಆಗಿ ತಯಾರಿ ಮಾಡಿ ಕಳಿಸಿದ ಹುಡುಗಿ ಇವಳು ಅಂತ ಅದೆಷ್ಟು ಬಾರಿ ಅನ್ನಿಸಿಲ್ಲ? ಅಷ್ಟಕ್ಕೂ ನಮ್ಮದು ಲವ್ ಮ್ಯಾರೇಜ್ ಅಲ್ವಾ?


ನವ್ಯ


ಅದೇ...ಅದೇ ನಾನು ಮಾಡಿದ ಮೊದಲ ತಪ್ಪು. ನನ್ನ ಮೊಬೈಲ್‌ ನಲ್ಲಿ ತಪ್ಪಿ (?) ಬಂದ ನಿಮ್ಮ ಮೆಸೇಜ್ಗೆ ಕುತೂಹಲದಿಂದ ರಿಪ್ಲೈ ಮಾಡಿದ್ದು. ನನಗೇನು ಗೊತ್ತಿತ್ತು ಆ ಒಂದು ಮೆಸೇಜ್ ನನ್ನ ಕಲ್ಪನೆಯ ಬಹು ನಿರೀಕ್ಷಿತ ಬದುಕಿನಿಂದ ನನ್ನನ್ನು ಶಾಶ್ವತವಾಗಿ ಬಹು ದೂರ ಕರೆದುಕೊಂಡು ಹೋಗುತ್ತೆ ಅಂತ. ಅದಾವ ಮೋಹನ ಮುರಳಿಯ ನಾದಕ್ಕೆ ತಲೆದೂಗಿದೆ? ಅದೇನು ಸೆಳೆತವಿತ್ತು ನಿನ್ನ ಮಾತುಗಳಲ್ಲಿ? ಈ ಪ್ರೀತಿಯ ಬಲೆಗೆ ಬೀಳದೇ ಜಾಣತನದಿಂದ ನನ್ನ ಬದುಕನ್ನು ಆರಿಸಿಕೊಳ್ಳಬೇಕು ಅಂತ ಎಲ್ಲರಲ್ಲೂ ಹೇಳುತಿದ್ದ, ಪ್ರೀತಿಯಲ್ಲಿ ದಿನವಿಡೀ ಮೊಬೈಲ್ ಗೆ ಆತುಕೊಂಡು ಯಾವುದೋ ಲೋಕದಲ್ಲಿ ತೇಲುತ್ತಿದ್ದ ಫ್ರೆಂಡ್ಸ್ ಗೆಲ್ಲಾ 'ಲೆಕ್ಚರ್' ಕೊಡುತ್ತಿದ್ದ ನಾನೇ ಈ ಬಲೆಯಲ್ಲಿ ಬೀಳಬೇಕಾಗಿ ಬಂದ ಆ ದುರ್ಬಲ ಮಾನಸಿಕ ಘಳಿಗೆ ಯಾವುದು?  ಅಷ್ಟಕ್ಕೇ ನಿಲ್ಲದೇ ಭೇಟಿಯಾದೆವು...ಬರೇ ಫ್ರೆಂಡ್ಸ್ ಅಂತ ಹೇಳುತ್ತಲೇ ಪ್ರೀತಿಗೆ ಜಾರಿದ್ದು ಗೊತ್ತಾಗಲೇ ಇಲ್ಲ. ನಾನು ಮದುವೆಯಾಗಿ ಹೋಗುವ ಮನೆಯಲ್ಲಿ ಅತ್ತೆ ಇರಬಾರದು, ಅಕಸ್ಮಾತ್ ಅತ್ತೆ ಇದ್ದರೂ ನಾದಿನಿಯಂತೂ ಇರಲೇ ಬಾರದು, ಒಬ್ಬನೇ ಮಗನಾಗಿರಬೇಕು ಅಂತೆಲ್ಲಾ
