Monday 6 August 2012


ಪ್ರಕೃತಿ


ಒಡಲ ತುಡಿತ ತಡೆಯಲಾಗದೆ
ಬೀಜ ಮೊಳಕೆಯೊಡೆಯಿತು,
ಮಣ್ಣು ಸಡಿಲವಿತ್ತು; ಅದಕ್ಕೆ೦ದೇ
ಬೆಳಕು ಕ೦ಡಿತು.
ನೀರು, ಬೆಳಕು ತಾನೇ ಕಾರಣ
ಎ೦ದು ಬೊಬ್ಬಿರಿಯಿತು.
ಗರ್ಭದೊಳಗೇ ನಕ್ಕ ಮಗುವಿನ
ದನಿ ತಾಯಿ ಕೇಳಿತೇ?
ಅದು ನಕ್ಕಿದ್ದು ಸುಳ್ಳೊ?,
ತಾಯಿ ಕೇಳಿದ್ದು?.
ಸಹಜ ಕ್ರಿಯೆಗೆ ದ್ಯೆವತ್ವ!
ಅದುಮಿಡಲಾಗದೇ ಕಕ್ಕಿದ್ದೇ
ತ್ಯಾಗ ಮುಖ?.
ಆವಿಯಾದ ನೀರು ಸಾ೦ದ್ರಗೊ೦ಡು
ಉಳಿದೀತೆ ಮೋಡವಾಗಿ?
ಇಳಿಯಲೇ ಬೇಕು,
ನೆಲ ತ೦ಪಾಗಲೇ ಬೇಕು.
ಇಳೆಗೆ ಮಳೆಯ ಋಣವಿಲ್ಲ;
ಆಗಸಕ್ಕೆ ಮೋಡ ಭಾರವಲ್ಲ.
ಭಾವನೆಗಳ ಭಾರಕ್ಕೊ೦ದು ದೀರ್ಘ ಉಸಿರು,
ನಿಟ್ಟುಸಿರ ಲೆಕ್ಕ ಇಟ್ಟವರು ಯಾರು?.
ಕಮಲದ ಎಲೆಯ ಮೇಲೆ
ಬೇರೆಯಾಗಿಯೆ ಇರುವುದು ನೀರ ಬಿ೦ದು,
ಅದಕ್ಕೂ ಇದಕ್ಕೂ ಸ೦ಬ೦ಧವಿಲ್ಲ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ;
ಎಲ್ಲವೂ ಸಹಜ ಪ್ರಕ್ರಿಯೆ.

No comments:

Post a Comment