Friday, 3 March 2017

ಒಂದು ಆಟದ ಪ್ರಸಂಗ


ಎಷ್ಟೋ ದಿನಗಳಿಂದ ಯೋಚಿಸ್ತಾ ಇದ್ದೆ.ಒಂದೊಳ್ಳೆಯ ಯಕ್ಷಗಾನ ನೋಡ್ಬೇಕು ಅಂತ.ಆದರೆ ದೈನಂದಿನ ಕೆಲಸಗಳ ಒತ್ತಡದಿಂದಾಗಿ ಯಾವುದಕ್ಕೂ ಪುರುಸೊತ್ತೇ ಸಿಕ್ಕಿರಲಿಲ್ಲ‌.ಹಾಗಂತ ಯಕ್ಷಗಾನ ನೋಡಲೇ ಇರಲಿಲ್ಲ ಅಂತಲ್ಲ‌.ಅಲ್ಲಿ ಇಲ್ಲಿ ನಡೆಯುತ್ತಲೇ ಇದ್ದ ಕಟೀಲು ಮೇಳದ ದೇವಿಮಹಾತ್ಮೆ ಆಟಗಳನ್ನು ಸ್ವಲ್ಪ ಸ್ವಲ್ಪ ನೋಡುತ್ತಿದ್ದೆ. ಎಷ್ಟೆಂದರೂ ಮಹಿಷಾಸುರನ ಪ್ರವೇಶದವರೆಗೆ ಮಾತ್ರ ನಮ್ಮ ಆಟ. ನಂತರ ನಿದ್ರಾದೇವಿಯ ವಶಕ್ಕೆ ಯಾವುದೇ ಯುದ್ಧವಿಲ್ಲದೇ ನನ್ನನ್ನು ಒಪ್ಪಿಸಿ ಬಿಡುತ್ತಿದ್ದೆ.
ಹಾಗಾಗಿ ಒಂದೊಳ್ಳೆಯ ಯಕ್ಷಗಾನವನ್ನು ಪೂರ್ತಿ ನೋಡಿ ಆಸ್ವಾದಿಸಬೇಕು ಅನ್ನುವ ಆಸೆ ಈಡೇರಿರಲಿಲ್ಲ.

     ಉಡುಪಿಯಲ್ಲಿ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯ ಅದ್ದೂರಿ ಆಟದ ಬಗ್ಗೆ ಪೇಪರಿನಲ್ಲಿ ಓದಿದ್ದೇ ನನ್ನ ಕಿವಿಗಳು ನಿಮಿರಿದವು.ಡ್ಯೂಟಿಗೆ ರಜೆ ಹಾಕಿ ದಿನವನ್ನು ರಿಸರ್ವ್ ಮಾಡಿಯೇ ಬಿಟ್ಟೆ. ನನ್ನಷ್ಟೇ ಆಟದ ಹುಚ್ಚಿರುವ ಗೆಳೆಯ ಅಣ್ಣಪ್ಪನೊಂದಿಗೆ ಹೊರಟೇ ಬಿಟ್ಟೆ.ಒಳ್ಳೆಯ ಭಾಗವತಿಕೆಯ ಕಂಠ, ಶಾರೀರವಿರುವ ಅಣ್ಣಪ್ಪ ಗಾಣಿಗ  ಡ್ಯೂಟಿಯ ವಿರಾಮದ ಸಮಯದಲ್ಲಿ ಹಾಡುವ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಬಡಗುತಿಟ್ಟಿನ ಹೆರಂಜಾಲು ಗೋಪಾಲ ಗಾಣಿಗರೇ ಹಾಡಿದ ಹಾಗೆ ಸುಶ್ರಾವ್ಯವಾಗಿ ಯಕ್ಷಗಾನದ ಪದ್ಯಗಳು ಅಲೆಅಲೆಯಾಗಿ ಕೇಳಿತಿತ್ತು. ಹಾಗಾಗಿ ನನಗೆ ಅಣ್ಣಪ್ಪನೊಂದಿಗೆ ಆಟ ನೋಡುವ ಮಜವೇ ಬೇರೆ. ಸಮಯಕ್ಕೆ ಸರಿಯಾಗಿ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಹಾಕಿದ್ದ ಟೆಂಟ್ ಗೆ ಹೋಗಿ ಎರಡು ಟಿಕೆಟ್ ಕೊಂಡೆವು.ಆದರೆ ಆಟದ ಆರಂಭಕ್ಕಿನ್ನೂ ಸಾಕಷ್ಟು ಸಮಯವಿತ್ತು.

