Saturday 26 March 2016

ಯಾವ ರಾಗ ಬೆರೆಸಲಿ ನಾ
ನೀನು ಬರೆದ ಕವಿತೆಗೆ;
ತುಮುಲ ತೆರೆಯ ಮೀರಿ ಸೆಳೆವ
ನಿಂತ ನೀರ ಬದುಕಿಗೆ.

ನೀನೆಂದು ಕೈಗೆ ಸಿಗದ
ಕಣ್ಣ ಸೆಳೆವ ಮಿನುಗುತಾರೆ;
ಬೆಳಕ ಸುರೆಯ ನಶೆಯೇರಿಯೂ
ಅರಳದಿರುವ ಕೆಂದಾವರೆ.
ಮೆರೆವ ಸಂತಸ, ಮನದಿ ವೇದನೆ
ಯಾಕೋ ಏನೋ ಅರಿಯೆನು.

ನಗುವ ಕಳ್ಳ ಭಾವದಲೆ
ಅಳುವ ಕಡಲ ಮೊರೆತದ ಹಾಡು;
ಬಯಸಿ ಮಿಡಿದ ವೀಣೆಯಲಿ
ಹರಿದ ತಂತಿ ಬಿಗಿಯುವರಾರು?
ಚೆಲುವ ಬಣ್ಣ, ತೆರೆಯೆ ಕಣ್ಣು
ಎಂದೋ ನಾನು ಅರಿಯೆನು.

ಒಡೆದ ಹಾಲ ಕಣಕಣದಲ್ಲೂ
ಹುಳಿಕಾರುವ ವಿರಸದ ಸಿಂಧು;
ಬೆರೆವ ಮನದ ಆಸೆಯಲ್ಲೂ
ಬೇರೆ ನಿಂತ ನೀರ ಬಿಂದು
ಮಾತು ಬೇಡಿದೆ, ಮೌನ ಕಾಡಿದೆ
ಬೆಸೆವ ದಾರಿಯ ಅರಿಯೆನು.


ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

No comments:

Post a Comment