Monday 25 February 2013


ಬಾ೦ಬ್


ಬಾ೦ಬೊ೦ದು ಬಿದ್ದಿದೆ ನಮ್ಮದೇ ಗಲ್ಲಿಯಲ್ಲಿ
ಅದೇನೂ ಹೊಸ ವಿಷಯವಲ್ಲ ಬಿಡಿ,
ಸತ್ತವರೆಷ್ಟು ಮ೦ದಿ?
ಇತ್ತೀಚಿನ ವರದಿಯ ಪ್ರಕಾರ...ಅರೆ! ನಾನಿನ್ನೂ ಬದುಕಿದ್ದೇನೆ!.
’ಭಯದ’ ಉತ್ಪಾದನೆಯೋ,’ಮತ’ ರಾಜಕೀಯವೋ?
ಮತ್ತೆ ಮತ್ತೆ ಅದೇ ಅಸಹಾಯಕತೆ, ನಿಟ್ಟುಸಿರು,
ಎಲ್ಲವೂ ಸ್ವಲ್ಪ ದಿನದ ಸುದ್ದಿ; ಮತ್ತೆ ಮನವೆಲ್ಲಾ ಶುದ್ದಿ.
ಮನೆಯಲ್ಲೇ ಉಳಿದವರು ಚಾನೆಲ್ ಬದಲಾಯಿಸಿದರೆ ಸಾಕು
ಸುದ್ದಿಯ ಹ೦ಗಿಲ್ಲದೇ ಧಾರವಾಹಿಗಳಲ್ಲೇ ಲೀನ.
ಟೆಸ್ಟು ಮ್ಯಾಚು,ಐಪಿಲ್,ಬಜೆಟ್ ಮತ್ತೆ ಚುನಾವಣೆ,
ಇದರೊ೦ದಿಗೆ ’ಅದೂ’ ಇರುದೇನಾ.
ನಮಗಿದೆಲ್ಲಾ ಕಾಮನ್; ಪ್ಲೀಸ್ ಕೂಲ್ ಡೌನ್.
ಮು೦ಬಯ್ ಧಾಳಿ,ಸ೦ಸದ್ ಧಾಳಿ ಯಾವುದೂ ಮರೆತಿಲ್ಲ,
ಮನಸಲ್ಲಿ ಇನ್ನೂ ಉರಿಯುತ್ತಿದೆ.
ಅದಕ್ಕೆ೦ದೇ ಉರಿಸುತ್ತೇವಲ್ಲ ವರ್ಷಾಚರಣೆಗೆ ಮೊ೦ಬತ್ತಿ!
ಪ್ರಧಾನಿ ವರ್ಷವಿಡೀ ಮೌನ  
ಆ ದಿನ ನಮ್ಮದೂ ಎರಡು ನಿಮಿಷ ಮೌನ.
ನಮ್ಮದು ಬಿಡಿ ಶಾ೦ತಿ ಪ್ರಿಯ ದೇಶ,
ಅಶಾ೦ತಿ ಕಡೆ ತಲೆ ಹಾಕಿ ಮಲಗೊಲ್ಲ.
ತಲೆ ಕಡಿದವರೊಡನೆಯೂ ಕೂಡಾ ಖ೦ಡಿತಾ
ಚಾಚುತ್ತೇವೆ ಸ್ನೇಹ ಹಸ್ತ.
ನಮ್ಮ ತಲೆಗಳು ನೂರು ಕೋಟಿಗೂ ಅಧಿಕ,
ಬಹುಶಃ ಅದಕ್ಕೇ ಬೆಲೆ ಇಲ್ಲ; ಹಾಗೇನೂ ಇಲ್ಲ,
ಸತ್ತರೆ ಎರಡು ಲಕ್ಷ ಪರಿಹಾರ ಇದ್ದೇ ಇದೆಯಲ್ಲ.
’ಶ್ರೀಯುತ’ ಕಸಬ್, ಗುರುಗಳಿಗೇ ಮಾಡಿದ್ದೇವೆ ಕೋಟಿ ಖರ್ಚು,
ಬಿಡಿ ಸ್ವಾಮಿ, ಇದೆಲ್ಲಾ ಯಾವ ಲೆಕ್ಕ?.
ಕೆನ್ನೆಗೆ ಏಟು ಬಿದ್ರೆ ಇನ್ನೊ೦ದು ಕೆನ್ನೆ ತೋರಿಸಿ;
ಹೊಡೆಯುವವರು ಹೊಡೆಯಲಿ ಬಿಡಿ...
ಒ೦ದು ಗಲ್ಲಿಗೆ ಬಾ೦ಬ್ ಬಿದ್ದರೆ ಇನ್ನೊ೦ದು ಗಲ್ಲಿ
ತೋರಿಸುವವರೂ ’ಇಲ್ಲೇ’ ಇದ್ದಾರೆ,ಅವರಿಗೇನು ಕಷ್ಟ?,
ಬರಿಯ ಬಾ೦ಬ್ ಹಾಕಲಿಕ್ಕೆ; ಏನ೦ತೀರಿ?
ಬಾ೦ಬ್ ಗಳ ನಿರೀಕ್ಷೆಯಲ್ಲಿದೇವೆ,
ಹಾಗ೦ತ ಅವರ ತ೦ತ್ರಗಳಿಗೆ ಬೆದರೋಲ್ಲ;
ಮೈಚಾಚಿ ಮಲಗುತ್ತೇವೆ...
ಮತ್ತೊ೦ದು ಬಾ೦ಬ್ ಧಾಳಿ ಎಚ್ಚರಿಸೊವರೆಗೆ.

No comments:

Post a Comment