ಪ್ರಸಂಗದ ಬಗ್ಗೆ ಎರಡು ಮಾತು ಹೇಳಲೇ ಬೇಕು.ಆಟದ ಪ್ರಸಂಗ ಚಕ್ರವ್ಯೂಹ, ನನ್ನ ಇಷ್ಟದ ಪ್ರಸಂಗ. ಹಿಂದೆ ಸಾಕಷ್ಟು ಬಾರಿ ನೋಡಿದ್ದರೂ , ಅಭಿಮನ್ಯುವಿನ ರಂಗ ಪ್ರವೇಶದ ಅಬ್ಬರ, ಆ ಲವಲವಿಕೆ ಯಾವತ್ತೂ ಬೋರ್ ಹೊಡೆಸುವುದೇ ಇಲ್ಲ. ಇದೊಂದು ಪೌರುಷ, ಅಮ್ಮ ಮಗನ ಸೆಂಟಿಮೆಂಟ್,  ಕುಟಿಲ ಯುದ್ದದ ರಾಕ್ಷಸತನದ ಭೀಭಸ್ಸತೆಯ ಸನ್ನಿವೇಶಗಳ ಮಿಶ್ರಣದಿಂದಾಗಿ ಮತ್ತೆ ಮತ್ತೆ ನೋಡುವಂತಹ ಪ್ರಸಂಗ. ಬರೇ ಇಷ್ಟೇ ಆಗಿದ್ದರೆ ಆ ದಿನದ ಪ್ರಸಂಗ ವಿಶೇಷವಾಗಿರುತ್ತಿರಲಿಲ್ಲ. ಆದರೆ ಅಂದು ಎರಡು ಬಾರಿ ಚಕ್ರವ್ಯೂಹದ ಪ್ರಸ್ತುತಿ ಇತ್ತು. ಒಮ್ಮೆ ಬಡಗಿನವರು ಕೌರವರಾದರೆ ತೆಂಕುತಿಟ್ಟಿನವರು ಪಾಂಡವರು.ನಂತರ ತೆಂಕಿನವರು ಕೌರವರಾಗಿ ಬಡಗಿನ ಅಭಿಮನ್ಯು ಚಕ್ರವ್ಯೂಹ ಬೇಧಿಸುವ ಅಧ್ಬುತ ರಂಗಪ್ರಯೋಗವಿತ್ತು. ಹಾಗಾಗಿಯೇ ಸಹಜವಾಗಿಯೇ ಕುತೂಹಲವಿತ್ತು.

