Saturday 4 March 2017

ಕಿಟಕಿಗಳಾಚೆ

ನನ್ನ ಇಪ್ಪತ್ತರ ಹರೆಯದಲ್ಲಿಯೇ ಕೆಲಸ ಸಿಕ್ಕಿದಾಗ ಖುಷಿಯಿಂದ ಕುಣಿದಾಡಿದ್ದೆ. ಡಿಪ್ಲೊಮಾ ಮುಗಿಸಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದು, ಕಷ್ಟವಲ್ಲದ ಸಂದರ್ಶನವನ್ನು ಹೆದರಿಕೆಯಿಂದ ಕಷ್ಟಪಟ್ಟು ಪಾಸು ಮಾಡಿದ್ದು, ಕೆಲಸ ಸಿಕ್ಕಿದ ಕತೆಯೆಲ್ಲಾ ಈಗ ಅಂತಹ ದೊಡ್ಡ ವಿಷಯವಾಗಿ ಉಳಿದಿಲ್ಲ. ಬೆಳಗಾವಿಯ ಒಳ್ಳೆಯ ಕಂಪೆನಿಯಲ್ಲಿ ಕೆಲಸ, ಕೈತುಂಬಾ ಸಂಬಳ, ವಾಸಕ್ಕೆ ಇಪ್ಪತ್ನಾಲ್ಕು ತಾಸು ಕರೆಂಟ್ ನೀರು ಇರುವ ಕಂಪೆನಿ ಕ್ವಾರ್ಟರ್ಸ್, ಜವಾಬ್ದಾರಿ ಇಲ್ಲದ ಜೀವನ, ಜೊತೆಗೆ ಸಂಜೆಯ ಹಕ್ಕಿ ವೀಕ್ಷಣೆಗೆ ಗುಂಡು ಪಾರ್ಟಿಗಳಿಗೆ ಗೆಳೆಯರು; ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದ ದಿನಗಳವು.

ಕಿಟಕಿಗಳು ನನ್ನನ್ನು ಕಾಡಿದಷ್ಟು ಯಾವುದೂ ನನ್ನ ಇದುವರೆಗಿನ ಬದುಕಿನಲ್ಲಿ ನನ್ನನ್ನು ಕಾಡಿಲ್ಲ. ಅಲ್ಲಿಂದನೇ ಹೊರ ಜಗತ್ತನ್ನು ಅಳೆಯಬಹುದು, ಅದು ನನಗೆ ಒಳಗಿದ್ದುಕೊಂಡೇ ಜಗತ್ತನ್ನು ತೋರಿಸುವ ಕಿಂಡಿಗಳು. ನಾನಿದ್ದದ್ದು ಎರಡನೇ ಮಹಡಿಯಲ್ಲಿ. ಸಂಜೆ ನನ್ನ ಕೆಲಸವಾದ ನಂತರ ಅಲ್ಲೇ ಕುಳಿತು  ಕಿಟಕಿಯಿಂದ ರಸ್ತೆಯನ್ನು ನೋಡಿದರೆ ಜಗತ್ತಿಗೆ ಚಲನೆ ಬಂದ ಹಾಗೆ. ಬಗೆ ಬಗೆಯ ಜನರ ರಂಗುರಂಗಿನ ಬದುಕು ಅಲ್ಲೇ ತೆರೆದುಕೊಳ್ಳುತ್ತದೆ.  ಹಾಲ್ ನ ಕಿಟಕಿಯ ಅಭಿಮುಖವಾಗಿ ಎದುರು ಮನೆಯ ಕಿಟಕಿ. ನಾನು ಅಲ್ಲಿ ಕುಳಿತಾಗೆಲ್ಲಾ ಎದುರಿನ ಕಿಟಕಿಯಿಂದ ನನ್ನ ಕಡೆ ನೋಡುತ್ತಿದ್ದ ಜೋಡಿ ಕಣ್ಣುಗಳು ನನಗೆ ಅಪರಿಚಿತವೇನಲ್ಲ. ಕೆಲವೇ ದಿನಗಳಲ್ಲಿ ನನ್ನ ದೃಷ್ಟಿಯೂ ರಸ್ತೆಯ ಬದುಕಿನ ಆಕರ್ಷಣೆಯಿಂದ ಬಿಡಿಸಿಕೊಂಡು ಕಿಟಕಿಯ ಕಡೆ ವಾಲಿದ್ದು ಯೌವ್ವನದ ಮಹಿಮೆಯೇ ಹೊರತು ಬೇರೇನೂ ಅಲ್ಲ. ಅಲ್ಲಿ ಕಾಲೇಜ್ ಹೋಗುವ ಹುಡುಗಿ, ಇತ್ತ ಈಗಷ್ಟೇ ಕೆಲಸ ದೊರೆತ ಇಪ್ಪತ್ತರ ತರುಣ. ಬೆಂಕಿಯೂ ಹೊತ್ತಿಕೊಂಡಿತು; ಬೆಣ್ಣೆಯೂ ಕರಗಿತು. ನಂತರ ನಡೆದದ್ದು ಮಾಮೂಲಿ ವಿಷಯ ಬಿಡಿ. ಲವ್, ಸುತ್ತಾಟ, ಸ್ವಲ್ಪ ದಿನದ ಗುಟ್ಟು, ನಂತರದ ರಟ್ಟು, ಒತ್ತಡ, ಅಸಹಾಯಕತೆ, ಕೊನೆಗೆ ಹೇಳಿ ಹೋಗು ಕಾರಣ ಅಂತ ವಿರಹದ ಅತಿರೇಕ. ಕತೆ ಕೇಳಿ ಕೇಳಿ ಗ್ಲಾಸ್ ಗೆ ವಿಸ್ಕಿ ಹಾಕಿ ಸೋಡ ಮಿಕ್ಸ್ ಮಾಡಿ, ತುಟಿಗೆ ಸಿಗರೇಟ್ ಇಟ್ಟು  "ಸಾಂತ್ವನ ಮಾಡಲು" ಮಾಡಲು ಹೇಗೂ ಫ್ರೆಂಡ್ಸ್‌ ಏನೂ  ಕಮ್ಮಿ ಇರಲಿಲ್ಲ.