ಅಂದುಕೊಂಡವಳು ಅತ್ತೆ ಇದ್ದೂ ಎರಡೆರಡು ನಾದಿನಿ ಇದ್ದ ಗಂಡನ ಮನೆಯನ್ನು ಆರಿಸಿಕೊಳ್ಳುವಂತಾದದ್ದು ನನ್ನ ದುಡುಕಿನಿಂದಲೇ ಅಥವಾ ಹಣೆಬರಹವೇ ಕೆಟ್ಟದ್ದಾ?...ನಿಜ ಪ್ರೀತಿಗೆ ಕಣ್ಣಿಲ್ಲ. ಅದರೂ ಅತ್ತು ಕರೆದು ಮದುವೆಯಾದೆ ಮನೆಯಲ್ಲಿ ಸಾರಿ ಹೇಳಿದರೂ ಕೇಳದೇ. ಬಹುಷಃ ನನ್ನ ಬಗ್ಗೆ ಮನೆಯಲ್ಲಿ ಅಷ್ಟೂ ಕಾನ್ಫಿಡೆನ್ಸ್ ಇತ್ತು ಅಂತ ಈಗ ಗೊತ್ತಾಗ್ತಾ ಉಂಟು, ಮಗಳು ಆ ಮನೆಯಲ್ಲಿ ಸುಖವಾಗಿರಲಾರಳು ಅಂತ. ಹುಡುಗಿ ನೋಡಲು ಬಂದದ್ದು, ಮದುವೆ ಮಾತುಕತೆ, ಮದುವೆಯ ದಿನದ ಸಂಭ್ರಮ (?) ಎಲ್ಲಾ ನೋಡಿದ್ರೆ ಈಗ ಅರ್ಥ ಆಗ್ತಾ ಉಂಟು ಅವನ ಮನೆಯಲ್ಲೂ ಇಷ್ಟವಿರಲಿಲ್ಲ ಅಂತ. ಆದರೂ ಅವನೂ ಅದನ್ನು ಮುಚ್ಚಿ ನನ್ನ ಕೈಹಿಡಿದ ಅದಾವ ಸುಖ ಸೂರೆಗೈಯಲೋ ಕಾಣೆ.ಆದರೂ ಎರಡು ವರ್ಷ ಚೆನ್ನಾಗಿಯೇ ಇತ್ತಲ್ಲ. ಮೋಹನ್ ಕೂಡಾ ತನ್ನ ಕೆಲಸಕ್ಕಾಗಿ ಊರನ್ನು ಬಿಟ್ಟು ಬೆಂಗಳೂರಿನಲ್ಲಿದ್ದದ್ದರಿಂದ ನನಗೆ ಏನೂ ಅನ್ನಿಸಲಿಲ್ಲ. ಅಪರೂಪಕ್ಕೆ ಗಂಡನ ಮನೆಗೆ ಹೋದಾಗ ಅಂತಹ ಕಿರಿಕಿರಿಯ ಅನುಭವ ಆಗಲಿಲ್ಲ. ಹಾಗೆಯೇ ಇರಬಾರದಿತ್ತಾ? ದಿನಗಳು ಹಾಗೆಯೇ ಕಳೆಯಬಾರದಿತ್ತಾ? ನನ್ನ ಅದೃಷ್ಟವೇ ಹಾಗಿರುವಾಗ ಯಾರನ್ನು ಅಂದೇನು ಪ್ರಯೋಜನ?


