Sunday 13 April 2014


ಅಸಹಾಯಕ


ಅತಿಯಾಗಿ ಪ್ರೀತಿಸುವ
ಬದುಕಿನೊ೦ದಿಗೇ ಹೋರಾಡುವ
ನಾನೀಗ ಅಸಹಾಯಕ.

ಕನಸುಗಳನ್ನೆಲ್ಲಾ ಹಸಿವಿನ ಹಾದಿಯಲ್ಲಿ
ಮಾರಿಬಿಟ್ಟಿದ್ದೇನೆ.
ಕನಸುಗಳು ಕಾಣದ೦ತೆ
ನಿದ್ರೆಯೊ೦ದಿಗೇ ಒಪ್ಪ೦ದವಾಗಿ
ರೆಪ್ಪೆಗಳು ಮುಚ್ಚದ೦ತೆ
ಎಚ್ಚರಗೊಳ್ಳುತ್ತೇನೆ.

ಆಸೆಯ ದು೦ಬಿಗಳನ್ನು
ಹತ್ತಿರ ಸುಳಿಯ ಬಿಡುತ್ತಿಲ್ಲ.
ಹೀರುವ ಮಕರ೦ದದ ಬಯಕೆಗಳಿಗೆ
ಮತ್ತೆ ಮೊಗ್ಗಾಗುತ್ತೇನೆ.
ಮನದ೦ಗಳದಲ್ಲೀಗ
ಯಾವ ಹೂವೂ ಅರಳುತ್ತಿಲ್ಲ.

ನೈಜತೆಯ ಕುರುಹುಗಳೆಲ್ಲಾ
ಮುಖವಾಡದೊಳಗೆ ಬಚ್ಚಿಟ್ಟಿದ್ದೇನೆ.
ಲಾಭ ನಷ್ಟಗಳ ಲೆಕ್ಕಾಚಾರಗಳಲ್ಲೇ
ಒಣ ಆದರ್ಶಗಳನ್ನೂ
ತಕ್ಕಡಿಯಲ್ಲಿ ತೂಕಕ್ಕಿಟ್ಟಿದ್ದೇನೆ.
ವರ್ತಕರ ಬೀದಿಗಳಲ್ಲೀಗ
ನನ್ನ ಅಪಮೌಲ್ಯವಾಗಿದೆ.

ನನ್ನನೀಗ ಯಾರೂ ಕೊಳ್ಳುತ್ತಿಲ್ಲ.
ಬದುಕಿನ ಜೂಜಾಟದಲ್ಲಿ
ಹರಾಜೂ ಕೂಗುತ್ತಿಲ್ಲ.
ಹೊಸ ಕನಸಿಲ್ಲದ
ಆಸೆಯ ಸೆಳೆಯಿಲ್ಲದ
ನೈಜತೆಯ ನಡೆಯಿಲ್ಲದ
ನಾನೀಗ ನಾನಾಗಿಯೇ ಉಳಿದಿಲ್ಲ.

ಬದುಕಿನ ವೈರುಧ್ಯಗಳ ನಡುವೆ
ಉಸಿರಿನ್ನೂ ಆಡುತ್ತಿದೆ.
ಮುಳ್ಳುಗಳ ನಡುವೆ ಸದ್ದಿಲ್ಲದೇ
ಅರಳಿದ ಹೂವೂ ನರಳುತ್ತಿದೆ.

No comments:

Post a Comment