Sunday 13 April 2014





ಕತೆಯಾಗಿಸಿ

ಕತೆಯಾಗಲು ಕೂತಿದ್ದೇನೆ,
ನಿಮ್ಮದೇ ರಸ್ತೆಯ ತಿರುವುಗಳಲ್ಲಿ
ಬೇಗನೇ ಎತ್ತಿಕೊಳ್ಳಿ
ಬಣ್ಣ ಬಣ್ಣದ ಕನಸುಗಳ ಮುಡಿಸಿ
ಕತ್ತಲ ಸುರಂಗದ ಬೆಳಕಾಗಿಸಿ,
ಹೆಣ್ಣಿನ ಹೊಟ್ಟೆಯ ಕಿಚ್ಚಾಗಿಸಿ
ಗಂಡಿನ ಮೈಯ ಸೊಕ್ಕಾಗಿಸಿ
ನಿಮಗೇ ಬಿಟ್ಟದ್ದು.

ಹರಿವ ನದಿಯಾಗಿಸಿ
ಮೊರೆವ ಕಡಲಾಗಿಸಿ
ಇಲ್ಲವೇ ನಿಂತ ನೀರಾಗಿಸಿ
ಹೂವಾಗಿಸಿ ಹಣ್ಣಾಗಿಸಿ
ಬತ್ತದ ತೆನೆಯಾಗಿಸಿ
ಕಾಡುವ ಕಳೆಯಾಗಿಸಿ
ನನಗೇನು; ಕರೆದಲ್ಲಿ ನಾನಿದ್ದೇನೆ.

ತಲೆಗೆ ಕಿರೀಟ ತೊಡಿಸಿ
ಸಿಂಹಾಸನದ ಮೇಲೆ ಮೆರೆಸಿ
ಯುದ್ಧದಲ್ಲಿ ಕಡಿಸಿ,
ತಿರುಕನ ಕೈಯ ಪಾತ್ರೆಯಾಗಿಸಿ
ಸೂಳೆಯ ಬದುಕ ಕನಸಾಗಿಸಿ
ಬೀದಿಯ ಧೂಳಲ್ಲಿ ಹೊರಾಳಾಡಿಸಿ
ನಿಜಕ್ಕೂ ನನ್ನಲ್ಲಿ ಬೇಡಿಕೆಗಳಿಲ್ಲ.

ದೇವರಾಗಿಸಿ, ಧರ್ಮವಾಗಿಸಿ
ತಲೆ ಕೆಡಿಸಿ, ಹೊರಳಿಸಿ
ವೈರುದ್ಯಗಳ ನಡುವೆ ನರಳಿಸಿ;
ಶಿಲುಬೆಗೇರಿಸಿ.
ನನ್ನ. ಮೈಯ ಮುಳ್ಳುಗಳೇನೂ ಅರಳುವುದಿಲ್ಲ!.

ಹಾಗಂತ ನನ್ನಲ್ಲಿ ಭ್ರಮೆಗಳಿಲ್ಲ,
ಪಾತ್ರ ಸಂಚಾರಗಳ ಭಾವ ನಿಮ್ಮದೇ
ಅಂತೆಯೇ ನೋವು ನಲಿವು.
ನಿಮ್ಮನ್ನು ನೀವು ನೋಡಿಕೊಳ್ಳುವ
ಬರಿಯ ಕನ್ನಡಿ ನಾನು.

ನಿಮ್ಮ ಕತೆಗಳಲ್ಲಿ 'ನಾನಿಲ್ಲ'.

No comments:

Post a Comment