ಮೋಹನ


ಅದೃಷ್ಟ ಎಲ್ಲರ ಬದುಕಲ್ಲೂ ಹಾವು ಏಣಿ ಆಟ ಆಡುತ್ತದೆ ಅಂತ ಕೇಳಿದವನಿಗೆ ನನ್ನ ಬದುಕಲ್ಲೂ ಹಾವು ಸಿಗಬಹುದು ಅಂತ ಅಂದುಕೊಂಡಿರಲಿಲ್ಲ. ಎಲ್ಲವೂ ಸರಿಯಾಗಿಯೇ ನಡೆಯತ್ತಿದೆ ಅಂದುಕೊಳ್ಳುವಾಗಲೇ, ಇಲ್ಲ ಅಷ್ಟು ಸಲೀಸಾಗಿ ಬದುಕು ಸಾಗುವುದಿಲ್ಲ ಅಂತ ತೋರಿಸಿಯೇ ಕೊಟ್ಟಿತು ಕಾಲಚಕ್ರ. ಒಂದು ಬೆಳಗ್ಗೆ ಹಠತ್ತಾನೇ ಕಾಣಿಸಿದ ಎದೆನೋವು ಗ್ಯಾಸ್ಟ್ರಿಕ್‌ ಇರಬಹುದು ಅಂತ ಮೊದಲಿನ ಹಾಗೇಯೇ ಉಪೇಕ್ಷೆ ಮಾಡಿದ ಅಪ್ಪನಿಗೆ ...ಅಲ್ಲ ಇದು ಹಾರ್ಟ್ ಫೈಲ್ಯೂರ್ ಅಂತ ಹೇಳಲೂ ಅಪ್ಪನಿಂದ ಸಾಧ್ಯವಾಗಲೇ ಇಲ್ಲ. ನಮ್ಮ ಹಳ್ಳಿಯಿಂದ ಆಸ್ಪತ್ರೆಗೆ ಹೋಗುವುದು ಅರ್ಜೆಂಟ್ ಗೆ ಅಷ್ಟು ಸುಲಭವಿಲ್ಲ. ಸರಿಯಾದ ಮಾರ್ಗದ ವ್ಯವಸ್ಥೆ ಇಲ್ಲದ ಹಳ್ಳಿಗೆ ಸಕಾಲಕ್ಕೆ ಯಾವ ರಿಕ್ಷಾದವರು ಬರುವುದೂ ಇಲ್ಲ. ಅಂತೂ ಕಾದೂ ಕಾದೂ ರಿಕ್ಷ ಬಂದರೂ ಆಸ್ಪತ್ರೆಯ ದಾರಿ ಮಧ್ಯದಲ್ಲಿಯೇ ಅಪ್ಪ ನಮ್ಮ ಪಾಲಿಗೆ ಇಲ್ಲವಾದರು. ಸಾವು ಒಬ್ಬರ ಜೀವನವನ್ನು ಮುಕ್ತಾಯ ಮಾಡಿದರೆ ಅವರನ್ನು ಆಧರಿಸಿ ಬದುಕಿದವರ ಬಾಳಿನಲ್ಲಿ ಅದೆಷ್ಟು ಆಟ ಆಡುತ್ತದೆ ಅಂದರೆ ಅದಕ್ಕಿಂತ ಸಾವೇ ಸುಂದರ ಅನ್ನಿಸುವಷ್ಟು. ಅಪ್ಪ ಬಿಟ್ಟು ಹೋದ ಜವಾಬ್ದಾರಿಗಳ ಪಟ್ಟಿ ದೊಡ್ಡದಿತ್ತು. ಆದಕ್ಕೆ ನಾನಗಲೇ ಮಾನಸಿಕವಾಗಿ ಸಿದ್ದನಿರಲಿಲ್ಲ. ಅಕ್ಕನಿಗೆ ಮದುವೆ ಆಗಿದ್ದರೂ ಅವಳ ಬಾಣಂತಿ, ತಂಗಿಯ ಮದುವೆ ಎಲ್ಲವೂ ನನ್ನ ಪಾಲಿಗೆ ಬಂತು. ಕೆಲಸವನ್ನೂ ಬಿಡಲಾಗದ ಅನಿವಾರ್ಯತೆಯಲ್ಲಿ ತಂಗಿಯನ್ನು ಅವಳ ಕಾಲೇಜ್ ಹಾಸ್ಟೇಲ್ ಗೆ ಸೇರಿಸಿ ಅಮ್ಮನನ್ನು ಬೆಂಗಳೂರಿಗೇ ಕರೆದುಕೊಂಡು ಬಂದೆ , ಒಂದು ಚಂದದ ಬಾಳು ನಡೆಸಿದ ಅಪ್ಪನ ಮನೆಗೆ ಬೀಗ ಜಡಿದು.  ಅಂದೇ ನಮ್ಮ ಮನೆಯಲ್ಲಿ ಧಾರಾವಾಹಿ ಶುರುವಾಯಿತು. ನಾನು ಬರೇ ನೋಡುತ್ತಾ ಕುಳಿತೆ!


