Friday 4 March 2016

ಒ೦ದು ಕಾಲದಲ್ಲಿ
ಕಾಡು ಪಾಲಾಗಿದ್ದ ನಾನೂ
ಸೈನ್ಯ ಕಟ್ಟಿದ್ದು
ಗಡಿ ದಾಟಿ ಯುದ್ದಕ್ಕೆ ಹೋದದ್ದು,
ಮತ್ತು ರಾಜನನ್ನು ಸೋಲಿಸಿದ್ದು
ಈಗ ಬರಿಯ  ಇತಿಹಾಸ.
ಸಿ೦ಹಾಸನವೇರಿ ನಾನು ಕುಳಿತದ್ದು
ಬರೀ ನನ್ನ ಯೋಗ್ಯತೆಯಿ೦ದ್ದಲ್ಲ
ಅನ್ನುವುದು ನನಗೂ ಗೊತ್ತು,
ಮತ್ತು ನನ್ನನ್ನು ಪ್ರತಿಷ್ಟಾಪಿಸಿದವರಿಗೂ.
ಎಷ್ಟು ಚ೦ದದ ಕಿರೀಟ....!
ರತ್ನಖಚಿತ ಹೊಳೆಯುವ
ಮತ್ತೆ ಮತ್ತೆ ಮುಟ್ಟುವ೦ತಾಗುವ
ಕಿರೀಟವನ್ನು ನಾನು ಕೆಳಗಿಳಿಸಿದ್ದೇ ಇಲ್ಲ.
ವರುಷಗಳುರುಳಿದವು,
ಕತ್ತಿಗೆ ಕೆಲಸವಿಲ್ಲದೇ ಹೋದರೂ
ಕಿರೀಟವಿನ್ನೂ ಹೊಳೆಯುತ್ತಲೇ ಇತ್ತು.
ಹೊಸ ಜಯವಿಲ್ಲದೇ ಹೋದರೂ
ಕಿರೀಟಕ್ಕೆ ಜಯಕಾರ
ಕೇಳುತ್ತಲೇ ಇತ್ತು.

ಯಾರೋ ದ೦ಡೆತ್ತಿ ಬ೦ದರು,
ರಾಜ್ಯ ಹೋಯಿತು;
ನನ್ನನ್ನು ಮಾತ್ರ ಕಿರೀಟದೊಡನೆ
ಕಾಡಿಗೆ ಅಟ್ಟಿದರು.
ಈಗ ಬೆ೦ಗಾವಲಿನವರೂ ಇಲ್ಲ,
ಹೊಗಳುಭಟ್ಟರೂ ಇಲ್ಲ.
ಉಳಿದಿರುವುದು ನಾನು
ಮತ್ತು ನನ್ನ ಕಿರೀಟ.

ಕಿರೀಟದ ಮೋಹ ಕಳೆದುಕೊ೦ಡ ರಾಜ
ಹೊಸ ಹೊಸ ಕಿರೀಟವನ್ನು
ಧರಿಸುತಿದ್ದಾನೆ;
ಪರಿಧಿ ದಾಟದ ನಾನು
ಕಿರೀಟದಲ್ಲೇ ಬ೦ಧಿಯಾಗಿದ್ದೇನೆ. 

No comments:

Post a Comment