Sunday 18 June 2017

ನನ್ನ ದೇವರು
ಕಾಲು ಮುರಿದುಕೊಂಡು ಬಿದ್ದಿದ್ದಾನೆ,
ಗರ್ಭಗುಡಿಯಿಂದ ಎಂದೂ
ಹೊರಬರಲಾಗದೆ.

ನನಗಿನ್ನೂ ಚೆನ್ನಾಗಿ ನೆನಪಿದೆ
ಅವನು ಬದುಕಿದ ರೀತಿ,
ಊರಿನ ಮುಂದೆ ಒಂದು
ಕಲ್ಲು ಬಿದ್ದು ಗುಹೆಯಾಗಿರುವ ಕೊಳ;
ಅದರ ದಂಡೆಯ ಮೇಲೆ ಕುಳಿತೇ
ಬೀಡಿ ಎಳೆಯುವುದು,
ಕಾಲು ಇಳಿ ಬಿಟ್ಟು ಇಷ್ಟದ ಮೀನುಗಳಿಂದ
ಕಚ್ಚಿಸಿಕೊಳ್ಳುತ್ತಾ ಎಲೆ ಜಗಿಯುವುದು,
ಸಂಜೆ ಗೂಡು ಸೇರಲು ಹಾರುವ
ಹಕ್ಕಿ ಸಾಲನ್ನು ನೋಡುತ್ತಾ
ತನ್ನಲ್ಲೇ ನಗುವುದು; ನಿರುಪದ್ರವಿ ದೇವರು.

ಮಗುವಾಗಿದ್ದಾಗ ನನ್ನ ಉಚ್ಚೆ ಹೇಲನ್ನೂ
ಬಾಚಿದ್ದ ನನ್ನ ದೇವರು
ನನ್ನ ಮೇಲೆ ಮುನಿಸಿಕೊಂಡದ್ದೇ ಇಲ್ಲ.
ಅವನ ಹೆಗಲ ಮೇಲೆ ಕೂತೇ
ಊರೂರು ಸುತ್ತುತ್ತಿದ್ದೆ,
ಊರ ಜಾತ್ರೆಯಲ್ಲಿ ರಥದ ಮೇಲಿರುತ್ತಿದ್ದ
ದೇವರನ್ನು ನನಗೆ ತೋರಿಸುತ್ತಿದ್ದ,
ಕೈಮುಗಿಯಲೂ ಹೇಳುತಿದ್ದ.
ನನಗಲ್ಲಿ ದೇವರು ಕಾಣಿಸುತ್ತಿರಲಿಲ್ಲ.

ಆವತ್ತು ಆ ಕೊಳದ ಯಾವುದೋ
ಮುದಿ ಮೀನು ಸತ್ತದ್ದಕ್ಕೆ
ಬೀಡಿ ಎಲೆ ಹರಟೆ
ಎಲ್ಲಾ ಬಿಟ್ಟು ಒಳ್ಳೆಯವನಾಗಿದ್ದ,
ಅದರ ಮರುದಿನವೇ ದಂಡೆಯಿಂದ ಜಾರಿ
ಕಾಲು ಮುರಿದುಕೊಂಡ;
ಪಾಪ ಯಾರ ಕೆಟ್ಟ ಕಣ್ಣು ಬಿತ್ತೋ
ನನ್ನ ದೇವರ ಮೇಲೆ...!

ಈಗ ಸದಾ ಗರ್ಭಗುಡಿಯಲ್ಲೇ
ಮಲಗಿರುವ ದೇವರಿಗೆ
ಹೊರಗಿನ ಬೆಳಕು ಕಾಣುವಾಸೆ,
ಹೂವು,ಹಸಿರು,ಪೇಟೆಯ ಬೀದಿ
ಊರಿನ ಕೊಳ ಹಕ್ಕಿಗಳ ಸಾಲು
ಕಣ್ತುಂಬಿಕೊಳ್ಳುವಾಸೆ.
ನನಗೂ ಅನಿಸುತ್ತದೆ,
ಅವನನ್ನು  ಹೊರ ತರಬೇಕು,
ಲೋಕ ತೋರಿಸಬೇಕು ಎಂದು.
ಪಲ್ಲಕ್ಕಿ ಹೊರುವ ನಾಲ್ಕು ಜನರಿಗಾಗಿ
ಹುಡುಕಾಡುತ್ತೇನೆ.
ತಲೆ ಮೇಲೆ ಹೊತ್ತುಕೊಂಡು
ಪೌಳಿ ಸುತ್ತುವ ಮಂದಿಗಾಗಿ
ಹುಡುಕಾಡುತ್ತೇನೆ.
ಸಿಕ್ಕರೂ ಅವರು ಬೇಡುವ ಕಾಣಿಕೆ
ಕೊಡಲಾಗದ ಬಡತನ ನನ್ನದು.

ಹೇಳಿ ನನ್ನ ದೇವರಿಗಾಗಿ ಯಾವ
ದೇವರಿಗೆ ಹರಕೆ ಕಟ್ಟಲಿ?
ಮತ್ತೆ ಕಾಲು ಬಂದು ಕುಣಿಯಲು
ಯಾವ ದೇವರಿಗೆ ಉತ್ಸವ ಮಾಡಿಸಲಿ?

No comments:

Post a Comment