ನವ್ಯ


ಹೌದು, ಎಷ್ಟು ಅಂತ ನೋಡ್ತಾರೋ ಆ ಹಾಳು ಧಾರಾವಾಹಿಗಳನ್ನು. ಸಂಜೆ ಆರು ಗಂಟೆಗೆ ಶುರು ಆದ್ರೆ ಟಿ.ವಿ‌.ಎಲ್ಲಾ ಇವರಿಗೇ ಆಯ್ತು. ಕೇಳಿ ಕೇಳಿ ಕಿವಿ ಚಿಟ್ಟು ಹಿಡಿದು ಹೋಗಿದೆ‌. ಮೊದಲೇ ಕಿವಿ ಕೇಳುದಿಲ್ಲ, ವಾಲ್ಯೂಮ್‌ ಕಮ್ಮಿ ಮಾಡೋದೇ ಇಲ್ಲ. ಬೆಳಿಗ್ಗೆಯಿಂದ ಮಗಳ , ಅಕ್ಕ ತಂಗಿಯರ ಫೋನ್. ಇವರೊಬ್ಬರೇನಾ ಮಕ್ಕಳನ್ನು ಇಷ್ಟ ಪಡೋದು? ಏನು ಇವರ ಮಗಳಿಗೆ ಇನ್ನೂ ಒಂದು ಒಗ್ಗರಣೆ ಹಾಕೋದೂ ಬರೋದಿಲ್ವಾ? ಅದನ್ನೂ ಫೋನ್ ಮಾಡಿಯೇ ಕೇಳೋದೇನು? ಇವರು ಅದಕ್ಕೆ ಹಾಗೇ ಹೀಗೇ ಅಂತ ಹೇಳೋದೇನು?. ಏನೂ ಕಳಿಸಿ ಕೊಟ್ಟೇ ಇಲ್ವಾ? ಮೈಯೆಲ್ಲಾ ಉರಿಯುತ್ತೆ. ಅವರ ಫೋನ್ ಬಂದಾಗ. ಅವಳ ಮಗುವಿಗೆ ಸಣ್ಣ ಶೀತ ಆದ್ರೂ ಇವರನ್ನ ಕೇಳೋದು...ಯಾಕೆ ಅಲ್ಲಿ ಯಾರೂ ಡಾಕ್ಟರ್ ಇಲ್ವಾ? ಇವರೇನೂ ಸ್ಪೆಷಲಿಷ್ಟಾ? ಹಾಳಾದೋರು. ಅಪರೂಪಕ್ಕೆ ಅಡುಗೆ ಮನೆ ಬಂದ್ರೆ ...ಅಬ್ಬಾ! ಕೊಂಪೆ ಮಾಡಿ ಹಾಕ್ತಾರೆ, ಸರಿ ಮಾಡ್ಲಿಕ್ಕೆ ನಂಗೆ ಇಡೀ ದಿನ ಬೇಕು. ಅದು ಹೇಗೆ ಇರ್ತಿದ್ರೋ ಊರಲ್ಲಿ?. ಇನ್ನೂ ಟೀಗೆ ಸ್ಪಲ್ಪ ಜಾಸ್ತಿ ಸಕ್ಕರೆ ಹಾಕಿದ್ರೆ ಅವರಿಗಾಗಲ್ಲ, ಪೂರಿ ಇಷ್ಟ ಅಂತ ಮಾಡಿದ್ರೆ ಎಣ್ಣೆ ಅಂತಾರೆ, ದಿನಾ ರಾಗಿ ಗಂಜಿನೇ ಬೇಕು. ಅಯ್ಯೋ ದೇವರೇ ಮಾವ ಯಾಕದ್ರೂ ಇಷ್ಟು ಬೇಗ ಹೋದ್ರೋ...ಸಾಕಾಗಿ ಹೋಯ್ತು. ಮೊನ್ನೆ ಟೀ ಸ್ವಲ್ಪ ಸಿಹಿ ಆದದ್ದಕ್ಕೆ '' ಇಷ್ಟು ಸಿಹಿಯಾ? ಕೊಲ್ತಿಯಾ..." ಅಂತ ಹೇಳಿದಾಗ ಎಲ್ಲಿತ್ತೋ ಸಿಟ್ಟು ಗೊತ್ತಿಲ್ಲ, ಹೇಳಿಯೇ ಬಿಟ್ಟೆ "ನೀವೇ ಮಾಡಿ ಕುಡಿಯಿರಿ ಇನ್ನು, ನನಗೂ ಸಾಕಾಗಿ ಹೋಯ್ತು ನಿಮ್ಮ ಚಾಕರಿ ಮಾಡಿ ಮಾಡಿ. ಅದು ಮಾಡಿದ್ರೆ ಆಗಲ್ಲ, ಇದು ಮಾಡಿದ್ರೆ ಆಗಲ್ಲ. ನಾನು ಹೇಗಿರೋದು ಮತ್ತೆ..." ಸುಮ್ನಿರ್ಬೇಕಲ್ಲ ಹೆಂಗಸು...ಪ್ರಾಯ ಇಷ್ಟಾದ್ರೂ ಹಟ ಬಿಡ್ಲಿಲ್ಲ....ಅಬ್ಭಾ..." ಆಯ್ತು...ಅದು ನೀನ್ ಹೇಳ್ಬೇಕಾಗಿಲ್ಲ. ಇಷ್ಟು ವರ್ಷ ಅಡುಗೆ ಮಾಡಿದ್ದೇನೆ...ನಿನ್ನ ಕೈಯಿಂದಲೇ ಕುಡಿಬೇಕು ಅಂತ ಏನೂ ಇಲ್ಲ" ಅಂತ ಹೇಳಿದಾಗ ಅಳುವೇ ಬಂತು. ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಇವರತ್ರ ಹೇಳಿದ್ರೆ ಸ್ಪಲ್ಪ ಅನುಸರಿಸಿಕೊಂಡು ಹೋಗು ಅಂತಾರೆ. ನಾನು ಮಾತ್ರವಾ ಅನುಸರಿಸೋದು? ಅವರು? ಎಷ್ಟು ಹಟ ಅವರಿಗೆ.ನನಗೂ ಆಗಲ್ಲ. ಸಾಕಾಗಿ ಹೋಯ್ತು, ಅವರ ಜೊತೆ ಇರ್ಲಿಕ್ಕೆ ನನಗಾಗಲ್ಲ.


