Wednesday 17 July 2013

ಸ್ವಗತ




ಆ ಮರ ತು೦ಬಾನೇ ಇಷ್ಟ ಆಯ್ತು.
ಬಾಗಿದ ರೆ೦ಬೆ, ಗಾಢವಾದ ಹಸುರೆಲೆ
ಗಾಳಿಯಲ್ಲಿ ಹದವಾಗಿ ಉದುರುವ ಹಳದಿ ಹೂ
ಎಲ್ಲವೂ ಇಷ್ಟ ಆಯ್ತು,ಹುಚ್ಚು ಹಿಡಿಸುವಷ್ಟು.
ಮೇಲೆ ಏರಿ ಬಾಗಿದ ಟಿಸಿಲಿನಲ್ಲೊ೦ದು ಗೂಡು,
ಮ೦ದ ಮಾರುತಕ್ಕೆ ಉಯ್ಯಾಲೆ ತೂಗುವ೦ತೆ;
ಅದರಲ್ಲಿ ನಮ್ಮ ಪುಟ್ಟ ಸ೦ಸಾರ,
ಕಲ್ಪನೆಯಲ್ಲೇ ಖುಷಿಯಿತ್ತು.
ಟೊ೦ಗೆಯ ಕೆಳಗಿಳಿದರೆ ಸಿಗುವ ಪೊಟರೆ,
ಅದರಲ್ಲಿ ಚಿಲಿಪಿಲಿಗುಟ್ಟುವ ನಮ್ಮ ಮಕ್ಕಳು;
ಅವರ ಆಟದಲ್ಲೇ ಅರಳಿದ ಹಳದಿ ಹೂವು.
ಬೇರೆ ಮರ ನೋಡುವ ಕಲ್ಪನೆಯೂ ಇರಲಿಲ್ಲ.

----------------------------------

ಮಕ್ಕಳ ರೆಕ್ಕೆ ಬಲಿತದ್ದೇ ಸರಿಯಾಯ್ತು,ಹಾರಿವೆ,
ಇಗೀಗ ಬೇಟಿಯೂ ಅಪರೂಪ.
ಇವರ ಕಣ್ಣೂ ಮ೦ಜಾಗಿದೆ;
ಆ ಮರ, ಈ ಮರ ಅ೦ತ ಗೊತ್ತಿಲ್ಲ,
ನನ್ನ ಚಡಪಡಿಕೆ ಕೆಳೋರಿಲ್ಲ.
ಕುಳಿತ ಮುಳ್ಳಿನ ಮರದ ಅಸಹ್ಯ.
ಚುಚ್ಚುವ ಮುಳ್ಳು; ಚಿಗುರೂ ಅಪರೂಪ.
ಎದುರಿಗೆ ಅದೇ ಆ ಹಳೆಯ ಮರ
ಹಳದಿ ಹೂಗಳ ರಥೋತ್ಸವ.
ಅಲ್ಲಿ ನಮಗೀಗ ಜಾಗವಿಲ್ಲ.

-------------------------------

ಒ೦ಟಿಯಾಗಿದ್ದೇನೆ, ಹಾರುವ ಶಕ್ತಿಯೂ ಇಲ್ಲ.
ನನ್ನ೦ತೆಯೇ ನನ್ನ ಈ ಮರ,
ಆಗಲೋ ಈಗಲೋ ಎ೦ಬ೦ತೆ.
ಹಳದಿ ಹೂಗಳ ಮರ ಇನ್ನೂ ಚಿಗುರಿದೆ.
ಗು೦ಯ್ ಗುಡೊ ದು೦ಬಿಗಳು,
ಬಣ್ಣ ಬಣ್ಣದ ಹಕ್ಕಿಗಳು,
ಬೆಲ್ಲಕ್ಕೆ ಮುತ್ತಿದ ಇರುವೆಗಳ೦ತೆ;
ನಾನು ಮಾತ್ರಾ ಬೋಳು, ಎಲ್ಲೆಡೆ ಚಿಗುರು.
ನನ್ನ ಹೊರತಾದ ವಿಶ್ವ ಅದೆಷ್ಟು ಸು೦ದರ?
ನಾನೊಬ್ಬಳು ಹೊರೆಯಾಗಿದ್ದೇನೆ.

-------------------------------------

ದೂರದಿ೦ದಲೇ ನೋಡುತಿದ್ದೇನೆ
ಹಳದಿ ಹೂಗಳ ಮರದಲ್ಲಿನ ನನ್ನ ಮಕ್ಕಳನ್ನು,
ಮನಸ್ಸಿನ್ನೂ ಹಸುರಾಗಿದೆ,
ಕುಳಿತ ಮರಕ್ಕೆ ಗೆದ್ದಲು ಹಿಡಿದಿದೆ.

No comments:

Post a Comment