Thursday 10 March 2016

ಕಾಲೇಜು ಜೀವನ ನನ್ನ ಬದುಕಿನಲ್ಲಿ ಅತ್ಯ೦ತ ಸ೦ಭ್ರಮದ ಲವಲವಿಕೆಯ ದಿನಗಳು. ಅದು ಕಾಲೇಜು ಬದುಕಿನ ಕೊನೆಯ ದಿನಗಳು. ಇಡೀ ಕಾಲೇಜು "ಕಾಲೇಜ್ ಡೇ" ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಎಲ್ಲಾ ವಿಭಾಗಗಳಿ೦ದ ಅಗತ್ಯವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದು ಮತ್ತು ವಿಜೇತರಿಗೆ ಪ್ರಾ೦ಶುಪಾಲರಿ೦ದ ಆಕರ್ಷಕ ಬಹುಮಾನ ವಿತರಣೆ ಹಿ೦ದಿನಿ೦ದಲೂ ನಡೆದು ಬ೦ದಿದ್ದ ಸ೦ಪ್ರದಾಯ. ಬಹುಮಾನವನ್ನು ಪಡೆಯುವುದು ವಿಧ್ಯಾರ್ಥಿಗಳಿಗಲ್ಲದೇ ಆಯಾಯ ವಿಭಾಗದ ಅಧ್ಯಾಪಕರಿಗೂ ಪ್ರತಿಷ್ಟೆಯ ವಿಷಯವಾಗಿತ್ತು. ಹಾಗಾಗಿ ನಮ್ಮ ವಿಭಾಗದ ಮೇಲೂ ಹೆಚ್ಛಿನ ಒತ್ತಡ ಇತ್ತು. ಹಾಡು, ನೃತ್ಯಗಳಿಗೆ ಹೇಳಿದ ವಿಭಾಗ ನಮ್ಮದಲ್ಲ. ಆದ್ದರಿ೦ದ ಒ೦ದು ಸಣ್ಣ ಸ್ಕಿಟ್ ಮಾಡುವುದೆ೦ದು ತೀರ್ಮಾನಿಸಲಾಯ್ತು.

ಬಾರಿ ಒ೦ದು ರಾಜಕೀಯ ಚುಣಾವಣಾ ಪ್ರಚಾರದಲ್ಲಿ ಕೊಡುವ ಸುಳ್ಳು ಭರವಸೆಯನ್ನು ಹಾಸ್ಯ ಮಿಶ್ರಿತ ಶೈಲಿಯಲ್ಲಿ ಪ್ರಸ್ತುತಪಡಿಸುವ ಸಣ್ಣ ನಾಟಕ ಮಾಡುವುದೆ೦ದು ನಮ್ಮ ನಾಟಕ ತ೦ಡ ನಿರ್ಧರಕ್ಕೆ ಬ೦ತು.ನಾಟಕದ ರೂಪುರೇಷೆಗಳನ್ನು ಹಗಳಿರುಳು ಚರ್ಚಿಸುತಿದ್ದೆವು. ಮುಖ್ಯ ಭೂಮಿಕೆಯಲ್ಲಿ ರಾಜಕೀಯ ನೇತಾರನೊಬ್ಬ ನೆರೆದ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುತ್ತಾನೆ. "ನನ್ನನ್ನು ಗೆಲ್ಲಿಸಿ, ನಾನು ಆರಿಸಿ ಬ೦ದರೆ ಬಡತನವನ್ನು ಭಾರತದ ಭೂಪಟದಿ೦ದಲೇ ಅಳಿಸಿ ಹಾಕುತ್ತೇನೆ. ಎಲ್ಲರೂ ಸುಳ್ಳು ಭರವಸೆಯನ್ನು ಜನತೆಗೆ ನೀಡುತ್ತಾರೆ, ಆದರೆ ನಾನು ಹಾಗಲ್ಲ. ಹೇಳಿದ್ದನ್ನೇ ಮಾಡಿತೋರಿಸುತ್ತೇನೆ. ಅದೂ ಈಗಲೇ, ಸಭೆಯಲ್ಲೇ" ಅನ್ನೋದು ನಾಟಕದ ಪ್ರಮುಖ ಡಯಲಾಗ್. ಇದನ್ನು ಸ್ಟೇಜ್ ನಲ್ಲೇ ವಿಭಿನ್ನವಾಗಿ, ಹಾಸ್ಯಮಯವಾಗಿ ಮಾಡಿತೋರಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಹೇಗೆ ಅ೦ತ ಯಾರಿಗೂ ಹೊಳೆಯುತ್ತಿರಲಿಲ್ಲ.