ಮೋಹನ


ನಿಜ, ಮನೆಯಲ್ಲಿ ಇರಲಾಗುತ್ತಿಲ್ಲ. ಸ್ವಲ್ಪ ದಿನ ಎಲ್ಲಿಯಾದರೂ ದೂರ ಹೋಗಿ ಇದ್ದು ಬರಬೇಕು. ಎದ್ದ ನಂತರ ಮಲಗುವವರೆಗೂ ಈ ಹಾವು ಮುಂಗುಸಿ ಜಗಳದ ನಡುವೆ ಹೇಗಿರಲಿ? ಯಾರನ್ನೆಂದು ಸಮಾಧಾನಿಸಲಿ? ಯಾರ ಪರ ನಿಲ್ಲಲಿ?...ಇಲ್ಲಿ ಸೇರಿಗೆ ಸವಾ ಸೇರು...ಅದರ ನಡುವೆ ಮಂಜುಗಡ್ಡೆಯಂತಹ ನಾನು.ತಲೆ ಮೇಲೆ ತಿರುಗುವ ಫ್ಯಾನಿನ ಗಾಳಿ ಇದ್ದರೂ ಯಾಕೋ ತಲೆ ನೋವು ಕಮ್ಮಿಯಾಗುತ್ತಿಲ್ಲ.ಮನಸ್ಸು ಗೊಂದಲದ ಗೂಡಾಗಿ ತುಮುಲಗಳ ನದಿಯೇ ಹರಿಯುವಾಗ ಸಮಾಧಾನದ ಮಾತೇ ಇಲ್ಲ.ಅಡುಗೆ ಮನೆಯಲ್ಲಿಯೂ ಸದಾ ಶಾಂತವಾಗಿರುತ್ತಿದ್ದ ಪಾತ್ರೆಗಳು ಇತ್ತೀಚೆಗೆ ಬಹಳ ಸದ್ದು ಮಾಡುತ್ತಿವೆ.ಕೆಲಸ ಮಾಡುವ ಕೈಗಳಲ್ಲಿ ನಿನಾದಗೈಯುತ್ತಿದ್ದ ಬಳೆಗಳೂ ವಿಚಲಿತವಾಗಿದೆಯೋ ಅಥವಾ ನನ್ನ ಭ್ರಮೆಯೋ ಗೊತ್ತಾಗುತ್ತಿಲ್ಲ. ನೂರು ಜುಟ್ಟನ್ನಾದ್ರೂ ಒಟ್ಟಿಗೆ ಸೇರಿಸಬಹುದಂತೆ ಆದರೆ ಎರಡು ಜಡೆಯನ್ನಲ್ಲ ಅಂತ ಯಾರೋ ಅನುಭವಸ್ಥರೇ ಹೇಳಿರಬೇಕು. ಇಬ್ಬರೂ ಕೆಟ್ಟವರೇನಲ್ಲ‌. ಬೇರೆ ಬೇರೆಯಾಗಿ ಇದ್ದಾಗ ಅದೆಷ್ಟು ಅಕ್ಕರೆ ಪ್ರೀತಿ ನನ್ನ ಮೇಲೆ. ಎಷ್ಟು ಅದೃಷ್ಟ ಮಾಡಿದ್ದೇನೆ ಇಂತಹ ಸಂಸಾರವನ್ನು ಪಡೆಯಲಿಕ್ಕೆ ಅಂತ ಯಾವತ್ತೂ ಅಂದುಕೊಳ್ಳುತ್ತಿದ್ದೆ. ಆದರೆ ಈಗ ಏನಾಗಿ ಹೋಯ್ತು?.