ಹಾಗಾಗಿ ಸಾಕಷ್ಟು ಸಮಯವಿದ್ದುದರಿಂದ ಊಟಕ್ಕೆ ಅಂತ ಪಕ್ಕದಲ್ಲಿಯೇ ಇದ್ದ ಹೋಟೇಲ್ ಗೆ ಹೋಗಿ ಧೀರ್ಘ ಮಾತುಕತೆಗಳ ನಡುವೆ ಗಡದ್ದಾಗಿ ಊಟಮಾಡಿ ಟೆಂಟ್ ಹತ್ತಿರ ಬರುವಾಗ ಚಕ್ರವ್ಯೂಹದ ಒಳಗೆ ಅಭಿಮನ್ಯುವಿನ ಪ್ರವೇಶ ಆಗಿ ಆಗಿತ್ತು. ಟೆಂಟ್ ನ ಒಳಹೋಗುವ ಬಾಗಿಲು ಹಾಕಿ ಆಗಿತ್ತು.ಅಲ್ಲಿಂದ ಹೋಗುವುದು ಅಸಾಧ್ಯವೇ ಆಗಿತ್ತು. ದಾರಿ ಹುಡುಕಿ ಹುಡುಕಿ ಕೊನೆಗೊಂದು ಕಡೆ ಸಣ್ಣ ದಾರಿ ಸಿಕ್ಕಿ ಹೇಗೋ ಒಳಗೆ ನುಸುಳಿದೆವು ಕಷ್ಟಪಟ್ಟು, ಅಭಿಮನ್ಯು ಚಕ್ರವ್ಯೂಹ ಭೇದಿಸಿದ ಹಾಗೆ. ಒಳಗೆ ಬಂದು ನೋಡ್ತೇವೆ, ಕಿಕ್ಕಿರಿದು ತುಂಬಿದ ಟೆಂಟ್ ನ ಒಳಗೆಲ್ಲೂ ಕುಳಿತುಕೊಳ್ಳಲೂ ಜಾಗವಿಲ್ಲ.ಟಿಕೆಟ್ ತೆಗೆದುಕೊಂಡರೂ ನಮಗೆ ಸೀಟ್ ಇಲ್ಲ. ನುಸುಳಿ ಒಳಬಂದ ಕಡೆ ನಿಲ್ಲಲೂ ಸರಿಯಾದ ಸ್ಥಳವಿಲ್ಲ. ಹಾಗಾಗಿ ಬಂದ ದಾರಿಯಲ್ಲಿಯೇ ಹೊರಹೋಗಿ ಬೇರೆ ಕಡೆಯಿಂದ ಬರೋಣವೆಂದು ತಿರುಗಿದರೆ ಆ ದಾರಿಯನ್ನೂ ಮುಚ್ಚಿಬಿಟ್ಟಿದ್ದಾರೆ ಯಾರೂ ಒಳ ನುಸುಳದ ಹಾಗೆ. ನಿಲ್ಲಲೂ ಆಗದೇ ಹೊರಹೋಗಲೂ ಆಗದೇ ಚಡಪಡಿಸುತ್ತಿರುವಾಗ ಪಕ್ಕದಲ್ಲಿ ನಮ್ಮ ಹಾಗೆಯೇ ಪರಿಸ್ಥಿತಿಯಲ್ಲಿದ್ದ ಒಬ್ಬ ಟೈಟ್ ಮಾಸ್ಟರ್ " ಊಹುಂ...ದಾ...ಲ ಮಲ್ಪೆರೆ ಆಪುಜಿ. ಚಕ್ರವ್ಯೂಹದ ಉಲಯ್ ಬತ್ತಾಂಡ್ .ನನ ಪಿದಯ್ ಪೋಪಿನ ಛಾನ್ಸ್ ಇಜ್ಜಿ. ಲಡಾಯಿ ಮಲ್ಪೊಡೇ, ಬೇತೆ ತಾದಿ ಇಜ್ಜಿ...."  ( ಊಹುಂ...ಏನೂ ಮಾಡೋ ಹಾಗಿಲ್ಲ. ಚಕ್ರವ್ಯೂಹ ಪ್ರವೇಶ ಮಾಡಿ ಆಗಿದೆ. ಇನ್ನು ಹೊರಹೋಗೋ ಛಾನ್ಸೇ ಇಲ್ಲ. ಯುದ್ಧ ಮಾಡಲೇ ಬೇಕು, ಬೇರೆ ದಾರಿಯಿಲ್ಲ ). ಅಂತ ಗಹಗಹಿಸಿ ನಕ್ಕಾಗ ಆ ಸನ್ನಿವೇಶದಲ್ಲಿಯೂ ನಗು ತಡೆಯಲಾಗಲಿಲ್ಲ.

 ಅಂತಿಮವಾಗಿ ಅಭಿಮನ್ಯು ಮೋಸದ ಯುದ್ಧದಿಂದಾಗಿ ವೀರ ಮರಣವನ್ನಪ್ಪಿದಾಗ,
" ಹಲವು ಗಜಗಳೊಂದಾಗಿ
ಸಿಂಹದ ಮರಿಯನ್ನು ಕೊಲಿಸಿದಂತಾಯ್ತು...
ಭರತ ಭೂಮಿಯೊಳ್ ಮೊಳೆತ ಚಿಗುರನು
ಕರುಣೆಯಿಲ್ಲದೇ ಹೊಸಕಿದರು ಶಿವ ಶಿವಾ‌...."
ಎಂದು ಪದ್ಯಾಣ ಗಣಪತಿ ಭಟ್ಟರು ಕರುಣರಸದಿಂದ ನಮ್ಮ ಹೃದಯವನ್ನು ಆರ್ದ್ರಗೊಳಿಸಿದರೂ ಆ ಕುಡುಕನ ಮಾತು ನೆನಪಾಗಿ ನಗೆಬುಗ್ಗೆ ಚಿಮ್ಮುತ್ತಲೇ ಇತ್ತು.

No comments:

Post a Comment