ಇಷ್ಟೆಲ್ಲಾ ಆದ ನಂತರ ನಾನು ಬೆಳಗಾವಿ ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ವಯಸ್ಸಿನಲ್ಲಿಯೂ , ಅನುಭವದಲ್ಲೂ , ಕೆಲಸದಲ್ಲಿಯೂ ಮಾಗಿದ್ದೆ.ಹೊಸ ಎತ್ತರ ಏರಿದ್ದೆ. ಇಲ್ಲಿಯೂ ಮತ್ತೆ ಅದೇ ಚಕ್ರದ ಪುನರಾವರ್ತನೆ ಆಯ್ತು ಅನ್ನೋದು ಬಿಟ್ಟರೆ ರಾಜಧಾನಿಯ ಹೊಸ ಪರಿಸರದಲ್ಲಿ ಲವಲವಿಕೆಯಿಂದಿದ್ದೆ. ಇಲ್ಲೊಂದು ಕಂಪೆನಿಯಲ್ಲಿ ಕೆಲಸ, ವಾಸಕ್ಕೊಂದು ಬಾಡಿಗೆ ರೂಮು. ಆದರೂ ಈ ಕಿಟಕಿಗಳಾಚೆಯ ವಿಷಯಗಳತ್ತ ನನ್ನ ಕುತೂಹಲ ಇಲ್ಲೂ ಮುಂದುವರೆದಿತ್ತು. ಎದುರು ಮನೆಯಲ್ಲೊಂದು ಸರಿಸುಮಾರು ಹತ್ತು ವರ್ಷ ಕಳೆದ 'ಹಳೆಯ' ಸಂಸಾರ. ನನ್ನ ಕಲ್ಪನೆಯ ಸಂಸಾರಗಿಂತ ತೀರಾ ಭಿನ್ನವಾಗದ್ದರಿಂದ ಸಹಜವಾಗಿಯೇ ದೃಷ್ಟಿ ಕಿಟಕಿಯಾಚೆ ಸುಳಿಯುತ್ತಿತ್ತು. ಗಂಡನಿಗೆ ಅವಳು ಎರಡನೆಯ ಸಂಸಾರ. ದಿನ ಬೆಳಗಾದರೆ ಸದಾ ಕೂಗಾಟ ಅರಚಾಟ. ಆ ಹೆಂಗಸು ಯಾವತ್ತೂ ಸಮಾಧಾನದಿಂದ ನಗುನಗುತ್ತಲೇ ಇದ್ದದ್ದನ್ನು ನಾನು ನೋಡಿಯೇ ಇರಲಿಲ್ಲ. ಮನೆಯಲ್ಲಿದ್ದಾಗ ಎಲ್ಲಾ ಕೆಲಸವೂ ಆತನದೇ, ಇವಳಿದ್ದು ಬರೇ ಆರ್ಡರ್. ಯುಕೆಜಿ, ಒಂದನೇ ತರಗತಿಯ ಇಬ್ಬರು  ಗಂಡು ಮಕ್ಕಳಂತೂ ಅಮ್ಮನ ಹಾಗೇ ಮಹಾ ಒರಟರು.
ಮನೆಯ ರಾಮಾಯಣ ಮುಗಿಸಿ ಹೊರಗೆ ಬಂದು ಡ್ಯೂಟಿಗೆಂದು ಬೈಕ್ ಹತ್ತುವಾಗ ಆ ಗಂಡಸಿನ ಮುಖ ನೋಡಬೇಕು...ಯುದ್ಧ ನಂತರದ ನಿರ್ಮಲ ಶಾಂತಿ, ಆನಂದ ಅವರ ಮುಖದಲ್ಲಿ; ಜೀವಾವಧಿ ಶಿಕ್ಷೆ ಮುಗಿಸಿ ಈಗಷ್ಟೇ ಹೊರ ಬಂದ ಖೈದಿಯ ಸಂತೋಷದಂತೆ ನಿರಾಳ ಮುಖಭಾವ. ಸಂಜೆ ಮತ್ತೆ ಮನೆಯ ಬಾಗಿಲು ಬಡಿಯುವಾಗ ಮತ್ತದೇ ಬೇಸರ. "ಒಂದೇ ಮನೆಯಲ್ಲಿ ವಿಚ್ಭೇದಿತ ಮನಸ್ಸುಗಳು ಸಹ ಬೋಜನ ಮಾಡುತ್ತವೆ" ಎಂದು ಎಲ್ಲೋ ಓದಿದ್ದ ಮಾತು ಇವರನ್ನು ನೋಡಿದಾಗ ಅದೆಷ್ಟು ನಿಜ  ಅನಿಸಿತು.ಉಳಿದ ಬದುಕಿನ ಅದೆಷ್ಟು ವರ್ಷಗಳನ್ನು ಈ 'ಬಂಧನ' ದಲ್ಲಿ ಕಳೆಯಬೇಕಲ್ಲಾ ಅಂತೆನಿಸಿ ನನಗೇ ಕಳವಳವಾಗುತಿತ್ತು. ಅದ್ಹೇಗೆ ಒಲವ ಕಾವು ಇಷ್ಟು ಬೇಗ ತಣ್ಣಗಾಗುತ್ತದೆ, ಆರಂಭದ ಉತ್ಕಟ ಪ್ರೇಮ ಹೇಗೆ ಇಂಗುತ್ತದೆ? ಅರ್ಥವೇ ಆಗುತ್ತಿರಲಿಲ್ಲ.
ಬಿಆರ್.ಲಕ್ಷ್ಮಣ್ ರಾವ್ ಅವರ ಒಂದು ಕವಿತೆ ಇವರನ್ನು ನೋಡಿದಾಗೆಲ್ಲಾ ಕಾಡುತ್ತಿತ್ತು...
" ನನ್ನ ನಿನ್ನ ಪ್ರೀತಿ
ಅಪ್ಪಟ  ಚಿನ್ನವಾದರೇನು?
ಕೊಡದಿದ್ದರೆ ಮರೆಗು
ಮಾಸುವುದು ಅದೂನು..."