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಕು ದಿನದ ಈ ಬದುಕಿನಲಿ...

ಸುಮ್ಮನೆ ಹಾಡಿಕೊಳ್ಳುತ್ತಿದ್ದ ಶಿವರುದ್ರಪ್ಪನವರ ಈ ಕವಿತೆಯ ಅರ್ಥ ಈಗೀಗ ಸ್ಪಷ್ಟವಾಗುತ್ತಿದೆ.ಹೊಂದಾಣಿಕೆ ಹೇಳಲಿಕ್ಕೆ ಮಾತ್ರ, ಆಚರಣೆಗಲ್ಲ ಎಂಬಂತಾಗಿದೆ. ಹೆಣ್ಣಿಗೆ ಹಠ ಇರಬಾರದು ಗಂಡಿಗೆ ಚಟ ಇರಬಾರದಂತೆ. ಹಾಗಾದಾಗ ಸಂಸಾರ ಬೀದಿಗೆ ಬರ್ತದೆ.ಇಲ್ಲಿ ಇಬ್ಬರೂ ತಮ್ಮ ತಮ್ಮ ಹಟ ಸಾಧನೆ ಮಾಡಿದ್ರೆ ನಾನೇನು ಮಾಡಲಿ? ಎಷ್ಟೋ ಸಲ ಅನಿಸಿದ್ದಿದೆ, ಒಳ್ಳೆ ತುತ್ತಾ ಮುತ್ತಾ ಫಿಲ್ಮ್ ನ ರಮೇಶ್ ತರಹ ಆಗಿದೆ ನನ್ನ ಸ್ಥಿತಿ. ಯಾವ ಕಡೆ ಎಳೆದರೂ ತುಂಡಾಗುವುದು ನಾನೇ ಕಟ್ಟಿದ ಗೂಡು.