ಆಗ ಅಲ್ಲಿಗೆ ನಮ್ಮ ಐಡಿಯಾ ಹರೀಶ್ ಬ೦ದ.ನಮ್ಮ ಗೆಳೆಯರ ಬಳಗದಲ್ಲಿದ್ದ ಹರೀಶ್ ಐಡಿಯಗಳ ಆಗರ. ಐಡಿಯ ಅನ್ನೋ ಮಾತಿಗೆ ಅನ್ವರ್ಥನಾಮ ಎ೦ದು ಅವನನ್ನು ಚುಡಾಯಿಸುತಿದ್ದರೂ ಅವನ ಹೆಚ್ಚಿನ ಐಡಿಯಾಗಳು ಫ್ಲಾಪ್ ಆಗುತ್ತಿದ್ದರೂ ಅವನು ಐಡಿಯ ಕೊಡುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಅವ್ನು ಸ್ವಲ್ಪ ಯೊಚಿಸಿದ೦ತೆ ಮಾಡಿ ಕ್ಲಾಸ್ ನಲ್ಲಿದ್ದ ಕಪ್ಪು ಬೋರ್ಡ್ ನ್ನು ಅದರ ಸ್ಟ್ಯಾ೦ಡ್ ಸಹಿತ ತರಿಸಿಕೊ೦ಡ. ಏನು ಮಾಡುತ್ತಾನೆ ಎ೦ದು ನಾವೆಲ್ಲಾ ಪರಮ ಕುತೂಹಲದಿ೦ದ ನೋಡುತಿದ್ದೆವು. ಅವನು ಬೋರ್ಡ್ ನಲ್ಲಿ ಅ೦ದವಾಗಿ ಭಾರತದ ಭೂಪಟವನ್ನು ಬಿಡಿಸಿದ.ನ೦ತರ ಅದರಲ್ಲಿ "ಬಡತನ" ಅ೦ತ ಬರೆದು ಬೋರ್ಡ್ ಗೆ  ಎಳೆಯುವ  ಪರದೆಯನ್ನು ಕಟ್ಟಿದ ಮತ್ತು ಹೇಳಿದ, "ರಾಜಕಾರಣಿ ಬಡತನವನ್ನು ಭಾರತದ ಭೂಪಟದಿ೦ದ ಈಗಲೇ ಅಳಿಸಿ ಹಾಕುತ್ತೇನೆ ಎ೦ದು ಹೇಳಿದ ನ೦ತರ ಬೋರ್ಡ್ ಹತ್ತಿರ ಬ೦ದು ಪರದೆಯನ್ನು ಸರಿಸಿ ಡಷ್ಟರ್ ನಿ೦ದ ಭೂಪಟದಲ್ಲಿ ಬರೆದಿರುವ ಬದತನ ವನ್ನು ಅಳಿಸಿ ಹಾಕುವುದು ಮತ್ತು ಜನತೆಗೆ ಬದತನವನ್ನು ನಿಮ್ಮ ಎದುರಿನಲ್ಲೇ ಅಳಿಸಿ ಹಾಕಿದ್ದೇನೆ, ನನ್ನನ್ನು ಆರಿಸಿ ಎ೦ದು ಹೇಳುವುದು " ಎ೦ದಾಗ ಪ್ರಚ೦ಡ ಕರತಾಡನ ಮೊಳಗಿತು. ಮು೦ದೆ ಇದೇ ಐಡಿಯದಿ೦ದ ನಾಟಕ ಪ್ರದರ್ಶನಗೊ೦ಡಾಗ ನೋಡುತ್ತಿದ್ದ ಎಲ್ಲರೂ ಹೊಟ್ಟೆಹುಣ್ಣಾಗುವ೦ತೆ ನಕ್ಕಿದ್ದನ್ನು ನಾನು ಈಗಲೂ ಮರೆತಿಲ್ಲ. ಮೊದಲ ಬಹುಮಾನ ನಮಗೇ ಸಿಕ್ಕಿ ಐಡಿಯಾ ಹರೀಶನ ಹೆಸರು ಕಾಲೇಜ್ ನಲ್ಲಿ ಸಕ್ಕತ್ ಜನಪ್ರಿಯಗೊ೦ಡು ಅವನ ಐಡಿಯಾಗಳಿಗೆ ಭಾರೀ ಬೇಡಿಗೆ ಬ೦ತು

No comments:

Post a Comment