ತೀರಾ ತಲೆ ಕೆಡುವ ಹಂತ ಬಂದಾಗ ಕಿಟಕಿಯ ಪರದೆಯನ್ನು ಮುಚ್ಚಿಬಿಡುತ್ತಿದ್ದೆ.

ಮುಂದೆ ನನ್ನದೂ ಮದುವೆ ಆಯ್ತು; ಮಕ್ಕಳೂ ಕೂಡಾ. ಕಂಪೆನಿಯೂ ಬದಲಾಗಿ ಬೆಂಗಳೂರಿನಿಂದ ನನ್ನ ನೆಚ್ಚಿನ ಕರಾವಳಿಯ ಮಂಗಳೂರಿಗೆ. ಬೇರೆ ಮನೆ , ಬೇರೆ ಕಿಟಕಿ, ತಣಿಯದ ಕುತೂಹಲದ ಬದುಕಿನ ಹೊಸ ನೋಟ.
ಎದುರು ಮನೆ ಕಿಟಕಿಯಲ್ಲಿ ನಡು ವಯಸ್ಸು ದಾಟಿದ ಇಬ್ಬರೂ ಕೆಲಸಕ್ಕೆ ಹೋಗುವ  'ಹೊಸ' ಸಂಸಾರ. ವಯಸ್ಸಿಗೆ ಬಂದಿರೋ ಮಕ್ಕಳು. ಬೆಳಗ್ಗೆದ್ದು ಕಿಟಕಿಯಾಚೆ ಕಣ್ಣಾಹಿಸಿದರೆ ಆ ಮನೆಯ ವರ್ತಮಾನ ಬಯಲು. ಗಂಡ ಹೆಂಡತಿ ಇಬ್ಬರೂ ಅಡುಗೆ ಕೋಣೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬೆಳಗಿನ ಉಪಹಾರ ತಯಾರು ಮಾಡುವ ದೃಶ್ಯ ನನ್ನನ್ನು ಬಹುವಾಗಿ ಕಾಡುತಿತ್ತು. ಗಂಡ ಹಿಟ್ಟು ಲಟ್ಟಿಸಿ ಕೊಟ್ಟರೆ ಚಪಾತಿ ಕಾಯಿಸುವ ಕೆಲಸ ಹೆಂಡತಿಯದ್ದು, ಚಟ್ನಿಗೆ ಗಂಡ ಕಾಯಿ ತುರಿದು ಕೊಟ್ಟರೆ ಮಿಕ್ಸಿಯಲ್ಲಿ ರುಬ್ಬುವ ಕೆಲಸ ಹೆಂಡತಿಯದ್ದು. ಎಲ್ಲಾ ಕೆಲಸದಲ್ಲೂ ಸಮಪಾಲು; ಎಂತಹ ಅನ್ಯೋನ್ಯತೆ. ಅವರ ನಡುವೆ ಸುಳಿದಾಡುವಂತದ್ದು ಪ್ರೇಮವೋ ಕಾಮವೋ, ಒಬ್ಬರಿಗೊಬ್ಬರು ಈಗ ಅನಿವಾರ್ಯ ಅನ್ನಿಸುವಂತಹ ಅವಲಂಬನೆಯೋ ಗೊತ್ತಾಗುತ್ತಿರಲಿಲ್ಲ. ಆದರೆ ಅವರು ಜೀವಿಸುತ್ತಿದ್ದ ರೀತಿಯಿಂದ ನನ್ನ ಮನೆಯೊಳಗೂ ಆ ಪರಿಮಳ ಹರಡಿ ಬದುಕನ್ನು ಸಹ್ಯಗೊಳಿಸುತ್ತಿತ್ತು.