ನವ್ಯ


ಹೋ...ಇನ್ನೇನು ಉಳಿದಿದೆ ತುಂಡಾಗಲು. 'ನೀನೆಲ್ಲಿ ಗಂಟು ಬಿದ್ದಿಯ ನನ್ನ ಮಗನಿಗೆ, ಮನೆಯೇ ಹಾಳಾಗಿ ಹೋಯ್ತು. ಏನ್ ಮಾಡಿದ್ರೂ ಅಗೋದಿಲ್ಲ ನಿಂಗೆ. ಹೀಗೇ ಇರೋದಿಲ್ಲ. ನಿನಗೂ ವಯಸ್ಸಾಗ್ತದೆ. ನಿನ್ನ ಜೊತೆ ಇರೋದಕ್ಕಿಂತ ಊರಲ್ಲಿ ಎರಡು ಮನೆಯಲ್ಲಿ ಕೆಲಸ ಮಾಡಿಕೊಂಡು ಇರೋದು ಎಷ್ಟೋ ಮೇಲು. ಮರ್ಯಾದೆಯಾದ್ರೂ ಉಳಿತದೆ..." ಹೀಗೆ ಹೇಳಿದ್ಳಲ್ಲ ಆ ಮುದುಕಿ. ಎಷ್ಟು ಸೊಕ್ಕು ಅವಳಿಗೆ. ಪ್ರಾಯದವರಂತೆ, ಗೌರವ ಕೊಡ್ಬೇಕಂತೆ. ಹಾಗೇ ಇರ್ಬೇಕು, ಯಾಕೆ ಎಲ್ಲದ್ರಲ್ಲಿ ಮೂಗು ತೂರಿಸೋದು? ಮತ್ತೆ ಇವರ ಜೊತೆ ಇರೋ ಸುಖ ಕೊಡು ಅಂತ ನಾನೇನು ದಿನಾ ದೇವರಲ್ಲಿ ಬೇಡಿಕೊಂಡ್ನಾ? ಹೋದ್ರೆ ಹೋಗ್ಲಿ. ಯಾರಿಗೆ ಬ್ಲಾಕ್ ಮೇಲ್ ಮಾಡೋದು ಇವರು? ಹೋಗೋದಿದ್ರೆ ಯಾವತ್ತೋ ಹೋಗ್ತಿದ್ರು.ವರ್ಷ ಆಯ್ತು ಮಾವ ಸತ್ತು ಹೋಗಿ.ಎಲ್ಲಾ ನಾಟಕ ಇವರದ್ದು. ಮೋಹನನಿಗೆ ಹೇಳಿದ್ರೂ ಅರ್ಥ ಆಗುದಿಲ್ಲ. ಅಮ್ಮ ಅಂದ್ರೆ ಆಯ್ತು ಕರಗಿ ಹೋಗ್ತನೆ. ಇವರ ನಾಟಕ ಅವರಿಗೆ ಅರ್ಥ ಆಗೋದೇ ಇಲ್ಲ. ಅವರು ಆಫೀಸಿಗೆ ಹೋದ ನಂತರ ನೋಡ್ಬೇಕು ಇವರ ಅವತಾರ.ನಾನೂ ನೋಡ್ತೇನೆ ಎಲ್ಲಿ ಹೋಗ್ತಾರೆ ಅಂತ.


ಮೋಹನ


"ಯಾಕೋ ಊರಿಗೆ ಹೋಗ್ಬೇಕು ಅಂತ ಅನಿಸ್ತಿದೆ ಮೋಹನಾ, ಎಷ್ಟೆಲ್ಲಾ ತೋಟ ಮಾಡಿ ಇಟ್ಟಿದ್ದಾರೆ ನಿನ್ನ ತಂದೆಯವರು. ಸರಿಯಾದ ಆರೈಕೆ ಇಲ್ಲಾದೇ ಎಲ್ಲಾ ಹಾಳಾಗಿ ಹೋಗ್ತಾ ಇದೆ. ಯಾಕೋ ಈಗ ಆ ಗಿಡಗಳ ಮೇಲೆ ಬಹಳ ಮಮತೆ ಬಂದಿದೆ. ಅದಕ್ಕೆ ಈ ಬೇಸಿಗೆಯಲಿ ನೀರು ಹಾಕದಿದ್ರೆ ಸತ್ತೇ ಹೋಗ್ತವೆ" ಅಂತ ಅಮ್ಮ ಹೇಳುವಾಗ ಎಂದೂ ತೋಟದ ಕಡೆ ತಲೆ ಹಾಕದ ಅಮ್ಮ ಇಂದು ಈ ಮಾತಾಡ್ಬೇಕಾದ್ರೆ ಕಾರಣ ಏನೂ ಅಂತ ಗೊತ್ತಾಗ್ಲಿಲ್ಲ. ಯಾವಾಗ ಬರ್ತಿಯಮ್ಮಾ? ಕೇಳಿದ್ದಕ್ಕೆ ನಿಂಗೊಂದು ಮಗು ಆಗ್ಲಿ ಅನ್ನುವ ಅಮ್ಮನನ್ನು ಬೇಡಮ್ಮ, ಇಲ್ಲೇ ಇರು , ಅಲ್ಲಿ ಯಾರೂ ಇಲ್ಲ ನಿನ್ನ ನೋಡ್ಕೊಳ್ಳಿಕ್ಕೆ , ಅಂತ ಹೇಳಬೇಕು ಅಂದ್ರೂ ಮಾತು ಗಂಟಲಲ್ಲೇ ಉಳಿದು ಬಿಡುತ್ತಿದೆ.

No comments:

Post a Comment