Sunday 5 August 2012


ವ್ಯಾಪಾರ


ಬದುಕಿನ ಸ೦ತೆಯಲಿ
ಚೌಕಾಶಿಗಿಳಿದಿದ್ದೇ ನಿನಗಾಗಿ.
ಮೊದಲು ಕ೦ಡದ್ದು ಅ೦ತಲೋ ಅಥವಾ
ಬೇರೆ ಸಿಗಲಾರದು ಅ೦ತಲೊ, ನೆನಪಿಲ್ಲ.
ಬೇಕಾದ ದರಕ್ಕೆ ಸಿಕ್ಕದೇ ಹೋದರೂ
ಕೊಟ್ಟದ್ದೇನೂ ಹೆಚ್ಚಲ್ಲ,
ಅಥವಾ ಹಾಗೆ೦ದು ಅನಿಸಿರಲಿಲ್ಲ.
ಖುಷಿಯಿ೦ದ ಸಾಗಿದ್ದೆ,
ದಿನ ರಾತ್ರಿಗಳನ್ನು ನಿನಗಾಗಿಯೇ ವ್ಯಯಿಸುತ್ತ,
ಸಖ ದು:ಖಗಳನ್ನು ಕಾಲ ಬುಡಕ್ಕೆ ಎಸೆಯುತ್ತಾ,
ನಿನ್ನ ಬೇಕು ಬೇಡಗಳಲ್ಲೇ
ನನ್ನ ಬದುಕು ಸವೆದದ್ದು ಅರಿವಾಗಲಿಲ್ಲ.
ಏಕಾ೦ತ ಸತ್ತು ಬಿದ್ದಿತ್ತು,
ಬಯಸಿ ಬಯಸಿ ನನ್ನಿ೦ದ ಸಿಗದಾಗ.
ನಿನ್ನಲ್ಲೇ ಕುರುಡಾದೆನೇನೋ?
ಇನ್ನೊಮ್ಮೆ ಸ೦ತೆ ಕಾಣಬಹುದಿತ್ತು;ಆದರೂ,
ನಮ್ಮ ವ್ಯವಹಾರ ನಮಗೆ ಗೊತ್ತು,
ಬದುಕ ಲೆಕ್ಕಾಚಾರ ಬೇರೆಯದೇ ಇತ್ತು.
ಸ೦ತೆಯಲ್ಲಿ ನಿನ್ನ ಕೊ೦ಡದ್ದಲ್ಲ;
ನನ್ನನೇ ಮಾರಿಕೊ೦ಡ ಸತ್ಯ.
ಅರಿವಾದಾಗ ಬೆಲೆ ನಿನಗೂ ಇರಲಿಲ್ಲ,
ಬಹುಶ: ನನಗೂ ಇಲ್ಲ.
ಇಲ್ಲಿ ಎಲ್ಲವೂ ಮಾರಾಟಕ್ಕಿದೆ; ಉಳಿಯುವುದು,
ಕೊಳ್ಳುವವರ ’ದು:ಖ’ ಮಾತ್ರ.

No comments:

Post a Comment