Wednesday 8 August 2012


ಮಳೆ-ಕತೆ


             ||೧||

ಸುಡುವ ಬಿಸಿಲಿಗೆ ಹಿಡಿ ಶಾಪ ಹಾಕುತ್ತಲೇ
ರಸ್ತೆಗೆ ಬ೦ದಿದ್ದ. ಸಣ್ಣಗೆ ಮಳೆ ಸುರಿಯಲಾರ೦ಬಿಸಿತು,
ತಾರದ ಕೊಡೆಯ ನೆನಪಾಗಿ ಮಳೆಯ ಮೇಲೆ ಕೋಪಿಸಿಕೊ೦ಡ.

             ||೨||

ಮಳೆಯಲ್ಲಿ ಸರಿಯಾಗಿಯೇ ತೋಯಿಸಿಕೊ೦ಡು ಮನೆಗೆ ಬ೦ದ.
ಹೆ೦ಡತಿ ಕೊಟ್ಟ ಬಿಸಿ ಕಾಫಿ ಹೀರಿದಾಗ ಮತ್ತೆ ಮಳೆಯಲ್ಲಿ
ನೆನೆಯುವ ಆಸೆ ಹುಟ್ಟಿತು, ಆದರೆ ಅಷ್ಟರಲ್ಲಿ ಮಳೆ ನಿ೦ತಿತ್ತು.

             ||೩||

ಅವನು ಅ೦ಗಳದಲ್ಲಿನ ತನ್ನ ಪ್ರೀತಿಯ ಹೂಗಿಡಗಳಿಗೆ
ನೀರುಣಿಸುತ್ತಿರುವಾಗಲೇ ಮಳೆ ಸುರಿಯಿತು. ಫಕ್ಕನೆ ಮನೆಯಿ೦ದ
ಕೊಡೆ ತ೦ದು ತನ್ನ ಕಾಯಕ ಮು೦ದುವರೆಸಿದಾಗ ನಾಚಿದ ಮಳೆ
ನಿ೦ತು ಸೂರ್ಯ ನಗತೊಡಗಿದ.

                ||೪||

ಗುಡುಗು ಮಿ೦ಚುಗಳ ಹಿಮ್ಮೇಳದೊಡನೆ ಮಳೆಯ ಅಭಿಷೇಕವಾದಾಗ
ನೀರು ತು೦ಬಿದ ಗದ್ದೆಯಲ್ಲಿ ಕಪ್ಪೆಗಳ ಸಾಮೂಹಿಕ ಗಾಯನ
ಸ್ವರ್ಧೆ ಏರ್ಪಟ್ಟಿತ್ತು.

                ||೫||

ಬೆವರು ಸುರಿಸಿ ಬೆಳೆದ ಬೆಳೆ ಅತಿವ್ರುಷ್ಟಿಯಿ೦ದಾಗಿ
ನಾಶವಾಯಿತು. ಬ್ಯಾ೦ಕಿನವರು ವಿಧಿಸಿದ ಸಾಲ ಮರು ಪಾವತಿ
ಗಡುವರೆಗೆ ಉಳಿಯುವ ಸಾಹಸ ಆತ ಮಾಡಲಿಲ್ಲ.

                ||೬||

ಅವರ ನಡುವೆ ಪ್ರೀತಿಯ ಬೀಜ ಮೊಳಕೆಯೊಡೆಯಲು ಮಳೆ
ಬರಲೇಬೇಕು ಅ೦ತೇನೂ ಇರಲಿಲ್ಲ.ಧಾರಾಕಾರ ಮಳೆ ಸುರಿಯಿತು,
ಪ್ರೀತಿ ಚಿಗುರಿತು.

                ||೭||

ಮರದ ಪೊಟರೆಯೊಳಗೆ ತಾಯಿ ಹಕ್ಕಿ ಮರಿಗೆ ಕೊಕ್ಕಿನಿ೦ದಲೇ
ತಾನು ತ೦ದ ಹಣ್ಣು ಕೊಟ್ಟಿತು. ಹೊರಗಿನ ಮಳೆ ಕ೦ಡು
ಮರಿ ಹಕ್ಕಿ ಚಳಿಗೆ ನಡುಗಿ ಮರದ ಪೊಟರೆಯೊಳಗೆ
ಬೆಚ್ಚಗೆ ಮಲಗಿತು. ತಾಯಿ ಹಕ್ಕಿ ಮಾತ್ರ ತನ್ನ ಆಹಾರಕ್ಕಾಗಿ
ಮಳೆ ನಿಲ್ಲುವುದನ್ನೇ ಕಾಯುತಿತ್ತು.

               ||೮||

ಮಳೆ ಕಾಣದೆ ಒಣಗಿದ ತನ್ನ ಬೆಳೆಯನ್ನು ನೋಡಲಾರದೇ ರೈತ
ಕೀಟನಾಶಕ ಸೇವಿಸಿದ. ಜೀವ ಹೋಗುವ ಮೊದಲು ಸುರಿದ
ಭಾರಿ ಮಳೆಯ ಕ೦ಡು ಅವನಲ್ಲಿ ಬದುಕುವ ಆಸೆ ಭುಗಿಲೆದ್ದಿತು.
ಅವನ ಹೆಣ ಸುಡಲೂ ಮಳೆ ಬಿಡಲಿಲ್ಲ.

No comments:

Post a Comment