ನಡೆದ ಬದುಕಿನ ಎಲ್ಲಾ ಘಟನೆಗಳನ್ನು ಹಿಂತಿರುಗಿ ನೋಡಿದಾಗ ಮನಸ್ಸು ಚಿಂತನೆಯಲ್ಲಿ ತೊಡಗುತ್ತದೆ. ದೃಷ್ಟಿ ನನ್ನದೇ; ಕಿಟಕಿಯೂ ಕೂಡಾ. ಆದರೆ ಹೊರಗಿನ ವ್ಯವಹಾರಗಳು ಕಾಲಕಾಲಕ್ಕೆ ಬದಲಾಗುತ್ತಾ ಹೋದವು.ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ನಮ್ಮ ದೃಷ್ಟಿ, ನಮ್ಮ ಅವಶ್ಯಕತೆ ಅನಿವಾರ್ಯತೆಗಳು ಬೇರೆ ಬೇರೆಯಾಗಿರುವುದರಿಂದಲೇ ನಮ್ಮ ಕಣ್ಣಿಗೆ ಬೀಳುವ ದೃಶ್ಯಗಳೂ ಅಂತಹುಗಳೇ. ಪ್ರೇಮ, ಜಗಳ, ಹೊಂದಾಣಿಕೆ ಇವೆಲ್ಲವೂ ನಮ್ಮ ಅನಿವಾರ್ಯತೆಗಳನ್ನು ಅವಲಂಬಿಸಿವೆ. ಎಲ್ಲವೂ ಆಯಾ ವಯಸ್ಸಿನಲ್ಲಿ ಚಂದವೇ. ಆದರೆ ಹಿತಮಿತವಿರಬೇಕೆಂಬ ಅರಿವು ನಮ್ಮಲ್ಲಿರಬೇಕು. ಎಲ್ಲಕ್ಕಿಂತಲೂ ಬದುಕು ದೊಡ್ಡದೆಂಬ ಅರಿವು ಸದಾ ನಮ್ಮಲ್ಲಿರಬೇಕು.

ಈಗ ಮತ್ತೆ ಮನೆ ಬದಲಾಯಿಸಿದ್ದೇನೆ.ಆದರೆ ಯಾಕೋ ಇನ್ನು ಮುಂದೆ ಎದುರು ಮನೆಯ ಕಿಟಕಿಗಳು ತೆರೆಯುತ್ತವೋ ಇಲ್ಲವೋ ಎಂಬ ಆತಂಕ ಇತ್ತೀಚೆಗೆ  ನನ್ನನ್ನು ಕಾಡುತ್ತಿದೆ.

No comments:

Post a Comment